ಸೌಹಾರ್ದ ಪರಂಪರೆಯ ಮೊಹರಂ

ಗುರುರಾಜ ದೇಸಾಯಿ

ಮೊಹರಂ ಎಂದರೆ ಮಹಮದಿಯರ ಮೊದಲ ತಿಂಗಳು. ಇಲ್ಲಿಂದ ಇಸ್ಲಾಂ ವರ್ಷ ಆರಂಭವಾಗುತ್ತದೆ. ಈ ಹಬ್ಬಕ್ಕೆ ಚಾರಿತ್ರಿಕ ಮತ್ತು ಧಾರ್ಮಿಕ ಹಿನ್ನೆಲೆಯೂ ಇದೆ. ಇದು ಹಿಂದೂ ಮುಸ್ಲಿಮರ ಭಾವೈಕ್ಯತೆಯ ಹಬ್ಬಗಳಲ್ಲಿ ಪ್ರಮುಖವಾದದ್ದು ಮೊಹರಂ. ಯಾವುದೇ ತಾರತಮ್ಯ ಇಲ್ಲದಂತೆ ಈ ಹಬ್ಬದಲ್ಲಿ ಹಿಂದೂಗಳು ಪಾಲ್ಗೊಳ್ಳುತ್ತಾರೆ. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಮೊಹರಂ ಹಬ್ಬವನ್ನು ಬಾಬಯ್ಯ ಹಬ್ಬ, ಅಲಾಯಿ ಹಬ್ಬ  ಎಂದು ಕರೆಯುತ್ತಾರೆ.

ಐದರಿಂದ ಹತ್ತು ದಿನಗಳವರೆಗೆ ಈ ಹಬ್ಬವನ್ನು ಆಚರಿಸಲಾಗುತ್ತದೆ, ಕೆಲವು ಪ್ರದೇಶದಲ್ಲಿ ಏಳು, ಹತ್ತುದಿನಗಳ ಕಾಲ ಆಚರಿಸಲಾಗುತ್ತದೆ. ಹಿಂದೂ ಮುಸ್ಲಿಂ ಬೇಧವಿಲ್ಲದೆ ಎಲ್ಲರೂ ಭಾಗವಹಿಸುತ್ತಾರೆ. ಈ ಹಬ್ಬದಲ್ಲಿ ಬರುವ ಹೆಜ್ಜೆ ಕುಣಿತ, ಮುಳ್ತಾ ಹೆಜ್ಜೆ ಕುಣಿತ, ಮಟಕಿ ಹೆಜ್ಜೆ ಕುಣಿತ, ಮರಗಾಲು ಕುಣಿತ ಮುಂತಾದ ಪ್ರಕಾರದಲ್ಲಿ ಕುಣಿಯುತ್ತಾರೆ. ಇದನ್ನು ಜಾನಪದ ಕಲೆಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಹಳ್ಳಿಗಳಲ್ಲಿ ಈ ಕುಣಿತಕ್ಕೆ ಅಲಾಯಿ ಹೆಜ್ಜೆ ಕುಣಿತ ಎಂದು ಕರೆಯಲಾಗುತ್ತದೆ.

ಉತ್ತರ ಕರ್ನಾಟಕದ ಬಹಳಷ್ಟು ಗ್ರಾಮಗಳಲ್ಲಿ ಮೊಹರಂ ಆಚರಣೆಯಲ್ಲಿ ಮುಸ್ಲಿಮೇತರರೇ ಹೆಚ್ಚಾಗಿ ಭಾಗವಹಿಸುತ್ತಾರೆ. ಹರಕೆ ಹೊತ್ತ ಹಿಂದೂ- ಮುಸ್ಲಿಮರು ಹುಲಿ ವೇಷ, ಅಳ್ಳಳ್ಳಿ ಬಪ್ಪಾ ವೇಷ ಹಾಕಿ ಕುಣಿದು ಕುಪ್ಪಳಿಸುತ್ತಾರೆ.  ಮೊಹರಂನ ದೇವರು ಕುಳಿತ  ಮೊದಲ ದಿನದಿಂದ ಪಕೀರರಾಗುತ್ತಾರೆ. ಐದು ದಿನದ ಪಕೀರರು, ಮೂರು ದಿನದ ಪಕೀರರು, ಎರಡು ದಿನದ ಪಕೀರರು ಎಂದು ಅವರು ಹರಕೆ ಹೊತ್ತಂತೆ ಇಲ್ಲವೆ ಮನೆಯ ಸಂಪ್ರದಾಯದಂತೆ  ಪಕೀರರಾಗುತ್ತಾರೆ. ಹೊಸ ಬಟ್ಟೆ, ಬಣ್ಣ ಬಣ್ಣದ ಲಾಡಿಗಳನ್ನು ಎರಡು ಕೈಗಳಿಗೆ ಕಟ್ಟಿಕೊಂಡು  ಮತ್ತೊಂದು ಲಾಡಿಯನ್ನು  ಕೊರಳಿಗೆ ಹಾಕಿಕೊಳ್ಳುತ್ತಾರೆ. ಇವರೊಂದಿಗೆ ಅತ್ಯಂತ ಗೌರವದಿಂದ ಎಲ್ಲರು ನಡೆದುಕೊಳ್ಳುತ್ತಾರೆ. ಇವರ ಜೊತೆ ಯಾರೂ ಜಗಳವಾಡುವುದಿಲ್ಲ, ಕೆಟ್ಟ ಭಾಷೆಗಳನ್ನು ಪ್ರಯೋಗಿಸುವುದಿಲ್ಲ ಒಂದುರೀತಿ ವಿಶೇಷ ಸ್ಥಾನಮಾನಗಳನ್ನು ಐದು ದಿನಗಳಕಾಲ ಅವರು ಪಡೆದಿರುತ್ತಾರೆ.

 

 

ಜಾತಿಗಳನ್ನು ಮೀರಿ ಇಲ್ಲಿ ಸಕ್ರಿ ಓದ್ಸಲಾಗುತ್ತದೆ. ಪ್ರತಿ ಮನೆಯವರು ಸಕ್ರಿ ಓದ್ಸಿ ಹಬ್ಬವನ್ನು ಸಂತೋಷದಿಂದ ಆಚರಿಸುತ್ತಾರೆ. 5 ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ 3 ಮತ್ತು 4 ನೇ ದಿನ ಎಲ್ಲರೂ ಸಿಹಿಯೂಟ ಮಾಡುತ್ತಾರೆ. ಹೋಳಿಗೆ, ಮಾದ್ಲಿ ಈ ಜಾತ್ರೆಯ ವಿಶೇಷ. ದಿನಂಪ್ರತಿ ಸಂಜೆ ನಾಲ್ಕರಿಂದ ರಾತ್ರಿ 10 ರ ವರೆಗೆ ಹಲಗೆ ಹೊಡೆಯಲಾಗುತ್ತದೆ. ಇದು ಅತ್ಯಂತ ಸಂತೋಷವನ್ನು ಕೊಡುತ್ತದೆ. ಜಾತ್ರೆಗಾಗಿ ತೋಡಿರುವ ಅಲೈಕುಣಿಯಲ್ಲಿ ಬೆಂಕಿಹಾಕಿ ಹಲಿಗೆ ಕಾಸಿ ಹೊಡೆಯುತ್ತಿದ್ದರೆ ಅದರ ನಾದ ಉನ್ಮಾದವನ್ನು ಮೂಢಿಸುತ್ತದೆ. ಬಣ್ಣ ಬಣ್ಣದ ಬಣ್ಣದ ಬಟ್ಟೆಗಳನ್ನು, ಕಾಗದಗಳನ್ನು ತೊಡಿಸಿದ ಪಾಂಜಾಗಳನ್ನು ನೋಡಲು ಎರಡುಕಣ್ಣು ಸಾಲದು.

ಇದು ಸೌಹಾರ್ಧತೆಯ ಹಬ್ಬವಾಗಿದ್ದರು, ಕೆಲವರು ಈ ಹಬ್ಬದಲ್ಲಿ ಮೂಢನಂಬಿಕೆ ಬಿತ್ತಿ ಜನರಿಗೆ ಹಸಿ ಸುಳ್ಳಗಳ ಮೂಲಕ ಅಪಾಯದ ಸನ್ನಿವೇಶವನ್ನು ತಂದೊಡ್ಡುತ್ತಿದ್ದಾರೆ. ಮಗುವನ್ನು ತೂರುವುದು, ಬೆಂಕಿಯಲ್ಲಿ ಹಾಯುವುದು, ಮೈಮೇಲೆ ದೇವರು ಬಂದಂತೆ ನಟಿಸುವುದು ಇತ್ಯಾದಿಗಳು ಹೆಚ್ಚಾಗುತ್ತಿವೆ.  ಬೆಂಕಿ ಹಾಯಲು ಹೋಗಿ ಎಷ್ಟೊ ಜನ ಕಾಲು ಸುಟ್ಟುಕೊಂಡು ಅಂಗವಿಕಲರಾಗಿರುವ ಉದಾಹರಣೆಗಳಿವೆ.  ಕಣ್ಣಿಗೆ ಬೆಂಕಿ ಬಿದ್ದು ಕಣ್ಣನ್ನೆ ಕಳೆದುಕೊಂಡವರಿದ್ದಾರೆ.  ಕೂಡಾ ಇಂತಹ ಹುಸಿ ಸುಳ್ಳುಗಳನ್ನು ನಂಬಿತ್ತಿರುವುದು ವೈಜ್ಞಾನಿಕ ಜಾಗೃತಿಯ ಕೊರತೆ ಇರುವುದನ್ನು ತೋರಿಸುತ್ತದೆ. ಸೌಹಾರ್ಧತೆಯ ಜೊತೆಯಲ್ಲಿಯೇ ಜನ ಪ್ರಜ್ಞೆಯಿಂದ ಹಬ್ಬಗಳನ್ನು ಆಚರಸಬೇಕಿದೆ.

ಹಬ್ಬಗಳ ಮೂಲ ಉದ್ದೇಶ ಏನೇ ಇರಲಿ ಅವುಗಳ ಸಾಂಸ್ಕøತಿಕ ಪ್ರಯೋಜನವನ್ನಾಗಲಿ, ಸಮಾಜಿಕ ಸಾರ್ಥಕತೆಯನ್ನಾಗಲಿ ಅಲ್ಲಗಳೆಯುವಂತ್ತಿಲ್ಲ. ಸಮಾಜದಲ್ಲಿ ಐಕ್ಯ ಭಾವನೆ ಕುದುರಲು, ನಾಡಿನಲ್ಲಿ ಶಾಂತಿ ನೆಮ್ಮದಿ ನೆಲೆಗೊಳ್ಳಲು ಹಬ್ಬಗಳು ಅತೀ ಅವಶ್ಯವೆಂದು ಕಾಣುತ್ತಿದೆ.

 

Donate Janashakthi Media

Leave a Reply

Your email address will not be published. Required fields are marked *