ಮೋದಿ ಭಜರಂಗಿ ಭಾಷಣವೂ, ಕಾಂಗ್ರೆಸ್ ಪ್ರಣಾಳಿಕೆಯೂ; ಸಂಪನ್ಮೂಲ ಪುನರ್ಹಂಚಿಕೆ, ಸಾಮಾಜಿಕ ನ್ಯಾಯ, ಪಿತ್ರಾರ್ಜಿತ ತೆರಿಗೆ ಇತ್ಯಾದಿಗಳೂ

– ವಸಂತರಾಜ ಎನ್.ಕೆ

ಚುನಾವಣಾ ಪ್ರಚಾರಕ್ಕೆ ಮೋದಿ ಅವರು ಬೈ ಮಿಸ್ಟೇಕ್ ಸಕಾರಾತ್ಮಕ ತಿರುವು ಕೊಟ್ಟಿದ್ದಾರೆ. ಹಿಂದೆ ಸಂಪನ್ಮೂಲ ಪುನರ್ಹಂಚಿಕೆ, ವೆಲ್ತ್ ಟ್ಯಾಕ್ಸ್, ಇನಹೆರಿಟನ್ಸ್ ಟ್ಯಾಕ್ಸ್ (ಪಿತ್ರಾರ್ಜಿತ ಆಸ್ತಿ ತೆರಿಗೆ) ಯಾವುದಾದರೂ ಚುನಾವಣೆಯಲ್ಲಿ ಚರ್ಚೆಗೆ ಒಳಗಾಗಿದ್ದು ಕೇಳಿದ್ದೀರಾ ? ಹೋಗಲಿ ಪ್ರಣಾಳಿಕೆಯೇ, ಅದೂ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲದ ವಿರೋಧ ಪಕ್ಷದ ಪ್ರಣಾಳಿಕೆ, ಚರ್ಚೆಯ ವಿಷಯ ಆಗಿದ್ದು ಕೇಳಿದ್ದೀರಾ ? ಇದು ಎಷ್ಟು ಸಕಾರಾತ್ಮಕ ತಿರುವು ಎಂದರೆ, ನನಗಂತೂ ಥ್ರಿಲ್ ಆಗಿ ಇದು ನಿಜವಾ ಅಂತ ನನಗೆ ನಾನೇ ಚಿವುಟಿಕೊಂಡೆ! ನನ್ನ ಥ್ರಿಲ್ ಗೆ ಕಾರಣ ಕೇಳಿ, ಅಷ್ಟೇ ಥ್ರಿಲ್ಲಿಂಗ್ ಆಗಿದೆ.

ಪ್ರಧಾನಿ ಮೋದಿ ರಾಜಸ್ಥಾನದ ಬಾನ್ಸ್ ವಾಡಾದಲ್ಲಿ ಮಾಡಿದ ಭಾಷಣ ದೊಡ್ಡ ಸುದ್ದಿಯಾಗಿದೆ. ಬಿಜೆಪಿಗೆ 400+ ಸೀಟುಗಳು ಖಚಿತವಾಗಿರುವಾಗ ಸಾಮಾನ್ಯವಾಗಿ ಭಜರಂಗ ದಳ, ವಿ,ಎಚ್.ಪಿ ನಂತಹ ಸಂಘಪರಿವಾರದ ‘ಅಂಚಿನಲ್ಲಿರುವವವರ ತರಹದ ಬೆಂಕಿ ಕಾರುವ’ ಭಾಷಣ ಮೋದಿ ಯಾಕೆ ಮಾಡಿದರು? ಯಾವ ಪ್ರಣಾಳಿಕೆಯನ್ನು ಯಾರೂ (ಬಿಡುಗಡೆ ಮಾಡಿದವರನ್ನು ಸೇರಿಸಿ) ಗಂಭೀರವಾಗಿ ತೆಗೆದುಕೊಳ್ಳದ ಪರಿಸ್ಥಿತಿಯಲ್ಲಿ, ಈ ಬಾರಿಯ ಕಾಂಗ್ರೆಸ್ ಪ್ರಣಾಳಿಕೆ ಮತ್ತು, ಎಲ್ಲರೂ ಮರೆತು ಬಿಟ್ಟಿರುವ ಮಾಜಿ ‘ಆಕ್ಸಿಡೆಂಟಲ್ ಪ್ರಧಾನಿ’ ಮನಮೋಹನ ಸಿಂಗ್ ಅವರ 20 ವರ್ಷಗಳ ಹಿಂದಿನ ಯಾರೂ ಗಂಭೀರವಾಗಿ ತೆಗೆದುಕೊಳ್ಳದ ಹೇಳಿಕೆಯನ್ನು ಮೋದಿ ಯಾಕೆ ಅಷ್ಟು ಗಂಭೀರವಾಗಿ ತೆಗೆದುಕೊಂಡರು? ಸೋಲಿನ ಆತಂಕದಿಂದ ಹುಟ್ಟಿದ ಹತಾಶೆ, ಗ್ರಾಂಡ್ ಪ್ಲಾನ್, ಮಾಸ್ಟರ್ ಸ್ಟ್ರಾಟೆಜಿ ಇತ್ಯಾದಿ ಕಾರಣಗಳನ್ನು ಹೇಳಲಾಗುತ್ತಿದೆ. ತಾವು ನಂಬದ ‘ಸಬ್ ಕಾ ಸಾಥ್…’, ‘ವಿಕಾಸ’ ಇತ್ಯಾದಿ ಕುರಿತು ಡ್ರಾಮಾಬಾಜಿ ಮಾಡಿ ಬೋರಾಗಿ, ಮೋದಿ ಅವರಿಗೆ ತಮ್ಮ ಪ್ರಿಯ ಮುಸ್ಲಿಮ್ ವಿಷಯಕ್ಕೆ ಹಿಂದಿರುಗಿ ಹಾಯೆನಿಸಿರಬೇಕು ಎಂದೂ ಸರಳವಾಗಿ ಕೆಲವರು ಹೇಳಿದ್ದಾರೆ.

ಒಟ್ಟಾರೆಯಾಗಿ ಚುನಾವಣಾ ಪ್ರಚಾರಕ್ಕೆ ನಕಾರಾತ್ಮಕ ತಿರುವು ಕೊಟ್ಟಿದ್ದಾರೆ ಅಂತ ಸಾಮಾನ್ಯ ತೀರ್ಪು. ಆದರೆ ನನಗನಿಸುವುದು (ಬೈ ಮಿಸ್ಟೇಕ್ ಕೆಲವರು ಕರೆಕ್ಟ್ ಕೆಲಸ ಮಾಡುವುದುಂಟು!) ‘ಬೈ ಮಿಸ್ಟೇಕ್’ ಚುನಾವಣಾ ಪ್ರಚಾರಕ್ಕೆ ಮೋದಿ ಅವರು ಸಕಾರಾತ್ಮಕ ತಿರುವು ಕೊಟ್ಟಿದ್ದಾರೆ ಅಂತ. ಸಂಪನ್ಮೂಲ ಪುನರ್ಹಂಚಿಕೆ, ವೆಲ್ತ್ ಟ್ಯಾಕ್ಸ್ (ಆಸ್ತಿ ತೆರಿಗೆ), ಇನಹೆರಿಟನ್ಸ್ ಟ್ಯಾಕ್ಸ್ (ವಾರಸುದಾರಿಕೆ ಅಥವಾ ಪಿರ್ತಾರ್ಜಿತ ತೆರಿಗೆ) ಯಾವುದಾದರೂ ಚುನಾವಣೆಯಲ್ಲಿ ಚರ್ಚೆಗೆ ಒಳಗಾಗಿದ್ದು ಕೇಳಿದ್ದೀರಾ? ಹೋಗಲಿ ಪ್ರಣಾಳಿಕೆಯೇ, ಅದೂ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲದ ವಿರೋಧ ಪಕ್ಷದ ಪ್ರಣಾಳಿಕೆ, ಚರ್ಚೆಯ ವಿಷಯ ಆಗಿದ್ದು ಕೇಳಿದ್ದೀರಾ? ನನಗಂತೂ ಥ್ರಿಲ್ ಆಗಿ ಇದು ನಿಜವಾ ಅಂತ ನನಗೆ ನಾನೇ ಚಿವುಟಿಕೊಂಡೆ!

 

ಯಾವುದು ಡೆಂಜರಸ್?

ಮೋದಿ ಅವರು ಇದನ್ನು ತಮ್ಮ ಮಾಮೂಲಿನ “ಮೊಗಲ್, ಮುಸ್ಲಿಂ, ಮಟನ್” ನಕಾರಾತ್ಮಕ ಭಾಷೆಯಲ್ಲಿ ‘ಕಾಂಗ್ರೆಸ್ ಪ್ರಣಾಳೀಕೆ ಡೇಂಜರಸ್’ ಎಂದು ಹೇಳಿರಬಹುದು. ಆದರೆ ವಿಷಯ ಬಹಳ ಸಕಾರಾತ್ಮಕ. ಆದರೆ ಒಂದೇ ಪ್ರಾಬ್ಲಂ ಅಂದರೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ‘ಮುಸ್ಲಿಮರಿಗೆ ಸಂಪನ್ಮೂಲ ಪುನರ್ಹಂಚಿಕೆ’, ವೆಲ್ತ್ ಟ್ಯಾಕ್ಸ್, ಇನಹೆರಿಟನ್ಸ್ ಟ್ಯಾಕ್ಸ್ ನಂತಹ ‘ಡೇಂಜರಸ್’ ವಿಷಯಗಳಂತೂ ದೂರ ಉಳಿಯಿತು, ಮುಸ್ಲಿಂ ಮತ್ತು ಪುನರ್ಹಂಚಿಕೆ ಪದಗಳೇ ಇಲ್ಲ. ಕಾಂಗ್ರೆಸ್ ಗೆ ಮೋದಿ-ಬಿಜೆಪಿ ಬಗ್ಗೆ ಎಷ್ಟು ಭಯವೆಂದರೆ ಮುಸ್ಲಿಂ ಪದವನ್ನೇ ಅವರ ಪ್ರಣಾಳಿಕೆಯಿಂದಲೂ ಕಿತ್ತು ಹಾಕಿದ್ದಾರೆ. “ಧಾರ್ಮಿಕ ಅಲ್ಪಸಂಖ್ಯಾತ’ರು ಎಂದು ಕರೆದಿದ್ದಾರೆ. ಸಂಪನ್ಮೂಲ 8 ಬಾರಿ ಮತ್ತು ಇನಹೆರಿಟನ್ಸ್ (ವಾರಸುದಾರಿಕೆ) ಒಂದು ಬಾರಿ ಬಂದಿದೆ. ‘ವಾರಸುದಾರಿಕೆ’ಯಲ್ಲಿ ಮಹಿಳೆಯರಿಗೆ ಸಮಾನ ಹಕ್ಕನ್ನು ಖಚಿತಪಡಿಸಬೇಕು ಎನ್ನುವಲ್ಲಿ ಮಾತ್ರ. ಇದು ಮೋದಿ ಅವರಿಗೆ ಡೇಂಜರಸ್ ಕಂಡಿರಬಹುದೇ? 8 ಬಾರಿ ಬರುವ ‘ಸಂಪನ್ಮೂಲ’ ಪದ 2 ಬಾರಿ ಬಂದ ಸಂದರ್ಭ, ಅವರಿಗೆ ಡೇಂಜರಸ್ ಆಗಿ ಕಂಡಿರುವ ಹೆಚ್ಚಿನ ಸಾಧ್ಯತೆಯಿದೆ.

ಪ್ರಣಾಳಿಕೆ

‘ಬಡವರ ಕಲ್ಯಾಣ ಸರಕಾರದ ಸಂಪನ್ಮೂಲಗಳ ಮೊದಲ ಆದ್ಯತೆಯಾಗಿರಬೇಕು”

ಎಂಬ ಉಲ್ಲೇಖ ಇದರಲ್ಲಿ ಒಂದು. ಕಾಂಗ್ರೆಸ್ ಇಂದಿರಾ ಕಾಲದಿಂದ ‘ಗರೀಬಿ ಹಟಾವೊ’ ಹೇಳುತ್ತಲೇ ಬಂದಿದ್ದಾರೆ. ಇದರಿಂದ ಬೆದರಲಿಕ್ಕಿಲ್ಲ.

“ಪ್ರತಿಯೊಬ್ಬ ಉದ್ಯಮಿಗೆ ಸಿಗಬೇಕಾದ ಹಣಕಾಸು ಅಥವಾ ಭೌತಿಕ ಸಂಪನ್ಮೂಲಗಳು ಅಥವಾ ವ್ಯವಹಾರದ ಅವಕಾಶಗಳು ಅಥವಾ ರಿಯಾಯಿತಿಗಳನ್ನು ಯಾವುದೇ ಕೆಲವು ಕಂಪನಿ ಅಥವಾ ವ್ಯಕ್ತಿ ಕಬಳಿಸದಂತೆ ನಾವು ಖಚಿತಪಡಿಸುತ್ತೇವೆ”

ಎಂಬೀ ಇನ್ನೊಂದು ಉಲ್ಲೇಖ ಖಂಢಿತ ಡೇಂಜರಸ್ ಆಗಿ ಕಂಡಿರಬೇಕು ಮೋದಿ ಅವರಿಗೆ. ಅಥವಾ ಅವರ ಇಬ್ಬರು ಪರಮ ‘ಮಿತ್ರೋಂ’ ‘ಏನಪ್ಪಾ ಇದು! ನಮ್ಮನ್ನು ಉದ್ದೇಶಿಸಿ ಬರೆದಂತಿದೆಯಲ್ಲಾ’ ಅಂತ ಅವರಿಗೆ ಈ ಪಾರಾ ಓದಿ ಹೇಳಿರಬೇಕು. ಈ ‘ಮಿತ್ರೋಂ’ ಗಳಿಗೆ ತೊಂದರೆಯಾಗಬಹುದು ಅಥವಾ ತೊಂದರೆ ತಪ್ಪಿಸಿಕೊಳ್ಳಲು ಅವರು ಕಾಂಗ್ರೆಸ್ ಕಡೆಗೆ ವಾಲಿದರೆ ಏನು ಗತಿ ಎಂದು ಮೋದಿ ಆತಂಕಿತರಾಗಿದ್ದಾರಾ? ಈ ‘ಮಿತ್ರೋಂ’ ಕಳೆದುಕೊಳ್ಳುವುದು ಖಂಡಿತ ಡೇಂಜರಸ್ ಆಗಿ ಕಂಡಿರಬೇಕು. ಅದರಲ್ಲೂ ಒಬ್ಬ ಮಿತ್ರ ತನ್ನ ಅಪ್ಪನ ಕಾಲದಿಂದಲೂ ರಾಹುಲ್ ಗಾಂಧಿಯವರ ಅಜ್ಜಿಯ ಕಾಲದಿಂದಲೂ ಕಾಂಗ್ರೆಸ್ ಗೆ ಸಹ ‘ಮಿತ್ರೋಂ’ ಆಗಿರುವುದರಿಂದ!

 

ಅಸಮಾನತೆ ನಿವಾರಣೆಗೆ, ಆರ್ಥಿಕ ನ್ಯಾಯಕ್ಕೆ ನಿರ್ದಿಷ್ಟ ಕ್ರಮಗಳಿಲ್ಲ

‘ಅಸಮಾನತೆ’ (8 ಬಾರಿ) ಮತ್ತು ‘ಸಾಮಾಜಿಕ ನ್ಯಾಯ’ (4 ಬಾರಿ) ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸಾಕಷ್ಟು ಪ್ರಾಮುಖ್ಯತೆ ಪಡೆದಿದೆ. ಸಾಮಾಜಿಕ ನ್ಯಾಯಕ್ಕೆ ಒಂದು ವಿಭಾಗವನ್ನೇ ಮೀಸಲಾಗಿಡಲಾಗಿದೆ. ಅಸಮಾನತೆ ಸಹ ಪ್ರಣಾಳಿಕೆಯಲ್ಲಿ ಹಲವು ವಿಭಾಗಗಳಲ್ಲಿ ಬಂದು ಸಾಕಷ್ಟು ಗಮನ ಸೆಳೆಯುತ್ತದೆ. ಆದರೆ ಬಾರತದಲ್ಲಿ ಜಗತ್ತಿನಲ್ಲೇ ಅತ್ಯಂತ ಹೆಚ್ಚಿನ ಅಸಮಾನತೆ ಇದೆ, ಕಳೆದ 10 ವರ್ಷಗಳಲ್ಲಿ ಅದು ಇನ್ನೂ ಹೆಚ್ಚಾಗಿದೆ, ಈ ಸಮಸ್ಯೆಯನ್ನು ಪರಿಹರಿಸಬೇಕು ಇತ್ಯಾದಿ ಹೇಳುವುದು ಬಿಟ್ಟರೆ ನಿರ್ದಿಷ್ಟ ‘ಸಂಪನ್ಮೂಲ ಪುನರ್ಹಂಚಿಕೆ’ಯ ಪ್ರಸ್ತಾಪಗಳೇನೂ ಇಲ್ಲ.

“ಆಸ್ತಿ ಮತ್ತು ಆದಾಯಗಳಲ್ಲಿ ಹೆಚ್ಚುತ್ತಿರುವ ಅಸಮಾನತೆಯನ್ನು ನಿರ್ವಹಿಸಲು ಸೂಕ್ತ ನೀತಿಗಳನ್ನು ರೂಪಿಸಲಾಗುವುದು” ಎಂದಷ್ಟೇ ಹೇಳಿದೆ.

ಕಾಂಗ್ರೆಸ್ ಇಡೀ ಪ್ರಣಾಳಿಕೆಯನ್ನೇ ‘ನ್ಯಾಯಪತ್ರ’ ಎಂದು ಕರೆದಿದ್ದು ಇದರ ಮುಖ್ಯ ಥೀಮ್ ‘ನ್ಯಾಯ’. ರೈತರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ, ಯುವಜನರಿಗೆ, ಅಲ್ಪಸಂಖ್ಯಾತರಿಗೆ ನ್ಯಾಯವೇ ಪ್ರಣಾಳಿಕೆಯ ಮುಖ್ಯ ಭಾಗಗಳು. ಸಾಮಾಜಿಕ ನ್ಯಾಯದ ಜಾರಿಗೆ ಪ್ರಣಾಳಿಕೆ ಹಲವು ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದೆ. ದೇಶದಾದ್ಯಂತ ಸಮಾಜೋ-ಆರ್ಥಿಕ ಮತ್ತು ಜಾತಿ ಜನಗಣತಿ, ಎಸ್.ಸಿ-ಎಸ್.ಟಿ-ಒಬಿಸಿ ಮೀಸಲಾತಿಗೆ ಇರುವ 50% ಗರಿಷ್ಠ ಮಿತಿಯನ್ನು ತೆಗೆಯಲು ಸಂವಿಧಾನ ತಿದ್ದುಪಡಿ, ಇ.ಡಬ್ಲ್ಯೂ.ಎಸ್ ಮೀಸಲಾತಿಯನ್ನು ಎಲ್ಲ ಜಾತಿಗಳಿಗೆ ವಿಸ್ತರಿಸುವುದು, ಒಂದು ವರ್ಷದೊಳಗೆ ಬ್ಯಾಕ್ ಲಾಗ್ ಭರ್ತಿ, ಎಸ್,ಸಿ-ಎಸ್.ಟಿ ಉಪಯೋಜನೆಯನ್ನು ಸರಕಾರದ ಕಾನೂನುಬದ್ಧ ಕರ್ತವ್ಯವಾಗಿ ಮಾಡುವುದು, ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ಸಂವಿಧಾನಿಕ ಹಕ್ಕುಗಳನ್ನು ರಕ್ಷಿಸುವುದು ಮತ್ತು ಆರ್ಥಿಕ ಸಬಲೀಕರಣ, ನಿಲ್ಲಿಸಲಾದ ಮೌಲಾನಾ ಅಜಾದ್ ಸ್ಕಾಲರ್ ಶಿಪ್ ಮತ್ತೆ ಆರಂಭಿಸುವುದು, ವಿವಿಧ ಧಾರ್ಮಿಕ ವೈಯಕ್ತಿಕ ಕಾನೂನುಗಳ ಸುಧಾರಣೆಗಳನ್ನು ಆಯಾ ಸಮುದಾಯದ ಜತೆ ಪಾಲುಗೊಳ್ಳುವಿಕೆ ಮತ್ತು ಸಮ್ಮತಿಯೊಂದಿಗೆ ತರುವುದು – ಮುಂತಾದ ನಿರ್ದಿಷ್ಟ ಕ್ರಮಗಳನ್ನು ಘೋಷಿಸಿದೆ.

ಮುನ್ನೆಲೆಗೆ ಬಂದ ‘ಸಂಪನ್ಮೂಲ ಪುನರ್ಹಂಚಿಕೆ’ ಯ ವಿರೂಪದ ಪ್ರಯತ್ನ

ನಿರುದ್ಯೋಗ, ಬೆಲೆಏರಿಕೆ, ರೈತ-ಕಾರ್ಮಿಕ ವಿರೋಧಿ ನೀತಿಗಳ ಕುರಿತು ವ್ಯಾಪಕ ಟೀಕೆ ಅಲ್ಲದೆ ಸಾಮಾಜಿಕ ನ್ಯಾಯಕ್ಕೆ ತೀವ್ರ ಅಪಾಯ, ಅಸಮಾನತೆಯನ್ನು ಹೆಚ್ಚಿಸುವ ಕಾರ್ಪೊರೆಟ್-ಪರ ಕ್ರಮಗಳ ಕುರಿತು ಜನತೆಯ ಆಕ್ರೋಶ ಎಲ್ಲ ವಿರೋಧ ಪಕ್ಷಗಳ ಪ್ರಣಾಳಿಕೆಯಲ್ಲಿ ಬಿಂಬಿತವಾಗಿದ್ದು ಚುನಾವಣಾ ವಿಷಯಗಳಾಗಿವೆ. ಅದೇ ರೀತಿ ‘ಗ್ಯಾರಂಟಿ’ಗಳಂತಹ ಕಲ್ಯಾಣ ಕ್ರಮಗಳಿಗೆ ಒತ್ತಾಯ ಬರುತ್ತಿದೆ. ಬಿಜೆಪಿಗೆ 400+ ಸೀಟು ಬಂದರೆ ಸಂವಿಧಾನ ಬದಲಾಯಿಸುವ ಮತ್ತು ಮೀಸಲಾತಿ ಮುಂತಾದ ಸಾಮಾಜಿಕ ನ್ಯಾಯದ ಹಕ್ಕುಗಳನ್ನು ಹಿಂತೆಗೆದುಕೊಳ್ಳಲಾಗುವ ಆತಂಕ ಹರಡಿದೆ. ಇವೆಲ್ಲ ಬಿಜೆಪಿಗೆ ಹಿನ್ನಡೆ ತರಬಹುದು. ರಾಮಮಂದಿರ ಉದ್ಘಾಟನೆಯ ಸಂಭ್ರಮ, ವಿಕಸಿತ ಭಾರತದ ಕನಸು, ಭಾರತ ವಿಶ್ವಗುರುವಾದ ಕುರಿತು ಗರ್ವ ಈ ಸಮಸ್ಯೆಗಳನ್ನು ಮರೆಗೆ ಸರಿಸಲು ಶಕ್ತವಾಗಿಲ್ಲ.

ಸಾಮಾಜಿಕ ನ್ಯಾಯ, ಭೀಕರ ಅಸಮಾನತೆಯ ಹಿನ್ನೆಲೆಯಲ್ಲಿ ಆರ್ಥಿಕ ನ್ಯಾಯದ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಮಧ್ಯಮ ವರ್ಗ, ಉನ್ನತ ವರ್ಗಗಳ ಪ್ರಜ್ಞಾವಂತ ವಿಭಾಗಗಳೂ ಈ ಪ್ರಶ್ನೆಯನ್ನು ಪರಿಹರಿಸದಿದ್ದರೆ ಅಪಾಯಕಾರಿ ಸಾಮಾಜಿಕ ಸ್ಫೋಟದ ಬಗ್ಗೆ ಆತಂಕಿತವಾಗಿದೆ. ಈ ಪರಿಹಾರ ಸಂಪನ್ಮೂಲಗಳ ಪುನರ್ಹಂಚಿಕೆಯನ್ನು ಬೇಡುತ್ತದೆ. ಆದರೆ ಕಾಂಗ್ರೆಸ್ ಈ ಪ್ರಶ್ನೆಯನ್ನು ಎತ್ತಿಕೊಂಡೇ ಇಲ್ಲ. ಹಾಗಾಗಿ ಈ ಪುನರ್ಹಂಚಿಕೆಯ ಪ್ರಶ್ನೆಯನ್ನು ವಿರೂಪಗೊಳಿಸಿ ಬಹುಪಾಲು ಮಧ್ಯಮ ವರ್ಗ, ಎಲ್ಲಾ ಜಾತಿಯ ಆಸ್ತಿವಂತರು, ಸ್ವಲ್ಪ ಮಟ್ಟಿನ ಅನುಕೂಲಸ್ಥರಿಗೆ ನಿಮ್ಮ ಆಸ್ತಿ ಕಿತ್ತುಕೊಂಡು ಉಳಿದವರಿಗೆ ಹಂಚಲಾಗುತ್ತದೆ ಎಂಬ ಭೀತಿ ಹುಟ್ಟಿಸುವ ತಂತ್ರ ಮೋದಿ-ಬಿಜೆಪಿ ಹೂಡಿದೆ. ಚಿನ್ನ, ಬೆಳ್ಳಿ, ಮಂಗಳಸೂತ್ರ ಇವೆಲ್ಲ ಆಸ್ತಿಯ ಪ್ರತೀಕಗಳಷ್ಟೇ. ಜಾತಿ ಜನಗಣತಿ ಮತ್ತಿತರ ಸಾಮಾಜಿಕ ನ್ಯಾಯದ ನಿರ್ದಿಷ್ಟ ಕ್ರಮಗಳಿಗೂ– ‘ಅವರು ಇವರು ನಿಮ್ಮ ಮೀಸಲಾತಿ ಕಿತ್ತುಕೊಳ್ಳುತ್ತಾರೆ’ ಎಂದು ಶೋಷಿತರ ವಿವಿಧ ವಿಭಾಗಗಳವರನ್ನು (ಎಸ್.ಸಿ, ಎಸ್.ಟಿ, ಒಬಿಸಿ, ಮುಸ್ಲಿಮರು) ಪರಸ್ಪರ ಎತ್ತಿ ಕಟ್ಟುವ ಆ ಮೂಲಕ ಮೀಸಲಾತಿಯನ್ನೇ ಅಪ್ರಸ್ತುತ ಮಾಡುವ – ಅವರ ರೆಡಿಮೇಡ್ ಉತ್ತರವಂತೂ ಹಿಂದಿನಿಂದಲೂ ಇದೆ. ಆಸ್ತಿಯನ್ನೂ, ಮೀಸಲಾತಿಯನ್ನು ಕಿತ್ತುಕೊಂಡು ಕಾಂಗ್ರೆಸ್ ಮುಸ್ಲಿಮರಿಗೆ ಕೊಡಲು ಹುನ್ನಾರ ನಡೆಸುತ್ತಿದೆ ಎಂಬುದು ಮೋದಿ-ಬಿಜೆಪಿ ಕಟ್ಟುತ್ತಾ ಬಂದಿರುವ ಕಥನಕ್ಕೆ ಪಕ್ಕಾ ಹೊಂದಿಕೊಳ್ಳುತ್ತದೆ.

ಇದನ್ನು ಓದಿ : ಪರಿಹಾರ ಕೇಳಿದ್ದು 18 ಸಾವಿರ ಕೋಟಿ, ಕೊಟ್ಟಿದ್ದು ಮೂರು ಸಾವಿರ ಕೋಟಿ – ಕೇಂದ್ರ ಸರ್ಕಾರದ ವಿರುದ್ಧ ಕೃಷ್ಣ ಬೈರೇಗೌಡ ವಾಗ್ದಾಳಿ

ಐದು ಪ್ರಾಥಮಿಕ ಆರ್ಥಿಕ ಹಕ್ಕುಗಳ ಗ್ಯಾರಂಟಿ ಚುನಾವಣಾ ವಿಷಯವಾಗಬೇಕು

ಕಾಂಗ್ರೆಸ್ (ಅಥವಾ ಬಿಜೆಪಿ ಸಹ ಸೀಮಿತವಾದರೂ) ಘೋಷಿಸಿರುವ ‘ಗ್ಯಾರಂಟಿ’ಗಳನ್ನು ಕಲ್ಯಾಣ ಯೋಜನೆಗಳನ್ನು ಜಾರಿ ಮಾಡಲು ಮತ್ತು ನಿಜವಾದ ಸಾಮಾಜಿಕ-ಆರ್ಥಿಕ ನ್ಯಾಯ ಒದಗಿಸಲು ಸಂಪನ್ಮೂಲಗಳು ಬೇಕು. ಆರ್ಥಿಕ ನ್ಯಾಯವಿಲ್ಲದ ಸಾಮಾಜಿಕ ನ್ಯಾಯ ಸುಸ್ಥಿರವಲ್ಲ. ಇದಕ್ಕಾಗಿ ಸಂಪನ್ಮೂಲಗಳ ಪುನರ್ಹಂಚಿಕೆ ಆಗಬೇಕು. ಉದಾಹರಣೆಗೆ ಎಲ್ಲರಿಗೂ ಉದ್ಯೋಗ ಒದಗಿಸಬೇಕಾದರೆ ಮತ್ತು ಸಾಮಾಜಿಕ ನ್ಯಾಯ ಪಾಲಿಸಬೇಕಾದರೆ ಅದನ್ನು ವಿದೇಶೀ-ದೇಶಿ ಖಾಸಗಿಯವರಿಗೆ ಪೂರ್ಣವಾಗಿ ಬಿಡಲು ಆಗುವುದಿಲ್ಲ. ಸರಕಾರಿ ಉದ್ಯೋಗಗಳೇ ಇಲ್ಲದೆ ಮೀಸಲಾತಿಗೆ ಅರ್ಥವಿರುವುದಿಲ್ಲ. ಸಾರ್ವಜನಿಕ ಕ್ಷೇತ್ರದ ಉದ್ಯಮಗಳ ಖಾಸಗೀಕರಣ ನಿಲ್ಲಿಸಬೇಕು. ಸರಕಾರ ಉದ್ಯಮಗಳಲ್ಲಿ ಹೂಡಿಕೆ ಮಾಡಬೇಕು. ಮೂಲ ಸೌಕರ್ಯಗಳನ್ನು ಸರಕಾರವೇ ನಿರ್ಮಾಣ ಮಾಡಬೇಕು. ಇವಕ್ಕೆ ಸರಕಾರಕ್ಕೆ ಸಂಪನ್ಮೂಲ ಬೇಕು. ಇವೆಲ್ಲ ಈಗಿನ ಆರ್ಥಿಕ ನೀತಿ ಹಾಗೇ ಮುಂದುವರೆಸಿದರೆ ಸಾಧ್ಯವಿಲ್ಲ. ಸಂಪನ್ಮೂಲಗಳ ಪುನರ್ಹಂಚಿಕೆ, ಜನರ ಸಮಸ್ಯೆಗಳ ಪರಿಹಾರಕ್ಕೆ ಸಂಪನ್ಮೂಲಗಳ ಹೊಂಚುವಿಕೆಯ ವಿಧಾನ ಹೇಳದೆ ಇದು ಅರ್ಥಪೂರ್ಣವಾಗುವುದಿಲ್ಲ.

ವಿವಿಧ ರೀತಿಯಲ್ಲಿ ಹೆಸರಿನಲ್ಲಿ ಬಡಜನರಿಗೆ ಪ್ರಧಾನವಾಗಿ ಹಣ ವರ್ಗಾವಣೆಯ ವಿಧಾನದ ಮೂಲಕ ಕೊಡುವ ‘ಗ್ಯಾರಂಟಿ’ಗಳು ಕಲ್ಯಾಣ ಯೋಜನೆಗಳು ತಾತ್ಕಾಲಿಕ ಪರಿಹಾರ ಕೊಡಬಹುದೇ ಹೊರತು ಸಮಸ್ಯೆಯ ಮೂಲಕ್ಕೆ ಹೋಗುವ ಸಮಗ್ರ ಪರಿಹಾರವಾಗುವುದಿಲ್ಲ. ಹೆಚ್ಚಾಗಿ ಇದರ ಜತೆಗೆ ಇತರ ಸಬ್ಸಿಡಿ, ಕಲ್ಯಾಣ ಯೋಜನೆಗಳ ಕಡಿತವೂ ಆಗಿರುತ್ತದೆ, ಎನ್ನುತ್ತಾರೆ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಪ್ರೊ.ಪ್ರಭಾತ್ ಪಟ್ನಾಯಕ್. ಇದರ ಬದಲು ಅವರು ಎಲ್ಲರಿಗೆ ಲಭ್ಯವಾಗಬೇಕಾದ ಐದು ಪ್ರಾಥಮಿಕ ಆರ್ಥಿಕ ಹಕ್ಕುಗಳನ್ನು ಪಟ್ಟಿ ಮಾಡುತ್ತಾರೆ. ಆ ಐದು ಆರ್ಥಿಕ ಹಕ್ಕುಗಳು – ಆಹಾರದ ಹಕ್ಕು, ಉಚಿತ ಉತ್ತಮ ಗುಣಮಟ್ಟದ ಸಾರ್ವಜನಿಕ ಶಿಕ್ಷಣ, ರಾಷ್ಟ್ರೀಯ ಆರೋಗ್ಯ ಸೇವೆ ಮೂಲಕ ಒದಗಿಸುವ ಉಚಿತ ಉತ್ತಮ ಗುಣಮಟ್ಟದ ಸಾರ್ವಜನಿಕ ಆರೋಗ್ಯ ಸೇವೆ, ಉದ್ಯೋಗದ ಹಕ್ಕು (ಇಲ್ಲದಿದ್ದರೆ ನಿರುದ್ಯೋಗ ಭತ್ಯೆ), ಅಂಗವಿಕಲರಿಗೆ ಮತ್ತು ವಯಸ್ಕರಿಗೆ ಪಿಂಚಣಿಯ ಹಕ್ಕು. ಇವು ಸಾರ್ವತ್ರಿಕವಾಗಿ ಕಾನೂನಾತ್ಮಕವಾಗಿ ಹಕ್ಕಾಗಿ ಲಭ್ಯವಾಗಬೇಕು ಎನ್ನುತ್ತಾರೆ. ರೇಗಾ ಮತ್ತು ಆರ್.ಟಿ.ಇ ಮತ್ತು ಆಹಾರ ಹಕ್ಕು ಈ ರೀತಿ ಭ್ರೂಣ ರೂಪದ್ಲಾದರೂ ಆರ್ಥಿಕ ಹಕ್ಕುಗಳ ಉತ್ತಮ ಉದಾಹರಣೆಗಳು. ಇವು ಮಾತ್ರ ಭೀಕರ ಅಸಮಾನತೆ, ಬಡತನ, ಹಸಿವುಗಳನ್ನು ಪರಿಹರಿಸಬಲ್ಲವು. ಈ ಹಕ್ಕುಗಳ ಜಾರಿ ಪರಸ್ಪರ ಪೂರಕವಾಗಿದ್ದು ಇನ್ನಷ್ಟು ಹೆಚ್ಚಿನ ಸಂಪನ್ಮೂಲ ಸೃಷ್ಟಿಸುತ್ತವೆ. ಉದಾಹರಣೆಗೆ ಸಾರ್ವಜನಿಕ ಶಿಕ್ಷಣ, ಆರೋಗ್ಯ ಸೇವೆ ಸಾಕಷ್ಟು ಉದ್ಯೋಗ ಸೃಷ್ಟಿಸಿ ನಿರುದ್ಯೋಗ ಭತ್ಯೆ ಉಳಿಸುತ್ತದೆ, ಆರ್ಥಿಕದಲ್ಲಿ ಆಹಾರ ಮತ್ತಿತರ ಸರಕುಗಳಿಗೆ ಬೇಡಿಕೆ ಹೆಚ್ಚಿಸುತ್ತದೆ. ಇವು ನಿಜವಾದ ಮಾನವ ಅಭಿವೃದ್ಧಿ ಮಾಡಬಲ್ಲವು. ಆರ್ಥಿಕ ಬೆಳವಣಿಗೆಯ ಇಂಜಿನ್ ಆಗಬಲ್ಲವು. ಇವನ್ನು ಐದು ಪ್ರಾಥಮಿಕ ಆರ್ಥಿಕ ಹಕ್ಕಾಗಿ ಒದಗಿಸಲು ಸುಮಾರು 15 ಲಕ್ಷ ಕೋಟಿ ರೂ. ಬೇಕಾಗುತ್ತದೆ. ಇದು ನಮ್ಮಜಿಡಿಪಿಯ ಸುಮಾರು 9% ರಷ್ಟಾಗುತ್ತದೆ, ಎನ್ನುತ್ತಾರೆ ಪ್ರೊ. ಪಟ್ನಾಯಕ್.

ಈ ಐದು ಪ್ರಾಥಮಿಕ ಆರ್ಥಿಕ ಹಕ್ಕುಗಳ ಗ್ಯಾರಂಟಿ ಮತ್ತು ಅದಕ್ಕೆ ಬೇಕಾದ ನಿರ್ದಿಷ್ಟ ಕ್ರಮಗಳು ಚುನಾವಣಾ ವಿಷಯವಾಗಬೇಕು.

ವೆಲ್ತ್ ಟ್ಯಾಕ್ಸ್, ಇನ್ ಹೆರಿಟೆನ್ಸ್ ಟ್ಯಾಕ್ಸ್ ಗಳಿಂದ ಆರ್ಥಿಕ ಹಕ್ಕು ಜಾರಿ ಸಾಧ್ಯ

ಇದನ್ನು ಕೇವಲ ಎರಡು ಹೊಸ ತೆರಿಗೆಗಳಿಂದ ಭರಿಸಬಹುದು ಎಂದು ಪ್ರೊ.ಪ್ರಭಾತ್ ಪಟ್ನಾಯಕ್ ವಾದಿಸುತ್ತಾರೆ. ಅವೆಂದರೆ – ಆಸ್ತಿ ತೆರಿಗೆ ಮತ್ತು ಪಿತ್ರಾರ್ಜಿತ ಆಸ್ತಿ ತೆರಿಗೆ. ಇವು ನಿಜವಾಗಿಯೂ ಹೊಸ ತೆರಿಗೆಗಳಲ್ಲ. ಹಿಂದೆ ಭಾರತದಲ್ಲಿ ಇದ್ದು (ಆಸ್ತಿ ತೆರಿಗೆ 2015ರಲ್ಲಿ ಮತ್ತು ಪಿತ್ರಾರ್ಜಿತ ಆಸ್ತಿ ತೆರಿಗೆ 1985ರಲ್ಲಿ) ರದ್ದು ಮಾಡಲ್ಪಟ್ಟವು. ಜಗತ್ತಿನ ಹೆಚ್ಚಿನ ಅಭಿವೃದ್ಧಿ ಹೊಂದಿದ ಬಂಡವಾಳಶಾಹಿ ದೇಶಗಳಲ್ಲಿ ಈಗಲೂ ಜಾರಿಯಲ್ಲಿರುವವು. 1% ಆಸ್ತಿ ತೆರಿಗೆ ಮತ್ತು 33.3% ಪಿತ್ರಾರ್ಜಿತ ಆಸ್ತಿ ತೆರಿಗೆ – ಈ ಎರಡು ತೆರಿಗೆಗಳನ್ನು ಕೇವಲ ಶತಕೋಟ್ಯಾಧಿಪತಿಗಳಿಗೆ (ಅಂದರೆ 100 ಕೋಟಿ ರೂ ಗಿಂತ ಹೆಚ್ಚು ಆಸ್ತಿ ಇರುವ ಸೂಪರ್ ಶ್ರೀಮಂತರಿಗೆ) ವಿಧಿಸಿದರೆ ಸಾಕು, ಈ ಐದು ಆರ್ಥಿಕ ಹಕ್ಕುಗಳನ್ನು ನಿರ್ವಹಿಸಬಹುದು. 2018ರ ಅಂಕಿಅಂಶಗಳ ಪ್ರಕಾರ ಶತಕೋಟ್ಯಾಧಿಪತಿಗಳ ಒಟ್ಟು ಆಸ್ತಿ 557 ಲಕ್ಷ ಕೋಟಿ. ಅದರ 1% 5.57 ಲಕ್ಷ ಕೋಟಿ ರೂ. ಈ ಶತಕೋಟ್ಯಾಧಿಪತಿಗಳು ವರ್ಷದಲ್ಲಿ ಕೇವಲ 5% ತಮ್ಮ ಮಕ್ಕಳಿಗೆ ಅಥವಾ ವಾರಸುದಾರರಿಗೆ ಆಸ್ತಿ ವರ್ಗಾವಣೆ ಮಾಡುತ್ತಾರೆ ಎಂದಿಟ್ಟುಕೊಂಡರೂ ಪಿತ್ರಾರ್ಜಿತ ಆಸ್ತಿ ತೆರಿಗೆ ಸುಮಾರು 9.33 ಲಕ್ಷ ಕೋಟಿ ರೂ. ಆಗುತ್ತದೆ. ಇವೆರಡು ಸೇರಿಸಿದರೆ 15 ಲಕ್ಷ ಕೋಟಿ ರೂ. ಆಗುತ್ತದೆ. ಅತಿ ಶ್ರೀಮಂತರ ಮೇಲೆ ಆಸ್ತಿ ತೆರಿಗೆ ಮತ್ತು ಪಿತ್ರಾರ್ಜಿತ ಆಸ್ತಿ ತೆರಿಗೆ ಹಲವು ದೇಶಗಳಲ್ಲಿ ಜಾರಿಯಲ್ಲಿದ್ದು ಇದು ಬಂಡವಾಳಶಾಹಿ ಸಿದ್ಧಾಂತಕ್ಕೆ ವಿರುದ್ಧವಾದದ್ದಲ್ಲ. ಬಂಡವಳಿಗ ವಹಿವಾಟಿನಲ್ಲಿ ಲಾಭ ಮತ್ತು ಆಸ್ತಿ ಸೃಷ್ಟಿಸುವಲ್ಲಿ ಆತನ ಕೌಶಲ್ಯದ ಪಾತ್ರವಿದ್ದ ಹಾಗೆನೇ,. ಇಡೀ ಸಮಾಜದ ಚಾರಿತ್ರಿಕವಾಗಿ ಸಂಚಿತ ಸಂಪನ್ಮೂಲ, ಕೌಶಲ್ಯದ ಪಾತ್ರ ಸಹ ಇರುತ್ತದೆ. ಅದರ ಒಂದು ಪಾಲನ್ನು ಆತ ಸಮಾಜಕ್ಕೆ ವಾಪಸು ಕೊಡಬೇಕು. ಪಿತ್ರಾರ್ಜಿತ ಆಸ್ತಿ ಪಡೆಯುವವರು ಅಂತಹ ಯಾವುದೇ ಕೌಶಲ್ಯ ಇನ್ನೂ ಪಡೆದಿರುವುದಿಲ್ಲ, ಪ್ರದರ್ಶಿಸಿರುವುದಿಲ್ಲ. ಹಾಗಾಗಿ ಅಂತಹ ಕೌಶಲ್ಯವನ್ನು ಪ್ರದರ್ಶಿಸುವವರೆಗೆ ಅವರು ಏನೂ ಮಾಡದೆ ಪಡೆದ ಆಸ್ತಿ ಇಡಿಯಾಗಿ ಅವರಿಗೆ ಸಲ್ಲಬೇಕಾಗಿಲ್ಲ.

 

ಸಮಾನತೆಯ ಮತ್ತು ಸಾಮಾಜಿಕ ನ್ಯಾಯದ ಆಶಯಗಳು ಡೇಂಜರಸ್ – ಮೋದಿಗೆ

ಹೀಗೆ ಅಸಮಾನತೆ, ಬಡತನ, ಹಸಿವು, ಅಪೌಷ್ಟಿಕತೆ ನಿವಾರಣೆಗೆ ತಕ್ಷಣದ ನೆರವು ನೀಡುವ ತೇಪೆ ಹಚ್ಚುವ ಗ್ಯಾರಂಟಿ ಕಲ್ಯಾಣ ಯೋಜನೆಗಳೊಂದಿಗೆ, ಈ ಸಮಸ್ಯೆಗಳ ಪರಿಹಾರಕ್ಕೆ ದೂರಗಾಮಿ ಹಕ್ಕು ಆಧಾರಿತ ಸಂಪನ್ಮೂಲ ಗಳ ಪುನರ್ಹಂಚಿಕೆ ಅಜೆಂಡಾದಲ್ಲಿ ತರಬೇಕಾಗಿದೆ. ಇದು ಸಂವಿಧಾನದ ಪೀಠಿಕೆಯಲ್ಲಿ ಬರುವ ಆರ್ಥಿಕ ನ್ಯಾಯ ಮತ್ತು ಘನತೆಯ ಬದುಕಿನ ಆಶಯಗಳಿಗೆ ಅನುಗುಣವಾಗಿದೆ. ಮೋದಿ ಅವರದೇ ಕಾರಣಕ್ಕೆ ಉದ್ದೇಶಕ್ಕೆ ಈ ಅಜೆಂಡಾವನ್ನು ಕಾಂಗ್ರೆಸ್ ನತ್ತ ಎಸೆದಿದ್ದಾರೆ. ಮರಣ ತೆರಿಗೆ (ಪಿತ್ರಾರ್ಜಿತ ತೆರಿಗೆ) ಹೊರಿಸಲು ಕಾಂಗ್ರೆಸ್ ಹೊರಟಿದೆ ಎಂದು ಆಪಾದಿಸಿದ್ದಾರೆ. ಕಾಂಗ್ರೆಸ್ ನ (ಅಂದರೆ ಸಂವಿಧಾನದ ಕೂಡಾ ?) ಸಮಾನತೆಯ ಮತ್ತು ಸಾಮಾಜಿಕ ನ್ಯಾಯದ ಆಶಯಗಳು ಡೇಂಜರಸ್ ಎಂದಿದ್ದಾರೆ. ಮುಂದುವರೆದು ‘ಅರ್ಬನ್ ನಕ್ಸಲ್’ ಪ್ರೇರಿತವೆಂದೂ ಕರೆದಿದ್ದಾರೆ. ಕಾಂಗ್ರೆಸ್ ನ್ನು ಕಮ್ಯುನಿಸ್ಟರು ಎಂದು ಜರೆಯಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. (ಯು.ಎಸ್ ನಲ್ಲಿ ಪಾಪ ಬಲ-ನಡುಪಂಥೀಯ ಡೆಮೊಕ್ರಾಟರನ್ನು ಮಾರುವೇಷದಲ್ಲಿರುವ ಸೋಶಲಿಸ್ಟರು, ಕಮ್ಯುನಿಸ್ಟರೆಂದು ಲಾಗಾಯ್ತಿನಿಂದ ಬಲಪಂಥೀಯ ರಿಪಬ್ಲಿಕನ್ನರು ಜರೆಯುತ್ತಿದ್ದಾರೆ ಎಂದು ಇಲ್ಲಿ ನೆನಪಿಸಿಕೊಳ್ಳಬಹುದು) ಕಾಂಗ್ರೆಸ್ ಈ ಸವಾಲನ್ನು ಸ್ವೀಕರಿಸಿಲ್ಲ. ಅವರಿಗೆ ಅದು ಸ್ವೀಕಾರಾರ್ಹವೂ ಅಲ್ಲ. ಬದಲಿಗೆ ಪಿತ್ರಾರ್ಜಿತ ತೆರಿಗೆಯನ್ನು ರದ್ದು ಮಾಡಿದ್ದು ನಾವೇ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. 2015ರಲ್ಲಿ ಆಸ್ತಿ ತೆರಿಗೆ ರದ್ದು ಮಾಡಿದ್ದು ತಪ್ಪು ಎಂದು ಹೇಳುವ ಧೈರ್ಯ ತೋರಿಲ್ಲ. ಮೋದಿ ಸಾಮಾಜಿಕ ನ್ಯಾಯದ ಆಶಯಗಳು ಡೇಂಜರಸ್ ಅಂದಿದ್ದಕ್ಕೆ ಕಾಂಗ್ರೆಸ್ ಸೇರಿದಂತೆ ಇಂಡಿಯಾ ಕೂಟದ ಪಕ್ಷಗಳು ಸಾಕಷ್ಟು ಪ್ರತಿಏಟು ಕೊಟ್ಟಿವೆ. ಆದರೆ ಆರ್ಥಿಕ ನ್ಯಾಯ ಡೇಂಜರಸ್ ಅಂದಿದ್ದಕ್ಕೆ ತಕ್ಕ ಪ್ರತಿಕ್ರಿಯೆ ಬಂದಿಲ್ಲ.

ಬಿಜೆಪಿಗೆ ದೃಢವಾದ ಬದಲಿ ಆರ್ಥಿಕ ನೀತಿಯನ್ನು ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಕೊಟ್ಟಿಲ್ಲ. ವಿರೋಧ ಪಕ್ಷವಾಗಿರುವಾಗ ರಾಡಿಕಲ್ ಆಗುವ ಪೋಸು ಕೊಡುತ್ತದೆಯಷ್ಟೇ. ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೂ ಅದೇ ಘೋಷಿಸಿರುವ ಗ್ಯಾರಂಟಿಗಳ, ಯೋಜನೆಗಳ ಜಾರಿಗೆ ಸಂಪನ್ಮೂಲಗಳ ಪುನರ್ಹಂಚಿಕೆಗೆ , ಹೊಂಚುವಿಕೆಗೆ ತಯಾರಿರುವುದಿಲ್ಲ. ಇತರ ಪಕ್ಷಗಳು ಪ್ರಮುಖವಾಗಿ ಎಡ ಪಕ್ಷಗಳು ಈ ಒತ್ತಡ ತರಬೇಕಾಗಿದೆ. ಸಿಪಿಐ(ಎಂ) ಇಲ್ಲಿ ಹೇಳಿರುವ ಐದು ಆರ್ಥಿಕ ಹಕ್ಕುಗಳನ್ನು, ಸಂಪನ್ಮೂಲ ಪುನರ್ಹಂಚಿಕೆಯ ತೆರಿಗೆಗಳನ್ನು ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾವಿಸಿದೆ, ಅದಕ್ಕೆ ಹೋರಾಡಲಿದೆ ಎಂಬುದು ಸಮಾದಾನದ ಸಂಗತಿ.

ಮೋದಿ ‘ಬೈ ಮಿಸ್ಟೇಕ್’ ಸಂಪನ್ಮೂಲಗಳ ಪುನರ್ಹಂಚಿಕೆ, ಇನ್ ಹೆರಿಟೆನ್ಸ್ ಟ್ಯಾಕ್ಸ ನ್ನು ಮುನ್ನೆಲೆಗೆ ತಂದಿದ್ದಾರೆ. ಇದನ್ನು ಇಂಡಿಯಾ ಕೂಟ ಉಳಿದ ಹಂತಗಳ ಪ್ರಚಾರದಲ್ಲಾದರೂ ಬಳಸಬೇಕು.

ಇದನ್ನು ನೋಡಿ : ಕೇಂದ್ರದ ಬಿಜೆಪಿ ಸರ್ಕಾರ ಸ್ತ್ರೀಯರ ಸಬಲೀಕರಣವನ್ನು ಹತ್ತಿಕ್ಕುವ ಕೆಲಸ ಮಾಡಿದೆ – ಹೋರಾಟಗಾರರ ಆರೋಪ

Donate Janashakthi Media

Leave a Reply

Your email address will not be published. Required fields are marked *