ಭಾರತವು ತನ್ನ ರೈತರಿಂದ ಆಹಾರ ಧಾನ್ಯಗಳನ್ನು ಪೂರ್ವ ಘೋಷಿತ ಬೆಲೆಗಳಲ್ಲಿ ಖರೀದಿಸಬಾರದು ಎಂಬ ಸಾಮ್ರಾಜ್ಯಶಾಹಿಗಳ ಒತ್ತಡಗಳಿಗೆ ಭಾರತದ ಯಾವ ಸರ್ಕಾರವೂ ಇಷ್ಟೊಂದು ಹೆದರಿದ್ದಿಲ್ಲ. ಭಾರತದ ಬಿಗಿ ನಿಲುವಿನಿಂದಾಗಿಯೇ ಈ ಕುರಿತ ದೋಹಾ ಸುತ್ತಿನ ಮಾತು-ಕತೆಗಳು ಸ್ಥಗಿತವಾಗಿದ್ದವು. ಆದರೇನು ಮಾಡುವುದು, ಈ ಬಗ್ಗೆ ಸಾಮ್ರಾಜ್ಯಶಾಹಿಗಳಿಗೆ ಹೆದರುವ ಅಥವಾ ಈ ವಿಷಯದ ಬಗ್ಗೆ ಅಜ್ಞಾನಿಯಾಗಿರುವ ಸರ್ಕಾರವೊಂದನ್ನು ನಾವು ಮೊದಲ ಬಾರಿಗೆ ಕಾಣುತ್ತಿದ್ದೇವೆ. “ಕೃಷಿ ಮಾರುಕಟ್ಟೆಗಳ ಆಧುನೀಕರಣ”, “ಇಪ್ಪತ್ತೊಂದನೇ ಶತಮಾನದ ತಂತ್ರಜ್ಞಾನ” ಮುಂತಾದವುಗಳ ಹೆಸರಿನಲ್ಲಿ, ತಲಾ ಧಾನ್ಯ ಉತ್ಪಾದನೆಯು ಇಳಿಯುತ್ತಿರುವ ಸನ್ನಿವೇಶದಲ್ಲಿ, ಲಭ್ಯವಿರುವ ಕೃಷಿ ಭೂಮಿಯನ್ನು ರಫ್ತು ಬೆಳೆಗಳತ್ತ ತಿರುಗಿಸುವ ಕ್ರಮವು ನಮ್ಮನ್ನು ವಸಾಹತುಶಾಹಿ ಯುಗಕ್ಕೆ ಮರಳಿಸುತ್ತದೆ. ವಾಸ್ತವವಾಗಿ, ಅದು ಸಾಮ್ರಾಜ್ಯಶಾಹಿ ಕಾರ್ಯಸೂಚಿಯನ್ನು ಜಾರಿಗೊಳಿಸುತ್ತದೆ.
ಕಳೆದ ವಾರ ಸಂಸತ್ತಿನಲ್ಲಿ ಬಲವಂತವಾಗಿ ಅಂಗೀಕಾರ ಪಡೆದುಕೊಂಡಿರುವ ಎರಡು ಮಸೂದೆಗಳೂ ಊಹಿಸಲು ಸಾಧ್ಯವಿರುವ ಯಾವುದೇ ಅರ್ಥದಲ್ಲಿ ನೋಡಿದರೂ ಆಕ್ಷೇಪಾರ್ಹವಾಗಿರುವಂತವು. ಈ ವಿಧೇಯಕಗಳನ್ನು ಮತಕ್ಕೆ ಹಾಕಬೇಕೆಂದು ರಾಜ್ಯಸಭೆಯಲ್ಲಿ ಸದಸ್ಯರು ಒತ್ತಾಯ ಮಾಡಿದರೂ ಸಹ ಅವುಗಳನ್ನು ಮತಕ್ಕೆ ಹಾಕದೇ ಧ್ವನಿಮತದ ಮೂಲಕ ಅಂಗೀಕರಿಸಲಾಗಿದೆ ಎಂದು ಘೋಷಿಸಿದ ಕ್ರಮವು ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಸಂವಿಧಾನದ ಏಳನೇ ಶೆಡ್ಯೂಲ್ ಅಡಿಯಲ್ಲಿ ರಾಜ್ಯಗಳ ವ್ಯಾಪ್ತಿಗೆ ಬರುವ ಕೃಷಿ ಮಾರುಕಟ್ಟೆ ವ್ಯವಸ್ಥೆಗೆ ಸಂಬಂಧಿಸಿದ ವಿಷಯದಲ್ಲಿ ಕೆಲವು ಮೂಲಭೂತ ಬದಲಾವಣೆಗಳನ್ನು ಕೇಂದ್ರ ಸರ್ಕಾರವು ಏಕಪಕ್ಷೀಯವಾಗಿ ಮಾಡಿರುವ ಕ್ರಮವು ಒಕ್ಕೂಟ ವ್ಯವಸ್ಥೆಗೆ ಕೊಟ್ಟಿರುವ ಒಂದು ಭಾರೀ ಹೊಡೆತವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬಂಡವಾಳಶಾಹಿ ಮಾರುಕಟ್ಟೆಯ ಹಿಡಿತಕ್ಕೆ ಸಿಕ್ಕಿ ನಲುಗಿದ್ದ ಮತ್ತು ೧೯೩೦ರ ದಶಕದ ಮಹಾ ಕುಸಿತದ ಕಾಲದಲ್ಲಿ ನುಚ್ಚುನೂರಾಗಿದ್ದ ರೈತರಿಗೆ ಅಂತಹ ಪರಿಸ್ಥಿತಿಗಳಿಂದ ಅವರನ್ನು ರಕ್ಷಿಸುವುದಾಗಿ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಅವರಿಗೆ ಕೊಟ್ಟ ಭರವಸೆಗೆ ದ್ರೋಹ ಎಸಗಲಾಗಿದೆ. ಈ ಮಸೂದೆಗಳು ಕೋಟ್ಯಂತರ ಸಣ್ಣ ರೈತರನ್ನು ಬೆರಳೆಣಿಕೆಯ ಖಾಸಗಿ ಖರೀದಿದಾರರ ಕ್ರಯಸ್ವಾಮ್ಯ ಶೋಷಣೆಗೆ ಈಡು ಮಾಡುತ್ತವೆ.
ಸರಕಾರವು ನಿಗದಿಪಡಿಸುವ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಪದ್ಧತಿಯು ಮುಂದುವರಿಯಲಿದೆ ಮತ್ತು ರೈತರು ಖಾಸಗಿ ಖರೀದಿದಾರರ ಕ್ರಯಸ್ವಾಮ್ಯ ಶೋಷಣೆಗೆ ಒಳಗಾಗಲು ಬಿಡುವುದಿಲ್ಲ ಎಂದು ಮೋದಿ ಹೇಳುತ್ತಿದ್ದಾರೆ. ಆದರೆ, ಈ ಬಗ್ಗೆ ಮಸೂದೆಯಲ್ಲಿ ಏನನ್ನೂ ಹೇಳಿಲ್ಲ. ಸ್ವಾಮಿನಾಥನ್ ಸಮಿತಿಯ ಶಿಫಾರಸಿನ ಪ್ರಕಾರ, ಕೃಷಿ ಉತ್ಪಾದನೆಗೆ ತಗಲುವ ಖರ್ಚುಗಳಿಗೆ (ಸಿ೨) ಅದರ ಶೇ.೫೦ರಷ್ಟನ್ನು ಸೇರಿಸಿ ಲೆಕ್ಕಹಾಕಿದ ಮೊತ್ತವನ್ನು ಕನಿಷ್ಠ ಬೆಂಬಲ ಬೆಲೆ ಎಂಬ ಪರಿಗಣನೆಯನ್ನು ಈ ಮಸೂದೆಯಲ್ಲಿ ಅಳವಡಿಸಲು ಸರ್ಕಾರವು ನಿರಾಕರಿಸಿದೆ. ಇದು ಸರ್ಕಾರದ ದುರುದ್ದೇಶವನ್ನು ಬಯಲುಮಾಡುತ್ತದೆ. ವಸಾಹತುಶಾಹಿ ಆಳ್ವಿಕೆಯ ಕಾಲದಲ್ಲಿ ಕುಪ್ರಸಿದ್ಧ ಬೆಲೆ ಏರಿಳಿತಗಳಿಗೆ ಪಕ್ಕಾಗಿದ್ದ ರೈತರನ್ನು ಮತ್ತೊಮ್ಮೆ ಅದೇ ರೀತಿಯ ಪರಿಸ್ಥಿತಿಗೆ ತಳ್ಳಲಾಗಿದೆ. ಸಾಲದ ಬಲೆಯಿಂದ ಹೊರಬರಲಾರದೆ ನಿರ್ಗತಿಕತನಕ್ಕೆ ಇಳಿದ ರೈತರು ಅದರ ವಿರುದ್ಧ ಹೋರಾಟ ಮಾಡುತ್ತಿರುವುದು ಸರಿಯಾಗಿಯೇ ಇದೆ.
ರೈತರ ಸ್ಥಿತಿ-ಗತಿಗಳ ಬಗ್ಗೆ ಚರ್ಚೆ ನಡೆದಿದೆ, ನಿಜ. ಆದರೆ, ಒಂದು ಮಹತ್ವದ ವಿಷಯವಾದ ದೇಶದ ಆಹಾರ ಭದ್ರತೆಯು ಈ ಚರ್ಚೆಯಲ್ಲಿ ಕಾಣೆಯಾಗಿದೆ. ದೇಶದ ಆಹಾರ ಭದ್ರತೆಯ ಪ್ರಶ್ನೆ ಬಂದ ಕೂಡಲೇ ಸಾಮ್ರಾಜ್ಯಶಾಹಿಯ ಕಾಲದಲ್ಲಿದ್ದ ಪರಿಸ್ಥಿತಿಯು ಕಣ್ಮುಂದೆ ಬರುತ್ತದೆ.
ಭಾರತದಂತಹ ಉಷ್ಣ ವಲಯದ ದೇಶಗಳು ಆಹಾರ-ಆಮದು-ಅವಲಂಬಿತವಾಗಿರಬೇಕು ಮತ್ತು ಶೀತ ಪ್ರದೇಶದ ಸಾಮ್ರಾಜ್ಯಶಾಹಿ ದೇಶಗಳು ಬೆಳೆಯಲು ಸಾಧ್ಯವಿಲ್ಲದ ಕಾಫಿ, ಟೀ, ಹಣ್ಣುಗಳು, ಬೇಳೆ ಕಾಳು, ಎಣ್ಣೆ ಬೀಜಗಳು, ತರಕಾರಿ ಮುಂತಾದವುಗಳನ್ನು ಬೆಳೆಯಲು ತಮ್ಮ ಭೂ ಪ್ರದೇಶವನ್ನು ಬಳಸಿಕೊಳ್ಳಬೇಕು ಎಂದು ಸಾಮ್ರಾಜ್ಯಶಾಹಿಯು ಬಹಳ ಕಾಲದಿಂದಲೂ ಆಗ್ರಹಿಸುತ್ತಿದೆ. ಅಂದರೆ, ಉಷ್ಣವಲಯ ಮತ್ತು ಅರೆ ಉಷ್ಣವಲಯದ ದೇಶಗಳು ತಮ್ಮ ಆಹಾರ ಭದ್ರತೆಯನ್ನು ತ್ಯಜಿಸಬೇಕು ಎಂಬುದು ಈ ಆಗ್ರಹದ ಅರ್ಥ.
ಭಾರತದಂತಹ ದೇಶದಲ್ಲಿ ಜನರಿಗೆ ಆಹಾರ ಭದ್ರತೆ ಇರಬೇಕು ಎಂದಾದರೆ, ಆಹಾರ ಪದಾರ್ಥಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಬೇಕಾದ ಅಗತ್ಯವಿದೆ. ಆಹಾರ ಪದಾರ್ಥಗಳ ಆಮದು ಸಲ್ಲದು. ನಮ್ಮ ಆಹಾರವನ್ನು ನಾವೇ ಉತ್ಪಾದಿಸಿಕೊಳ್ಳುವುದರ ಬದಲಾಗಿ ಅದನ್ನು ಆಮದು ಮಾಡಿಕೊಳ್ಳಬಾರದು ಎಂಬುದಕ್ಕೆ ಹಲವಾರು ಕಾರಣಗಳಿವೆ.
ಮೊದಲನೆಯದಾಗಿ, ಅಪಾರ ಜನಸಂಖ್ಯೆಯುಳ್ಳ ಭಾರತವು ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳಲು ಜಾಗತಿಕ ಮಾರುಕಟ್ಟೆಗೆ ಹೋದಾಗಲೆಲ್ಲಾ, ಜಾಗತಿಕ ಬೆಲೆಗಳು ವಿಪರೀತವಾಗಿ ಏರುತ್ತವೆ. ಹಾಗಾಗಿ ಆಮದುಗಳು ದುಬಾರಿಯಾಗುತ್ತವೆ.
ಎರಡನೆಯದಾಗಿ, ಅಂತಹ ಆಮದುಗಳಿಗೆ ಬೇಕಾಗುವಷ್ಟು ವಿದೇಶಿ ವಿನಿಮಯದ ಸಂಗ್ರಹವು ಇಲ್ಲದೇ ಇರಬಹುದು ಎಂಬುದರ ಹೊರತಾಗಿಯೂ, ಅಷ್ಟೊಂದು ದುಬಾರಿ ಬೆಲೆ ತೆತ್ತು ಆಮದಾದ ಆಹಾರ ಪದಾರ್ಥಗಳನ್ನು ಕೊಳ್ಳುವ ಶಕ್ತಿ ಜನರಲ್ಲಿ ಇಲ್ಲದೇ ಇರಬಹುದು ಎಂಬ ಅಂಶವೂ ಇದೆ
ಮೂರನೆಯದಾಗಿ, ಸಾಮ್ರಾಜ್ಯಶಾಹಿ ದೇಶಗಳ ಬಳಿ ತಮಗೆ ಬೇಕಾದಷ್ಟು ಧಾನ್ಯಗಳನ್ನು ಬಳಸಿಕೊಂಡ ನಂತರವೂ ಹೆಚ್ಚುವರಿಯಾಗಿ ಉಳಿದ ದಾಸ್ತಾನುಗಳನ್ನು ದುಬಾರಿ ಬೆಲೆ ತೆತ್ತು ಕೊಂಡುಕೊಳ್ಳಲೂ ಸಹ ಸಾಮ್ರಾಜ್ಯಶಾಹಿಯ ಮರ್ಜಿಗೆ ಒಳಗಾಗಬೇಕಾಗುತ್ತದೆ. ವಾಸ್ತವವಾಗಿ, ಒಂದು ನಿರ್ಣಾಯಕ ಸಂದರ್ಭದಲ್ಲಿ ಒಂದು ದೇಶಕ್ಕೆ ಬೇಕಾಗುವ ಆಹಾರ ಪದಾರ್ಥಗಳನ್ನು ಮಾರಲು ನಿರಾಕರಿಸುವ ಮೂಲಕ, ಆ ದೇಶವು ತನಗೆ ಶರಣಾಗುವಂತೆ ಸಾಮ್ರಾಜ್ಯಶಾಹಿಯು ನೋಡಿಕೊಳ್ಳುತ್ತದೆ.
ಈ ಎಲ್ಲ ಅಂಶಗಳು ಅಮೂರ್ತವಲ್ಲ ಅಥವಾ ಕಟ್ಟು ಕತೆಯೂ ಅಲ್ಲ. ೧೯೫೦ರ ದಶಕದಲ್ಲಿ, ‘ಶಾಂತಿಗಾಗಿ ಆಹಾರ’ ಎಂಬ ಕಾರ್ಯಕ್ರಮದ ಹೆಸರಿನಲ್ಲಿ ಬಡ ದೇಶಗಳಿಗೆ ಆಹಾರ ಧಾನ್ಯಗಳನ್ನು ಮಾರುವ ಸಲುವಾಗಿ ಅಮೇರಿಕಾ ದೇಶವು ರೂಪಿಸಿದ ಪಿಎಲ್-೪೮೦ ಎಂಬ ಕಾನೂನಿನ ಅಡಿಯಲ್ಲಿ ಭಾರತವು ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಬಿಹಾರವು ೧೯೬೫-೬೬ ಮತ್ತು ೧೯೬೬-೬೭ರಲ್ಲಿ ಎರಡು ವರ್ಷ ಸತತವಾಗಿ ಬರಗಾಲದ ಪರಿಸ್ಥಿತಿಯನ್ನು ಎದುರಿಸಿದಾಗ, ಭಾರತವು ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳಲು ವಾಸ್ತವಿಕವಾಗಿ ಅಮೇರಿಕಾದ ಮುಂದೆ ಮಂಡಿಯೂರಿತ್ತು. ಅಕ್ಷರಶಃ ಅದೊಂದು “ಹಡಗಿನಿಂದ ಅಡುಗೆ ಮನೆಗೆ” ಆಹಾರ ಕೊಂಡೊಯ್ಯುವ ಪ್ರಸಂಗವಾಗಿತ್ತು. ಆಗ, ಪ್ರಧಾನಿ ಇಂದಿರಾ ಗಾಂಧಿಯವರು ಅಂದಿನ ಆಹಾರ ಸಚಿವ ಜಗಜೀವನ್ ರಾಮ್ ಅವರನ್ನು ಆಹಾರ ಸ್ವಾವಲಂಬನೆಯ ಕಾರ್ಯಕ್ರಮವನ್ನು ಚುರುಕುಗೊಳಿಸುವಂತೆ ಕೇಳಿಕೊಂಡರು. ಪರಿಣಾಮವಾಗಿ, ಹಸಿರು ಕ್ರಾಂತಿಯ ಆಗಮನವಾಯ್ತು. ತರುವಾಯ, ಪ್ರತಿಯೊಬ್ಬರಿಗೂ ಸಾಕಾಗುವಷ್ಟು ಆಹಾರ ಒದಗಿಸುವ ಅರ್ಥದಲ್ಲಿ ಸ್ವಾವಲಂಬಿ ಅಲ್ಲದಿದ್ದರೂ, ದೇಶವು, ಕನಿಷ್ಠ ಪಕ್ಷ, ಬೆಳೆ ತೆಗೆಯುವ ಅರ್ಥದಲ್ಲಿ ಸ್ವಾವಲಂಬಿಯಾಗಿದೆ. ಈಗ ದೇಶವು ಆಮದು-ಅವಲಂಬಿತವಾಗಿಲ್ಲ ಮಾತ್ರವಲ್ಲ, ಅದಕ್ಕೆ ವ್ಯತಿರಿಕ್ತವಾಗಿ, ನಮ್ಮ ಜನರು ಪ್ರಪಂಚದಲ್ಲಿಯೇ ಅತಿ ಹೆಚ್ಚಿನ ಮಟ್ಟದ ಹಸಿವೆಯಿಂದ ಬಳಲುತ್ತಿದ್ದರೂ ಸಹ, ಪ್ರತಿ ವರ್ಷವೂ ನಿರಂತರವಾಗಿ ಮತ್ತು ಗಣನೀಯ ಪ್ರಮಾಣದಲ್ಲಿ ಆಹಾರ ಧಾನ್ಯಗಳು ರಫ್ತಾಗುತ್ತಿವೆ.
ದೇಶದಲ್ಲಿ ನಾವು ಕಂಡ ಈ ಪರಿಸ್ಥಿತಿಗೆ ಬದಲಾಗಿ, ಆಫ್ರಿಕಾದಲ್ಲಿ ಮತ್ತೊಂದು ಪರಿಸ್ಥಿತಿ ಕಾಣಸಿಗುತ್ತದೆ. ಆಹಾರ ಧಾನ್ಯಗಳ ದೇಶೀಯ ಉತ್ಪಾದನೆಯನ್ನು ಕೈಬಿಟ್ಟು ರಫ್ತು ಬೆಳೆಗಳತ್ತ ಹೊರಳುವಂತೆ ಸಾಮ್ರಾಜ್ಯಶಾಹಿಯು ಆಫ್ರಿಕಾವನ್ನು ಪುಸಲಾಯಿಸಿತು. ಆದರೆ, ಇತ್ತೀಚಿನ ದಿನಗಳಲ್ಲಿ ಆಫ್ರಿಕಾದಲ್ಲಿ ಮತ್ತೆ ಮತ್ತೆ ಬರಗಾಲದ ಪರಿಸ್ಥಿತಿ ಉಂಟಾಗುತ್ತಿರುವ ವಿದ್ಯಮಾನವು ಎಲ್ಲರಿಗೂ ತಿಳಿದದ್ದೇ.
೧೯೬೬-೬೭ರ ಕಹಿ ಅನುಭವದ ನಂತರ, ರೈತರಿಂದ ಧಾನ್ಯಗಳನ್ನು ಕೊಳ್ಳುವ ಕನಿಷ್ಠ ಬೆಂಬಲ ಬೆಲೆಯ ಘೋಷಣೆ, ಅಂತಹ ಬೆಲೆಗಳ ಮಟ್ಟದಲ್ಲಿ ಧಾನ್ಯಗಳ ಖರೀದಿ, ಧಾನ್ಯಗಳ ಸಂಗ್ರಹಣೆ, ಧಾನ್ಯಗಳ ವಿತರಣಾ ಬೆಲೆ, ಒಂದು ಸಾರ್ವಜನಿಕ ವಿತರಣಾ ವ್ಯವಸ್ಥೆ, ಸಬ್ಸಿಡಿ ದರದಲ್ಲಿ ಧಾನ್ಯಗಳ ಮಾರಾಟ ಇಂತಹ ಒಂದು ವಿಸ್ತೃತ ವ್ಯವಸ್ಥೆಯನ್ನು ಸರ್ಕಾರವು ರೂಪಿಸಿತ್ತು. ಈ ವ್ಯವಸ್ಥೆಯು ರೈತರ ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡಿತ್ತು ಮತ್ತು, ಆಮದುಗಳ ಅಗತ್ಯವಿಲ್ಲದೇ ದೇಶದ ಅಗತ್ಯವನ್ನು ಪೂರೈಸುವಷ್ಟು ಆಹಾರ ಧಾನ್ಯಗಳನ್ನು ಬೆಳೆಯುವಂತೆ ರೈತರಿಗೆ ಪ್ರೋತ್ಸಾಹ ಒದಗಿಸಿತ್ತು. ಈ ವ್ಯವಸ್ಥೆಯು ಮೂಲತಃ ನವಉದಾರೀಕರಣಕ್ಕೆ ವಿರುದ್ಧವಾಗಿದೆ. ಅದ್ದರಿಂದಲೇ ಈ ವ್ಯವಸ್ಥೆಯನ್ನು ಇಂಚು ಇಂಚಾಗಿ ಕತ್ತರಿಸಿ ಹಾಕುವ ಪ್ರಯತ್ನಗಳು ಆರಂಭವಾದವು. ೧೯೯೦ರ ದಶಕದ ಮಧ್ಯಭಾಗದಲ್ಲಿ ಬಡತನ ರೇಖೆಗಿಂತ ಕೆಳಗಿನವರು(ಬಿಪಿಎಲ್) ಮತ್ತು ಬಡತನ ರೇಖೆಗಿಂತ ಮೇಲಿರುವವರು(ಎಪಿಎಲ್) ಎಂಬುದಾಗಿ ಜನರನ್ನು ವಿಭಜಿಸಿ, ಬಡವರಿಗೆ ಮಾತ್ರ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ವಿತರಿಸುವ ಕ್ರಮವನ್ನು ಅನುಸರಿಸಲಾಗಿದೆ. ಈ ಕೊರತೆಗಳ ಹೊರತಾಗಿಯೂ, ಇಂತಹ ಒಂದು ಏರ್ಪಾಟಿನಿಂದಾಗಿಯೇ ದೇಶವು ಆಹಾರಕ್ಕಾಗಿ ಯಾರ ಮುಂದೆಯೂ ಮಂಡಿಯೂರುವ ಪರಿಸ್ಥಿತಿ ಬರಲಿಲ್ಲ.
ಇಂತಹ ಒಂದು ವ್ಯವಸ್ಥೆಯನ್ನು ಕಳಚಿಹಾಕುವಲ್ಲಿ ಸಾಮ್ರಾಜ್ಯಶಾಹಿಯು ಹರಸಾಹಸ ಮಾಡಿದೆ. ಇಂತಹ ಪ್ರಯತ್ನಗಳ ಪೈಕಿ, ವಿಶ್ವ ವ್ಯಾಪಾರ ಸಂಸ್ಥೆಯ ದೋಹಾ ಸುತ್ತಿನ ಮಾತುಕತೆಯಲ್ಲಿ, ಭಾರತವು ತನ್ನ ರೈತರಿಂದ ಆಹಾರ ಧಾನ್ಯಗಳನ್ನು ಪೂರ್ವ ಘೋಷಿತ ಬೆಲೆಗಳಲ್ಲಿ ಖರೀದಿಸುವ ಕ್ರಮವು ಮುಕ್ತ ವ್ಯಾಪಾರದ ತತ್ವಗಳಿಗೆ ವಿರುದ್ಧವಾಗಿರುವುದರಿಂದ ಅದನ್ನು ಸಡಿಲಿಸಬೇಕು ಎಂದು ಒತ್ತಾಸಿದ ಅಮೆರಿಕಾದ ಪ್ರಯತ್ನವು ಎದ್ದುಕಾಣುತ್ತದೆ. ಸಾಮ್ರಾಜ್ಯಶಾಹಿಗಳ ಇಂತಹ ಒತ್ತಡಗಳಿಗೆ ಭಾರತದ ಯಾವ ಸರ್ಕಾರವೂ ಇಷ್ಟೊಂದು ಹೆದರಿದ್ದಿಲ್ಲ. ಭಾರತದ ಬಿಗಿ ನಿಲುವಿನಿಂದಾಗಿಯೇ ದೋಹಾ ಸುತ್ತಿನ ಮಾತು-ಕತೆಗಳು ಸ್ಥಗಿತವಾಗಿದ್ದವು. ಆದರೇನು ಮಾಡುವುದು, ಈ ಬಗ್ಗೆ ಸಾಮ್ರಾಜ್ಯಶಾಹಿಗಳಿಗೆ ಹೆದರುವ ಅಥವಾ ಈ ವಿಷಯದ ಬಗ್ಗೆ ಅಜ್ಞಾನಿಯಾಗಿರುವ ಸರ್ಕಾರವೊಂದನ್ನು ನಾವು ಮೊದಲ ಬಾರಿಗೆ ಕಾಣುತ್ತಿದ್ದೇವೆ. “ಕೃಷಿ ಮಾರುಕಟ್ಟೆಗಳ ಆಧುನೀಕರಣ”, “ಇಪ್ಪತ್ತೊಂದನೇ ಶತಮಾನದ ತಂತ್ರಜ್ಞಾನ” ಮುಂತಾದವುಗಳ ಹೆಸರಿನಲ್ಲಿ, ತಲಾ ಧಾನ್ಯ ಉತ್ಪಾದನೆಯು ಇಳಿಯುತ್ತಿರುವ ಸನ್ನಿವೇಶದಲ್ಲಿ, ಲಭ್ಯವಿರುವ ಕೃಷಿ ಭೂಮಿಯನ್ನು ರಫ್ತು ಬೆಳೆಗಳತ್ತ ತಿರುಗಿಸುವ ಕ್ರಮವು ನಮ್ಮನ್ನು ವಸಾಹತುಶಾಹಿ ಯುಗಕ್ಕೆ ಮರಳಿಸುತ್ತದೆ. ವಾಸ್ತವವಾಗಿ, ಅದು ಸಾಮ್ರಾಜ್ಯಶಾಹಿ ಕಾರ್ಯಸೂಚಿಯನ್ನು ಜಾರಿಗೊಳಿಸುತ್ತದೆ.
ಹೊಸ ಕೃಷಿ ಮಾರುಕಟ್ಟೆ ನೀತಿಯ ತಕ್ಷಣದ ಫಲಾನುಭವಿಗಳೆಂದರೆ, ಅಂಬಾನಿಗಳು ಮತ್ತು ಅದಾನಿಗಳು. ಗುತ್ತಿಗೆ ಕೃಷಿ ವ್ಯವಸ್ಥೆಗೆ ಅವರು ಕಾಲಿಡುತ್ತಿರುವುದು ಆಹಾರ ಧಾನ್ಯಗಳನ್ನು ಬೆಳೆಯಲಿಕ್ಕಲ್ಲ. ಹೂವು, ಹಣ್ಣು, ತರಕಾರಿ ಮುಂತಾದ ಬೆಳೆಗಳಿಗಾಗಿ. ಈ ಬೆಳೆಗಳನ್ನು ಸಂಸ್ಕರಿಸಿ ಅವುಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ, ಬೇರೆ ದೇಶಗಳಿಗೂ ರಫ್ತು ಮಾಡುತ್ತಾರೆ. ಗುತ್ತಿಗೆ ಕೃಷಿಯ ಒಂದು ನೇರ ಪರಿಣಾಮವೆಂದರೆ, ಆಹಾರ ಧಾನ್ಯಗಳ ಬದಲಿಗೆ ಹೆಚ್ಚು ಹಣ ಎಣಿಸುವ ಬೆಳೆಗಳನ್ನು ಬೆಳೆಯುವುದು ಮತ್ತು ಕ್ರಯಸ್ವಾಮ್ಯ ಶೋಷಣೆಗೆ ಒಳಗಾಗುವುದು. ವಸಾಹತುಶಾಹಿ ಕಾಲದ ಬಂಗಾಳ ಪ್ರಾಂತ್ಯದಲ್ಲಿ ಹೀಗೆಯೇ ಆಗಿತ್ತು. ಆಹಾರ ಧಾನ್ಯಗಳ ಬದಲಿಗೆ ಅಫೀಮು ಮತ್ತು ನೀಲಿ(ಇಂಡಿಗೋ) ಮುಂತಾದ ರಫ್ತು ಬೆಳೆಗಳನ್ನು ಗುತ್ತಿಗೆ ಕೃಷಿ ಪದ್ಧತಿಯ ಮೂಲಕ ಬೆಳೆದ ಫಸಲನ್ನು ಕ್ರಯಸ್ವಾಮ್ಯ ಶೋಷಣೆಗೆ ಒಳಪಡಿಸಲಾಗಿತ್ತು. ದೀನಬಂಧು ಮಿತ್ರ ಅವರ ಹತ್ತೊಂಬತ್ತನೆಯ ಶತಮಾನದ ನಾಟಕ ‘ನೀಲ್ ದರ್ಪಣ’ದಲ್ಲಿ ಇಂಡಿಗೋ ವ್ಯಾಪಾರಿಗಳು ರೈತರನ್ನು ಹೇಗೆ ಶೋಷಣೆಗೆ ಒಳಪಡಿಸಿದ್ದರು ಎಂಬುದನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ. ಇಂತಹ ಶೋಷಣೆಯ ಅಪಾಯವು ರೈತರನ್ನು ದಿಗಿಲು ಬೀಳಿಸಿದೆ. ಅವರು ಇಂತಹ ಅಪಾಯದಿಂದ ತಪ್ಪಿಸಿಕೊಳ್ಳಲು ಬಯಸುತ್ತಾರೆ.
ಇದುವರೆಗೆ ರೂಢಿಯಲ್ಲಿದ್ದ ಕೃಷಿ ವ್ಯವಸ್ಥೆಯ ಬಗ್ಗೆ ಎದ್ದು ಕಾಣುವ ಒಂದು ಅಂಶವೆಂದರೆ, ರೈತರ ಹಿತಾಸಕ್ತಿಗಳನ್ನು ಸರ್ಕಾರವು ಎಷ್ಟೇ ಅಸಮರ್ಪಕವಾಗಿ ನೋಡಿಕೊಂಡಿದ್ದರೂ ಸಹ, ಭೂ ಬಳಕೆಯನ್ನು ರಫ್ತು ಬೆಳೆಗಳತ್ತ ದೊಡ್ಡ ಪ್ರಮಾಣದಲ್ಲಿ ವಾಲುವುದನ್ನು ತಡೆದಿದೆ. ಈ ವ್ಯವಸ್ಥೆಯನ್ನು ಕಳಚಿಹಾಕುವುದರಿಂದ ರೈತರ ಹಿತಕ್ಕೆ ಧಕ್ಕೆಯಾಗುವುದು ಮಾತ್ರವಲ್ಲ, ಆಹಾರ ಧಾನ್ಯಗಳ ಬದಲಿಗೆ ಲಭ್ಯ ಭೂ ಪ್ರದೇಶವು ರಫ್ತು ಬೆಳೆಗಳಿಗೆ ಬಳಕೆಯಾಗುವುದರಿಂದ ದೇಶದ ಆಹಾರ ಭದ್ರತೆಯು ದುರ್ಬಲಗೊಳ್ಳುತ್ತದೆ.
ವಿಷಯ ನಿಜಕ್ಕೂ ಸರಳವಾಗಿದೆ. ಭೂಮಿಯು ಒಂದು ವಿರಳ ಸಂಪನ್ಮೂಲವಾಗಿರುವ ಕಾರಣದಿಂದಾಗಿ, ಭೂ ಬಳಕೆಯನ್ನು ಸಾಮಾಜಿಕ ನಿಯಂತ್ರಣಕ್ಕೆ ಒಳಪಡಿಸಬೇಕು. ಖಾಸಗಿ ಲಾಭದ ನೆಲೆಯಲ್ಲಿ ಅದನ್ನು ಪರಿಗಣಿಸಲಾಗದು. ಭೂ ಬಳಕೆಯನ್ನು ಸಾಮಾಜಿಕ ನಿಯಂತ್ರಣಕ್ಕೆ ಒಳಪಡಿಸಿದ್ದರೂ ಸಹ, ಭೂಮಿಯು ರೈತರ ಕೈಯಲ್ಲಿರುವ ಕಾರಣದಿಂದಾಗಿ, ಅವರ ಹಿತಾಸಕ್ತಿಯನ್ನು ಕಾಪಾಡಬೇಕಾಗುತ್ತದೆ. ಆದ್ದರಿಂದ, ಅವರಿಗೆ ಲಾಭದಾಯಕ ಬೆಲೆ ಸಿಗಬೇಕು. ಅದನ್ನು ಈಗಿರುವ ಏರ್ಪಾಟು ಸಾಧಿಸಲು ಪ್ರಯತ್ನಿಸಿದೆ. ಈ ಪ್ರಯತ್ನವನ್ನು ಈಗಿನ ಸರ್ಕಾರವು ನಾಶಪಡಿಸಲು ಬಯಸುತ್ತದೆ. ಈಗಿರುವ ಏರ್ಪಾಟುಗಳಲ್ಲಿ ಏನೇ ಲೋಪ ದೋಷಗಳಿದ್ದರೂ ಅವುಗಳನ್ನು ಈ ಏರ್ಪಾಟಿನ ಪರಿಮಿತಿಯೊಳಗೇ ಸರಿಪಡಿಸಿಕೊಳ್ಳಬೇಕು. ಭೂ ಬಳಕೆಯನ್ನು ಸಾಮಾಜಿಕ ನಿಯಂತ್ರಣಕ್ಕೆ ಒಳಪಡಿಸಬೇಕು ಎಂಬುದರ ಅರಿವಿಲ್ಲದ ಮತ್ತು ಮೂರ್ಖತನದೊಂದಿಗೆ ನಂಟು ಬೆಳಸಿರುವ ಬಿಜೆಪಿ ಸರ್ಕಾರವು ಇಂತಹ ಒಂದು ಏರ್ಪಾಟನ್ನು ನಾಶಮಾಡಲು ಹೊರಟಿದೆ. ಸಾಮ್ರಾಜ್ಯಶಾಹಿಯು ಇಂತಹ ವಿನಾಶವನ್ನು ಬಯಸುತ್ತದೆ. ಬಿಜೆಪಿ ಸರ್ಕಾರವು ಅದನ್ನು ನಿರಾಯಾಸವಾಗಿ ಮಾಡುತ್ತಿದೆ.
ಭೂಮಿಯು ಒಂದು ವಿರಳ ಸಂಪನ್ಮೂಲವಾಗಿರುವ ಕಾರಣದಿಂದಾಗಿ, ಭೂ ಬಳಕೆಯ ಮೇಲೆ ಸಾಮಾಜಿಕ ನಿಯಂತ್ರಣವನ್ನು ಹೊಂದಬೇಕಾದ ಅಗತ್ಯದ ಬಗ್ಗೆ, ಇಡೀ ಸಮಾಜವಾದಿಯೇತರ ತೃತೀಯ ಜಗತ್ತಿನಲ್ಲಿ, ತೀವ್ರ ಕಾಳಜಿ ಮತ್ತು ಅರಿವು ಹೊಂದಿರುವ ಏಕೈಕ ಪ್ರದೇಶವೆಂದರೆ ಕೇರಳ. ಆ ರಾಜ್ಯವು ಭತ್ತ ಬೆಳೆಯುವ ಭೂಮಿಯಲ್ಲಿ ಬೇರೆ ಪೈರು ಬೆಳೆಯುವಂತಿಲ್ಲ ಎಂಬುದನ್ನು ಶಾಸನಬದ್ಧಗೊಳಿಸಿ ತನ್ನ ಛಲವನ್ನು ತೋರಿಸಿದೆ. ಬಿಜೆಪಿ ಸರಕಾರದ ಕೃಷಿ ಮಸೂದೆಗಳು ಅದಕ್ಕೆ ತದ್ವಿರುದ್ಧವಾಗಿವೆ.
ಅನು: ಕೆ.ಎಂ.ನಾಗರಾಜ್