ಸೆಪ್ಟೆಂಬರ್ 6-7 ರಂದು ಇಂಡೋನೇಷ್ಯಾಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ

ನವದೆಹಲಿ: ಆಸಿಯಾನ್‌ನ ಪ್ರಸ್ತುತ ಅಧ್ಯಕ್ಷರಾಗಿ ಇಂಡೋನೇಷ್ಯಾ ಆಯೋಜಿಸುತ್ತಿರುವ 20 ನೇ ಆಸಿಯಾನ್-ಭಾರತ ಶೃಂಗಸಭೆ ಮತ್ತು 18 ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 6 ಮತ್ತು 7 ರ ನಡುವೆ ಎರಡು ದಿನಗಳ ಭೇಟಿಗಾಗಿ ಇಂಡೋನೇಷ್ಯಾದ ಜಕಾರ್ತಾಕ್ಕೆ ಭೇಟಿ ನೀಡಲಿದ್ದಾರೆ.

ಅಧ್ಯಕ್ಷ ಜೊಕೊ ವಿಡೋಡೊ ಅವರ ಆಹ್ವಾನದ ಮೇರೆಗೆ ಮೋದಿ ಇಂಡೋನೇಷ್ಯಾಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. ಮುಂಬರುವ ಆಸಿಯಾನ್-ಭಾರತ ಶೃಂಗಸಭೆಯು ಭಾರತ-ಆಸಿಯಾನ್ ಸಂಬಂಧಗಳನ್ನು 2022 ರಲ್ಲಿ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವಕ್ಕೆ ಏರಿಸಿದ ನಂತರ ನಡೆಯುತ್ತಿರುವ ಮೊದಲ ಶೃಂಗಸಭೆಯಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಇಂಡಿಯಾ 3ನೇ ಸಭೆ | ಒಟ್ಟಿಗೆ ಸ್ಪರ್ಧಿಸುವ ನಿರ್ಣಯ ಅಂಗೀಕರಿಸಿದ ಒಕ್ಕೂಟ

ಶೃಂಗಸಭೆಯು ಭಾರತ-ಆಸಿಯಾನ್ ಸಂಬಂಧಗಳ ಪ್ರಗತಿಯನ್ನು ಪರಿಶೀಲಿಸುತ್ತದೆ ಮತ್ತು ಸಹಕಾರದ ಭವಿಷ್ಯದ ದಿಕ್ಕನ್ನು ಪಟ್ಟಿ ಮಾಡುತ್ತದೆ. ಪೂರ್ವ ಏಷ್ಯಾ ಶೃಂಗಸಭೆಯು ಆಸಿಯಾನ್ ದೇಶಗಳ ನಾಯಕರು ಮತ್ತು ಭಾರತ ಸೇರಿದಂತೆ ಎಂಟು ಪಾಲುದಾರರಿಗೆ ಪ್ರಾದೇಶಿಕ ಮತ್ತು ಜಾಗತಿಕ ಮಹತ್ವದ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ.

ಆಸಿಯಾನ್ ಎಂಬುವುದು ‘ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ’ (ASEAN) ವಾಗಿದ್ದು, ತನ್ನ ಹತ್ತು ಸದಸ್ಯರ ನಡುವೆ ಆರ್ಥಿಕ ಮತ್ತು ಭದ್ರತಾ ಸಹಕಾರವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಪ್ರಾದೇಶಿಕ ಗುಂಪಾಗಿದೆ. ಈ ದೇಶಗಳಲ್ಲಿ ಬ್ರೂನಿ, ಕಾಂಬೋಡಿಯಾ, ಇಂಡೋನೇಷಿಯಾ, ಲಾವೋಸ್, ಮಲೇಷ್ಯಾ, ಮ್ಯಾನ್ಮಾರ್, ಫಿಲಿಪೈನ್ಸ್, ಸಿಂಗಾಪುರ್, ಥೈಲ್ಯಾಂಡ್ ಮತ್ತು ವಿಯೆಟ್ನಾಂ ಸೇರಿದೆ.

ವಿಡಿಯೊ ನೋಡಿ: ಮುಂದಿನ ಕೆಲವು ವರ್ಷಗಳಲ್ಲಿ ಭಾರತ ಐದನೇ ಆರ್ಥಿಕ ದೇಶವಾಗುತ್ತದೆಯೇ? Janashakthi Media

Donate Janashakthi Media

Leave a Reply

Your email address will not be published. Required fields are marked *