ಬೆಂಗಳೂರು: ಚಂದ್ರಯಾನ-3 ಯಶಸ್ವಿಯಾದ ಬೆನ್ನಲ್ಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಸ್ರೊ ಕಚೇರಿಗೆ ಭೇಟಿ ನೀಡುತ್ತಿದ್ದು,ಅವರ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಹಲವು ರಸ್ತೆಗಳಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ.
ಶನಿವಾರ ಬೆಳಿಗ್ಗೆ (ಆಗಸ್ಟ್ 26) ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಬರಲಿದ್ದಾರೆ.ಬೆಳಿಗ್ಗೆ 4:30 ಗಂಟೆಯಿಂದ ಬೆಳಿಗ್ಗೆ 9:30 ಗಂಟೆಯವರೆಗೆ ಹಲವು ರಸ್ತೆಗಳಲ್ಲಿ ಸಾರ್ವಜನಿಕರ ವಾಹನ ಸಂಚಾರ ನಿರ್ಬಂಧಿಸಿಲಾಗಿದ್ದು, ಮಾರ್ಗ ಬದಲಾವಣೆ ಮಾಡಲಾಗಿದೆ. ಸಾರ್ವಜನಿಕರು ಪರ್ಯಾಯ ರಸ್ತೆಗಳನ್ನು ಬಳಸಬೇಕು ಎಂದು ಸಂಚಾರ ಪೊಲೀಸರು ಕೋರಿದ್ದಾರೆ. ನಾಳೆ ಬೆಳಿಗ್ಗೆ 4:30 ಗಂಟೆಯಿಂದ ಬೆಳಿಗ್ಗೆ 9:30 ಗಂಟೆಯ ಈ ಸಮಯದಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣ ನಿರ್ಭಂದಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಚಂದ್ರಯಾನ-3 ಲ್ಯಾಂಡರ್‌ನಿಂದ ರೋವರ್ ಹೊರಬಂದ ದೃಶ್ಯ ಹಂಚಿಕೊಂಡ ಇಸ್ರೊ
ಈ ಕೆಳಗಿನ ರಸ್ತೆಗಳಲ್ಲಿ ಸಂಚಾರ ನಿರ್ಬಂಧ
ಓಲ್ಡ್ ಏರ್ಪೋರ್ಟ್ ರಸ್ತೆ, ಓಲ್ಡ್ ಮದ್ರಾಸ್ ರಸ್ತೆ, ಎಂ.ಜಿ.ರಸ್ತೆ,ಕಬ್ಬನ್ ರಸ್ತೆ, ರಾಜಭವನ ರಸ್ತೆ, ಬಳ್ಳಾರಿ ರಸ್ತೆ (ಮೇಖ್ರಿ ಸರ್ಕಲ್) ಬಳಸದಿರುವಂತೆ ಪೊಲೀಸರು ತಿಳಿಸಿದ್ದಾರೆ. ಸಿವಿ ರಾಮನ್ ರಸ್ತೆ, ಯಶವಂತಪುರ ಫ್ಲೈ ಓವರ್,ತುಮಕೂರು ರಸ್ತೆ (ಯಶವಂತಪುರದಿಂದ ನಾಗಸಂದ್ರದವರೆಗೆ), ಮಾಗಡಿ ರಸ್ತೆ, ಹೊರವರ್ತುಲ ರಸ್ತೆ (ಗೊರಗುಂಟೆ ಪಾಳ್ಯ ಜಂಕ್ಷನ್ನಿಂದ ಸುಮನಹಳ್ಳಿ)ಗುಬ್ಬಿ ತೋಟದಪ್ಪ ರಸ್ತೆ, ಜಾಲಹಳ್ಳಿ ಕ್ರಾಸ್ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದೆ.