ಮೋದಿ ಸರ್ಕಾರ ಎಲ್ಲಾ ಪ್ರಜಾಸತ್ತಾತ್ಮಕ ಮಾನದಂಡಗಳನ್ನು ಕಸದ ಬುಟ್ಟಿ ಎಸೆಯುತ್ತಿದೆ: ಸಂಸದರ ಅಮಾನತು ಕುರಿತು ಖರ್ಗೆ

ನವದೆಹಲಿ: ನರೇಂದ್ರ ಮೋದಿ ಸರ್ಕಾರ ಸಂಸತ್ತು ಮತ್ತು ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸುತ್ತಿದ್ದು, 47 ಸಂಸದರನ್ನು ಅಮಾನತು ಮಾಡುವ ಮೂಲಕ ‘ನಿರಂಕುಶ ಸರ್ಕಾರ’ ಎಲ್ಲಾ ಪ್ರಜಾಪ್ರಭುತ್ವದ ನಿಯಮಗಳನ್ನು ಕಸದ ಬುಟ್ಟಿಗೆ ಎಸೆಯುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಡಳಿತಾರೂಢ ಬಿಜೆಪಿ ಆಡಳಿತವನ್ನು ಸೋಮವಾರ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಂಸತ್‌ ಭದ್ರತಾ ಲೋಪ ವಿಚಾರವಾಗಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ಹೇಳಿಕೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ ವಿಪಕ್ಷಗಳ 33 ಸಂಸದರನ್ನು ಸೋಮವಾರ ಸ್ಪೀಕರ್ ಓಂ ಬಿರ್ಲಾ ಅವರು ಅಮಾನತುಗೊಳಿಸಿದ್ದಾರೆ. ಇದರ ನಂತರ ಸರ್ಕಾರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಅವರು  ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂಓದಿ: ಯುಜಿಸಿ ಅನುಮೋದನೆ ಇಲ್ಲದ ಯಾವುದೇ ವಿದೇಶಿ ಸಂಸ್ಥೆಗಳ ಪದವಿ ಭಾರತದಲ್ಲಿ ಮಾನ್ಯತೆಯಿಲ್ಲ: ಸರ್ಕಾರ

ಇದೇ ವಿಚಾರವಾಗಿ ಡಿಸೆಂಬರ್ 14ರಂದು ಪ್ರತಿಭಟನೆ ನಡೆಸಿದ್ದ 13 ಲೊಕಸಭೆ ಮತ್ತು ಒಬ್ಬ ರಾಜ್ಯ ಸಭಾ ಸಂಸದನನ್ನು ಸ್ಪೀಕರ್ ಅಮಾನತು ಮಾಡಿದ್ದರು. ಇದೀಗ ಎರಡನೇ ಸುತ್ತಿನಲ್ಲಿ ಒಟ್ಟು 33 ಸಂಸದರನ್ನು ಅಮಾನತು ಮಾಡಲಾಗಿದೆ. ಅಮಾನತುಗೊಂಡಿರುವವರಲ್ಲಿ ಡಿಎಂಕೆಯ 9, ಕಾಂಗ್ರೆಸ್‌ನ 11, ತೃಣಮೂಲ ಕಾಂಗ್ರೆಸ್‌ನ 9, ಆರ್‌ಎಸ್‌ಪಿಯ 1ಮತ್ತು ಮುಸ್ಲಿಂ ಲೀಗ್‌ನ ಇಬ್ಬರು ಸಂಸದರಿದ್ದಾರೆ.

“ಮೊದಲು ಅತಿಕ್ರಮಣಕಾರರು ಸಂಸತ್ತಿನ ಮೇಲೆ ದಾಳಿ ಮಾಡಿದರು. ನಂತರ ಮೋದಿ ಸರ್ಕಾರ ಸಂಸತ್ತಿನ ಮೇಲೆ ದಾಳಿ ನಡೆಸಿತು ಮತ್ತು ಪ್ರಜಾಪ್ರಭುತ್ವದ ಮೇಲೆಯು ದಾಳಿ ನಡೆಸಿತು. 47 ಸಂಸದರನ್ನು ಅಮಾನತುಗೊಳಿಸುವ ಮೂಲಕ ಎಲ್ಲಾ ಪ್ರಜಾಪ್ರಭುತ್ವದ ನಿಯಮಗಳನ್ನು ನಿರಂಕುಶಾಧಿಕಾರದ ಮೋದಿ ಸರ್ಕಾರವು ಕಸದ ಬುಟ್ಟಿಗೆ ಎಸೆಯುತ್ತಿದೆ” ಎಂದು ಟ್ವಿಟರ್‌ನಲ್ಲಿ ಖರ್ಗೆ ಹೇಳಿದ್ದಾರೆ.

“ನಮಗೆ ಎರಡು ಸರಳ ಮತ್ತು ನಿಜವಾದ ಬೇಡಿಕೆಗಳಿವೆ. ಸಂಸತ್ತಿನ ಭದ್ರತೆಯಲ್ಲಿ ಅಕ್ಷಮ್ಯ ಉಲ್ಲಂಘನೆಯ ಬಗ್ಗೆ ಕೇಂದ್ರ ಗೃಹ ಸಚಿವರು ಸಂಸತ್ತಿನ ಉಭಯ ಸದನಗಳಲ್ಲಿ ಹೇಳಿಕೆ ನೀಡಬೇಕು ಮತ್ತು ಅದರ ಬಗ್ಗೆ ವಿವರವಾದ ಚರ್ಚೆ ನಡೆಸಬೇಕು” ಎಂದು ಅವರು ಹೇಳಿದ್ದಾರೆ.

ಇದನ್ನೂಓದಿ: ಸಂಸತ್ತಿನ ಭದ್ರತಾ ಉಲ್ಲಂಘನೆಯ ವಿರುದ್ಧ ಪ್ರತಿಭಟನೆ | 33 ಲೋಕಸಭಾ ಸಂಸದರು ಅಮಾನತು

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಪ್ರಧಾನಿ ಪತ್ರಿಕೆಗೆ ಸಂದರ್ಶನ ನೀಡುತ್ತಾರೆ; ಗೃಹ ಸಚಿವರು ಟಿವಿ ಚಾನೆಲ್‌ಗಳಿಗೆ ಸಂದರ್ಶನ ನೀಡುತ್ತಾರೆ. ಆದರೆ, ಭಾರತದ ಜನರನ್ನು ಪ್ರತಿನಿಧಿಸುವ ಸಂಸತ್ತಿನ ವಿಚಾರದಲ್ಲಿ ಅವರು ಶೂನ್ಯ ಹೊಣೆಗಾರಿಕೆ ಹೊಂದಿದ್ದಾರೆ. ಪ್ರತಿಪಕ್ಷಗಳಿಲ್ಲದ ಸಂಸತ್ತಿನೊಂದಿಗೆ, ಮೋದಿ ಸರ್ಕಾರವು ಯಾವುದೇ ಚರ್ಚೆಯಿಲ್ಲದೆ ಬಾಕಿ ಉಳಿದಿರುವ ಪ್ರಮುಖ ಶಾಸನಗಳನ್ನು ಬುಲ್ಡೋಜ್ ಮಾಡಬಹುದು, ಯಾವುದೇ ಭಿನ್ನಾಭಿಪ್ರಾಯವನ್ನು ಹತ್ತಿಕ್ಕಬಹುದು” ಎಂದು ಖರ್ಗೆ ಹೇಳಿದ್ದಾರೆ.

ಡಿಸೆಂಬರ್ 13 ರಂದು ಲೋಕಸಭೆಯ ಸಭಾಂಗಣದ ವಿಸಿಟರ್ಸ್ ಗ್ಯಾಲರಿಯಿಂದ ಇಬ್ಬರು ವ್ಯಕ್ತಿಗಳು ಜಿಗಿದ ಘಟನೆಯ ಭದ್ರತಾ ಲೋಪ ಘಟನೆಯ ಬಗ್ಗೆ ಸಂಸತ್ತಿನ ಉಭಯ ಸದನಗಳಲ್ಲಿ ಗೃಹ ಸಚಿವರು ಹೇಳಿಕೆ ನೀಡಬೇಕೆಂದು ವಿರೋಧ ಪಕ್ಷದ ಸಂಸದರು ಒತ್ತಾಯಿಸುತ್ತಿದ್ದಾರೆ. ಸಂಸತ್ ಭದ್ರತಾ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಇದುವರೆಗೆ ಆರು ಮಂದಿಯನ್ನು ಬಂಧಿಸಿದ್ದಾರೆ.

ವಿಡಿಯೊ ನೋಡಿ: ಹೆಂಚು ಕಾರ್ಮಿಕರ ಬದುಕು ಬೇಯುತ್ತಿದೆ: ಇವರ ಬಾಳಿಗೆ ಬೆಳಕು ಯಾವಾಗ? Janashakthi Media

Donate Janashakthi Media

Leave a Reply

Your email address will not be published. Required fields are marked *