ಮೋದಿ-ಶಾ, ಯೋಗಿ, ಭಾಗವತ್ ಮತ್ತು ಕಾರ್ಪೊರೆಟ್ ಗಳು

– ವಸಂತರಾಜ ಎನ್.ಕೆ

18ನೇ ಲೋಕಸಭಾ ಚುನಾವಣೆಗಳ ಫಲಿತಾಂಶಗಳು ಮೋದಿ, ಬಿಜೆಪಿ, ಆರೆಸ್ಸೆಸ್ ಗಳಿಗೆ ನೈತಿಕ ಮತ್ತು ರಾಜಕೀಯ ಸೋಲು ಮಾತ್ರವಲ್ಲ, ತನ್ನ ಜನವಿರೋಧಿ ನೀತಿಗಳನ್ನು ಬದಲಿಸುವಂತೆ ಎಚ್ಚರಿಕೆ ಕೂಡಾ. ಆದರೆ ಬಿಜೆಪಿ ಮತ್ತು ಅದರ ಮೋದಿ-ಶಾ ನಾಯಕತ್ವ ತಮ್ಮ ರಾಜಕೀಯ ನೈತಿಕ ಸೋಲಿನಿಂದ ಪಾಠ ಕಲಿಯುವುದು ಒತ್ತಟ್ಟಿಗಿರಲಿ, ಇಂತಹ ಒಂದು ಫಲಿತಾಂಶ ಬಂದಿದೆ ಎಂಬ ವಾಸ್ತವವನ್ನೇ ನಿರಾಕರಿಸಿವೆ. “ವಿಶೇಷ ಏನೂ ಆಗಿಲ್ಲ” “ಪರಿಸ್ಥಿತಿ ಮಾಮೂಲಾಗಿದೆ” (ಬಿಸಿನೆಸ್ ಏಸ್ ಯೂಶೂವಲ್) ಎಂಬಂತೆ ನಟಿಸುತ್ತಿದ್ದಾರೆ. ಆದರೆ ಚುನಾವಣಾ ಫಲಿತಾಂಶಗಳ ಪರಿಣಾಮವಾಗಿ ಬಿಜೆಪಿ ಪಕ್ಷದೊಳಗೆ ಮತ್ತು ಬಿಜೆಪಿ-ಆರೆಸ್ಸೆಸ್ ನಡುವೆ ಸಂಬಂಧಗಳು ಹದಗೆಟ್ಟಿದ್ದನ್ನು ನಿರಾಕರಿಸುವುದು ಮತ್ತು “ಏನೂ ಆಗೇ ಇಲ್ಲ” ಅಥವಾ “ಪರಿಸ್ಥಿತಿ ಮಾಮೂಲಾಗಿದೆ” ಅಂತ ನಟಿಸುವುದು ಸಾಧ್ಯವಾಗಿಲ್ಲ. ಇದರ ಭಾಗವಾಗಿ ಉತ್ತರ ಪ್ರದೇಶದಲ್ಲಿ ಯೋಗಿ-ಶಾ ತಿಕ್ಕಾಟ ಅನುದಿನವೂ ಬಹಿರಂಗವಾಗಿ ನಡೆಯುತ್ತಿದೆ. ಹಲವು ರಾಜ್ಯಗಳಲ್ಲಿ ತಿಕ್ಕಾಟ ಈ ಹಾದಿಯಲ್ಲಿದೆ. ಈ ಕುರಿತ ವಿಶ್ಲೇಷಣೆ ಇಲ್ಲಿದೆ.

ಬಿಜೆಪಿ ಗೆ ಬಹುಮತ ನೀಡದ 18ನೇ ಲೋಕಸಭಾ ಚುನಾವಣೆಗಳ ಫಲಿತಾಂಶಗಳು, ಅದಕ್ಕೆ ಜನಾದೇಶದ ನಿರಾಕರಣೆ ಮತ್ತು ಅದರ ಆರ್ಥಿಕ-ರಾಜಕೀಯ ನೀತಿಗಳ ತಿರಸ್ಕಾರವೆಂಬುದರ ಬಗ್ಗೆ ಯಾವುದೇ ಸಂದೇಹವಿಲ್ಲ. ಹಿಂದಿನ ಸರಕಾರ, ಪ್ರಣಾಳಿಕೆ, “ಸರಕಾರದ ಸಾಧನೆಗಳ” ಬಗ್ಗೆ ಚುನಾವಣಾ ಪ್ರಚಾರ ಎಲ್ಲವೂ ಮೋದಿ ಹೆಸರಲ್ಲಿದ್ದು, ಎನ್.ಡಿ.ಎ ಹೆಸರಲ್ಲಿ ಏನೂ ಇಲ್ಲದಿರುವಾಗ ಅದಕ್ಕೆ ಬಹುಮತ ಬಂದಿದ್ದರೂ, ಎನ್.ಡಿ.ಎ ಗೂ ಜನಾದೇಶವಿದೆ ಎಂದು ಹೇಳುವಂತಿಲ್ಲ. ಈ ಫಲಿತಾಂಶ ಮೋದಿ, ಬಿಜೆಪಿ, ಆರೆಸ್ಸೆಸ್ ಗಳಿಗೆ ನೈತಿಕ ಮತ್ತು ರಾಜಕೀಯ ಸೋಲು ಮಾತ್ರವಲ್ಲ, ತನ್ನ ಜನವಿರೋಧಿ ನೀತಿಗಳನ್ನು ಬದಲಿಸುವಂತೆ ಎಚ್ಚರಿಕೆ ಎಂದು ಸಹ ಖಂಡಿತ ಹೇಳಬಹುದು.

‘ಪರಿಸ್ಥಿತಿ ಮಾಮೂಲಾಗಿದೆ’ (ಬಿಸಿನೆಸ್ ಏಸ್ ಯೂಶೂವಲ್) ಎಂಬ ನಟನೆ

ಆದರೆ ಬಿಜೆಪಿ ಮತ್ತು ಅದರ ಮೋದಿ-ಶಾ ನಾಯಕತ್ವ ತಮ್ಮ ರಾಜಕೀಯ ನೈತಿಕ ಸೋಲಿನಿಂದ ಪಾಠ ಕಲಿಯುವುದು ಒತ್ತಟ್ಟಿಗಿರಲಿ, ಇಂತಹ ಒಂದು ಫಲಿತಾಂಶ ಬಂದಿದೆ ಎಂಬ ವಾಸ್ತವವನ್ನೇ ನಿರಾಕರಿಸಿವೆ. ಹೊಸ ಎನ್.ಡಿ.ಎ ಸರಕಾರವನ್ನು ಮೋದಿ 3.0 ಸರಕಾರವೆಂದು ಕರೆಯಲಾಗುತ್ತಿದೆ. ಅಮಿತ್ ಶಾ, ನಿರ್ಮಲಾ ಸೀತಾರಾಮನ್ ರಿಂದ ಹಿಡಿದು ತಮ್ಮ ಪರಿಣತಿಯ ಅಭಾವ, ವೈಫಲ್ಯಗಳಿಂದ ಕುಖ್ಯಾತರಾದ ಹೆಚ್ಚುಕಡಿಮೆ ಎಲ್ಲ ಸಚಿವರಿಗೆ ಅದೇ ಸಚಿವಾಲಯಗಳನ್ನು ಕೊಡಲಾಯಿತು. ಚುನಾವಣೆಯಲ್ಲಿ ಸೋತ ಅಥವಾ ಟಿಕೆಟ್ ಕೊಡದ/ಸ್ಪರ್ಧಿಸದ ಸಚಿವರು ಮತ್ತು ಅನುರಾಗ್ ಥಾಕುರ್, ನಾರಾಯಣ ರಾಣೆ ಮಾತ್ರ ಇದಕ್ಕೆ ಅಪವಾದವಾಗಿದ್ದರು. ಹಿಂದಿನಂತೆ ಜೆ.ಡಿ.ಯು ತೆಲುಗು ದೇಶಂ ನಂತಹ ಎನ್.ಡಿ.ಎ ಕೂಟದ ಪಕ್ಷಗಳಿಗೂ ಯಾವುದೇ ಪ್ರಮುಖ ಸಚಿವ ಖಾತೆ ಕೊಡಲಿಲ್ಲ. 150ಕ್ಕೂ ಹೆಚ್ಚು ಸಂಸದರನ್ನು ನಿಯಮಬಾಹಿರವಾಗಿ ಅಮಾನತು ಮಾಡಿದ ಭಾರತದ ಚರಿತ್ರೆಯಲ್ಲೇ ಅತ್ಯಂತ ಕುಖ್ಯಾತ ಸ್ಪೀಕರ್ ನ್ನು ಸಹ ಬದಲಿಸಲಿಲ್ಲ ಮತ್ತು ಉಪ ಸ್ಪೀಕರ್ ಹುದ್ದೆಯನ್ನೂ ಖಾಲಿ ಇಡಲಾಗಿದೆ.

 

ಪ್ರಧಾನಿ, ಸಚಿವರು, ಪಕ್ಷದ ನಾಯಕರು ವಿರೋಧ ಪಕ್ಷಗಳ ಮೇಲೆ ದಾಳಿ ಮಾಡುವ ‘ಅ-ಸಂಸದೀಯ’ ಹೇಳಿಕೆಗಳನ್ನು ಸಂಸತ್ತಿನ ಒಳಗೂ, ಹೊರಗೂ ಮುಂದುವರೆಸಿದ್ದಾರೆ. ವಿರೋಧ ಪಕ್ಷಗಳ ನಾಯಕರ ವಿರುದ್ಧ ಇಡಿ-ಸಿಬಿಐ ಛೂ ಬಿಡುವ ಜೈಲಿಗಟ್ಟುವ ಸತತ ಹುನ್ನಾರವನ್ನು ಸುಪ್ರೀಂ ಕೋರ್ಟಿನ ಕಡಿವಾಣದ ನಡುವೆಯೂ ಮುಂದುವರೆಸಿದ್ದಾರೆ. ಮುಂದುವರೆಯುತ್ತಿರುವ ಮಣಿಪುರದಲ್ಲಿನ ಹಿಂಸಾಚಾರ. ಬೆಲೆಏರಿಕೆ, ನಿರುದ್ಯೋಗವಲ್ಲದೆ ಹೊಸ ಸರಕಾರದ ಹೊಸ ಮಹಾ ಪ್ರಮಾದಗಳು, ಸರಣಿ ವೈಫಲ್ಯಗಳನ್ನೂ ಒಪ್ಪಿಕೊಳ್ಳಲೂ, ಅದಕ್ಕೆ ಜವಾಬ್ದಾರಿ ಹಾಗು ಅದರ ಪರಿಹಾರಕ್ಕೆ ಕ್ರಮಗಳನ್ನು ತೆಗೆದುಕೊಳ್ಳಲೂ ತಯಾರಿಲ್ಲ. ಅವು ಪ್ರಮಾದಗಳು, ವೈಫಲ್ಯಗಳು ಅಲ್ಲವೇ ಅಲ್ಲ ಎಂಬ ಎಂದಿನ ಮೊಂಡುವಾದ ಮುಂದುವರೆಸಿವೆ. ನೀಟ್ ಹಗರಣ ಮತ್ತು ಇತರ ಎನ್.ಟಿ.ಎ ಪ್ರಮಾದಗಳು, ಹಲವು ಬಿಜೆಪಿ ರಾಜ್ಯಗಳಲ್ಲೂ ಪ್ರಶ್ನೆಪತ್ರ ಲೀಕ್ ಗಳು, ಎಕ್ಸಿಟ್ ಪೋಲ್ ಸಂಬಂಧಿತ ಶೇರು ಮಾರುಕಟ್ಟೆ ಹಗರಣ, ಭೀಕರ ಸರಣಿ ರೈಲು ಅಫಘಾತಗಳು, ಕಾಶ್ಮೀರ ಕಣಿವೆಯಿಂದ ಜಮ್ಮು ಗೂ ಹಬ್ಬಿದ ಭಯೋತ್ಪಾಧಕ ಚಟುವಟಿಕೆಗಳು, ಡಬ್ಬಲ್ ಇಂಜಿನ್ ಸರಕಾರದ ಬಿಹಾರದಲ್ಲಿ ಸರಣಿ ಸೇತುವೆ ಕುಸಿತಗಳು, ಹುತಾತ್ಮ ಅಗ್ನಿವೀರರ ಕುಟುಂಬಗಳಿಗೆ ಪರಿಹಾರದ ಅಭಾವ – ಹೀಗೆ ಹೊಸ ಸರಕಾರಕ್ಕೆ ತಿಂಗಳು ತುಂಬುವ ಮೊದಲೇ ಹೊಸ ಪ್ರಮಾದಗಳು, ವೈಫಲ್ಯಗಳು ಸಾಲುಗಟ್ಟಿ ಎರಗಿವೆ.

ಒಟ್ಟಿಗೆ ಮೋದಿ-ಶಾ ಮತ್ತು ಬಿಜೆಪಿ, “ವಿಶೇಷ ಏನೂ ಆಗಿಲ್ಲ” “ಪರಿಸ್ಥಿತಿ ಮಾಮೂಲಾಗಿದೆ” (ಬಿಸಿನೆಸ್ ಏಸ್ ಯೂಶೂವಲ್) ಎಂಬಂತೆ ನಟಿಸುತ್ತಿದ್ದಾರೆ. ಗೋದಿ ಮಾಧ್ಯಮಗಳಲ್ಲಿ ಹೆಚ್ಚಿನವು ಇದಕ್ಕೆ ತಾಳ ಹಾಕುತ್ತಿವೆ. ‘ಎಕ್ಸಿಟ್ ಪೋಲ್’ ಸುಳ್ಳು ಬಟ್ಟಾ ಬಯಲಾಗಿ ತಾವೇ ಬೆತ್ತಲೆಯಾದರೂ, ತಮಗೂ, ಮೋದಿ-ಶಾ ನಾಯಕತ್ವಕ್ಕೂ, ಅವರ ಸರಕಾರಕ್ಕೂ ಏನೂ ಆಗಿಲ್ಲ, “ಪರಿಸ್ಥಿತಿ ಮಾಮೂಲಾಗಿದೆ” ಎಂಬಂತೆ ಅವೂ ನಟಿಸುತ್ತಿವೆ.

ಇದನ್ನು ಓದಿ : ಬಾಂಗ್ಲಾದೇಶ : ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ಪ್ರತಿಭಟನೆ; 105 ಮಂದಿ ಸಾವು

ಬಿಜೆಪಿ ಯೊಳಗೂ ಬಿಜೆಪಿ-ಆರೆಸ್ಸೆಸ್ ಸಂಬಂಧದಲ್ಲೂ ಟೆಂಶನ್

ಆದರೆ ಚುನಾವಣಾ ಫಲಿತಾಂಶಗಳ ಪರಿಣಾಮವಾಗಿ ಬಿಜೆಪಿ ಪಕ್ಷದೊಳಗೆ ಮತ್ತು ಬಿಜೆಪಿ-ಆರೆಸ್ಸೆಸ್ ನಡುವೆ ಸಂಬಂಧಗಳು ಹದಗೆಟ್ಟಿದ್ದನ್ನು ನಿರಾಕರಿಸುವುದು ಮತ್ತು “ಏನೂ ಆಗೇ ಇಲ್ಲ” ಅಥವಾ “ಪರಿಸ್ಥಿತಿ ಮಾಮೂಲಾಗಿದೆ” ಅಂತ ನಟಿಸುವುದು ಸಾಧ್ಯವಾಗಿಲ್ಲ. ಯಾಕೆಂದರೆ ಇದು ಅನುದಿನವೂ ಬಹಿರಂಗವಾಗಿ ನಡೆಯುತ್ತಿದೆ. ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ, ಮುಖ್ಯಸ್ಥ ಭಾಗವತ್ ಸೇರಿದಂತೆ ಆರೆಸ್ಸೆಸ್ ನಾಯಕರು ಮೋದಿ-ಶಾ ನಾಯಕತ್ವದ ಮೇಲೆ ಪರೋಕ್ಷವಾದರೂ ತೀಕ್ಷ್ಣ ಟೀಕಾ ಪ್ರಹಾರ ಮಾಡಿದರು. “ಸೇವಕರಿಗೆ ದುರಹಂಕಾರ ಇರಬಾರದು” ಮತ್ತು “ಮಣಿಪುರದಲ್ಲಿ ವರ್ಷವಾದರೂ ಶಾಂತಿ ನೆಲೆಸಿಲ್ಲ” ಎಂಬ ಟೀಕೆ ಭಾರೀ ಚರ್ಚೆಗೆ ಒಳಗಾಯಿತು. “ಬಿಜೆಪಿ ಈಗ ಬೆಳೆದಿದೆ, ಅದಕ್ಕೆಆರೆಸ್ಸೆಸ್ ನ ಅಗತ್ಯವಿಲ್ಲ, ಈಗ ಅದು ಸ್ವತಂತ್ರವಾಗಿ ಕೆಲಸ ಮಾಡಲು ಸಕ್ಷಮವಾಗಿದೆ” ಎಂಬ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಪ್ರತಿ-ಹೇಳಿಕೆ ಬಿಜೆಪಿ-ಆರೆಸ್ಸೆಸ್ ನಡುವೆ ಬಿರುಕು ಢಾಳಾಗಿರುವಂತೆ ಕಂಡಿತು.

ಮೋದಿ

ಬಹುಮತ ತರಲು ವಿಫಲವಾಗಿರುವುದರಿಂದ ಆರೆಸ್ಸೆಸ್, ಸರಕಾರದ ಮೋದಿ-ಶಾ ನಾಯಕತ್ವ ಬದಲಾಯಿಸಿ, ಬದಲಿ ನಾಯಕತ್ವಕ್ಕೆ ಒತ್ತಾಯಿಸಬಹುದು. ನಿತಿನ್ ಗಡ್ಕರಿ, ರಾಜನಾಥ್, ಯೋಗಿ ಯಂತಹ ತಮಗೆ ‘ವಿಧೇಯ’ರಾದವರನ್ನು ಪ್ರಧಾನಿಯಾಗಿಸಬಹುದು. ಬಿಜೆಪಿ ಪಾರ್ಲಿಮೆಂಟರಿ ಪಕ್ಷದ ಸಭೆಯಲ್ಲಿ ಮೋದಿ ನಾಯಕತ್ವಕ್ಕೆ ಸವಾಲು ಬರಬಹುದು ಎಂದೆಲ್ಲ ಊಹಾಪೋಹಗಳು ಹರಡಿದವು. ಭಾಗವತ್-ಯೋಗಿ ಭೇಟಿ ಇವಕ್ಕೆ ಪುಕ್ಕ ಕೊಟ್ಟಿತ್ತು. ಆದರೆ ಬಿಜೆಪಿ ಪಾರ್ಲಿಮೆಂಟರಿ ಪಕ್ಷದ ಸಭೆಯನ್ನೇ ನಡೆಸದೆ ನಿತೀಶ್-ನಾಯ್ಡು ಜತೆ ಮಾತನಾಡಿ ನೇರವಾಗಿ ಎನ್.ಡಿ.ಎ ರಂಗದ ಪಾರ್ಲಿಮೆಂಟರಿ ಸಭೆಯನ್ನೇ ನಡೆಸಿ, ಮೋದಿ-ಶಾ ಈ ಸವಾಲನ್ನು ಮೊಳಕೆಯಲ್ಲೇ ಚಿವುಟಿ ಹಾಕಿದರು. ಆ ಮೇಲೆ ತಮಗೆ ಬೇಕಾದ ಸಚಿವ ಸಂಪುಟ, ಸ್ಪೀಕರ್ ಆಯ್ಕೆ ಮಾಡಿದರು.

ಆದರೆ ತೀವ್ರ ಹಿನ್ನಡೆ ಕಂಡ ಉತ್ತರ ಪ್ರದೇಶ, ಮಹಾರಾಷ್ಟ್ರ, ಹರಿಯಾಣ ಗಳಲ್ಲಿ ತೀವ್ರವಾಗಿ ಮತ್ತು ಉಳಿದ ರಾಜ್ಯಗಳಲ್ಲಿ ಸಹ ಪಕ್ಷದೊಳಗೆ ತೀವ್ರ ಭಿನ್ನಮತ ಹೊಗೆಯಾಡಲಾರಂಭಿಸಿತ್ತು. ಮೋದಿ-ಶಾ ನಾಯಕತ್ವ ಮತ್ತು ಅದರ ಹಲವು ತಪ್ಪು ನಿರ್ಣಯಗಳು, ನೀತಿಗಳೇ ಸೋಲಿಗೆ ಕಾರಣ ಎಂದು ನೇರವಾಗಿ ಬಹಿರಂಗವಾಗಿ ಆರೋಪಿಸಿವಷ್ಟು ಭಿನ್ನಮತ, ಆಕ್ರೋಶ ಮತ್ತು ಬಂಡಾಯ ಸಹ ಬೆಳೆಯಿತು. ಇತ್ತೀಚೆಗಿನ 13 ಉಪಚುನಾವಣೆಗಳಲ್ಲಿ ಬಿಜೆಪಿ ಗಾದ ತೀವ್ರ ಹಿನ್ನಡೆ ಮತ್ತು ಬಿಜೆಪಿ ಎಲ್ಲ ರಾಜ್ಯಗಳಲ್ಲಿ ಹಮ್ಮಿಕೊಂಡಿರುವ ಚುನಾವಣಾ ಸೋಲುಗಳ “ಆತ್ಮಾವಲೋಕನ” ಗಳಿಂದಾಗಿ ಇದು ಇನ್ನಷ್ಟು ತೀವ್ರವಾಗಿದೆ. ಇದು ಸಾಲದೆಂಬಂತೆ ಉತ್ತರ ಪ್ರದೇಶದಲ್ಲಿ 10 ಸೇರಿದಂತೆ ಮುಂಬರುವ ಉಪಚುನಾವಣೆಗಳು ಮತ್ತು ಮೂರು ರಾಜ್ಯಗಳಲ್ಲಿ (ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್) ಮುಂಬರುವ ವಿಧಾನ ಸಭಾ ಚುನಾವಣೆಗಳಲ್ಲಿ ಸಹ ಸೋಲಿನ ಭೀತಿ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿವೆ. ಭಾಗವತ್ ಸಹ “ಭಗವಂತನಾಗುವ ಆಸೆ ಇರೋರಿಗೆ ಮುಂದೇನು ಅಂತ ಗೊತ್ತಿಲ್ಲ” ಎಂದು ಮತ್ತೆ ಮೋದಿಯ ಪರೋಕ್ಷ ಟೀಕೆ ಮಾಡಿದರು.
ಹೀಗಾಗಿ ಬಿಜೆಪಿ ಪಕ್ಷದ ಒಳಗೂ ಮೋದಿ-ಶಾ ನಿರಂಕುಶ ಕೇಂದ್ರೀಕರಣದ ವಿರುದ್ಧ ಹಲವು ಕಡೆ ಬಂಡಾಯದ ಅಲೆಗಳು ಏಳುತ್ತಲಿವೆ. ಇದು ಹಲವು ಕಾರಣಗಳಿಂದಾಗಿ ಉತ್ತರ ಪ್ರದೇಶದಲ್ಲಿ ಸ್ಫೋಟಕ ಪರಿಸ್ಥಿತಿ ಉಂಟು ಮಾಡಿದೆ. ಒಂದು ಕಡೆ ಅಮಿತ್ ಶಾ ತನ್ನ ಭವಿಷ್ಯದ (ಆರೆಸ್ಸೆಸ್ ಮೋದಿಯನ್ನು ನಿವೃತ್ತಿಗೊಳಿಸಲು ನಿರ್ಧರಿಸಿದ ಸಂದರ್ಭದಲ್ಲಿ) ಪ್ರತಿಸ್ಪರ್ಧಿಯಾದ ಯೋಗಿ ಯನ್ನು ಈಗಲೇ ಮಣಿಸಬೇಕು ಎಂದು ಹೊರಟಿದ್ದಾರೆ. ಈ ಭವಿಷ್ಯ ಬಹಳ ದೂರವಿರಲಿಕ್ಕಿಲ್ಲ. ಮುಂಬರುವ ರಾಜ್ಯಗಳ ವಿಧಾನ ಸಭಾ ಚುನಾವಣೆಗಳ ನಂತರವೇ (ಅಂದರೆ ಇದೇ ಅಕ್ಟೋಬರ್ ನಲ್ಲೇ) ಸಹ ಆಗಬಹುದು. ಹೀಗಾಗಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆ ಆದ ಅವಮಾನಕಾರಿ ಸೋಲನ್ನು ಮುಖ್ಯಮಂತ್ರಿಯ ಯೋಗಿಯ ತಲೆಗೆ ಕಟ್ಟಿ ಅವರ ‘ತಲೆದಂಡ’ ತೆಗೆದುಕೊಳ್ಳುವ ತಯಾರಿಯನ್ನು ಶಾ ನಡೆಸಿದ್ದಾರೆ. ಮಾತ್ರವಲ್ಲ ತಮ್ಮ ಶಿಷ್ಯ ಮತ್ತು ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಅವರನ್ನು ಮುಖ್ಯಮಂತ್ರಿ ಯಾಗಿ ಅಥವಾ ಪಕ್ಷದ ರಾಜ್ಯ ಅಧ್ಯಕ್ಷರಾಗಿ ಹೊರಿಸಲು ಹೊರಟಿದ್ದಾರೆ. ಚುನಾವಣೆಯ ನಂತರ ಯೋಗಿ ಕರೆದ ಯಾವುದೇ ಸಚಿವ ಸಂಫುಟ ಸಭೆಯಲ್ಲಿ ಮೌರ್ಯ ಭಾಗವಹಿಸಿಲ್ಲ.

ಉತ್ತರ ಪ್ರದೇಶದ ಸೋಲಿನ ಕುರಿತ “ಆತ್ಮಾವಲೋಕನ” ಸಭೆಯಲ್ಲಿ ಮೌರ್ಯ ಮತ್ತು ಯೋಗಿ ಟೀಕೆ-ಪ್ರತಿಟೀಕೆ ಗಳನ್ನು ಮಾಡಿದ್ದಾರೆ. “ಅತಿ ಆತ್ಮವಿಶ್ವಾಸ” ಸೋಲಿಗೆ ಕಾರಣ (ಮೋದಿ ಯ ‘ಚಾರ್ ಸೌ ಪಾರ್’ ಹೇಳಿಕೆಯ ಪರೋಕ್ಷ ಟೀಕೆ) ಎಂದು ಯೋಗಿ ಹೇಳಿದರೆ, “ಸರಕಾರ ಮತ್ತು ಪಕ್ಷಗಳಲ್ಲಿ ಪಕ್ಷದ್ದೇ ಪರಮಾಧಿಕಾರ” ಆಗದ್ದು (ಯೋಗಿಯ ಕಳಪೆ ಸರಕಾರದ ಪರೋಕ್ಷ ಟೀಕೆ) ಎಂದು ಮೌರ್ಯ ಹೇಳಿದ್ದಾರೆ. ಶಾ ಮುಂಬರುವ ಉಪಚುನಾವಣೆಗಳ ಮೊದಲೇ ಯೋಗಿ ಗೆ ‘ಖೊಕ್’ ಕೊಡಬೇಕು ಎಂದು ಬಯಸಿದ್ದಾರೆ. ಆದರೆ ಯೋಗಿ ಗೆ ಸ್ವತಃ ಭಾಗವತ್, ಆರೆಸ್ಸೆಸ್ ಮತ್ತು ಶಾಸಕರ ನಡುವೆ ಬೆಂಬಲವಿರವುದರಿಂದ ಅದು ಸುಲಭವಲ್ಲ ಎನ್ನಲಾಗಿದೆ. ಅವರು ಇತ್ತೀಚೆಗೆ ರಾಜ್ಯಪಾಲರನ್ನು ಭೇಟಿಯಾಗಿದ್ದು, ಮೌರ್ಯ ರನ್ನು ಸಂಪುಟದಿಂದ ಕೈಬಿಡುವಂತೆ ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ. ಹೀಗೆ ಈ ಮುಖಾಮುಖಿ ಮುಂದುವರೆದರೆ ಇದು ಮೋದಿ-ಆರೆಸ್ಸೆಸ್ ಮುಖಾಮುಖಿ ಯೂ ಆಗಿ, ತನ್ನ ಸೀಟಿಗೂ ಕುತ್ತು ಬರಬಹುದು ಎಂಬ ಆತಂಕದಿಂದ ಮೋದಿ ‘ಕದನವಿರಾಮ’ ಕ್ಕೆ ಒತ್ತಡ ಹಾಕುತ್ತಿದ್ದಾರೆ. ಕನಿಷ್ಠ ಉಪಚುನಾವಣೆಗಳ ವರೆಗೆ ಶಾ ರನ್ನು ಸುಮ್ಮನಿರಿಸುವಂತೆ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಭಾಗವತ್ ಸಹ ರಾಜಿಗೆ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಇದಕ್ಕಾಗಿ ಜುಲೈ 20 ರಂದು ಲಕ್ನೋ ನಲ್ಲಿ ಕರೆಯಲಾಗಿದ್ದ ಆರೆಸ್ಸೆಸ್-ಬಿಜೆಪಿ ಜಂಟಿ ಸಭೆ ಅಕಾಸ್ಮಾತ್ತಾಗಿ ರದ್ದಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ.

ಪ್ರಜಾಸತ್ತಾತ್ಮಕ ಶಕ್ತಿಗಳು ಮತ್ತು ಶಾ-ಯೋಗಿ, ಮೊದಿ-ಭಾಗವತ್ ಮುಖಾಮುಖಿ

ಇನ್ನೊಂದು ಕಡೆ ಪ್ರಜಾಸತ್ತಾತ್ಮಕ ಶಕ್ತಿಗಳು ಮತ್ತು ಅವರ ಬೆಂಬಲಿಗರು ಚುನಾವಣಾ ಫಲಿತಾಂಶದ ನಂತರದಿಂದಲೂ ಮೋದಿ-ಶಾ ನಾಯಕತ್ವಕ್ಕೆ ಕಡಿವಾಣ ಬಿದ್ದರೆ ಮಾತ್ರ ಪರಿಸ್ಥಿತಿ ಉತ್ತಮವಾಗಲು ಸಾಧ್ಯ. ಮೋದಿ-ಶಾ ನಾಯಕತ್ವ ಬಿಜೆಪಿ ಗೆ ಬಹುಮತ ತರಲು ವಿಫಲವಾದ್ದರಿಂದ ಇದನ್ನು ಬಿಜೆಪಿ ಪಾರ್ಲಿಮೆಂಟರಿ ಪಕ್ಷ ಅಥವಾ ಆರೆಸ್ಸೆಸ್ ನಾಯಕತ್ವ ಸಹಜವಾಗಿಯೇ ಮಾಡುವುದು ಎಂದು ನಿರೀಕ್ಷಿಸಿದ್ದರು. ಭಾಗವತ್ ಟೀಕೆ ಈ ನಿರೀಕ್ಷೆಯನ್ನು ಎತ್ತರಿಸಿತ್ತು. ಇದು ಹುಸಿಯಾದಾಗ ನಿತೀಶ್-ನಾಯ್ಡು ಈ ಕೆಲಸ ಮಾಡಬಹುದು ಎಂಬ ಹೊಸ ನಿರೀಕ್ಷೆಯತ್ತ ಜಾರಿದರು. ಅದೂ ಹುಸಿಯಾಗುತ್ತಿದ್ದಂತೆ ಉತ್ತರ ಪ್ರದೇಶದಲ್ಲಿ ಶಾ-ಯೋಗಿ ಮುಖಾಮುಖಿ, ಯೋಗಿ-ಭಾಗವತ್ ಸಖ್ಯ, ಪರೋಕ್ಷ ಮೋದಿ-ಭಾಗವತ್ ತಿಕ್ಕಾಟ ಮತ್ತು ಇತ್ತೀಚಿನ ಉಪಚುನಾವಣಾ ಫಲಿತಾಂಶಗಳು ಹೊಸ ನಿರೀಕ್ಷೆಯನ್ನು ಹುಟ್ಟಿಸಿವೆ.

ಮೋದಿ

ಆದರೆ ಈ ನಿರೀಕ್ಷೆಯು ಎಷ್ಟು ವಾಸ್ತವಿಕ ಎಂದು ಅವು ಆಧರಿಸಿರುವ ಎರಡು ನಂಬಿಕೆಗಳನ್ನು ವಿಶ್ಲೇಷಿಸಿದರೆ ತಿಳಿಯುತ್ತದೆ. ಮೋದಿ-ಶಾ ನಾಯಕತ್ವವೇ ನಿರಂಕುಶ ಕೇಂದ್ರೀಕೃತ ಪ್ರಜಾಪ್ರಭುತ್ವ-ವಿರೋಧಿ ಆಳ್ವಿಕೆ ಮತ್ತು ಕಠೋರ ಜನ-ವಿರೋಧಿ ಸಾಮಾಜಿಕ-ಆರ್ಥಿಕ ನೀತಿಗಳಿಗೆ ಕಾರಣ ಎಂಬುದು ಇದರ ಹಿಂದಿರುವ ಒಂದು ನಂಬಿಕೆ. ಆರೆಸ್ಸೆಸ್ ಈ ನೀತಿಗಳನ್ನು ಅಥವಾ ಅವುಗಳ ಕಠೋರತೆಯನ್ನು ಕಡಿಮೆ ಮಾಡಲು ಬಯಸುತ್ತದೆ ಎಂಬುದು ಇನ್ನೊಂದು ನಂಬಿಕೆ. ಇವೆರಡೂ ಈಗಿನ ಆಳ್ವಿಕೆ ಕಾರ್ಪೊರೆಟ್-ಕೋಮುವಾದಿ ಜೋಡಣೆ-ಹೊಂದಾಣಿಕೆ ಎಂಬ ವಾಸ್ತವಾಂಶವನ್ನು ಪರಿಗಣಿಸುವುದಿಲ್ಲ. ಸೂಪರ್ ಲಾಭ ಗಳಿಸುವ ನವ-ಉದಾರವಾದಿ ನೀತಿಗಳನ್ನು ಜಾರಿ ಮಾಡಬೇಕಾದರೆ ದುಡಿಯುವ ಜನರನ್ನು ಒಡೆಯುವ ಕೋಮುವಾದಿ ಶಕ್ತಿಗಳು ಕಾರ್ಪೊರೆಟ್ ಗಳಿಗೆ ಅನಿವಾರ್ಯ. ಹಾಗಾಗಿ ಕಾರ್ಪೊರೆಟ್-ಕೋಮುವಾದಿ ಜೋಡಣೆ-ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಆರೆಸ್ಸೆಸ್-ಬಿಜೆಪಿ ಇದಕ್ಕೆ ಅತ್ಯುತ್ತಮ ವಾಹನ. ಆರೆಸ್ಸೆಸ್-ಬಿಜೆಪಿ ಯಲ್ಲಿ ಈ ಕಾರ್ಪೊರೆಟ್-ಕೋಮುವಾದಿ ಜೋಡಣೆ-ಹೊಂದಾಣಿಕೆಗೆ ಈಗ ಮೋದಿ-ಶಾ ಸೂಕ್ತ ನಾಯಕರೆಂದೇ ಅವರನ್ನು ಕಾರ್ಪೊರೆಟ್ ಗಳು ಬೆಂಬಲಿಸುತ್ತಾರೆ.

ಆರೆಸ್ಸೆಸ್ ನ “ಹಿಂದೂರಾಷ್ಟ್ರ”ದ ಕುರಿತು ಕಾರ್ಪೊರೆಟ್ ಗಳಿಗೆ ಯಾವುದೇ ಹಿಂಜರಿಕೆಯಿಲ್ಲ. ಹಾಗೆನೇ ಕಾರ್ಪೊರೆಟ್ ಸಹಕಾರವಿಲ್ಲದೆ “ಹಿಂದೂ ರಾಷ್ಟ್ರ” ಸಾಧ್ಯವಿಲ್ಲವೆಂದು ಆರೆಸ್ಸೆಸ್ ಗೂ ಗೊತ್ತು. ಸೈದ್ಧಾಂತಿಕವಾಗಿಯೂ ಕಾರ್ಪೊರೆಟ್ ಪ್ರಾಬಲ್ಯವು ಆರೆಸ್ಸೆಸ್ ಪರಿಕಲ್ಪನೆಯ ಅಸಮಾನ ಶ್ರೇಣಿಕೃತ “ಹಿಂದೂ ರಾಷ್ಟ್ರ”ಕ್ಕೆ ಸರಿಹೊಂದುತ್ತದೆ. ಮೋದಿ-ಶಾ ವಿಶ್ವಾಸ ಕಳೆದುಕೊಂಡು ಜನತೆಯನ್ನು ಮರುಳು ಮಾಡಲಾರರು ಮತ್ತು ಬೇರೆ ಯಾರಾದರೂ ಅದನ್ನು ಮಾಡಬಲ್ಲರಾದರೆ ಅವರನ್ನು ಕಾರ್ಪೊರೆಟ್ ಗಳು ಬೆಂಬಲಿಸುವವು. ನಿತೀಶ್-ನಾಯ್ಡು ಗಳನ್ನು ಎನ್.ಡಿ.ಎ ಸರಕಾರಕ್ಕೆ ಬೆಂಬಲಿಸುವಂತೆ ಮಾಡುವಲ್ಲಿ ಕಾರ್ಪೊರೆಟ್ ಕೈಯೂ ಇಲ್ಲದಿಲ್ಲ. ಹಾಗಾಗಿ ಅವರು ಮೋದಿ-ಶಾ ವಿರುದ್ಧ ಬಂಡಾಯವೇಳಲಿಲ್ಲ. ಚುನಾವಣೆಗಳಲ್ಲಿ ಹಿನ್ನಡೆಯ ಕುರಿತ ಆತ್ಮಾವಲೋಕನದ ಭಾಗವಾಗಿ ಕಠೋರ ಕೋಮುವಾದಿ ಮತ್ತು ನವ-ಉದಾರವಾದಿ ನೀತಿಗಳೇ ಸೋಲಿಗೆ ಕಾರಣವೆಂದು ಯಾವುದೇ ಆರೆಸ್ಸೆಸ್-ಬಿಜೆಪಿ ಬಣ ಅಥವಾ ನಾಯಕ ಸೊಲ್ಲೆತ್ತಿಲ್ಲ ಎಂಬುದು ಬಿಜೆಪಿಯೊಳಗೆ ಮತ್ತು ಬಿಜೆಪಿ-ಆರೆಸ್ಸೆಸ್ ಗಳ ನಡುವೆ ನಡೆಯುತ್ತಿರುವ ತಿಕ್ಕಾಟದಲ್ಲಿ ಕಾರ್ಪೊರೆಟ್-ಕೋಮುವಾದಿ ಜೋಡಣೆ-ಹೊಂದಾಣಿಕೆಯ ಧೊರಣೆಯನ್ನಾಗಲಿ, ಅದರ ಕಠೋರ ಜನ-ವಿರೋಧಿ ಜಾರಿಯನ್ನಾಗಲಿ (ತಾತ್ಕಾಲಿಕ ತಂತ್ರವಾಗಿ ಸಹ) ವಿರೋಧಿಸುತ್ತಿಲ್ಲವೆಂಬುದನ್ನು ಗಮನಿಸಬೇಕು.

ಇದನ್ನು ಓದಿ : ಮುಸ್ಲೀಮರಿಲ್ಲದ `ಮೊಹರಂ’ ಏನಿದರ ಕುರುಹು?

ಮೋದಿ-ಶಾ ಮತ್ತು ಆರೆಸ್ಸೆಸ್ ತಿಕ್ಕಾಟಕ್ಕೆ ವಸ್ತುನಿಷ್ಠ ನೆಲೆಯಿದೆಯೆ?

ಬಿಜೆಪಿಯೊಳಗಿನ ಮತ್ತು ಬಿಜೆಪಿ-ಆರೆಸ್ಸೆಸ್ ತಿಕ್ಕಾಟದ ಸಂದರ್ಭದಲ್ಲಿ ಇನ್ನೂ ಕೆಲವು ಮಿಥ್ಯೆಗಳನ್ನು ಗೋದಿ ಮಾಧ್ಯಮಗಳು ಮತ್ತು ಬಿಜೆಪಿ-ಆರೆಸ್ಸೆಸ್ ಗಳು ಹರಿಯಬಿಟ್ಟಿವೆ. ಬಿಜೆಪಿ ಸೋಲಿಗೆ ಬಿಜೆಪಿ-ಆರೆಸ್ಸೆಸ್ ಭಿನ್ನಮತ, ಹೊಂದಾಣಿಕೆಯ ಅಭಾವ, ತಿಕ್ಕಾಟ ಕಾರಣವೆಂಬುದು ಒಂದು ಇಂತಹ ಮಿಥ್ಯೆ. ಬಿಜೆಪಿ ಸೋತಾಗ ಅಥವಾ ಸೋಲುವ ಪರಿಸ್ಥಿತಿ ಕಂಡಾಗ ಆರೆಸ್ಸೆಸ್ ಇಂತಹ ಗುಲ್ಲು ಹರಡುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ಮೋದಿ-ಶಾ ನಾಯಕತ್ವ ಚುನಾವಣೆಗಳನ್ನು ಗೆಲ್ಲುತ್ತಿರುವವವರೆಗೆ, ಏನಕೇನ ಪ್ರಕಾರೇಣ ಸರಕಾರ ರಚಿಸುತ್ತಿರುವವರೆಗೆ, ಅವರ ನಿರಂಕುಶ ಕೇಂದ್ರೀಕೃತ ಪ್ರಜಾಪ್ರಭುತ್ವ-ವಿರೋಧಿ ಆಳ್ವಿಕೆ ಮತ್ತು ಕಠೋರ ಜನ-ವಿರೋಧಿ ಸಾಮಾಜಿಕ-ಆರ್ಥಿಕ ನೀತಿಗಳಿಗೆ ಯಾವುದೇ ತೀವ್ರ ವಿರೋಧ ವ್ಯಕ್ತ ಪಡಿಸಿರಲಿಲ್ಲ. ಬದಲಾಗಿ ಅದನ್ನು ಪ್ರಬಲವಾಗಿ ಬೆಂಬಲಿಸಿತ್ತು.

ಮೋದಿ

ಚುನಾವಣೆಯಲ್ಲಿ ಅದರಲ್ಲೂ ಉತ್ತರ ಪ್ರದೇಶದಲ್ಲಿ ಹೀನಾಯವಾಗಿ ಸೋತ ಮೇಲೆ ಒಂದು ವರ್ಷದಿಂದ ರಕ್ತಸಿಕ್ತ ಮಣಿಪುರದ ನೆನಪಾಯಿತು. ಕಳೆದ ಹತ್ತು ವರ್ಷಗಳಿಂದಲೂ ಇರುವ ಮೋದಿಯ “ದುರಹಂಕಾರ” “ಸೂಪರ್ ಮ್ಯಾನ್ ಆಗುವ ಆಸೆ” ಇದಕ್ಕಿದ್ದ ಹಾಗೆ ಕಾಣಲಾರಂಭಿಸಿತು. ಉತ್ತರ ಪ್ರದೇಶದಲ್ಲಿ ಬಿಜೆಪಿ ಸೋಲಿಗೆ ಮೋದಿ ನೀತಿಗಳೂ, ಯೋಗಿ ‘ಬುಲ್ ಡೋಜರ್” ಆಡಳಿತ ಹಾಗೂ ಇಂಡಿಯಾ ಕೂಟ ಜನರ ಸಮಸ್ಯೆಗಳನ್ನು ಸಂವಿಧಾನಕ್ಕೆ ಅಪಾಯವನ್ನು ಎತ್ತಿದ್ದು ಎಲ್ಲವೂ ಕಾರಣ. ಯೋಗಿ-ಶಾ ತಿಕ್ಕಾಟ ಕೆಲವು ಕ್ಷೇತ್ರಗಳಲ್ಲಿ ಒಂದು ಅಂಶವಾಗಿರಬಹುದು. ಆದರೆ ಮುಖ್ಯ ಕಾರಣವಾಗಿರಲಿಲ್ಲ.

ಯೋಗಿ-ಶಾ ತಿಕ್ಕಾಟಗಳ ನಡುವೆ ಕನ್ವರ್ ಧಾರ್ಮಿಕ ಯಾತ್ರಾದ ದಾರಿಯಲ್ಲಿ ಎಲ್ಲ ತಳ್ಳು ಗಾಡಿಗಳು ಮತ್ತು ಅಂಗಡಿಗಳು ಅದರ ಒಡೆಯನ ಹೆಸರಿನ ನಾಮಫಲಕ ಹಾಕಬೇಕೆಂಬ ಆಜ್ಞೆಯನ್ನು ಯೋಗಿ ಸರಕಾರ ಹೊರಡಿಸಿದರೆ ಶಾ ಬಣ ವಾಗಲಿ ಆರೆಸ್ಸೆಸ್ ಆಗಲಿ ಅದನ್ನು ವಿರೋಧಿಸಿಲ್ಲ.

ಆದರೆ ಮೋದಿ-ಶಾ ಮತ್ತು ಆರೆಸ್ಸೆಸ್ ತಿಕ್ಕಾಟಕ್ಕೆ ಯಾವುದೇ ವಸ್ತುನಿಷ್ಠ ನೆಲೆಯಿಲ್ಲವೆಂದಲ್ಲ. ಮೋದಿ-ಶಾ ಜೋಡಿ ಚುನಾವಣಾ ಬಾಂಡ್ ಸೇರಿದಂತೆ ಹಲವು ಮೂಲಗಳಿಂದ ಬಿಜೆಪಿಗೆ ಸಂಗ್ರಹಿಸಿದ ಭಾರೀ ಹಣದಿಂದ ಪ್ರತಿ ಜಿಲ್ಲೆಯಲ್ಲಿ ಸುಸಜ್ಜಿತ ಆಧುನಿಕ ಕಾರ್ಯಾಲಯ ಮತ್ತು ಸ್ವತಂತ್ರ ಕಾರ್ಯಕರ್ತರ ಪಡೆ ಕಟ್ಟಿದೆ. ಆ ಆತ್ಮವಿಶ್ವಾಸದಿಂದ ಆರೆಸ್ಸೆಸ್ ಗೆ ಸವಾಲು ಹಾಕುತ್ತಿದ್ದಾರೆ. ಆದರೇ ಇದು, ಆರೆಸ್ಸೆಸ್ ನ ‘ಪ್ರಾಮಾಣಿಕ’ ‘ನಿಷ್ಠ’ ಕಾರ್ಯಕರ್ತರಿರುವ ಶಾಖೆಗಳ ಮತ್ತು ಜನರ ಮಧ್ಯೆ ಕೆಲಸ ಮಾಡುವ ನೆಲೆ ಹೊಂದಿರುವ ಸತತ ಸಂಪರ್ಕದಲ್ಲಿರುವ ಹಲವು ಸಂಘಟನೆಗಳ, ಜನತೆಯ ಮೆದುಳಲ್ಲಿ ವಿಷ-ಸಗಣಿ ತುಂಬಬಲ್ಲ ವ್ಯಾಪಕ ವಿಶಾಲ ಜಾಲವನ್ನು ಸರಿಗಟ್ಟಬಲ್ಲುದೇ ಎಂಬುದು ಪ್ರಶ್ನೆ. ಅದೇ ಸಮಯದಲ್ಲಿ ಮೋದಿ-ಶಾ ಸವಾಲು ತೀವ್ರವಾದರೆ ಆರೆಸ್ಸೆಸ್ ಗೆ ‘ಅಸ್ತಿತ್ವದ ಪ್ರಶ್ನೆ’ ಬರಬಹುದು. ಅದು ಈಗಾಗಲೇ ಅಧಿಕಾರದ ಆಸೆಯಿಂದ ಭ್ರಷ್ಟರಾಗದ “ಪ್ರಾಮಾಣಿಕ” ನಿಷ್ಠ ಕಾರ್ಯಕರ್ತರನ್ನು ಪಡೆದು ಅವರನ್ನು ಹಾಗೆ ಉಳಿಸುವ ಸವಾಲನ್ನು ಎದುರಿಸುತ್ತಿದೆ. ಆದರೆ ಆರೆಸ್ಸೆಸ್ ತನ್ನ ಶತಮಾನೋತ್ಸವ ದ ವರ್ಷದಲ್ಲಿ “ಹಿಂದೂ ರಾಷ್ಟ್ರ” ಘೋಷಿಸಬಲ್ಲ, ಆಚರಣೆಗೆ ತರಬಲ್ಲ ಈಗಿರುವ ಬಿಜೆಪಿ ಸರಕಾರಕ್ಕೆ ಧಕ್ಕೆ ತರುವುದಿಲ್ಲ ಎಂಬುದು ಅಷ್ಟೇ ನಿಜ. ಈ ತಿಕ್ಕಾಟ ತೀವ್ರವಾದರೆ ಕಾರ್ಪೊರೆಟ್ ಗಳು ಅದನ್ನು ಹೇಗೆ ಶಮನಗೊಳಿಸುತ್ತಾರೆ, ಇವೆರಡರಲ್ಲಿ ಯಾವುದನ್ನು ಆರಿಸಿಕೊಳ್ಳುತ್ತಾರೆ ಎಂಬುದರ ಮೇಲೆ ಇದರ ‘ಪರಿಹಾರ’ ಅವಲಂಬಿಸುತ್ತದೆ.

ಹಾಗಾಗಿ ಪ್ರಜಾಸತ್ತಾತ್ಮಕ ಶಕ್ತಿಗಳು ಬಿಜೆಪಿ ಒಳಗೆ ಅಥವಾ ಬಿಜೆಪಿ-ಆರೆಸ್ಸೆಸ್ ಬಂಡಾಯ ದಿಂದ ಏನೂ ಸಕಾರಾತ್ಮಕವಾದ್ದು ನಿರೀಕ್ಷಿಸುವಂತಿಲ್ಲ. ಪ್ರಜಾಸತ್ತೆ-ವಿರೋಧಿ ಮತ್ತು ಜನ-ವಿರೋಧಿ ನೀತಿಗಳನ್ನು ಕೊನೆಗಾಣಿಸಲು ಜನಪರ ಬದಲಿ ನೀತಿಗಳನ್ನು ಜಾರಿ ಮಾಡಲು ಸಂಸತ್ತಿನ ಒಳಗೆ ಮತ್ತು ಹೊರಗೆ ಬೀದಿಯಲ್ಲಿ ಸತತವಾಗಿ ಹೋರಾಟ ನಡೆಸುವುದು, ಅದಕ್ಕೆ ಜನರನ್ನು ಅಣಿ ನೆರೆಸುವುದು ಒಂದೇ ದಾರಿ. ಪ್ರಜಾಸತ್ತಾತ್ಮಕ ಶಕ್ತಿಗಳು ರಾಜ್ಯಗಳಲ್ಲಿ ಸರಕಾರ ನಡೆಸುತ್ತಿರುವಲ್ಲಿ ಈ ನೀತಿಗಳನ್ನು ಜಾರಿ ಮಾಡುವುದೂ ಅಷ್ಟೇ ಮುಖ್ಯ.

ಇದನ್ನು ನೋಡಿ : ಮೋದಿ ಆಡಳಿತದಲ್ಲಿ ಉದ್ಯೋಗವಿಲ್ಲ, ನಿರುದ್ಯೋಗವೇ ಎಲ್ಲೆಲ್ಲಾ…

Donate Janashakthi Media

Leave a Reply

Your email address will not be published. Required fields are marked *