ಶ್ರೀಮಂತರ ಮೇಲೆ ಸಂಪತ್ತು ತೆರಿಗೆಯ ಬದಲು ಸಾರ್ವಜನಿಕ ಉದ್ದಿಮೆಗಳನ್ನು ಮಾರುವುದೇಕೆ?

ಸಂಪತ್ತಿನ ತೀವ್ರ ಸ್ವರೂಪದ ಅಸಮಾನತೆಗಳಿಂದ ಈಗಾಗಲೇ ನಲುಗಿರುವ ಮೂರನೇ ಜಗತ್ತಿನ ದೇಶದ ಸರಕಾರವೊಂದು ತನ್ನ ಖರ್ಚು ವೆಚ್ಚಗಳಿಗೆ ಹಣ ಹೊಂದಿಸಿಕೊಳ್ಳುವ ಸಲುವಾಗಿ ಸಂಪತ್ತಿನ ಮೇಲೆ ತೆರಿಗೆಯನ್ನು ವಿಧಿಸುವ ಬದಲು ಸಾರ್ವಜನಿಕ ಆಸ್ತಿಗಳನ್ನು ಮಾರುವ ಮೂಲಕ ಅಸಮಾನತೆಗಳನ್ನು ಉಲ್ಬಣಗೊಳಿಸುವುದು ಒಂದು ನಾಚಿಕೆಗೇಡಿನ ಸಂಗತಿ. ಒಂದು ವೇಳೆ ಸಂಪತ್ತಿನ ತೆರಿಗೆಯನ್ನು ಹೇರುವ ಮನಸ್ಸಿಲ್ಲದಿದ್ದರೆ, ಸರ್ಕಾರವು ಕನಿಷ್ಠ ಪಕ್ಷ ಲಾಭದ ಮೇಲಿನ ತೆರಿಗೆಯ ದರವನ್ನಾದರೂ ಹೆಚ್ಚಿಸಬಹುದಿತ್ತು. ಸಾರ್ವಜನಿಕ ವಲಯದ ಆಸ್ತಿಗಳನ್ನು ಖಾಸಗಿಯವರಿಗೆ ಮಾರುವ ಮೋದಿ ಸರ್ಕಾರದ ಉದ್ದೇಶವು, ದೇಶದ ದೃಷ್ಟಿಯಿಂದ ಒಂದು ಬೃಹತ್ ಪ್ರಮಾದವಷ್ಟೇ ಅಲ್ಲ, ಸರ್ಕಾರವು ಹೇಳಿಕೊಳ್ಳುವ ದೃಷ್ಟಿಯಿಂದ ನೋಡಿದರೂ ಸಹ ಅದರಲ್ಲಿ ಆರ್ಥಿಕ ವಿವೇಚನೆಯೇ ಕಾಣದು ಎಂದು ಹಿರಿಯ ಆರ್ಥಿಕ ತಜ್ಞ ಪ್ರೊ. ಪ್ರಭಾತ್ ಪಟ್ನಾಯಕ್ ಅವರು ವಿಶ್ಲೇಷಿಸುತ್ತಾರೆ.

ಮೋದಿ ಸರ್ಕಾರವು ಭಾರತದ ಸಾರ್ವಜನಿಕ ಉದ್ದಿಮೆಗಳನ್ನು ತನ್ನ ಪ್ರೀತಿಪಾತ್ರ ಕಾರ್ಪೊರೇಟ್‌ಗಳಿಗೆ ಮತ್ತು ವಿದೇಶಿ ಬಹುರಾಷ್ಟ್ರೀಯ ಕಂಪನಿಗಳಿಗೆ ಹಸ್ತಾಂತರಿಸುವ ಉದ್ದೇಶವನ್ನು ಗುಟ್ಟಾಗಿ ಉಳಿಸಿಲ್ಲ. ಸರ್ಕಾರದ ಖರ್ಚು-ವೆಚ್ಚಗಳಿಗೆ ಹಣ ಹೊಂದಿಸಿಕೊಳ್ಳುವ ಉದ್ದೇಶದಿಂದ ಕೈಗೊಳ್ಳಲಾಗುತ್ತಿರುವ ಈ ಕ್ರಮವು ಸರ್ಕಾರದ ನಿರ್ದಯ ಮನೋಭಾವವನ್ನೂ ಮತ್ತು ಅರ್ಥಶಾಸ್ತ್ರದ ಬಗ್ಗೆ ಅದು ಹೊಂದಿರುವ ಅಜ್ಞಾನವನ್ನೂ ಸೂಚಿಸುತ್ತದೆ.

ಭಾರತದ ಸಾರ್ವಜನಿಕ ವಲಯವು ವಸಾಹತು-ವಿರೋಧಿ ಹೋರಾಟದ ಫಲವಾಗಿ ಆರಂಭಗೊಂಡಿತು. ವಸಾಹತುಶಾಹಿ ಆಡಳಿತ ಎಂದಾಗ, ಕೇವಲ ರಾಜಕೀಯ ಆಳ್ವಿಕೆ ಮಾತ್ರ ವಿದೇಶೀಯರ ಕೈಯಲ್ಲಿತ್ತು ಎಂಬುದಷ್ಟೇ ಅಲ್ಲ. ವಿದೇಶಿ ಬಂಡವಾಳವು ನಮ್ಮ ದೇಶದ ಸಕಲ ಸಂಪನ್ಮೂಲಗಳ ಮೇಲೆ ನಿಯಂತ್ರಣ ಹೊಂದಿತ್ತು. ಹಾಗಾಗಿ, ವಸಾಹತುಶಾಹಿಯಿಂದ ಬಿಡುಗಡೆ ಹೊಂದುವುದು ಎಂದರೆ, ಕೇವಲ ರಾಜಕೀಯ ಅಧಿಕಾರವನ್ನು ಮರಳಿ ಪಡೆಯುವುದೊಂದೇ ಆಗಿರಲಿಲ್ಲ. ಎಲ್ಲಕ್ಕಿಂತಲೂ ಮಿಗಿಲಾಗಿ, ದೇಶದ ಸಕಲ ಸಂಪನ್ಮೂಲಗಳನ್ನೂ (ನೈಸರ್ಗಿಕ ಮತ್ತು ಆರ್ಥಿಕ) ವಿದೇಶಿ ಬಂಡವಾಳಿಗರ ಕೈಯಿಂದ ಮರಳಿ ಪಡೆಯುವುದಾಗಿತ್ತು. ದೇಶದ ಇಡೀ ಜನತೆಗೆ ಸೇರಿದ ಸಂಪನ್ಮೂಲಗಳ ನಿರ್ವಹಣೆಯ ಕೆಲಸವನ್ನು ಸಾರ್ವಜನಿಕ ವಲಯವನ್ನು ಬಿಟ್ಟರೆ ಬೇರೆ ಯಾರೂ ನಿರ್ವಹಿಸುವುದು ಶಕ್ಯವಿರಲಿಲ್ಲ. ಏಕೆಂದರೆ, ಇಡೀ ಜನತೆಯ ಪರವಾಗಿ ಮರಳಿ ಪಡೆದ ಸಂಪನ್ಮೂಲಗಳ ನಿರ್ವಹಣೆಯನ್ನು ಜನರ ಪ್ರಾತಿನಿಧಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸಬಲ್ಲ ಅರ್ಹತೆ ಸಾರ್ವಜನಿಕ ವಲಯಕ್ಕೆ ಮಾತ್ರ ಇರಲುಂಟು.

ಭಾರತದ ಅರ್ಥವ್ಯವಸ್ಥೆಯ ಮೇಲೆ ವಿದೇಶಿ ಬಂಡವಾಳವು ಹೊಂದಿದ್ದ ಬಿಗಿಹಿಡಿತವನ್ನು ಇಡೀ ಜನತೆಯ ಹಿತ ಕಾಯುವ ದೃಷ್ಟಿಯಿಂದ ಕಿತ್ತೊಗೆದು, ಅದರ ಸ್ಥಾನವನ್ನು ತುಂಬಲು ಸಮರ್ಥವಾದ ಏಕೈಕ ಸಂಸ್ಥೆ ಎಂದರೆ, ಸಾರ್ವಜನಿಕ ವಲಯವೇ. ಭಾರತದ ಖಾಸಗಿ ವಲಯವು ವಿದೇಶಿ ಬಂಡವಾಳದ ಸ್ಥಾನವನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಹೆಚ್ಚೆಂದರೆ, ಅದು ವಿದೇಶಿ ಮಹಾನಗರೀಯ (ಮೆಟ್ರೊಪಾಲಿಟನ್) ಬಂಡವಾಳದಿಂದ ಎರವಲು ಪಡೆದ ಜ್ಞಾನವನ್ನು ಬಳಸಿಕೊಳ್ಳಬಹುದಿತ್ತು ಮತ್ತು ಅವರೊಂದಿಗೆ ಜಂಟಿಯಾಗಿ ಕಾರ್ಯನಿರ್ವಹಿಸಬಹುದಿತ್ತು. ಈ ಪರಿಸ್ಥಿಯಲ್ಲಿ ದೇಶಿ ಬಂಡವಾಳವು ತನಗೊಂದಿಷ್ಟು ಅವಕಾಶ ಕಲ್ಪಿಸಿಕೊಳ್ಳಬಹುದಿತ್ತೇ ವಿನಃ, ವಿದೇಶಿ ಬಂಡವಾಳದ ಆಧಿಪತ್ಯವನ್ನು ಬದಲಾಯಿಸಿ ಅದರ ಸ್ಥಾನವನ್ನು ತುಂಬುವಷ್ಟು ಸಾಮರ್ಥ್ಯ ಹೊಂದಿರಲಿಲ್ಲ. ಆದರೆ, ಸಾರ್ವಜನಿಕ ವಲಯದ ಪರವಾದ ಈ ಊಹಾತ್ಮಕ ತರ್ಕವು. ಒಂದು ಗೌಣ ತರ್ಕವೇ. ನಿಜವಾದ ತರ್ಕ ತತ್ವ-ಸಿದ್ಧಾಂತಗಳಿಗೆ ಸಂಬಂಧಿಸಿದ ವಿಷಯ. ಒಂದು ಸಂಸದೀಯ ಪರೀಕ್ಷಣೆಗೆ ಒಳಪಡುವ ಸಾರ್ವಜನಿಕ ವಲಯ ಮಾತ್ರವೇ ಇಡೀ ಜನತೆಯ ಒಟ್ಟಾರೆ ಹಿತಾಸಕ್ತಿಗಾಗಿ ಕೆಲಸ ಮಾಡಬಹುದಾಗಿತ್ತು.

ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ನಿದರ್ಶನವನ್ನು ಉಲ್ಲೇಖಿಸಬಹುದೆಂದರೆ, ರಾಷ್ಟ್ರೀಕೃತ ಬ್ಯಾಂಕ್‌ಗಳು ಕಾರ್ಯನಿರ್ವಹಿಸಿದ ರೀತಿ. ಕೆಲವು ಹೆಸರಾಂತ ಉದ್ದಿಮೆದಾರ ಮನೆತನಗಳ ಒಡೆತನದಲ್ಲಿದ್ದ ಹಲವು ಹತ್ತು ಖಾಸಗಿ ಬ್ಯಾಂಕ್‌ಗಳು ಸಾರ್ವಜನಿಕರಿಂದ ಸಂಗ್ರಹಿಸಿದ ಠೇವಣಿಯನ್ನು ಈ ಮನೆತನಗಳು ನಡೆಸುತ್ತಿದ್ದ ಸಂಸ್ಥೆಗಳ ವ್ಯವಹಾರಗಳಿಗೆ ಒದಗಿಸಿಕೊಡುವ ಕಾರ್ಯ ನಿರ್ವಹಿಸಿದವು. ರಾಷ್ಟ್ರೀಕರಣದ ನಂತರ ಈ ಬ್ಯಾಂಕ್‌ಗಳು ಸಂಗ್ರಹಿಸಿದ ಠೇವಣಿಗಳನ್ನು, ಆ ವರೆಗೆ ನಿರ್ಲಕ್ಷಕ್ಕೆ ಒಳಗಾಗಿದ್ದ ಕಿರು ಉತ್ಪಾದಕರು ಮತ್ತು ಸಣ್ಣ ಸಣ್ಣ ರೈತರಿಗೆ ಸಾಲ ಕೊಡಲು ಬಳಸಿದವು. ಕೆಲವು ಉದ್ದಿಮೆದಾರ ಮನೆತನಗಳ ಅಂಗ ಸಂಸ್ಥೆಯಂತೆ ಕಾರ್ಯನಿರ್ವಹಿಸುತ್ತಿದ್ದ ಈ ಬ್ಯಾಂಕ್‌ಗಳು ರಾಷ್ಟ್ರೀಕರಣದ ನಂತರ ಇಡೀ ದೇಶವನ್ನು ವ್ಯಾಪಿಸಿಕೊಂಡವು. ಇಂತಹ ಒಂದು ವಿಶಾಲ ಹಣಕಾಸು ವ್ಯವಸ್ಥೆಯನ್ನು ಪ್ರಪಂಚವು ಅದುವರೆಗೆ ಕಂಡಿರಲಿಲ್ಲ. ಬ್ಯಾಂಕಿಂಗ್ ಚಟುವಟಿಕೆಗಳ ಈ ರೀತಿಯ ವಿಸ್ತರಣೆಯು ಹಸಿರು ಕ್ರಾಂತಿಯ ಯಶಸ್ಸಿಗೆ ಮತ್ತು ಸ್ವಲ್ಪಮಟ್ಟಿಗಾದರೂ ದೇಶಕ್ಕೆ ಆಹಾರ ಭದ್ರತೆ ಒದಗಿಸುವಲ್ಲಿ ಕಾರಣವಾಗಿತ್ತು.

ಕ್ಲಿಯರೆಂಸ್ ಸೇಲ್!   ಕ್ಲಿಯರೆಂಸ್ ಸೇಲ್!  ವ್ಯವಹಾರ ನಡೆಸುವುದು ಸರಕಾರದ ವ್ಯವಹಾರವಲ್ಲ- ಮೋದಿ – ವ್ಯಂಗ್ಯಚಿತ್ರ ಕೃಪೆ: ಪಂಜು ಗಂಗೊಳ್ಳಿ

ಈ ಎಲ್ಲ ಅಂಶಗಳೂ ಎಲ್ಲರಿಗೂ ಚೆನ್ನಾಗಿ ತಿಳಿದಿರಬೇಕು ಮತ್ತು ತಿಳಿದಿತ್ತು ಸಹ. ಆದರೂ ಈ ಅಂಶವನ್ನು ಬಿಜೆಪಿಗೆ ಮತ್ತೊಮ್ಮೆ ಜ್ಞಾಪಿಸಿ ಕೊಡಬೇಕಾಗುತ್ತದೆ. ಏಕೆಂದರೆ, ಬಿಜೆಪಿಯ ಮಾತೃ ಸಂಸ್ಥೆಯು ವಸಾಹತುಶಾಹಿ ವಿರೋಧಿ ಹೋರಾಟದಲ್ಲಿ ಪಾಲ್ಗೊಳ್ಳಲೇ ಇಲ್ಲ. ಅಷ್ಟೇ ಅಲ್ಲ. ಆ ಪಕ್ಷಕ್ಕೆ ಆಹಾರ ಭದ್ರತೆಯ ಮಹತ್ವವನ್ನು ಅರ್ಥಮಾಡಿಕೊಳ್ಳುವ ಸಹೃದಯತೆಯೂ ಇಲ್ಲ ಅಥವಾ ಅದನ್ನು ಮೆಚ್ಚುವ ಔದಾರ್ಯವೂ ಇಲ್ಲ ಎಂಬುದು ಆ ಪಕ್ಷವು ದೇಶದ ಆಹಾರ ಭದ್ರತೆಯನ್ನು “ಆಹಾರ-ಸಾಮ್ರಾಜ್ಯಶಾಹಿ”ಗೆ ತೆರೆದಿಡುವ ಕೃಷಿ ಕಾನೂನುಗಳ ಮೂಲಕ ನಡೆಸುತ್ತಿರುವ ಪ್ರಸ್ತುತ ಪ್ರಯತ್ನಗಳಿಂದ ಸ್ಪಷ್ಟವಾಗುತ್ತದೆ. ಮೋದಿ ಸರ್ಕಾರವು ಅಧಿಕಾರಕ್ಕೆ ಬರುವುದಕ್ಕೂ ಮುನ್ನವೇ ನವ ಉದಾರವಾದಿ ನೀತಿಗಳನ್ನು ಆರಂಭಿಸಿದ ಹಿಂದಿನ ಸರ್ಕಾರವೂ ಸಾರ್ವಜನಿಕ ವಲಯವನ್ನು ದುರ್ಬಲಗೊಳಿಸುವ ಉದ್ದೇಶ ಹೊಂದಿತ್ತು ಎಂಬುದೂ ಸಹ ಎಲ್ಲರಿಗೂ ಗೊತ್ತಿರುವ ವಿಚಾರವೇ. ಸಾರ್ವಜನಿಕ ವಲಯದಲ್ಲಿ ದಕ್ಷತೆ ಇಲ್ಲ ಮತ್ತು ಅದು ಲಾಭಗಳಿಸುತ್ತಿಲ್ಲ ಎಂಬ ವಾದವನ್ನು ಮುಂದಿಟ್ಟು ಅದನ್ನು ಖಾಸಗಿಕರಣಗೊಳಿಸುವ ಮತ್ತು ಅಂತಿಮವಾಗಿ ಖಾಸಗಿ ವಲಯಕ್ಕೆ ಹಸ್ತಾಂತರಿಸುವ ಹುನ್ನಾರವು ಕಳೆದ ಇಪ್ಪತ್ತೈದು ವರ್ಷಗಳಿಂದಲೂ ನಡೆಯುತ್ತಿದೆ. ಈ ವಿದ್ಯಮಾನವು ಸಾರ್ವಜನಿಕ ವಲಯದ ಮೂಲ ತರ್ಕ-ಉದ್ದೇಶಗಳನ್ನು ಆಳರಸರು ಗಾಳಿಗೆ ತೂರಿದರು ಎಂಬುದನ್ನು ಸೂಚಿಸುತ್ತದೆ. ಸಾರ್ವಜನಿಕ ವಲಯವನ್ನು ಸಮರ್ಥಿಸಿ ಈ ಮಾತನ್ನು ಹೇಳುವಾಗ, ಸಾರ್ವಜನಿಕ ವಲಯದಲ್ಲಿ ದಕ್ಷತೆ ಇರಬಾರದು ಮತ್ತು ಅದು ನಷ್ಟದಲ್ಲಿರುವುದು ಸರಿ ಎಂಬುದು ಈ ಮಾತಿನ ಅರ್ಥವಲ್ಲ.

ಮತ್ತೊಂದು ಹೀನ ತರ್ಕವನ್ನು ಮುಂದೊಡ್ಡಲಾಯಿತು: ಸಾರ್ವಜನಿಕ ಉದ್ದಿಮೆಗಳ ಷೇರುಗಳನ್ನು ಮಾರುವ ಮೂಲಕ ಬಂದ ಹಣವನ್ನು ಸರ್ಕಾರದ ಖರ್ಚು-ವೆಚ್ಚಗಳಿಗೆ “ಸುರಕ್ಷಿತ” ರೀತಿಯಲ್ಲಿ ಬಳಸಿಕೊಂಡು ವಿತ್ತೀಯ ಕೊರತೆಯ ಸಂಭಾವ್ಯತೆಯನ್ನು ತಪ್ಪಿಸಿಕೊಳ್ಳಬಹುದು ಎಂಬ ಅಸಂಬದ್ಧತೆ ಮತ್ತು ಅತಾರ್ಕಿಕತೆಗಳಿಂದ ಕೂಡಿದ ಒಂದು ವಾದವನ್ನು ಮುಂದೊಡ್ಡಲಾಯಿತು. ಈ ವಾದಕ್ಕೆ  ಗಟ್ಟಿಯಾಗಿ ಆತುಕೊಂಡಿರುವ ಮೋದಿ ಸರ್ಕಾರವು ತನ್ನ ವಿತ್ತ ನೀತಿಗಳು ಫಜೀತಿಗೆ ಸಿಕ್ಕಿಕೊಂಡಿರುವ ಸಮಯದಲ್ಲಿ ಸಾರ್ವಜನಿಕ ವಲಯದ ದೊಡ್ಡ ದೊಡ್ಡ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಲು ಅಥವಾ ಅವುಗಳನ್ನು ಇಡಿಯಾಗಿಯೇ ಮಾರಲು ಹೊರಟಿದೆ.

ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ/ಮಾರಾಟದ ವಾದವು ಅದೆಷ್ಟು ಅಸಂಬದ್ಧತೆ ಮತ್ತು ಅತಾರ್ಕಿಕತೆಗಳಿಂದ ಕೂಡಿದೆ ಎಂಬುದನ್ನು ಈ ಒಂದು ಉದಾಹರಣೆಯ ಮೂಲಕ ಅರ್ಥಮಾಡಿಕೊಳ್ಳಬಹುದು. ಸರಕಾರವು ಬ್ಯಾಂಕ್‌ಗಳಿಂದ ಸಾಲ ಪಡೆದು 100 ರೂ.ಗಳನ್ನು ಹೆಚ್ಚುವರಿಯಾಗಿ ಖರ್ಚು ಮಾಡಿದರೆ, ಒಟ್ಟಾರೆ ಬೇಡಿಕೆಯಲ್ಲಿ ಹೆಚ್ಚಳವಾಗುತ್ತದೆ ಮತ್ತು ಒಟ್ಟು ಉತ್ಪತ್ತಿ ಮತ್ತು ಒಟ್ಟು ಆದಾಯಗಳಲ್ಲೂ ಹೆಚ್ಚಳವಾಗುತ್ತದೆ. ಆದಾಯ ಸೃಷ್ಟಿಯ ಈ ಪ್ರಕ್ರಿಯೆಯು ಮುಂದುವರೆಯುತ್ತಾ ಹೋಗುತ್ತದೆ, ಎಲ್ಲಿಯವರೆಗೆ ಎಂದರೆ, ಹೆಚ್ಚುವರಿ ಆದಾಯದಿಂದ ಬರುವ ಹೆಚ್ಚುವರಿ ಖಾಸಗಿ ಉಳಿತಾಯಗಳು ಖಾಸಗಿ ಹೂಡಿಕೆಗಿಂತಲೂ ಅಧಿಕವಾಗುತ್ತವೆ ಮತ್ತು ಹೆಚ್ಚುವರಿಯಾಗಿ ಖರ್ಚು ಮಾಡಿದ ಅದೇ 100 ರೂ.ಗಳಿಗೆ ಸಮನಾಗುತ್ತವೆ. ಈ 100 ರೂ.ಗಳನ್ನು ಬಾಂಡ್‌ಗಳನ್ನು ಮಾರುವ ಮೂಲಕ ಸರ್ಕಾರವು ಸಾಲ ಎತ್ತಬಹುದು ಮತ್ತು ಅದರಿಂದ ಬ್ಯಾಂಕ್ ಸಾಲವನ್ನು ತೀರಿಸಬಹುದು. ಸಾರ್ವಜನಿಕ ಆಸ್ತಿಗಳ ಮಾರಾಟದ ವಿಷಯದಲ್ಲಿ, ಒಂದೇ ಒಂದು ವ್ಯತ್ಯಾಸದ ಹೊರತಾಗಿ, ಇದೇ ಪ್ರಕ್ರಿಯೆ ನಿಖರವಾಗಿ ಪುನರಾವರ್ತನೆಗೊಳ್ಳುವುದನ್ನು ಕಲ್ಪಿಸಿಕೊಳ್ಳಬಹುದು. ಆ ವ್ಯತ್ಯಾಸ ಯಾವುದೆಂದರೆ, ಸರ್ಕಾರವು ಬಾಂಡ್‌ಗಳನ್ನು ಮಾರಿ ಈ 100 ರೂ.ಗಳನ್ನು ಸಾಲ ಎತ್ತುವುದರ ಬದಲು ಸಾರ್ವಜನಿಕ ಉದ್ದಿಮೆಗಳ ಷೇರುಗಳನ್ನು ಮಾರುತ್ತದೆ.

ಈ ರೀತಿಯಲ್ಲಿ ಈ ಎರಡು ಪ್ರಕರಣಗಳಲ್ಲೂ, ಖಾಸಗಿಯವರಿಗೆ ಮಾರುವ ಸರ್ಕಾರಿ ಕಾಗದ-ಪತ್ರಗಳ ಸ್ವರೂಪವನ್ನು ಹೊರತುಪಡಿಸಿದರೆ, ಯಾವುದೇ ವ್ಯತ್ಯಾಸವಿಲ್ಲ. ಒಂದು ಪ್ರಕರಣದಲ್ಲಿ ಬಾಂಡ್‌ಗಳನ್ನು ಮತ್ತು ಇನ್ನೊಂದು ಪ್ರಕರಣದಲ್ಲಿ ಷೇರುಗಳನ್ನು ಮಾರಲಾಗುತ್ತದೆ. ಆದ್ದರಿಂದ, ವಿತ್ತೀಯ ಕೊರತೆಯ ಮಾರ್ಗವಾಗಿ ಸರ್ಕಾರದ ಖರ್ಚು-ವೆಚ್ಚಗಳಿಗೆ ಹಣಕಾಸು ಹೊಂದಿಸಿಕೊಳ್ಳುವುದಕ್ಕೂ ಮತ್ತು ಸಾರ್ವಜನಿಕ ಸ್ವತ್ತುಗಳ ಮಾರಾಟದ ಮೂಲಕ (ಅಂದರೆ, ಖಾಸಗೀಕರಣದ ಮೂಲಕ) ಸರ್ಕಾರದ ಖರ್ಚು-ವೆಚ್ಚಗಳಿಗೆ ಹಣಕಾಸು ಹೊಂದಿಸಿಕೊಳ್ಳುವುದಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಆದರೆ ಎರಡನೆಯ ಪ್ರಕರಣದಲ್ಲಿ (ಸಾರ್ವಜನಿಕ ಸ್ವತ್ತುಗಳ ಮಾರಾಟ), ಅರ್ಥವ್ಯವಸ್ಥೆಯ ಆಯಕಟ್ಟಿನ ಸಂಸ್ಥೆಗಳನ್ನು (ನಿರ್ಣಾಯಕ ಕ್ಷೇತ್ರಗಳನ್ನು) ಸರ್ಕಾರವು ದೇಶೀಯ ಮತ್ತು ವಿದೇಶಿ ಕಾರ್ಪೊರೇಟ್ ಕುಳಗಳಿಗೆ ಶರಣಾಗಿ ಸಮರ್ಪಣೆ ಮಾಡುತ್ತದೆ.

ಸರ್ಕಾರಗಳು ತಮ್ಮ ಖರ್ಚು-ವೆಚ್ಚಗಳಿಗಾಗಿ ಹಣಕಾಸು ಹೊಂದಿಸಿಕೊಳ್ಳುವ ಈ ಎರಡು ವಿಧಾನಗಳ ನಡುವಿನ ವ್ಯತ್ಯಾಸವನ್ನು ಐಎಂಎಫ್ ಮತ್ತು ಹಣಕಾಸು ಬಂಡವಾಳವು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತವೆ. ಸಾರ್ವಜನಿಕ ಆಸ್ತಿಗಳ ಮಾರಾಟವನ್ನು ವಿತ್ತೀಯ ಕೊರತೆಯ ಭಾಗವೆಂದು ಅವು ಪರಿಗಣಿಸುವುದಿಲ್ಲ. ಪರಿಗಣಿಸುವುದಿಲ್ಲ ಏಕೆಂದರೆ, ಅದರಲ್ಲಿ ಅವರ ಪಟ್ಟಭದ್ರ ಹಿತಾಸಕ್ತಿ ಇದೆ. ಆರ್ಥಿಕ ತರ್ಕದಿಂದ ಅವರು ಪ್ರೇರಿತರಾಗಿಲ್ಲ. ಬದಲಿಗೆ, ಸಿದ್ಧಾಂತದಿಂದ ಪ್ರೇರಿತರು. ಅವರು ಸಾರ್ವಜನಿಕ ವಲಯದ ಅಂತ್ಯವನ್ನು ಬಯಸುತ್ತಾರೆ. ಏಕೆಂದರೆ, ಸಾಮ್ರಾಜ್ಯಶಾಹಿಯ ಆರ್ಥಿಕ ಪಟ್ಟುಗಳಿಗೆ ಎದುರಾಗಿ ದೇಶವನ್ನು ರಕ್ಷಿಸಿದ ಮತ್ತು ನವ ಉದಾರವಾದಿ ನೀತಿಗಳ ಬೆನ್ನು ಹತ್ತಿದ ನಂತರವೂ ತನ್ನ ಹಿಂದಿನ ಅವತಾರದ ನೆರಳಾಗಿ ಉಳಿದಿರುವ ಹಣಕಾಸು ಬಂಡವಾಳವನ್ನು ಮೆಟ್ಟಿ ನಿಲ್ಲಬಲ್ಲ ಶಕ್ತಿಯೆಂದರೆ ಭಾರತದ ಸಾರ್ವಜನಿಕ ವಲಯವೇ.

ಸರ್ಕಾರದ ಕೆಲವು ಅಧಿಕೃತ ವಕ್ತಾರರು ಸಾರ್ವಜನಿಕ ಆಸ್ತಿಗಳನ್ನು ಮಾರುವ ಮೂಲಕ ಬಂದ ಹಣವನ್ನು “ಸಾಲ-ಸೃಷ್ಟಿಸದ” ಸಂಪನ್ಮೂಲಗಳ ಕ್ರೋಡೀಕರಣವೆಂದು ಮತ್ತು ಇದು ಸಂಪನ್ಮೂಲಗಳನ್ನು ಸಂಗ್ರಹಿಸುವ ಒಂದು ಅತ್ಯುತ್ತಮ ವಿಧಾನವೆಂದೂ ಬಿಂಬಿಸಲು ಪ್ರಯತ್ನಿಸುತ್ತಾರೆ. ಆದರೆ ಇದು ಅರ್ಥವಿಲ್ಲದ್ದು: ಸಾರ್ವಜನಿಕ ಆಸ್ತಿಗಳನ್ನು ಮಾರಿದರೆ ಭವಿಷ್ಯದಲ್ಲಿ ಈ ಆಸ್ತಿಗಳಿಂದ ಬರಲಿದ್ದ ಆದಾಯದ ತೊರೆಯೇ ಬತ್ತಿ ಹೋಗುತ್ತದೆ. ಅಂದರೆ, ವಿತ್ತೀಯ ಕೊರತೆಯನ್ನು ಸರಿದೂಗಿಸಲು ನೀಡುವ ಸರ್ಕಾರಿ ಬಾಂಡ್‌ಗಳ ಮೇಲೆ ತೆರಬೇಕಾದ ಬಡ್ಡಿ ಪಾವತಿಗಳಿಗೆ ಸರಿಸಮನಾಗಿ ಈ ಸ್ವತ್ತುಗಳಿಂದ ಬರಲಿದ್ದ ಆದಾಯವು ನಷ್ಟವಾಗುತ್ತದೆ.

ಸರ್ಕಾರವು ತನ್ನ ಖರ್ಚು-ವೆಚ್ಚಗಳಿಗಾಗಿ ವಿತ್ತೀಯ ಕೊರತೆಯ ಮೂಲಕ ಹಣಕಾಸು ಹೊಂದಿಸಿಕೊಳ್ಳುವ ಬಗ್ಗೆ ತಕರಾರು ಹೊಂದಿರುವ ಹಣಕಾಸು ಬಂಡವಾಳದ ವಕ್ತಾರರು ಈ ಸಮಸ್ಯೆಯ ಬಗ್ಗೆ ಸಾಮಾನ್ಯವಾಗಿ ಆಕ್ಷೇಪಣೆ ಹೇಳುತ್ತಾರಲ್ಲ ಅದು ವಿಷಯವೇ ಅಲ್ಲ. ಸಮಸ್ಯೆಯೆಂದರೆ, ವಿತ್ತೀಯ ಕೊರತೆಯು ಖಾಸಗಿ ಸಂಪತ್ತನ್ನು ಸಾಕಷ್ಟು ಪ್ರಮಾಣದಲ್ಲಿ ಬಿಟ್ಟಿಯಾಗಿ ಹೆಚ್ಚಿಸುತ್ತದೆ. ಮೇಲಿನ ಉದಾಹರಣೆಯಲ್ಲಿ ಸರ್ಕಾರವು ರೂ. 100 ಖರ್ಚು ಮಾಡುತ್ತದೆ ಮತ್ತು ಖಾಸಗಿ ಕೈಗಳಲ್ಲಿರುವ ಹೆಚ್ಚುವರಿ ಉಳಿತಾಯವನ್ನು ಬಾಂಡ್ ಮಾರಾಟದ ಮೂಲಕ ಕೊಳ್ಳುತ್ತದೆ. ಅಸಲಿಗೆ, ಸರ್ಕಾರದ ಹೆಚ್ಚುವರಿ ಖರ್ಚುಗಳಿಂದಾಗಿಯೇ ಉಂಟಾದ ಈ ಉಳಿತಾಯವು ಖಾಸಗಿ ಕೈಗಳನ್ನು ಸೇರಿದೆ. ಈ ಹೆಚ್ಚುವರಿ ಉಳಿತಾಯಗಳು ಖಾಸಗಿ ವ್ಯಕ್ತಿಗಳು ಸಾಧಿಸಿದ ಯಾವುದೋ ಮಹಾತ್ಕಾರ್ಯದ ಕಾರಣದಿಂದ ಸಂಗ್ರಹಗೊಂಡಿದ್ದಲ್ಲ. ಹಾಗಾಗಿ, ಈ ಉಳಿತಾಯಗಳು ಸುಮ್ಮನೆ ಅವರ ತೊಡೆಯ ಮೇಲೆ ಉದುರಿವೆ ಮತ್ತು ಈ ಉಳಿತಾಯಗಳು ಖಾಸಗಿ ಸಂಪತ್ತಿಗೆ ಅಧಿಕವಾಗಿ ಸೇರ್ಪಡೆಗೊಂಡಿವೆ. ಅಂದರೆ, ಶ್ರೀಮಂತರ ಸಂಪತ್ತು ವೃದ್ಧಿಸಿತು. ಏಕೆಂದರೆ, ದುಡಿಯುವ ಜನರು ತಾವು ಗಳಿಸುವ ಹಣವನ್ನು ಪೂರ್ಣವಾಗಿ ಖರ್ಚು ಮಾಡುತ್ತಾರೆ ಅವರು ಉಳಿತಾಯ ಮಾಡಲು ತಿಣುಕಾಡಬೇಕಾಗುತ್ತದೆ. ಒಂದು ವೇಳೆ ಈ 100 ರೂ.ಗಳ ಮೇಲೆ (ಅಂದರೆ ಶ್ರೀಮಂತರ ವೃದ್ಧಿಸಿದ ಸಂಪತ್ತಿನ ಮೇಲೆ) ತೆರಿಗೆ ವಿಧಿಸಿದರೆ, ಶ್ರೀಮಂತರ ಸಂಪತ್ತು ಆರಂಭದಲ್ಲಿ ಎಷ್ಟಿತ್ತೋ ಅಷ್ಟರಲ್ಲೇ ಉಳಿಯುತ್ತದೆ, ಯಾವ ರೀತಿಯಲ್ಲೂ ಇಳಿಕೆಯಾಗುವುದಿಲ್ಲ.

ವಿತ್ತೀಯ ಕೊರತೆಯ ಬದಲಿಗೆ ಸಾರ್ವಜನಿಕ ವಲಯದ ಆಸ್ತಿಗಳು ಖಾಸಗಿ ಕೈಗಳಿಗೆ ಸೇರಿದಾಗಲೂ ಇದೇ ಪರಿಣಾಮ ಉಂಟಾಗುತ್ತದೆ. ಅಂದರೆ, ಹೆಚ್ಚುವರಿ ಸಂಪತ್ತನ್ನು ಶ್ರೀಮಂತರಿಗೆ ಬಿಟ್ಟಿಯಾಗಿ ಹಸ್ತಾಂತರಿಸಿದಂತಾಗುತ್ತದೆ. ಶ್ರೀಮಂತರು ಇನ್ನೂ ಹೆಚ್ಚು ಶ್ರೀಮಂತರಾಗುತ್ತಾರೆ. ಮತ್ತು ಸಂಪತ್ತಿನ ಅಸಮಾನತೆಯನ್ನು ಉಲ್ಬಣಗೊಳಿಸುತ್ತಾರೆ. ಒಂದು ವೇಳೆ ಈ 100 ರೂ.ಗಳ ಮೇಲೆ (ಅಂದರೆ ಶ್ರೀಮಂತರ ವೃದ್ಧಿಸಿದ ಸಂಪತ್ತಿನ ಮೇಲೆ) ತೆರಿಗೆ ವಿಧಿಸಿದ್ದರೆ ಸಂಪತ್ತಿನ ಅಸಮಾನತೆಗಳು ಉಲ್ಬಣಗೊಳ್ಳುವುದನ್ನು ತಪ್ಪಿಸಬಹುದಿತ್ತು. ವಾಸ್ತವವಾಗಿ ಹೇಳುವುದಾದರೆ, ಬಾಂಡ್‌ಗಳನ್ನು ಮಾರಾಟ ಮಾಡುವುದಕ್ಕಿಂತ ಸಾರ್ವಜನಿಕ ವಲಯದ ಸ್ವತ್ತುಗಳನ್ನು ಮಾರುವ ಕ್ರಮವು ಅಸಮಾನತೆಯನ್ನು ಹೆಚ್ಚು ಉಲ್ಬಣಗೊಳಿಸುತ್ತದೆ. ಏಕೆಂದರೆ, ಸರ್ಕಾರದ ಸ್ವತ್ತುಗಳು ಬೇಕಾಬಿಟ್ಟಿ ಅಗ್ಗ ಬೆಲೆಗಳಲ್ಲಿ (ಬಿಸಾಕಿದ ವಸ್ತುಗಳ ಬೆಲೆಗಳಲ್ಲಿ), ಮಾರಾಟವಾಗುತ್ತವೆ.

ಸಂಪತ್ತಿನ ತೀವ್ರ ಸ್ವರೂಪದ ಅಸಮಾನತೆಗಳಿಂದ ಈಗಾಗಲೇ ನಲುಗಿರುವ ಮೂರನೇ ಜಗತ್ತಿನ ದೇಶದ ಸರ್ಕಾರವೊಂದು ತನ್ನ ಖರ್ಚು ವೆಚ್ಚಗಳಿಗೆ ಹಣ ಹೊಂದಿಸಿಕೊಳ್ಳುವ ಸಲುವಾಗಿ ಸಂಪತ್ತಿನ ಮೇಲೆ ತೆರಿಗೆಯನ್ನು ವಿಧಿಸುವ ಬದಲು ಸಾರ್ವಜನಿಕ ಆಸ್ತಿಗಳನ್ನು ಮಾರುವ ಮೂಲಕ ಅಸಮಾನತೆಗಳನ್ನು ಉಲ್ಬಣಗೊಳಿಸುವುದು ಒಂದು ನಾಚಿಕೆಗೇಡಿನ ಸಂಗತಿ. ಒಂದು ವೇಳೆ ಸಂಪತ್ತಿನ ತೆರಿಗೆಯನ್ನು ಹೇರುವ ಮನಸ್ಸಿಲ್ಲದಿದ್ದರೆ, ಸರ್ಕಾರವು ಕನಿಷ್ಠ ಪಕ್ಷ ಲಾಭದ ಮೇಲಿನ ತೆರಿಗೆಯ ದರವನ್ನಾದರೂ ಹೆಚ್ಚಿಸಬಹುದಿತ್ತು. ಈ ಕ್ರಮವೂ ಸಹ ಸಂಪತ್ತಿನ ಅಸಮಾನತೆಯನ್ನು ತಡೆಹಿಡಿಯುತ್ತದೆ.

ಲಾಭದ ಮೇಲಿನ ತೆರಿಗೆಯ ದರವನ್ನು ಹೆಚ್ಚಿಸಲು ಸರ್ಕಾರವು ಅಸಮರ್ಥವಾಗಿದ್ದಲ್ಲಿ, ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ನಡೆಸಿ, ಬಂಡವಾಳಗಾರರು ಮತ್ತು ಅವರ ಅವಲಂಬಿಗಳು ಬಳಸುವ ಸುಖಭೋಗ-ವಿಲಾಸಿ ಸರಕುಗಳ ಮೇಲಿನ ಜಿಎಸ್‌ಟಿ ದರವನ್ನಾದರೂ ಏರಿಸಬಹುದಿತ್ತು. ಈ ಕ್ರಮದಿಂದಾಗಿ, ನಿಜವಾದ ಅರ್ಥದಲ್ಲಿ (ಅಂದರೆ, ಬೆಲೆ ಸೂಚ್ಯಂಕದ ಹೋಲಿಕೆಯಲ್ಲಿ), ಲಾಭ ಸಂಪಾದನೆಯಲ್ಲಿ ಬದಲಾವಣೆ ಉಂಟಾಗುತ್ತಿರಲಿಲ್ಲ. ಮತ್ತು, ಖರ್ಚು ವೆಚ್ಚಗಳಿಗೆ ಹಣವನ್ನೂ ಹೊಂದಿಸಿಕೊಳ್ಳಬಹುದಿತ್ತು. ಅಷ್ಟೇ ಅಲ್ಲ, ಬಂಡವಾಳಿಗರಿಗೆ ವಿತ್ತೀಯ ಕೊರತೆಯ ಅಥವಾ ಸಾರ್ವಜನಿಕ ಆಸ್ತಿಗಳ ಮಾರಾಟದ ಮೂಲಕ ಲಭ್ಯವಾಗುತ್ತಿದ್ದ ಅಧಿಕ ಸಂಪತ್ತು ದೊರೆಯುತ್ತಿರಲಿಲ್ಲ. ಆದ್ದರಿಂದ, ಸಾರ್ವಜನಿಕ ವಲಯದ ಆಸ್ತಿಗಳನ್ನು ಖಾಸಗಿಯವರಿಗೆ ಮಾರುವ ಮೋದಿ ಸರ್ಕಾರದ ಉದ್ದೇಶವು, ದೇಶದ ದೃಷ್ಟಿಯಿಂದ ಒಂದು ಬೃಹತ್ ಪ್ರಮಾಣವಷ್ಟೇ ಅಲ್ಲ, ಸರ್ಕಾರವು ಹೇಳಿಕೊಳ್ಳುವ ದೃಷ್ಟಿಯಿಂದ ನೋಡಿದರೂ ಸಹ ಅದರಲ್ಲಿ ಆರ್ಥಿಕ ವಿವೇಚನೆಯೇ ಕಾಣದು.

ಅನು: ಕೆ.ಎಂ. ನಾಗರಾಜ್

Donate Janashakthi Media

Leave a Reply

Your email address will not be published. Required fields are marked *