ಚಿತ್ರದುರ್ಗ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅಕ್ಕಿ ಕೊಡದಿದ್ದರೇನಂತೆ, ರಾಜ್ಯದ ರೈತರು ಬೆಳೆದಿರುವ ರಾಗಿ ಮತ್ತು ಜೋಳವನ್ನು ಖರೀದಿಸಿ ಪಡಿತರ ವ್ಯವಸ್ಥೆಯಲ್ಲಿ ವಿತರಣೆ ಮಾಡುವಂತೆ ರೈತ ಸಂಘದ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ರೈತ ವಿರೋಧಿ ಕರಾಳ ಕಾಯಿದೆಗಳನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಎಂ.ಶಂಕರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಪೂರ್ವದಲ್ಲಿ ಘೋಷಿಸಿದಂತೆ ಹತ್ತು ಕೆ.ಜಿ ಅಕ್ಕಿ ಉಚಿತವಾಗಿ ನೀಡಲು ಮುಂದಾಗಿದ್ದಾರೆ. ಕೇಂದ್ರ ಸರ್ಕಾರ ಅಕ್ಕಿ ನೀಡುವುದಿಲ್ಲ ಎಂದು ಯೋಜನೆಗೆ ಅಡ್ಡಗಾಲಾಗಿದೆ ಎಂದು ಸ್ವತಃ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದಕ್ಕೆ ಸಿಎಂ ಧೃತಿಗೆಡುವ ಅಗತ್ಯವಿಲ್ಲ. ಪರ್ಯಾಯವಾಗಿ ಆಲೋಚಿಸಬೇಕಿದೆ. ಹಳೇ ಮೈಸೂರು ಭಾಗದ ಜನ ರಾಗಿ ಹೆಚ್ಚಾಗಿ ಬಳಸುವುದರಿಂದ ಅಕ್ಕಿ ಬದಲು ರಾಗಿ ಹಾಗೂ ಕಿತ್ತೂರು ಕರ್ನಾಟಕ, ಹೈದರಾಬಾದ್ ಕರ್ನಾಟಕದ ಜನ ಜೋಳ ಬಳಸುವುದರಿಂದ ಅಕ್ಕಿಯ ಬದಲು ಅಲ್ಲಿ ಜೋಳ ವಿತರಣೆ ಮಾಡಬಹುದೆಂದರು.
ರೈತ ವಿರೋಧಿ ಕಾಯಿದೆಯನ್ನು ರಾಜ್ಯ ಸರ್ಕಾರ ಕೂಡಲೆ ಹಿಂದಕ್ಕೆ ಪಡೆಯುವತನಕ ರೈತರಿಗೆ ಸಮಾಧಾನವಿರುವುದಿಲ್ಲ. ಕೇಂದ್ರ ಸರ್ಕಾರ ಮೂರು ಕಾಯಿದೆಗಳನ್ನು ಹಿಂದಕ್ಕೆ ಪಡೆದ ಮೇಲೆ ರಾಜ್ಯ ಸರ್ಕಾರ ಹಿಂದಕ್ಕೆ ಪಡೆಯುವುದಕ್ಕೇಕೆ ಮೀನಾಮೇಷ ಎಣಿಸುತ್ತಿದೆ. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆಯಿಂದ ಸರ್ಕಾರ ಹಿಂದಕ್ಕೆ ಸರಿಯಬೇಕು. ಚಿತ್ರದುರ್ಗ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಕೊಬ್ಬರಿ ಬೆಳೆಗಾರರು ಸಂಕಷ್ಠದಲ್ಲಿದ್ದಾರೆ. ಸರ್ಕಾರ ನೆರವಿಗೆ ಧಾವಿಸಬೇಕು ಎಂದರು.
ಇದನ್ನೂ ಓದಿ : ಅನ್ನಭಾಗ್ಯ ಅಕ್ಕಿಗೆ ಕೇಂದ್ರ ಸರ್ಕಾರ ಕೊಕ್ಕೆ – ಸಿದ್ದರಾಮಯ್ಯ
ಸಿಎಂಗೆ ಪತ್ರ ಬರೆದ ಕುರುಬೂರು ಶಾಂತಕುಮಾರ್ : ರಾಜ್ಯದ ಜನರ ತೆರಿಗೆ ಹಣವನ್ನು ಕೇಂದ್ರ ಸರಕಾರಕ್ಕೆ ಕೊಡುವ ಬದಲು ರಾಜ್ಯದ ರೈತರಿಂದಲೆ ನೇರವಾಗಿ ಭತ್ತ, ರಾಗಿ, ಜೋಳ ಖರೀದಿ ಮಾಡಿ ಅದನ್ನು ಬಡವರಿಗೆ ಅನ್ನಭಾಗ್ಯ ಯೋಜನೆಯಲ್ಲಿ ವಿತರಿಸುವಂತೆ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.
ಗುರುವಾರ ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಅವರು, ಇದರಿಂದಾಗಿ ಖಂಡಿತವಾಗಿಯೂ ರಾಜ್ಯದ ರೈತರಿಗೂ ಅನುಕೂಲವಾಗುತ್ತದೆ. ಬಡವರಿಗೂ ಅನುಕೂಲವಾಗುತ್ತದೆ. ಈ ದಿಕ್ಕಿನಲ್ಲಿ ತಾವು ಚಿಂತನೆ ನಡೆಸುವುದು ಬಹಳ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.
ಬಡವರಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಯೋಜನೆ ಮಾಡಿದ್ದೀರಿ. ಅದರ ಉತ್ಪಾದನೆಗೆ ತಗಲುವ ವೆಚ್ಚ ಎಷ್ಟು ? ಸರಕಾರದಿಂದ ಆಗುವ ಖರ್ಚು ಎಷ್ಟು? ಲೆಕ್ಕ ಹಾಕಬೇಕು. ಅದರ ಬದಲು ಸಣ್ಣ ಮಟ್ಟದ ಒಂದು ಕೆವಿ ಸಾಮಥ್ರ್ಯದ ಸೋಲಾರ್ ವಿದ್ಯುತ್ ಯೋಜನೆಯನ್ನು ಪ್ರತಿ ಮನೆಗೆ ಕಲ್ಪಿಸಿದರೆ ಶಾಶ್ವತವಾದ ಯೋಜನೆಯಾಗುತ್ತದೆ. ಇದರಿಂದ ಪರಿಸರ ಸಂರಕ್ಷಣೆಯಾಗುತ್ತದೆ. ಸರಕಾರಕ್ಕೂ ಪ್ರತಿ ವರ್ಷ ಹೊರೆಯಾಗುವುದು ಕಡಿಮೆಯಾಗುತ್ತದೆ. ಈ ಬಗ್ಗೆಯು ತಾವು ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ಅವರು ತಿಳಿಸಿದ್ದಾರೆ.