ನೋಟು ರದ್ದತಿಯೂ, ಕಪ್ಪು ಹಣವೂ ಮತ್ತು ಅನೌಪಚಾರಿಕ ವಲಯದ ನಾಶದ ಹೆಮ್ಮೆಯೂ

2016ರ ನವೆಂಬರ್ 8ರಂದು 500 ರೂ. ಮತ್ತು 1000 ರೂ. ನೋಟುಗಳನ್ನು ರದ್ದುಪಡಿಸಿದ ಕ್ರಮವು ಕಪ್ಪು ಹಣವನ್ನು (ಅಂದರೆ, ತೆರಿಗೆ ಲೆಕ್ಕಕ್ಕೆ ಸಿಗದ ಹಣವನ್ನು) ನಿಗ್ರಹಿಸುವಲ್ಲಿ ಯಶಸ್ವಿಯಾಗಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ನೋಟು ರದ್ದತಿಯಾಗಿ ಅದಾಗಲೇ ನಾಲ್ಕು ವರ್ಷಗಳು ಕಳೆದಿರುವುದರಿಂದ ಇಂತಹ ಒಂದು ಪೊಳ್ಳು ಹೇಳಿಕೆಯನ್ನು ನೀಡಿ ಬಚಾವಾಗಬಹುದು ಎಂದು ಅವರು ನಂಬಿರುವಂತೆ ಕಾಣುತ್ತದೆ. ಅದರ ಸತ್ಯ ಏನು ಎಂಬುದು ದೇಶದ ಬಹುತೇಕ ಜನರಿಗೆ ಗೊತ್ತಿದೆ.

ನೋಟು ರದ್ದತಿಯ ಮೂಲಕ ಕಪ್ಪು ಹಣವನ್ನು ನಿಗ್ರಹಿಸಲಾಗಿದೆ ಎಂದಾಗ, ಅದನ್ನು ಸಾಧಿಸಿದ ವ್ಯವಸ್ಥೆ ಇದ್ದಿರಲೇಬೇಕು ಮತ್ತು ಆ ವ್ಯವಸ್ಥೆಯು ಈ ಕಾರ್ಯವನ್ನು ಹೇಗೆ ಸಾಧಿಸಿತು ಎಂಬುದು ಕಾಣುವಂತಿರಬೇಕು. ಇಲ್ಲದಿದ್ದರೆ, 2016ರ ಒಲಿಂಪಿಕ್ ಕ್ರೀಡಾಕೂಟವು ಭಾರತದಲ್ಲಿ ಕಪ್ಪು ಹಣವನ್ನು ನಿಗ್ರಹಿಸಿತು ಎಂದು ಹೇಳುವುದಕ್ಕೂ ಈ ಹೇಳಿಕೆಗೂ ಏನೂ ವ್ಯತ್ಯಾಸವೇ ಇರುವುದಿಲ್ಲ. ಅಲ್ಲದೆ, ಕಪ್ಪುಹಣವನ್ನು ನಿಗ್ರಹಿಸಲಾಯಿತು ಎಂಬ ಸಂಗತಿಯನ್ನೇ ಸರ್ಕಾರವು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ. ಆದುದರಿಂದ, ಅದನ್ನು ಸಾಧಿಸಿದ ನಿರ್ದಿಷ್ಟ ಕಾರ್ಯವಿಧಾನ ಯಾವುದು ಎಂಬುದನ್ನು ಸ್ಪಷ್ಟಪಡಿಸಿದರೆ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ನಮಗೆ ಸಾಧ್ಯವಾಗುತ್ತದೆ.

ನೋಟುಗಳನ್ನು ರದ್ದುಪಡಿಸಿದ ಸಂದರ್ಭದಲ್ಲಿ ಮೋದಿ ಸರ್ಕಾರವು ಒಂದು ವ್ಯವಸ್ಥೆಯನ್ನು ಸ್ಪಷ್ಟಪಡಿಸಿತ್ತು. ಈ ವ್ಯವಸ್ಥೆಯ ಪ್ರಕಾರ 500 ರೂ. ಮತ್ತು 1000 ರೂ. ನೋಟುಗಳನ್ನು ಹೊಂದಿದ್ದವರು ಅವುಗಳನ್ನು ಹೊಸ ನೋಟುಗಳೊಂದಿಗೆ ಬದಲಾಯಿಸಿಕೊಳ್ಳಲು ಬ್ಯಾಂಕಿಗೆ/ಬಯಲಿಗೆ ಬರುತ್ತಾರೆ. ಆ ಸಮಯದಲ್ಲಿ ಅವರು ಅಷ್ಟೊಂದು ದೊಡ್ಡ ಮೊತ್ತದ ಹಣವನ್ನು ಇಟ್ಟುಕೊಂಡಿದ್ದರ ಬಗ್ಗೆ ವಿವರಣೆ ಕೊಡಲೇಬೇಕಾಗುತ್ತದೆ. ಇಲ್ಲವೇ, ತಮ್ಮ ಕಪ್ಪು ಹಣ ಬಹಿರಂಗಗೊಳ್ಳುವುದನ್ನು ತಪ್ಪಿಸಿಕೊಳ್ಳಲು ಅವರು ತಮ್ಮಲ್ಲಿರುವ ಕರೆನ್ಸಿ ನೋಟುಗಳನ್ನು “ಸಾಯಲು ಬಿಡಬೇಕು. ಅಂದರೆ, ಹಣ ಕಳೆದುಕೊಳ್ಳುತ್ತಾರೆ. ಹಾಗಾಗಿ, ನೋಟು ರದ್ದತಿಯು ಕಪ್ಪು ಹಣದ ವಿರುದ್ಧ ಒಂದು ಹೊಡೆತವಾಗುತ್ತದೆ.

ವ್ಯಂಗ್ಯಚಿತ್ರ ಕೃಪೆ: ಸತೀಶ ಆಚಾರ್ಯ

ಚಲಾವಣೆಯಲ್ಲಿರುವ ನೋಟುಗಳು ಭಾರತೀಯ ರಿಸರ್ವ್ ಬ್ಯಾಂಕಿನ ಹೊಣೆಗಾರಿಕೆಯಾಗುತ್ತವೆ. ಹಾಗಾಗಿ, ಅವುಗಳ ಒಂದು ಭಾಗವು “ಸತ್ತರೆ ಮತ್ತು ತತ್ಸಂಬಂಧವಾದ ರಿಸರ್ವ್ ಬ್ಯಾಂಕಿನ ಆಸ್ತಿಗಳು ಬದಲಾಗದೆ ಉಳಿದ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕ್, ಇಂಥಹ ಸತ್ತ ಹಳೆಯ ನೋಟುಗಳಿಗೆ ಸಮನಾದ ಮೌಲ್ಯದ ಹೊಸ ನೋಟುಗಳನ್ನು ಮುದ್ರಿಸಿ ಅವುಗಳನ್ನು ಸರ್ಕಾರಕ್ಕೆ ಒಪ್ಪಿಸಬಹುದು ಮತ್ತು ಸರ್ಕಾರವು ಈ ಹಣವನ್ನು ಯಾವ ಉದ್ದೇಶಕ್ಕೆ ಬೇಕಾದರೂ ಬಳಸಬಹುದು. ಹಾಗಾಗಿ, ನೋಟು ರದ್ದತಿಯಿಂದಾಗಿ, ಸತ್ತ ನೋಟುಗಳ ಮೌಲ್ಯಕ್ಕೆ ಸಮನಾಗಿ ದೊರೆಯುವ ಸುಮಾರು 3 ರಿಂದ 4 ಲಕ್ಷ ಕೋಟಿ ರೂಪಾಯಿ ಹಣವನ್ನು ಬಡ ಮನೆ-ಮಂದಿಗೆ ಹಂಚಲೂಬಹುದು ಮತ್ತು ಕಪ್ಪು ಹಣವನ್ನು ನಿಗ್ರಹಿಸಿದಂತೆಯೂ ಆಗುತ್ತದೆ ಎಂಬ ಅಂದಾಜಿನ ಲೆಕ್ಕದಲ್ಲಿ ಬಿಜೆಪಿಯ ಮುಖ ರಂಗೇರಿತ್ತು.

ಹೊಸ ನೋಟುಗಳೊಂದಿಗೆ ಬದಲಾಯಿಸಿಕೊಳ್ಳಲು ಹೊರ ಬರದ ಹಳೆಯ ನೋಟುಗಳನ್ನು ಈ ರೀತಿಯಲ್ಲಿ ಕೊಲ್ಲುವ ಉದ್ದೇಶ ಹೊಂದಿದ್ದ ನೋಟು ರದ್ದತಿಯು ಕಪ್ಪು ಹಣದ ವಿರುದ್ಧದ ಕಾರ್ಯಾಚರಣೆ ಎಂದೇ ಹೇಳಲಾಗಿತ್ತು. ಆದರೆ, ರದ್ದು ಮಾಡಿದ ನೋಟುಗಳ ಪೈಕಿ ಶೇ.99.3ರಷ್ಟು ನೋಟುಗಳು ವಿನಿಮಯಗೊಂಡ ಅಂಶವು ಕಪ್ಪು ಹಣದ ವಿರುದ್ಧ ಜರುಗಿಸಿದ ನೋಟು ರದ್ದತಿಯು ಒಂದು ಭಾರೀ ಅಧ್ವಾನದ ಕ್ರಮವಾಗಿ ಪರಿಣಮಿಸಿತು ಎಂಬುದು ಜಗಜ್ಜಾಹೀರಾಗಿದೆ. ಮತ್ತು, ಅದೇ ಸಮಯದಲ್ಲಿ ಈ ಅಧ್ವಾನದ ಕ್ರಮವು ದೇಶದ ಶೇ.85ರಷ್ಟು ಉದ್ಯೋಗ ಮತ್ತು ಜಿಡಿಪಿಯ ಶೇ.45ರಷ್ಟು ಭಾಗ ಪಾಲು ಹೊಂದಿರುವ ರೈತರ ಕೃಷಿಯೂ ಸೇರಿದಂತೆ ಅನೌಪಚಾರಿಕ ವಲಯದ ಮೇಲೆ ಬಲವಾದ ಹೊಡೆತ ಕೊಟ್ಟಿತು.

ಹೊಸ ನೋಟುಗಳೊಂದಿಗೆ ಬದಲಾಯಿಸಿಕೊಳ್ಳಲು ಹೊರಬರದ ಹಳೆಯ ನೋಟುಗಳನ್ನು ಕೊಲ್ಲುವ ಉದ್ದೇಶ ಹೊಂದಿದ್ದ ನೋಟು ರದ್ದತಿಯು ಕಪ್ಪು ಹಣದ ವಿರುದ್ಧದ ಕಾರ್ಯಾಚರಣೆ ಎಂದೇ ಹೇಳಲಾಗಿತ್ತು. ಆದರೆ, ರದ್ದುಮಾಡಿದ ನೋಟುಗಳ ಪೈಕಿ ಶೇ.೯೯.೩ರಷ್ಟು ನೋಟುಗಳು ವಿನಿಮಯಗೊಂಡ ಅಂಶವು ಇದನ್ನು ಒಂದು ಭಾರೀ ಅಧ್ವಾನದ ಕ್ರಮವಾಗಿ ದಾಖಲಿಸಿದೆ. ಅದೇ ಸಮಯದಲ್ಲಿ ಅಧ್ವಾನದ ಕ್ರಮವು ದೇಶದ ಶೇ.೮೫ರಷ್ಟು ಉದ್ಯೋಗ ಮತ್ತು ಜಿಡಿಪಿಯ ಶೇ.೪೫ರಷ್ಟು ಭಾಗ ಪಾಲು ಹೊಂದಿರುವ ರೈತರ ಕೃಷಿಯೂ ಸೇರಿದಂತೆ ಅನೌಪಚಾರಿಕ ವಲಯದ ಮೇಲೆ ಬಲವಾದ ಹೊಡೆತ ಕೊಟ್ಟಿತು ಎಂಬುದು ಜಗಜ್ಜಾಹೀರಾಗಿದೆ. ಆದರೆ ಮೋದಿಯವರು ಮತ್ತು ಅವರ ಆರ್ಥಿಕ ಸಲಹೆಗಾರರು ಅನೌಪಚಾರಿಕ ವಲಯದ ವಿನಾಶದ ಬಗ್ಗೆಯೇ ಹೆಮ್ಮೆ ಪಡುತ್ತಾರೆ!

ಡೊನಾಲ್ಡ್ ಟ್ರಂಪ್ ಅವರಂತೆ ಮೋದಿ ಸಹ ಸೋಲನ್ನು ಒಪ್ಪಿಕೊಳ್ಳುವವರಲ್ಲ. ಕಪ್ಪು ಹಣವನ್ನು ನಿಗ್ರಹಿಸಲಾಗಿದೆ ಎಂದು ಈಗ ಪದೇಪದೇ ಮೋದಿ ಹೇಳುತ್ತಾರೆ. ಅಷ್ಟೇ ಅಲ್ಲ, ಅನೌಪಚಾರಿಕ ವಲಯದ ವಿನಾಶದ ಬಗ್ಗೆಯೂ ಹೆಮ್ಮೆ ಪಡುತ್ತಾರೆ. ಈ ಸಂಬಂಧವಾಗಿ ಕೆ.ಸುಬ್ರಮಣ್ಯಂ (ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ) ಅವರು ಎಕನಾಮಿಕ್ ಟೈಮ್ಸ್ (ನವೆಂಬರ್ 9, 2020) ಪತ್ರಿಕೆಯಲ್ಲಿ ಬರೆದ ತಮ್ಮ ಲೇಖನದಲ್ಲಿ ಮೋದಿಯವರ ಸಮರ್ಥನೆಗೆ ಧುಮುಕಿದ್ದಾರೆ.

ಈ ಇಬ್ಬರೂ ಬಳಸುವ “ಔಪಚಾರಿಕೀಕರಣ” (formalisation) ಶಬ್ದವು ಏನನ್ನು ಅರ್ಥೈಸುತ್ತದೆ ಎಂದರೆ, ನೋಟು ರದ್ದತಿಯ ಪರಿಣಾಮವಾಗಿ “ಅನೌಪಚಾರಿಕ” (informal) ಚಟುವಟಿಕೆಗಳನ್ನು “ಔಪಚಾರಿಕ” (formal) ಚಟುವಟಿಕೆಗಳು ಪಲ್ಲಟಗೊಳಿಸಿವೆ. ಈ ವಿದ್ಯಮಾನವು ಅವರ ಸಾಧನೆಯಾಗುವುದರ ಬದಲು ಒಂದು ಸಮಸ್ಯೆಯೇ ಆಗಿ ಪರಿಣಮಿಸಿದೆ. ಅವರು ಹೇಳುವಂತೆ ಔಪಚಾರಿಕೀಕರಣವು ಒಂದು ಒಳ್ಳೆಯ ವಿದ್ಯಮಾನ ಎನ್ನುವುದಕ್ಕಿಂತಲೂ ಹೆಚ್ಚಾಗಿ, ಜನರಿಗೆ ಒಂದು ಅನಾಹುತವಾಗಿ ಪರಿಣಮಿಸಿದೆ. ಏಕೆಂದರೆ, ಅದು ನಿರುದ್ಯೋಗವನ್ನು ಸೃಷ್ಟಿಸಿದೆ. ಅನೌಪಚಾರಿಕ ವಲಯದ ಚಟುವಟಿಕೆಗಳ ಔಪಚಾರಿಕೀಕರಣವು, ಒಂದು ಸುಧಾರಣೆ ಎಂದು ಹೇಳಲಡ್ಡಿಯಿಲ್ಲ, ಉದ್ಯೋಗಗಳ ಸಂಖ್ಯೆ ಕಡಿತಗೊಳ್ಳದಿದ್ದರೆ. ಆದರೆ, ಇಲ್ಲಿ ಉದ್ಯೋಗಗಳು ಕಡಿತಗೊಂಡಿವೆ. ಈ ಕಾರಣದಿಂದಾಗಿಯೇ ಮೋದಿ ಅವರ ಗುಂಪಿನಿಂದ ಹೊರಗಿರುವ ಪ್ರತಿಯೊಬ್ಬರೂ ಅಷ್ಟೊಂದು ಆತಂಕಗೊಂಡಿರುವುದು.

ಈ ಉದಾಹರಣೆಯನ್ನು ನೋಡಿ. ಅನೌಪಚಾರಿಕ ವಲಯದ ಲಕ್ಷಾಂತರ ಸಣ್ಣಸಣ್ಣ ವ್ಯಾಪಾರಿಗಳನ್ನು ವಾಲ್‌ಮಾರ್ಟ್ ಎಂಬ ದೈತ್ಯ ಸಂಸ್ಥೆಯು ನುಂಗಿ ಹಾಕುತ್ತದೆ. ಅಂದರೆ, ಚಿಲ್ಲರೆ ವ್ಯಾಪಾರವು ಬೃಹತ್ ಸಂಸ್ಥೆಗಳಿಗೆ ಪಲ್ಲಟವಾಗುವಂತೆ ನೋಡಿಕೊಂಡಾಗ, ಅನೌಪಚಾರಿಕ ವಲಯದ ಚಟುವಟಿಕೆಗಳನ್ನು ಔಪಚಾರಿಕ ವಲಯಕ್ಕೆ ತಂದಂತಾಗುತ್ತದೆ. ಸಣ್ಣ ವ್ಯಾಪಾರಿಗಳು ಮಾಡುವ ನಗದು ವ್ಯವಹಾರಗಳಿಗೆ ಹೋಲಿಸಿದರೆ ವಾಲ್‌ಮಾರ್ಟ್ ನ ವಹಿವಾಟಿನಲ್ಲಿ ಹೆಚ್ಚು ಕ್ರೆಡಿಟ್ ಕಾರ್ಡ್ ಪಾವತಿಗಳಿರುತ್ತವೆ. ಲೆಕ್ಕಪುಸ್ತಕಗಳನ್ನು ವಾಲ್‌ಮಾರ್ಟ್ ಹೆಚ್ಚು ವ್ಯವಸ್ಥಿತವಾಗಿ ಇಟ್ಟುಕೊಳ್ಳುತ್ತದೆ. ಹಾಗಾಗಿ, ತೆರಿಗೆ ವಂಚನೆಯ ಸಾಧ್ಯತೆ ಕಡಿಮೆ (ಇದು ನಿಜವೆಂದೇ ಭಾವಿಸೋಣ). ಈ ಬದಲಾವಣೆಯನ್ನೇ ಔಪಚಾರಿಕ ವಲಯದ ಒಂದು ಪ್ರಯೋಜನ ಎಂದು ತಿಳಿಯಲಾಗಿದೆ. ಅದೇನೇ ಇರಲಿ, ವಾಲ್‌ಮಾರ್ಟ್ ಸೃಷ್ಟಿಸುವ ಉದ್ಯೋಗಗಳು, ಅದು ನಾಶಪಡಿಸಿದ ಉದ್ಯೋಗಗಳ ಸಂಖ್ಯೆಗೆ ಸಮನಾಗಿದ್ದರೆ ಮಾತ್ರ ಈ ಬದಲಾವಣೆಗೆ ಅರ್ಥವಿರುತ್ತದೆ. ಒಂದು ವೇಳೆ ವಾಲ್‌ಮಾರ್ಟ್ ನಿವ್ವಳ ನಿರುದ್ಯೋಗ ಸೃಷ್ಟಿಗೆ ಕಾರಣವಾದರೆ, ಈ ಔಪಚಾರಿಕೀಕರಣವು ಒಂದು ಅನಾಹುತವೇ ಸರಿ. ಈ ಸರಳ ಸತ್ಯವನ್ನು ಗುರುತಿಸದ ಮೋದಿ ಸರ್ಕಾರವು, ಎಲ್ಲರೂ ಪರಿಗಣಿಸುವ ಈ ದುರಂತವನ್ನು ತನ್ನ ಸಾಧನೆ ಎಂದೇ ಬಗೆಯುತ್ತದೆ. ಅನೌಪಚಾರಿಕ ಉದ್ಯೋಗಗಳನ್ನು ಔಪಚಾರಿಕ ಉದ್ಯೋಗಗಳು ಬದಲಿಸಿವೆ ಎಂಬುದಾಗಿ ಮುಖ್ಯ ಆರ್ಥಿಕ ಸಲಹೆಗಾರರು ಮಾತನಾಡುತ್ತಾರೆ. 100 ಅನೌಪಚಾರಿಕ ಉದ್ಯೋಗಗಳನ್ನು ಕೇವಲ 50 ಔಪಚಾರಿಕ ಉದ್ಯೋಗಗಳು ಬದಲಾಯಿಸಿವೆ ಎಂಬ ಅಂಶದ ಬಗ್ಗೆ ಅವರು ಮೌನವಹಿಸುತ್ತಾರೆ.

ದೇಶಕ್ಕೆ ಸ್ವಾತಂತ್ರ್ಯ ಬಂದ ಸಮಯದಿಂದಲೂ, ಅನೌಪಚಾರಿಕ ವಲಯದ ಉದ್ಯೋಗಗಳನ್ನು ರಕ್ಷಿಸುವ ಬಗ್ಗೆ ಒಮ್ಮತವಿತ್ತು, ಉದ್ಯೋಗ ರಕ್ಷಣೆಯ ಉಲ್ಲಂಘನೆಗಳಿದ್ದರೂ ಸಹ. ಉದ್ಯೋಗ ರಕ್ಷಣೆಯ ಸಲುವಾಗಿಯೇ ಕೈ ಮಗ್ಗದ ವಸ್ತ್ರಗಳ ಉತ್ಪಾದನೆಗೆ ಮೀಸಲಾತಿ ಒದಗಿಸಲಾಗಿತ್ತು. ಕರಕುಶಲ ವಸ್ತುಗಳ ಉತ್ಪಾದನೆಯನ್ನು ಮತ್ತು ವಿಕೇಂದ್ರೀಕರಣ ನೀತಿಯನ್ನು ಗಾಂಧೀಜಿ ಪ್ರೋತ್ಸಾಹಿಸಿದ್ದರು. ಬಂಡವಾಳ ಹೂಡಿಕೆಯನ್ನು ಉತ್ಪಾದನಾ ಸಾಮಗ್ರಿಗಳ ತಯಾರಿಕೆಯತ್ತ ತಿರುಗಿಸಿದಾಗ ಅನಿವಾರ್ಯವಾಗಿ ಉದ್ಭವಿಸುವ ಗ್ರಾಹಕ ಸರಕುಗಳ ಕೊರತೆಯನ್ನು ನೀಗುವ ಸಲುವಾಗಿ ವಿಕೇಂದ್ರೀಕೃತ ವಲಯವನ್ನು ಬೆಂಬಲಿಸುವ ನೀತಿಯನ್ನು ಯೋಜನಾ ಆಯೋಗದ ಅಂದಿನ ಸದಸ್ಯರಾಗಿದ್ದ ಪಿ.ಸಿ.ಮಹಾಲನೋಬಿಸ್ ಅವರು ರೂಪಿಸಿದ್ದರು. ಸದಾ ಕಾಲವೂ ವಿಕೇಂದ್ರೀಕೃತ ವಲಯದ ದೃಢ ಸಮರ್ಥಕರಾದ ಎಡಪಂಥೀಯರು ವಾಲ್‌ಮಾರ್ಟ್ ಪ್ರವೇಶವನ್ನು ತೀವ್ರವಾಗಿ ವಿರೋಧಿಸಿದ್ದರು, ಉದ್ಯೋಗಗಳು ನಾಶವಾಗುತ್ತವೆ ಎಂಬ ನೆಲೆಯಲ್ಲಿ.

ವ್ಯಂಗ್ಯಚಿತ್ರ ಕೃಪೆ: ಪಿ.ಮಹಮ್ಮದ್‌

ನಿರುದ್ಯೋಗ ಸೃಷ್ಟಿಸುವ ಔಪಚಾರಿಕತೆಯನ್ನು ಕೊಂಚವೂ ಅಳುಕಿಲ್ಲದೆ ಶ್ಲಾಘಿಸುವ ದೇಶದ ಮೊದಲ ರಾಜಕೀಯ ಪಕ್ಷವೆಂದರೆ, ಬಿಜೆಪಿ. ನೋಟು ರದ್ದತಿ, ಜಿಎಸ್‌ಟಿ ಅಥವಾ ಇತ್ತೀಚೆಗೆ ಅಂಗೀಕಾರಗೊಂಡ ಕೃಷಿ ಕಾಯ್ದೆಗಳ ಮೂಲಕ ಅನೌಪಚಾರಿಕ ವಲಯದ ಮೇಲೆ ನಿರಂತರ ದಾಳಿ ನಡೆಸುವುದೇ ಬಿಜೆಪಿ ಸರ್ಕಾರದ ಮುಖ್ಯ ಲಕ್ಷಣವಾಗಿ ಕಾಣುತ್ತದೆ. ನಿರುದ್ಯೋಗದ ಬಗ್ಗೆ ಸ್ಪಷ್ಟವಾಗಿ ಕಾಣುವ ಅದರ ಕಾಳಜಿಯ ಕೊರತೆಗೆ ಬಹುಶಃ ಆರ್ಥಿಕ ವಿಷಯಗಳ ಬಗ್ಗೆ ಅಜ್ಞಾನವೇ ಕಾರಣ ಎಂದು ವಿವರಿಸಬಹುದೇನೋ. ಆದರೆ, ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರ ಕಾಳಜಿ ಎಷ್ಟು ನಿಗೂಢವೋ ಅಷ್ಟೇ ಕಳವಳಕಾರಿ.

ಔಪಚಾರಿಕರಣವು ಕಪ್ಪುಹಣವನ್ನು ನಿವಾರಿಸುತ್ತದೆ ಎಂಬ ನಿಲುವಿಗೆ ಯಾವುದೇ ಆಧಾರವಿಲ್ಲ. ಈ ಬಗ್ಗೆ ಮಂಡಿಸುವ ವಾದ ಹೀಗಿದೆ: ನಗದು ಹಣದ ಬಳಕೆಯೇ ಕಪ್ಪು ಹಣ ಸೃಷ್ಟಿಯ ಮೂಲ. ನಗದು ಬಳಕೆಯ ಬದಲಾಗಿ ಡಿಜಿಟಲ್ ವರ್ಗಾವಣೆ ಅಥವಾ ಬ್ಯಾಂಕ್ ಮೂಲಕ ವ್ಯವಹಾರ ನಡೆಸಿದರೆ, ತೆರಿಗೆ ಪರಿಶೀಲನೆಯಿಂದ ತಪ್ಪಿಸಿಕೊಳ್ಳುವುದು ಕಷ್ಟವಾಗುತ್ತದೆ. ಹಾಗಾಗಿ, ಕಪ್ಪು ಹಣ ಸೃಷ್ಟಿಯಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಔಪಚಾರಿಕೀಕರಣವು, ನಗದು ಬಳಕೆಯಿಂದ ಡಿಜಿಟಲ್ ಅಥವಾ ಬ್ಯಾಂಕ್ ಮೂಲಕದ ವ್ಯವಹಾರಗಳಿಗೆ ಹೊರಳುವುದಕ್ಕೆ ಸಂಬಂಧಿಸುತ್ತದೆ. ಭಾರತವು ನಗದು-ಕಡಿಮೆ ಆಧಾರಿತವಾಗಿ ಪರಿವರ್ತನೆಯಾಗಿರುವುದೇ ನೋಟು ರದ್ದತಿಯ ಸಾಧನೆ ಎಂದು ಮೋದಿ ಹೊಗಳಿಕೊಳ್ಳುತ್ತಾರೆ.

ಹೆಚ್ಚು ನಗದು ಬಳಕೆಯು ಕಡಿಮೆ ಪಾರದರ್ಶಕವಾಗಿರುವುದರಿಂದ ಕಪ್ಪು ಆರ್ಥಿಕತೆ ಬೆಳೆಯುತ್ತದೆ ಎಂಬ ವಾದಕ್ಕೆ ಯಾವುದೇ ಆಧಾರವಿಲ್ಲ. ಜರ್ಮನಿ ಮತ್ತು ಜಪಾನ್‌ನಂತಹ ಮುಂದುವರಿದ ಬಂಡವಾಳಶಾಹಿ ದೇಶಗಳೂ ಹೆಚ್ಚು ನಗದು ಬಳಕೆ ಮಾಡುತ್ತವೆ. ಆದರೆ, ತುಲನಾತ್ಮಕವಾಗಿ, ಅವುಗಳ ಕಪ್ಪು ಆರ್ಥಿಕತೆಯ ಗಾತ್ರವು ಭಾರತದ ಕಪ್ಪು ಆರ್ಥಿಕತೆಗಿಂತ ದೊಡ್ಡದು ಎಂದು ಹೇಳಲು ಸಾಧ್ಯವಿಲ್ಲ. ಮತ್ತೊಂದೆಡೆ, ನೈಜೀರಿಯಾ ದೇಶದ ನಗದು ಬಳಕೆಯ ಪ್ರಮಾಣವು ಬಹಳ ಕಡಿಮೆ ಇದೆ. ಆದರೂ, ಕಪ್ಪು ಹಣವನ್ನು ನೈಜೀರಿಯಾ ತೊಡೆದು ಹಾಕಿದೆ ಎಂದು ಯಾರೂ ಹೇಳುವಂತಿಲ್ಲ. ಡಿಜಿಟಲ್ ವ್ಯವಹಾರಗಳನ್ನು ಉತ್ತೇಜಿಸುವ ಸಂಸ್ಥೆಗಳಿಗೆ ಮೋದಿ ಸರಕಾರವು ಪಕ್ಷಪಾತಿಯಾಗಿದೆ ಎಂಬುದು ಬಹಳ ಹಿಂದಿನಿಂದಲೂ ಸ್ಪಷ್ಟವೇ. ಈ ಪಕ್ಷಪಾತದ ಧೋರಣೆಗೆ ಕಾರಣ ಏನೇ ಇರಲಿ, ಡಿಜಿಟಲ್ ವ್ಯವಹಾರಗಳು ಕಪ್ಪು ಹಣವನ್ನು ನಿಯಂತ್ರಿಸುವ ಸಾಧನ ಎಂಬುದು ಆಧಾರವಿಲ್ಲದ ಸಮರ್ಥನೆ.

ಮೋದಿ ಮತ್ತು ಅವರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಈ ಇಬ್ಬರೂ ಔಪಚಾರಿಕೀಕರಣವು ನಗದು ಬಳಕೆಯನ್ನು ಕಡಿಮೆ ಮಾಡಿದೆ ಎಂದು ಹೇಳುತ್ತಾರಾದರೂ ಸಹ ಅದಕ್ಕೆ ಯಾವುದೇ ಆಧಾರವಿಲ್ಲ. ನೋಟು ರದ್ದತಿಯ ತರುವಾಯ ಭಾರತದಲ್ಲಿ ನಗದು ಬಳಕೆ ಕಡಿಮೆಯಾಗಿದೆ ಎಂಬ ಹೇಳಿಕೆಯು ಶುದ್ಧಾಂಗ ಸುಳ್ಳು. ಪ್ರಧಾನಮಂತ್ರಿಯವರ ಇಂತಹ ಆಧಾರರಹಿತ ಹೇಳಿಕೆಯು ಯಾರನ್ನಾದರೂ ನಿಬ್ಬೆರಗಾಗಿಸುತ್ತದೆ. ಅನೌಪಚಾರಿಕ ವಲಯದ ತೂಕ ಕಡಿಮೆ ಎಂಬ ಅರ್ಥದಲ್ಲಿ ಅರ್ಥವ್ಯವಸ್ಥೆಯು ಹೆಚ್ಚು ಔಪಚಾರಿಕವಾದದ್ದು ಎನ್ನಬಹುದು. ಇದು ನೋಟು ರದ್ದತಿಯ ವಿರುದ್ಧದ ನಿಖರ ಟೀಕೆಯೂ ಹೌದು. ಆದರೆ, ನೋಟು ರದ್ದತಿಯ ಕಾರಣದಿಂದಾಗಿ ಭಾರತದಲ್ಲಿ ನಗದು ಬಳಕೆಯು ಎಳ್ಳಷ್ಟೂ ಕಡಿಮೆಯಾಗಿಲ್ಲ ಎಂಬುದಂತೂ ನಿಜ.

ನಗದು ಬಳಕೆಯ ಅಳತೆಗೋಲು ಎನಿಸಿರುವ ಕರೆನ್ಸಿ-ಜಿಡಿಪಿ ಅನುಪಾತವು ನೋಟು ರದ್ದತಿಯ ನಂತರ ತೀವ್ರ ಕುಸಿತ ಕಂಡಿತ್ತು. ನಂತರ ಚೇತರಿಸಿಕೊಂಡ ಈ ಅನುಪಾತವು ಈಗ ನೋಟು ರದ್ದತಿ ಪೂರ್ವ ಸ್ಥಿತಿಗೆ ಮರಳಿದೆ. ರಿಸರ್ವ್ ಬ್ಯಾಂಕಿನ 2019-20ನೇ ಸಾಲಿನ ವರದಿಯು ಕರೆನ್ಸಿ-ಜಿಡಿಪಿ ಅನುಪಾತದ ಬಗ್ಗೆ ಹೀಗೆ ಹೇಳುತ್ತದೆ: “ಚಲಾವಣೆಯಲ್ಲಿರುವ ಒಟ್ಟು ಕರೆನ್ಸಿಯಲ್ಲಿ ಶೇ.14.5ರ ಬೆಳವಣಿಗೆಯಾಗಿದೆ, ಹಿಂದಿನ ವರ್ಷದ ಶೇ.16.8ಕ್ಕೆ ಹೋಲಿಸಿದರೆ ಈ ವರ್ಷ ತುಸು ಇಳಿಕೆಯಾಗಿದೆ. ಆದಾಗ್ಯೂ, ಕರೆನ್ಸಿ-ಜಿಡಿಪಿ ಅನುಪಾತವು, ಹಿಂದಿನ ವರ್ಷದ ಶೇ. 11.3ರ ಏರಿಕೆಗೆ ಹೋಲಿಸಿದರೆ, 2019-20ರಲ್ಲಿ ಶೇ. 12ಕ್ಕೆ ಏರಿದೆ.” ಹಾಗಾಗಿ, ನೋಟು ರದ್ದತಿಯಿಂದಾಗಿ ಭಾರತವು ನಗದು-ಕಡಿಮೆ ಆಧಾರಿತ ಆರ್ಥಿಕತೆಯಾಗಿ ಮಾರ್ಪಟ್ಟಿದೆ ಎಂಬ ಮೋದಿಯವರ ಹೇಳಿಕೆಯೂ ತಪ್ಪಾಗಿದೆ.

ನಗದು ಬಳಕೆಯ ಹೆಚ್ಚಳದಲ್ಲಿ ಆಶ್ಚರ್ಯವೇನಿಲ್ಲ. ಏಕೆಂದರೆ, ನಗದು ವ್ಯವಹಾರದಂತಲ್ಲದೆ, ಡಿಜಿಟಲ್ ವ್ಯವಹಾರಗಳಿಗೆ ಒಂದು ವೆಚ್ಚ ತೆರಬೇಕಾಗುತ್ತದೆ. ಆದ್ದರಿಂದ, ಅಲ್ಪ ಲಾಭದ ಮೇಲೆ ನಿಂತಿರುವ ಅನೌಪಚಾರಿಕ ವಲಯದಲ್ಲಿ ಡಿಜಿಟಲ್ ವ್ಯವಹಾರಗಳು ಹೆಚ್ಚು ಪ್ರಚಲಿತವಾಗಿಲ್ಲ. ಔಪಚಾರಿಕ ವಲಯವೂ ಸಹ, ದುಬಾರಿ ಡಿಜಿಟಲ್ ವ್ಯವಹಾರಗಳ ಬದಲು, ನಗದು ವ್ಯವಹಾರಗಳನ್ನೇ ಬಯಸುತ್ತದೆ.

ಇತ್ತೀಚಿನ ತಿಂಗಳುಗಳಲ್ಲಿ ಹಲವಾರು ‘ಚಿಪ್ಪು’ ಕಂಪನಿ(ಶೆಲ್ ಕಂಪನಿ)ಗಳ ಬಾಗಿಲು ಮುಚ್ಚಿರುವುದರಿಂದಾಗಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತಷ್ಟು ಹೆಚ್ಚಿದೆ ಎಂದು ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರು ಹೇಳುತ್ತಾರೆ. ಅವರು ಉಲ್ಲೇಖಿಸುವ ಅಂಕಿ ಅಂಶಗಳು ಸರಿಯಾಗಿವೆ ಎಂದೇ ಭಾವಿಸೋಣ ಮತ್ತು ನೋಟು ರದ್ದತಿಯಿಂದ ಆರಂಭವಾದ ಸರ್ಕಾರದ ಕ್ರಮಗಳಿಂದಾಗಿಯೇ ಈ ಶೆಲ್ ಕಂಪನಿಗಳ ಬಾಗಿಲು ಮುಚ್ಚಿವೆ ಎಂದೇ ಭಾವಿಸೋಣ. ಈ ಕ್ರಮಗಳ ಪರಿಣಾಮವಾಗಿ ಉಂಟಾದ ಕೆಲವು ಪ್ರಯೋಜನಗಳು ಸ್ಥೂಲ ಅರ್ಥವ್ಯವಸ್ಥೆಯ ಚರಾಂಶಗಳ ಏರುಪೇರುಗಳ ಮೂಲಕ ವ್ಯಕ್ತಗೊಳ್ಳುತ್ತವೆ. ಶೆಲ್ ಕಂಪನಿಗಳ ಮುಚ್ಚುವಿಕೆಯಿಂದಲೇ ಉದ್ಯೋಗ ಸೃಷ್ಟಿಯಾಗುವುದಿಲ್ಲ ಅಥವಾ ಹಸಿವು ನೀಗುವುದಿಲ್ಲ ಅಥವಾ ಜನರ ಜೀವನ ಸುಧಾರಿಸುವುದಿಲ್ಲ; ಸ್ಥೂಲ ಅರ್ಥವ್ಯವಸ್ಥೆಯ ಕೆಲವು ಚರಾಂಶಗಳ ಮೇಲೆ ಪರಿಣಾಮ ಬೀರುವ ಮೂಲಕ ಹಾಗೆ ಮಾಡಬಹುದು. ನೋಟು ರದ್ದತಿಯಿಂದಾಗಿ ಸ್ಥೂಲ ಅರ್ಥವ್ಯವಸ್ಥೆಯ ಒಂದೇ ಒಂದು ಚರಾಂಶವೂ ಉತ್ತೇಜಿತಗೊಂಡದ್ದನ್ನು ಮುಖ್ಯ ಆರ್ಥಿಕ ಸಲಹೆಗಾರರು ಉಲ್ಲೇಖಿಸುವುದಿಲ್ಲ. ಹಾಗೆ ಮಾಡುವುದು ಅವರಿಗೆ ನಿಜಕ್ಕೂ ಸಾಧ್ಯವಿಲ್ಲ. ಆದರೆ ಅನೌಪಚಾರಿಕ ವಲಯದ ಸಂಕಟಗಳು, ನೋಟು ರದ್ದತಿಯಿಂದಾಗಿ ಈ ವಲಯದಲ್ಲಿ ಉಂಟಾದ ನಿರುದ್ಯೋಗ, ಇವುಗಳು ಕೆಲವು ವಿದ್ವಾಂಸರು ನಡೆಸಿದ ಅಧ್ಯಯನಗಳ ಮೂಲಕ ಬೆಳಕಿಗೆ ಬಂದಿವೆ. ಮೋದಿ ಮತ್ತು ಅವರ ಮುಖ್ಯ ಆರ್ಥಿಕ ಸಲಹೆಗಾರರು ಈ ಅಧ್ಯಯನಗಳನ್ನು ಅವಲೋಕಿಸುವುದು ಒಳಿತು.

 

ಅನು: ಕೆ.ಎಂ.ನಾಗರಾಜ್

Donate Janashakthi Media

Leave a Reply

Your email address will not be published. Required fields are marked *