ಮೋದಿ-ಬೊಮ್ಮಾಯಿ ಸರಕಾರದ ನೀತಿಗಳೆಲ್ಲವೂ ಸಂವಿಧಾನ ವಿರೋಧಿ: ಗೋಪಾಲಕೃಷ್ಣ ಹರಳಹಳ್ಳಿ

ಮಂಗಳೂರು: ದೇಶದ ದಲಿತರ ಬದುಕು ಭಯಭೀತಿಯಲ್ಲೇ ನಡೆಯುವಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ಸರಕಾರ ದಲಿತರ ಹಕ್ಕುಗಳನ್ನು ಕಸಿದುಕೊಳ್ಳುತ್ತಿವೆ. ದಲಿತರ ಅಭಿವೃದ್ಧಿಗೆ ಬೇಕಾದ ಅನುದಾನವನ್ನು ಕೇಂದ್ರ ಬಜೆಟ್ಟಿನಲ್ಲಿ ನೀಡಲಿಲ್ಲ. ನೀತಿ ಆಯೋಗದ ಅಣತಿಯಂತೆ ಹಣವನ್ನು ಕಡಿತ ಮಾಡಲಾಗಿದೆ. ರಾಜ್ಯವನ್ನು ಕೋಮುವಾದದ ಉಗ್ರಾಣವನ್ನಾಗಿ ಮಾಡಲಾಗುತ್ತಿದೆ. ದಲಿತರ ಮೇಲೆ ದಾಳಿ-ದೌರ್ಜನ್ಯಗಳನ್ನು ಮಾಡಿದ ಮೇಲ್ಜಾತಿ  ಜನರನ್ನು ರಕ್ಷಿಸಲಾಗುತ್ತಿದೆ ಮತ್ತು ಅವರ ಮೇಲೆ ಕೇಸುಗಳನ್ನೇ ದಾಖಲಿಸುತ್ತಿಲ್ಲ. ರಾಜ್ಯದ ಹಲವೆಡೆಗಳಲ್ಲಿ ನಡೆದ ದಲಿತ ದೌರ್ಜನ್ಯಗಳ ಬಗ್ಗೆ ಕಿಂಚಿತ್ತೂ ಗಮನ ನೀಡದ  ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರಗಳು ನಿಜಕ್ಕೂ ದಲಿತ ವಿರೋಧಿಯಾಗಿದೆ, ಸಂವಿಧಾನ ವಿರೋಧಿಯಾಗಿದೆ ಎಂದು ದಲಿತ ಹಕ್ಕುಗಳ ಸಮಿತಿ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿಯವರು ಆರೋಪಿಸಿದರು.

ಮಂಗಳೂರು ನಗರ ಮಟ್ಟದಲ್ಲಿ ದೌರ್ಜನ್ಯ ದಬ್ಬಾಳಿಕೆ ನಿರುದ್ಯೋಗ ಹಾಗೂ ಅಸಮಾನತೆಗಳ ವಿರುದ್ಧ ಹಮ್ಮಿಕೊಂಡ ʻದಲಿತ ಚೈತನ್ಯ ಸಮಾವೇಶʼವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರ ಆನ್‌ಲೈನ್ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿರುವುದಾಗಿ ಹೇಳುತ್ತಿದ್ದಾರೆ. ಇದು ಅವೈಜ್ಞಾನಿಕ ನಿರ್ಧಾರ. ಇದರಿಂದ ದಲಿತ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇತ್ತೀಚಿನ ಬಜೆಟ್ಟಿನಲ್ಲಿ ಭೂಮಿ, ನೀರು, ವಸತಿ, ಶಿಕ್ಷಣ, ಉದ್ಯೋಗಕ್ಕೆ ಆದ್ಯತೆ ನೀಡುವ ಯಾವ ಕ್ರಮಗಳೂ ಕೈಗೊಂಡಿಲ್ಲ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ದಲಿತ ಹಕ್ಕುಗಳ ಸಮಿತಿ ಮಾರ್ಗದರ್ಶಕ ಡಾ. ಕೃಷ್ಣಪ್ಪ ಕೊಂಚಾಡಿ, ಮಂಗಳೂರಿನ ದಲಿತರ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲಿ, ಆಳುವ ವರ್ಗಗಳು ಇಂದಿಗೂ ವ್ಯವಸ್ಥಿತವಾಗಿ ದಲಿತರನ್ನು ರಾಜಕೀಯ ದಾಳಗಳನ್ನಾಗಿಸಿಕೊಳ್ಳುತ್ತಿವೆ ಎಂದು ಸವಿವರವಾಗಿ ಹೇಳಿದರು.

ವೃತ್ತಿನಿರತ ಅಲೆಮಾರಿ ಶಿಲ್ಲೆಖ್ಯಾತ ಸಮುದಾಯದ ನಾಯಕ ರವಿ ಮಾತನಾಡಿ, ಪ್ರಜ್ಞಾವಂತರ, ಬುದ್ದಿವಂತರ ಜಿಲ್ಲೆಯೆಂದೇ ಕರೆಯಲ್ಪಡುವ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಏಳೆಂಟು ವರ್ಷಗಳಿಂದ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಮಿತಿಮೀರುತ್ತಿದೆ. ʻಹಿಂದೂ ನಾವೆಲ್ಲ ಒಂದುʼ ಎಂದು ಹೇಳುವ ಹಿಂದುತ್ವವಾದಿ ಶಕ್ತಿಗಳು ದಲಿತರನ್ನು ಮಾತ್ರ ಹಿಂದುಗಳಾಗಿ ನೋಡುತ್ತಿಲ್ಲ. ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಲು ದಲಿತರನ್ನು ದುರುಪಯೋಗಪಡಿಸುತ್ತಿರುವ ಬಿಜೆಪಿ ಸಂಘಪರಿವಾರದ ದ್ವೇಷ ರಾಜಕಾರಣವನ್ನು ದಲಿತ ಸಮುದಾಯ ಅರ್ಥೈಸಬೇಕಾಗಿದೆ ಎಂದು ಹೇಳಿದರು.

ಸಮಾರೋಪ ಭಾಷಣ ಮಾಡಿದ ಸಿಐಟಿಯು ಜಿಲ್ಲಾ ಕಾರ್ಮಿಕ ಮುಖಂಡ ಸುನಿಲ್ ಕುಮಾರ್ ಬಜಾಲ್, ಸ್ಮಾರ್ಟ್ ಸಿಟಿ ಯೋಜನೆ ಹೆಸರಿನಲ್ಲಿ ಕೋಟ್ಯಾಂತರ ಹಣವನ್ನು ಗುಳುಂ ಮಾಡುತ್ತಿರುವ ಶಾಸಕರು ಹಾಗೂ ಇತರ ಜನಪ್ರತಿನಿಧಿಗಳು ಮಂಗಳೂರಿನಲ್ಲಿ ದಲಿತರ ಬದುಕನ್ನು ಉತ್ತಮಪಡಿಸಲು ಗಮನ ಹರಿಸುತ್ತಿಲ್ಲ. ದಲಿತರಿಗಾಗಿ ಮೀಸಲಿರಿಸಿದ ಹಣವನ್ನು ದಲಿತರ ಅಭಿವೃದ್ದಿಗಾಗಿ ವಿನಿಯೋಗಿಸದೆ ಇತರ ಅಭಿವೃದ್ದಿ ಕಾರ್ಯಕ್ಕೆ ಉಪಯೋಗಿಸುವ ಮೂಲಕ ಮಂಗಳೂರು ನಗರ ಪಾಲಿಕೆ ಆಡಳಿತ ದಲಿತ ವಿರೋಧಿಯಾಗಿ ವರ್ತಿಸುತ್ತಿದೆ. ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ಇನ್ನೂ ಶೋಷಿತ ಸಮುದಾಯಕ್ಕೆ ಭೂಮಿ, ಶಿಕ್ಷಣ, ಉದ್ಯೋಗ ದೊರೆಯದೆ ಇರುವುದು ದೇಶದ ಕರಾಳತೆಯನ್ನು ಎತ್ತಿ ತೋರಿಸಿದೆ. ಮುಂಬರುವ ದಿನಗಳಲ್ಲಿ ಬಲಿಷ್ಠ ದಲಿತ ಚಳುವಳಿಯಲ್ಲಿ ಕಟ್ಟುವ ಮೂಲಕ ಆಳುವ ವರ್ಗಕ್ಕೆ ಎದಿರೇಟು ನೀಡಬೇಕಾಗಿದೆ ಎಂದು ಹೇಳಿದರು.

ಸಮಾವೇಶಕ್ಕೆ ಶುಭ ಕೋರಿ ಸಮುದಾಯ ಕರ್ನಾಟಕ ವತಿಯಿಂದ ವಾಸುದೇವ ಉಚ್ಚಿಲ್, ವಿಚಾರವಾದಿ ಸಂಘಟನೆಯ ನರೇಂದ್ರ ನಾಯಕ್, ಕಾರ್ಮಿಕ ಮುಖಂಡ ರವಿಚಂದ್ರ ಕೊಂಚಾಡಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ (ಡಿವೈಎಫ್‌ಐ) ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಬಶೀರ್ ಪಂಜಿಮೊಗರು, ಕೃಷ್ಣಪ್ಪ ಕೋಣಾಜೆಯವರು ಮಾತನಾಡಿರು.

ವೇದಿಕೆಯಲ್ಲಿ ದಲಿತ ಹಕ್ಕುಗಳ ಸಮಿತಿ ನಾಯಕ ಕೃಷ್ಣ ತಣ್ಣೀರುಬಾವಿ, ರಾಧಾಕೃಷ್ಣ, ಚಂದ್ರಶೇಖರ್, ಶಶಿಕಲಾ ನಂತೂರು, ಕಮಲ ಶಿವನಗರ, ಸುರೇಶ್, ನಾರಾಯಣ ತಲಪಾಡಿ, ರಾಮಕೃಷ್ಣ ನಂತೂರು, ಶಿವಾನಂದ ಕುಳಾಯಿ, ಚಂದ್ರಶೇಖರ ಕೊಂಚಾಡಿ ಮುಂತಾದವರು ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ನಾಗೇಂದ್ರ ಉರ್ವಾಸ್ಟೋರು ವಹಿಸಿದ್ದರು. ಯೋಗೀಶ್ ಜಪ್ಪಿನಮೊಗರು ಸ್ವಾಗತಿಸಿದರೆ, ಪ್ರವೀಣ್ ಕೊಂಚಾಡಿ ವಂದಿಸಿದರು.

ವರದಿ: ಕೃಷ್ಣ ತಣ್ಣೀರುಬಾವಿ

Donate Janashakthi Media

Leave a Reply

Your email address will not be published. Required fields are marked *