ಪ್ರೊ. ಜಯತಿ ಘೋಷ್
2014ರಲ್ಲಿ ಮೋದಿ ಪ್ರಧಾನಿಯಾಗಿ ಆಯ್ಕೆಯಾದಾಗ ಅದಾನಿಯ ಖಾಸಗಿ ವಿಮಾನದಲ್ಲಿ ದೆಹಲಿಗೆ ತೆರಳಿದ್ದರು. ಒಂದು ದಶಕಕ್ಕೂ ಕಡಿಮೆ ಅವಧಿಯಲ್ಲಿ, ಅದಾನಿ ಸಂಪತ್ತು 7 ಶತಕೋಟಿ ಡಾಲರಿನಿಂದ 120 ಶತಕೋಟಿ ಡಾಲರಿಗೆ ನೆಗೆಯಿತು, ಆತನನ್ನು ವಿಶ್ವದ ಮೂರನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮಾಡಿತು. ಆದರೆ ಭಾರತದ ಆರ್ಥಿಕ ಬೆಳವಣಿಗೆಯ ಹಿಂದೆ ಅದಾನಿ ಸಮೂಹದ ಯಶಸ್ಸು ಇದೆ ಎಂಬ ಭ್ರಮೆ ಜನವರಿ 24ರಂದು ಹರಿಯಿತು. ಮೋದಿ ಮೌನವಾಗಿದ್ದಾರೆ. ಇದರಿಂದ ಅವರ ಜನಪ್ರಿಯತೆಗೆ ಕುಂದಾದಂತೆ ಕಂಡುಬರದಿದ್ದರೂ, ಇದು ಅವರ ಆರ್ಥಿಕ ತತ್ತ್ವಶಾಸ್ತ್ರದ ಒಂದು ಪ್ರಮುಖ ವಿಚಾರವನ್ನು ಹುಸಿಗೊಳಿಸಿದೆ. ಕೆಲವೇ ಅಧಿಕಾರ-ಪೋಷಿತ ಉದ್ಯಮಿ ಸಮೂಹಗಳ ಮುಂದೆ ಅನಂತ ಹಣಕಾಸು ಪ್ರಯೋಜನಗಳು ಮತ್ತು ನಿಯಂತ್ರಕ ರಿಯಾಯ್ತಿಗಳನ್ನು ಧಾರಾಳವಾಗಿ ಸುರಿಯುವುದು, ಒಂದು ವಿಶ್ವಾಸಾರ್ಹ ಅಭಿವೃದ್ಧಿ ತಂತ್ರವಲ್ಲ ಎಂದು ಕಂಡುಕೊಂಡಂತಾಗಿದೆ.
ಕಳೆದ ಎರಡು ದಶಕಗಳಲ್ಲಿ, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಭಾರತೀಯ ಬಹುಕೋಟ್ಯಾಧಿಪತಿ ಗೌತಮ್ ಅದಾನಿ ಹೊಂದಿರುವ ನಿಕಟ ಸಂಬಂಧಗಳು ಈ ಗುಜರಾತಿ ಉದ್ಯಮಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಲು ಸಹಾಯ ಮಾಡಿವೆ. ಆತನ ಉಲ್ಕಾವೇಗದ ಉತ್ಕರ್ಷ, ಕೆಲವು ರೀತಿಗಳಲ್ಲಿ ಆತನ ರಾಜಕೀಯ ಗುರುವಿನ ಉತ್ಕರ್ಷವನ್ನೂ ಮರೆಮಾಚಿದ್ದು, ಆತನನ್ನು ಭಾರತದ ಬೆಳವಣಿಗೆಯ ಕತೆಯ ಪ್ರತೀಕವಾಗಿ ಮಾಡಿ ಬಿಟ್ಟಿತು. ಆದರೆ ಈಗ ವಂಚನೆ ಮತ್ತು ಶೇರು ಮಾರುಕಟ್ಟೆಯಲ್ಲಿ ಕೈಚಳಕ ನಡೆಸಿರುವ ಆರೋಪಗಳು ಆತನ ಹೆಸರು ಹೊತ್ತ ಉದ್ಯಮ ಸಾಮ್ರಾಜ್ಯ ಮಂಡಿಯೂರುವಂತೆ ಮಾಡಿವೆ. ಆತನ ಉದ್ಯಮ ಸಮೂಹ ಕೆಲವೇ ದಿನಗಳಲ್ಲಿ 110 ಶತಕೋಟಿ ಡಾಲರಿನಷ್ಟು ಮಾರುಕಟ್ಟೆ ಮೌಲ್ಯದಲ್ಲಿ ಕಳೆದುಕೊಂಡಿದ್ದು, ಅದಾನಿ ಈಗ ಮೋದಿ ಭಾರತದಲ್ಲಿ ಬಂಟತನದ ಕೇಡುಗಳನ್ನು ಕುರಿತು ಎಚ್ಚರಿಕೆ ಕೊಡುವ ಕತೆಯಾಗಿ ಬಿಟ್ಟಿದ್ದಾರೆ.
ಇದನ್ನು ಓದಿ: ಅದಾನಿ-ಹಿಂಡೆನ್ಬರ್ಗ್ ವಿವಾದ: ಸುಪ್ರೀಂ ಕೋರ್ಟ್ನಿಂದ ತಜ್ಞರ ಸಮಿತಿ ನೇಮಕ-ತನಿಖೆ ನಡೆಸುವಂತೆ ಸೆಬಿಗೆ ಆದೇಶ!
ಅದಾನಿ ಮತ್ತು ಮೋದಿ ನಡುವಿನ ಪಾಲುದಾರಿಕೆಯು 2002 ರಷ್ಟು ಹಿಂದಿನದು, ಆಗ ಗುಜರಾತ್ನ ಮುಖ್ಯಮಂತ್ರಿಯಾಗಿದ್ದ ಮೋದಿ ಆ ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಜನರನ್ನು ಕೊಂದ ಮುಸ್ಲಿಂ-ವಿರೋಧಿ ಜನಜಂಗುಳಿಗಳನ್ನು ತಡೆಯಲು ವಿಫಲರಾದರೆಂದು ಭಾರೀ ಟೀಕೆಗಳನ್ನು ಎದುರಿಸುತ್ತಿದ್ದರು. ಆ ಹತ್ಯಾಕಾಂಡದ ನಂತರ, ಮೋದಿಯನ್ನು ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ಪ್ರವೇಶಿಸದಂತೆ ನಿರ್ಬಂಧಿಸಲಾಯಿತು ಮತ್ತು ಭಾರತದ ದೊಡ್ಡ ಉದ್ಯಮಿಗಳು ಬಹುಪಾಲು ಅವರ ಕೈಬಿಟ್ಟಿದ್ದರು. ಆಗ ಮೋದಿ ಮತ್ತು ಅವರ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಬೆಂಬಲಿಸುವುದನ್ನು ಮುಂದುವರಿಸಿದ ಅದಾನಿ ತನ್ನ ನಿಷ್ಠೆಗೆ ಉತ್ತಮ ಪ್ರತಿಫಲವನ್ನೇ ಪಡೆದರು. ಮುಂದಿನ ದಶಕದಲ್ಲಿ, ಅದಾನಿ ಸಮೂಹವು ಉಸಿರುಗಟ್ಟಿಸುವ ವೇಗದಲ್ಲಿ ಬೆಳೆಯಿತು, ರಾಜ್ಯ ಸರ್ಕಾರದ ಅನೇಕ ಗುತ್ತಿಗೆಗಳನ್ನು ಗೆದ್ದಿತು; ಆಹಾರ, ಆಮದು ಮತ್ತು ರಫ್ತು, ಕಲ್ಲಿದ್ದಲು ವ್ಯಾಪಾರ ಮತ್ತು ಗಣಿಗಾರಿಕೆ, ವಿದ್ಯುತ್, ತೈಲ ಮತ್ತು ಅನಿಲ ಪರಿಶೋಧನೆ ಮತ್ತು ಮೂಲಸೌಕರ್ಯ ಕ್ಷೇತ್ರಗಳಿಗೆ ವಿಸ್ತರಿಸಿತು.
ಕ್ರಮೇಣ ಮುಂದಿನ ವರ್ಷಗಳಲ್ಲಿ, ಅವರ ನಡುವಿನ ಸಂಬಂಧವು ಹೆಚ್ಚೆಚ್ಚು ಸಹಜೀವನದ ರೂಪ ಪಡೆಯಿತು. 2014ರಲ್ಲಿ ಮೋದಿ ಪ್ರಧಾನಿಯಾಗಿ ಆಯ್ಕೆಯಾದಾಗ ಅದಾನಿಯ ಖಾಸಗಿ ವಿಮಾನದಲ್ಲಿ ದೆಹಲಿಗೆ ತೆರಳಿದ್ದರು. ಮೋದಿಯೊಂದಿಗಿನ ಅದಾನಿ ಸಾಮೀಪ್ಯವು ಅವರ ಕಂಪನಿಗಳಿಗೆ ಲಾಭದಾಯಕ ಸರ್ಕಾರಿ ಗುತ್ತಿಗೆಗಳನ್ನು ಮತ್ತು ಸಾರ್ವಜನಿಕ ಮತ್ತು ಖಾಸಗಿ ವಲಯದ ಸಾಲಗಳನ್ನು ದೇಶೀಯ ಮತ್ತು ವಿದೇಶಿ ಉದ್ಯಮ ಯತ್ನಗಳಿಗೆ ಗೆಲ್ಲಲು ಸಹಾಯ ಮಾಡಿತು. ಇಂತಹ ಪ್ರಯತ್ನಗಳಲ್ಲಿ ಕೆಲವು ಅತ್ಯಂತ ವಿವಾದಾತ್ಮಕವಾದವುಗಳೂ ಇದ್ದವು. ಸರ್ಕಾರವು ಮತ್ತೆ ಮತ್ತೆ, ಅದಾನಿ ವ್ಯವಹಾರಗಳಿಗೆ ಲಾಭವಾಗುವ ರೀತಿಯಲ್ಲಿ ನಿಯಮಾವಳಿಗಳನ್ನು ಸಡಿಲಗೊಳಿಸಿತು ಅಥವಾ ನಿಯಮಗಳನ್ನು ತಿದ್ದುಪಡಿ ಮಾಡಿತು. ಉದಾಹರಣೆಗೆ, 2017 ರಲ್ಲಿ, ಸರ್ಕಾರವು ಗೊಡ್ಡಾದಲ್ಲಿನ ಅದಾನಿಯ ವಿದ್ಯುತ್ ಸ್ಥಾವರವನ್ನು ನಿಯಮಗಳನ್ನು ತಿರುಚಿ ವಿಶೇಷ ಆರ್ಥಿಕ ವಲಯವೆಂದು ಹೆಸರಿಸಿ, ಆ ಸಮೂಹಕ್ಕೆ 5 ಶತಕೋಟಿ ರೂ.ಗಳ(6ಕೋಟಿ ಡಾಲರ್) ಬಕ್ಷೀಷನ್ನು ಕೊಟ್ಟಿತು. 2019 ರಲ್ಲಿ, ಮೋದಿ ಸರ್ಕಾರವು ಅದಾನಿಗೆ ಹೊಸದಾಗಿ ಆರು ಖಾಸಗೀಕರಣಗೊಂಡ ವಿಮಾನ ನಿಲ್ದಾಣಗಳನ್ನು ನಿರ್ವಹಿಸುವ ಹಕ್ಕನ್ನು ಈ ವಲಯದಲ್ಲಿ ಅದಾನಿ ಕಂಪನಿಗೆ ಏನೇನೂ ಅನುಭವವಿಲ್ಲದಿದ್ದರೂ, ಹಸ್ತಾಂತರಿಸಿತು.
ಇದನ್ನು ಓದಿ: ಹಿಂಡನ್ ಬರ್ಗ್ ವರದಿ : ಅದಾನಿ ಸಮೂಹದ ಅಕ್ರಮ, ವಂಚನೆಗಳ ಚಿತ್ರ
ಮೋದಿ ಯೋಜನೆಯ ಪ್ರಚಾರ ಪುರುಷ
ಅದಾನಿ ಸಮೂಹದ ಕ್ಷಿಪ್ರ ಬೆಳವಣಿಗೆ, ಜೊತೆಗೆ ಅದರ ಶೇರು ಬೆಲೆಗಳಲ್ಲಿ ಅದ್ಭುತ ಏರಿಕೆ ಅನುವು ಮಾಡಿಕೊಟ್ಟ ಮಹತ್ವಾಕಾಂಕ್ಷೆಯ ಸಾಲ-ಚಾಲಿತ ಹೂಡಿಕೆ ಕಾರ್ಯಕ್ರಮವು ಕಂಪನಿಯನ್ನು ಸರ್ಕಾರದ ಬಂಡವಾಳ-ಹೂಡಿಕೆಗೆ ಒತ್ತು, ದತ್ತಾಂಶ-ಉದ್ಯಮ ವಿಸ್ತರಣೆ ಮತ್ತು ‘ನಿವ್ವಳ-ಶೂನ್ಯ ಪರಿವರ್ತನೆ’ಯ ಯೋಜನೆಗಳ ಪ್ರಚಾರ ಪುರುಷನಾಗಿ ಮಾಡಿತು. ಒಂದು ದಶಕಕ್ಕೂ ಕಡಿಮೆ ಅವಧಿಯಲ್ಲಿ, ಅದಾನಿ ಸಂಪತ್ತು 7 ಶತಕೋಟಿ ಡಾಲರಿನಿಂದ 120 ಶತಕೋಟಿ ಡಾಲರಿಗೆ ನೆಗೆಯಿತು, ಆತನÀನ್ನು ವಿಶ್ವದ ಮೂರನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮಾಡಿತು (ಜನವರಿ ಅಂತ್ಯದಲ್ಲಿ ಆತನ ಸಮೂಹದ ಷೇರುಗಳು ಕುಸಿಯಲು ಪ್ರಾರಂಭಿಸುವ ವರೆಗೆ, ನಿವ್ವಳ ಮೌಲ್ಯವನ್ನು ಅರ್ಧದಷ್ಟು ಕುಗ್ಗಿಸುವ ವರೆಗೆ).
ಆತನ ಆರ್ಥಿಕ ಶಕ್ತಿಯು ಬೆಳೆಯುತ್ತಿದ್ದಂತೆ, ತನ್ನ ವ್ಯವಹಾರಗಳ ಮತ್ತು ಮೋದಿಯವರ ವಿರುದ್ಧ ಟೀಕೆಗಳನ್ನು ಹತ್ತಿಕ್ಕುವ ಪ್ರಯತ್ನಗಳಲ್ಲಿ ಅದಾನಿ ಹೆಚ್ಚೆಚ್ಚು ಆಕ್ರಾಮಕತೆ ತೋರಿದರು, ಅದಾನಿ ಸಮೂಹ ಅಧಿಕಾರಸ್ಥರಿಂದ ಪಡೆಯುತ್ತಿದ್ದ ಆದ್ಯತೆಯ ನಡೆಗಳ ಬಗ್ಗೆ ವರದಿ ಮಾಡಿದ ಪತ್ರಕರ್ತರು ಮತ್ತು ಮಾಧ್ಯಮಗಳ ವಿರುದ್ಧ ಅನೇಕ ಮೊಕದ್ದಮೆಗಳನ್ನು ಹೂಡಿದರು. ಕಳೆದ ವರ್ಷದ ಕೊನೆಯಲ್ಲಿ, ಅದಾನಿ ಅದುವರೆಗೆ ಪ್ರಸಾರ ಮಾಧ್ಯಮದಲ್ಲಿ ಮೋದಿಯ ಟೀಕಾಕಾರರಿಗೆ ಉಳಿದಿದ್ದ ಕೆಲವೇ ವೇದಿಕೆಗಳಲ್ಲಿ ಒಂದಾಗಿದ್ದ ಎನ್ಡಿಟಿವಿಯ ವೈಷಮ್ಯಭರಿತ ಸ್ವಾಧೀನವನ್ನು ಪ್ರಾರಂಭಿಸಿದರು.
ಆ ಕ್ಷಣದಲ್ಲಿ, ಅದಾನಿ ಯಾವುದೇ ತಪ್ಪು ಮಾಡಲಾರರು ಎಂದು ಅನಿಸುವಂತಾಗಿತ್ತು. ಆತನ ಸಾಮ್ರಾಜ್ಯದ ಸಾಲ-ಪ್ರೇರಿತ ಬೆಳವಣಿಗೆ ಮತ್ತು ಅವಾಸ್ತವಿಕ ಶೇರು ಮೌಲ್ಯಮಾಪನದ ಬಗ್ಗೆ, ಆತನ ಆರ್ಥಿಕ, ರಾಜಕೀಯ ಮತ್ತು ಮಾಧ್ಯಮ ಶಕ್ತಿಯ ಬಗ್ಗೆ ಏನೇ ಆತಂಕಗಳಿದ್ದರೂ- ಭಾರತದ ಆರ್ಥಿಕ ಬೆಳವಣಿಗೆಯ ಹಿಂದೆ ಅದಾನಿ ಸಮೂಹದ ಯಶಸ್ಸು ಇದೆ ಎಂಬ ವ್ಯಾಪಕ ಗ್ರಹಿಕೆ ಆತನನ್ನು ಯಾರೂ ತಡೆಯಲಾರರು ಎಂಬ ಭಾವನೆಯನ್ನು ಮೂಡಿಸಿತ್ತು.
ಇದನ್ನು ಓದಿ: ಅದಾನಿ ಸಮೂಹ ಸಂಸ್ಥೆಯ ವ್ಯವಹಾರ ಕುರಿತು ಮಾಹಿತಿ ನೀಡುವಂತೆ ಬ್ಯಾಂಕುಗಳಿಗೆ ಆರ್ಬಿಐ ಸೂಚನೆ
ಭ್ರಮೆ ಹರಿಯಿತು
ಆ ಭ್ರಮೆ ಜನವರಿ 24 ರಂದು ನುಚ್ಚುನೂರಾಯಿತು. ಅಲ್ಪಾವಧಿ ಶೇರು ಮಾರಾಟ ವ್ಯವಹಾರದಲ್ಲಿರುವ ಸಂಸ್ಥೆಯಾದ ಹಿಂಡೆನ್ಬರ್ಗ್ ರಿಸರ್ಚ್ ಈ ಸಮೂಹ “ಕಾರ್ಪೊರೇಟ್ ಇತಿಹಾಸದಲ್ಲಿ ಅತಿ ದೊಡ್ಡ ವಂಚನೆಯಲ್ಲಿ ತೊಡಗಿದೆ” ಎಂದು ಆರೋಪಿಸುವ ವಿಧ್ವಂಸಕಾರಿ ವರದಿಯನ್ನು ಅಂದು ಪ್ರಕಟಿಸಿತು. ಹಿಂಡೆನ್ಬರ್ಗ್ ತನ್ನ ಎರಡು ವರ್ಷಗಳ ತನಿಖೆಯ ನಂತರ, ಅದಾನಿ ಸಮೂಹವು “ದಶಕಗಳ ಕಾಲ ಲಜ್ಜೆಗೆಟ್ಟ ಶೇರು ಕೈಚಳಕ ಮತ್ತು ಲೆಕ್ಕಪತ್ರ ವಂಚನೆ ಯೋಜನೆಯಲ್ಲಿ ತೊಡಗಿಕೊಂಡಿದೆ” ಎಂದು ಆರೋಪಿಸಿತು. 38 ಮಾರಿಷಸ್ ಮೂಲದ ಶೆಲ್ ಕಂಪನಿಗಳನ್ನು ಸೂಚಿಸಿ, ಅವನ್ನು ಶೇರು ಬೆಲೆಗಳನ್ನು ಕೃತ್ತಿಮವಾಗಿ ಏರಿಸಲು ಮತ್ತು ಹಣವನ್ನು ಸಾರ್ವಜನಿಕವಾಗಿ ಶೇರು ಮಾರುಕಟ್ಟೆಗಳಲ್ಲಿ ಪಟ್ಟಿಮಾಡಲಾದ ಅದಾನಿ ಸಮೂಹದ ಕಂಪನಿಗಳಿಂದ ಬೇರೆಡೆಗೆ ಸಾಗಿಸಲು ಬಳಸಲಾಗಿದೆ ಎಂದು ಅದು ಆರೋಪಿಸಿದೆ.
ಅದಾನಿ ಸಮೂಹ ಭಾರತೀಯ ರಾಷ್ಟ್ರೀಯವಾದೀ ಭಾವನೆಯ ಮೊರೆ ಹೋಗಿ, ಹಿಂಡೆನ್ಬರ್ಗ್ ವರದಿ ಭಾರತದ ಸ್ವಾತಂತ್ರ್ಯ, ಸಂಸ್ಥೆಗಳು ಮತ್ತು ಬೆಳವಣಿಗೆಯ ಕಥಾನಕದ ಮೇಲೆ “ಉದ್ದೇಶಪೂರ್ವಕವಾದ ದಾಳಿ” ಎಂದು ಆರೋಪಿಸಿದರೂ, ಶೇರು ಮಾರುಕಟ್ಟೆಯ ಪ್ರತಿಕ್ರಿಯೆ ಕ್ಷಿಪ್ರವಾಗಿತ್ತು, ಮತ್ತು ಮಾರಕವಾಗಿತ್ತು. ಫೆಬ್ರವರಿ ಆರಂಭದಲ್ಲಿ, ಮೂಡೀಸ್ (ಶ್ರೇಯಾಂಕ ಸಂಸ್ಥೆ) ಹಲವಾರು ಅದಾನಿ ಸಮೂಹದ ಕಂಪನಿಗಳ ಶ್ರೇಯಾಂಕಗಳನ್ನು ಕೆಳಗಿಳಿಸಿತು ಮತ್ತು ಇನ್ನೊಂದು ಸಂಸ್ಥೆ ಎಂಎಸ್ಸಿಐ ಅದಾನಿ ಸಮೂಹದ ನಾಲ್ಕರ ತೂಕ ಪ್ರಮಾಣವನ್ನು ಕಡಿತಗೊಳಿಸಿತು, ಇವು ಈ ಸಮೂಹದ ತೊಂದರೆಗಳನ್ನು ಇನ್ನಷ್ಟು ಹೆಚ್ಚಿಸಿದವು. ಅದಾನಿ ಸಮೂಹ ಹಲವಾರು ವಿಶ್ವಾಸ-ಕುದುರಿಸುವ ಕ್ರಮಗಳನ್ನು ಪ್ರಕಟಿಸಿದರೂ, 110 ಕೋಟಿ ಡಾಲರುಗಳ ಬ್ಯಾಂಕ್ ಸಾಲಗಳನ್ನು ಅವಧಿಗೆ ಮುಂಚಿತವಾಗಿಯೇ ಮರುಪಾವತಿಸಿದ ನಂತರವೂ, ತನ್ನ ಆದಾಯದ ಬೆಳವಣಿಗೆಯ ಗುರಿಗಳನ್ನು ಅರ್ಧಕ್ಕಿಳಿಸಿದರೂ ಮತ್ತು ಯೋಜಿತ ಬಂಡವಾಳ ವೆಚ್ಚಗಳನ್ನು ತಡೆಹಿಡಿದರೂ ಪತನ ಮುಂದುವರೆಯಿತು.
ಇದನ್ನು ಓದಿ: ಅದಾನಿ ರಿಯಲ್ ಎಸ್ಟೇಲ್ ಒಡೆತನಕ್ಕೆ ಧಾರಾವಿ ಸ್ಲಂ ಅಭಿವೃದ್ಧಿ; ರೂ.5 ಸಾವಿರ ಕೋಟಿ ಬಿಡ್ ಸಲ್ಲಿಕೆ
ಮೋದಿ ಮೌನ-ಹಾದಿ ಬದಲಾಗುವುದೇ?
ಆದರೆ ಸ್ವತಃ ಮೋದಿ, ದೇಶದ ವಿರೋಧ ಪಕ್ಷಗಳು ಅವರ ಮೇಲೆ ಬಂಟತನವನ್ನು ಪೋಷಿಸುವ ಆರೋಪ ಮಾಡುತ್ತಿದ್ದಾಗಲೂ, ಮೌನವಾಗಿದ್ದಾರೆ. ಭಾರತದ “ಬಲವಾದ” ನಿಯಂತ್ರಕ ಸಂಸ್ಥೆಗಳು ಈ ಹಗರಣವನ್ನು ನಿಭಾಯಿಸುತ್ತವೆ ಎಂದು ಸರ್ಕಾರವು ಹೇಳಿಕೊಂಡಿದೆ, ಆದರೆ ಈ ಸಂಸ್ಥೆಗಳ ಕಾರ್ಯಕ್ಷಮತೆ ಇದುವರೆಗಂತೂ ಶೋಚನೀಯವಾಗಿದೆ. ಹಲವಾರು ಶಾಸಕರಿಂದ “ಸೈಲೆಂಟ್ ಆಪರೇಟರ್”(ಮೌನ ನಿರ್ವಾಹಕ) ಆಗಿ ಕೆಲಸ ಮಾಡುತ್ತಿದೆ ಎಂಬ ದೂಷಣೆಗೆ ಒಳಗಾಗಿರುವ ಸೆಬಿ(ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯ) ಆರೋಪಗಳ ಬಗ್ಗೆ ತನಿಖೆ ನಡೆಸುವುದಾಗಿ ಭರವಸೆ ನೀಡುವ ಮತ್ತು ಪ್ರತಿಕ್ರಿಯಿಸಲು ಅದಾನಿ ಸಮೂಹಕ್ಕೆ ಆರು ತಿಂಗಳ ಕಾಲಾವಕಾಶವನ್ನು ನೀಡಲಾಗಿದೆ ಎನ್ನುವ ಒಂದು ಸಪ್ಪೆ ಪತ್ರಿಕಾ ಪ್ರಕಟಣೆಯನ್ನು ನೀಡಿದೆ. ಆದಾಗ್ಯೂ, ಈ ಸಂಸ್ಥೆ ಅದಾನಿ ಸಮೂಹದ ಷೇರುಗಳು ಮತ್ತು ಕಾರ್ಪೊರೇಟ್ ಬಾಂಡ್ಗಳ ಕುಸಿತವನ್ನು ಪರಿಶೀಲಿಸಿ, ಕೆಲವು ಅಲ್ಪಾವಧಿ-ಮಾರಾಟದ ಚಟುವಟಿಕೆ ದೇಶದ ಹೊರಗಿನಿಂದ ಹುಟ್ಟಿಕೊಂಡಿದೆ ಎಂಬುದಕ್ಕೆ ಪುರಾವೆಗಳನ್ನು ಕಂಡುಹಿಡಿದಿದೆ.
ಅದಾನಿ ಸಮೂಹ ಚೇತರಿಸಿಕೊಂಡು ಮೊದಲಿನಂತಾಗಲಿ ಅಥವ ಆಗದಿರಲಿ, ಅದರ ಪ್ರಸಕ್ತ ತೊಂದರೆಗಳನ್ನು ಆರ್ಥಿಕ ಅಭಿವೃದ್ಧಿಯನ್ನು ಮುಂದೊತ್ತಲು ಕೆಲವು ರಾಷ್ಟ್ರೀಯ ಅತಿರಥ-ಮಹಾರಥರÀ ಮೇಲೆ ಭಾರತವು ಅತಿಯಾಗಿ ಅವಲಂಬಿಸುವುದರ ದೋಷಗಳು ಎಂದೇ ಪರಿಗಣಿಸಬೇಕಾಗುತ್ತದೆ. ಈ ಕಾರ್ಯತಂತ್ರವು ವ್ಯಾಪಕ ಆಧಾರದ ಮತ್ತು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯನ್ನು ತಂದು ಕೊಡುವಲ್ಲಿ ವಿಫಲವಾಗಿದೆ, ಇದರಿಂದಾಗಿ ಭಾರತವು ನಿರಾಶಾದಾಯಕ ಉದ್ಯೋಗ ಬೆಳವಣಿಗೆ, ಕ್ಷೀಣಿಸುತ್ತಿರುವ ಬಳಕೆ, ಕುಸಿಯುತ್ತಿರುವ ಹೂಡಿಕೆ ದರಗಳು ಮತ್ತು ಪರಿಸರ ವಿನಾಶವನ್ನು ಕಾಣುವಂತಾಗಿದೆ. ರಿಲಯನ್ಸ್, ಟಾಟಾ ಮತ್ತು ಆದಿತ್ಯ ಬಿರ್ಲಾರಂತಹ ಉದ್ದಿಮೆ ಸಮೂಹಗಳನ್ನು ಅವಲಂಬಿಸುವ ಬದಲು, ಸರ್ಕಾರವು ಈ ಕ್ಷಣವನ್ನು ಹಾದಿಯನ್ನು ಬದಲಾಯಿಸುವ ಅವಕಾಶವನ್ನಾಗಿ ಬಳಸಿಕೊಳ್ಳಬೇಕು. ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳನ್ನು ಉತ್ತೇಜಿಸುವುದು ಮತ್ತು ಸಾಮಾಜಿಕ ಸೇವೆಗಳನ್ನು ವಿಸ್ತರಿಸುವುದು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುತ್ತದೆ ಮತ್ತು ಆರ್ಥಿಕ ಸುಸ್ಥಿರತೆಯನ್ನು ಉತ್ತಮಗೊಳಿಸುತ್ತದೆ.
ಇದನ್ನು ಓದಿ: ಅದಾನಿ ಬಂದರು ವಿವಾದ: ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ-ಪ್ರಕರಣ ದಾಖಲು
ಈ ಹಗರಣವು ಮೋದಿಯವರ ಜನಪ್ರಿಯತೆಯನ್ನು ಬಾಧಿಸಿದಂತೆ ಕಂಡುಬರದಿದ್ದರೂ, ರಾಜಕೀಯ ಪರಿಣಾಮವನ್ನು ಇಷ್ಟು ಬೇಗನೇ ಅಂದಾಜು ಮಾಡಲಾಗದು. ಮೋದಿ ಮತ್ತು ಬಿಜೆಪಿ ಈ ವರ್ಷಗಳಲ್ಲಿ ಹಲವಾರು ಭ್ರಷ್ಟಾಚಾರ ಹಗರಣಗಳನ್ನು ಎದುರಿಸಿದ್ದಾರೆ ಮತ್ತು ಮಾಧ್ಯಮಗಳ ಮೇಲೆ ಅವರ ಗಮನಾರ್ಹ ನಿಯಂತ್ರಣದಿಂದಾಗಿ ಅವೆಲ್ಲವನ್ನೂ ಮೀರಿ ನಿಲ್ಲಲು ಅವರಿಗೆ ಸಾಧ್ಯವಾಗಿದೆ. ಆದರೆ ಅದಾನಿ ಪತನ ವಿಭಿನ್ನವಾಗಬಹುದು, ಏಕೆಂದರೆ ಇದು ಮೋದಿಯವರ ಆರ್ಥಿಕ ತತ್ತ್ವಶಾಸ್ತ್ರದ ಒಂದು ಪ್ರಮುಖ ವಿಚಾರವನ್ನು ನಂಬಲು ಸಾಧ್ಯವಾಗದಂತೆ ಮಾಡುತ್ತದೆ. ಒಂದೇ ಅಧಿಕಾರ-ಪೋಷಿತ ಸಮೂಹದ ಮುಂದೆ ಅನಂತ ಹಣಕಾಸು ಪ್ರಯೋಜನಗಳು ಮತ್ತು ನಿಯಂತ್ರಕ ರಿಯಾಯ್ತಿಗಳನ್ನು ಧಾರಾಳವಾಗಿ ಸುರಿಯುವುದು, ಒಂದು ವಿಶ್ವಾಸಾರ್ಹ ಅಭಿವೃದ್ಧಿ ತಂತ್ರವಲ್ಲ ಎಂದು ಕಂಡುಕೊಂಡಂತಾಗಿದೆ.
(ಕೃಪೆ: ಪ್ರಾಜೆಕ್ಟ್ ಸಿಂಡಿಕೇಟ್, 15/02/2023)
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ