ರೈತ ನಾಯಕ ಎಚ್.ಆರ್. ನವೀನ್ ಕುಮಾರ್ ದೆಹಲಿ ರೈತ ಚಳುವಳಿ ಅನುಭವ ಹಂಚಿಕೊಂಡಿದ್ದಾರೆ
ಶಾಹಜಾನ್ ಪುರ್ ಗಡಿಯಿಂದ ದೆಹಲಿ ಕಡೆ ಬರಲು ಹೊರಟೆವು 110 ಕಿಲೋಮೀಟರ್ ದೂರ ನೇರವಾಗಿ ಯಾವ ಬಸ್ಸುಗಳು ಓಡಾಡುತ್ತಿಲ್ಲ ಯಾಕೆಂದರೆ ಅದೇ ಹೆದ್ದಾರಿಗಳಲ್ಲೇ ರೈತರು ಪ್ರತಿಭಟನೆಗಳನ್ನು ನಡೆಸುತ್ತಿರುವುದು. ಅಲ್ಲಿದ್ದ ಸುಮಾರು ಒಂದು ಕಿಲೋಮೀಟರ್ ನಷ್ಟು ದೂರ ನಡೆದುಕೊಂಡು ಬಂದು ಅಲ್ಲಿಂದ ಸ್ಥಳೀಯ ಆಟೋ ಒಂದನ್ನು ಹಿಡಿದು 10 ಕಿಲೋಮೀಟರ್ ಬಂದ ಮೇಲೆ ದೆಹಲಿಗೆ ಹೋಗುವ ಬಸ್ಸು ಸಿಗುವುದು. ಆಟೋದಲ್ಲಿ ನಾವು ಹತ್ತುವಾಗ ಇಬ್ಬರು ಹುಡುಗರಿದ್ದರು ಒಬ್ಬ ಗಾಡಿ ಓಡಿಸುತ್ತಿದ್ದ ಮತ್ತೊಬ್ಬ ಹಿಂದೆ ಕುಳಿತಿದ್ದ ನಮ್ಮ ನೋಡಿ, ನಮ್ಮ ಭಾಷೆ ಕೇಳಿದ ಮೇಲೆ ಇವರು ಇಲ್ಲಿಯವರಲ್ಲ ಎಂದು ಅವನಿಗೆ ಗೊತ್ತಾಗಿ ನಾವಿಬ್ಬರು ಮಾತನಾಡಿಕೊಳ್ಳುವ ಭಾಷೆ ಕೇಳಿ ತಮಿಳುನಾಡಿನವರಾ ಎಂದ ನಾವು ಇಲ್ಲ ಕರ್ನಾಟಕದಿಂದ ಬಂದಿದ್ದೇವೆ ಎಂದೆ. ಅಲ್ಲಿಂದ ಮಾತುಕತೆ ಆರಂಭವಾಗಿ 10 ಕಿಲೋಮೀಟರ್ ಮುಗಿಯುವವರೆಗೆ ಮಾತುಕತೆ ಮುಂದುವರೆಯಿತು. ನಮ್ಮ ಪಕ್ಕದಲ್ಲಿರುವ ಯುವಕನನ್ನು ಕೇಳಿದೆ ನೀವು ಏನ್ ಕೆಲಸ ಮಾಡೋದು ಅಂದ ಇಲ್ಲೇ ಪಕ್ಕದ ಊರು ಕೃಷಿ ಮಾಡುತ್ತೇವೆ ಎಂದ. ಏನೇನ್ ಬೆಳಿತೀರ ಅಂದಿದ್ದಕ್ಕೆ ಸಾಸಿವೆ, ನೆಲಗಡಲೆ ಬೆಳೆಯುತ್ತೇವೆ ಎಂದ. ರೈತರು ನಡೆಸುತ್ತಿರುವ ಹೋರಾಟಕ್ಕೆ ನೀವು ಭಾಗವಹಿಸಿಲ್ವಾ ಎಂದು ಕೇಳಿದೆ ಅದಕ್ಕೆ ಭಾಗವಹಿಸಿದ್ದೆವು, ಈಗ ಸ್ವಲ್ಪ ಕೆಲಸವಿರುವುದರಿಂದ ಬಂದಿದ್ದೇವೆ. ನಮ್ಮ ಊರಿನಿಂದ ಪ್ರತಿ ದಿನ ಹಾಲು ಕೊಡುತ್ತೇವೆ ಎಂದ. ಈ ಪ್ರತಿಭಟನೆಯ ಬಗ್ಗೆ ನಿಮಗೆ ಏನನಿಸುತ್ತದೆ ಎಂದು ಕೇಳಿದೆ ಅದಕ್ಕೆ ಅವನು ಹೇಳಿದ್ದು ಹೆದ್ದಾರಿಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಸುತ್ತಮುತ್ತಲ ವ್ಯಾಪಾರ ವಹಿವಾಟು ನಿಂತುಹೋಗಿದೆ. ಆದರೆ ಈ ಮೋದಿ ರೈತರ ಬೇಡಿಕೆಗಳನ್ನು ಈಡೇರಿಸುವುದಿಲ್ಲ… ಯಾಕೆಂದರೆ ಮೋದಿ ಅಂದರೆನೇ “ಏನೂ ಆಗಲ್ಲ” ಅಂತ ಅರ್ಥ. ಒಂದು ಪಕ್ಷ ಈ ಕಾನೂನುಗಳು ರದ್ದಾದರೆ ರೈತರ ಸಮಸ್ಯೆಗಳು ಬಗೆಹರಿಯುತ್ತವೆಯಾ ಅಂತ ಮರು ಪ್ರಶ್ನೆ ಹಾಕಿದ ಅಷ್ಟರಲ್ಲಿ ನಾವು ಬಸ್ ಹತ್ತುವ ಜಾಗ ಮತ್ತು ಬಸ್ ಎರಡೂ ಬಂದಿದ್ದವು ಮಾತು ಮುಂದುವರೆಸಲಾಗಲಿಲ್ಲ ಆದರೆ ಅವನು ಎತ್ತಿದ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾದ ಅಗತ್ಯೆ ಇದೆ ಎಂದೆನಿಸಿತು.
ಇದನ್ನು ಓದಿ : ಮೋದಿಯವರ ಅಡ್ಡಗೋಡೆಗಳನ್ನು ದಾಟಿದ ದೇಶಪ್ರೇಮಿ ಹೋರಾಟ
ಈ ಕಾನೂನುಗಳು ರದ್ದಾದ ಕೂಡಲೇ ರೈತರ ಬದುಕು ಹಸನಾಗುವುದಿಲ್ಲ. ಈಗ ಅವರ ಬದುಕು ದುರ್ಬರವಾಗಿರಲು ಇರುವ ಕಾರಣಗಳಿಗೆ ಶಾಶ್ವತ ಪರಿಹಾರವನ್ನು ಹುಡುಕುವ ಮತ್ತು ರೈತ ಪರವಾದ ಪರ್ಯಾಯ ಕೃಷಿ ನೀತಿಗಳನ್ನ ರೂಪಿಸುವ ಅಗತ್ಯೆತೆ ಇದ್ದು ಅವುಗಳ ಬಗ್ಗೆಯೂ ವ್ಯಾಪಕ ಚರ್ಚೆಗಳನ್ನು ನಡೆಸುವ ಅಗತ್ಯೆತೆಯ ಬಗ್ಗೆ ಅವನು ಸೂಕ್ಷ್ಮವಾಗಿ ಸೂಚಿಸುವಂತಿತ್ತು. ಈ ಗಡಿಯಲ್ಲೂ ಉಳಿದ ಗಡಿಗಳ ರೀತಿಯಲ್ಲಿ ಪೋಲಿಸಿನವರು ರಾಷ್ಟ್ರೀಯ ಹೆದ್ದಾರಿಯನ್ನು ಅಗೆದು ಕಂದಕ ನಿರ್ಮಾಣ ಮಾಡಿದ್ದು ಮಾತ್ರವಲ್ಲ ದೊಡ್ಡ ದೊಡ್ಡ ಕಂಟೈನರ್ ಗಳು, ಟ್ರಕ್ ಗಳು, ಬೈಕ್ – ಕಾರುಗಳನ್ನು ಸಾಗಿಸುವ 20 ಚಕ್ರದ ದೊಡ್ಡ ವಾಹನಗಳನ್ನು ರಸ್ತೆಗೆ ಅಡ್ಡಲಾಗಿ ಒಂದು ಎರಡು ಮಾತ್ರವಲ್ಲ ಸರಿಸುಮಾರು 50 ವಾಹನಗಳನ್ನು ನಿಲ್ಲಿಸಲಾಗಿದೆ. ಜೊತೆಗೆ ದಿನದಿಂದ ದಿನಕ್ಕೆ ಪೋಲೀಸ್ ಮತ್ತು ಸೈನ್ಯದ ಸಂಖ್ಯೆಯನ್ನು ಗಡಿಯಲ್ಲಿ ಹೆಚ್ಚಿಸಲಾಗುತ್ತಿದೆ.
ಈ ಪರಿಸ್ಥಿತಿಯನ್ನು ನೋಡಿದರೆ ಯಾವುದೇ ಕಾರಣಕ್ಕೂ ರೈತರನ್ನು ದೆಹಲಿಯತ್ತ ನಾವು ಬಿಡುವುದಿಲ್ಲ ಎಂಬಂತೆ ಕಾಣುತ್ತದೆ. ಆದರೆ ಈ ಕುರಿತು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರೊಬ್ಬರು ಮಾತನಾಡುತ್ತಾ ಇವುಗಳನ್ನು ನಿರ್ಮಾಣ ಮಾಡಿರುವವರು ಮನುಷ್ಯರೇ ಆಗಿರುವುದರಿಂದ ಮನುಷ್ಯರು ಮನಸು ಮಾಡಿದರೆ ಅವುಗಳನ್ನು ದಾಟಿ ಮುಂದೆ ಹೋಗುವುದು ಯಾವ ಕಷ್ಟವೂ ಅಲ್ಲ. ಆದರೆ ನಾವು ಶಾಂತಿಗೆ ಬಂಗತರುವ ಕೆಲಸಕ್ಕೆ ಕೈಹಾಕಿಲ್ಲ ಎನ್ನುವ ಮೂಲಕ ಇದನ್ನು ದಾಟಲು ರೈತರಿಂದ ಸಾಧ್ಯವಿದೆ ಎಂಬ ಸೂಚನೆಯನ್ನು ನೀಡಿದ್ದಾರೆ.
ಇಂದು ಸಂಯುಕ್ತ ಕಿಸಾನ್ ಮೋರ್ಚಾದ ಸಭೆ ನಡೆದು ಜನವರಿ 26 ರ ಗಣರಾಜ್ಯೋತ್ಸವ ದಿನದ ಪರ್ಯಾಯ ರೈತರ ಮತ್ತು ಟ್ರ್ಯಾಕ್ಟರ್ ಪೆರೆಡ್ ಮತ್ತು ಇನ್ನಿತರ ವಿಚಾರಗಳ ಬಗ್ಗೆ ಚರ್ಚೆಗಳನ್ನು ನಡೆಸಿದರು. ಅದರಲ್ಲಿ ಮುಖ್ಯವಾಗಿ ರೈತರ ಈ ಹೋರಾಟದಲ್ಲಿ ಭಾಗಿಯಾಗಿರುವವರಿಗೆ ಲಂಗರ್ ಗಳ ಮೂಲಕ ಊಟದ ವ್ಯವಸ್ಥೆ ಮಾಡುತ್ತಿರುವವರಿಗೆ, ಇನ್ನುಳಿದ ವ್ಯವಸ್ಥೆಗಳನ್ನು ಮಾಡಿ ಸಹಾಯ ಮಾಡುತ್ತಿರುವವರಿಗೆ ಪಂಚಾಬ್ ಹರಿಯಾಣಗಳಲ್ಲಿ ರಾಷ್ಟ್ರೀಯ ತನಿಖಾ ದಳ NIA ಯನ್ನು ಬಳಸಿ ಯಾವುದೇ ನೋಟೀಸ್ ನೀಡದೆ ರೈತ ಚಳುವಳಿಯ ಜೊತೆ ನಿಂತವರ ಮೇಲೆ ಉದ್ದೇಶ ಪೂರಕವಾಗಿ ಮೊಕದ್ದಮ್ಮೆಗಳನ್ನು ಧಾಖಲಿಸಿ ಅವರುಗಳುಗೆ ಕಿರುಕುಳ ನೀಡಲಾಗುತ್ತಿದೆ. ಇದು ರೈತ ಚಳುವಳಿಯನ್ನು ಮುರಿಯುವ ಅತ್ಯಂತ ನೀಚತನದ ಕೆಲಸವಾಗಿದ್ದು NIA ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವುದರಿಂದ ಕೂಡಲೇ ಈ ಕೆಲಸವನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.
ಜನವರಿ 26 ರಂದು ನಡೆಯುವ ಗಣತಂತ್ರದ ದಿನದಂದು ನಡೆಯುವ ಟ್ರ್ಯಾಕ್ಟರ್ ಮತ್ತು ರೈತರ ಪೆರೇಡ್ ನ ತಯಾರಿಯ ಬಗ್ಗೆ ಚರ್ಚಿಸಿದರು. ಅಂದು ಸರ್ಕಾರದ ಅಧಿಕೃತ ಪೆರೇಡ್ ಮುಗಿದ ನಂತರ ಲಕ್ಷಾಂತರ ಸಂಖ್ಯೆಯ ಟ್ರ್ಯಾಕ್ಟರ್ ಗಳ ಮೆರವಣಿಗೆಯನ್ನು ದೆಹಲಿಯ ಹೊರವಲಯದ ರಸ್ತೆಗಳ ಮೂಲಕ ಪ್ರಾರಂಬಿಸಲಾಗುವುದು ಮತ್ತು ರೈತರ ಪೆರೇಡನ್ನ ದೆಹಲಿಯಲ್ಲಿಯೇ ನಡೆಸಲಾಗುವುದು ಎಂದು ನಿರ್ದರಿಸಲಾಗಿದೆ. ಜೊತೆಗೆ ಪ್ರತಿಯೊಂದು ಟ್ರ್ಯಾಕ್ಟರ್ ಗೂ ತಿರಂಗದ ರಾಷ್ಟ್ರದ್ವಜವನ್ನ ಎತ್ತರಕ್ಕೆ ಕಡ್ಡಾಯವಾಗಿ ಕಟ್ಟಬೇಕು ಮತ್ತು ಅದರ ಕೆಳಗೆ ಸಂಬಂಧಪಟ್ಟ ಸಂಘಟನೆಗಳ ಬಾವುಟಗಳನ್ನು ಬಳಸುವುದು. ಯಾವುದೇ ರಾಜಕೀಯ ಪಕ್ಷದ ಬಾವುಟಗಳನ್ನು ಬಳಸುವಂತಿಲ್ಲ ಎಂದು ಎಂದು ನಿರ್ಧರಿಸಲಾಗಿದೆ.
ದೇಶದ ಗಣತಂತ್ರದ ದಿನವನ್ನ ಗೌರವಿಸಿ ಅತ್ಯಂತ ಶಿಸ್ತುಬದ್ದವಾಗಿ ಈ ಕಾರ್ಯಕ್ರಮವನ್ನು ಒಂದು ಐತಿಹಾಸಿಕ ಕಾರ್ಯಕ್ರಮವಾಗಿ ರೂಪಿಸಲು ಎಲ್ಲ ರೀತಿಯ ತಯಾರಿಗಳನ್ನು ನಡೆಸಲಾಗಿದೆ. ದೆಹಲಿಗೆ ಬರಲು ಸಾಧ್ಯವಾಗದವರು ಆಯಾಯ ರಾಜ್ಯಗಳ ರಾಜ್ಯಧಾನಿಗಳಲ್ಲಿ ದೊಡ್ಡಮಟ್ಟದಲ್ಲಿ ಈ ಪೆರೇಡ್ ಗಳನ್ನು ನಡೆಸಬೇಕೆಂದು ಕರೆ ನೀಡಲಾಗಿದೆ. ಇದರ ಜೊತೆಗೆ ಇದುವರೆಗೆ ಈ ಚಳುವಳಿಯಲ್ಲಿ ಹುತಾತ್ಮರಾದ 120 ಕ್ಕೂ ಹೆಚ್ಚು ರೈತರಿಗೆ ಗೌರವ ಸಲ್ಲಿಸಲು ಹರಿಯಾಣ ರಾಜ್ಯದ ಪ್ರತಿ ಗ್ರಾಮಗಳ ಪ್ರತಿ ಮನೆಯಿಂದಲೂ ಒಂದು ಚಮಚ ತುಪ್ಪ ಮತ್ತು ಒಂದು ಹಿಡಿ ಮಣ್ಣನ್ನ ಸಂಗ್ರಹಿಸಿ ದೆಹಲಿಗೆ ತಂದು ಪ್ರತಿಭಟನಾ ಸ್ಥಳದಲ್ಲಿ ಅದರಲ್ಲಿ ಹುತಾತ್ಮ ಸ್ಥಂಭವನ್ನು ನಿರ್ಮಿಸಿ ಗೌರವ ಸಮರ್ಪಿಸಲಾಗುತ್ತದೆ. ಮತ್ತು ಈ ಚಳುವಳಿ ನಡೆಯುವವರೆಗೆ ಈ ಜ್ಯೋತಿಯನ್ನು ಉರಿಸಲಾಗುವುದು ಎಂದು ನಿರ್ಧರಿಸಲಾಗಿದೆ. ಇದರ ಜೊತೆಗೆ ಪೆರೆಡ್ ನ ದಿನದಂದು ಪ್ರತಿ ರಾಜ್ಯಗಳಿಂದಲೂ ರೈತರ ಸಮಸ್ಯೆಗಳನ್ನು ಬಿಂಬಿಸುವ ಸ್ಥಬ್ದ ಚಿತ್ರಗಳನ್ನು ಟ್ರ್ಯಾಕ್ಟರ್ ಗಳ ಮೇಲೆ ಮೆರವಣಿಗೆ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಈ ಪೆರೆಡನ್ನು ಸರ್ಕಾರ ತನ್ನ ಶಕ್ತಿಯನ್ನು ಪ್ರಯೋಗಿಸಿ ಅಡ್ಡಿಪಡಿಸಲು ಪ್ರತ್ನಿಸಿದರೂ ನಾವುಗಳು ಶಾಂತಿಯುತವಾಗಿ ನಮ್ಮ ಕಾರ್ಯಕ್ರಮವನ್ನು ಮುಂದುವರೆಸುತ್ತೇವೆ ಎಂದು ಹೇಳಿದರು. ಸಂಜೆ ಕೃಷಿ ಕೂಲಿಕಾರರ ಸಂಘದ ರಾಷ್ಟ್ರೀಯ ಸಹ ಕಾರ್ಯದರ್ಶಿ ವಿಕ್ರಮ್ ಸಿಂಗ್ ಜೊತೆಗೆ ನಡೆಸಿದ ಮಾತುಕತೆಯಲ್ಲಿ ಸೆಳೆದ ಅಂಶಗಳೆಂದರೆ. ಇಂತಹ ಚಳುವಳಿಯನ್ನು ಸ್ವಾತಂತ್ರ್ಯ ನಂತರದಲ್ಲಿ ಭಾರತ ನೋಡಿರಲಿಲ್ಲ ಅಷ್ಟು ಪರಿಣಾಮಕಾರಿಯಾದ ಮತ್ತು ಹತ್ತು ಹಲವು ಮಾದರಿಗಳನ್ನು ಹುಟ್ಟು ಹಾಕಿದ ಚಳುವಳಿ ಇದಾಗಿದೆ. ಇದರಲ್ಲಿ ರೈತರ ಜೊತೆಗೆ, ಕೂಲಿಕಾರರು, ಮಹಿಳೆಯರು, ವಿದ್ಯಾರ್ಥಿ, ಯುವಜನರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಮತ್ತು ಸಮಾಜದ ಇತರೆ ವರ್ಗದ ಜನವಿಭಾಗ, ಸಾಹಿತಿಗಳು, ಲೇಖಕರು, ದೆಹಲಿಯ ನಾಗರೀಕರು ದೊಡ್ಡ ಪ್ರಮಾಣದಲ್ಲಿ ಸಹಕಾರ ನೀಡುತ್ತಿದ್ದಾರೆ. ಆದ್ದರಿಂದ ಇದೊಂದು ಐತಿಹಾಸಿಕ ಹೋರಾಟವಾಗಿ ಪರಿವರ್ತನೆಗೊಂಡಿದೆ ಎಂದರು.