ಆಧುನಿಕ ನಾಗರಿಕತೆಯೂ ಉಳ್ಳವರ ಬೌದ್ಧಿಕ ಕೌರ್ಯವೂ

ಬಡತನ ಹಸಿವೆಯ ನೋವು ಅರಿಯಲು ಸಾಮಾಜಿಕ-ಮಾನವೀಯ ಒಳನೋಟ ಅತ್ಯವಶ್ಯ 

ನಾ ದಿವಾಕರ

ಬಡತನ ಮತ್ತು ಹಸಿವೆಯನ್ನು ಅನುಭವಿಸುವವರ ವ್ಯಕ್ತಿಗತ ನೆಲೆಯಲ್ಲೇ ಕಾಣುವ ಸಮಾಜದ ಈ ವರ್ಗದ ದೃಷ್ಟಿಯಲ್ಲಿ ಹಸಿವೆ ಮತ್ತು ಬಡತನ ಎರಡೂ ಸಹ ನಮ್ಮಸಾಮಾಜಿಕ-ಆರ್ಥಿಕ ವ್ಯವಸ್ಥೆ ಸೃಷ್ಟಿಸುವಂತಹ ಸಮಸ್ಯೆಗಳು ಎಂದು ಕಾಣುವುದೇ ಇಲ್ಲ. ಹಾಗಾಗಿಯೇ ರಾಜಕೀಯವಾಗಿ ತನ್ನದೇ ಆದ ಪ್ರಭಾವ ವಲಯವನ್ನು ಸೃಷ್ಟಿಸಿಕೊಳ್ಳುವ ಈ ವರ್ಗಗಳು ಸರ್ಕಾರಗಳ ಯಾವುದೇ ಜನಕಲ್ಯಾಣ ಯೋಜನೆಗಳನ್ನು ಸಮಾಜದ ಹೊರೆ ಎಂದೋ, ಬೊಕ್ಕಸದ ಹೊರೆ ಎಂದೋ ಭಾವಿಸುತ್ತವೆ.

  ಆಧುನಿಕೀಕರಣಗೊಂಡ ಒಂದು ಸುಶಿಕ್ಷಿತ ಸಮಾಜವು ಸಾಮಾನ್ಯವಾಗಿ ಸ್ವತಃ ನಾಗರಿಕತೆಯ ಉನ್ನತ ಹಂತ ತಲುಪಿರುವ ದಾರ್ಷ್ಟ್ಯತೆಯನ್ನು ಹೊಂದಿರುತ್ತದೆ. ಸಾರ್ವಜನಿಕ ಸಂಕಥನಗಳಲ್ಲಿ, ಸಾಮಾಜಿಕ ವಿಶ್ಲೇಷಣೆಗಳಲ್ಲಿ ಸಾಮಾನ್ಯವಾಗಿ ಸಮಾಜದ ಸದಸ್ಯರನ್ನು ನಾಗರಿಕರು ಎಂದೇ ಸಂಬೋಧಿಸುವಾಗ ನಮ್ಮ ಮೂಲ ಪರಿಕಲ್ಪನೆಯಲ್ಲಿ ಈ ಸದಸ್ಯರೆಲ್ಲರೂ ನಾಗರಿಕತೆಯನ್ನು ಮೈಗೂಡಿಸಿಕೊಂಡಿರುವ ಆಧುನಿಕ ಸಮಾಜದ ಒಂದು ಭಾಗ ಎಂದೇ ಪರಿಭಾವಿಸುತ್ತೇವೆ. ಹಾಗೆಯೇ ಮತ್ತೊಂದು ಬದಿಯಲ್ಲಿ ಆಧುನಿಕ ಸಮಾಜವು ತನ್ನೊಳಗೇ ರೂಪಿಸಿಕೊಂಡ ಜೀವನ ಶೈಲಿ ಹಾಗೂ ಬದುಕಿನ ಮಾದರಿಯಿಂದ ಹೊರತಾಗಿ ಕಾಣುವವರನ್ನು ಅನಾಗರಿಕರು ಎಂದೂ ಬಣ್ಣಿಸುವುದಿದೆ.                       ʼನಾಗರಿಕತೆʼ ಎನ್ನುವ ವಿಶಾಲ ವ್ಯಾಪ್ತಿಯ ಅರ್ಥೈಸುವಿಕೆಯಿಂದ ಹೊರಬಂದು, ಈ ಪದವನ್ನು ನಿರ್ವಚಿಸುವಾಗ ನಾವು ಸಹಜವಾಗಿಯೇ ವರ್ತಮಾನದ ಸಮಾಜದಲ್ಲಿ ಅಪೇಕ್ಷಿಸಲಾಗುವ ಸೌಜನ್ಯ, ಸಂಯಮ ಮತ್ತು ಸರ್ವಸಮ್ಮತ ನಡವಳಿಕೆಗಳನ್ನು ನಾಗರಿಕತೆಯ ಚೌಕಟ್ಟಿನಲ್ಲಿ ಪರಾಮರ್ಶಿಸುತ್ತೇವೆ.

 ಸಾಮಾಜಿಕ-ಸಾಂಸ್ಕೃತಿಕ ಔನ್ನತ್ಯ

ಭಾರತದಂತಹ ವೈವಿಧ್ಯಮಯ ಬಹುಸಾಂಸ್ಕೃತಿಕ ಸಮಾಜದಲ್ಲಿ ಜಾತಿ-ಮತ ಹಾಗೂ ವರ್ಗಾಧಾರಿತ ಶ್ರೇಣೀಕರಣವೂ ಅಂತರ್ಗತವಾಗಿರುವುದರಿಂದ ಈ ನಾಗರಿಕತೆ ಎಂಬ ಪದವೂ ಸಹ ಒಂದು ಪ್ರಬಲ ಮೇಲ್ವರ್ಗದ ಖಾಸಗಿ ಸ್ವತ್ತಾಗಿ ಪರಿಣಮಿಸಿರುತ್ತದೆ. ತಾನು ರೂಢಿಸಿಕೊಂಡು ಬಂದಿರುವ ಜೀವನಶೈಲಿಯನ್ನು ಅಥವಾ ನಿತ್ಯ ನಡವಳಿಕೆಗಳನ್ನೇ ಶ್ರೇಷ್ಠ ಎಂದು ಭಾವಿಸುವ ಶ್ರೇಣೀಕೃತ ಜಾತಿ ವ್ಯವಸ್ಥೆಯ ಮೇಲ್ಪದರದ ಸಮಾಜ ತನ್ನ ಗ್ರಹಿಕೆಗೆ ನಿಲುಕದ ಅಥವಾ ತನ್ನ ನಿಷ್ಕರ್ಷೆಗೆ ಎಟುಕದ ಉಳಿದೆಲ್ಲ ಗುಂಪುಗಳನ್ನೂ, ವರ್ಗಗಳನ್ನೂ ಭಿನ್ನವಾಗಿಯೇ ಕಾಣುತ್ತದೆ. ಇದೇ ಧೋರಣೆಯನ್ನೇ ತಾನು ಆಚರಿಸುವ ಸಾಂಸ್ಕೃತಿಕ ನೆಲೆಗಳಿಗೂ ವಿಸ್ತರಿಸುವ ಮೂಲಕ ಸಂಸ್ಕೃತಿಯ ವೈಶಾಲ್ಯವನ್ನು ಆದಷ್ಟೂ ಸಂಕುಚಿತಗೊಳಿಸುವ ಮೇಲ್ಜಾತಿಯ ಮೇಲ್ಪದರದ ಸಮಾಜ, ಸಮಾಜದ ಸಮಸ್ತ ಸಾಂಸ್ಕೃತಿಕ ನೆಲೆಗಳಲ್ಲಿ ತನ್ನ ಪಾರಮ್ಯ ಸಾಧಿಸಲು ಸದಾ ಹೆಣಗಾಡುತ್ತಲೇ ಇರುತ್ತದೆ. ಈ ಪ್ರಕ್ರಿಯೆಯಲ್ಲೇ ಮೇಲ್ಜಾತಿ ಅಥವಾ ಮೇಲ್ಪದರದ ಸಾಂಸ್ಕೃತಿಕ ಔದಾತ್ಯದ ನೆಲೆಯಲ್ಲಿ ತನ್ನ ಪರಿಭಾವಿತ ಸಂಸ್ಕೃತಿಯಿಂದ ಹೊರಗುಳಿಯುವ ಎಲ್ಲ ಜನಸಮುದಾಯಗಳನ್ನೂ ವಿಶಾಲ ಸಮಾಜದ ಚೌಕಟ್ಟಿನಿಂದ ಹೊರಗುಳಿಸುತ್ತದೆ ಅಥವಾ ಅಂಚಿಗೆ ತಳ್ಳುತ್ತದೆ.

ಈ ಪ್ರಕ್ರಿಯೆಯಲ್ಲೇ ಭಾರತೀಯ ಸಮಾಜದಲ್ಲಿ ಈವರೆಗೂ ಗ್ರಾಮೀಣ ಪರಂಪರೆಗಳು, ಸಾಂಸ್ಕೃತಿಕ ವೈವಿಧ್ಯತೆಗಳು, ಜನಪದ ಸಂಸ್ಕೃತಿಯ ವಿಭಿನ್ನ ಪ್ರವೃತ್ತಿಗಳು ಹಾಗೂ ಬುಡಕಟ್ಟು ಸಮುದಾಯಗಳ ಸಂಸ್ಕೃತಿಗಳು ಬಾಹ್ಯ ಸಮಾಜದಿಂದ ದೂರವೇ ಉಳಿದಿವೆ. ಈ ವೈವಿಧ್ಯಮಯ ಸಂಸ್ಕೃತಿಯ ವಿಭಿನ್ನ ನೆಲೆಗಳೇ ಸಮಸ್ತ ಭಾರತದ ಅಂತಃಸತ್ವವಾಗಿದ್ದರೂ ಸಹ ಇದನ್ನು ಪ್ರತಿನಿಧಿಸುವ ಜನಸಮುದಾಯಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಕೆಳಸ್ತರದಲ್ಲೇ ಸ್ಥಾನಪಡೆದಿರುತ್ತವೆ. ತಳಸಮುದಾಯಗಳ ಸಂಸ್ಕೃತಿ ಎಂದೇ ಪರಿಗಣಿಸಲ್ಪಡುವ ಈ ಸಾಂಸ್ಕೃತಿಕ ನೆಲೆಗಳಲ್ಲಿ ಸಹಜವಾಗಿಯೇ ಅಂತರ್ಗತವಾಗಿರಬಹುದಾದ ವರ್ಗತಾರತಮ್ಯ ಹಾಗೂ ಪಿತೃಪ್ರಧಾನತೆಯ ಲಕ್ಷಣಗಳು ಈ ಸಮಾಜಗಳ ಮೇಲ್‌ ಚಲನೆಯಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡೇ ಬರುತ್ತವೆ.  ಹಾಗಾಗಿಯೇ ಮೇಲ್ಜಾತಿ ಅಥವಾ ಮೇಲ್ಪದರದ ಸಮಾಜದಲ್ಲಿ ಸಮ್ಮಿಳಿತವಾಗುವ ತಳಸಮುದಾಯಗಳ ಒಂದು ವರ್ಗವೂ ಸಹ ತನ್ನ ಆರ್ಥಿಕ ಮುನ್ನಡೆಯೊಂದಿಗೇ ಆಧುನಿಕತೆಯನ್ನೂ ಮೈಗೂಡಿಸಿಕೊಂಡು, ಬಾಹ್ಯ ಸಮಾಜದಲ್ಲಿ ನಿರ್ವಚಿಸಲಾಗುವ ʼ ನಾಗರಿಕತೆ ʼಯ ಚೌಕಟ್ಟಿನೊಳಗೇ ತನ್ನ ಗ್ರಹೀತಗಳನ್ನೂ ರೂಢಿಸಿಕೊಳ್ಳುತ್ತದೆ.

 ಸಾಮಾಜಿಕ-ಆರ್ಥಿಕ ನೆಲೆಗಳು

ನವ ಉದಾರವಾದ ಮತ್ತು ಬಂಡವಾಳಶಾಹಿ ಆರ್ಥಿಕತೆಯು ಈ ಮೇಲ್ವರ್ಗದಲ್ಲಿ ಸೃಷ್ಟಿಸುವಂತಹ ಶ್ರೀಮಂತಿಕೆ, ಸುಸ್ಥಿರತೆ ಹಾಗೂ ತಂತ್ರಜ್ಞಾನಾಧಾರಿತ ಆಧುನಿಕತೆಯ ಚೌಕಟ್ಟಿನೊಳಗೇ ಈ ಇಡೀ ಮೇಲ್ವರ್ಗಗಳು ತಮ್ಮ ಬದುಕನ್ನು ರೂಪಿಸಿಕೊಳ್ಳುತ್ತವೆ. ಈ ವರ್ಗವೇ ಸಮಾಜದ ಸಾಂಸ್ಥಿಕ ಹಾಗೂ ಸಂಘಟನಾತ್ಮಕ ನೆಲೆಗಳಲ್ಲಿ ಪ್ರಧಾನ ಭೂಮಿಕೆಯನ್ನು ನಿರ್ವಹಿಸುತ್ತಾ, ರಾಜಕೀಯ ಪಾರಮ್ಯವನ್ನೂ ತನ್ನದಾಗಿಸಿಕೊಳ್ಳುತ್ತದೆ. ನವ ಭಾರತದ ಸಂದರ್ಭದಲ್ಲಿ ಈ ಎಲ್ಲ ಪ್ರವೃತ್ತಿಗಳು ಮೇಳೈಸಿರುವುದನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಮಾರುಕಟ್ಟೆ ಅರ್ಥವ್ಯವಸ್ಥೆಯು ಈ ಸಮಾಜವನ್ನು ಎಲ್ಲ ಮೂಲೆಗಳಿಂದಲೂ ಆವರಿಸುವ ಮೂಲಕ ಸಾಂಸ್ಕೃತಿಕ-ಬೌದ್ಧಿಕ ಚಿಂತನೆಗಳನ್ನೂ ಸಹ ವಿನಿಮಯಯೋಗ್ಯ ಸರಕುಗಳನ್ನಾಗಿ ಪರಿವರ್ತಿಸುತ್ತದೆ. ಸಹಜವಾಗಿಯೇ ಈ ವಾತಾವರಣದಲ್ಲಿ ನಿರ್ಮಿತವಾಗುವ ಸಾರ್ವಜನಿಕ ಸಂಕಥನಗಳು, ವ್ಯಕ್ತಿಗತ ಅಭಿಪ್ರಾಯಗಳು ಹಾಗೂ ಪ್ರತಿಪಾದನೆಗಳು ಈ ಸರಕುಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಲೇ ವಿಸ್ತರಿಸುತ್ತಿರುತ್ತವೆ.

ಈ ವಿಸ್ತರಿಸುವ ಸಂಕಥನಗಳಲ್ಲಿ ಆರ್ಥಿಕವಾಗಿ ಅಂಚಿಗೆ ತಳ್ಳಲ್ಪಟ್ಟ, ಸಾಂಸ್ಕೃತಿಕವಾಗಿ ನಿಕೃಷ್ಟವಾಗಿ ಕಾಣಲ್ಪಡುವ, ಸಾಮಾಜಿಕವಾಗಿ ಹೊರಗಿನವರಾಗಿ ಉಳಿಯುವ ಜನಸಮುದಾಯಗಳ ಜೀವನಮಟ್ಟ, ಜೀವನಶೈಲಿ ಹಾಗೂ ಜೀವನೋಪಾಯದ ಮಾರ್ಗಗಳು ಇವೆಲ್ಲವೂ ಸಹ ಅನುಕಂಪ ಅಥವಾ ತಿರಸ್ಕಾರದ ನೆಲೆಯಲ್ಲಿ ನಿಷ್ಕರ್ಷಿಸಲ್ಪಡುತ್ತವೆ. “ ಆ ಬಡಜನತೆಯ ಬವಣೆ ನೋಡಿದರೆ ಕರುಳು ಚುರುಕ್‌ ಅನ್ನುತ್ತೆ ಕಣ್ರೀ” ಎಂಬ ಅನುಕಂಪದ ಮಾತುಗಳ ನಡುವೆಯೇ ಚುರುಕುಮುಟ್ಟಿಸುವಂತಹ ಜೀವನ ನಡೆಸುವ ಆ ಜನಸಮೂಹಗಳನ್ನು ತಿರಸ್ಕಾರ ಅಥವಾ ಅಸಡ್ಡೆಯ ಭಾವನೆಯಿಂದ ನೋಡುವುದು ಢಾಳಾಗಿ ಕಾಣುವಂತಹ ವಿದ್ಯಮಾನ. ಬಡತನ ಮತ್ತು ಹಸಿವೆಯನ್ನು ಅನುಭವಿಸುವವರ ವ್ಯಕ್ತಿಗತ ನೆಲೆಯಲ್ಲೇ ಕಾಣುವ ಸಮಾಜದ ಈ ವರ್ಗದ ದೃಷ್ಟಿಯಲ್ಲಿ ಹಸಿವೆ ಮತ್ತು ಬಡತನ ಎರಡೂ ಸಹ ನಮ್ಮ ಸಾಮಾಜಿಕ-ಆರ್ಥಿಕ ವ್ಯವಸ್ಥೆ ಸೃಷ್ಟಿಸುವಂತಹ ಸಮಸ್ಯೆಗಳು ಎಂದು ಕಾಣುವುದೇ ಇಲ್ಲ. ಹಾಗಾಗಿಯೇ ರಾಜಕೀಯವಾಗಿ ತನ್ನದೇ ಆದ ಪ್ರಭಾವ ವಲಯವನ್ನು ಸೃಷ್ಟಿಸಿಕೊಳ್ಳುವ ಈ ವರ್ಗಗಳು ಸರ್ಕಾರಗಳ ಯಾವುದೇ ಜನಕಲ್ಯಾಣ ಯೋಜನೆಗಳನ್ನು ಸಮಾಜದ ಹೊರೆ ಎಂದೋ, ಬೊಕ್ಕಸದ ಹೊರೆ ಎಂದೋ ಭಾವಿಸುತ್ತವೆ.

ಸವಲತ್ತುಗಳತ್ತಲೇ ಎಲ್ಲರ ಚಿತ್ತ

ಕರ್ನಾಟಕ ಸರ್ಕಾರ ಘೋಷಿಸಿರುವ ಉಚಿತ ಕೊಡುಗೆಗಳ ಸುತ್ತ ನಡೆಯುತ್ತಿರುವ ಚರ್ಚೆಗಳನ್ನು ಗಮನಿಸಿದರೆ, ಸ್ವತಃ ʼನಾಗರಿಕʼ ಎಂದು ಕರೆದುಕೊಳ್ಳುವ ಈ ಸಮಾಜದ ಅಂತರಾಳವನ್ನು ಅರ್ಥಮಾಡಿಕೊಳ್ಳಬಹುದು. ಕೋವಿದ್‌ ಸಂಕಷ್ಟದ ಸಮಯದಲ್ಲಿ ಜನಸಾಮಾನ್ಯರ ಜೀವನೋಪಾಯ ಮಾರ್ಗಗಳೇ ಮುಚ್ಚಲ್ಪಟ್ಟಾಗ (ಇದಕ್ಕೆ ಅವೈಜ್ಞಾನಿಕ ಲಾಕ್‌ಡೌನ್‌ ಸಹ ಒಂದು ಕಾರಣ ಎನ್ನುವುದನ್ನೂ ಒಪ್ಪದ ಒಂದು ಬೃಹತ್‌ ವರ್ಗ ನಮ್ಮ ನಡುವೆ ಇದೆ) ಕೇಂದ್ರ ಸರ್ಕಾರ ಪ್ರತಿಯೊಂದು ಬಡ ಕುಟುಂಬಕ್ಕೂ ತಿಂಗಳಿಗೆ ಐದು ಕಿಲೋ ಪಡಿತರವನ್ನು ವಿತರಿಸುವ ಯೋಜನೆಯನ್ನು ಘೋಷಿಸಿತ್ತು. ಕೋವಿದ್‌ ಸಾಂಕ್ರಾಮಿಕವು ಸಂಪೂರ್ಣ ಮರೆಯಾದ ನಂತರವೂ ಈ ವರ್ಷದ ಡಿಸೆಂಬರ್‌ವರೆಗೂ ಈ ಯೋಜನೆಯನ್ನು 80 ಕೋಟಿ ಜನರಿಗೆ ತಲುಪುವಂತೆ ವಿಸ್ತರಿಸಲಾಗಿದೆ. ಇದೇ ಯೋಜನೆಯ ಮತ್ತೊಂದು ಸ್ವರೂಪವನ್ನು ಕರ್ನಾಟಕ ಸರ್ಕಾರದ ಉಚಿತ ಹತ್ತು ಕಿಲೋ ಅಕ್ಕಿ ವಿತರಿಸುವ ಯೋಜನೆಯಲ್ಲಿ ಕಾಣಬಹುದು. ಕರ್ನಾಟಕದ ಮಟ್ಟಿಗೆ ಇದೇನೂ ಹೊಸ ಯೋಜನೆಯಲ್ಲ. 2013ರಲ್ಲಿ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿದ್ದ ಏಳು ಕಿಲೋ ಉಚಿತ ಅಕ್ಕಿ ನೀಡುವ ಯೋಜನೆಯ ವಿಸ್ತೃತ ರೂಪ.

ರಾಜಕೀಯ ಕಾರಣಗಳಿಗೇ ಆದರೂ ಈ ಯೋಜನೆ ಹುಟ್ಟುಹಾಕಿರುವ ಸಾರ್ವಜನಿಕ ಚರ್ಚೆಗಳು ಮತ್ತು ಮಾಧ್ಯಮ ಸಂವಾದಗಳು ಮೇಲ್ವರ್ಗದ ಸಮಾಜದಲ್ಲಿ ಹುದುಗಿದ್ದ ಎಲ್ಲ ಕೊಳಕುಗಳನ್ನು ಒಮ್ಮೆಲೆ ಹೊರಹಾಕಿಬಿಟ್ಟಿದೆ. ರಾಜ್ಯ ಸರ್ಕಾರ ಹತ್ತು ಕಿಲೋ ಅಕ್ಕಿ ನೀಡುವ ಘೋಷಣೆ ಜಾರಿಗೊಳಿಸಿದ ಮರುಕ್ಷಣದಲ್ಲೇ ಕೇಂದ್ರ ಸರ್ಕಾರ ರಾಜ್ಯಕ್ಕೆ ಪೂರೈಸುವ ದಾಸ್ತಾನು ಸ್ಥಗಿತಗೊಳಿಸಿರುವುದು, ತಾಂತ್ರಿಕ-ಆಡಳಿತಾತ್ಮಕ ಕಾರಣಗಳೇನೇ ಇದ್ದರೂ ಅನಪೇಕ್ಷಣೀಯವಾದ ಕ್ರಮ. ತನ್ನ ಆಡಳಿತಾವಧಿಯಲ್ಲಿ ಉಚಿತ ಅಕ್ಕಿಯ ಪ್ರಮಾಣವನ್ನು ಮೂರು ಕಿಲೋಗೆ   ಇಳಿಸಿದ್ದ ರಾಜ್ಯ ಬಿಜೆಪಿ ಈ ಸಂದರ್ಭದಲ್ಲಿ ಕೇಂದ್ರದ ಮೇಲೆ ಒತ್ತಡ ಹೇರಿ ಅಕ್ಕಿ ಪೂರೈಸುವಂತೆ ಮಾಡಬೇಕಿತ್ತು. ಏಕೆಂದರೆ ಇದು ರಾಜ್ಯದ ಸಮಸ್ತ ಬಡಜನತೆಗೆ ಸರ್ಕಾರ ನೀಡುವ ಒಂದು ಸವಲತ್ತು. ಈ ಉಚಿತ ಕೊಡುಗೆಯನ್ನು ಲೇವಡಿ ಮಾಡುವ ನೈತಿಕ ಹಕ್ಕು ಇಲ್ಲದ ಬಿಜೆಪಿ ನಾಯಕರು, ಉಚಿತ ಅಕ್ಕಿಯನ್ನು ಪಡೆಯುವ ಬಡಜನತೆಯ ಪೈಕಿ ಬಿಜೆಪಿಗೆ ಮತ ನೀಡಿದವರೂ ಇದ್ದಾರೆ.  ಎನ್ನುವುದನ್ನಾದರೂ ಗಮನಿಸಬೇಕಲ್ಲವೇ ? ಈ ಯೋಜನೆ ವಿಫಲವಾದರೆ ತನಗೆ ರಾಜಕೀಯ ಲಾಭವಾಗುತ್ತದೆ ಆಲೋಚನೆಯ ಹಿಂದೆ ಬಡಜನತೆಗೆ ಸವಲತ್ತುಗಳು ತಪ್ಪಿದರೆ ಸಂಭ್ರಮಿಸುವ ಕ್ರೌರ್ಯವೂ ಅಡಗಿರುವುದನ್ನು ನಾವು ಗಮನಿಸಬೇಕಿದೆ.

ಇದೇ ಕ್ರೌರ್ಯವನ್ನು ಇಂದು ಸಾಮಾಜಿಕ ಮಾಧ್ಯಮಗಳ ಮೂಲಕ ಸಮಾಜದ ಹಿತವಲಯಗಳಿಂದ ವ್ಯಕ್ತವಾಗುವ ಅಭಿಪ್ರಾಯಗಳಲ್ಲಿ ಕಾಣಬಹುದಾಗಿದೆ. ಈ ಉಚಿತ ಕೊಡುಗೆಯನ್ನು ವಿರೋಧಿಸುವ ಅಥವಾ ಲೇವಡಿ ಮಾಡುವ ಬಿಜೆಪಿ ತನ್ನ ಆಡಳಿತಾವಧಿಯಲ್ಲಿ ರಾಜ್ಯದ ಸಮಸ್ತ ಜನತೆಯ ಜೀವನಮಟ್ಟವನ್ನು ಇಂತಹ ಕೊಡುಗೆಗಳನ್ನು ತಿರಸ್ಕರಿಸುವ ಮಟ್ಟಿಗೆ ಸುಧಾರಣೆ ಮಾಡಲು ಸಾಧ್ಯವಾಗಿದೆಯೇ ? ಈ ಆತ್ಮಾವಲೋಕನದ ಪ್ರಶ್ನೆ ಕೆಲವು ನಾಯಕರನ್ನಾದರೂ ಕಾಡಬೇಕಲ್ಲವೇ ? ವಿದ್ಯುನ್ಮಾನ ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಪ್ರಖಾಂಡ ವಿದ್ವತ್‌ ಪ್ರದರ್ಶನ ಮಾಡುತ್ತಾ ಈ ಯೋಜನೆಯನ್ನು ಲೇವಡಿಮಾಡುವ ಮೇಲ್ವರ್ಗದ ವಕ್ತಾರರು ತಮ್ಮ ಕ್ಯಾಮರಾಗಳನ್ನು ರಾಜ್ಯದಲ್ಲಿ ನಿರುದ್ಯೋಗ, ದಾರಿದ್ರ್ಯ, ವಸತಿಹೀನತೆ, ಅಪೌಷ್ಟಿಕತೆ ಹಾಗೂ ಕಡುಬಡತನದಿಂದ ಬಳಲುತ್ತಿರುವ ಅಸಂಖ್ಯಾತ ಜನತೆಯತ್ತ ತಿರುಗಿಸಿದರೆ ಸತ್ಯದರ್ಶನವಾದರೂ ಆದೀತು. ಆದರೆ ಬಡತನ ಮತ್ತು ಹಸಿವೆಯನ್ನು ಅರ್ಥಮಾಡಿಕೊಳ್ಳಲು ಕೇವಲ ಕಣ್ಣೋಟವಷ್ಟೇ ಸಾಲದು. ಸಾಮಾಜಿಕ ಒಳನೋಟ ಹಾಗೂ ಮಾನವೀಯ ಕಾಳಜಿಯೂ ಅಗತ್ಯವಾಗಿ ಇರಬೇಕಾಗುತ್ತದೆ. ವ್ಯಕ್ತಿಗತವಾಗಿ ಅಲ್ಲದಿದ್ದರೂ ತಾವು ಬೆಳೆದ ಪರಿಸರದಲ್ಲಿ ಹಸಿವು ಮತ್ತು ದಾರಿದ್ರ್ಯದ ಸಂಕಟಗಳನ್ನು ಅನುಭವ-ಅನುಭಾವದ ನೆಲೆಯಲ್ಲಿ ಕಾಣದಿದ್ದವರಿಗೆ, ಸಮಾಜದಲ್ಲಿ ತಾಂಡವಾಡುತ್ತಿರುವ ಬಡತನ ನಗಣ್ಯವಾಗಿಯೇ ಕಾಣುತ್ತದೆ. ಉಚಿತ ಅಕ್ಕಿ ಕೊಟ್ಟರೆ ಜನರು ಸೋಮಾರಿಗಳಾಗಿಬಿಡುತ್ತಾರೆ ಎಂಬ ಅಪ್ರಬುದ್ಧ ಅಭಿಪ್ರಾಯಗಳು ಈ ವರ್ಗದಿಂದಲೇ ಉಗಮಿಸುತ್ತಿರುತ್ತವೆ.

 ಸಮಾಜದ ಸುಡುವಾಸ್ತವಗಳ ನಡುವೆ

ತಮ್ಮ ನಿತ್ಯ ಬದುಕಿಗಾಗಿ, ನಾಳೆಯ ಯೋಚನೆ ಇಲ್ಲದೆ ಕೂಳು-ಸೂರಿಲ್ಲದಿದ್ದರೂ ದುಡಿಯುವ ಅಸಂಖ್ಯಾತ ಜನರು ತಮ್ಮ ದೈಹಿಕ ಶ್ರಮವನ್ನೇ ಆಧರಿಸಿ ಬದುಕುವವರಾಗಿರುತ್ತಾರೆ. ಇವರಲ್ಲಿ ಅನ್ಯರ ಸ್ವತ್ತು ಬಾಚಿಕೊಳ್ಳುವ ಮನೋಭಾವ ಕಿಂಚಿತ್ತೂ ಇರುವುದಿಲ್ಲ. ಅಪಾರ ಹಸಿವೆಯ ನಡುವೆಯೂ ಹಂಚಿತಿನ್ನುವ ಸಂಯಮ-ಸೌಜನ್ಯ ಇರುತ್ತದೆ. ಈ ಗುಣಲಕ್ಷಣಗಳಿಂದ ಸೃಷ್ಟಿಯಾಗುವ ಸಹನೆಯೇ ಅವರಲ್ಲಿ ಶೋಷಣೆಯನ್ನು ಸಹಿಸಿಕೊಳ್ಳುವ ಮನಸ್ಥಿತಿಯನ್ನೂ ಉಂಟುಮಾಡುತ್ತದೆ. ಏಕೆಂದರೆ ಅಸಹನೆ ಅವರ ಅನ್ನಕ್ಕೆ ಕಂಟಕವಾಗುತ್ತದೆ. ಸರ್ಕಾರಗಳು ಉಚಿತ ಅಕ್ಕಿ ಅಥವಾ ಪಡಿತರ ನೀಡದಿದ್ದರೂ ಈ ಜನತೆ ದಂಗೆ ಏಳುವುದಿಲ್ಲ, ಸರ್ಕಾರಿ ನೌಕರರಂತೆ ವಿಧಾನಸೌಧದ ಮುಂದೆ ಧರಣಿ ಹೂಡುವುದಿಲ್ಲ. ಕಾರಣವೇನೆಂದರೆ ಇವರು ಬಡತನವನ್ನು ತಮ್ಮ ನಿತ್ಯಕರ್ಮ ಎಂದೇ ಸ್ವೀಕರಿಸಿ ಜೀವನ ನಡೆಸುತ್ತಾರೆ. ಈ ಬಡಜನತೆಯ ಸಹನೆಯ ಕಟ್ಟೆ ಒಡೆಯಲು ಅವಕಾಶ ನೀಡಕೂಡದು ಎಂಬ ಕಾರಣಕ್ಕೇ ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಕಲ್ಯಾಣ ರಾಜ್ಯದ ಯೋಜನೆಗಳು, ಉಚಿತ ಕೊಡುಗೆಗಳು ರಾರಾಜಿಸುತ್ತವೆ. ಈ ಅರ್ಥವ್ಯವಸ್ಥೆಯ ಫಲಾನುಭವಿಗಳಿಗೆ ಇಂತಹ ಜನಪರ ಕಾಳಜಿಯೇ ಅಸಹನೀಯವಾಗುವುದು ʼನಾಗರಿಕʼ ಎಂದು ಬೆನ್ನುತಟ್ಟಿಕೊಳ್ಳುವ ಸಮಾಜದೊಳಗಿನ ಅಮಾನುಷ ಕ್ರೌರ್ಯದ ಸಂಕೇತವಾಗಿದೆ.

ಈ ಕ್ರೌರ್ಯದ ಮತ್ತೊಂದು ಆಯಾಮವನ್ನು ಮಹಿಳೆಯರಿಗೆ ಸರ್ಕಾರ ನೀಡಿರುವ ಉಚಿತ ಪ್ರಯಾಣದ ಸೌಲಭ್ಯದ ನಡುವೆ ಕಾಣುತ್ತಿದ್ದೇವೆ. ಇತಿಹಾಸದಲ್ಲೇ ಪ್ರಪ್ರಥಮ ಬಾರಿ ಮುದ್ರಣ-ದೃಶ್ಯ-ಸಾಮಾಜಿಕ-ವಿದ್ಯುನ್ಮಾನ ಮಾಧ್ಯಮಗಳು ರಾಜ್ಯ ಸಾರಿಗೆ ಬಸ್ಸುಗಳಲ್ಲಿ ನಿತ್ಯ ಪ್ರಯಾಣ ಮಾಡುವ ಮಹಿಳೆಯರ ತಲೆ ಎಣಿಕೆ ಮಾಡಲಾರಂಭಿಸಿವೆ. ದಿನನಿತ್ಯ ಸರ್ಕಾರಕ್ಕೆ ಎಷ್ಟು ಖರ್ಚಾಗುತ್ತದೆ ಎಂದು ಲೆಕ್ಕ ಹಾಕುವುದರಲ್ಲಿ ತೊಡಗಿವೆ. ಯಾವ ಬಸ್ಸುಗಳಲ್ಲಿ ಎಷ್ಟು ಜನದಟ್ಟಣೆ ಇದೆ, ಎಷ್ಟು ಬಸ್ಸುಗಳು ತುಂಬಿ ತುಳುಕುತ್ತಿವೆ, ಎಷ್ಟು ಊರುಗಳಿಗೆ ಬಸ್ಸುಗಳೇ ಇಲ್ಲವಾಗಿದೆ ಎನ್ನುವುದನ್ನೂ ಸೂಕ್ಷದರ್ಶಕ ಮಸೂರ ತೊಟ್ಟು ಗಮನಿಸುತ್ತಿರುವ ಆಧುನಿಕ ನಾಗರಿಕತೆಯ ವಾರಸುದಾರರು, ಸರ್ಕಾರದ ಉಚಿತ ಪ್ರಯಾಣ ಯೋಜನೆಯ ಪರಿಣಾಮ ರಾಜ್ಯದ ವಿವಿಧ ದೇವಸ್ಥಾನಗಳಿಗೆ ಎಷ್ಟು ಮಹಿಳೆಯರು ಭೇಟಿ ನೀಡುತ್ತಿದ್ದಾರೆ ಎನ್ನುವುದನ್ನೂ ಗಮನಿಸುತ್ತಿದ್ದಾರೆ. ಧರ್ಮಸ್ಥಳ, ಮಲೆ ಮಹದೇಶ್ವರ ಬೆಟ್ಟ, ಚಾಮುಂಡಿ ಬೆಟ್ಟ ಮುಂತಾದ ದೇವಸ್ಥಾನಗಳಿಗೆ ತಂಡೋಪತಂಡವಾಗಿ ಹೋಗುತ್ತಿರುವ ಮಹಿಳೆಯರು ಮತ್ತು ಅವರಿಂದ ತುಂಬಿರುವ ಬಸ್ಸುಗಳು, ಸೀಟು ಹಿಡಿಯಲು ಮಹಿಳೆಯರ ಪರದಾಟ ಮತ್ತು ಪರಸ್ಪರ ಕಿತ್ತಾಟ, ಪ್ರಯಾಣಿಕರ ಭಾರ ತಾಳದೆ ಕಿತ್ತು ಬಂದ ಬಸ್ಸಿನ ಬಾಗಿಲು ಇವೆಲ್ಲವೂ ಮಾಧ್ಯಮಗಳಿಗೆ ಮನರಂಜನೆಯ ವಸ್ತುವಾಗಿ ಕಾಣುತ್ತಿದೆ.

ಈ ಮನೋಭಾವದ ಆಂತರ್ಯದಲ್ಲಿ ಇರುವ ಶೀತಲ ಕ್ರೌರ್ಯ ಮತ್ತು ಅಸಹನೆಯನ್ನು ಗಮನಿಸುವುದಷ್ಟೇ ಅಲ್ಲದೆ ಇಲ್ಲಿ ಸುಪ್ತವಾಗಿರುವ ಪುರುಷಾಹಮಿಕೆಯ ದಾರ್ಷ್ಟ್ಯವನ್ನೂ ಗಮನಿಸಬೇಕಿದೆ. ಮಹಿಳೆಯರಿಗೆ ಮಾತ್ರವೇ ಏಕೆ ಪುರುಷರಿಗೂ ಈ ಸೌಲಭ್ಯಗಳನ್ನು ಕೊಡಿ ಎಂಬ ಆಗ್ರಹಗಳೂ ಕೇಳಿಬರುತ್ತಿದ್ದು, ಈ ಸೌಲಭ್ಯದಿಂದಲೇ ಕುಟುಂಬಗಳು ಒಡೆಯುತ್ತವೆ, ದಂಪತಿಗಳು ಬೇರೆಯಾಗುತ್ತಾರೆ, ಹೆಣ್ಣುಮಕ್ಕಳು ಕುಟುಂಬದ ಹಿರಿಯರನ್ನು ಧಿಕ್ಕರಿಸುತ್ತಾರೆ ಇತ್ಯಾದಿ ಇತ್ಯಾದಿ ಅಭಿಪ್ರಾಯಗಳೂ ಕೇಳಿಬರುತ್ತಿವೆ. ನಿಜ,  ಸರ್ಕಾರದ ಘೋಷಣೆ ಜಾರಿಯಾದ ಮರುಕ್ಷಣದಿಂದಲೇ ರಾಜ್ಯದ ಪ್ರಸಿದ್ಧ ತೀರ್ಥಸ್ಥಳಗಳಿಗೆ ಮಹಿಳೆಯರ ಪ್ರಯಾಣ ಹೆಚ್ಚಾಗಿದೆ. ಈ ಬೆಳವಣಿಗೆಗೆ ಸಾಮಾಜಿಕ-ಆರ್ಥಿಕ ಕಾರಣಗಳೂ ಇರುತ್ತವೆ. ತಮ್ಮ ಇಷ್ಟ ದೈವದ ಅಥವಾ ಹರಕೆ ಹೊತ್ತ ದೇವರ ದರ್ಶನಕ್ಕಾಗಿ ವರುಷಗಳ ಕಾಲ ಪರಿತಪಿಸಿದರೂ, ಪ್ರಯಾಣದ ಖರ್ಚು ಭರಿಸಲಾಗದೆ, ಕುಟುಂಬಕ್ಕೆ ಹೊರೆಯಾಗುತ್ತದೆ ಎಂಬ ಕಾರಣಕ್ಕೆ ಹೋಗಲಾಗದ ಪರಿಸ್ಥಿತಿಯನ್ನು ಮಹಿಳೆಯರು ಎದುರಿಸಿರುವ ಸಾದ್ಯತೆಗಳಿವೆ. ಇಂತಹ ಮಹಿಳೆಯರಿಗೆ ಉಚಿತ ಪ್ರಯಾಣ ಒಂದು ದೈವದತ್ತ ವರದಂತೆಯೇ ಕಾಣುತ್ತದೆ.

ಮತ್ತೊಂದು ದೃಷ್ಟಿಯಿಂದ ನೋಡಿದಾಗ ತಮ್ಮ ಬಳಿ ಹಣ ಇಲ್ಲ ಎಂಬ ಕಾರಣ ನೀಡಿ ಸ್ವಂತ ಆದಾಯ ಇಲ್ಲದ ಗೃಹಿಣಿಯರ ದೇವಸ್ಥಾನ ಭೇಟಿ ಮತ್ತು ಪ್ರಯಾಣವನ್ನು ನಿರ್ಬಂಧಿಸುವ ಪುರುಷರಿಗೇನೂ ನಮ್ಮ ಸಮಾಜದಲ್ಲಿ ಕೊರತೆಯಿಲ್ಲ. ಈ ರೀತಿಯಲ್ಲಿ ಅವಕಾಶವಂಚಿತರಾದ ಗೃಹಿಣಿಯರಿಗೆ, ಹೆಣ್ಣುಮಕ್ಕಳಿಗೆ ಉಚಿತ ಪ್ರಯಾಣ ಸದಾವಕಾಶವಾಗುವ ಸಾಧ್ಯತೆಗಳಿವೆ. ಈ ಎಲ್ಲ ಕಾರಣಗಳಿಂದ ತಾತ್ಕಾಲಿಕವಾಗಿ ನಾವು ಬಸ್ಸುಗಳಲ್ಲಿ ಮಹಿಳೆಯರ ಸಂಚಾರ ಹೆಚ್ಚಾಗಿರುವುದನ್ನು ಕಾಣುತ್ತಿದ್ದೇವೆ. ಇದು ಶಾಶ್ವತ ವಿದ್ಯಮಾನವೂ ಆಗುವುದಿಲ್ಲ. ಏಕೆಂದರೆ ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ ಕೆಳಸ್ತರದಲ್ಲಿ ನಿತ್ಯ ದುಡಿಮೆ ಮಾಡುವವರಿಂದ ಉನ್ನತ ಔದ್ಯಮಿಕ ವಲಯದವರೆಗೂ ಮಹಿಳೆಯರು ತಮ್ಮ ಕುಟುಂಬದೊಡನೆ ಹೆಚ್ಚಾಗಿ ಗುರುತಿಸಿಕೊಳ್ಳುತ್ತಾರೆ. ಈ ಉಚಿತ ಪ್ರಯಾಣದ ನೈಜ ಫಲಾನುಭವಿಗಳನ್ನು ನಾವು ವಲಸೆ ಕಾರ್ಮಿಕರಲ್ಲಿ, ಕಟ್ಟಡ ಕಾರ್ಮಿಕರಲ್ಲಿ, ಮನೆಗೆಲಸದವರಲ್ಲಿ, ಪೌರ ಕಾರ್ಮಿಕರಲ್ಲಿ, ಅಂಗನವಾಡಿ-ಆಶಾ ಕಾರ್ಯಕರ್ತೆಯರಲ್ಲಿ ಗುರುತಿಸಿದಾಗ, ಈ ಶ್ರಮಿಕ ವರ್ಗಕ್ಕೆ ಉಳಿತಾಯವಾಗುವ ಪ್ರಯಾಣದ ವೆಚ್ಚವೂ ಸಹ ಕುಟುಂಬ ನಿರ್ವಹಣೆಗೇ ಸಲ್ಲುತ್ತದೆ ಎಂಬ ವಾಸ್ತವವನ್ನೂ ಗುರುತಿಸಬಹುದು.

ಈ ಫಲಾನುಭವಿಗಳೂ ಸಹ ಮೇಲ್ವರ್ಗದ ಶೀತಲ ಕ್ರೌರ್ಯವನ್ನು ಬೆಂಗಳೂರಿನ ಐಷಾರಾಮಿ ವಸತಿ ಸಮುಚ್ಚಯಗಳಲ್ಲಿ ಎದುರಿಸುತ್ತಿರುವುದು ವರದಿಯಾಗಿದೆ. ಒಂದು ವರದಿಯ ಪ್ರಕಾರ ಅತಿ ಶ್ರೀಮಂತರೇ ಇರುವ ಬೆಂಗಳೂರಿನ ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ಮನೆಗೆಲಸ ಮಾಡುವ ಮಹಿಳೆಯರಿಗೆ ಮನೆಯ ಮಾಲಿಕರು ಸಂಬಳ ಕಡಿಮೆ ಮಾಡುವುದಾಗಿ ಹೇಳಲಾರಂಭಿಸಿದ್ದಾರೆ. ಬಸ್‌ ಪ್ರಯಾಣದ ಖರ್ಚು ಉಳಿತಾಯವಾಗುವುದರಿಂದ ಅಷ್ಟು ವೇತನ ಕಡಿಮೆ ಮಾಡಬಹುದು ಎಂಬ ವ್ಯಾವಹಾರಿಕ ಆಲೋಚನೆ ! ಆಧುನಿಕ ನಾಗರಿಕತೆಯ ವಾರಸುದಾರರೆಂದು ಬೆನ್ನುತಟ್ಟಿಕೊಳ್ಳುವ ಉಚ್ಛ ಸಂಸ್ಕೃತಿಯ ನೆಲೆಗಳಲ್ಲಿ ಈ ರೀತಿಯ ಕ್ರೌರ್ಯವೂ ಗೋಚರಿಸುತ್ತಿದೆ. ಇದೇ ಸುಶಿಕ್ಷಿತ ಜನರು ಹಣದುಬ್ಬರ ಹೆಚ್ಚಾದಾಗಲೆಲ್ಲಾ ತಮ್ಮ ಆದಾಯ ಹೆಚ್ಚಾಗುವುದನ್ನು ನಿರೀಕ್ಷಿಸುತ್ತಿರುತ್ತಾರೆ ಆದರೆ ಬಸ್‌ ಪ್ರಯಾಣದರ, ವಿದ್ಯುತ್‌ ಶುಲ್ಕ, ಶಾಲಾ ಶುಲ್ಕ, ಔಷಧಿ ವೆಚ್ಚಗಳು ಹೆಚ್ಚಾದಾಗ ಮನೆಗೆಲಸದವರ ಸಂಬಳ ಹೆಚ್ಚಿಸುತ್ತಾರೆಯೇ ? ಕಸ ಸಂಗ್ರಹಣೆಗೆ ಬರುವ ಪೌರ ಕಾರ್ಮಿಕರಿಗೆ ತಿಂಗಳಿಗೆ ಹತ್ತಿಪ್ಪತ್ತು ರೂಗಳನ್ನು ನೀಡಲು ಹಿಂಜರಿಯುವ ಅಥವಾ “ ಅವರಿಗೇನು ಸಂಬಳ ಬರೋದಿಲ್ವೇ ?” ಎಂದು ಮೂದಲಿಸುವ ಸುಶಿಕ್ಷಿತ ಹಿತವಲಯವಾಸಿಗಳಿಗೆ ಬಡತನ ಮತ್ತು ಹಸಿವೆ ಕೆಲವೇ ಅರ್ಥಶಾಸ್ತ್ರಜ್ಞರ ಅಥವಾ ಬುದ್ಧಿಜೀವಿಗಳ ಅಮೂರ್ತ ಕಲ್ಪನೆಯಾಗಿ ಕಾಣುತ್ತದೆ.

ಬಡತನ, ದಾರಿದ್ರ್ಯ ಹಾಗೂ ಹಸಿವೆಯನ್ನು ಅನುಕಂಪದಿಂದ ನೋಡುವ ಅಥವಾ ತಿರಸ್ಕಾರ ಭಾವದಿಂದ ನೋಡುವ ಮನಸುಗಳು ಮಾತ್ರ ಇಂದು ನಾವು ಸಾರ್ವಜನಿಕವಾಗಿ ಕಾಣುತ್ತಿರುವ ಲೇವಡಿ, ಅಪಹಾಸ್ಯಗಳನ್ನು ಮನರಂಜನೆಯಂತೆ ಕಾಣಲು ಸಾಧ್ಯ. ಆಳ್ವಿಕೆ ನಡೆಸಲು ಬಯಸುವ ರಾಜಕೀಯ ಪಕ್ಷಗಳು-ನಾಯಕರು ತಮ್ಮ ಪ್ರಣಾಳಿಕೆಗಳಲ್ಲಿ ಮಾನವ ಸಮಾಜವನ್ನು ಕಾಡುವ ಹಸಿವು ಮತ್ತು ಬಡತನವನ್ನು ಸಂಪೂರ್ಣವಾಗಿ ತೊಡೆದುಹಾಕುವ ನೀಲನಕ್ಷೆಯನ್ನು ಜನತೆಯ ಮುಂದಿಡುವುದಾದರೆ, ಅವರ ರಾಜಕೀಯ ಪ್ರೇರಿತ ವಿರೋಧವೂ ಅರ್ಥಪೂರ್ಣವಾದೀತು. ವಿದೇಶಿ ಗಣ್ಯರು ಬಂದಾಗ ಸ್ಲಂ ಪ್ರದೇಶಗಳು ಕಾಣದಂತೆ ತಾತ್ಕಾಲಿಕ ಗೋಡೆಗಳನ್ನು ನಿರ್ಮಿಸುವ ನವ ಭಾರತದಲ್ಲಿ ಇದು ಸಾಧ್ಯವಾದೀತೇ ? ಉಚಿತ ಕೊಡುಗೆಗಳನ್ನು ಲೇವಡಿ ಮಾಡುವ, ಇದರ ಫಲಾನುಭವಿಗಳನ್ನು ಅಪಹಾಸ್ಯ ಮಾಡುತ್ತಾ ಮನರಂಜನೆಯ ಸರಕುಗಳಂತೆ ಕಾಣುವ ಸುಶಿಕ್ಷಿತ-ಆಧುನಿಕ-ನಾಗರಿಕತೆಯುಳ್ಳ ಸಮಾಜವಾದರೂ ಈ ದಿಕ್ಕಿನಲ್ಲಿ ಯೋಚಿಸಲು ಸಾಧ್ಯವೇ ?

ಈ ಪ್ರಶ್ನೆಗೆ ಉತ್ತರ ಶೋಧಿಸುವಾಗಲೇ ನಮ್ಮೊಳಗಿನ ಕೊಳಕೆಲ್ಲವೂ ಒಮ್ಮೆಲೆ ಹೊರಬರುತ್ತದೆ. ಸಿದ್ಧರಾಮಯ್ಯ ಸರ್ಕಾರ ಘೋಷಿಸಿರುವ ಉಚಿತ ಕೊಡುಗೆಗಳು ಈ ಕೊಳಕನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿವೆ. ಉಳ್ಳವರ ಆತ್ಮಾವಲೋಕನಕ್ಕೂ ಎಡೆಮಾಡಿಕೊಟ್ಟಿದೆ.

Donate Janashakthi Media

Leave a Reply

Your email address will not be published. Required fields are marked *