- ಕೃಷಿ ಕಾಯ್ದೆಗಳ ಸಮರ್ಥನೆಗೆ 2 ಪ್ರಕಟಣೆಗಳು
- 2 ಕೋಟಿ ಇ-ಮೇಲ್‌ಗಳು
ನವದೆಹಲಿ : ಇದರಲ್ಲಿ ಮೊದಲನೆಯದು ಕೃಷಿ ಕಾಯ್ದೆಗಳ ಬಗ್ಗೆ ಜನಗಳಲ್ಲಿ, ಅದೂ ಸಿಖ್ ಸಮುದಾಯದವರಲ್ಲಿ ಹೆಚ್ಚುತ್ತಿರುವ ಅವಿಶ್ವಾಸವನ್ನು ನಿವಾರಿಸುವ ಪರೋಕ್ಷ ಪ್ರಯತ್ನವಾಗಿದ್ದರೆ, ಎರಡನೆಯದು ನೇರ ಪ್ರಯತ್ನ.
ತನ್ನ ಕಾರ್ಪೊರೇಟ್-ಪರ ನೀತಿಯನ್ನು ಬದಲಿಸಲೊಲ್ಲದ ಕೇಂದ್ರ ಸರಕಾರ ಈಗ ತನ್ನ ಮೊಂಡುತನವನ್ನು ಮರೆಮಾಚುವ ಶತಪ್ರಯತ್ನ ನಡೆಸುತ್ತಿದೆ. ಅದಕ್ಕಾಗಿ ರೈತ ಆಂದೋಲನದ ಹೆಸರುಗೆಡಿಸುವ, ಅದನ್ನು ವಿಭಜಿಸುವ ಹೊಸ-ಹೊಸ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಅಖಿಲ ಭಾರತ ಕಿಸಾನ್ ಸಂಘ಼ರ್ಷ ಸಮನ್ವಯ ಸಮಿತಿ ಸರಕಾರವನ್ನು ತರಾಟೆಗೆ ತಗೊಂಡಿದೆ.
ಪಂಜಾಬಿನ ರೈತರು ಸರಕಾರದ ದಮನ ಚಕ್ರವನ್ನೆಲ್ಲ ಬೇಧಿಸಿಕೊಂಡು ದಿಲ್ಲಿಯ ಗಡಿಯಲ್ಲಿ ಸವಾಲು ಹಾಕುತ್ತಿದ್ದಾಗ ನವಂಬರ್ 30ರಂದು ಭಾರತ ಸರಕಾರದ 47 ಪುಟಗಳ ಪ್ರಕಟಣೆ “ಪ್ರಧಾನ ಮಂತ್ರಿ ಮೋದಿ ಮತ್ತು ಸಿಖ್‌ರೊಂದಿಗೆ ಅವರ ಸರಕಾರದ ವಿಶೇಷ ಸಂಬಂಧ” ಬಿಡುಗಡೆಗೊಂಡಿತು. ಡಿಸೆಂಬರ್ 8ರಿಂದ 12 ರ ನಡುವೆ ಭಾರತೀಯ ರೈಲ್ವೆಯ ಅಡಿಯಲ್ಲಿರುವ ಐ.ಆರ್.ಸಿ.ಟಿ.ಸಿ. ಇದನ್ನು ತನ್ನ 1.9 ಕೋಟಿ ಗ್ರಾಹಕರಿಗೆ ಇ-ಮೆಲ್ ಮೂಲಕ ಕಳಿಸಿದೆ ಎಂದು ಈಗ ಬೆಳಕಿಗೆ ಬಂದಿದೆ.
ಇದೇ ವೇಳೆಗೆ ಭಾರತ ಸರಕಾರದ ಇನ್ನೊಂದು ಹೊಸ 106 ಪುಟಗಳ ವರ್ಣರಂಜಿತ ಪ್ರಕಟಣೆ “ಮೊದಲಿಗೆ ರೈತರು”(ಪುಟ್ಟಿಂಗ್ ಫಾರ್ಮರ್ಸ್ ಫಸ್ಟ್) ಪ್ರಕಟವಾಗಿರುವ ಸುದ್ದಿಯೂ ಬಂದಿದೆ.
‘ಮೊದಲಿಗೆ ರೈತರು’ ಎನ್ನುವ ಈ ಪುಸ್ತಕದ ಪುಟ 16 ರಲ್ಲಿ “ಈ ಸುಧಾರಣೆಗಳು ಕೃಷಿ-ವ್ಯಾಪಾರಕ್ಕೆ ಎಂತಹ ಹೊಸ ಮಾರ್ಗಗಳನ್ನು ತೆರೆಯಲಿದೆ ಎಂಬುದನ್ನು ಕಲ್ಪಿಸಿಕೊಳ್ಳಿ” ಎಂದು ಹೇಳುತ್ತದೆ-ಅಂದರೆ ಈ ಹೊಸ ಕಾಯ್ದೆಗಳು ‘ಮೊದಲಿಗೆ ಕಾರ್ಪೊರೇಟ್ ಕೃಷಿ ವ್ಯಾಪಾರ’ ಎಂದೇ ಹೇಳುತ್ತದಲ್ಲವೇ ಎಂದು ಎ.ಐ.ಕೆ.ಎಸ್.ಸಿ.ಸಿ. ಟಿಪ್ಪಣಿ ಮಾಡಿದೆ.
ಇದು ಕೋವಿಡ್-19ರ ಅಟಾಟೋಪದ ನಡುವೆಯೇ ಸುಗ್ರಿವಾಜ್ಞೆಗಳನ್ನು ಹೊರಡಿಸಿದಾಗ ಬಂಡವಳಿಗರ ಸಂಘಟನೆ ಸಿ.ಐ.ಐ. ನ ವಾರ್ಷಿಕ ಅಧಿವೇಶನವನ್ನು ಉದ್ದೇಶಿಸಿ ಪ್ರಧಾನ ಮಂತ್ರಿಗಳು ಮಾಡಿದ ಭಾಷಣದಲ್ಲಿನ ಒಂದು ಸಾಲು ಎಂಬುದು ಗಮನಾರ್ಹ.
ರೈತರ ಪ್ರತಿನಿಧಿಗಳು ಸರಕಾರದೊಂದಿಗೆ ಮಾತುಕತೆಗಳಲ್ಲಿ ಇದನ್ನೇ ಹೇಳಿದ್ದು. ಈ ಹೊಸ ಕಾಯ್ದೆಗಳು ಹೇಗೆ ಭಾರತೀಯ ಕೃಷಿ ಮಾರುಕಟ್ಟೆಗಳಲ್ಲಿ ದೇಶಿ-ವಿದೇಶಿ ಕಾರ್ಪೊರೇಟ್‌ಗಳಿಗೆ ಉತ್ತೇಜನೆ ಕೊಡಲಿಕ್ಕಾಗಿ ಅವರಿಗೆ ಖಾಸಗಿ ಮಂಡಿಗಳನ್ನು ತೆರೆಯುವ ಹಕ್ಕು ಕೊಡುತ್ತದೆ, ರೈತರನ್ನು ಕಾಂಟ್ರಾಕ್ಟ್ ಕೃಷಿಯಲ್ಲಿ ತೊಡಗಿಸುತ್ತದೆ, ಇದು ಹೇಗೆ ಸರಕಾರೀ ಮಂಡಿಗಳನ್ನು ಧ್ವಂಸ ಮಾಡುತ್ತದೆ, ಲಾಗುವಾಡುಗಳ ಬೆಲೆಗಳನ್ನು ಹೆಚ್ಚಿಸುತ್ತದೆ, ರೈತರನ್ನು ಸಾಲಗಾರರನ್ನಾಗಿ ಮಾಡಿ ಹೇಗೆ ಕೊನೆಗೆ ಅವರನ್ನು ಅವರ ಜಮೀನುಗಳಿಂದಲೇ ಎತ್ತಂಗಡಿ ಮಾಡುತ್ತದೆ ಎಂಬುದನ್ನು ಇನ್ನಿಲ್ಲದಂತೆ ಬಿಡಿಬಿಡಿಯಾಗಿ ವಿವರಿಸಿದ್ದಾರೆ.
ರೈತರನ್ನು ಇನ್ನಷ್ಟು ಸಾಲಗಾರರಾಗಿ ಮಾಡುವುದಿಲ್ಲ, ಲಾಗುವಾಡುಗಳ ಬೆಲೆಗಳು ಏರುವುದಿಲ್ಲ, ಸಿ2+50% ಸೂತ್ರದಂತೆ ಎಲ್ಲ ಬೆಳೆಗಳಿಗೆ ಕನಿಷ್ಟ ಬೆಂಬಲ ವ್ಯವಸ್ಥೆ ಇರುತ್ತದೆ ಎಂಬ ಖಾತ್ರಿಯನ್ನು ಕಾನೂನು ಪ್ರಕಾರ ಕೊಡಲು ಹಿಂಜರಿಯುವ ಸರಕಾರ ರೈತರು ಮಾತುಕತೆಗಳಿಗೆ ಬರುತ್ತಿಲ್ಲ, ತನ್ನ ಪ್ರಸ್ತಾವಗಳನ್ನು ಸ್ವೀಕರಿಸುತ್ತಿಲ್ಲ ಎಂದು ದೂರುತ್ತ ರೈತ ಆಂದೋಲನದ ಹೆಸರುಗೆಡಿಸಲು ಪ್ರಯತ್ನಿಸುತ್ತಿದೆ ಎಂದು ಎ.ಐ.ಕೆ.ಎಸ್.ಸಿ.ಸಿ. ಕೇಂದ್ರ ಸರಕಾರದ ನಡೆಯನ್ನು ಖಂಡಿಸಿದೆ.
ರೈತರನ್ನು ತಮ್ಮದೇ ರಾಜಧಾನಿಗೆ ಬಂದು ತಮ್ಮ ಬೇಡಿಕೆಗಳನ್ನು ಮುಂದಿಡದಂತೆ ತಡೆಯಲು ಆಶ್ರುವಾಯು ಪ್ರಯೋಗಿಸುತ್ತದೆ, ಲಾಠಿ ಪ್ರಹಾರ ಮಾಡುತ್ತದೆ, ಕೊರೆಯುವ ಚಳಿಯಲ್ಲಿ ಜಲಫಿರಂಗಿಗಳಿಗೆ ಗುರಿ ಮಾಡುತ್ತದೆ, ರಾಷ್ಟ್ರೀಯ ಹೆದ್ದಾರಿಗಳನ್ನೂ ಅಗೆದು ಹಾಕುತ್ತದೆ, ನಂತರ ರೈತರು ಮಾತುಕತೆ ನಡೆಸುವ ಬದಲು ತಮ್ಮ ಹೋರಾಟವನ್ನು ತೀವ್ರಗೊಳಿಸುತ್ತಿದ್ದಾರೆ ಎಂದು ದೂರುತ್ತದೆ. ಈ ರೀತಿ ತನ್ನದೇ ನಾಗರಿಕರನ್ನು ದೂಷಿಸುವ ಮೂಲಕ ಈ ಸರಕಾರ ಏನನ್ನು ಸಾಧಿಸಬಯಸುತ್ತದೆ? ಇದು ವಿದೇಶಿ ಮತ್ತು ದೇಶಿ ಕಾರ್ಪೊರೇಟ್‌ಗಳನ್ನು ಪ್ರೋತ್ಸಾಹಿಸುವ ಈ ಸರಕಾರದ ಯೋಜನೆಯ ಭಾಗವೇ ಎಂದು ರೈತರು ತಿಳಿಯ ಬಯಸುತ್ತಾರೆ ಎಂದು ಎ.ಐ.ಕೆ.ಎಸ್.ಸಿ.ಸಿ. ಹೇಳಿದೆ.
ಸಿಖ್ ಸಮುದಾಯದೊಂದಿಗೆ ವಿಶೇಷ ಸಂಬಂಧ!?
“ಪ್ರಧಾನ ಮಂತ್ರಿ ಮೋದಿ ಮತ್ತು ಸಿಖ್‌ರೊಂದಿಗೆ ಅವರ ಸರಕಾರದ ವಿಶೇಷ ಸಂಬಂಧ”ದಲ್ಲಿ ಸಿಖ್ ಸಮುದಾಯದ ಒಳಿತಿಗಾಗಿ ಮೋದಿ ಸರಕಾರ ಕೈಗೊಂಡ 13 ಕ್ರಮಗಳ ವಿವರಗಳಿವೆಯಂತೆ. ಅದನ್ನು ಭಾರತೀಯ ರೈಲ್ವೆಯ ಟಿಕೆಟುಗಳ ಬುಕಿಂಗ್ ಮಾಡುವ, ಪ್ರಯಾಣಿಕರಿಗೆ ಆಹಾರ ಪೂರೈಕೆ ಮಾಡುವ ಐ.ಆರ್.ಸಿ.ಟಿ.ಸಿ. ತನ್ನ ದತ್ತಾಂಶ ಕೋಶದಲ್ಲಿ ಇರುವ 1.9 ಕೋಟಿ ಗ್ರಾಹಕರಿಗೆ, ರೈತರು ಭಾರತ ಬಂದ್‌ನ್ನು ದೇಶಾದ್ಯಂತ ನಡೆಸಿದ ಡಿಸೆಂಬರ್ 8ರಿಂದ 12ರ ನಡುವೆ ಕಳಿಸಿತಂತೆ. ಇದನ್ನು ಐ.ಆರ್.ಸಿ.ಟಿ.ಸಿ. ಏಕೆ ಕಳಿಸಬೇಕು ಎಂಬ ಪ್ರಶ್ನೆ ಸಹಜವೇ. ಹೌದು, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರವಲ್ಲ ಪಂಜಾಬಿ ಭಾಷೆಯಲ್ಲೂ ಪ್ರಕಟವಾಗಿರುವ ಇದು ಕೃಷಿ ಕಾಯ್ದೆಗಳ ಬಗ್ಗೆ ಜನಗಳಲ್ಲಿ, ಅದೂ ಸಿಖ್ ಸಮುದಾಯದವರಲ್ಲಿ ಹೆಚ್ಚುತ್ತಿರುವ ಅವಿಶ್ವಾಸವನ್ನು ನಿವಾರಿಸುವ ಪರೋಕ್ಷ ಪ್ರಯತ್ನವಾಗಿದ್ದರೆ, “ಮೊದಲಿಗೆ ರೈತರು”(ಪುಟ್ಟಿಂಗ್ ಫಾರ್ಮರ್ಸ್ ಫಸ್ಟ್) ನೇರ ಪ್ರಯತ್ನ.