ಚೆನ್ನೈ ಫೆ 14 : ಟೆಸ್ಟ್ ಕ್ರಿಕೆಟ್ ಗೆ ಪಾದರ್ಪಣೆ ಮಾಡಿದ ಬೆನ್ನಲ್ಲೇ ದಾಖಲೆ ಬರೆಯುತ್ತಿರುವ ಮಧ್ಯಮ ವೇಗಿ ಮೊಹಮದ್ ಸಿರಾಜ್ ತವರಿನಲ್ಲಿ (ಭಾರತದಲ್ಲಿ) ಆಡಿದ ಮೊದಲ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಪಡೆದು ವಿಶಿಷ್ಟ ದಾಖಲೆ ಬರೆದಿದ್ದಾರೆ.
ಚೆನ್ನೈನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊಹಮದ್ ಸಿರಾಜ್ ಮೊದಲ ಎಸೆತದಲ್ಲೇ ಓಲಿ ಪೋಪ್ ಅವರನ್ನು ಔಟ್ ಮಾಡಿದರು. ಈ ಮೂಲಕ ತವರಿನಲ್ಲಿ ಆಡಿದ ಮೊದಲ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಸಾಧನೆ ಮಾಡಿದರು.
ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್ ನಲ್ಲಿ 87 ರನ್ ಗಳಿಸಿದ್ದಾಗ 39ನೇ ಓವರ್ ನಲ್ಲಿ ಸಿರಾಜ್ ಬೌಲಿಂಗ್ ಮಾಡುವ ಅವಕಾಶ ಪಡೆದರು. ಸಿರಾಜ್ ಎಸೆತದ ಬೌನ್ಸರ್ ನಲ್ಲಿ ಪೋಪ್ ಬ್ಯಾಟ್ ಸವರಿದ ಚೆಂಡು ಎಡಭಾಗದಲ್ಲಿ ಚಿಮ್ಮಿತು. ಕಠಿಣವಾಗಿದ್ದ ಕ್ಯಾಚ್ ಅನ್ನು ವಿಕೆಟ್ ಕೀಪರ್ ಹಾರಿ ಎಡಗೈಯಿಂದ ಹಿಡಿದು ಅದ್ಭುತ ಕ್ಯಾಚ್ ಆಗಿ ಪರಿವರ್ತಿಸಿದರು.
ಇಂಗ್ಲೆಂಡ್ ಆಲೌಟ್ : ಇಂಗ್ಲೆಂಡ್ ತಂಡವನ್ನು 134 ರನ್‌ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾ, ಇದೀಗ 2ನೇ ಇನಿಂಗ್ಸ್ ಆರಂಭಿಸಿದೆ. ಈ ಮೂಲಕ ಬೃಹತ್ ಮೊತ್ತ ಪೇರಿಸಲು ಭಾರತ ರನ್ ಕಲೆಹಾಕುತ್ತಿದೆ. ಆರ್ ಅಶ್ವಿನ್ ಸ್ಪಿನ್ ಮೋಡಿಗೆ ಇಂಗ್ಲೆಂಡ್ ತತ್ತರಿಸಿತು. ಡೋಮಿಕ್ ಸಿಬ್ಲಿ, ಡೆನಿಯಲ್ ಲಾರೆನ್ಸ್, ಬೆನ್ ಸ್ಟೋಕ್ಸ್, ಒಲ್ಲಿ ಸ್ಟೋನ್ ಹಾಗೂ ಸ್ಟುವರ್ಟ್ ಬ್ರಾಡ್ ವಿಕೆಟ್ ಕಬಳಿಸೋ ಮೂಲಕ ಇಂಗ್ಲೆಂಡ್ ತಂಡಕ್ಕೆ ಅಶ್ವಿನ್ ಶಾಕ್ ನೀಡಿದರು. ಆರ್ ಅಶ್ವಿನ್ ಸ್ಪಿನ್ ಮೋಡಿಗೆ ಇಂಗ್ಲೆಂಡ್ ತತ್ತರಿಸಿತು. ಅಶ್ವಿನ್ 5 ವಿಕೆಟ್ ಕಬಳಿಸಿ ಮಿಂಚಿದರು. ಇನ್ನು ಅಕ್ಸರ್ ಪಟೇಲ್ 2, ಇಶಾಂತ್ ಶರ್ಮಾ 2 ಹಾಗೂ ಮೊಹಮ್ಮದ್ ಸಿರಾಜ್ 1 ವಿಕೆಟ್ ಕಬಳಿಸಿದರು.
ಮೊದಲ ಇನ್ನಿಂಗ್ಸ್‌ನಲ್ಲಿ 195 ರನ್ ಮುನ್ನಡೆ ಪಡೆದ ಟೀಂ ಇಂಡಿಯಾ, 2ನೇ ಇನ್ನಿಂಗ್ಸ್ ಆರಂಭಿಸಿದೆ. ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಉತ್ತಮ ಆರಂಭ ಒದಗಿಸುವ ಸೂಚನೆ ನೀಡಿದ್ದಾರೆ. 2ನೇ ಟೆಸ್ಟ್ ಪಂದ್ಯ ಗೆಲುವಿಗೆ ಟೀಂ ಇಂಡಿಯಾಗೆ ಸುವರ್ಣ ಅವಕಾಶ ಒಲಿದು ಬಂದಿದೆ. ಈ ಮೂಲಕ ಮೊದಲ ಸೋಲಿಗೆ ತಿರುಗೇಟು ನೀಡಲು ಟೀಂ ಇಂಡಿಯಾ ಲೆಕ್ಕಾಚಾರ ಹಾಕಿದೆ. ಇತ್ತೀಚಿನ ವರದಿ ಬಂದಾಗ ಭಾರತ ಎರಡನೇ ಇನ್ನಿಂಗ್ಸ್ ನಲ್ಲಿ ವಿಕೆಟ್ ನಷ್ಟವಿಲ್ಲದೆ 37 ರನ್ ಗಳಿಸಿತ್ತು. ರೋಹಿತ್ ಶರ್ಮಾ 20 ರನ್ ಗಳಿಸಿ, ಶುಬಮನ್ ಗಿಲ್ 12 ರನ್ ಗಳಿಸಿ ಆಟವಾಡುತ್ತಿದ್ದಾರೆ.