ಮೊಬೈಲ್ ಮೂಲಕವೇ ಬಿಎಂಟಿಸಿ ಬಸ್‌ ಪಾಸ್‌ ತೋರಿಸಬಹುದು

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ಹವಾನಿಯಂತ್ರಿತ ಸೇರಿದಂತೆ ಎಲ್ಲಾ ಮಾದರಿ ಬಸ್‌ಗಳ ಪಾಸುಗಳು ಇನ್ನು ಮುಂದೆ ಮೊಬೈಲ್ ಅಪ್ಲಿಕೇಶನ್ ಮೂಲಕ ಸಿಗಲಿದೆ ಎಂದು ಬಿಎಂಟಿಸಿ ಹೇಳಿದೆ.

ಸ್ಮಾರ್ಟ್‍ಫೋನುಗಳಲ್ಲಿ ಬಿಎಂಟಿಸಿ ಮೊಬೈಲ್ ಆ್ಯಪ್ ಇಂದು ಅನಾವರಣಗೊಂಡಿದ್ದು, ಪ್ರಯಾಣಿಕರು ಡಿಜಿಟಲ್ ಮೋಡ್‍ನಲ್ಲೇ ಟಿಕೆಟ್ ಖರೀದಿಸಬಹುದಾಗಿದೆ.
ಖಾಸಗಿ ಸಂಸ್ಥೆ ಸಹಭಾಗಿತ್ವದಲ್ಲಿ ಬಿಎಂಟಿಸಿ ಮೊಬೈಲ್ ಆ್ಯಪ್ ಪರಿಚಯಿಸಲಾಗಿದೆ.

ಬಿಎಂಟಿಸಿ ಬಸ್‌ಗಳಲ್ಲಿ ಸಂಚಾರ ನಡೆಸುವ ಲಕ್ಷಾಂತರ ಜನರು ಕೆಲವೇ ದಿನಗಳಲ್ಲಿ ಬಿಎಂಟಿಸಿ ಮಾಸಿಕ, ದಿನದ ಪಾಸುಗಳು ಮೊಬೈಲ್ ಅಪ್ಲಿಕೇಶನ್ ಮೂಲಕ ಪಡೆದುಕೊಳ್ಳಬಹುದಾಗಿದೆ. ಪಾಸುಗಳನ್ನು ಪಡೆಯಲು ಬಯಸುವ ಪ್ರಯಾಣಿಕರು Tummoc ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕು.

ಜನರು ಸದ್ಯ ಪಾಸುಗಳನ್ನು ಪಡೆದುಕೊಳ್ಳಲು ಟಿಟಿಎಂಸಿ, ಬಸ್ ನಿಲ್ದಾಣಗಳಿಗೆ ಭೇಟಿ ನೀಡುತ್ತಾರೆ. ಇನ್ನು ಮುಂದೆ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕವೇ ಎಲ್ಲಾ ಮಾದರಿ ಬಸ್‌ಗಳ ಪಾಸುಗಳು ಲಭ್ಯವಾಗಲಿವೆ. ಎರಡು ಮೂರು ತಿಂಗಳಿನಲ್ಲಿ ಈ ಸೇವೆ ಲಭ್ಯವಾಗಲಿದೆ.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್‌ ಈ ಕುರಿತು ಮಾತನಾಡಿದ್ದು, “ಬಸ್ ಪಾಸುಗಳನ್ನು ಪಡೆಯಲು ಎಲ್ಲಾ ವಿಧದ ಎಲೆಕ್ಟ್ರಾನಿಕ್ ಪೇಮೆಂಟ್, ಕ್ಯೂಆರ್ ಕೋಡ್ ಬಳಕೆ ಮಾಡಬಹುದಾಗಿದೆ. ಪ್ರಯಾಣಿಕರು ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಪಾಸು ಪಡೆಯಬಹುದು” ಎಂದು ಹೇಳಿದ್ದಾರೆ.

ಆನ್‍ಲೈನ್ ಮೂಲಕ ಪಡೆದುಕೊಳ್ಳುವ ಡಿಜಿಟಲ್ ಪಾಸ್‍ಗಳನ್ನು ಖರೀದಿಸಿದ ನಂತರ ಪಾಸ್‍ಗಳಿಗೆ 30 ದಿನಗಳ ವ್ಯಾಲಿಡಿಟಿ ಇರಲಿದೆ. ಆನ್‍ಲೈನ್ ಪಾಸ್ ವ್ಯವಸ್ಥೆ ಜಾರಿಯಿಂದ ಗ್ರಾಮೀಣ ಪ್ರದೇಶಗಳಿಂದ ಬರುವ ಪ್ರಯಾಣಿಕರಿಗೆ ಉಪಯುಕ್ತವಾಗಲಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ತಿಳಿಸಿದ್ದಾರೆ.

ಪ್ರಾರಂಭಿಕ ಹಂತದಲ್ಲಿ 200 ಬಿಎಂಟಿಸಿ ಬಸ್‍ಗಳಲ್ಲಿ ಆ್ಯಪ್ ಪರಿಚಯ ಮಾಡಲಾಗುತ್ತಿದೆ. ವೋಲ್ವೋ ಬಸ್‍ಗಳ ನಿರ್ವಾಹಕರ ಬಳಿಯೂ ಇಟಿಎಂ ವಿಷನ್‍ಗಳಿರುವುದರಿಂದ ಜನ ಕ್ಯೂಆರ್ ಕೋಡ್ ಮೂಲಕ ಸ್ಕ್ಯಾನ್ ಮಾಡಿ ಬಸ್‍ಗಳಲ್ಲಿ ಪ್ರಯಾಣ ಬೆಳೆಸಬಹುದಾಗಿದೆ. 2023ಕ್ಕೆ ನಿರ್ವಾಹಕ ರಹಿತ ಬಸ್ ವ್ಯವಸ್ಥೆ ಪರಿಚಯಿಸಲು ಮುಂದಾಗಿರುವ ಬಿಎಂಟಿಸಿಗೆ ಈ ಪಾಸ್ ಸೌಲಭ್ಯ ಸಹಕಾರಿಯಾಗಲಿದೆ.

Tummoc 1400 ಆಧುನಿಕ ತಂತ್ರಜ್ಞಾನ ಹೊಂದಿರುವ ಇಟಿಎಂ ಮೆಷಿನ್‌ಗಳನ್ನು ನೀಡಲಿದೆ. ಇವುಗಳನ್ನು ವಜ್ರ ಮತ್ತು ವಾಯು ವಜ್ರ ಹವಾನಿಯಂತ್ರಿತ ಬಸ್‌ಗಳಲ್ಲಿ ಬಳಕೆ ಮಾಡಲಾಗುತ್ತದೆ.

ಪ್ರಸ್ತುತ ಬಿಎಂಟಿಸಿಯು 5,500 ಬಸ್‌ಗಳನ್ನು ಓಡಿಸುತ್ತಿದೆ. ಇವುಗಳಲ್ಲಿ ಸುಮಾರು 2 ಸಾವಿರ ಬಸ್ಸುಗಳಲ್ಲಿ ಇಟಿಎಂ ಮೆಷಿನ್‌ಗಳನ್ನು ಬಳಕೆ ಮಾಡಲಾಗುತ್ತದೆ. ಉಳಿದ ಬಸ್‌ಗಳಲ್ಲಿ ಟಿಕೆಟ್‌ ಬಳಕೆ ಮಾಡಲಾಗುತ್ತಿದೆ.

2019ರಲ್ಲಿ ಬಿಎಂಟಿಸಿ ಮತ್ತು ಸ್ಟಾರ್ಟ್‌ ಅಪ್ ಕಂಪನಿಯೊಂದು ಸೇರಿ ‘ಬಿಎಂಟಿಸಿ ನಮ್ಮ ಪಾಸು’ ಎಂಬ ಡಿಜಿಟಲ್ ಟಿಕೆಟ್ ಬುಕ್ಕಿಂಗ್ ಸೇವೆ ಆರಂಭಿಸಿತ್ತು. ಆದರೆ ಇದು ವೊಲ್ವೋ ವಾಯು ವಜ್ರ ಬಸ್‌ಗಳಿಗೆ ಮಾತ್ರ ಸೀಮಿತವಾಗಿತ್ತು.

ಐಟಿಪಿಎಲ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಕಡೆ ಸಾಗುವ ಪ್ರಯಾಣಿಕರಿಂದ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೋವಿಡ್ ಸಂದರ್ಭದಲ್ಲಿ ಈ ಸೇವೆಯನ್ನು ಸ್ಥಗಿತಗೊಳಿಸಲಾಯಿತು.

Tummoc ಅಪ್ಲಿಕೇಶನ್ ಮೂಲಕ ಪಡೆಯುವ ದಿನ, ವಾರ, ಮಾಸಿಕ ಪಾಸುಗಳಿಗೆ ಪ್ರತ್ಯೇಕವಾದ ಯೂನಿಕ್ ಐಡಿ ಮತ್ತು ಕ್ಯೂರ್ ಕೋಡ್ ಇರಲಿದೆ. ಪ್ರಯಾಣಿಕರ ಮೊಬೈಲ್‌ನಲ್ಲಿಯೂ ಪಾಸ್‌ ತೋರಿಸುವ ಮೂಲಕ ಬಸ್‌ಗಳಲ್ಲಿ ಸಂಚಾರ ನಡೆಸಬಹುದಾಗಿದೆ.

 

Donate Janashakthi Media

Leave a Reply

Your email address will not be published. Required fields are marked *