ಯಾದಗಿರಿ: ಗುರುಮಿಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ವಿರುದ್ಧ ಹಿಂಸಾಚಾರ ಹಾಗೂ ಮಾನಸಿಕ ಕಿರುಕುಳದ ಆರೋಪ ಕೇಳಿಬಂದಿದ್ದು, ಯಾದಗಿರಿ ತಾಲೂಕಿನ ಕಿಲ್ಲನಕೇರಾ ಗ್ರಾಮದ ಯುವಕ ಬೀರಲಿಂಗಪ್ಪ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ಅವರ ಕಿರುಕುಳ ತಡೆದುಕೊಳ್ಳಲಾಗುತ್ತಿಲ್ಲ ಹಾಗಾಗಿ ದಯಾಮರಣ ಕರುಣಿಸಬೇಕು ಎಂದು ಕೋರಿದ್ದಾರೆ. ಯಾದಗಿರಿ
ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ಏನಿದೆ?
ನನ್ನ ಊರಿನ ರಾಜಶೇಖರ ಗೌಡ ಮತ್ತು ಮಲ್ಲಿಕಾರ್ಜುನ ಮಾಲಿಪಾಟೀಲ್ ರಿಂದ ನನ್ನ ಮೇಲೆ ಹಲ್ಲೆ ಗುರುಮಿಠಕಲ್ ಮತಕೇತ್ರದ ಶಾಸಕ ಶರಣಗೌಡ ಕಂದಕೂರ ಮಾಡಿಸಿದ್ದೂ, ತಮ್ಮ ಪಕ್ಷದ ಕಾರ್ಯಕರ್ತರಿಂದ ಸೈದಾಪೂರ ಪೊಲೀಸ್ ಠಾಣೆಯಲ್ಲಿ ನನ್ನ ಮೇಲೆ ಸುಳ್ಳು ದೂರು ನೀಡಿದ್ದಾರೆ. ಯಾದಗಿರಿ
ನಾನು ವಾರ್ತಾ ಇಲಾಖೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು, ನನ್ನನ್ನು ಕೆಲಸದಿಂದ ತೆಗೆಯದಿದ್ದರೆ ನಿಮ್ಮ ಆಫೀಸ್ ಮುಂದೆ ಪ್ರತಿಭಟನೆ ಮಾಡುತ್ತೇನೆ ಹಾಗೂ ವಿಧಾನಸೌಧದಲ್ಲಿ ಹಕ್ಕುಚ್ಯುತಿ ಮಂಡನೆ ಮಾಡುತ್ತೇನೆ, ನನ್ನ ಪವರ್ ಏನೆಂದು ತೋರಿಸುತ್ತೇನೆ ಎಂದು ವಾರ್ತಾ ಇಲಾಖೆ ಅಧಿಕಾರಿಗಳಿಗೆ ಧಮ್ಮಿ ಹಾಕಿ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಧಿಕಾರಿಗಳ ಮುಖಾಂತರ ನನ್ನನ್ನು ಕೆಲಸದಿಂದ ತೆಗೆಸಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಯಾದಗಿರಿ
ಇದನ್ನೂ ಓದಿ: ಆರೋಗ್ಯ ವಲಯದಲ್ಲೂ ಪ್ರಮುಖ ಪಾತ್ರ ವಹಿಸಿದ ಹೈದರಾಬಾದ್ ಮೆಟ್ರೋ
ನಮ್ಮ ಊರಿನ ಲಕ್ಷ್ಮೀದೇವಿ ದೇವಸ್ಥಾನಕ್ಕೆ ಬಿಡುಗಡೆಯಾದ 3 ಲಕ್ಷದ 98 ಸಾವಿರ ರೂಪಾಯಿಗಳ ಅನುದಾನಕ್ಕೆ ತಮ್ಮ ಕಾರ್ಯಕರ್ತರಿಂದ ಗ್ರಾಮಸ್ಥರ ಪೋರ್ಜರಿ ಸಹಿ ಮಾಡಿಸಿ ಬಿಲ್ ಮಾಡದಂತೆ ನಿರ್ಮೀತಿ ಕೇಂದ್ರದ ಅಧಿಕಾರಿಗಳಿಗೆ ತಡೆ ಹಿಡಿದಿದ್ದಾರೆ. ದೇವಸ್ಥಾನ ನಿರ್ಮಾಣಕ್ಕಾಗಿ ಸಾಲ ಮಾಡಿದ್ದೇನೆ. ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿ ಇರುವಾಗ ಉದ್ದೇಶ ಪೂರ್ವಕವಾಗಿ ಕಾಮಗಾರಿ ಬದಲಾವಣೆ, ಮಾಡಿ ಅನುದಾನ ಬೇರೆ ಊರಿಗೆ ಕೊಡಿ ಎಂದು ಜಿಲ್ಲಾಧಿಕಾರಿಗಳಿಗೆ ಹಾಗೂ ನಿರ್ಮೀತಿ ಕೇಂದ್ರದವರಿಗೆ ಶಾಸಕರು ಪತ್ರ ಬರೆದಿದ್ದಾರೆ ಎಂದು ಹೇಳಿದ್ದಾರೆ.
ಶಾಸಕರು ಅನುಮತಿ ಇಲ್ಲದೇ ನಾವು ಬಿಲ್ ಮಾಡಲು ಸಾಧ್ಯವಿಲ್ಲ ಎಂದು ನಿರ್ಮೀತಿ ಕೇಂದ್ರದ ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗೆ ಹಲವಾರು ರೀತಿಯಲ್ಲಿ ನನಗೆ ಮಾನಸಿಕ ಹಿಂಸೆ ನೀಡಿ-ಮುಂದೆ ನನ್ನ ಸಾವಿಗೆ ಶಾಸಕರು ಕಾರಣವಾಗುತ್ತಿದ್ದಾರೆ ಎಂದಿದ್ದಾರೆ.
ಶಾಸಕ ಶರಣಗೌಡ ಕಂದಕೂರ ಜಿಲ್ಲಾಮಟ್ಟದ ಅಧಿಕಾರಿಗಳಿಗೂ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಹೀಗೆ ಅಧಿಕಾರ ದುರ್ಬಳಕೆ ಮಾಡಿಕೊಂಡು ನನ್ನ ಮೇಲೆ ಸುಳ್ಳು ಕೇಸ್ ದಾಖಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ನಮ್ಮ ಊರಿನಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಲೀಡ್ ಬರಲಿಲ್ಲ ಎಂಬ ಕಾರಣಕ್ಕೆ ಈ ರೀತಿಯ ಸೇಡಿನ ರಾಜಕೀಯ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಶಾಸಕರಿಗೆ ತೇಜೋವಧೆ ಮಾಡಿಸಿದ್ದಾನೆ ಎಂದು ಸುಳ್ಳು ಸಾಕ್ಷಿಯ ಆಧಾರಗಳನ್ನು ಸೃಷ್ಟಿಸಿ ನನ್ನ ಮೇಲೆ ಕೇಸ್ ದಾಖಲಿಸಲು ಪ್ರಯತ್ನಪಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ತಮ್ಮ ಕಾರ್ಯಕರ್ತರಿಂದ ನನ್ನ ಮೇಲೆ ಸುಖಾಸುಮ್ಮನೆ ಉದ್ದೇಶ ಪೂರ್ವಕವಾಗಿ ಜಗಳ ಮಾಡಿ ಹಲ್ಲೆ ಮಾಡಿಸಲು ಪ್ರೇರೇಪಿಸುತ್ತಿದ್ದಾರೆ. ಮುಂದೆ ನನಗೇನಾದರೂ ಜೀವಕ್ಕೆ ಅಪಾಯವಾದರೆ ಶಾಸಕರಾದ ಶರಣಗೌಡ ಕಂದಕೂರ ಅವರೇ ನೇರ ಹೊಣೆಗಾರರು ಆಗಿರುತ್ತಾರೆ. ಹೀಗಾಗಿ ದೇವಸ್ಥಾನ ನಿರ್ಮಿಸುವುದಕ್ಕಾಗಿ ಸಾಲ ಮಾಡಿದ್ದರಿಂದ ಅನುದಾನದ ಬಿಲ್ ತಡೆ ಹಿಡಿದಿದ್ದರಿಂದ ಸಾಲಗಾರನಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಸಾಲ ಕೊಟ್ಟವರಿಗೆ ಮುಖ ತೋರಿಸಲು ಆಗುತ್ತಿಲ್ಲ. ಅಷ್ಟೇ ಅಲ್ಲದೇ ಕೆಲಸದಿಂದ ನನ್ನನ್ನು ತೆಗೆಸಿ ಬೀದಿಪಾಲು ಮಾಡುತ್ತಿದ್ದಾರೆ ಹೀಗಾಗಿ ನನಗೆ ದಯಾಮರಣ ಕೊಟ್ಟು ಶಾಸಕರ ಮಾನಸಿಕ ಕಿರುಕುಳದಿಂದ ಮುಕ್ತಿ ಕೊಡಿಸಬೇಕು ಎಂದು ತಮ್ಮಲ್ಲಿ ಬೇಡಿಕೊಳ್ಳುತ್ತಿದ್ದೇನೆ ಎಂದು ಬೀರಲಿಂಗಪ್ಪ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ನೋಡಿ: ಕಂದಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯ : ತಡೆಗಟ್ಟುವಲ್ಲಿ ಸಮಾಜವೂ ವಿಫಲ, ಸರ್ಕಾರವೂ ವಿಫಲ Janashakthi Media