ಮಿಜೋರಾಂ, ಛತ್ತೀಸ್‌ಘಡ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಪಂಚ ರಾಜ್ಯಗಳ ಚುನಾವಣೆಯನ್ನು ಮುಂಬರುವ ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದೇ ವಿಶ್ಲೇಷಿಸಲಾಗುತ್ತಿದೆ. ಎಲ್ಲ ರಾಜ್ಯಗಳ ಚುನಾವಣಾ ಫಲಿತಾಂಶ ಡಿಸೆಂಬರ್ 3ರಂದು ಪ್ರಕಟವಾಗಲಿದ್ದು, ಮತದಾನ ಮಾತ್ರ ಬೇರೆ ಬೇರೆ ದಿನಾಂಕಗಳಲ್ಲಿ ನಡೆಯಲಿದೆ. ಮಿಜೋರಾಂ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಛತ್ತೀಸ್ ಘಡದಲ್ಲಿ ಮಾತ್ರ 2 ಹಂತದಲ್ಲಿ ಮತದಾನ ನಡೆಯಲಿದೆ. ಮಿಜೋರಾಂ ವಿಧಾನಸಭೆ ಚುನಾವಣೆ
ಅದರಂತೆ ಈಶಾನ್ಯ ಭಾರತದ ಕಟ್ಟ ಕಡೆಯ ರಾಜ್ಯ ಎಂದೇ ಹೇಳಬಹುದಾದ ಮಿಜೋರಾಂನಲ್ಲಿ ನವೆಂಬರ್ 7 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಭಾರತದ ಈಶಾನ್ಯ ಪ್ರದೇಶದಲ್ಲಿರುವ ಏಳು ಸೋದರಿ ರಾಜ್ಯಗಳಲ್ಲಿ ತ್ರಿಪುರ, ಅಸ್ಸಾಂ ಮತ್ತು ಮಣಿಪುರದೊಂದಿಗೆ ಗಡಿಗಳನ್ನು ಹಂಚಿಕೊಂಡಿರುವ ಮಿಜೋರಾಂ ರಾಜ್ಯವು, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನ ರಾಷ್ಟ್ರಗಳ ಜೊತೆಗೆ ಅಂತಾರಾಷ್ಟ್ರೀಯ ಗಡಿಯನ್ನೂ ಹಂಚಿಕೊಂಡಿದೆ. ಮಿಜೋರಾಂ ವಿಧಾನಸಭೆ ಚುನಾವಣೆ
ಇದನ್ನೂ ಓದಿ: ದೇವೆಗೌಡರ ಹೇಳಿಕೆ ನಿರಾಕರಿಸಿದ ಪಿಣರಾಯಿ ವಿಜಯನ್
ಮಿಜೋರಾಂ ಕೆಲವು ಅಂಕಿ ಅಂಶಗಳು
ಇತರ ಈಶಾನ್ಯ ರಾಜ್ಯಗಳಂತೆ ಮಿಜೋರಾಂ ರಾಜ್ಯವು 1972 ರವರೆಗೆ ಅಸ್ಸಾಂನ ಭಾಗವಾಗಿತ್ತು. ನಂತರ ಕೇಂದ್ರಾಡಳಿತ ಪ್ರದೇಶವಾಗಿದ್ದ ಮಿಜೋರಾಂ ಅನ್ನು 1986 ರಲ್ಲಿ ಸಂವಿಧಾನಕ್ಕೆ 53 ನೇ ತಿದ್ದುಪಡಿ ತಂದು 20 ಫೆಬ್ರವರಿ 1987 ರಂದು ಭಾರತದ 23 ನೇ ರಾಜ್ಯವಾಗಿ ರಚಿಸಲಾಯಿತು. ಮಿಜೋರಾಂನ ಬಹುಪಾಲು ಜನಸಂಖ್ಯೆಯು ಸಾಂಸ್ಕೃತಿಕವಾಗಿ ಅಥವಾ ಭಾಷಿಕವಾಗಿ ಸಂಬಂಧ ಹೊಂದಿರುವ ಹಲವಾರು ಜನಾಂಗೀಯ ಬುಡಕಟ್ಟುಗಳನ್ನು ಒಳಗೊಂಡಿದೆ. ಈ ಜನಾಂಗೀಯ ಗುಂಪುಗಳನ್ನು ಒಟ್ಟಾಗಿ ಮಿಜೋಸ್ ಎಂದು ಕರೆಯಲಾಗುತ್ತದೆ.
ಮಿಜೋರಾಂ ರಾಜ್ಯ (ಕೆಂಪು ಬಣ್ಣದಲ್ಲಿ)
ಮಿಜೋ ಜನರು ಬರ್ಮಾ, ಬಾಂಗ್ಲಾದೇಶ ಮತ್ತು ಭಾರತದ ಇತರ ಈಶಾನ್ಯ ರಾಜ್ಯಗಳಲ್ಲಿ ಕೂಡಾ ಹರಡಿಕೊಂಡಿದ್ದಾರೆ. ಇವರನ್ನು ಬಂಗಾಳಿಗಳು ಕುಕಿಗಳು ಎಂದು ಕರೆಯಲಾಗುತ್ತದೆ. 2011ರ ಜನಗಣತಿ ಪ್ರಕಾರ ಮಿಜೋರಾಂನಲ್ಲಿ 1,091,014 ಜನಸಂಖ್ಯೆ ಇದ್ದು, ಇದರಲ್ಲಿ 95% ಜನರು ಬುಡಕಟ್ಟು ಮೂಲದವರಾಗಿದ್ದಾರೆ. ಇದು ದೇಶದ 2ನೇ ಕಡಿಮೆ ಜನಸಂಖ್ಯೆ ಇರುವ ರಾಜ್ಯವಾಗಿದೆ. ಬುಡಕಟ್ಟು ಗುಂಪುಗಳನ್ನು ಹೊರತುಪಡಿಸಿ, ಬೆಂಗಾಲಿಗಳು ಮತ್ತು ನೇಪಾಳಿಗಳು ಸೇರಿದಂತೆ ಇತರ ಜನಾಂಗೀಯ ಗುಂಪುಗಳು ಕೂಡಾ ಮಿಜೋರಾಂನಲ್ಲಿ ವಾಸಿಸುತ್ತಿದ್ದಾರೆ.
ಕ್ರಿಶ್ಚಿಯನ್ ಸಮುದಾಯ ಬಹುಸಂಖ್ಯಾತರಾಗಿರುವ ಭಾರತದ ಮೂರು ರಾಜ್ಯಗಳಲ್ಲಿ ಮಿಜೋರಾಂ ಕೂಡಾ ಒಂದಾಗಿದೆ. ಇಲ್ಲಿ 87% ಜನರು ಕ್ರಿಶ್ಚಿಯನ್ ಧರ್ಮವನ್ನು ಆಚರಿಸುತ್ತಾರೆ. 2011ರ ಗಣತಿ ಪ್ರಕಾರ ರಾಜ್ಯದಲ್ಲಿ ಕ್ರಿಶ್ಚಿಯನ್ ಧರ್ಮ ಧರ್ಮವನ್ನು ಅನುಸರಿಸುವವರು 87.16%ರಷ್ಟಿದ್ದಾರೆ. ಬೌದ್ಧಧರ್ಮ (8.51%), ಹಿಂದೂ ಧರ್ಮ (2.75%), ಇಸ್ಲಾಂ (1.35%) ಹಾಗೂ ಇತರ 0.23% ಜನರು ರಾಜ್ಯದಲ್ಲಿದ್ದಾರೆ.
ಇದನ್ನೂ ಓದಿ: ‘ದಿ ವೈರ್’ ಸಂಪಾದಕರ ಸಾಧನಗಳ ವಶ ಪ್ರಕರಣ: ಹಿಂದಿರುಗಿಸುವ ಆದೇಶ ಎತ್ತಿ ಹಿಡಿದ ದಿಲ್ಲಿ ಕೋರ್ಟ್
ಮಿಜೋ ಮತ್ತು ಇಂಗ್ಲಿಷ್ ಭಾಷೆಯು ರಾಜ್ಯದ ಅಧಿಕೃತ ಭಾಷೆಗಳಾಗಿದೆ. ಮಿಜೋ (73.13%) ಭಾಷೆ ರಾಜ್ಯದ ಬಹುಸಂಖ್ಯಾತ ಜನರು ಬಳಸುತ್ತಾರೆ. ಉಳಿದಮತೆ ಚಕ್ಮಾ (8.51%), ಮಾರ (3.84%), ತ್ರಿಪುರಿ (2.99%), ಪಾವಿ (2.62%), ಪೈಟ್ (2.04%) ಹ್ಮರ್(1.65%), ಬಂಗಾಳಿ (1.37%) ಹಾಗೂ 3.85% ಜನಸಂಖ್ಯೆ ಇತರ ಭಾಷೆಗಳನ್ನು ಬಳಸುತ್ತದೆ.
ಪ್ರಕೃತಿ ರಮಣಿಯ ರಾಜ್ಯದ ಒಟ್ಟು ವಿಸ್ತೀರ್ಣದಲ್ಲಿ 91% ಅರಣ್ಯವಿದೆ. ಭಾರತೀಯ ನಾಗರಿಕರು ಮಿಜೋರಾಂ ಪ್ರವೇಶಿಸಬೇಕು ಎಂದರೆ ಅದಕ್ಕೆ ವಿಶೇಷ ಅನುಮತಿ ಇನ್ನರ್ ಲೈನ್ ಪರ್ಮಿಟ್ ಹೊಂದಿರಬೇಕಿದೆ. 120 ರೂ. ಶುಲ್ಕ ಪಾವತಿಸಿ 15 ದಿನಗಳ ಭೇಟಿಯ ಪಾಸ್ ಅನ್ನು ಸರ್ಕಾರದಿಂದ ಪಡೆಯಬಹುದು.
ಮಿಜೋರಾಂ ರಾಜಕೀಯ:
ಒಟ್ಟು 40 ವಿಧಾನಸಭಾ ಕ್ಷೇತ್ರಗಳಿರುವ ಮಿಜೋರಾಂಗೆ ಲೋಕಸಭೆಯಲ್ಲಿ 1 ಸ್ಥಾನವಿದ್ದು, ರಾಜ್ಯಸಭೆಯಲ್ಲಿ ಒಂದು ಸ್ಥಾನವಿದೆ. 1987ರಲ್ಲಿ ಪೂರ್ಣ ಪ್ರಮಾಣದಲ್ಲಿ ರಾಜ್ಯವಾದ ನಂತರ ಒಟ್ಟು 8 ಬಾರಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದಿದ್ದು, ಇದರಲ್ಲಿ ಮಿಜೋ ನ್ಯಾಷನಲ್ ಫ್ರಂಟ್ (MNF) ಮತ್ತು ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಧಿಕಾರ ಪಡೆಯುತ್ತಾ ಬಂದಿದೆ. ಒಟ್ಟು ನಾಲ್ಕು ಬಾರಿ ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತ ನಡೆಸಿದ್ದು, ಮಿಜೋ ನ್ಯಾಷನಲ್ ಫ್ರಂಟ್ ನಾಲ್ಕು ಬಾರಿ ರಾಜ್ಯದಲ್ಲಿ ಅಧಿಕಾರ ಪಡೆದಿದೆ.
ಪ್ರಸ್ತುತ ಮಿಜೋ ನ್ಯಾಷನಲ್ ಫ್ರಂಟ್ ರಾಜ್ಯದ ಆಡಳಿತರೂಢ ಪಕ್ಷವಾಗಿದ್ದು, ಪಕ್ಷದ ಅಧ್ಯಕ್ಷರೂ ಆಗಿರುವ ಜೋರಮ್‌ಥಂಗ ಅವರು ಮೂರನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನಿಂದ ಲಾಲ್ ಥನ್ಹಾವ್ಲಾ ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು.
ರಾಜ್ಯದಲ್ಲಿ ಪ್ರಸ್ತುತ ಪ್ರಾದೇಶಿಕ ಪಕ್ಷಗಳೆ ದೊಡ್ಡ ಪಕ್ಷಗಳಾಗಿದ್ದು, 2018ರ ಚುನಾವಣೆಯಲ್ಲಿ 40 ವಿಧಾನಸಭಾ ಕ್ಷೇತ್ರಗಳಲ್ಲಿ ಆಡಳಿತರೂಢ ಮಿಜೋ ನ್ಯಾಷನಲ್ ಫ್ರಂಟ್ (MNF) 26 ಸ್ಥಾನಗಳನ್ನು ಪಡೆದು ಅಧಿಕಾರ ಹಿಡಿದಿತ್ತು. ರಾಜ್ಯದ ಏಕೈಕ ಲೋಕಸಭೆ ಮತ್ತು ರಾಜ್ಯಸಭೆಗೆ ಸ್ಥಾನಗಳಿಗೆ ಆಡಳಿತರೂಢ ಮಿಜೋ ನ್ಯಾಷನಲ್ ಫ್ರಂಟ್ ಸಂಸದರು ಆಯ್ಕೆಯಾಗಿದ್ದಾರೆ. ಪ್ರಮುಖ ವಿರೋಧ ಪಕ್ಷವಾಗಿ ಜೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) 8 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್‌ಗೆ 5 ಸ್ಥಾನ ಮತ್ತು ಕೇಂದ್ರದ ಆಡಳಿತರೂಢ ಬಿಜೆಪಿಗೆ 1 ಸ್ಥಾನ ದಕ್ಕಿದ್ದವು. ಮಿಜೋರಾಂ ವಿಧಾನಸಭೆ ಚುನಾವಣೆ
ಇದನ್ನೂ ಓದಿ: ಪ್ಯಾಲೆಸ್ತೀನ್ | ಕನಿಷ್ಠ 22 ಪತ್ರಕರ್ತರ ಸಾವು; ಇಸ್ರೇಲಿ ದಾಳಿ ಹೆಚ್ಚಿನ ಸಾವಿಗೆ ಕಾರಣ
ಪ್ರಸ್ತುತ ರಾಜ್ಯದಲ್ಲಿ ಆಡಳಿತರೂಢ ಮಿಜೋ ನ್ಯಾಷನಲ್ ಫ್ರಂಟ್‌ಗೆ 27 ಸ್ಥಾನವಿದ್ದು, ಜೋರಾಮ್ ಪೀಪಲ್ಸ್ ಮೂವ್ಮೆಂಟ್ ಸ್ಥಾನವು 6 ಕ್ಕೆ ಇಳಿದಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಕ್ರಮವಾಗಿ 5 ಮತ್ತು 1 ಸ್ಥಾನಗಳಿವೆ. ಒಂದು ಸ್ಥಾನ ತೆರವುಗೊಂಡಿದೆ. ಅಷ್ಟೆ ಅಲ್ಲದೆ, ಜೋರಾಮ್ ನ್ಯಾಶನಲಿಸ್ಟ್ ಪಾರ್ಟಿ (ZNP), ಪೀಪಲ್ಸ್ ಕಾನ್ಫರೆನ್ಸ್ ಪಾರ್ಟಿ (ಪಿಸಿಪಿ) ಸೇರಿದಂತೆ ಹಲವಾರು ರಾಜ್ಯಕೀಯ ಪಕ್ಷಗಳು ಕೂಡಾ ರಾಜ್ಯದಲ್ಲಿ ಸಕ್ರಿಯವಾಗಿವೆ. ಮಿಜೋರಾಂ ವಿಧಾನಸಭೆ ಚುನಾವಣೆ
ಮಿಜೋ ನ್ಯಾಷನಲ್ ಫ್ರಂಟ್ (MNF)
1959 ರಲ್ಲಿ ಅಸ್ಸಾಂ ರಾಜ್ಯದ ಮಿಜೋ ಪ್ರದೇಶಗಳಲ್ಲಿನ ಕ್ಷಾಮ ಪರಿಸ್ಥಿತಿಯ ಬಗ್ಗೆ ಕೇಂದ್ರ ಸರ್ಕಾರವು ನಿಷ್ಕ್ರಿಯತೆ ತೋರುತ್ತಿದೆ ಎಂದು ಆರೋಪಿಸಿ, ಅದರ ವಿರುದ್ಧ ಪ್ರತಿಭಟಿಸಲು ಪು ಲಾಲ್ಡೆಂಗಾ ಅವರು ಮಿಜೋ ನ್ಯಾಷನಲ್ ಫ್ರಂಟ್ ಪಕ್ಷವನ್ನು ಸ್ಥಾಪಿಸಿದ್ದರು. ಪಕ್ಷವೂ 1966 ರಲ್ಲಿ ದೊಡ್ಡ ದಂಗೆಯನ್ನು ನಡೆಸಿ ವರ್ಷಗಳ ಕಾಲ ಭೂಗತ ಚಟುವಟಿಕೆಗನ್ನು ನಡೆಸಿತ್ತು. 1986 ರಲ್ಲಿ ಭಾರತ ಸರ್ಕಾರದೊಂದಿಗೆ ಮಿಜೋರಾಂ ಒಪ್ಪಂದಕ್ಕೆ ಸಹಿ ಹಾಕಿ, ಪ್ರತ್ಯೇಕತೆ ಮತ್ತು ಹಿಂಸಾಚಾರವನ್ನು ತ್ಯಜಿಸಿತು.
2014 ರ ಲೋಕಸಭಾ ಚುನಾವಣೆಗೆ ಮಿಜೋರಾಂನ ಏಕೈಕ ಸ್ಥಾನಕ್ಕೆ ಸ್ಪರ್ಧಿಸಲು ಬಿಜೆಪಿ ಸೇರಿದಂತೆ ಏಳು ಇತರ ಪಕ್ಷಗಳೊಂದಿಗೆ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಎಂಬ ಮೈತ್ರಿಯನ್ನು ರಚಿಸಿ ಪಕ್ಷವೂ ಅದರ ಭಾಗವಾಯಿತು. 2014 ರಿಂದ ಪಕ್ಷವೂ ಬಿಜೆಪಿ ನೇತೃತ್ವದ ಎನ್‌ಡಿಎ ಭಾಗವಾಗಿದ್ದರೂ, ಮಿಜೋ ರಾಷ್ಟ್ರೀಯತೆ, ಸಂಪ್ರದಾಯವಾದಿ ಕ್ರಿಶ್ಚಿಯನ್ ಧರ್ಮ, ಝೋ ಬುಡಕಟ್ಟು ಏಕೀಕರಣ ಹಾಗೂ ಸಿಎಎ ವಿರೋಧಿ ನಿಲುವನ್ನು ಹೊಂದಿದೆ. ಮಿಜೋರಾಂ ವಿಧಾನಸಭೆ ಚುನಾವಣೆ
ರಾಷ್ಟ್ರದಲ್ಲಿ ಬಿಜೆಪಿಯ ಜೊತೆಗೆ ಮೈತ್ರಿಯಲ್ಲಿದ್ದರೂ, ಸ್ವಾಯತ್ತ ಜಿಲ್ಲಾ ಮಂಡಳಿಗಳ ಚುನಾವಣೆಯಲ್ಲಿ ಪಕ್ಷವೂ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಮಿಜೋರಾಂ ವಿಧಾನಸಭೆ ಚುನಾವಣೆ
ಇದನ್ನೂ ಓದಿ: ತಮ್ಮ ಶ್ರೀಮಂತ ಸ್ನೇಹಿತರಿಗಾಗಿ ಮಾತ್ರ ಕೆಲಸ ಮಾಡುತ್ತಿರುವ ಮೋದಿ – ಪ್ರಿಯಾಂಕಾ ಗಾಂಧಿ ಆರೋಪ
ಮಿಜೋರಾಂ ಪ್ರಸ್ತುತ ರಾಜಕೀಯ
ಮಿಜೋರಾಂ ಶಾಸಕಾಂಗ ಸಭೆಯ ಅವಧಿಯು 2023ರ ಡಿಸೆಂಬರ್ 17 ರಂದು ಕೊನೆಗೊಳ್ಳುತ್ತದೆ. ವಿಧಾನಸಭೆ ಮತದಾನವು 7 ನವೆಂಬರ್ ನಡೆಯಲಿದೆ. ರಾಜ್ಯದ 40 ಶಾಸಕರನ್ನು ಆಯ್ಕೆ ಮಾಡಲು ಒಟ್ಟು 8.50 ಲಕ್ಷಕ್ಕೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. 40 ಕ್ಷೇತ್ರಗಳಲ್ಲಿ 39 ಕ್ಷೇತ್ರಗಳು ಎಸ್‌ಟಿ ಸಮುದಾಯಗಳಿಗೆ ಮೀಸಲಾಗಿವೆ. ಈಗಾಗಲೆ ರಾಜ್ಯದಲ್ಲಿ ಸಕ್ರಿಯವಾಗಿರುವ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಚಟುವಟಿಕೆಯನ್ನು ಬಿರುಸುಗೊಳಿಸಿದೆ.
ಪ್ರಮುಖವಾಗಿ ಆಡಳಿತರೂಢ ಮಿಜೋ ನ್ಯಾಷನಲ್ ಫ್ರಂಟ್, ಕಾಂಗ್ರೆಸ್ ಮತ್ತು ಜೊರಾಮ್ ಪೀಪಲ್ಸ್ ಮೂವ್ಮೆಂಟ್ ರಾಜ್ಯದ ಎಲ್ಲಾ 40 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ. ಬಿಜೆಪಿ 23 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಆಮ್ ಆದ್ಮಿ ಪಕ್ಷವು 4 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಉಳಿದಂತೆ ಪ್ರಾದೇಶಿಕ ಪಕ್ಷವಾದ ನ್ಯಾಷನಲ್ ಪೀಪಲ್ಸ್ ಪಾರ್ಟಿ ಕೂಡಾ ಕಣದಲ್ಲಿದ್ದು, ಈವರೆಗೆ ಅಭ್ಯರ್ಥಿ ಘೋಷಣೆ ಮಾಡಿಲ್ಲ.
ಕಾಂಗ್ರೆಸ್ ಪಕ್ಷವೂ ಲಾಲಸವತಾ ಅವರ ನಾಯಕತ್ವದಲ್ಲಿ ಸ್ಷರ್ಧಿಸಿದರೆ, ಆಡಳಿತರೂಢ ಮಿಜೋ ಫ್ರಂಟ್ ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷ ಜೋರಮ್‌ಥಂಗ ಅವರ ನಾಯಕತ್ವದಲ್ಲಿ ಹೋರಾಟಕ್ಕೆ ಸಜ್ಜಾಗಿದೆ. ಬಿಜೆಪಿ ಅಧ್ಯಕ್ಷ ವನ್‌ಲಾಲ್ ಮುಕಾ ಅವರ ನಾಯಕತ್ವದಲ್ಲಿ ಸ್ಪರ್ಧೆಗೆ ಇಳಿದಿದ್ದು, “ನಾವು ಗೆಲ್ಲದಿದ್ದರೂ ಸಹ, ನಾವು ಹೊಸ ಸರ್ಕಾರದ ಭಾಗವಾಗುತ್ತೇವೆ ಎಂಬ ವಿಶ್ವಾಸವಿದೆ. ನಾವು ಕಾಂಗ್ರೆಸ್ ಹೊರತುಪಡಿಸಿ ಯಾವುದೇ ರಾಜಕೀಯ ಪಕ್ಷದೊಂದಿಗೆ ಸರ್ಕಾರ ರಚಿಸಲು ಸಿದ್ಧರಿದ್ದೇವೆ” ಎಂದು ಹೇಳಿದ್ದಾರೆ. ಮತ್ತೊಂದು ಪ್ರಮುಖ ಪ್ರಾದೇಶಿಕ ಪಕ್ಷವಾದ ಜೊರಾಮ್ ಪೀಪಲ್ಸ್ ಮೂವ್ಮೆಂಟ್ ಪಕ್ಷವು ಲಾಲ್ದುಹೋಮ ಅವರ ಅಧ್ಯಕ್ಷತೆಯಲ್ಲಿ ಚುನಾವಣೆಗೆ ತಯಾರಾಗಿದೆ. ಮಿಜೋರಾಂ ವಿಧಾನಸಭೆ ಚುನಾವಣೆ
ಈ ನಡುವೆ ಆಡಳಿತರೂಢ ಪಕ್ಷದಿಂದ ಇತ್ತೀಚೆಗೆ ಬಿಜೆಪಿಗೆ ಸೇರಿಕೊಂಡವರ ಹೆಸರು ಬಿಜೆಪಿಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಇದರಲ್ಲಿ ಬಹುಮುಖ್ಯವಾಗಿ ಮಿಜೋರಾಂ ವಿಧಾನಸಭೆಯ ಮಾಜಿ ಸ್ಪೀಕರ್ ಲಾಲ್ರಿನ್ಲಿಯಾನಾ ಸೈಲೋ ಅವರು ಕಳೆದ ವಾರ ತಮ್ಮ ಪಕ್ಷವೂ ಟಿಕೆಟ್ ನಿರಾಕರಿಸಿದ ಕಾರಣಕ್ಕೆ ವಿಧಾನಸಭೆಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಮಿಜೋರಾಂ ವಿಧಾನಸಭೆ ಚುನಾವಣೆ
ಇದನ್ನೂ ಓದಿ: ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ ತೆಲಂಗಾಣದ 85% ಹಾಲಿ ಶಾಸಕರು!
ಈ ತಿಂಗಳ ಆರಂಭದಲ್ಲಿ ಬಿಜೆಪಿ ಸೇರಿದ ಚಕ್ಮಾ ಸ್ವಾಯತ್ತ ಜಿಲ್ಲೆಯ ಮಾಜಿ ಮುಖ್ಯ ಕಾರ್ಯನಿರ್ವಾಹಕ ಸದಸ್ಯ ದುರ್ಜ್ಯ ಧನ್ ಚಕ್ಮಾ ಅವರನ್ನು ಪಕ್ಷವು ಕಣಕ್ಕಿಳಿಸಿದೆ. ಕೆಲವು ವಾರಗಳ ಹಿಂದೆ ಬಿಜೆಪಿ ಸೇರಿದ ಮತ್ತೊಬ್ಬ ಆಡಳಿತರೂಢ ಪಕ್ಷದ ಸದಸ್ಯ ಕೆ ಬೀಚುವಾ ಅವರಿಗೆ ಕೂಡಾ ಬಿಜೆಪಿ ಟಿಕೆಟ್ ನೀಡಿದೆ. ಬೀಚುವಾ ಅವರು ಮುಖ್ಯಮಂತ್ರಿ ಝೋರಮ್‌ಥಂಗ ಅವರ ಸಂಪುಟದಲ್ಲಿ ಸಚಿವರಾಗಿದ್ದರು, ಆದರೆ ಅವರನ್ನು ಜನವರಿಯಲ್ಲಿ “ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ” ಪಕ್ಷದಿಂದ ಹೊರಹಾಕಲಾಗಿತ್ತು. ಮಿಜೋರಾಂ ವಿಧಾನಸಭೆ ಚುನಾವಣೆ
ಮಿಜೋರಾಂನಲ್ಲಿ ಇತ್ತೀಚೆಗೆ ಚುನಾವಣಾ ಪ್ರಚಾರ ಕೈಗೊಂಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಿಜೋ ನ್ಯಾಷನಲ್ ಫ್ರಂಟ್ ಮತ್ತು ಜೊರಾಮ್ ಮೂವ್ಮೆಂಟ್ ಪಕ್ಷಗಳು ಬಿಜೆಪಿ ಮತ್ತು ಆರೆಸ್ಸೆಸ್‌ನ ಹೆಬ್ಬಾಗಿಲಾಗಿದೆ” ಎಂದು ಪ್ರತಿಪಾದಿಸಿದ್ದರು. ಎರಡೂ ಪಕ್ಷಗಳು ಬಿಜೆಪಿ ವಿರುದ್ಧ ಹೋರಾಡುತ್ತಿಲ್ಲ, ಆಡಳಿತರೂಢ ಮಿಜೊ ಫ್ರಂಟ್ ರಾಷ್ಟ್ರದಲ್ಲಿ ಬಿಜೆಪಿ ಜೊತೆಗೆ ಗುರುತಿಸಿಕೊಂಡಿದೆ, ಜೊರಾಮ್ ಮೂವ್ಮೆಂಟ್ ಈ ಹಿಂದೆ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿತ್ತು ಎಂದು ಅವರು ಹೇಳಿದ್ದಾರೆ. ರಾಜ್ಯವೂ ಕ್ರಿಶ್ಚಿಯನ್ ಬಹುಸಂಖ್ಯಾತ ರಾಜ್ಯವಾಗಿರುವುದರಿಂದ ಬಿಜೆಪಿ ಪಕ್ಷವೂ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಯುದ್ಧವನ್ನು ಮುನ್ನೆಲೆಗೆ ತರುತ್ತಿದ್ದು, ಕಾಂಗ್ರೆಸ್ ಪ್ಯಾಲೆಸ್ತೀನ್‌ಗೆ ಬೆಂಬಲಿಸುತ್ತಿರುವುದನ್ನು ಉಲ್ಲೇಖಿಸಿ ದಾಳಿ ಮಾಡುತ್ತಿದೆ.
1987 ರಲ್ಲಿ ಮಿಜೋರಾಂ ರಾಜ್ಯವು ರಚನೆಯಾದ ನಂತರ ವಿಧಾನಸಭೆಯ ಚುನಾವಣೆ ಎಂದರೆ ಕಾಂಗ್ರೆಸ್ ಮತ್ತು ಎಂಎನ್‌ಎಫ್ ನಡುವಿನ ಹೋರಾಟವಾಗಿತ್ತು. ಆದರೆ ಮೊದಲ ಬಾರಿಗೆ 2018 ರ ವಿಧಾನಸಭಾ ಚುನಾವಣೆಯಲ್ಲಿ ಜೊರಾಮ್ ಪೀಪಲ್ಸ್ ಮೂವ್ಮೆಂಟ್ ಆರು ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಬಲವನ್ನು ಹೆಚ್ಚಿಸಿಕೊಂಡಿತ್ತು. ಹೀಗಾಗಿ ಈ ಬಾರಿಯ ಚುನಾವಣೆಯು ಆಡಳಿತರೂಢ ಮಿಜೊ ನ್ಯಾಷನಲ್ ಫ್ರಂಟ್ ಮತ್ತು ಜೊರಾಮ್ ಪೀಪಲ್ಸ್ ಮೂವ್ಮೆಂಟ್ ನಡೆವೆ ನೇರ ಹಣಾಹಣಿಯಾಗುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗಿದೆ. ಮಿಜೋರಾಂ ವಿಧಾನಸಭೆ ಚುನಾವಣೆ
ಅದಾಗ್ಯೂ ಹಲವಾರು ಸಮೀಕ್ಷೆಗಳು ಈ ಬಾರಿ ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರಲಿದೆ ಎಂದು ಭವಿಷ್ಯ ನುಡಿದಿವೆ. ಆಡಳಿತ ಪಕ್ಷವಾದ ಮಿಜೂ ನ್ಯಾಷನಲ್ ಫ್ರಂಟ್ 27 ರಿಂದ 18ಕ್ಕೆ ಕುಸಿಯಲಿದ್ದು, ಕಾಂಗ್ರೆಸ್ 5 ರಿಂದ 16 ಸ್ಥಾನಗಳಿಗೆ ಏರಿಕೆಯಾಗಲಿದೆ ಎಂದು ಸಿ-ಓಟರ್ ಸಮೀಕ್ಷೆ ಉಲ್ಲೇಖಿಸಿದೆ. ಎಲ್ಲಾ ಪಕ್ಷಗಳೂ ಬಿರುಸಿನ ಪ್ರಚಾರ ನಡೆಸುತ್ತಿದ್ದು, ಅಕ್ಟೋಬರ್ 20ರ ಶುಕ್ರವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ನವೆಂಬರ್ 7 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ. ಮಿಜೋರಾಂ ವಿಧಾನಸಭೆ ಚುನಾವಣೆ
ವಿಡಿಯೊ ನೋಡಿ: “ಇಸ್ರೇಲ್ ಪ್ಯಾಲಿಸ್ಟೈನ್ ಯುದ್ಧ”ದ ಹಿನ್ನೆಲೆ ಏನು? Janashakthi Media