ವಸಂತರಾಜ ಎನ್ ಕೆ
ಬಿಜೆಪಿ ಮತ್ತು ಅದರ ನಾಯಕತ್ವದ ಎನ್.ಡಿ.ಎ ಕೂಟಕ್ಕೆ ಪೂರ್ವ ರಾಜ್ಯಗಳಲ್ಲಿ ಮಿಶ್ರ ಫಲಿತಾಂಶ ಬಂದಿದೆ, ಪಶ್ಚಿಮ ಬಂಗಾಳದಲ್ಲಿ ನಷ್ಟ ಅನುಭವಿಸಿದರೆ, ಒಡಿಶಾದಲ್ಲಿ ಅನಿರೀಕ್ಷಿತವಾಗಿ ಸ್ವೀಪ್ ಮಾಡಿದೆ. ಸಿಕ್ಕಿಂ ನಲ್ಲಿ ಮುನ್ನಡೆ ಸಾಧಿಸಲು ಸಾಧ್ಯವಾಗಿಲ್ಲ. ಪೂರ್ವ ಪ್ರದೇಶದಲ್ಲಿ ಎನ್.ಡಿ.ಎ ಮತ್ತು ಇಂಡಿಯಾ ಕೂಟಗಳಲ್ಲದೆ ಇತರ ಪಕ್ಷಗಳು – ಪ.ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್, ಒಡಿಶಾದಲ್ಲಿ ಬಿಜೆಡಿ, ಸಿಕ್ಕಿಂನಲ್ಲಿ ಎಸ್.ಕೆ.ಎಂ ಮತ್ತು ಎಸ್.ಡಿ.ಎಫ್ ಸ್ಪರ್ಧೆಯಲ್ಲಿ ಪ್ರಮುಖವಾಗಿದ್ದವು.. ಪೂರ್ವ
ಪೂರ್ವ ಪ್ರದೇಶದಲ್ಲಿ, ಒಟ್ಟು 64 ಸೀಟುಗಳು ಇದ್ದು, ಅದರಲ್ಲಿ ಎನ್.ಡಿ.ಎ ಕೂಟ 6 ಸೀಟುಗಳನ್ನು ಹೆಚ್ಚುವರಿಯಾಗಿ ಪಡೆದು 32 ಸೀಟುಗಳಿಗೆ ಏರಿದೆ. ಪ.ಬಂಗಾಳದಲ್ಲಿ 6 ಸೀಟು ಕಳೆದುಕೊಂಡರೆ, ಒಡಿಶಾದಲ್ಲಿ 12 ಸೀಟು ಗಳಿಸಿದೆ. ಇಂಡಿಯಾ ಕೂಟ 1 ಸೀಟು ಕಳೆದುಕೊಂಡು 2 ಸೀಟುಗಳಿಗೆ ಸೀಮಿತವಾಗಿದೆ. ಇಲ್ಲಿ ಇತರರ ಜತೆ ಸೇರಿಸಲಾದ ತೃಣಮೂಲ ಕಾಂಗ್ರೆಸ್ 29, ಸಿಕ್ಕಿಂನಲ್ಲಿ ಎಸ್.ಕೆ.ಎಂ 1 ಸೀಟು ಗಳಿಸಿದೆ. ಎನ್.ಡಿ.ಎ ಕೂಟ ಈ ಪ್ರದೇಶದಲ್ಲಿ ಒಟ್ಟಾಗಿ ಶೇ.0.7 ಮತ ಹೆಚ್ಚಿಸಿಕೊಂಡು ಶೇ.40.3 ಮತ ಗಳಿಸಿದೆ. ಇಂಡಿಯಾ ಕೂಟ ಸಹ ಶೇ.2.5 ರಷ್ಟು ಮತಗಳಿಕೆ ಹೆಚ್ಚಿಸಿಕೊಂಡು ಶೇ. 11.6 ಮತ ಗಳಿಸಿದೆ. ಇತರರು (ತೃಣಮೂಲ ಕಾಂಗ್ರೆಸ್) ಶೇ. 3.2 ಮತ ಕಳೆದುಕೊಂಡು ಸಹ ಇಲ್ಲಿ ಅತ್ಯಧಿಕ ಶೇ,.48.1 ಮತ ಗಳಿಸಿದ್ದಾರೆ. ಆದರೆ ರಾಷ್ಟ್ರ ಮಟ್ಟದ ದೃಷ್ಟಿಯಿಂದ ಹೇಳುವುದಾದರೆ, ಪೂರ್ವ ಪ್ರದೇಶದಲ್ಲಿ, ಕಾಂಗ್ರೆಸ್ ಕೂಟ (ತೃಣಮೂಲ ಸಹ ಈ ಕೂಟದ ಭಾಗವಾದ್ದರಿಂದ) 31 ಸೀಟು ಗಳಿಸಿದೆ. ಬಿಜೆಪಿಗಿಂತ ಹೆಚ್ಚಿನ ಮತಪ್ರಮಾಣ ಗಳಿಕೆ ಸಾಧಿಸಿದೆ.
ಪೂರ್ವ ಪ್ರದೇಶದ ಸೀಟು-ಮತಪ್ರಮಾಣ ಗಳಿಕೆ
ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳದಲ್ಲಿ ಎನ್.ಡಿ.ಎ (ಈ ರಾಜ್ಯದಲ್ಲಿ ಎನ್.ಡಿ..ಎ ಎಂದರೆ ಬಿಜೆಪಿಯೇ) ಭಾರೀ ಹೆಚ್ಚಳ ಸಾಧಿಸುತ್ತದೆ ಎಂದು ಒಪಿನಿಯನ್ ಮತ್ತು ಎಕ್ಸಿಟ್ ಪೋಲುಗಳು ಎರಡೂ ಹೇಳಿದ್ದವು. ಈ ಪೋಲುಗಳನ್ನು ಪ.ಬಂಗಾಳದ ಮತದಾರರು ತಿರಸ್ಕರಿಸಿದ್ದಾರೆ. ಬಿಜೆಪಿ ಸೀಟುಗಳಲ್ಲಿ ಮೂರನೇ ಒಂದು ಭಾಗದಷ್ಟು (18ರಿಂದ 12ಕ್ಕೆ) ಮತಪ್ರಮಾಣದಲ್ಲೂ ಸ್ವಲ್ಪ ನಷ್ಟ (ಶೇ. 1.7) ಅನುಭವಿಸಿದೆ. ಈ ರಾಜ್ಯದಲ್ಲಿ ಇಂಡಿಯಾ ಕೂಟ ಒಗ್ಗಟ್ಟಾಗಿ ಸ್ಪರ್ಧಿಸಲಿಲ್ಲ. ತೃಣಮೂಲ 2 ಸೀಟಿಗಿಂತ ಹೆಚ್ಚು ಕೂಟದ ಇತರ ಪಕ್ಷಗಳಿಗೆ ತಯಾರಾಗಲಿಲ್ಲ. ಹಾಗಾಗಿ ಕಾಂಗ್ರೆಸ್ ಮತ್ತು ಸಿಪಿಐ(ಎಂ) ನಾಯಕತ್ವದ ಎಡರಂಗ ಮೂರನೇ ಕೂಟ ರಚಿಸಿ ಎಲ್ಲ ಸ್ಥಾನಗಳಿಗೆ ಸ್ಪರ್ಧಿಸಿದ್ದವು. ಇಂಡಿಯಾ ಕೂಟ 2019 ರಲ್ಲಿದ್ದ 2 ರಲ್ಲಿ 1 ಸೀಟು ಕಳೆದುಕೊಂಡು 1 ಸೀಟಿಗೆ ಇಳಿದಿದೆ. ಕಾಂಗ್ರೆಸ್ 12 ಮತ್ತು ಎಡರಂಗ 30 ಸ್ಥಾನಗಳನ್ನು ಸ್ಪರ್ಧಿಸಿದ್ದವು. 2019ಕ್ಕೆ ಹೋಲಿಸಿದರೆ ಶೇ.2.0 ಮತಗಳಿಕೆ ಕಡಿಮೆಯಾಗಿದೆ. ಆದರೆ ಎಡರಂಗ ಮತ್ತು ಕಾಂಗ್ರೆಸ್ 2019ರಲ್ಲಿ ಪ್ರತ್ಯೇಕವಾಗಿ ಎಲ್ಲ ಸ್ಥಾನಗಳಿಗೆ ಸ್ಪರ್ಧಿಸಿದ್ದರಿಂದ ಎರಡನ್ನು ಹೋಲಿಸುವುದು ಕಷ್ಟ. ಎಡರಂಗ ಮತ್ತು ಕಾಂಗ್ರೆಸ್ ಸ್ಪರ್ಧಿಸಿದಾಗ ಪರಸ್ಪರ ಮತ ವರ್ಗಾವಣೆ ಪೂರ್ತಿ ಆಗಿಲ್ಲ ಕೇಂದ್ರ ಮತ್ತು ರಾಜ್ಯ ಸರಕಾರ ನಡೆಸುತ್ತಿರುವ ಪಕ್ಷಗಳ ವಿರುದ್ಧದ ಆಡಳಿತದ-ವಿರುದ್ಧ ಅತೃಪ್ತಿಯ ಪ್ರಯೋಜನ ಪಡೆಯಲು ಸಾಧ್ಯವಾಗಿಲ್ಲ, ಎಂದಷ್ಟೇ ಹೇಳಬಹುದು. ಇತರರಲ್ಲಿ ಪ್ರಮುಖವಾಗಿ ಇಂಡಿಯನ್ ಸೆಕ್ಯುಲರ್ ಫ್ರಂಟ್ 17, ಬಿ.ಎಸ್.ಪಿ 5, ಎಐಎಂಐಎಂ 4 ಸೀಟುಗಳಲ್ಲಿ ಸ್ಪರ್ಧಿಸಿವೆ.
ಪಶ್ಚಿಮ ಬಂಗಾಳದ ಸೀಟು-ಮತಪ್ರಮಾಣ
ತೃಣಮೂಲ ಕಾಂಗ್ರೆಸ್ ಮತ್ತು ಅದರ ಸರಕಾರ, ಕಾಂಗ್ರೆಸ್, ಎಡಪಕ್ಷಗಳು, ಬಿಜೆಪಿ ಸೇರಿದಂತೆ ಯಾವ ರಾಜಕೀಯ ಪಕ್ಷವೂ ಕೆಲಸ ಮಾಡದಂತೆ ಪೋಲಿಸ್ ಮತ್ತು ತನ್ನ ಕಾರ್ಯಕರ್ತರನ್ನು ಬಳಸಿ ಹಿಂಸಾಚಾರ ದಮನ ಮಾಡುತ್ತಾ ಬಂದಿದೆ. ಚುನಾವಣೆಗಳ ಮೊದಲು ಈ ಹಿಂಸಾಚಾರ, ದಮನ ತಾರಕ್ಕೇರುತ್ತದೆ. ಚಿಟ್ ಫಂಡ್ಸ್ ನಂತಹ ಹಲವು ಹಗರಣಗಳು, ಸಂದೇಶಖಲಿ ಯಂತಹ ದಮನಕಾರಿ ಅಟಾಟೋಪದ ಆಡಳಿತ ಬರಿಯ ಬಿಜೆಪಿ ಯ ಆಪಾದನೆಯಲ್ಲ. ವಾಸ್ತವವೇ. ಬಿಜೆಪಿ ಪಕ್ಷ ಮತ್ತು ಕೇಂದ್ರ ಸರಕಾರ ರಾಜ್ಯಪಾಲರನ್ನು ಕೇಂದ್ರ ಪಡೆ ಕೇಂದ್ರೀಯ ಏಜೆನ್ಸಿಗಳನ್ನು ಬಳಸಿ ತೃಣಮೂಲ ಪಕ್ಷ ಮತ್ತು ಅದರ ಸರಕಾರವನ್ನು ಹಣಿಯಲು ಪ್ರಯತ್ನಿಸುತ್ತಾ ಬಂದಿದೆ. ಪಕ್ಷಾಂತರಕ್ಕೆ, ‘ವಾಶಿಂಗ್ ಮಶೀನ್ ಭ್ರಷ್ಟಾಚಾರ ನಿರ್ಮೂಲನ”ಕ್ಕೆ ಪ್ರಯತ್ನಿಸುತ್ತಾ ಬಂದಿದೆ. ಕೋಮುವಾದಿ ಹಿಂಸಾಚಾರವನ್ನು ಪ್ರಚೋದಿಸುತ್ತಾ ಬಂದಿದೆ. ರಾಜ್ಯದ ವಿರುದ್ಧ ತಾರತಮ್ಯ ಮಾಡುತ್ತ ಬಂದಿದೆ. ಬಿಜೆಪಿಯ ಕೋಮು-ಧ್ರುವೀಕರಣ ಮತ್ತು ಜನತೆಗೆ ಸಂಕಷ್ಟ ತರುವ ಆರ್ಥಿಕ ನೀತಿಗಳ ವಿರುದ್ಧ ಜನತೆಗೆ ಆಕ್ರೋಶವಿತ್ತು.
ಕೆಲವು ನೇರ ನಗದು, ಸವಲತ್ತು ಕೊಡುವ ಮತ್ತಿತರ ಕಲ್ಯಾಣ ಯೋಜನೆಗಳನ್ನು ಜಾರಿ ಮಾಡಿದ್ದು ಬಿಟ್ಟರೆ ತೃಣಮೂಲದ ಬಳಿ ಯಾವುದೇ ಪರ್ಯಾಯ ನೀತಿಯಿಲ್ಲ. ಬಿಜೆಪಿ ಕೋಮು-ಧ್ರುವೀಕರಣ ದ ವಿರುದ್ಧ ಪ್ರತಿ ಕೋಮು-ಧ್ರುವೀಕರಣ ಬಿಟ್ಟರೆ ಅದರ ಬಳಿ ಯಾವುದೇ ಸೆಕ್ಯುಲರ್ ಬದಲಿ ಇಲ್ಲ. ಆದರೂ ಲೋಕಸಭಾ ಚುನಾವಣೆಯಾದ್ದರಿಂದ ಬಿಜೆಪಿ ಕೇಂದ್ರ ಸರಕಾರದ ಆಡಳಿತ-ವಿರೋಧಿ ಆಕ್ರೋಶ ಜನತೆಯ ಆಯ್ಕೆಯಲ್ಲಿ ನಿರ್ಣಾಯಕವಾಗಿದೆ. ರಾಜ್ಯ ಸರಕಾರಕ್ಕೆ ಅನುದಾನ ತೆರಿಗೆ ಹಂಚಿಕೆಯಲ್ಲಿ ಕಿರುಕುಳ, ರಾಜ್ಯದ ವಿರುದ್ಧ ತಾರತಮ್ಯ ಸಹ ಪ್ರಮುಖ ಅಂಶವಾಗಿದೆ. ರಾಜ್ಯ ಸರಕಾರದ ಸಾಧನೆಗಳು, ಕೊರತೆಗಳು ಗೌಣವಾಗಿವೆ.
ಇದನ್ನು ಓದಿ : ಆರ್‌ಎಸ್‌ಎಸ್ ಸದಸ್ಯನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಅಮಿತ್ ಮಾಳವಿಯಾ
ತ್ರಿಕೋನ ಸ್ಪರ್ಧೆಯಲ್ಲಿ ಒಟ್ಟಾರೆಯಾಗಿ ಮತ್ತು ಪ್ರತಿ ಕ್ಷೇತ್ರದ ಅತಿ ದೊಡ್ಡ ಸ್ಪರ್ಧಿಗೆ ಹೆಚ್ಚಿನ ಪ್ರಯೋಜನವಾಗುವುದು ಸ್ವಾಭಾವಿಕ. ಬರಿಯ ಅಂಕಗಣಿತದ ದೃಷ್ಟಿಯಿಂದ ನೋಡಿದರೆ ಒಟ್ಟಾರೆ ರಾಜ್ಯ ಮಟ್ಟದಲ್ಲಿ ನೋಡಿದರೆ ಇಂಡಿಯಾ ಕೂಟ ತೃಣಮೂಲ ಸೇರಿಸಿಕೊಂಡು ಒಟ್ಟಿಗೆ ಸ್ಪರ್ಧೆ ಮಾಡಿದ್ದರೆ ತಮಿಳುನಾಡಿನಂತೆ ಬಿಜೆಪಿ ಗೆ ಶೂನ್ಯ ಸಂಪಾದನೆಯಾಗುತ್ತಿತ್ತುಎಂದು ವಾದಿಸಲಾಗುತ್ತದೆ. ಆದರೆ ಮತ್ತೆ ಅಂಕಗಣಿತದ ದೃಷ್ಟಿಯಿಂದ ಮಾತ್ರ ಕ್ಷೇತ್ರವಾರು ಆಗಿ ನೋಡಿದರೆ ತೃಣಮೂಲ 6 ಸೀಟುಗಳಲ್ಲಿ ತ್ರಿಕೋಣ ಸ್ಪರ್ಧೆಯ ಪ್ರಯೋಜನ ಪಡೆದು (ಅಂದರೆ 2 ಮುಖ್ಯ ಪ್ರತಿಸ್ಪರ್ಧಿಗಳಾದ ಬಿಜೆಪಿ, ಇಂಡಿಯಾ ಕೂಟ ಮತ ಸೇರಿಸಿದರೆ ಅದಕ್ಕಿಂತ ಕಡಿಮೆ ಮತ ಪಡೆದೂ) ಗೆದ್ದಿದೆ. ಬಿಜೆಪಿ 3 ಸೀಟುಗಳ್ಲಲಿ ಇಂತಹ ಪ್ರಯೋಜನ ಪಡೆದಿದೆ. ಅಂದರೆ ಮೂರು (ಕಾಂಗ್ರೆಸ್, ತೃಣಮೂಲ, ಎಡ) ಪಕ್ಷಗಳು ಇಂಡಿಯಾ ಕೂಟವಾಗಿ ಸ್ಪರ್ಧಿಸಿದ್ದರೆ ಮತ್ತು ಮೂರು ಪಕ್ಷಗಳ ಮತಗಳು ಪೂರ್ಣವಾಗಿ ಕೂಟದ ಸ್ಪರ್ಧಿ ಪಕ್ಷಕ್ಕೆ ವರ್ಗಾವಣೆಯಾಗುತ್ತದೆ ಎಂದರೂ ಇಂಡಿಯಾ ಕೂಟಕ್ಕೆ 3 ಹೆಚ್ಚು ಸೀಟು ಬರುತ್ತಿತ್ತು. ಪೂರ್ವ
ಆದರೆ ಮೂರೂ ಪಕ್ಷಗಳ ನಡುವೆ ರಾಜಕೀಯ ಐಕ್ಯತೆಯಾಗಲಿ, ನೆಲೆಯಲ್ಲಿ ವೈವಿಧ್ಯತೆಯಿಂದಾಗಿ ಪೂರ್ಣ ವರ್ಗಾವಣೆಯಾಗಲಿ ಪ್ರಾಯೋಗಿಕವಾಗಿರಲಿಲ್ಲ. ಭಾಗಶಃ ವರ್ಗಾವಣೆಯಿಂದಾಗಿ ಸೀಟುಗಳ ಹಾನಿ ಆಗುವ ಸಾಧ್ಯತೆ ಹೆಚ್ಚಿತ್ತು. ಹಾಗಾಗಿ ಕಾಂಗ್ರೆಸ್, ಎಡ ಪಕ್ಷಗಳು ಮಾತ್ರವಿರುವ ಇಂಡಿಯಾ ಕೂಟದ ಸ್ವತಂತ್ರ ಸ್ಪರ್ಧೆ ತೃಣಮೂಲ ಅಥವಾ ರಾಜ್ಯ ಸರಕಾರ ಆಡಳಿತ-ವಿರೋಧಿ ಮತಗಳು ಬಿಜೆಪಿಗೆ ಹೋಗುವುದನ್ನು ತಡೆದಿದೆ. ತೃಣಮೂಲ ಸಹ ಇಂಡಿಯಾ ಕೂಟದ ಭಾಗವಾಗಿದ್ದು, ಕೂಟದ ಐಕ್ಯ ಸ್ಪರ್ಧೆ ಆಗದಿದ್ದರೂ, ಬಿಜೆಪಿ ಯ ಸೀಟುಗಳನ್ನು ಕನಿಷ್ಠ ಮತ್ತು ಇಂಡಿಯಾ ಕೂಟದ ಸೀಟುಗಳನ್ನು ಗರಿಷ್ಠಗೊಳಿಸುವುದು ಸಾಧ್ಯವಾಗಿದೆ. ಇದು ಮೇಲಿನ ಚುನಾವಣಾ ಅಂಕಿಅಂಶಗಳ ವಿಶ್ಲೇಷಣೆಯಿಂದ ಹೊರಡುವ ಅಂಶ. ಆದರೆ ಚುನಾವಣೋತ್ತರ ಅವಧಿಯಲ್ಲಿ ವಿರೋಧ ಪಕ್ಷಗಳ, ಪ್ರಮುಖವಾಗಿ ಎಡಪಕ್ಷಗಳ ಕಚೇರಿ, ಕಾರ್ಯಕರ್ತರ ಮೇಲೆ ದಾಳಿ, ಹಿಂಸಾಚಾರ ಸಕಾರಾತ್ಮಕ ಬೆಳವಣಿಗೆಯಲ್ಲ.
ಒಡಿಶಾ
ಒಡಿಶಾ ಈ ಬಾರಿಯ ಚುನಾವಣೆಯಲ್ಲಿ, ಬಿಜೆಪಿ ಗೆ ಮೊದಲ ಬಾರಿಗೆ ನಿರ್ಣಾಯಕವಾಗಿ ಬೆಂಬಲಿಸಿದ ಮತ್ತು ಹಿಂದಿನ ಆಳುವ ಪ್ರಾದೇಶಿಕ ಪಕ್ಷವನ್ನು ನಿರ್ಣಾಯಕವಾಗಿ ತಿರಸ್ಕರಿಸಿದ ಏಕಮಾತ್ರ ರಾಜ್ಯವಿರಬೇಕು. ಒಡಿಶಾ ದಲ್ಲಿ 21 ರಲ್ಲಿ 20 ಸೀಟು ಗಳಿಸುವ ಮೂಲಕ ಸ್ವೀಪ್ ಮಾಡಿದೆ. ಒಡಿಶಾದ ಈ ನಿರ್ಣಾಯಕ ವಿಜಯವಿಲ್ಲದೆ ಎನ್.ಡಿ.ಎ ಆಗಿ ಸಹ ಸರಕಾರ ರಚಿಸುವ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಬಿಜೆಪಿ ಉತ್ತಮ ವಿಜಯ ಸಾಧಿಸುತ್ತದೆಯೆಂದು ನಿರೀಕ್ಷಿಸಲಾಗಿದ್ದರೂ, ಸ್ವೀಪ್ ನಿರೀಕ್ಷಿತವಾಗಿರಲಿಲ್ಲ. ಹೆಚ್ಚು ಕಡಿಮೆ ಬಿಜೆಪಿಯ ಪರವಾಗಿ ಭವಿಷ್ಯ ನುಡಿದ ಎಕ್ಸಿಟ್ ಪೋಲ್ ಗಳು ಸಹ ಒಡಿಶಾ ದಲ್ಲಿ ಬಿಜೆಪಿ ಗೆ ಇಷ್ಟು ಸೀಟು ಕೊಟ್ಟಿರಲಿಲ್ಲ.
ಒಡಿಶಾ ದಲ್ಲಿ ಸಹ ಎನ್.ಡಿ.ಎ ಎಂದರೆ ಬಿಜೆಪಿ ಮಾತ್ರ. ಬಿಜೆಪಿ ಬಿಜು ಜನತಾ ದಳ (ಬಿಜೆಡಿ)ಯ ಎಲ್ಲ 12 ಸೀಟುಗಳನ್ನು ಕಸಿದುಕೊಂಡು 20 ಸೀಟಿಗೇರಿದೆ.. ಮತಪ್ರಮಾಣದಲ್ಲಿ ಸಹ ಶೇ.7.1ರಷ್ಟು ಹೆಚ್ಚಿನ ಮತ ಗಳಿಸಿದೆ. ಪೂರ್ವ
ಈ ಬಾರಿ ಒಡಿಶಾದಲ್ಲಿ ಇಂಡಿಯಾ ಕೂಟದ ಭಾಗವಾಗಿ ಕಾಂಗ್ರೆಸ್ ಮತ್ತು ಜೆ.ಎಂ.ಎಂ ಸೀಟು ಹೊಂದಾಣಿಕೆ ಮಾಡಿಕೊಂಡಿದ್ದು, ಕಾಂಗ್ರೆಸ್ 20 ಸೀಟುಗಳಲ್ಲಿ, ಜೆಎಂಎಂ 1 ಸೀಟುಗಳಲ್ಲಿ ಸ್ಪರ್ಧಿಸಿತ್ತು. ಇಂಡಿಯಾ ಕೂಟದ ಮತಪ್ರಮಾಣ ಸ್ವಲ್ಪ (1.5%) ಇಳಿಕೆಯಾಗಿದ್ದು, ಶೇ. 13.2 ಗಳಿಸಿದೆ. ಕಾಂಗ್ರೆಸ್ ಕೊರಾಪುಟ್ ಕ್ಷೇತ್ರವನ್ನು ಮಾತ್ರ ಗೆದ್ದುಕೊಂಡಿದೆ. ಎಡಪಕ್ಷಗಳ ಜತೆ ಸೀಟು ಹೊಂದಾಣಿಕೆಯನ್ನು ಕಾಂಗ್ರೆಸ್ ನಿರಾಕರಿಸಿದ್ದರಿಂದ ಸ್ವತಂತ್ರವಾಗಿ ಸಿಪಿಐ, ಸಿಪಿಐ(ಎಂ) ಗಳು ಸ್ಪರ್ಧಿಸಿದ್ದವು. ಇವಲ್ಲದೆ ಬಿ.ಎಸ್.ಪಿ, ಎಸ್.ಪಿ, ಎಜೆಎಸ್.ಯು.ಪಿ, ಇತರ ಎಡ ಪಕ್ಷಗಳು, ಪಕ್ಷೇತರರು ಸ್ಪರ್ಧಿಸಿದ್ದರು. ಇತರರು ಶೇ.3.8 ಮತ ಗಳಿಸಿದ್ದಾರೆ. ಪೂರ್ವ
ಒಡಿಶಾ – ಸೀಟು-ಮತಪ್ರಮಾಣ
ಮೊದಲ ನೋಟಕ್ಕೆ ಬಿಜೆಪಿಯ ಗೆಲುವು ಸೀಟು, ಮತಗಳಿಕೆ ಎರಡರಲ್ಲೂ ಸಮಗ್ರವಾಗಿದೆ ಅಂತ ಕಂಡರೂ, ಮೂರು ಕೂಟಗಳ ಕ್ಷೇತ್ರವಾರು ಮತಗಳಿಕೆಯ ವಿವರಗಳಿಗೆ ಹೋದರೆ ಬಿಜೆಪಿ ತ್ರಿಕೋನ ಸ್ಪರ್ಧೆಯ ಪ್ರಯೋಜನ ಪಡೆದಿರುವುದು ಕಾಣುತ್ತದೆ. ತ್ರಿಕೋನ ಸ್ಪರ್ಧೆಯಲ್ಲಿ ಒಟ್ಟಾರೆಯಾಗಿ ಮತ್ತು ಪ್ರತಿ ಕ್ಷೇತ್ರದ ಅತಿ ದೊಡ್ಡ ಸ್ಪರ್ಧಿಗೆ ಹೆಚ್ಚಿನ ಪ್ರಯೋಜನವಾಗುವುದು ಸ್ವಾಭಾವಿಕ. ಬರಿಯ ಅಂಕಗಣಿತದ ದೃಷ್ಟಿಯಿಂದ ಒಟ್ಟಾರೆ ರಾಜ್ಯ ಮಟ್ಟದಲ್ಲಿ ನೋಡಿದರೆ ಬಿಜೆಡಿ ಇಂಡಿಯಾ ಕೂಟಕ್ಕೆ ಸೇರಿ ಸ್ಪರ್ಧೆ ಮಾಡಿದ್ದರೆ ತಮಿಳುನಾಡಿನಂತೆ ಬಿಜೆಪಿ ಗೆ ಶೂನ್ಯ ಸಂಪಾದನೆಯಾಗುತ್ತಿತ್ತು. ಆದರೆ ಮತ್ತೆ ಅಂಕಗಣಿತದ ದೃಷ್ಟಿಯಿಂದ ಮಾತ್ರ ಕ್ಷೇತ್ರವಾರು ಆಗಿ ನೋಡಿದರೆ 8 ಕ್ಷೇತ್ರಗಳಲ್ಲಿ ಬಿಜೆಪಿ ತ್ರಿಕೋನ ಸ್ಪರ್ಧೆಯಿಂದಾಗಿ ಗೆದ್ದಿದೆ. ಈ ಕ್ಷೇ್ತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಡಿ ಮತಗಳನ್ನು ಸೇರಿಸಿದರೆ ಬಿಜೆಪಿ ಗಿಂತ ಗಮನಾರ್ಹವಾಗಿ ಹೆಚ್ಚಾಗಿರುತ್ತಿತ್ತು. ಬಿಜೆಪಿ ಸೀಟುಗಳ ಸಂಖ್ಯೆ 12ಕ್ಕೆ (ಹೆಚ್ಚಳ 4) ಕ್ಕೆ ಸೀಮಿತವಾಗಿರುತ್ತಿತ್ತು. ಪೂರ್ವ
ಒಡಿಶಾ ದಲ್ಲಿ ಸುಮಾರು 25 ವರ್ಷಗಳಿಂದ ಆಡಳಿತ ಮಾಡುತ್ತಿದ್ದ ಬಿಜೆಡಿ 1998ರಿಂದ 2009ರ ವರೆಗೆ ಬಿಜೆಪಿಯ ಎನ್.ಡಿ.ಎ ಕೂಟದಲ್ಲಿ ಭಾಗಿಯಾಗಿತ್ತು. 2009ರಲ್ಲಿ ಬಿಜೆಪಿಯ ಜತೆ ಸಂಪರ್ಕ ಕಡಿದುಕೊಂಡ ಬಿಜೆಡಿ ಈ ವರೆಗೆ ಸ್ವತಂತ್ರವಾಗಿ ವಿಧಾನ ಸಭಾ ಮತ್ತು ಲೋಕಸಭಾ ಚುನಾವಣೆಯಲ್ಲೂ ಬಹುಸಂಖ್ಯಾತ ಸೀಟುಗಳನ್ನು ಗೆಲ್ಲುತ್ತಾ ಬಂದಿತ್ತು. ದೇಶದ ಮತ್ತು ರಾಜ್ಯದ ಮುತ್ಸದಿ ನಾಯಕನಾಗಿದ್ದ ಬಿಜು ಪಟ್ನಾಯಕ್ ನಾಮಬಲದಲ್ಲಿ ಸ್ಫಾಪಿಸಲಾಗಿದ್ದ ಪ್ರಾದೇಶಿಕ ಪಕ್ಷವಾಗಿ ಬೆಳೆದ ಬಿಜೆಡಿ, ಬಿಜೆಪಿ ಕೂಟದಲ್ಲಿದ್ದರೂ ಸೆಕ್ಯುಲರ್ ಪಕ್ಷವಾಗಿತ್ತು. ಸಾಮಾಜಿಕ-ಆರ್ಥಿಕ ನೀತಿಗಳಲ್ಲಿ ನಿರ್ದಿಷ್ಟ ಸ್ಪಷ್ಟ ಒಲವುಗಳಿರಲಿಲ್ಲ. ಒಡಿಶಾದ ಕಂದಮಲ್ ನಲ್ಲಿ 2008ರಲ್ಲಿ ಬಿಜೆಪಿ ಮತ್ತು ಸಂಘಪರಿವಾರ ನಡೆಸಿದ ಕ್ರಿಶ್ಚಿಯನ್-ವಿರೋಧಿ ದಂಗೆಗಳ ಕಾರಣಕ್ಕೆ (ಇತರ ಸೀಟು ಹೊಂದಾಣಿಕೆ ಸಮಸ್ಯೆಗಳ ಜತೆ) ಪ್ರಮುಖವಾಗಿ ಅದರ ಜತೆ ಸಂಬಂಧ ಕಡಿದುಕೊಂಡಿತ್ತು. ಕಾಂಗ್ರೆಸ್ ಮತ್ತು ಬಿಜೆಪಿ ಕೂಟದಿಂದ ಸಮಾನ ಅಂತರ ಕಾಯ್ದುಕೊಂಡು ಕೇಂದ್ರದಲ್ಲಿ ಯಾರು ಅಧಿಕಾರ ವಹಿಸಿಕೊಂಡರೂ, ಅವರ ಜತೆ ‘ಚೆನ್ನಾಗಿದ್ದು’ ರಾಜ್ಯದ ಹಿತಾಸಕ್ತಿಗೆ ಧಕ್ಕೆ ಬರದಂತೆ ನೋಡಿಕೊಳ್ಳುವುದು ಅದರ ನೀತಿಯಾಗಿತ್ತು
ಪ್ರಾದೇಶಿಕ ಪಕ್ಷಗಳ ಜತೆ ಬಿಜೆಪಿ ಸಖ್ಯ ಬೆಳೆಸಿ ಬೆನ್ನಿಗೆ ಚೂರಿ ಹಾಕಿದ ನಂತರವೂ, 2024ರ ಚುನಾವಣೆಯಲ್ಲಿ ಬಿಜೆಪಿ ಜತೆ ಹೊಂದಾಣಿಕೆಗೆ ಹೊರಟಿತ್ತು. ಬಿಜೆಪಿಯ ಕೋಮುವಾದಿ ಫ್ಯಾಸಿಸಂ ಮತ್ತು ಸಂವಿಧಾನ-ವಿರೋಧಿ ಸ್ವಭಾವ ಮತ್ತು ಅದು ದೇಶಕ್ಕೆ ಒಡ್ಡಿರುವ ಅಪಾಯವನ್ನು ಅರಿತುಕೊಳ್ಳದೆ, ಇಂಡಿಯಾ ಕೂಟದಿಂದ ದೂರವುಳಿಯಿತು ಮಾತ್ರವಲ್ಲದೆ, ಬಿಜೆಪಿಯ ವಿರುದ್ಧ ರಾಜಕೀಯ ಪ್ರಚಾರ ಮಾಡಲಿಲ್ಲ. ಕೆಲವು ಕಲ್ಯಾಣ ಯೋಜನೆಗಳು ಮಾಢಿದರೆ ಸಾಕು ಅಂದುಕೊಂಡಿತ್ತು. ಜನ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆಯೇ ಇಲ್ಲದ, ಹೊಸ ಭರವಸೆಗಳನ್ನು ಮೂಡಿಸದ 25 ವರ್ಷಗಳ ಆಡಳಿತದ ಕುರಿತು ಜನರಲ್ಲಿ ನಿರುತ್ಸಾಹ ಉಂಟಾಗಿತ್ತು. ಇವೆಲ್ಲದರ ಪ್ರಯೋಜನೆ ಪಡೆದ ಬಿಜೆಪಿ ಯು ಬಿಜೆಡಿ ವಿರುದ್ಧ ಭಾರೀ ಪ್ರಚಾರ ಕೈಗೊಂಡಿತು. ನವೀನ್ ಪಟ್ನಾಯಕ್ ಗೆ ಒಡಿಯಾ ಮಾತನಾಡಲೂ ಬರುವುದಿಲ್ಲ, ನಿವೃತ್ತರಾಗುವ ವಯಸ್ಸಾಗಿದೆ. ಅವರು ನೇಮಿಸಿರುವ ‘ಉತ್ತರಾಧಿಕಾರಿ ವಿ ಕೆ ಪಾಂಡ್ಯನ್’ ತಮಿಳುನಾಡಿನವರು. ಇದು ‘ಒಡಿಯಾ ಅಸ್ಮಿತೆ’ಗೆ ಧಕ್ಕೆ ತರುತ್ತದೆ ಇತ್ಯಾದಿ ಭಾವನಾತ್ಮಕ ಆಕ್ರಾಮಕ ಪ್ರಚಾರ ಮಾಡಲಾಯಿತು. ಇದನ್ನು ಬಿಜೆಡಿ ಎದುರಿಸದೆ ಅಷ್ಟೇ ಆಕ್ರಾಮಕವಾಗಿ ಬಿಜೆಪಿ ವಿರುದ್ಧ ಜನರನ್ನು ಬಾಧಿಸುವ ವಿಷಯಗಳ ಬಗ್ಗೆ ಪ್ರಚಾರ ಮಾಡದೆ ಇರುವುದೇ ಅದರ ಪರಾಭವಕ್ಕೆ ಕಾರಣವಾಯಿತು. ಪೂರ್ವ
ಸಿಕ್ಕಿಂ
ಈ ಪ್ರದೇಶದ ಇತರ ರಾಜ್ಯವಾದ ಸಿಕ್ಕಿಂ ನಲ್ಲಿ ಪ್ರಾದೇಶಿಕ ಪಕ್ಷವಾದ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ(ಎಸ್.ಕೆ.ಎಂ) ಸಿಕ್ಕಿಂ ಡೆಮೊಕ್ರಾಟಿಕ್ ಫ್ರಂಟ್ (ಎಸ್.ಡಿ.ಎಫ್) ಮತ್ತು ಸಿಟಿಜನ್ ಆಕ್ಶನ್ ಪಾರ್ಟಿ-ಸಿಕ್ಕಿಂ ನಡುವೆ ಮುಖ್ಯ ಪೈಪೋಟಿಯಿದ್ದು ಎಸ್.ಕೆ.ಎಂ ಸೀಟು ಉಳಿಸಿಕೊಂಡಿದೆ. ಹಿಂದೆ ಮುಖ್ಯ ಪ್ರತಿಸ್ಪರ್ಧಿಯಾಗಿದ್ದ ಎಸ್.ಡಿ.ಎಫ್ ಮೂರನೇ ಸ್ತಾನಕ್ಕೆ ಕುಸಿದಿದೆ. ಎನ್.ಡಿ.ಎ ಮತ್ತು ಕಾಂಗ್ರೆಸ್ ಕೂಟ ಎರಡೂ ಶೂನ್ಯ ಸಂಪಾದನೆ ಮಾಡಿವೆ.
ಇದನ್ನು ನೋಡಿ : ‘ಮೋದಿಸರ್ಕಾರ’ ಬೇಡ, ಎನ್‌ಡಿಎ ಸರ್ಕಾರ ಬೇಕಾದರೆ ಇರಲಿ- ಭಾರತದ ಮತದಾರರ ತೀರ್ಪು Janashakthi Media