ಆಹಾರಕ್ಕೆ ಸಂಬಂಧಿಸಿದ ಆರ್ಥಿಕ ಭ್ರಮೆಗಳು

ಬಂಡವಾಳಶಾಹಿಗಳು ತಮ್ಮ ಸ್ವಾರ್ಥಕ್ಕಾಗಿ, ‘ಆರ್ಥಿಕ ವಿವೇಚನೆ’ಯಿಂದ ಕೂಡಿವೆ ಎಂದು ಮಂಡಿಸುವ ವಾದಗಳನ್ನೂ ಸಹ ಭಾರತದ ಕೆಲವು ಬುದ್ಧಿಜೀವಿಗಳು ಸಲೀಸಾಗಿ ಒಪ್ಪಿಕೊಳ್ಳುತ್ತಾರೆ. ಅವರ ಈ ಮನೋಭಾವವು ನಂಬಲಸಾಧ್ಯವಾದದು. ಇದಕ್ಕೊಂದು ನಿದರ್ಶನವೆಂದರೆ, ಭಾರತದ ಆಹಾರ ಭದ್ರತೆಗೆ ಸಂಬಂಧಿಸಿದ ಕೆಲವು ಆರ್ಥಿಕ ವಿಷಯಗಳು. ಭಾರತದ ರೈತರು ಆಹಾರ ಧಾನ್ಯಗಳನ್ನು ಬೆಳೆಯುವುದರ ಬದಲು ಬೇರೆಬೇರೆ ಬೆಳೆಗಳತ್ತ ಹೊರಳಬೇಕೆಂದು ಸಲಹೆ ಮಾಡಿರುವ ಲೇಖನಗಳು ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ಸಾಕಷ್ಟು ಪ್ರಕಟವಾಗಿವೆ. ವಾಸ್ತವವಾಗಿ, ಈ ಸಲಹೆಯು, ಬಹಳ ಕಾಲದಿಂದಲೂ ಮುಂದುವರೆದ ಪಶ್ಚಿಮ ದೇಶಗಳು ಇಡುತ್ತಿದ್ದ ಬೇಡಿಕೆಯ ಸಮರ್ಥನೆಯೇ. ಈ ದೇಶಗಳು ತಮಗೆ ಸಾಕಾಗಿ ಉಳಿದ ಆಹಾರ ಧಾನ್ಯಗಳನ್ನು ಭಾರತವು ಆಮದು ಮಾಡಿಕೊಳ್ಳಬೇಕೆಂದು ಬಯಸುತ್ತವೆ. ಆದ್ದರಿಂದ, ಭಾರತದ ರೈತರು ಆಹಾರ ಧಾನ್ಯಗಳ ಉತ್ಪಾದನೆಯಿಂದ ದೂರ ಉಳಿದು ರೊಕ್ಕದ-ಬೆಳೆಗಳನ್ನು ಬೆಳೆಯಬೇಕೆಂದು ಭಾರತದ ಕೆಲವು ಬುದ್ಧಿಜೀವಿಗಳು ಕೊಡುವ ಸಲಹೆಯು ಮುಂದುವರೆದ ಪಶ್ಚಿಮ ದೇಶಗಳ ಬಯಕೆಯ ಅನುಮೋದನೆಯಾಗುತ್ತದೆ. ಈ ವಿದ್ಯಮಾನವು ನಮ್ಮನ್ನು ಹಸಿರು ಕ್ರಾಂತಿಯ ಮುಂಚಿನ ದಿನಗಳತ್ತ ಕೊಂಡೊಯ್ಯುತ್ತದೆ.

ಈ ಬುದ್ಧಿಜೀವಿಗಳು ಕೆಲವೊಮ್ಮೆ ಹೀಗೆ ವಾದ ಮಾಡುತ್ತಾರೆ: ತಮ್ಮ ರಿಸ್ಕ್ ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ, ಕನಿಷ್ಠ ಬೆಂಬಲ ಬೆಲೆಗಳು ಒದಗಿಸುವ ಆಮಿಷಕ್ಕೆ ಒಳಗಾಗಿ, ಪಂಜಾಬ್ ಮತ್ತು ಹರಿಯಾಣದ ರೈತರು ಧಾನ್ಯಗಳ ಉತ್ಪಾದನೆಯ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಈಗ ದೇಶದಲ್ಲಿ ಧಾನ್ಯಗಳ ಹೆಚ್ಚುವರಿ ದಾಸ್ತಾನು ಇದೆ. ಹಾಗಾಗಿ, ಧಾನ್ಯಗಳ ಉತ್ಪಾದನೆ ಲಾಭದಾಯಕವಲ್ಲ. ಮತ್ತೆ ಕೆಲವೊಮ್ಮೆ ಅವರ ವಾದವು ಬೇರೆ ರೀತಿಯಲ್ಲೇ ಇರುತ್ತದೆ: ಪಂಜಾಬ್ ಮತ್ತು ಹರಿಯಾಣ ರೈತರು ಕೇವಲ ಕನಿಷ್ಠ ಬೆಂಬಲ ಬೆಲೆ ದೊರೆಯುವ ಬೆಳೆಗಳಿಂದ ದೂರ ಸರಿದು, ಇನ್ನೂ ಹೆಚ್ಚು ಲಾಭಕರ ಬೆಳೆಗಳತ್ತ ಹೊರಳಬೇಕು. ಅದಕ್ಕಾಗಿಯೇ ಮೋದಿಯವರು ಮೂರು ಹೊಸ ಕೃಷಿ ಮಸೂದೆಗಳ ಮೂಲಕ ಅವಕಾಶ ಕಲ್ಪಿಸಿದ್ದಾರೆ ಮತ್ತು ದಾರಿ ತೋರಿಸಿದ್ದಾರೆ.

  • ರೈತರು ಹೆಚ್ಚು ಲಾಭದಾಯಕರ ರೊಕ್ಕದ-ಬೆಳೆಗಳನ್ನು ಬೆಳೆಯುವಂತೆ ಮಾಡುವುದು, ಮೇಲ್ನೋಟದಲ್ಲಿ ಅವರ ಆದಾಯವನ್ನು ಹೆಚ್ಚಿಸುವ ಸುಲಭದ ಮಾರ್ಗವೆಂದು ತೋರಬಹುದು. ಆದರೆ, ವ್ಯಾಪಕ ಏರಿಳಿತಗಳ ಅನಿವಾರ್ಯತೆಗೆ ಒಳಪಟ್ಟಿರುವ ಜಾಗತಿಕ ಮಾರುಕಟ್ಟೆಯಲ್ಲಿ ಈ ಬೆಳೆಗಳ ಬೆಲೆಗಳು ಕುಸಿದಾಗ ರೈತರು ಪಾಪರಾಗುತ್ತಾರೆ. ಕನಿಷ್ಠ ಬೆಂಬಲ ಬೆಲೆಗಳ ವ್ಯವಸ್ಥೆಯೊಂದೇ ರೈತರಿಗೆ ಶ್ರೀರಕ್ಷೆ. ದಿಲ್ಲಿ ಗಡಿಯಲ್ಲಿ ನೆರೆದಿರುವ ರೈತರು ಈ ಎಲ್ಲ ವಿಷಯಗಳನ್ನು ಮೋದಿಯವರಿಗಿಂತ ಅಥವಾ ಆಹಾರ ಧಾನ್ಯಗಳಿಂದ ದೂರ ಸರಿಯಲು ಪ್ರತಿಪಾದಿಸುವ ಬುದ್ಧಿಜೀವಿಗಳಿಗಿಂತ ಹೆಚ್ಚು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುತ್ತಾರೆ. ವಿಪರ್ಯಾಸವೆಂದರೆ, ಆ ರೈತರು ದಡ್ಡರು ಎಂದು ಈ ಬುದ್ಧಿಜೀವಿಗಳು ಭಾವಿಸುತ್ತಾರೆ!
ತುಂಬಿ ತುಳುಕುವ ದಾಸ್ತಾನು…… “ನಮ್ಮ ತಲೆಯ ಮೇಲೆ ಬೀಳದಿರಬೇಕಾದರೆ ‘ಸಾಮಾಜಿಕ ದೂರ’ ಆಚರಿಸುವುದು ಅಗತ್ಯ…….!”  ವ್ಯಂಗ್ಯಚಿತ್ರ: ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್

 

ಬುದ್ಧಿಜೀವಿಗಳ ಈ ನಿಲುಮೆಯು ಒಟ್ಟಾರೆಯಾಗಿ, ಮುಂದುವರಿದ ದೇಶಗಳ ಬೇಡಿಕೆಯನ್ನು ಪ್ರತಿಧ್ವನಿಸುವುದರ ಜೊತೆಗೆ, ಮೋದಿ ಸರ್ಕಾರವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆಂಬಲಿಸುತ್ತದೆ, ಮತ್ತು, ರೈತರ ಬಗ್ಗೆ ಸರ್ಕಾರವು ಎಷ್ಟು ತಿರಸ್ಕಾರ ಹೊಂದಿದೆಯೋ ಅಷ್ಟನ್ನೇ ಇವರೂ ಹೊಂದಿದ್ದಾರೆ ಎಂಬುದನ್ನು ತೋರಿಸುತ್ತದೆ. ಈ ಬುದ್ಧಿಜೀವಿಗಳ ದೃಷ್ಟಿಯಲ್ಲಿ, ರೈತರು ತಮಗೆ ಯಾವುದು ಒಳ್ಳೆಯದು ಎಂಬುದನ್ನು ಅರಿಯದ ದಡ್ಡರು; ಅದು ಮೋದಿಯವರಿಗೆ ಗೊತ್ತಿದೆ. ಅದೇನೇ ಇರಲಿ, ಈ ಬುದ್ಧಿಜೀವಿಗಳ ಇರಾದೆ ಮತ್ತು ಪೂರ್ವಗ್ರಹಗಳನ್ನು ಕಡೆಗಣಿಸಿ, ಅವರ ವಾದವನ್ನು ಮಾತ್ರ ಪರಿಶೀಲಿಸೋಣ.

ಭಾರತೀಯ ಆಹಾರ ನಿಗಮದಲ್ಲಿ ಸದ್ಯ ಆಹಾರ ಧಾನ್ಯಗಳ ದಾಸ್ತಾನು ಬೃಹತ್ ಪ್ರಮಾಣದಲ್ಲಿದೆ ಎಂಬುದನ್ನು ಮತ್ತು ಇದು ಭಾರತೀಯ ಅರ್ಥವ್ಯವಸ್ಥೆಯ ಒಂದು ನಿಯತ ಲಕ್ಷಣವೇ ಆಗಿದೆ ಎಂಬುದನ್ನೂ ನಿರಾಕರಿಸುವಂತಿಲ್ಲ. ಆದರೆ, ಈ ಒಂದು ಅಂಶದಿಂದಲೇ ಭಾರತವು ತನ್ನ ಅಗತ್ಯಕ್ಕಿಂತಲೂ ಹೆಚ್ಚು ಪ್ರಮಾಣದ ಆಹಾರ ಧಾನ್ಯಗಳನ್ನು ಬೆಳೆಯುತ್ತದೆ ಎಂದು ತಿಳಿಯುವುದು ಮೂರ್ಖತನದ ಪರಮಾವಧಿಯಾಗುತ್ತದೆ. ಜಾಗತಿಕ ಹಸಿವು-ಬಾಧಿತ 111 ದೇಶಗಳ ಪಟ್ಟಿಯಲ್ಲಿ ಭಾರತವು 100ನೇ ಸ್ಥಾನದಲ್ಲಿರುವ ದಯನೀಯ ಪರಿಸ್ಥಿತಿಯಿಂದಾಗಿ, ಹೆಚ್ಚುವರಿ ದಾಸ್ತಾನು ಹೊಂದಿರುವ ಒಂದು ಕಾರಣದಿಂದ, ದೇಶವು ಆಹಾರ ಧಾನ್ಯಗಳ ಬಗ್ಗೆ ಸ್ವಾವಲಂಬಿ ಎಂದು ಹೇಳಲಾಗದು. ಇದೇನೂ ಮನಸೊ ಇಚ್ಛೆಯ ತೀರ್ಮಾನವಲ್ಲ. ಜನರ ಕೈಯಲ್ಲಿ ಕೊಳ್ಳುವ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿ ಇದ್ದ ಸಂದರ್ಭಗಳಲ್ಲಿ ಆಹಾರ ಧಾನ್ಯಗಳ ದಾಸ್ತಾನು ಇಳಿದಿದೆ. ಈ ಪರಿಸ್ಥಿತಿಯು ಏನನ್ನು ಸೂಚಿಸುತ್ತದೆ ಎಂದರೆ, ಜನರ ಕೈಯಲ್ಲಿ ಕೊಳ್ಳುವ ಶಕ್ತಿ ಕಡಿಮೆಯಾದ ಕಾರಣದಿಂದಾಗಿ ಗೋದಾಮುಗಳಲ್ಲಿ ದಾಸ್ತಾನಿನ ಪ್ರಮಾಣ ಹೆಚ್ಚಿಗೆ ಇದೆ. ಅಂದರೆ, ಜನರಿಗೆ ಎಷ್ಟು ಅಗತ್ಯವೊ ಅಷ್ಟು ಆಹಾರ ದೊರೆಯುತ್ತಿಲ್ಲ.

ಆದ್ದರಿಂದ, ಬೃಹತ್ ಪ್ರಮಾಣದಲ್ಲಿ ಏರುತ್ತಿರುವ ಧಾನ್ಯಗಳ ದಾಸ್ತಾನಿಗೆ ಪರಿಹಾರವೆಂದರೆ, ಉದ್ಯೋಗ ಖಾತ್ರಿ ಯೋಜನೆಯ ವಿಸ್ತರಣೆ ಮತ್ತು ಜನರಿಗೆ ನೇರ ಹಣ ವರ್ಗಾವಣೆಗಳ ಮೂಲಕ ಜನರ ಕೈಯಲ್ಲಿ ಕೊಳ್ಳುವ ಶಕ್ತಿಯನ್ನು ತುಂಬುವುದು. ವಿಪರ್ಯಾಸವೆಂದರೆ, ಈ ರೀತಿಯಲ್ಲಿ ವರ್ಗಾವಣೆ ಮಾಡಿದರೆ ಸರ್ಕಾರಕ್ಕೆ ಯಾವುದೇ ನಷ್ಟವಾಗುವುದಿಲ್ಲ ಎಂಬುದು. ಉದಾಹರಣೆಯಾಗಿ ಹೇಳುವುದಾದರೆ, ಈ ವರ್ಗಾವಣೆಗಳನ್ನು ಮಾಡಲು ಸರ್ಕಾರವು ಬ್ಯಾಂಕುಗಳಿಂದ 100 ರೂಗಳನ್ನು ಸಾಲ ಪಡೆಯುತ್ತದೆ ಎಂದುಕೊಳ್ಳೋಣ. ದುಡಿಯುವ ಜನರು ತಮ್ಮ ಕೈಗೆ ಬರುವ ಈ ಮೊತ್ತವನ್ನು ಆಹಾರ ಧಾನ್ಯಗಳನ್ನು ಕೊಳ್ಳಲು ಖರ್ಚು ಮಾಡುತ್ತಾರೆ. ಆ ಹಣ, ಭಾರತೀಯ ಆಹಾರ ನಿಗಮ (ಎಫ್‌ಸಿಐ)ವನ್ನು ಸೇರುತ್ತದೆ. ಈ ಮೊತ್ತವನ್ನು, ರೈತರಿಂದ ಆಹಾರ ಧಾನ್ಯಗಳನ್ನು ಕೊಳ್ಳಲು ಎಫ್‌ಸಿಐ ಬ್ಯಾಂಕ್‌ಗಳಿಂದ ಪಡೆದ ಸಾಲವನ್ನು ಮರುಪಾವತಿ ಮಾಡಲು ಬಳಸಿಕೊಳ್ಳುತ್ತದೆ. ಎಫ್‌ಸಿಐ ಸ್ವತಃ ಸರ್ಕಾರದ ಭಾಗವಾಗಿರುವ ಕಾರಣ, ಈ ವ್ಯವಹಾರವು ಏನನ್ನು ಅರ್ಥೈಸುತ್ತದೆ ಎಂದರೆ, ಜನರಿಗೆ ಹಣ ವರ್ಗಾವಣೆಯ ಉದ್ದೇಶಕ್ಕಾಗಿ ಸರ್ಕಾರದ ಬಲಗೈ ಬ್ಯಾಂಕ್‌ಗಳಿಂದ ಪಡೆದ ಸಾಲವನ್ನು ಸರ್ಕಾರದ ಎಡಗೈ (ಎಫ್‌ಸಿಐ) ಮೂಲಕ ಮರು ಪಾವತಿಸುತ್ತದೆ. ಒಟ್ಟಾರೆಯಾಗಿ, ಸರ್ಕಾರದ ನಿವ್ವಳ ಸಾಲ ಹೆಚ್ಚುವುದಿಲ್ಲ. ಆದರೆ, ಎಫ್‌ಸಿಐ ಸರ್ಕಾರಿ ಸ್ವಾಮ್ಯದಲ್ಲಿದ್ದರೂ ಸಹ, ಅದರ ವ್ಯವಹಾರಗಳು ಬಜೆಟ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ. 70ರ ದಶಕದ ಆರಂಭದವರೆಗೂ ಬಜೆಟ್ ಲೆಕ್ಕಾಚಾರ ಹೀಗಿರಲಿಲ್ಲ. ಜನರಿಗೆ ಹಣ ವರ್ಗಾವಣೆಯಾದ ಕಾರಣದಿಂದ, ಬಜೆಟ್‌ನಲ್ಲಿ ವಿತ್ತೀಯ ಕೊರತೆ ಏರಿಕೆಯಾಗುತ್ತದೆ, ನಿಜ. ಆದರೆ, ಈ ಏರಿಕೆಯಿಂದ ಯಾವ ತೊಂದರೆಯೂ ಆಗದು.

ಈ ಅಂಶವನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ರೈತರಿಂದ ಖರೀದಿಸಿದ ಧಾನ್ಯಗಳನ್ನು ದಾಸ್ತಾನು (ಸ್ಟಾಕ್) ಹಿಡಿದಿಟ್ಟುಕೊಳ್ಳುವ ಬದಲು ಜನರಿಗೆ ಹಂಚಿದರೆ, ಅದರಿಂದ ಯಾವ ದುಷ್ಪರಿಣಾಮಗಳೂ ಉಂಟಾಗುವುದಿಲ್ಲ. ಬದಲಾಗಿ, ಅನೇಕ ಕಾರಣಗಳಿಂದಾಗಿ ಧಾನ್ಯಗಳನ್ನು ಜನರಿಗೆ ಹಂಚುವ ಕ್ರಮವು ಬಹಳಷ್ಟು ಪ್ರಯೋಜನಕಾರಿಯಾಗುತ್ತದೆ. ಮೊದಲಿಗೆ, ಹೊಟ್ಟೆಗಿಲ್ಲದವರ ಹಸಿವನ್ನು ಹಿಂಗಿಸುತ್ತದೆ. ಪರಿಣಾಮವಾಗಿ, ಜನರ ಜೀವನ ಮಟ್ಟ ಸುಧಾರಿಸುತ್ತದೆ. ಅನವಶ್ಯಕ ದಾಸ್ತಾನು ವೆಚ್ಚಗಳನ್ನು ತಪ್ಪಿಸುತ್ತದೆ.

ನಾವು ಈ ಮೊದಲು ಪರಿಗಣಿಸಿದ ಉದಾಹರಣೆಯಲ್ಲಿ ಜನರ ಕೈಗೆ ಒದಗಿಸಿದ ಎಲ್ಲ ಹಣವೂ (ಕೊಳ್ಳುವ ಶಕ್ತಿ) ಆಹಾರ ಧಾನ್ಯಗಳಿಗೆ ಖರ್ಚಾಗುತ್ತದೆ ಎಂದು ಊಹಿಸಿದ್ದೆವು. ಆದರೆ, ಅದರಲ್ಲಿ ಒಂದಿಷ್ಟು ಭಾಗವನ್ನು ಜನರು ಇತರ ಪದಾರ್ಥಗಳನ್ನು ಕೊಳ್ಳಲು ಬಳಸಿಕೊಂಡಿದ್ದರೂ ಸಹ, ಅದು, ಬೇಡಿಕೆ-ನಿರ್ಬಂಧಿತ ಅರ್ಥವ್ಯವಸ್ಥೆಯಲ್ಲಿ ಇನ್ನೂ ಹೆಚ್ಚು ಪ್ರಯೋಜನಕಾರಿಯೇ ಆಗುತ್ತದೆ. ಹಿಂದಿನ ಉದಾಹರಣೆಯ ಸಂದರ್ಭದಂತಲ್ಲದೆ, ಈ ಪರಿಸ್ಥಿತಿಯಲ್ಲಿ ವಿತ್ತೀಯ ಕೊರತೆ ಏರಿಕೆಯಾಗುತ್ತದೆ, ನಿಜ. ಆದರೆ, ಇದು ಯಾವ ದುಷ್ಪರಿಣಾಮವನ್ನೂ ಉಂಟುಮಾಡುವುದಿಲ್ಲ. ಅದಕ್ಕೆ ಬದಲಾಗಿ, ಆಹಾರಧಾನ್ಯಗಳನ್ನು ಬಿಟ್ಟು ಇತರ ವಸ್ತುಗಳ ವಲಯಗಳಲ್ಲಿ ಉತ್ಪಾದನೆಯ ಸಾಮರ್ಥ್ಯದ ಬಳಕೆಯನ್ನು ಹೆಚ್ಚಿಸುವ ಮೂಲಕ ಅರ್ಥವ್ಯವಸ್ಥೆಯು ಚೇತರಿಸಿಕೊಳ್ಳಲು ನೆರವಾಗುತ್ತದೆ.

ಗೋದಾಮುಗಳಲ್ಲಿ ಧಾನ್ಯಗಳ ದಾಸ್ತಾನು ಏರುತ್ತಿರುವ ಸಮಸ್ಯೆಗೆ, ಜನರ ಕೈಯಲ್ಲಿ ಖರೀದಿಯ ಶಕ್ತಿಯನ್ನು ತುಂಬಿಸುವಲ್ಲಿ ಪರಿಹಾರ ಅಡಗಿದೆ. ಇದಕ್ಕೆ ಆಹಾರ ಸಬ್ಸಿಡಿಯನ್ನು ಹೆಚ್ಚಿಸುವ ಕ್ರಮವನ್ನು ಸಂಪನ್ಮೂಲಗಳ ಕೊರತೆ ಇದೆಯೆಂದು  ಆಕ್ಷೇಪಿಸುವವರು, ಸಮಾಜದಲ್ಲಿ ಆದಾಯ ಹಂಚಿಕೆಯನ್ನು ಸುಧಾರಿಸುವ ಪ್ರಯತ್ನಗಳಲ್ಲಿ, ಕೆಲವರಿಗೆ ಸಬ್ಸಿಡಿ ಒದಗಿಸುವ ಸಲುವಾಗಿ ಇತರರಿಗೆ ತೆರಿಗೆ ವಿಧಿಸಲೇಬೇಕು ಎಂಬುದನ್ನು ಮರೆಯಬಾರದು. ರೈತರ ಅಲ್ಪ ಆದಾಯದ ಬಗ್ಗೆ ಕನಿಕರ ವ್ಯಕ್ತಪಡಿಸುವವರು, ಅದನ್ನು ಸರಿಪಡಿಸಲು ವಿತ್ತೀಯ ಸಾಧನಗಳನ್ನು ಬಳಸಲು ಸಿದ್ಧರಿಲ್ಲದಿರುವುದು,  ಅಪ್ರಾಮಾಣಿಕತನವಾಗುತ್ತದೆ. ರೈತರ ಬಗ್ಗೆ ಕೇವಲ ಮೊಸಳೆ ಕಣ್ಣೀರು ಸುರಿಸುವುದು ನಿಜಕ್ಕೂ ಸಾಮ್ರಾಜ್ಯಶಾಹಿ ಅಜೆಂಡಾವನ್ನು ಬೆಂಬಲಿಸುವ ಕ್ರಮವೇ.

ಆದರೆ, ಉಗ್ರಾಣಗಳಲ್ಲಿ ಕೊಳೆಯದಂತೆ ಆಹಾರ ಧಾನ್ಯಗಳನ್ನು ಅಲ್ಲಿಂದ ಎತ್ತುವ ಮತ್ತು ಜನರ ಕೈಗೆ ಖರೀದಿ ಶಕ್ತಿಯನ್ನು ತುಂಬುವುದರ ಬದಲು, ಈಗ ಆಹಾರ ಧಾನ್ಯಗಳನ್ನು ಬೆಳೆಯುವ ಭೂಮಿಯನ್ನು ಬೇರೆ ಉಪಯೋಗಕ್ಕಾಗಿ ಬಳಸಿಕೊಂಡರೆ, ಅದು ಅಪಾರ ಜನರನ್ನು ಶಾಶ್ವತವಾಗಿ ಹಸಿವಿನ ದವಡೆಗೆ ತಳ್ಳುತ್ತದೆ. ಜನರಿಗೆ ಖರೀದಿಯ ಶಕ್ತಿ ಇಲ್ಲದಿರುವ ಕಾರಣದಿಂದಾಗಿಯೇ ಅವರು ಹಸಿವಿನ ಬಾಧೆಯಿಂದ ಬಳಲುತ್ತಿದ್ದಾರೆ. ಒಂದು ವೇಳೆ, ಆಹಾರ ಧಾನ್ಯಗಳನ್ನು ಬೆಳೆಯುವುದರ ಬದಲಾಗಿ ರೈತರು ಜಮೀನನ್ನು ಬೇರೆ ಕೆಲವು ಉಪಯೋಗಗಳಿಗೆ ಬಳಕೆ ಮಾಡಿಕೊಂಡರೆ, ಆಗ ಅಂತಹ ಬದಲಾವಣೆಯಿಂದಾಗಿ, ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸೃಷ್ಟಿಯಾಗುವ ಒಟ್ಟು ಉದ್ಯೋಗಗಳು ಮೊದಲಿಗಿಂತಲೂ ಅಧಿಕವಾಗಿದ್ದರೆ ಮಾತ್ರ, ಹಸಿವನ್ನು ಕಡಿಮೆ ಮಾಡಲು ಸಾಧ್ಯ. ಈಗ, ಆಹಾರ ಧಾನ್ಯಗಳನ್ನು ಬೆಳೆಯಲು ಅಥವಾ ಬೇರೆ ಯಾವುದೇ ಬೆಳೆ ತೆಗೆಯಲು ಬಳಕೆಯಾದ ಪ್ರತಿ ಎಕರೆ ಜಮೀನಿಂದ ಒದಗುವ ಉದ್ಯೋಗವು ಒಂದೇ ಸಮ ಎಂದು ಭಾವಿಸಿಕೊಂಡರೂ ಸಹ, ಭೂ-ಬಳಕೆಯ ಅಂತಹ ಬದಲಾವಣೆಯು ಹಸಿವೆಯ ಅಗಾಧತೆಯನ್ನು ಕಡಿಮೆ ಮಾಡುವುದಿಲ್ಲ. ಏಕೆಂದರೆ, ಜನರ ಕೈಯಲ್ಲಿರುವ ಖರೀದಿ ಶಕ್ತಿಯು ಮೊದಲಿನಂತೆಯೇ ಇರುತ್ತದೆ. ಆದ್ದರಿಂದ, ಹಸಿವೆಯನ್ನು ಹಿಂಗಿಸಲು ಜಮೀನನ್ನು ಆಹಾರ ಧಾನ್ಯಗಳಿಗೆ ಬದಲಾಗಿ ಬೇರೆ ಕೆಲವು ಉಪಯೋಗಗಳಿಗೆ ಬಳಕೆ ಮಾಡಿಕೊಳ್ಳುವುದು ಪರಿಹಾರವಲ್ಲ. ಹಸಿವೆಯನ್ನು ಹಿಂಗಿಸಲು ಇರುವ ಏಕೈಕ ದಿವ್ಯೌಷದಿ ಅಥವಾ ರಾಮ ಬಾಣವೆಂದರೆ, ಜನರ ಕೈಯಲ್ಲಿ ಖರೀದಿ ಶಕ್ತಿಯನ್ನು ತುಂಬುವುದು. ರೈತರು ಕೃಷಿ ಸಂಸ್ಕರಣೆಯತ್ತ ಸಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಆಹಾರ ಧಾನ್ಯಗಳನ್ನು ಬೆಳೆಯುವ ಜಮೀನಿನ ಹರವನ್ನು ಕಡಿಮೆ ಮಾಡಲು ಇದು ಕಾರಣವಲ್ಲ.

ವಾಸ್ತವವಾಗಿ, ಈ ಬಗ್ಗೆ ಒಂದು ಭ್ರಮೆ ಉಂಟಾಗಿದೆ. ಅದು ಸರ್ವೆ ಸಾಮಾನ್ಯವಾದುದೇ. ಒಂದು ಎಕರೆ ಜಮೀನಿನಲ್ಲಿ ಆಹಾರ ಧಾನ್ಯಗಳನ್ನು ಬೆಳೆದಾಗ ಬರುವ ಆದಾಯವು, ಅದೇ ಒಂದು ಎಕರೆ ಜಮೀನಿನಲ್ಲಿ ಬೇರೆ ಒಂದು ಬೆಳೆಯನ್ನು ಬೆಳೆದಾಗ ಬರುವ ಆದಾಯಕ್ಕಿಂತ ಕಡಿಮೆ ಇದ್ದಾಗ, ಆ ಇನ್ನೊಂದು ಬೆಳೆಯೇ ಲಾಭದಾಯಕ ಎಂಬ ಭಾವನೆ ಎಲ್ಲರಲ್ಲೂ ಇದೆ. ಈ ಬದಲಾವಣೆಯಿಂದ ಬರುವ ಆದಾಯವಲ್ಲ, ಅದರಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಎಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂಬುದು ಸಮಾಜಕ್ಕೆ ಮುಖ್ಯವಲ್ಲ ಎಂಬುದೇ ಆ ಭ್ರಮೆ. ಇಂತಹ ಭೂ ಬಳಕೆಯ ಬದಲಾವಣೆಗಳಾದಾಗ, ಆಹಾರ ಧಾನ್ಯಗಳನ್ನು ಯಾವುದೇ ತೊಂದರೆಯಿಲ್ಲದೆ ಆಮದು ಮಾಡಿಕೊಳ್ಳಬಹುದು ಎಂದು ಭಾವಿಸುವುದು, ಇಂದಿನ ಸಾಮ್ರಾಜ್ಯಶಾಹಿ ಜಗತ್ತಿನಲ್ಲಿ ಒಂದು ಭ್ರಮೆಯಾಗುತ್ತದೆ. ಆಹಾರ ಧಾನ್ಯಗಳನ್ನು ಬೆಳೆಯುವ ಒಂದು ಎಕರೆ ಜಮೀನಿನಲ್ಲಿ ರಫ್ತು ಮಾಡಲು ರೊಕ್ಕದ-ಬೆಳೆ (ತಂಬಾಕು, ಹಣ್ಣು ಹಂಪಲು ಇತ್ಯಾದಿ) ಬೆಳೆದಾಗ ರೈತನ ವರಮಾನವು ದ್ವಿಗುಣಗೊಳ್ಳುತ್ತದೆ; ಆದರೆ, ಅದು ಸೃಷ್ಠಿಸುವ ಉದ್ಯೋಗಗಳು ಅರ್ಧದಷ್ಟು ಕಡಿಮೆಯಾಗುತ್ತವೆ ಎಂದಾದರೆ, ಗ್ರಾಮೀಣ ಪ್ರದೇಶಗಳಲ್ಲಿ ನಿರ್ಗತಿಕತನ ಹೆಚ್ಚುತ್ತದೆ. ಈ ವಿದ್ಯಮಾನವು ಸಂಭವಿಸಿದಾಗ, ಭೂ ಮಾಲೀಕ ರೈತರ ಹೆಚ್ಚಿದ ಆದಾಯವೂ ಅವರ ಕೈಗಳಿಂದ ಜಾರಿ ಹೋಗುತ್ತದೆ. ಏಕೆಂದರೆ, ರೈತರ ಸುತ್ತಮುತ್ತ ನಿರ್ಗತಿಕತನ ಹೆಚ್ಚುತ್ತಿರುವ ಪರಿಸ್ಥಿತಿಯಲ್ಲಿ, ರೈತರ ರಫ್ತು ಬೆಳೆಗಳನ್ನು ಖರೀದಿಸುವ ಕಾರ್ಪೊರೇಟ್‌ಗಳು ಖರೀದಿಯ ಬೆಲೆಯನ್ನು ಇಳಿಸಿ, ತಮ್ಮ ಲೂಟಿಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಆದ್ದರಿಂದ, ತೋರಿಕೆಯ ಆದಾಯದ ಗಳಿಕೆಯನ್ನಲ್ಲ, ಬದಲಿಗೆ, ಭೂ-ಬಳಕೆಯ ಬದಲಾವಣೆಯು ಉದ್ಯೋಗಗಳ ಮೇಲೆ ಉಂಟುಮಾಡುವ ಪರಿಣಾಮವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಯಾವುದೇ ಒಂದು ದೇಶವು ಆಹಾರ-ಆಮದು-ಅವಲಂಬಿತವಾದಾಗ, ಈ ಗಣನೆಯ ಕ್ರಮವೂ ಸಾಕಾಗುವುದಿಲ್ಲ. ಏಕೆಂದರೆ, ಈ ದೇಶಗಳ ಕೈಗಳನ್ನು ತಿರುಚುವುದರಲ್ಲಿ ಸಾಮ್ರಾಜ್ಯಶಾಹಿಗಳು ನಿಸ್ಸೀಮರು.

ಗೋದಾಮುಗಳಲ್ಲಿ ಧಾನ್ಯಗಳ ದಾಸ್ತಾನು ಏರುತ್ತಿರುವ ಸಮಸ್ಯೆಗೆ, ಜನರ ಕೈಯಲ್ಲಿ ಖರೀದಿಯ ಶಕ್ತಿಯನ್ನು ತುಂಬಿಸುವಲ್ಲಿ ಪರಿಹಾರ ಅಡಗಿದೆ ಎಂದಾದಲ್ಲಿ, ಕನಿಷ್ಠ ಬೆಂಬಲ ಬೆಲೆಗಳನ್ನು ಏರಿಸಿ, ಆ ಬೆಲೆಗಳಲ್ಲಿ ಆಹಾರ ಧಾನ್ಯಗಳನ್ನು ಖರೀದಿಸುವ ಮೂಲಕ, ಆಹಾರ ಧಾನ್ಯಗಳ ಉತ್ಪಾದನೆಯ ಲಾಭದಾಯಕತೆಯ ಸಮಸ್ಯೆಗೆ ಪರಿಹಾರ ಒದಗಿಸಬಹುದು. ಆಹಾರ ಧಾನ್ಯಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು ಏರಿಸಿದಾಗ, ಅವುಗಳನ್ನು ಖರೀದಿಸುವ ಗ್ರಾಹಕರಿಗೆ ಹೊರೆಯಾಗುತ್ತದೆ ಎಂದು ವಾದಿಸಬಹುದು. ಆದರೆ ಇದೊಂದು ತರ್ಕ-ರಹಿತ ಅನುಮಾನವಾಗುತ್ತದೆ. ಆಹಾರ ಸಬ್ಸಿಡಿ ಹೆಚ್ಚಿಸುವ ಮೂಲಕ ಧಾನ್ಯಗಳ ಖರೀದಿಯ ಹೊರೆಯನ್ನು ತಗ್ಗಿಸಬಹುದು. ಸಂಪನ್ಮೂಲಗಳ ಕೊರತೆಯ ನೆಲೆಯಲ್ಲಿ ಆಹಾರ ಸಬ್ಸಿಡಿಯನ್ನು ಹೆಚ್ಚಿಸುವ ಕ್ರಮವನ್ನು ಆಕ್ಷೇಪಿಸುವವರು, ಸಮಾಜದಲ್ಲಿ ಆದಾಯ ಹಂಚಿಕೆಯನ್ನು ಸುಧಾರಿಸುವ ಪ್ರಯತ್ನಗಳಲ್ಲಿ, ಕೆಲವರಿಗೆ ಸಬ್ಸಿಡಿ ಒದಗಿಸುವ ಸಲುವಾಗಿ ಇತರರಿಗೆ ತೆರಿಗೆ ವಿಧಿಸಲೇಬೇಕು ಎಂಬುದನ್ನು ಮರೆಯಬಾರದು. ರೈತರ ಅಲ್ಪ ಆದಾಯದ ಬಗ್ಗೆ ಕನಿಕರ ವ್ಯಕ್ತಪಡಿಸುವವರು, ಅದನ್ನು ಸರಿಪಡಿಸಲು ವಿತ್ತೀಯ ಸಾಧನಗಳನ್ನು ಬಳಸಲು ಸಿದ್ಧರಿಲ್ಲದಿರುವುದು, ಮಿತಿಮೀರಿದ ಅಪ್ರಾಮಾಣಿಕತನವಾಗುತ್ತದೆ. ರೈತರ ಬಗ್ಗೆ ಕೇವಲ ಮೊಸಳೆ ಕಣ್ಣೀರು ಸುರಿಸುವುದು ನಿಜಕ್ಕೂ ಸಾಮ್ರಾಜ್ಯಶಾಹಿ ಅಜೆಂಡಾ ಬೆಂಬಲಿಸುವ ಕ್ರಮವೇ. ಬಹುಷಃ ಅವರಿಗೆ ಅದರ ಅರಿವಿಲ್ಲದಿರಬಹುದು. ಇದೆಲ್ಲದರ ಹೊರತಾಗಿಯೂ, ರೈತರು ಹೆಚ್ಚು ಲಾಭದಾಯಕರ ರೊಕ್ಕದ-ಬೆಳೆಗಳನ್ನು ಬೆಳೆಯುವಂತೆ ಮಾಡುವುದು, ಮೇಲ್ನೋಟದಲ್ಲಿ ಅವರ ಆದಾಯವನ್ನು ಹೆಚ್ಚಿಸುವ ಸುಲಭದ ಮಾರ್ಗವೆಂದು ತೋರಬಹುದು. ಆದರೆ, ವ್ಯಾಪಕ ಏರಿಳಿತಗಳ ಅನಿವಾರ್ಯತೆಗೆ ಒಳಪಟ್ಟಿರುವ ಜಾಗತಿಕ ಮಾರುಕಟ್ಟೆಯಲ್ಲಿ ಈ ಬೆಳೆಗಳ ಬೆಲೆಗಳು ಕುಸಿದಾಗ ರೈತರು ಪಾಪರಾಗುತ್ತಾರೆ. ಕನಿಷ್ಠ ಬೆಂಬಲ ಬೆಲೆಗಳ ವ್ಯವಸ್ಥೆಯೊಂದೇ ರೈತರಿಗೆ ಶ್ರೀರಕ್ಷೆ.

ದೆಹಲಿ ಗಡಿಯಲ್ಲಿ ನೆರೆದಿರುವ ರೈತರು ಈ ಎಲ್ಲ ವಿಷಯಗಳನ್ನು ಮೋದಿಯವರಿಗಿಂತ ಅಥವಾ ಆಹಾರ ಧಾನ್ಯಗಳಿಂದ ದೂರ ಸರಿಯಲು ಪ್ರತಿಪಾದಿಸುವ ಬುದ್ಧಿಜೀವಿಗಳಿಗಿಂತ ಹೆಚ್ಚು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುತ್ತಾರೆ. ವಿಪರ್ಯಾಸವೆಂದರೆ, ರೈತರು ದಡ್ಡರು ಎಂದು ಈ ಬುದ್ಧಿಜೀವಿಗಳು ಭಾವಿಸುತ್ತಾರೆ!

 

ಅನು: ಕೆ.ಎಂ.ನಾಗರಾಜ್

Donate Janashakthi Media

Leave a Reply

Your email address will not be published. Required fields are marked *