ರೈತರ ಹೋರಾಟದ ವಿರುದ್ಧ ಎರಡು ತಪ್ಪು ಕಲ್ಪನೆಗಳು

ಪ್ರೊ. ಪ್ರಭಾತ್ ಪಟ್ನಾಯಕ್

ರೈತ ಕೃಷಿಯ ಮೇಲೆ ಕಾರ್ಪೊರೇಟ್ ಅತಿಕ್ರಮಣವು ರೈತರ ಆದಾಯವನ್ನು ಕಸಿಯುವ ಕಾರಣದಿಂದಾಗಿ ಅದೊಂದು ರೈತರು ಮತ್ತು ಕಾರ್ಪೊರೇಟ್‌ಗಳ ನಡುವಿನ  ದ್ವಿಪಕ್ಷೀಯ ಸಮಸ್ಯೆ ಎಂಬ ಪ್ರತಿಪಾದನೆ ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಎಂಎಸ್‌ಪಿಯಲ್ಲಿ ಸೂಕ್ತ ಏರಿಕೆ ಮಾಡಿ ಅದನ್ನು ಇಡೀ ದೇಶಕ್ಕೆ ವಿಸ್ತರಿಸುವ ಕ್ರಮವು ಕಾರ್ಯಸಾಧುವಲ್ಲ ಎಂಬ ಪ್ರತಿಪಾದನೆ, ಈ ಎರಡೂ ಪ್ರತಿಪಾದನೆಗಳೂ ಅಸಮರ್ಥನೀಯವಾಗಿವೆ. ಇಂತಹ ಪ್ರತಿಪಾದನೆಗಳು ರೈತ ಚಳುವಳಿಯನ್ನು ದುರ್ಬಲಗೊಳಿಸುತ್ತವೆ. ಇವಕ್ಕೆ ಅವಕಾಶ ನೀಡಬಾರದು.

ಭಾರತದ ಕೃಷಿಯ ಬಗ್ಗೆ ಕೆಲವು ತಪ್ಪು ಕಲ್ಪನೆಗಳಿವೆ. ಅವುಗಳನ್ನು ಕೂಡಲೇ ತೊಡೆದುಹಾಕದಿದ್ದರೆ, ಮೂರು ಕೃಷಿ ಕಾನೂನುಗಳ ವಿರುದ್ಧ ಒಂದು ವರ್ಷದಿಂದಲೂ ಸತತವಾಗಿ ನಡೆಯುತ್ತಿರುವ ರೈತ ಚಳುವಳಿಯ ಮೇಲೆ ಬೀಳುವ ಪರಿಣಾಮಗಳು ಪ್ರತಿಕೂಲವಾಗಬಹುದು.

ಈ ತಪ್ಪು ಕಲ್ಪನೆಗಳಲ್ಲಿ ಮೊದಲನೆಯದು, ರೈತ ಕೃಷಿಯ ಮೇಲಿನ ಕಾರ್ಪೊರೇಟ್ ಅತಿಕ್ರಮಣದ ವಿಷಯವು ಕಾರ್ಪೊರೇಟ್‌ಗಳು ಮತ್ತು ರೈತರಿಗೆ ಮಾತ್ರ ಸಂಬಂಧಿಸಿದೆ ಎಂಬ ನಂಬಿಕೆ. ಇದು ತಪ್ಪು. ರೈತ ಕೃಷಿಯ ಮೇಲಿನ ಕಾರ್ಪೊರೇಟ್ ಅತಿಕ್ರಮಣವು ರೈತರಿಗೆ ಮಾತ್ರ ಸಂಬಂಧಿಸಿದ ವಿಷಯವಲ್ಲ. ಇದು ಎಲ್ಲರಿಗೂ ಸಂಬಂಧಿಸಿದ ವಿಷಯ. ಏಕೆಂದರೆ, ಈ ಅತಿಕ್ರಮಣವು ಇಡೀ ಅರ್ಥವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ, ಇದು ಎಲ್ಲರಿಗೂ ಸಂಬಂಧಿಸಿದ ವಿಷಯವೇ. ಇದು ಚತುರ ಮಾತುಗಾರಿಕೆಯ ವಿಷಯವೂ ಅಲ್ಲ. ಇದು ಅಕ್ಷರಶಃ ನಿಜ.

ಇಡೀ ಸಮಾಜದ ಹೋರಾಟ

ಇದು ಎಲ್ಲರಿಗೂ ಸಂಬಂಧಿಸಿದ ವಿಷಯವೆಂದು ಹೇಳುವ ಕಾರಣವೆಂದರೆ, ಕಾರ್ಪೊರೇಟ್ ಅತಿಕ್ರಮಣದ ವಿರುದ್ಧ ನಡೆಯುತ್ತಿರುವ ರೈತ ಚಳುವಳಿಯು, ಮಾಲೀಕರು ಮತ್ತು ಕಾರ್ಮಿಕರ ನಡುವೆ ಕಾರ್ಖಾನೆಗಳಲ್ಲಿ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಉಂಟಾಗುವ ವಿವಾದಗಳ ರೀತಿಯ ದ್ವಿಪಕ್ಷೀಯ ಸಮಸ್ಯೆಯಲ್ಲ. ಕಾರ್ಪೊರೇಟ್ ಅತಿಕ್ರಮಣದ ವಿರುದ್ಧ ಹೋರಾಡುವ ಪ್ರಕ್ರಿಯೆಯಲ್ಲಿ ರೈತರು ವಸ್ತುಶಃ ಭಾರತವನ್ನು “ಆಹಾರ ಸಾಮ್ರಾಜ್ಯಶಾಹಿ”ಗೆ ಒಳಪಡಿಸುವ ನೀತಿಯ ವಿರುದ್ಧವಾಗಿ ಇಡೀ ಸಮಾಜದ ಪರವಾಗಿ ಹೋರಾಟ ಮಾಡುತ್ತಿದ್ದಾರೆ.

ರೈತ ಕೃಷಿಯ ಮೇಲೆ ಕಾರ್ಪೊರೇಟ್ ಅತಿಕ್ರಮಣ ಎಂದಾಗ, ಕಾರ್ಪೊರೇಟ್‌ಗಳು ರೈತರ ಆದಾಯದ ಒಂದು ಭಾಗವನ್ನು ಕಸಿಯುತ್ತವೆ ಎಂಬುದಷ್ಟೇ ಅದರ ಅರ್ಥವಲ್ಲ. ರೈತರಿಗೆ ದಕ್ಕಬೇಕಾದ ಆದಾಯದ ಪಾಲನ್ನು ಹಿಂಡುವ ಮೂಲಕ ನೇರವಾಗಿ ಅಥವಾ ಕೃಷಿ ಉತ್ಪನ್ನಗಳ ಬೆಲೆ ಏರಿದಾಗ ಅದನ್ನು ಜೇಬಿಗಿಳಿಸಿಕೊಳ್ಳುವ ಮತ್ತು ಬೆಲೆಗಳು ಕುಸಿದಾಗ ನಷ್ಟವನ್ನು ರೈತರಿಗೆ ವರ್ಗಾಯಿಸುವ ಮೂಲಕ ಪರೋಕ್ಷವಾಗಿ ರೈತರ ಆದಾಯವನ್ನು ಕಾರ್ಪೊರೇಟ್‌ಗಳು ಕಸಿಯುತ್ತವೆ ಎಂಬುದಷ್ಟೇ ವಿಷಯವಲ್ಲ. ಅದರ ಜೊತೆಗೆ ಭೂ-ಬಳಕೆಯ ವಿಷಯವೂ ಮುಖ್ಯವಾಗುತ್ತದೆ. ಮುಂದುವರಿದ ಬಂಡವಾಳಶಾಹಿ ದೇಶಗಳು ಹವಾಮಾನದ ಕಾರಣದಿಂದಾಗಿ ಆಹಾರ ಧಾನ್ಯಗಳನ್ನು ಮಾತ್ರ ಉತ್ಪಾದಿಸುತ್ತವೆ. ಅವುಗಳ ಬಳಿ ಧಾನ್ಯಗಳ ದಾಸ್ತಾನು ಯಾವತ್ತೂ ಹೆಚ್ಚುವರಿಯಾಗಿಯೇ ಇರುತ್ತದೆ. ಈ ಹೆಚ್ಚುವರಿ ದಾಸ್ತಾನನ್ನು ಅವು ಮೂರನೇ ಜಗತ್ತಿಗೆ ಮಾರಾಟ ಮಾಡಲು ಬಯಸುತ್ತವೆ. ಈ ದೇಶಗಳು ತಮಗೆ ಅಗತ್ಯವಾದ ಮತ್ತು ತಾವೇ ಬೆಳೆಯಲು ಸಾಧ್ಯವಾಗದ ಮತ್ತು ಭಾರತದಂತಹ ಉಷ್ಣವಲಯದ ದೇಶಗಳಲ್ಲಿ ಮಾತ್ರ, ಅದೂ ಸಹ ಋತುಮಾನಕ್ಕೆ ತಕ್ಕಂತೆ, ಬೆಳೆಯಬಹುದಾದ ಹಣ್ಣು ಹಂಪಲುಗಳನ್ನು ಬೆಳೆಯುವಂತೆ ಹಲವಾರು ವರ್ಷಗಳಿಂದಲೂ ಒತ್ತಾಯಿಸುತ್ತಲೇ ಬಂದಿವೆ. ಅವರ ಒತ್ತಡಕ್ಕೆ ಮಣಿದು, ಹಣದ ಆಮಿಷಕ್ಕೆ ಒಳಗಾಗಿ ಭಾರತದ ರೈತರು ಇಂತಹ ಆಹಾರೇತರ ಬೆಳೆಗಳನ್ನು ಬೆಳೆಯಬೇಕು ಎಂದಾದರೆ, ಭೂ-ಬಳಕೆಯ ಬದಲಾವಣೆ ಅಗತ್ಯವಾಗುತ್ತದೆ.

ಹಾಗಾಗಿ, ಕಾರ್ಪೊರೇಟ್ ಅತಿಕ್ರಮಣವು ಆಹಾರ ಧಾನ್ಯಗಳ ಉತ್ಪಾದನೆಯನ್ನು ಕಡಿಮೆ ಮಾಡುವುದರ ಜೊತೆಗೆ, ಮೆಟ್ರೊಪಾಲಿಟನ್ ದೇಶಗಳ ಅಗತ್ಯಗಳಿಗಾಗಿ ಆಹಾರ ಧಾನ್ಯಗಳನ್ನು ಬೆಳೆಯುವ ಭೂಮಿಯ ಭಾಗವನ್ನು ಇತರ ಬೆಳೆಗಳನ್ನು ತೆಗೆಯುವತ್ತ ತಿರುಗಿಸಬೇಕಾಗುತ್ತದೆ. ಭಾರತದ ಕೃಷಿಯನ್ನು ಈ ನಿಟ್ಟಿನಲ್ಲಿ ಕೊಂಡೊಯ್ಯಲು, ಒಂದು ಅಸ್ತ್ರವನ್ನು ಪ್ರಯೋಗಿಸಲಾಗುತ್ತಿದೆ. ಭಾರತದಲ್ಲಿ ಪ್ರಧಾನವಾಗಿ ಆಹಾರ ಧಾನ್ಯಗಳಿಗೆ ಅನ್ವಯವಾಗುವ ಕನಿಷ್ಠ ಬೆಂಬಲ ಬೆಲೆಗಳ ಕ್ರಮವನ್ನು ಕೈಬಿಡಲಾಗುತ್ತಿದೆ. ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಪದ್ಧತಿಯನ್ನು ಮುಂದುವರಿಸುವುದಾಗಿ ಮೋದಿ ಸರ್ಕಾರವು ಮತ್ತೆ ಮತ್ತೆ ಹೇಳುತ್ತಿರಬಹುದು. ಆದರೆ, ಒಂದು ತಿದ್ದುಪಡಿಯ ಮೂಲಕ, ಈ ಭರವಸೆಯನ್ನು ಕೃಷಿ ಕಾನೂನಿನಲ್ಲಿ ಅಳವಡಿಸುವಂತೆ ರೈತರು ಸಲ್ಲಿಸಿದ ಕೋರಿಕೆಯನ್ನು ಅದು ಒಪ್ಪಿಕೊಂಡಿಲ್ಲ ಎಂಬುದು ಗಮನಾರ್ಹವಾಗಿದೆ. ಮೋದಿ ಸರ್ಕಾರದ ಉದ್ದೇಶ ಸ್ಪಷ್ಟವಾಗಿದೆ: ಕನಿಷ್ಠ ಬೆಂಬಲ ಬೆಲೆ ಪದ್ಧತಿಯನ್ನು ರದ್ದು ಮಾಡುವುದು. ಹೀಗೆ, ಒಂದು ಕಡೆಯಲ್ಲಿ ಕಾರ್ಪೊರೇಟ್ ಅತಿಕ್ರಮಣ (ಅಂದರೆ, ಬೆಲೆ ಏರಿಳಿತಗಳ ಮೂಲಕ ರೈತರ ಆದಾಯವನ್ನು ಕಸಿಯುವುದು) ಮತ್ತೊಂದೆಡೆಯಲ್ಲಿ ಎಂಎಸ್‌ಪಿಯ ರದ್ದತಿ, ಇವುಗಳ ಒತ್ತಡಕ್ಕೆ ಒಳಗಾದ ರೈತರು ತಮ್ಮ ರಿಸ್ಕ್ಅನ್ನು ಕಡಿಮೆಮಾಡಿಕೊಳ್ಳಲು, ಆಹಾರ ಧಾನ್ಯಗಳನ್ನು ಬೆಳೆಯುವುದರ ಬದಲಾಗಿ ರೊಕ್ಕ ತರುವ ತೋಟಗಾರಿಕೆ ಬೆಳೆಗಳತ್ತ ಹೊರಳುತ್ತಾರೆ.

“ಆಹಾರ ಧಾನ್ಯಗಳನ್ನು ಉತ್ಪಾದಿಸುವುದರಿಂದ ಹಿಂದೆ ಸರಿದರೆ ತಪ್ಪೇನು?”

ಭಾರತದಂತಹ ದೇಶಗಳು ಆಹಾರ ಧಾನ್ಯಗಳನ್ನು ಉತ್ಪಾದಿಸುವುದರಿಂದ ಹಿಂದೆ ಸರಿದು, ಇತರೆ ಬೆಳೆಗಳನ್ನು ರಫ್ತು ಮಾಡಿ, ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಂಡರೆ ತಪ್ಪೇನು? ಎಂಬ ಪ್ರಶ್ನೆಯನ್ನು ಯಾರಾದರೂ ಎತ್ತಬಹುದು. ಮೊದಲನೆಯದಾಗಿ, ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳಲು ಸಾಕಷ್ಟು ವಿದೇಶಿ ವಿನಿಮಯದ ಸಂಗ್ರಹವನ್ನು ಹೊಂದಿರಬೇಕಾಗುತ್ತದೆ. ಆಹಾರ ಧಾನ್ಯಗಳ ಆಮದುಗಳಿಗೆ ಸಾಕಾಗುವಷ್ಟು ಸಾಕಷ್ಟು ವಿದೇಶಿ ವಿನಿಮಯವು ಸದಾ ಕಾಲವೂ ಲಭ್ಯವಿಲ್ಲದೇ ಇರಬಹುದು. ಆಹಾರ ಧಾನ್ಯ ಮತ್ತು ಇತರ ಬೆಳೆಗಳ ಬೆಲೆಗಳಲ್ಲಿ ಎದುರಾಗುವ ಏರಿಳಿತಗಳ ಸಮಸ್ಯೆಯನ್ನು ಹೊರತುಪಡಿಸಿದರೂ ಸಹ, ಇತರ ಬೆಳೆಗಳ ಸಾಪೇಕ್ಷ ಕುಸಿತವು ಆಹಾರ ಧಾನ್ಯಗಳ ಆಮದಿಗೆ ವಿದೇಶಿ ವಿನಿಮಯದ ಕೊರತೆಯನ್ನು ಉಂಟುಮಾಡಬಹುದು. ಅದಕ್ಕಿಂತಲೂ ಮುಖ್ಯವಾಗಿ, ಬೃಹತ್ ಪ್ರಮಾಣದ ಜನಸಂಖ್ಯೆಯನ್ನು ಹೊಂದಿದ ಭಾರತದಂತಹ ದೇಶವು ಆಹಾರ ಧಾನ್ಯಗಳ ಆಮದಿಗಾಗಿ ವಿಶ್ವ ಮಾರುಕಟ್ಟೆಗೆ ಹೋದಾಗ, ಆಹಾರ ಧಾನ್ಯಗಳ ಜಾಗತಿಕ ಬೆಲೆಗಳು ತಕ್ಷಣವೇ ಏರಿಕೆಯಾಗುತ್ತವೆ. ಆಗ, ನಿರ್ದಿಷ್ಟ ಪ್ರಮಾಣದ ಧಾನ್ಯಗಳನ್ನು ಆಮದು ಮಾಡಿಕೊಳ್ಳಲು ಇನ್ನೂ ಹೆಚ್ಚಿನ ವಿದೇಶಿ ವಿನಿಮಯ ಬೇಕಾಗುತ್ತದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು.

ಎರಡನೆಯದಾಗಿ, ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳಲು ದೇಶದಲ್ಲಿ ಒಂದು ವೇಳೆ ವಿದೇಶಿ ವಿನಿಮಯವು ಲಭ್ಯವಿದ್ದರೂ ಸಹ, ಜನರು ಆಹಾರ ಧಾನ್ಯಗಳನ್ನು ಕೊಳ್ಳುವ ಶಕ್ತಿಯನ್ನು ಹೊಂದಿರಬೇಕಾಗುತ್ತದೆ. ಒಂದು ದೇಶವು ಆಹಾರ ಧಾನ್ಯಗಳ ಉತ್ಪಾನೆಯಿಂದ ದೂರ ಸರಿದಾಗ, ಅದರ ಪರಿಣಾಮವಾಗಿ ಜನರ ಕೊಳ್ಳುವ ಶಕ್ತಿಯು ಸಾಮಾನ್ಯವಾಗಿ ಕುಗ್ಗುತ್ತದೆ. ಆಹಾರ ಧಾನ್ಯಗಳಿಗೆ ಬದಲಾಗಿ ಬೆಳೆಯಲಾಗುವ ಅನೇಕ ಬೆಳೆಗಳನ್ನು ತೆಗೆಯಲು ವಾಸ್ತವವಾಗಿ ಆಹಾರ ಧಾನ್ಯಗಳನ್ನು ಬೆಳೆಯಲು ಬೇಕಾಗುವುದಕ್ಕಿಂತ ಕಡಿಮೆ ಸಂಖ್ಯೆಯ ಕೆಲಸಗಾರರು ಸಾಕಾಗುತ್ತಾರೆ. ಆದ್ದರಿಂದ, ಆಹಾರ ಧಾನ್ಯೇತರ ಬೆಳೆಗಳನ್ನು ಬೆಳೆಯುವುದೆಂದರೆ, ಕೃಷಿಯಲ್ಲಿ ಉದ್ಯೋಗ ಮಾಡುವವರ ಸಂಖ್ಯೆಯನ್ನು ಇಳಿಸಿದಂತೆಯೇ. ಈ ಇಳಿಕೆಯ ಪರಿಣಾಮವಾಗಿ, ಜನರ ಕೊಳ್ಳುವ ಶಕ್ತಿಯು ಕುಗ್ಗುತ್ತದೆ. ಆಗ, ಆಮದು ಮಾಡಿಕೊಂಡ ಧಾನ್ಯಗಳನ್ನು ದುಬಾರಿ ಬೆಲೆ ತೆತ್ತು ಕೊಳ್ಳುವುದು ಜನರಿಗೆ ಸಾಧ್ಯವಾಗುವುದಿಲ್ಲ.

ಈ ಅಂಶಗಳ ಜೊತೆಗೆ, ಸಾಮ್ರಾಜ್ಯಶಾಹಿಯ ಕೈತಿರುಚುವ ಪ್ರಯತ್ನಗಳೂ ಸೇರಿಕೊಳ್ಳುತ್ತವೆ. ಆಹಾರ ಧಾನ್ಯಗಳನ್ನು ಮೆಟ್ರೋಪಾಲಿಟನ್ ದೇಶಗಳಿಂದ ಕೊಳ್ಳುವುದರಿಂದ, ಯಾವುದೇ ವಿಷಯದ ಬಗ್ಗೆ ಅವರು ತಳೆಯುವ ನಿಲುವುಗಳನ್ನು ಭಾರತವು ಬೆಂಬಲಿಸದ ಸಂದರ್ಭದಲ್ಲಿ, ಅವರು ಭಾರತಕ್ಕೆ ಧಾನ್ಯಗಳನ್ನು ಮಾರಲು ನಿರಾಕರಿಸುತ್ತಾರೆ. ಆಹಾರ ಧಾನ್ಯಗಳ ಆಮದಿಗಾಗಿ ಈ ದೇಶಗಳನ್ನು ಅವಲಂಬಿಸಿದಾಗ ನಮ್ಮ ಸಾರ್ವಭೌಮತೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಸರಳ ಸತ್ಯದ ಸಾಕ್ಷಾತ್ಕಾರವೇ ಇಂದಿರಾ ಗಾಂಧಿಯವರ ಸರ್ಕಾರವನ್ನು ಆಹಾರ ಸ್ವಾವಲಂಬನೆಯ ಉದ್ದೇಶಕ್ಕಾಗಿ ಹಸಿರು ಕ್ರಾಂತಿಗೆ ಮುಂದಾಗುವಂತೆ ಪ್ರೇರೇಪಿಸಿತು. ಗಡಿಯಾರವನ್ನು ಹಿಂದಕ್ಕೆ ತಿರುಗಿಸುವ ಮತ್ತು ದೇಶದ ಈ ಸ್ವಾವಲಂಬನೆಯನ್ನು (ಈ ಸ್ವಾವಲಂಬನೆಯಲ್ಲಿ ಜನರ ಕೊಳ್ಳುವ ಶಕ್ತಿಯು ಕಡಿಮೆ ಮಟ್ಟದಲ್ಲಿದ್ದರೂ ಸಹ) ನಾಶಪಡಿಸುವ ಕಾರ್ಯವನ್ನು ಮೋದಿ ಸರ್ಕಾರದ ಕೃಷಿ ಕಾನೂನುಗಳು ಮಾಡುತ್ತಿವೆ. ಸರ್ಕಾರದ ಈ ವಿಧೇಯತೆಯನ್ನು ಸಾಮ್ರಾಜ್ಯಶಾಹಿಯು ಬಹಳ ಸಮಯದಿಂದಲೂ ನಿರೀಕ್ಷಿಸುತ್ತಿತ್ತು. ಬೆನ್ನುಮೂಳೆಯಿಲ್ಲದ ಮೋದಿ ಸರ್ಕಾರವು ಸಾಮ್ರಾಜ್ಯಶಾಹಿಗೆ ಶರಣಾಗಿದೆ.

ಈ ಶರಣಾಗತಿಗೆ ವಿರೋಧವಾಗಿ ರೈತ ಚಳುವಳಿಯು ಸೆಟೆದು ನಿಂತಿದೆ. ಕಾರ್ಪೊರೇಟ್ ಕೃಷಿಯ ಜಾರಿಗೆ ಸಮ್ಮತಿಸುವುದು ಮತ್ತು ಕಾರ್ಪೊರೇಟ್ ಕೃಷಿಯಲ್ಲಿ ರೈತರಿಗೆ ಎಷ್ಟು ಪಾಲು ದೊರಕಬೇಕು ಮತ್ತು ಕಾರ್ಪೊರೇಟ್‌ಗಳಿಗೆ ಎಷ್ಟು ಪಾಲು ದೊರಕಬೇಕು ಎಂಬುದರ ಬಗ್ಗೆ ಮಾತ್ರ ಚೌಕಾಶಿ ಮಾಡಲು ಹೊರಟರೆ, ರೈತರು ತಮ್ಮ ಭವಿಷ್ಯವನ್ನು ನಿರ್ಲಕ್ಷಿಸಿದಂತಾಗುತ್ತದೆ. ಅದು, ದೇಶದ ಅಳಿದುಳಿದ ಸಾರ್ವಭೌಮತೆಯನ್ನು ಸಾಮ್ರಾಜ್ಯಶಾಹಿಗೆ ಗಿರವಿ ಇಡುವ ಹೀನ ಕೃತ್ಯವೂ ಆಗುತ್ತದೆ. ಅದರ ಜೊತೆಗೆ, ಸಾರ್ವಜನಿಕ ವಿತರಣಾ ವ್ಯವಸ್ಥೆಯು ಮತ್ತಷ್ಟು ದುರ್ಬಲಗೊಳ್ಳುತ್ತದೆ. ಮತ್ತು, ಪ್ರತಿ ವರ್ಷವೂ ಅನಿಶ್ಚಿತ ಪ್ರಮಾಣದ ಆಮದುಗಳ ಕಾರಣದಿಂದ ಈ ವ್ಯವಸ್ಥೆಯು ಉಳಿಯುವ ಸಾಧ್ಯತೆಯೂ ಇರುವುದಿಲ್ಲ.

ರೈತ ಕೃಷಿಯ ಮೇಲಿನ ಕಾರ್ಪೊರೇಟ್ ಅತಿಕ್ರಮಣವು ರೈತರು ಮತ್ತು ಕಾರ್ಪೊರೇಟ್‌ಗಳ ನಡುವಿನ ದ್ವಿಪಕ್ಷೀಯ ಸಮಸ್ಯೆಯಲ್ಲ.. ಇದು ಎಲ್ಲರಿಗೂ ಸಂಬಂಧಿಸಿದ ವಿಷಯ. ಏಕೆಂದರೆ, ಈ ಅತಿಕ್ರಮಣವು ಇಡೀ ಅರ್ಥವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಚತುರ ಮಾತುಗಾರಿಕೆಯಲ್ಲ, ಅಕ್ಷರಶಃ ನಿಜ. ಕಾರ್ಪೊರೇಟ್ ಅತಿಕ್ರಮಣದ ವಿರುದ್ಧ ಹೋರಾಡುವ ಪ್ರಕ್ರಿಯೆಯಲ್ಲಿ ರೈತರು ವಸ್ತುಶಃ ಭಾರತವನ್ನು “ಆಹಾರ ಸಾಮ್ರಾಜ್ಯಶಾಹಿ”ಗೆ ಒಳಪಡಿಸುವ ನೀತಿಯ ವಿರುದ್ಧವಾಗಿ ಇಡೀ ಸಮಾಜದ ಪರವಾಗಿ ಹೋರಾಟ ಮಾಡುತ್ತಿದ್ದಾರೆ.

ಎಂಎಸ್‌ಪಿ ಮತ್ತು ಆಹಾರ ದಾಸ್ತಾನು

ಎರಡನೆಯ ತಪ್ಪು ಕಲ್ಪನೆಯು ಎಂಎಸ್‌ಪಿಯನ್ನು ಮತ್ತು ಧಾನ್ಯಗಳ ಖರೀದಿಯನ್ನು ದೇಶದಾದ್ಯಂತ ಜಾರಿಗೊಳಿಸುವುದು ಭಾರತದಲ್ಲಿ ಅನಗತ್ಯ ಎಂಬ ನಂಬಿಕೆಗೆ ಸಂಬಂಧಿಸಿದೆ. ಧಾನ್ಯ ಹೆಚ್ಚುವರಿಯ ಕೇವಲ ಮೂರು ಪ್ರದೇಶಗಳಾದ ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದಿಂದ ಭಾರತ ಆಹಾರ ನಿಗಮವು(ಎಫ್‌ಸಿಐ) ಕೈಗೊಳ್ಳುತ್ತಿರುವ ಒಟ್ಟಾರೆ ಖರೀದಿಯು ದೇಶದ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಹಂಚಲು ಸಾಕಾಗುತ್ತದೆ ಎಂದು ವಾದಿಸಲಾಗಿದೆ. ಜೊತೆಗೆ, ದೇಶಾದ್ಯಂತ ಧಾನ್ಯಗಳನ್ನು ಕೊಳ್ಳುವುದರಿಂದ ಗೋದಾಮುಗಳಲ್ಲಿ ದಾಸ್ತಾನುಗಳು ಹೆಚ್ಚುತ್ತವೆ, ಸಂಗ್ರಹಣೆಯ ವೆಚ್ಚಗಳು ಹೆಚ್ಚುತ್ತವೆ ಮತ್ತು ಅಂಥಹ ಸಂಗ್ರಹಣೆಗಾಗಿ ಬ್ಯಾಂಕ್‌ಗಳಿಂದ ಪಡೆದ ಸಾಲದ ಮೇಲಿನ ಬಡ್ಡಿ ಹೆಚ್ಚುತ್ತದೆ. ಹಾಗಾಗಿ, ಖರ್ಚಿನ ಹೊರೆ ಹೆಚ್ಚುತ್ತದೆ. ಆದ್ದರಿಂದ, ಧಾನ್ಯ ಹೆಚ್ಚುವರಿಯ ಮೂರು ಪ್ರದೇಶಗಳಿಂದ ಆಚೆಯ ರಾಜ್ಯಗಳಿಗೆ ಖರೀದಿಯ ಜಾಲದ ವಿಸ್ತರಣೆಯು ಎರಡು ಪಟ್ಟು ಹೆಚ್ಚು ದುಂದು ವೆಚ್ಚದ ಕ್ರಮವಾಗುತ್ತದೆ – ಸರ್ಕಾರದ ಗೋದಾಮುಗಳಲ್ಲಿ ತುಂಬಿ ತುಳುಕುವ ಧಾನ್ಯಗಳು ವ್ಯರ್ಥವಾಗುತ್ತವೆ. ಆದ್ದರಿಂದ, ಅವುಗಳ ಖರೀದಿಗೆ ಮತ್ತು ಸಂಗ್ರಹಕ್ಕೆ ಬಳಸಿದ ಹಣವೂ ವ್ಯರ್ಥವಾಗುತ್ತದೆ. ಹಾಗಾಗಿ, ಬೆಂಬಲ ಬೆಲೆ ಮತ್ತು ಖರೀದಿ ಕಾರ್ಯಾಚರಣೆಗಳ ವ್ಯಾಪ್ತಿಯನ್ನು ಸೀಮಿತಗೊಳಿಸುವುದೇ ಒಳ್ಳೆಯದು ಎಂಬುದಾಗಿ ವಾದಿಸಲಾಗಿದೆ.

ಈ ವಾದವೂ ತಪ್ಪೇ. ಅದು ಭಾರತೀಯ ಕೃಷಿಯ ಬಗ್ಗೆ ಹೊಂದಿರುವ ಜ್ಞಾನದ ಕೊರತೆಯನ್ನು ಬಯಲುಮಾಡಿಕೊಳ್ಳುತ್ತದೆ. ಅದೇನೇ ಇರಲಿ, ಎಫ್‌ಸಿಐ ಹೇಗೂ ಇತರ ರಾಜ್ಯಗಳಿಂದ ಹೆಚ್ಚು ಧಾನ್ಯಗಳನ್ನು ಸಂಗ್ರಹಿಸುತ್ತಿಲ್ಲ. ಆದ್ದರಿಂದ, ಎಂಎಸ್‌ಪಿಯ ಏರಿಕೆಯು ಧಾನ್ಯಗಳ ಸಂಗ್ರಹಣಾ ವೆಚ್ಚದ ಮೊತ್ತವನ್ನು ಹೆಚ್ಚಿಸುವುದಿಲ್ಲ. ಎಂಎಸ್‌ಪಿ ಎಂಬುದು ಒಂದು ಕನಿಷ್ಠ ಮಟ್ಟದ ಬೆಲೆಯಾಗಿರುತ್ತದೆ ಮತ್ತು ಈ ಕನಿಷ್ಠ ಮಟ್ಟದ ಬೆಲೆಯಲ್ಲಿನ ಏರಿಕೆಯು ಧಾನ್ಯಗಳ ಮುಕ್ತ ಮಾರುಕಟ್ಟೆ ಮಾರಾಟದ ಬೆಲೆಯನ್ನು ಹೆಚ್ಚಿಸುತ್ತದೆ, ನಿಜ. ಆದರೆ, ಈ ಎಂಎಸ್‌ಪಿಯ ಏರಿಕೆಯ ಪರಿಣಾಮವು ನೈಜವಾಗಿ ಏನಾಗುತ್ತದೆ ಎಂದರೆ, ಅದು ರೈತರ ಆದಾಯವನ್ನು ಹೆಚ್ಚಿಸುತ್ತದೆ. ಹೇಗೆಂದರೆ, ಎಫ್‌ಸಿಐ ಹೊರಗಿನ (ಮುಕ್ತ ಮಾರುಕಟ್ಟೆ) ಮಾರಾಟದ ಮೇಲೆ ರೈತರು ಪಡೆಯುವ ಬೆಲೆಯನ್ನು ಹೆಚ್ಚಿಸುತ್ತದೆ. ಈ ಏರಿಕೆಯು ಸರ್ಕಾರದ ಸಂಗ್ರಹಣೆಯ ಹೆಚ್ಚಳದ ಕಾರಣದಿಂದಾಗಿ ಆದದ್ದಲ್ಲ. ಅಂತಹ ಹೆಚ್ಚಳವಿಲ್ಲದೆಯೂ ಆದ ಏರಿಕೆ.

ಆದರೆ, ಮುಕ್ತ ಮಾರುಕಟ್ಟೆಯ ಬೇಡಿಕೆಯ ಕುಸಿತವಿಲ್ಲದೆ ಮುಕ್ತ ಮಾರುಕಟ್ಟೆಯ ಬೆಲೆ ಏರುವುದಾದರೂ ಹೇಗೆ? ಮುಕ್ತ ಮಾರುಕಟ್ಟೆಯಲ್ಲಿ  ಬೇಡಿಕೆ ಕುಸಿತವಾಗಿದೆ ಎಂದರೆ ಎಫ್‌ಸಿಐ ನಿಂದ ದೊಡ್ಡ ಪ್ರಮಾಣದ ಸಂಗ್ರಹಣೆ ಆಗಿದೆ ಎಂಬುದನ್ನು ಸೂಚಿಸುತ್ತದಲ್ಲವೇ? ಈ ಒಗಟಿನ ಪ್ರಶ್ನೆಗೆ ಉತ್ತರ-ಹೆಚ್ಚು ಆದಾಯ ಗಳಿಸುವವರ (ಅಂದರೆ, ರೇಷನ್ ವ್ಯಾಪ್ತಿಯಿಂದ ಹೊರಗಿರುವವರ) ಆಹಾರ ಧಾನ್ಯಗಳ ಬೇಡಿಕೆಯು ಸಾಮಾನ್ಯವಾಗಿ ಬೆಲೆ ಮಟ್ಟವನ್ನು (ಹಿಗ್ಗುವ-ಕುಗ್ಗುವ ಪರಿಸ್ಥಿತಿ)ಅವಲಂಬಿಸಿರುವುದಿಲ್ಲ. ಅಂದರೆ, ಮುಕ್ತ ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳ ಬೆಲೆ ಏರಿದರೂ ಸಹ ಅವರ ಬೇಡಿಕೆಯು ಹೆಚ್ಚು ಕುಗ್ಗುವುದಿಲ್ಲ. ಆದ್ದರಿಂದ, ಎಂಎಸ್‌ಪಿಯ ಏರಿಕೆಯನ್ನನುಸರಿಸಿ ಮುಕ್ತ ಮಾರುಕಟ್ಟೆಯಲ್ಲಿ ಸಮಾನಾಂತರವಾಗಿ ಬೆಲೆಗಳು ಏರುವ ಕಾರಣದಿಂದಾಗಿ ಎಫ್‌ಸಿಐನಲ್ಲಿ ಧಾನ್ಯಗಳು ಮಾರಾಟವಾಗದೆ ಉಳಿದುಬಿಡುತ್ತವೆ (ಅಂದರೆ, ಎಫ್‌ಸಿಐನಲ್ಲಿ ಅಧಿಕ ದಾಸ್ತಾನು ಉಳಿದುಬಿಡುತ್ತದೆ) ಎಂಬ ಪ್ರಶ್ನೆಯು ಉದ್ಭವಿಸುವುದೇ ಇಲ್ಲ.

ಈ ರೀತಿಯಲ್ಲಿ ಎಂಎಸ್‌ಪಿ ಪದ್ಧತಿಯು, ಎಫ್‌ಸಿಐನ ದಾಸ್ತಾನಿನ ಮೇಲೆ ಹೆಚ್ಚು ಪರಿಣಾಮವನ್ನು ಉಂಟುಮಾಡದ ರೀತಿಯಲ್ಲಿ, ದೇಶದಾದ್ಯಂತ ರೈತರಿಗೆ ಒಂದು ಖಾತರಿಯಾದ ವರಮಾನ ಸಿಗುವಂತೆ ಮಾಡುತ್ತದೆ. ಮತ್ತು, ಎಂಎಸ್‌ಪಿಯನ್ನು ಏರಿಸಿದಾಗ, ಎಫ್‌ಸಿಐನ ದಾಸ್ತಾನಿನ ಮೇಲೆ ಹೆಚ್ಚು ಪರಿಣಾಮವನ್ನು ಉಂಟುಮಾಡದ ರೀತಿಯಲ್ಲಿ ರೈತರಿಗೆ ಒಂದು ಖಾತರಿಯಾದ ವರಮಾನವೂ ಸಿಗುತ್ತದೆ. ಹೆಚ್ಚುವರಿ ಧಾನ್ಯಗಳು ಇರುವ ಮೂರು ರಾಜ್ಯಗಳನ್ನು ಬಿಟ್ಟು ಇತರ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ಎಫ್‌ಸಿಐ ಆಸಕ್ತಿ ಹೊಂದಿಲ್ಲ. ಎಫ್‌ಸಿಐನ ಈ ಲೋಪದಿಂದಾಗಿ ಕೆಲವು ರಾಜ್ಯ ಸರ್ಕಾರಗಳು ತಮ್ಮದೇ ಆದ ಏರ್ಪಾಟುಗಳನ್ನು ಮಾಡಿಕೊಂಡಿವೆ. ರಾಜ್ಯ ಸರ್ಕಾರಗಳ ಈ ಏರ್ಪಾಟುಗಳು ಹೆಚ್ಚು ಮಟ್ಟದ ಸಂಗ್ರಹಣೆಯನ್ನು ಕೈಗೊಳ್ಳದಿದ್ದರೂ ಸಹ, ರೈತರಿಗೆ ಖಾತರಿಯಾದ ವರಮಾನ ಸಿಗುವಂತೆ ನೋಡಿಕೊಂಡಿವೆ. ಆದ್ದರಿಂದ, ಎಫ್‌ಸಿಐನ ಕಾರ್ಯಾಚರಣೆಗಳನ್ನು ಕೇವಲ ಮೂರು ರಾಜ್ಯಗಳಿಗೆ ಸೀಮಿತಗೊಳಿಸದೆ, ಎಲ್ಲ ರಾಜ್ಯಗಳಿಗೂ ವಿಸ್ತರಿಸುವುದು ಬಹಳ ಮುಖ್ಯವಾಗುತ್ತದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ರೈತ ಕೃಷಿಯ ಮೇಲೆ ಕಾರ್ಪೊರೇಟ್ ಅತಿಕ್ರಮಣವು ರೈತರ ಆದಾಯವನ್ನು ಕಸಿಯುವ ಕಾರಣದಿಂದಾಗಿ ಅದೊಂದು ರೈತರು ಮತ್ತು ಕಾರ್ಪೊರೇಟ್‌ಗಳ ನಡುವಿನ  ದ್ವಿಪಕ್ಷೀಯ ಸಮಸ್ಯೆ ಎಂಬ ಪ್ರತಿಪಾದನೆ ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಎಂಎಸ್‌ಪಿಯಲ್ಲಿ ಸೂಕ್ತ ಏರಿಕೆ ಮಾಡಿ ಅದನ್ನು ಇಡೀ ದೇಶಕ್ಕೆ ವಿಸ್ತರಿಸುವ ಕ್ರಮವು ಕಾರ್ಯಸಾಧುವಲ್ಲ ಎಂಬ ಪ್ರತಿಪಾದನೆ, ಈ ಎರಡೂ ಪ್ರತಿಪಾದನೆಗಳೂ ಅಸಮರ್ಥನೀಯವಾಗಿವೆ. ಇಂತಹ ಪ್ರತಿಪಾದನೆಗಳು ರೈತ ಚಳುವಳಿಯನ್ನು ದುರ್ಬಲಗೊಳಿಸುತ್ತವೆ. ಇವಕ್ಕೆ ಅವಕಾಶ ನೀಡಬಾರದು.

ಅನು: ಕೆ.ಎಂ. ನಾಗರಾಜ್

Donate Janashakthi Media

Leave a Reply

Your email address will not be published. Required fields are marked *