ನವದೆಹಲಿ: ಅಲ್ಪಸಂಖ್ಯಾತ ಸಂಸ್ಥೆಯನ್ನು ನಿಯಂತ್ರಿಸುವುದಕ್ಕಾಗಿ ಸಂಸತ್ತು ಕಾಯಿದೆ ಜಾರಿಗೆ ತಂದಿದೆ ಎಂದಾಗಲೀ ಇಲ್ಲವೇ ಸಂಸ್ಥೆಯನ್ನು ಅಲ್ಪಸಂಖ್ಯಾತರಲ್ಲದ ಸದಸ್ಯರು ನಿರ್ವಹಿಸುತ್ತಿದ್ದಾರೆ ಎಂಬ ಕಾರಣಕ್ಕಾಗಲೀ ಶಿಕ್ಷಣ ಸಂಸ್ಥೆಯ ಅಲ್ಪಸಂಖ್ಯಾತ ಸ್ಥಾನಮಾನ ಕೊನೆಗೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ
ಆ ಮೂಲಕ, ಎಸ್ ಅಜೀಜ್ ಬಾಷಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಿಗಢ ವಿವಿಯನ್ನು ನಿಯಂತ್ರಿಸಲು ಸಂಸತ್ತು ಕಾಯಿದೆ ಜಾರಿಗೆ ತಂದಿರುವ ಕಾರಣ ಅದರ ಅಲ್ಪಸಂಖ್ಯಾತ ಗುಣ ಹೊರಟು ಹೋಗಿದೆ ಎಂದು 1968ರಲ್ಲಿ ನೀಡಿದ್ದ ತೀರ್ಪನ್ನು ಸಿಜೆಐಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ , ಸೂರ್ಯ ಕಾಂತ್, ಜೆ ಬಿ ಪರ್ದಿವಾಲಾ, ದೀಪಂಕರ್ ದತ್ತಾ , ಮನೋಜ್ ಮಿಶ್ರಾ ಹಾಗೂ ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ರದ್ದುಗೊಳಿಸಿತು.
ಕಾಯಿದೆ ಜಾರಿಯಾಗಿರುವುದರಿಂದ ಅಲ್ಪಸಂಖ್ಯಾತ ಗುಣ ಕೊನೆಗೊಳ್ಳುತ್ತದೆ ಎಂದು ಅಜೀಜ್ ಭಾಷಾ ಪ್ರಕರಣದಲ್ಲಿ ನೀಡಲಾದ ತೀರ್ಪನ್ನು ಬದಿಗೆ ಸರಿಸಲಾಗಿದೆ. ಎಎಂಯು ಅಲ್ಪಸಂಖ್ಯಾತವೇ ಅಲ್ಲವೇ ಎಂಬುದನ್ನು ಇಂದು ನೀಡಿದ ತೀರ್ಪಿನ ಪ್ರಕಾರ ನಿರ್ಧರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: ವಾಯುಭಾರ ಕುಸಿತದಿಂದ 4 ದಿನ ಭಾರೀ ಮಳೆ: ಐಎಂಡಿ ಎಚ್ಚರಿಕೆ
ಸಂಸ್ಥೆಯೊಂದು ಅದು ಅಲ್ಪಸಂಖ್ಯಾತ ಸಮುದಾಯದ್ದೇ ಎಂಬುದನ್ನು ನಿರ್ಧರಿಸಲು, ಸಂಸ್ಥೆಯನ್ನು ಸ್ಥಾಪಿಸಿದವರು ಯಾರು ಎಂಬುದನ್ನು ಗಮನಿಸಬೇಕಿದೆ ಎಂದು ನ್ಯಾಯಾಲಯ ಹೇಳಿದೆ.
“ನ್ಯಾಯಾಲಯ ಸಂಸ್ಥೆಯ ಮೂಲವನ್ನು ಪರಿಗಣಿಸಬೇಕಾಗುತ್ತದೆ. ಮತ್ತು ಸಂಸ್ಥೆಯನ್ನು ಸ್ಥಾಪಿಸುವ ಹಿಂದಿನ ಆಲೋಚನೆ ಯಾರದ್ದು ಎಂಬುದನ್ನು ಗಮನಿಸಬೇಕು. ಭೂಮಿಗಾಗಿ ಯಾರು ಹಣ ಪಡೆದರು ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಇದರಿಂದ ಸಹಾಯವಾಗಿದೆಯೇ ಎಂಬುದನ್ನು ನೋಡಬೇಕು” ಎಂದು ನ್ಯಾಯಾಲಯ ಹೇಳಿದೆ.
ಅಲ್ಪಸಂಖ್ಯಾತರಲ್ಲದ ಸದಸ್ಯರ ಆಡಳಿತ ಸಂಸ್ಥೆಯ ಅಲ್ಪಸಂಖ್ಯಾತ ಗುಣವನ್ನು ಕಸಿದುಕೊಳ್ಳುವುದಿಲ್ಲ ಎಂದು ಅದು ಹೇಳಿದೆ. “ಅಲ್ಪಸಂಖ್ಯಾತ ಸಂಸ್ಥೆಯಾಗಲು, ಅದನ್ನು ಅಲ್ಪಸಂಖ್ಯಾತರು ಸ್ಥಾಪಿಸಿದ್ದರೆ ಸಾಕು. ಅಲ್ಪಸಂಖ್ಯಾತ ಸದಸ್ಯರೇ ಆಡಳಿತ ನಡೆಸಬೇಕು ಎಂದೇನೂ ಇಲ್ಲ ಎಂದು ನಾವು ಭಾವಿಸಿದ್ದೇವೆ. ಅಲ್ಪಸಂಖ್ಯಾತ ಸಂಸ್ಥೆಗಳು ಜಾತ್ಯತೀತ ಶಿಕ್ಷಣಕ್ಕೆ ಒತ್ತು ನೀಡಲು ಬಯಸಿದ್ದರೆ ಅದಕ್ಕಾಗಿ ಅಲ್ಪಸಂಖ್ಯಾತ ಸದಸ್ಯರು ಆಡಳಿತದಲ್ಲಿ ಇರುವ ಅಗತ್ಯ ಬಿದ್ದಿರುವುದಿಲ್ಲ” ಎಂದು ಪೀಠ ತೀರ್ಪು ನೀಡಿದೆ.
ಹೀಗಾಗಿ, ಸರ್ಕಾರ ಕಾಯಿದೆ ತರುವ ಮೂಲಕ ಅದನ್ನು ನಿಯಂತ್ರಿಸುತ್ತದೆ ಎಂಬ ಕಾರಣಕ್ಕಾಗಿ ಸಂಸ್ಥೆಯ ಅಲ್ಪಸಂಖ್ಯಾತ ಗುಣ ಅಳಿಸಿಹೋಗುವುದಿಲ್ಲ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಅಲ್ಪಸಂಖ್ಯಾತ ಗುಣವನ್ನು ಉಲ್ಲಂಘಿಸದೆ ಇರುವವರೆಗೆ ಸರ್ಕಾರ ಅವುಗಳನ್ನು ನಿಯಂತ್ರಿಸಬಹುದು ಎಂದು ಅದು ಹೇಳಿದೆ.
ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರಿಗೆ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಮತ್ತು ನಿರ್ವಹಿಸಲು ಅಧಿಕಾರ ನೀಡುವ ಸಂವಿಧಾನದ 30ನೇ ವಿಧಿ ಸಂವಿಧಾನವು ಜಾರಿಗೆ ಬರುವ ಮೊದಲು ಅಲ್ಪಸಂಖ್ಯಾತರು ಸ್ಥಾಪಿಸಿದ ಸಂಸ್ಥೆಗಳಿಗೂ ಅನ್ವಯವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: ಉಪನ್ಯಾಸಕ ಎಂದು ಹೇಳಿ ನಕಲಿ ದಾಖಲೆ ಸಲ್ಲಿಸಿ ₹15 ಲಕ್ಷ ಸಾಲ ಪಡೆದು ವಂಚನೆ
“ಸಂವಿಧಾನವು ಜಾರಿಗೆ ಬಂದ ನಂತರ ಸ್ಥಾಪಿಸಲಾದ ಸಂಸ್ಥೆಗಳಿಗೆ ಮಾತ್ರ ಅನ್ವಯಿಸಿದರೆ 30 ನೇ ವಿಧಿ ದುರ್ಬಲಗೊಳ್ಳುತ್ತದೆ. ಹೀಗಾಗಿ, ಸಂವಿಧಾನವು ಜಾರಿಗೆ ಬರುವ ಮೊದಲು ಸ್ಥಾಪಿಸಲಾದ ಅಲ್ಪಸಂಖ್ಯಾತರಿಂದ ಸ್ಥಾಪಿಸಲಾದ ಶಿಕ್ಷಣ ಸಂಸ್ಥೆಗಳನ್ನು ಸಹ 30ನೇ ವಿಧಿಯ ಮೂಲಕ ನಿಯಂತ್ರಿಸಲಾಗುತ್ತದೆ.” ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅಲ್ಪಸಂಖ್ಯಾತ ಸಂಸ್ಥೆಯನ್ನು ನಿಯಂತ್ರಿಸುವುದಕ್ಕಾಗಿ ಸಂಸತ್ತು ಕಾಯಿದೆ ಜಾರಿಗೆ ತಂದಿದೆ ಎಂದಾಗಲೀ ಇಲ್ಲವೇ ಸಂಸ್ಥೆ ಸ್ಥಾಪನೆಯ ದಿನಾಂಕದ ಕಾರಣಕ್ಕಾಗಲೀ ಅಥವಾ ಸಂಸ್ಥೆಯನ್ನು ಅಲ್ಪಸಂಖ್ಯಾತರಲ್ಲದ ಸದಸ್ಯರು ನಿರ್ವಹಿಸುತ್ತಿದ್ದಾರೆ ಎಂಬ ಹಿನ್ನೆಲೆಯಿಂದಾಗಲೀ ಅದರ ಅಲ್ಪಸಂಖ್ಯಾತ ಸ್ಥಾನಮಾನ ಕೊನೆಗೊಳ್ಳದು ಎಂದು ಅದು ಹೇಳಿದೆ.
ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರಿಗೆ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಮತ್ತು ನಿರ್ವಹಿಸಲು ಅಧಿಕಾರ ನೀಡುವ ಸಂವಿಧಾನದ 30ನೇ ವಿಧಿಯಡಿ ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯ ಅಲ್ಪಸಂಖ್ಯಾತ ಸ್ಥಾನಮಾನ ಹೊಂದಿದೆಯೇ ಎಂಬ ಕುರಿತಂತೆ ನ್ಯಾಯಾಲಯಕ್ಕೆ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಎಂಟು ದಿನಗಳ ಕಾಲ ವಿಚಾರಣೆ ನಡೆಸಿದ ನಂತರ ಸುಪ್ರೀಂ ಕೋರ್ಟ್ ಕಳೆದ ಫೆಬ್ರವರಿಯಲ್ಲಿ ತೀರ್ಪು ಕಾಯ್ದಿರಿಸಿತ್ತು .
ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ವಕೀಲ ಕನು ಅಗರವಾಲ್ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದರು. ವಿವಿ ಪರ ಹಿರಿಯ ವಕೀಲ ರಾಜೀವ್ ಧವನ್ ವಾದ ಮಂಡಿಸಿದರು. ಎಎಂಯು ಹಳೆಯ ವಿದ್ಯಾರ್ಥಿಗಳು ಸಂಘವನ್ನು ಹಿರಿಯ ವಕೀಲ ಕಪಿಲ್ ಸಿಬಲ್ ಪ್ರತಿನಿಧಿಸಿದ್ದರು.
ಅರ್ಜಿದಾರರಾದ ಹಾಜಿ ಮುಖೀತ್ ಅಲಿ ಖುರೇಷಿ ಪರ ಹಿರಿಯ ವಕೀಲ ಶದನ್ ಫರಾಸತ್ ಮತ್ತು ವಕೀಲರಾದ ಹೃಷಿಕಾ ಜೈನ್, ಅಮನ್ ನಖ್ವಿ ನತಾಶಾ ಮಹೇಶ್ವರಿ ಮತ್ತು ಗೌತಮ್ ಭಾಟಿಯಾ ವಾದ ಮಂಡಿಸಿದರು. ಉಳಿದ ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಸಲ್ಮಾನ್ ಖುರ್ಷಿದ್, ಎಂಆರ್ ಶಂಶಾದ್ ಮತ್ತು ವಕೀಲ ಅನಾಸ್ ತನ್ವೀರ್ ಕೂಡ ವಾದ ಮಂಡಿಸಿದರು. ಎಎಂಯುಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ವಿರೋಧಿಸಿದ್ದ ಖಾಸಗಿ ಪ್ರತಿವಾದಿ (ವಿವೇಕ್ ಕಸನ) ಪರವಾಗಿ ಹಿರಿಯ ವಕೀಲ ರಾಕೇಶ್ ದ್ವಿವೇದಿ ವಾದ ಮಂಡಿಸಿದ್ದರು. ಇತರ ಪ್ರತಿವಾದಿಗಳನ್ನು ಹಿರಿಯ ವಕೀಲರಾದ ನೀರಜ್ ಕಿಶನ್ ಕೌಲ್ , ಯತೀಂದರ್ ಸಿಂಗ್ , ಗುರು ಕೃಷ್ಣಕುಮಾರ್ , ವಿನಯ್ ನವರೆ ಮತ್ತು ಅರ್ಚನಾ ಪಾಠಕ್ ದವೆ ಪ್ರತಿನಿಧಿಸಿದ್ದರು.
ಇದನ್ನೂ ನೋಡಿ: ಅನ್ನದಲ್ಲಿ ಹುಳು, ಕೊಳೆತ ತರಕಾರಿ ಇದನ್ನೆ ತಿನ್ರಿ ಅಂತಾರೆ ವಾರ್ಡ್‌ನ – ವಿದ್ಯಾರ್ಥಿಗಳ ಪ್ರತಿಭಟನೆJanashakthi Media