8480 ಎಕರೆ ವಕ್ಫ್ ಆಸ್ತಿ ಕಬಳಿಕೆಯಾಗಿದ್ದು ಶೀಘ್ರ ಇತ್ಯರ್ಥವಾಗಲಿದೆ: ಸಚಿವೆ ಶಶಿಕಲಾ ಜೊಲ್ಲೆ

ಬೆಂಗಳೂರು: ವಕ್ಫ್ ವ್ಯಾಪ್ತಿಗೆ ಒಳಪಡುವ ಆಸ್ತಿಗಳ ಬಗ್ಗೆ ಸಮೀಕ್ಷೆ ಕೈಗೊಳ್ಳಲಾಗಿದ್ದು, 1,05,855 ಎಕರೆಯಷ್ಟು ಭೂಮಿ ಗುರಿತಿಸಲಾಗಿದೆ. ಇದರಲ್ಲಿ 8,480 ಎಕರೆ ವಕ್ಫ್ ಆಸ್ತಿ ಒತ್ತುವರಿಯಾಗಿರುವುದು ತಿಳಿದು ಬಂದಿದೆ ಎಂದು ಮುಜರಾಯಿ, ವಕ್ಫ್ ಹಾಗೂ ಹಜ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಸಚಿವರು ವಕ್ಫ್ ಮತ್ತು ಹಜ್ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಗುರುತಿಸಲಾಗಿರುವ ಜಮೀನುಗಳ ಪೈಕಿ 32,192 ವಕ್ಫ್ ಆಸ್ತಿ ನೋಂದಣಿಯಾಗಿದೆ. ಒತ್ತುವರಿಯಾಗಿರುವ ಆಸ್ತಿಗಳ ಪೈಕಿ 1,189 ಪ್ರಕರಣಗಳು ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿದೆ. ಆದಷ್ಟು ಶೀಘ್ರದಲ್ಲಿಯೇ ಇತ್ಯರ್ಥಗೊಳಿಸಲು ಕ್ರಮವಹಿಸಲಾಗಿದೆ ಎಂದರು.

ಇದನ್ನು ಓದಿ: ಖಾತೆ ಬದಲಾವಣೆ – ಆನಂದ್ ಸಿಂಗ್ ಮತ್ತೆ ಮುನಿಸು

1964-75ರಲ್ಲಿ ಮಾಡಿದ ಮೊದಲ‌ ಸಮೀಕ್ಷೆಯಲ್ಲಿ 1,02,120 ಎಕರೆ ಜಮೀನನ್ನು ವಕ್ಫ್ ಕಾಯ್ದೆಯಡಿ ನೋಂದಾಯಿಸಲಾಗಿದೆ. 2ನೇ ಸಮೀಕ್ಷೆಯಲ್ಲಿ 3,735 ಎಕರೆಯ 12,054 ಸ್ಥಿರಾಸ್ತಿಯನ್ನು ನೋಂದಾಯಿಸಲಾಗಿದೆ. ಒಟ್ಟು 8,480 ಎಕರೆ ವಕ್ಫ್ ಜಮೀನು ಒತ್ತುವರಿಯಾಗಿದೆ. ಈ ಪೈಕಿ 1,189 ಪ್ರಕರಣಗಳು ಕೋರ್ಟ್​​ನಲ್ಲಿ ವಿಚಾರಣೆ ಹಂತದಲ್ಲಿದೆ ಎಂದು ತಿಳಿಸಿದರು.

ಹಜ್ ವಕ್ಫ್ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ್ದೇನೆ. ರಾಜ್ಯದ 149 ತಾಲ್ಲೂಕುಗಳ ವಕ್ಫ್ ಆಸ್ತಿ ಗೆಜೆಟ್ ಹೊರಡಿಸಲಾಗಿದೆ. ವಕ್ಫ್ ಮಂಡಳಿಯಲ್ಲಿ ಖಾಲಿಯಾಗಿರುವ 284 ಹುದ್ದೆ ಹಾಗೂ ಮುಜರಾಯಿ ಇಲಾಖೆಯಲ್ಲಿ 48 ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಭರ್ತಿ ಮಾಡಲು ಶೀಘ್ರದಲ್ಲಿ ಕ್ರಮವಹಿಸಲಾಗುವುದು.

ವಕ್ಫ್ ಕಮಿಟಿಯಲ್ಲಿ ರೂ.105 ಕೋಟಿ ಅನುದಾನ ಇದೆ. ಬಡ ಮುಸ್ಲಿಂ ಸಮುದಾಯದವರಿಗೆ ಶೇಕಡ 5 ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ಮುಸ್ಲಿಂ ಮಹಿಳೆಯರಿಗೆ ಹೃದಯ ಹಾಗೂ ಕ್ಯಾನ್ಸರ್ ರೋಗ ಚಿಕಿತ್ಸೆಗೆ 1 ಲಕ್ಷ ರೂಪಾಯಿ  ಸಹಾಯಧನ ನೀಡಲಾಗುತ್ತದೆ. ವಕ್ಪ್ ಮಂಡಳಿಗೆ ಈ ಸಾರಿ ₹ 1.74 ಕೋಟಿ ಅನುದಾನ ನೀಡಲಾಗಿದೆ. ವೈದ್ಯಕೀಯ ಚಿಕಿತ್ಸೆಗೆ ಸಹಾಯಧನ ನೀಡುವುದು ವಿಳಂಬ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಸಚಿವರು ವಿವರಿಸಿದರು.

ಹಜ್‌ ಯಾತ್ರೆ

ಹಜ್ ಯಾತ್ರೆಗೆ ಪ್ರತಿ ವರ್ಷ ಹೋಗಲು ಅವಕಾಶ ಇದೆ. ಆದರೆ, 2019-2021ರಲ್ಲಿ ಕೋವಿಡ್ ಕಾರಣದಿಂದ ಹಜ್ ಯಾತ್ರಿಕರು ಪ್ರವಾಸ ಕೈಗೊಂಡಿರಲಿಲ್ಲ. ಹಾಗಾಗಿ ಹಜ್ ಭವನವನ್ನು ಕೋವಿಡ್‌ ಆರೈಕೆ ಕೇಂದ್ರವಾಗಿ ಮಾರ್ಪಡಿಸಲಾಗಿದೆ. ಅಲ್ಲದೆ, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ದೇವಸ್ಥಾನಗಳ ಸ್ವಚ್ಚತೆಗೆ ಕ್ರಮ

ರಾಜ್ಯದಲ್ಲಿರುವ ದೇವಸ್ಥಾನಗಳು, ಹೊರರಾಜ್ಯದಲ್ಲಿರುವ ದೇವಸ್ಥಾನಗಳ ಸ್ವಚ್ಚತೆಗೆ ಆದ್ಯತೆ ನೀಡಲಾಗುವುದು. ದೇವಸ್ಥಾನಗಳ ಆಸ್ತಿ ಸಮೀಕ್ಷೆ ಹಾಗೂ ಯಾತ್ರಿ ನಿವಾಸಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲಿ 34,563 ಮುಜರಾಯಿ ದೇವಸ್ಥಾನಗಳಿವೆ. ವಾರ್ಷಿಕ ರೂ.25 ಲಕ್ಷ ವರಮಾನ ಮೀರಿದ ದೇವಸ್ಥಾನಗಳನ್ನು ಎ ಕೆಟಗೆರಿ, ರೂ. 5 ಲಕ್ಷ ಮೇಲ್ಪಟ್ಟು ವರಮಾನ ಇರುವ ದೇವಸ್ಥಾನಗಳನ್ನು ಬಿ ಹಾಗೂ 5 ಲಕ್ಷ ಕ್ಕಿಂತ ಕಡಿಮೆ ವರಮಾನ ಇರುವ ದೇವಸ್ಥಾನಗಳನ್ನು ಸಿ ಕೆಟಗೆರಿಯಲ್ಲಿ ವಿಂಗಡಿಸಲಾಗಿದೆ’ ಎಂದರು.

ಇದನ್ನು ಓದಿ: ಬೊಮ್ಮಾಯಿ ಸರಕಾರದ ಅವಧಿ ಅತ್ಯಲ್ಪ ಮಾತ್ರ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭವಿಷ್ಯ

ಅನೇಕ ದೇವಾಲಯಗಳಲ್ಲಿ ಭಕ್ತರಿಗೆ ಮೂಲ ಸೌಕರ್ಯ ಕೊರತೆಗಳಿವೆ. ಪಂಡರಾಪುರ, ಗುಡ್ಡಾಪುರ, ತುಳಜಾಭವಾನಿ ದೇವಾಲಯ ಸೇರಿದಂತೆ ಅನೇಕ ದೇವಾಲಯಗಳಿಗೆ ಭಕ್ತರು ನಡೆದು ಹೋಗುತ್ತಾರೆ. ಇಂತಹ ದೇವಾಲಗಳ ಬಳಿ ಯಾತ್ರಿ ನಿವಾಸಲಾಗುವುದು.

ಸಪ್ತಪದಿ ಕಾರ್ಯಕ್ರಮ

ಸರಕಾರವು ಜಾರಿಗೆ ತಂದಿರುವ ಸಪ್ತಪದಿ ಕಾರ್ಯಕ್ರಮ ಮುಂದುವರಿಯಲಿದೆ. ಕೋವಿಡ್​ನಿಂದಾಗಿ 2 ವರ್ಷದಿಂದ ಯಶಸ್ವಿಯಾಗಿಲ್ಲ. ಈ ಸಪ್ತಪದಿ ಯೋಜನೆ ಬಗ್ಗೆ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಅರಿವು ಇಲ್ಲ. ಹಾಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸುತ್ತೇನೆ ಎಂದು ಸಚಿವೆ ಹೇಳಿದರು.

ಖಾತೆ ಬದಲಾವಣೆ ಬಗ್ಗೆ

ಖಾತೆ ಬದಲಾವಣೆ ಬಗ್ಗೆ ಪ್ರಸ್ತಾಪಿಸಿದ ಸಚಿವರು ಖಾತೆ ಬದಲಾವಣೆಯ ಬಗ್ಗೆ ನನಗೆ ಬೇಸರವಿಲ್ಲ. ಪಕ್ಷದ ನಾಯಕರು ನೀಡುವ ಜವಾಬ್ದಾರಿ ವಹಿಸಿಕೊಂಡು ಅದನ್ನು ಸಮರ್ಥವಾಗಿ ನಿಭಾಸುತ್ತೇನೆ. ಧಾರ್ಮಿಕ ಹಿನ್ನಲೆಯಿಂದ ಬಂದ ನನಗೆ ಈ ಖಾತೆ ಸೂಕ್ತವಾಗಿದೆ. ಹಜ್ ಮತ್ತು ವಕ್ಫ್ ಖಾತೆ ನೀಡಿರುವುದೂ ಖುಷಿ ತಂದಿದೆ. ಎರಡೂ ಇಲಾಖೆಗಳ ಬಗ್ಗೆ ಇನ್ನಷ್ಟು ಮಾಹಿತಿ ಪಡೆದುಕೊಂಡು ಒಳ್ಳೆಯ ಕೆಲಸ ಮಾಡುತ್ತೇನೆ ಎಂದರು.

 

Donate Janashakthi Media

Leave a Reply

Your email address will not be published. Required fields are marked *