ಬಳ್ಳಾರಿ: ಸುಮಾರು 750 ಮನೆಗಳುಳ್ಳ ಈ ಗ್ರಾಮದಲ್ಲಿ ಇರುವವರೆಲ್ಲಾ ಸಣ್ಣ ರೈತರೇ. ಬರದ ನಡುವೆಯೂ ಹೇಗೋ ಕೃಷಿ ಮಾಡಿಕೊಂಡು ಬದುಕುತ್ತಿದ್ದರು. ಆದರೆ, ಈ ಗ್ರಾಮದ ಜನರನ್ನ ಬದುಕನ್ನ ಕಸಿದುಕೊಂಡಿದ್ದು ಗ್ರಾಮದ ಸುತ್ತಮುತ್ತಲಿರುವ ಕೈಗಾರಿಕೆಗಳು. ಈ ದ್ವೀಪದಂತಿರುವ ಗ್ರಾಮದ ಸುತ್ತಮುತ್ತ ಒಟ್ಟು 8-9 ಕಾರ್ಖಾನೆಗಳಿವೆ. ವಿದ್ಯುತ್ ಉತ್ಪಾದನಾ ಸ್ಥಾವರ ಮತ್ತು ಇತರ ಗಣಿಗಾರಿಕೆ ಕಂಪನಿಗಳಿಂದ ಉತ್ಪತ್ತಿಯಾಗುವ ಧೂಳು ಹಳ್ಳಿಯ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರದೆ. ಬಳ್ಳಾರಿಯ ಸುಲ್ತಾನ್ ಪುರ ಗ್ರಾಮದಲ್ಲಿ ಸುಮಾರು 3ಸಾವಿರಕ್ಕಿಂತ ಅಧಿಕ ಮಂದಿ ವಾಸಿಸುತ್ತಿದ್ದು ಧೂಳಿನ ಮಾಲಿನ್ಯದಿಂದ ನಿವಾಸಿಗಳು ತತ್ತರಿಸಿ ಹೋಗಿದ್ದಾರೆ.
ಈ ಗ್ರಾಮದಲ್ಲಿ ಇರುವವರೆಲ್ಲಾ ಸಣ್ಣ ರೈತರೇ. ಬರದ ನಡುವೆಯೂ ಹೇಗೋ ಕೃಷಿ ಮಾಡಿಕೊಂಡು ಬದುಕುತ್ತಿದ್ದರು. ಆದರೆ, ಈ ಗ್ರಾಮದ ಜನರನ್ನ ಬದುಕನ್ನ ಕಸಿದುಕೊಂಡಿದ್ದು ಗ್ರಾಮದ ಸುತ್ತಮುತ್ತಲಿರುವ ಕೈಗಾರಿಕೆಗಳು. ಇಡೀ ಗ್ರಾಮದ ಸುತ್ತಲೂ ಕಾರ್ಖಾನೆಗಳಿವೆ. ಅದರಲ್ಲಿಯೂ ಕಳೆದ ಎರಡು ವರ್ಷಗಳ ಹಿಂದೆ ಆರಂಭವಾದ ಜಿಂದಾಲ್ ಸಮೂಹದ ಎಪ್ಸ್ ಲಿನ್ ಕಾರ್ಬೈಡ್ ಪ್ರೈವೇಟ್ ಲಿಮಿಟೆಡ್ ನ (ಈಸಿಪಿಎಲ್) ಕೋಲ್ ಟಾರ್ ಕೆಮಿಕಲ್ಸ್ ಕಾರ್ಖಾನೆಯಿಂದಾಗಿ ಗ್ರಾಮದಲ್ಲಿ ಜನರು ಜೀವನ ಸಾಗಿಸಲು ಸಾಧ್ಯವಾಗದಂತಹ ಪರಿಸರ ನಿರ್ಮಾಣವಾಗಿದೆ. ಅನೇಕರು ಕಿಡ್ನಿ ಸಮಸ್ಯೆ, ಶ್ವಾಶಕೋಶ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅನೇಕರಿಗೆ ಚರ್ಮದ ಖಾಯಿಲೆ ಅಂಟಿಕೊಂಡಿದೆ. ಒಟ್ಟಾರೆ ಕಾರ್ಖಾನೆಯ ಧೂಳು ಜನರ ಬದುಕನ್ನು ಹಿಂಡಿಹಿಪ್ಪೆ ಮಾಡಿದೆ.
ಇದನ್ನೂ ಓದಿ : ಬಳ್ಳಾರಿ ಗಣಿಗಾರಿಕೆ: ಪರಿಸರ ವಿನಾಶ-ಅದರ ಪುನಶ್ಚೇತನ
ತಮ್ಮ ತಂದೆ, ತಾತ, ಮುತ್ತಾತ್ತಂದಿರು ಬಾಳಿ ಬದುಕಿದ್ದ ಊರಲ್ಲಿ ತಾವೂ ಕೂಡ ಜೀವನ ಕಟ್ಟಿಕೊಳ್ಳಲು ಮುಂದಾಗಿದ್ದ ಈ ಗ್ರಾಮಸ್ಥರಿಗೆ ಈಗ ಕಾರ್ಖಾನೆಗಳು ಮುಳುವಾಗಿವೆ. ಕಾರ್ಖಾನೆಗಳು ಹೊರಚೆಲ್ಲುವ ಧೂಳು, ರಾಸಾಯನಿಕ ವಿಷದಿಂದಾಗಿ ಬದುಕುವುದೇ ಅಸಾಧ್ಯವಾಗಿದೆ. ಹಲವಾರು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಜಿಲ್ಲಾಡಳಿತ ಹಾಗೂ ಸರಕಾರ ಗಮನ ನೀಡದಿರುವುದು ಈ ಗ್ರಾಮದ ಜನರಲ್ಲಿ ಬೇಸರ ಮೂಡಿಸಿದೆ. ಗ್ರಾಮದ ಜನರ ಸಮಸ್ಯೆ ಬಗ್ಗೆ ಸಾಕಷ್ಟು ಬಾರಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರಕ್ಕೂ ಈ ಬಗ್ಗೆ ಮನವಿ ಮಾಡಿ ರೋಸಿ ಹೋದ ಗ್ರಾಮಸ್ಥರು ಈಗ ಊರ ತೊರೆಯುವ ನಿರ್ಧಾರಕ್ಕೆ ಇಡೀ ಗ್ರಾಮ ಮುಂದಾಗಿದೆ.
ಗ್ರಾಮಸ್ಥರು ಪದೇ ಪದೇ ಮನವಿ ಮಾಡಿದ ನಂತರ ಮೂರು ವರ್ಷಗಳ ನಂತರ ಸರ್ಕಾರ ಹಾಗೂ ಸ್ಥಳೀಯ ಆಡಳಿತವು ಇಡೀ ಗ್ರಾಮವನ್ನು ಬೇರೆಡೆಗೆ ಸ್ಥಳಾಂತರಿಸಲು ಮುಂದಾಗಿದೆ. ಆದರೆ ಗ್ರಾಮಸ್ಥರು ತಮ್ಮದೇ ಆದ ಕೆಲವು ಷರತ್ತುಗಳೊಂದಿಗೆ ಬೇರೆಡೆ ಶಿಫ್ಟ್ ಆಗಲು ಮನಸ್ಸು ಮಾಡಿದ್ದಾರೆ. ಸ್ಥಳಾಂತರವಾದ ನಂತರ ಸರ್ಕಾರ ತಾನು ಕೊಟ್ಟ ಭರವಸೆ ನೆರೆವೇರಿಸುವುದಿಲ್ಲ ಎಂದು ಗ್ರಾಮದ ಹಲವರು ಅನುಮಾನ ವ್ಯಕ್ತ ಪಡಿಸುತ್ತಿದ್ದಾರೆ. ಹೀಗಾಗಿ, ಈ ಕ್ರಮ ಕೈಗೊಳ್ಳುವ ಮೊದಲು ಕರ್ನಾಟಕ ಸರ್ಕಾರದಿಂದ ಭರವಸೆ ನೀಡಬೇಕು ಎಂದು ಈ ಗ್ರಾಮದ ಸದಸ್ಯರು ಒತ್ತಾಯಿಸಿದ್ದಾರೆ.
ಕಾರ್ಖಾನೆಗಳ ದುರಾಸೆ, ಅಧಿಕಾರಿಗಳ ನಿರ್ಲಕ್ಷ್ಯತನದಿಂದಾಗಿ ತಲೆತಲಾಂತರದಿಂದ ಹಿರಿಯಕರು ಬಾಳಿದ ಊರು ತೊರೆಯುವುದು ಗ್ರಾಮಸ್ಥರಿಗೆ ಅನಿವಾರ್ಯವಾಗಿದೆ. ಇಲ್ಲ ಇದೇ ಧೂಳಿನಲ್ಲಿ ಬದುಕು ಅಂತ್ಯಗೊಳಿಸಬೇಕಿದೆ. ಇನ್ನು ಗ್ರಾಮ ತೊರೆದರೂ ಹೋಗುವುದೆಲ್ಲಿಗೆ ಎಂಬ ಜಿಜ್ಞಾಸೆ ಕೂಡ ಗ್ರಾಮಸ್ಥರಲ್ಲಿ ಮೂಡಿದೆ. ಇನ್ನಾದರೂ ಅಧಿಕಾರಿಗಳು ಈ ಬಗ್ಗೆ ಎಚ್ಚೇತ್ತು ಗ್ರಾಮಸ್ಥರನ್ನು ಸುರಕ್ಷಿತಸ್ಥಳಕ್ಕೆ ಸ್ಥಳಾಂತರ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.