ಹಾಸನ | ನಲ್ಲಿ ₹1ಕ್ಕೆ ಹಾಲು ಮಾರಾಟ: ಕೆಪಿಆರ್‌ಎಸ್ ಆಕ್ರೋಶ

ಅಮಿತ್ ಶಾ ರಾಜೀನಾಮೆಗೆ ಆಗ್ರಹ, ಅಮೇಜಾನ್–ಫ್ಲಿಪ್‌ಕಾರ್ಟ್ ಕಚೇರಿ ಎದುರು ಪ್ರತಿಭಟನೆ ಎಚ್ಚರಿಕೆ
ಹಾಸನ: ಆನ್‌ಲೈನ್‌ ವ್ಯಾಪಾರ ವೇದಿಕೆಗಳಲ್ಲಿ ಒಂದು ಲೀಟರ್ ಹಾಲನ್ನು ₹1ಕ್ಕೆ ಮಾರಾಟಕ್ಕೆ ಅವಕಾಶ ಕಲ್ಪಿಸಿರುವುದು ಖಂಡನೀಯವಾಗಿದ್ದು, ಇದು ಹೈನುಗಾರಿಕೆ ರೈತರ ಜೀವನೋಪಾಯಕ್ಕೆ ತೀವ್ರ ಹೊಡೆತ ನೀಡುವ ಕ್ರಮವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಹಾಸನ ಜಿಲ್ಲಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.

ಅಮೇಜಾನ್ ಸಹಭಾಗಿತ್ವದ ಫ್ಲಿಪ್‌ಕಾರ್ಟ್‌ನಲ್ಲಿ ಒಂದು ಲೀಟರ್ ಹಾಲನ್ನು ₹1ಕ್ಕೆ ಮಾರಾಟ ಮಾಡುವ ಕ್ರಮ ರೈತರ ಆಕ್ರೋಶವನ್ನು ಆಹ್ವಾನಿಸುವಂತದ್ದಾಗಿದೆ. ಕೂಡಲೇ ಈ ರೀತಿಯ ಮಾರಾಟವನ್ನು ನಿಲ್ಲಿಸಿ ಆನ್‌ಲೈನ್ ವೇದಿಕೆಗಳ ಮೇಲೆ ನಿರ್ಬಂಧ ಹೇರಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಕೆಪಿಆರ್‌ಎಸ್ ಆಗ್ರಹಿಸಿದೆ.

ರಾಜ್ಯದಲ್ಲಿ ಕೋಟ್ಯಾಂತರ ರೈತರು ಹೈನುಗಾರಿಕೆಯನ್ನು ಅವಲಂಬಿಸಿಕೊಂಡಿದ್ದು, ಇದೇ ಅವರ ಪ್ರಮುಖ ಜೀವನೋಪಾಯವಾಗಿದೆ. ಆದರೆ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ರೈತರಿಗೆ ಉತ್ಪಾದನಾ ವೆಚ್ಚ ಪಾವತಿಸಲು ಮತ್ತು ಸಂಗ್ರಹಿಸಿದ ಹಾಲನ್ನು ಸಂಪೂರ್ಣವಾಗಿ ಮಾರಾಟ ಮಾಡಲು ಸವಾಲು ಎದುರಿಸುತ್ತಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಅಮೇಜಾನ್ ಹಾಗೂ ಫ್ಲಿಪ್‌ಕಾರ್ಟ್ ಮೂಲಕ ನಡೆಯುತ್ತಿರುವ ಈ ರೀತಿಯ ಮಾರಾಟ ಸಹಕಾರಿ ಹಾಲು ಒಕ್ಕೂಟವನ್ನು ಮತ್ತಷ್ಟು ಬಿಕ್ಕಟ್ಟಿಗೆ ದೂಡುವ ಕುತಂತ್ರವಾಗಿದೆ ಎಂದು ಸಂಘ ಆರೋಪಿಸಿದೆ.

ಇದನ್ನೂ ಓದಿ : ಚುನಾವಣೆ: ಎಲ್‌ಡಿಎಫ್‌ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಈ ಮಾರಾಟವನ್ನು ಕೂಡಲೇ ನಿಲ್ಲಿಸದಿದ್ದರೆ ಅಮೇಜಾನ್ ಹಾಗೂ ಫ್ಲಿಪ್‌ಕಾರ್ಟ್ ಕಚೇರಿಗಳ ಎದುರು ಹೈನುಗಾರಿಕೆ ರೈತರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕೆಪಿಆರ್‌ಎಸ್ ಎಚ್ಚರಿಕೆ ನೀಡಿದೆ.

ಇದೇ ವೇಳೆ ಸಹಕಾರಿ ಒಕ್ಕೂಟಗಳನ್ನು ರಕ್ಷಿಸಲು ವಿಫಲರಾಗಿರುವ ಹಾಗೂ ಸಹಕಾರಿ ಸಂಸ್ಥೆಗಳ ಮೇಲೆ ಕಾರ್ಪೊರೇಟ್ ದಾಳಿ ನಡೆಯಲು ಅವಕಾಶ ಮಾಡಿಕೊಡುತ್ತಿರುವ ಕೇಂದ್ರ ಸಹಕಾರಿ ಸಚಿವ ಅಮಿತ್ ಶಾ ಈ ಬೆಳವಣಿಗೆಯ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಸಂಘ ಒತ್ತಾಯಿಸಿದೆ.

ಹಿಂದೆ ರಿಲಯನ್ಸ್ ಸಂಸ್ಥೆ ಜಿಯೋ ಮೊಬೈಲ್ ಸಿಮ್‌ಗಳನ್ನು ಉಚಿತವಾಗಿ ನೀಡಿ ಕಡಿಮೆ ದರದಲ್ಲಿ ಡಾಟಾ ಪ್ಯಾಕ್‌ಗಳನ್ನು ಘೋಷಿಸಿ ಗ್ರಾಹಕರನ್ನು ಸೆಳೆಯಿತು. ಅದರ ಪರಿಣಾಮವಾಗಿ ಸರ್ಕಾರಿ ದೂರಸಂಪರ್ಕ ಸಂಸ್ಥೆಯಾದ ಬಿಎಸ್‌ಎನ್‌ಎಲ್ ನಷ್ಟಕ್ಕೆ ತಳ್ಳಲ್ಪಟ್ಟಿತು. ನಂತರ ಖಾಸಗಿ ಕಂಪನಿಗಳು ಡಾಟಾ ಪ್ಯಾಕ್‌ಗಳ ದರವನ್ನು ಹೆಚ್ಚಿಸಿ ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲು ಮಾಡುತ್ತಿರುವುದು ಕಂಡುಬರುತ್ತಿದೆ. ಇದೇ ಮಾದರಿಯಲ್ಲಿ ಈಗ ₹1ಕ್ಕೆ ಹಾಲು ಮಾರಾಟ ಮಾಡುವ ಮೂಲಕ ಹಾಲು ಉತ್ಪಾದಕರ ಸಹಕಾರಿ ಸಂಘಗಳನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸಂಘ ಆರೋಪಿಸಿದೆ.

ಹೀಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೂಡಲೇ ಮಧ್ಯಪ್ರವೇಶಿಸಿ ಹೈನುಗಾರಿಕೆ ರೈತರ ಜೀವನೋಪಾಯವನ್ನು ರಕ್ಷಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಹಾಸನ ಜಿಲ್ಲಾ ಸಮಿತಿ ಆಗ್ರಹಿಸಿದೆ.

ಈ ಕುರಿತು ಕೆಪಿಆರ್‌ಎಸ್ ಹಾಸನ ಜಿಲ್ಲಾ ಅಧ್ಯಕ್ಷ ಹೆಚ್.ಎಸ್. ಮಂಜುನಾಥ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಆರ್. ನವೀನ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ನೋಡಿ : ಎಲ್‌ಪಿಜಿ ಸಿಲಿಂಡರ್‌ ಬೆಲೆ ಏರಿಕೆಗೆ ಖಂಡನೆ: ಸೌದೆ ಒಲೆ ಹಚ್ಚಿ ಸಿಪಿಐ(ಎಂ) ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *