ಕಳೆದ ಹಲವು ವರ್ಷಗಳಿಂದ ರಾಜ್ಯದ ಸರಕಾರ ಮತ್ತು ಆಳುವ ಪಕ್ಷಗಳು ರಾಜ್ಯದ ಬಹುಸಂಖ್ಯಾತರ ಆಹಾರ ಹಕ್ಕುಗಳನ್ನು ನಿರ್ಬಂಧಿಸುವ ನಿಷೇಧಿಸುವ ಪ್ರಯತ್ನಗಳನ್ನು ನಡೆಸುತ್ತಿವೆ. ಕಳೆದ ವರ್ಷ ಕಲ್ಯಾಣ ಕರ್ನಾಟಕದಲ್ಲಿ ಬಿಸಿಯೂಟದಲ್ಲಿ ಮೊಟ್ಟೆ ವಿವಾದದ ಸಮಯದಲ್ಲಿ ಅದು ತಾರಕಕ್ಕೇರಿತ್ತು. ಆದರೆ ಬಿಸಿಯೂಟದಲ್ಲಿ ಮೊಟ್ಟೆಯನ್ನು ನಿಲ್ಲಿಸುವ ಪ್ರಯತ್ನ ತೀವ್ರ ಪ್ರತಿರೋಧದಿಂದಾಗಿ ವಿಫಲವಾಗಿತ್ತು. ಮಾತ್ರವಲ್ಲ ಇತ್ತೀಚೆಗೆ ಇನ್ನೂ ನಾಲ್ಕು ಜಿಲ್ಲೆಗಳಿಗೆ ಆ ಯೋಜನೆಯನ್ನು ವಿಸ್ತರಿಸುವ ಶಿಕ್ಷಣ ಇಲಾಖೆಯ ಪ್ರಸ್ತಾವ ಸರಕಾರದ ಮುಂದಿದೆ. ಆದರೆ ಈ ಉತ್ತಮ ಸಾಂಸ್ಕೃತಿಕ, ಪ್ರಜಾಸತ್ತಾತ್ಮಕ, ನಿರ್ಧಾರವು ಇಂದಿನ ಸಂದರ್ಭದಲ್ಲಿ ‘ರಾಜಕೀಯಕರಣ’ಕ್ಕೆ ತುತ್ತಾಗತ್ತದೋ ಎಂಬುದನ್ನು ಕಾದು ನೋಡಬೇಕು. ಏಕೆಂದರೆ 2018ರಲ್ಲಿ ಅಧಿಕೃತ ನೀತಿಯನ್ನು ಉಲ್ಲಂಘಿಸಿ ‘ಅಕ್ಷಯ ಪಾತ್ರ ಫೌಂಡೇಶನ್’ ಈರುಳ್ಳಿ-ಬೆಳ್ಳುಳ್ಳಿ ಕೊಡಲು ನಿರಾಕರಿಸಿದ್ದನ್ನು ವೈಜ್ಞಾನಿಕ ಸಲಹೆಯನ್ನೂ ನಿರ್ಲಕ್ಷಿಸಿ ಸರಕಾರ ಅನುಮೋದಿಸಿತ್ತು.ಜನರ ನಡುವೆ ಜಾತಿ-ಮತ ವಾರು ಬಿರುಕು ಮೂಡಿಸುವ, ಜಾತಿ ವ್ಯವಸ್ಥೆಯನ್ನು ಗಟ್ಟಿ ಮಾಡುವ ಭೀಕರ ಪ್ರಯತ್ನಗಳ ಹಿನ್ನೆಲೆಯಲ್ಲಿ, ಆಹಾರ ಹಕ್ಕು ನಿಷೇಧದ ಪ್ರಯತ್ನ ಮತ್ತು ವೈಜ್ಞಾನಿಕ ಧೋರಣೆ ಆಧಾರಿತ ಸಾರ್ವಜನಿಕ ನೀತಿಗಳ ನಡುವಿನ ಸಂಘರ್ಷದ ಈ ಎರಡು ಪ್ರಕರಣಗಳ ಹಿನ್ನೋಟ ಇಲ್ಲಿದೆ. EPW ವಾರಪತ್ರಿಕೆಯಲ್ಲಿ ಇತ್ತೀಚೆಗೆ ಪ್ರಕಟವಾದ ಲೇಖನದ ಭಾವಾನುವಾದ.
ಮೂಲ : ಸಿದ್ದಾರ್ಥ ಜೋಶಿ, ಸಿಲ್ವಿಯ ಕರ್ಪಗಂ
ಅನುವಾದ : ಶೃಂಶಾನಾ, ಕೃಪೆ : EPW ಜೂನ್ 4 2022 ಸಂಚಿಕೆ
ಕರ್ನಾಟಕ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ನೀಡಬೇಕು ಎಂದು ನವೆಂಬರ್ 2021ರಲ್ಲಿ ನಿರ್ಧರಿಸಿದಾಗ ಇದನ್ನು ವಿರೋಧಿಸಿದ ನಡೆ ಹೊಸದೇನಲ್ಲ. ಜನವರಿ 2007ರಲ್ಲಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಉತ್ತರ ಕರ್ನಾಟಕ ಜಿಲ್ಲೆಗಳ ಕೆಲವು ಪ್ರದೇಶಗಳ ಸೀಮಿತ ಶಾಲೆಗಳಲ್ಲಿ ಮೊಟ್ಟೆ ನೀಡಬೇಕು ಎಂದು ನಿರ್ಧಾರ ತೆಗೆದುಕೊಂಡಾಗ ಕೆಲವು ಲಿಂಗಾಯತ ಮತ್ತು ಜೈನ ಗುರುಗಳು ವ್ಯಕ್ತಪಡಿಸಿದ ವಿರೋಧದಿಂದಾಗಿ ಈ ಪ್ರಸ್ತಾಪವನ್ನು ಕೈ ಬಿಡಲಾಯಿತು. 2006ರಲ್ಲಿ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ನಡೆಸಿದ ಅಧ್ಯಯನದಲ್ಲಿ 58 ಲಕ್ಷ ನೋಂದಾಯಿತ ವಿದ್ಯಾರ್ಥಿಗಳಲ್ಲಿ ಸುಮಾರು 50 ಲಕ್ಷ ವಿದ್ಯಾರ್ಥಿಗಳು (ಶೇ. 86ಕ್ಕೂ ಮೀರಿ) ಬಿಸಿಯೂಟ ಯೋಜನೆಯಡಿ ಮೊಟ್ಟೆ ಇರಲಿ ಎಂದು ಬಯಸಿದ್ದರು. ಸಮ್ಮಿಶ್ರ ಸರ್ಕಾರದ ಪಾಲುದಾರನಾದ ಬಿಜೆಪಿಯು ಪೋಷಿಸಿದ್ದ ಧಾರ್ಮಿಕ ಗುರುಗಳ ವಿರೋಧದಿಂದಾಗಿ ಈ ಪ್ರಸ್ತಾಪವನ್ನು ಮುಂದಿನ ಶೈಕ್ಷಣಿಕ ವರ್ಷಕ್ಕೆ ಮುಂದೂಡಲಾಯಿತು ಮತ್ತು ನಂತರದಲ್ಲಿ ಸದ್ದಿಲ್ಲದಂತೆ ಇದನ್ನು ಮುಚ್ಚಿ ಹಾಕಲಾಯಿತು.
ನವೆಂಬರ್ 2021ರಲ್ಲಿ ಈಶಾನ್ಯ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಮೊಟ್ಟೆ ನೀಡಬೇಕು ಎಂದು ಘೋಷಿಸಿದ್ಧ ನಿರ್ಧಾರವನ್ನು ಪ್ರತಿರೋಧದ ನಡುವೆಯೂ ಹಿಂಪಡೆದಿಲ್ಲ. ಈ ಬಾರಿಯ ವಿಶೇಷತೆ ಏನೆಂದರೆ ಲಿಂಗಾಯತ ಮುಖ್ಯಮಂತ್ರಿ ಇರುವ ಬಿಜೆಪಿ ಸರಕಾರದಿಂದ ಈ ಘೋಷಣೆ ಹೊರಹೊಮ್ಮಿರುವುದು. ಮೇಲಾಗಿ, ಶಿಕ್ಷಣ ಇಲಾಖೆಯು ಎಲ್ಲ ಪೂರ್ವಭಾವಿ ಸಿದ್ಧತೆಗಳು ನಡೆಸಿದ ನಂತರವೇ ಮೊಟ್ಟೆ ನೀಡುವ ನಿರ್ಧಾರವನ್ನು ಘೋಷಿಸಿದ್ದು. ಈ ಶಾಲೆಗಳ ಮಕ್ಕಳ ಆಯ್ಕೆಯನ್ನೂ ಒಂದು ಆಂತರಿಕ ಸರ್ವೆ ಮೂಲಕ ಶಿಕ್ಷಣ ಇಲಾಖೆಯು ಪಡೆದಿತ್ತು. ಈ ಕ್ರಮವನ್ನು ʻʻರಾಜಕೀಯಗೊಳಿಸುವʼʼ ಪ್ರಕ್ರಿಯೆಯನ್ನು ಎದುರು ನೋಡುತ್ತಿದ್ದ ಶಾಲೆಗಳು ಮೊಟ್ಟೆ ಬೇಕೆಂದು ಬಯಸಿದ್ದ ವಿದ್ಯಾರ್ಥಿಗಳ ಪೋಷಕರಿಂದ ಅನುಮತಿ ಪಡೆಯುವಂತೆ ಮತ್ತು ಸ್ಥಳೀಯ ಸಾಂಸ್ಕೃತಿಕ ಆಚರಣೆಗಳ ಆಧಾರದಲ್ಲಿ ಯಾವ ದಿನ ತಿನ್ನಬಹುದು, ತಿನ್ನಬಾರದು ಎಂಬುದರ ಬಗ್ಗೆಯೂ ಮಾಹಿತಿ ನೀಡುವಂತೆ ಕೇಳಿದವು.ಅಂತಿಮವಾಗಿ ಅವಶ್ಯವಿರುವ ಎಲ್ಲ ಮಾಹಿತಿಗಳನ್ನು ಪಡೆದ ನಂತರದಲ್ಲಿ ಈ ಏಳು ಜಿಲ್ಲೆಗಳಲ್ಲಿ ಮೊಟ್ಟೆ ನೀಡುವ ನಿರ್ಧಾರವನ್ನು 23.11.2021ರಂದು ಘೋಷಿಸಲಾಯಿತು.
ಈ ನಿರ್ಧಾರಕ್ಕೆ ಕ್ಷಿಪ್ರ ವಿರೋಧ ಬಂದಿತು. ನವೆಂಬರ್ 30, 2021ರಂದು ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭೆ ಮತ್ತು ಅಕ್ಕನಾಗಲಾಂಬಿಕ ಮಹಿಳಾ ಗಣಗಳ ಸದಸ್ಯರು ಬೀದರ್‌ನಲ್ಲಿ ಮೆರವಣಿಗೆ ನಡೆಸಿ ಈ ಸುತ್ತೋಲೆ ವಾಪಸ್ಸು ಪಡೆಯುವಂತೆ ಆಗ್ರಹಿಸಿದವು. ʻʻಮೊಟ್ಟೆಯನ್ನು ಸೇವಿಸುವುದರಿಂದ ಮಕ್ಕಳ ಮನಸ್ಸಿನʼ ಮೇಲೆ ದುಷ್ಪರಿಣಾಮ ಬೀರುತ್ತದೆ. ಕೆಲವು ಮಕ್ಕಳಿಗೆ ಮೊಟ್ಟೆ ಮತ್ತು ಕೆಲವು ಮಕ್ಕಳಿಗೆ ಬಾಳೇಹಣ್ಣು ನೀಡುವುದು ಬೇಧಭಾವ ಮಾಡಿದಂತಾಗುತ್ತದೆ. ಮೊಟ್ಟೆ ತಿನ್ನುವವರಿಗೆ ಮೊಟ್ಟೆ ನೀಡುವುದು ಸಸ್ಯಹಾರಿ ಮಕ್ಕಳಿಗೆ ಅಗೌರವದ ತೋರಿದಂತಾಗುತ್ತದೆʼʼ ಎಂದು ಇವರುಗಳು ಮೊಟ್ಟೆ ಸೇವನೆ ವಿರುದ್ಧ ವಾದ ಮಾಡಿದ್ದರು. ಈ ಭಾಗದ ಸುಮಾರು 50ಕ್ಕೂ ಹೆಚ್ಚು ಧರ್ಮ ಗುರುಗಳು ಮುಖ್ಯಮಂತ್ರಿಗಳಿಗೆ ರಾಜಧರ್ಮ ಪಾಲಿಸುವಂತೆ ಮತ್ತು ಶಾಲೆಗಳಿಂದ ಮೊಟ್ಟೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿದರು. ಈ ಸುತ್ತೋಲೆಯನ್ನು ವಾಪಸ್ಸು ಪಡೆಯದಿದ್ದರೆ, ಬೆಳಗಾವಿಯಲ್ಲಿರುವ ರಾಜ್ಯ ವಿಧಾನಸಭೆ ಸಂಕೀರ್ಣಕ್ಕೆ ಮೆರವಣಿಗೆ ಹೂಡುವುದಾಗಿ ಬೆದರಿಕೆ ಹಾಕಿದರು. ಈ ವಿರೋಧಕ್ಕೆ ನೇತೃತ್ವ ನೀಡುತ್ತಿರುವ ಅಖಿಲ ಭಾರತ ಸಸ್ಯಹಾರಿಗಳ ಕೂಟದ ನಾಯಕರು ʻʻಕಲ್ಯಾಣ ಕರ್ನಾಟಕದಲ್ಲಿ ಅಪೌಷ್ಠಿಕವಾಗಿರುವ ಮಕ್ಕಳೇ ಇಲ್ಲʼʼ ಎಂದು ಹೇಳಿಕೊಂಡರು!
ಮೊಟ್ಟೆಯನ್ನು ಬಿಸಿಯೂಟದಲ್ಲಿ ನೀಡುವ ಕುರಿತಂತೆ ಮೂಡಿಬಂದಿರುವ ವಿರೋಧವು ಹೇಗೆ ಜಾತಿ ಆಧಾರಿತವಾಗಿದೆ ಎಂಬುದು ತಿಳಿಯುತ್ತದೆ. ಹೀಗಾಗಿ ಆಹಾರ ಆಯ್ಕೆಯಲ್ಲಿ ಮೊಟ್ಟೆಯನ್ನು ಬಹುಸಂಖ್ಯಾತ ಕುಟುಂಬಗಳು ಬಳಸುತ್ತವೆ ಮತ್ತು ಮೊಟ್ಟೆ ಸೇವಿಸದಿರುವವರ ಪ್ರಮಾಣ ಅತ್ಯಂತ ಅಲ್ಪಪ್ರಮಾಣದ್ದಾಗಿದೆ, ಅದರಲ್ಲೂ ಬಹುತೇಕರು ಮೇಲ್ಜಾತಿಗೆ ಸೇರಿದವರು.ಕೆಳಗಿರುವ ಎರಡು ಕೋಷ್ಟಕಗಳು ಇದನ್ನು ಸ್ಪಷ್ಟ ಪಡಿಸುತ್ತವೆ. ಕೋಷ್ಟಕ – 1 ರಲ್ಲಿ ಸರಕಾರಿ, ಅನುದಾನಿತ ಮತ್ತು ಎರಡೂ ಪ್ರಾಥಮಿಕ (1-5ತರಗತಿ), ಮಾಧ‍್ಯಮಿಕ (6-8), ಹೈಸ್ಕೂಲ್ (9-10) ಶಾಲೆಗಳಲ್ಲಿ ಓದುತ್ತಿರುವ ಪರಿಶಿಷ್ಟ ಜಾತಿ (ಎಸ್.ಸಿ), ಪರಿಶಿಷ್ಟ ಪಂಗಡ (ಎಸ್.ಟಿ), ಹಿಂದುಳಿದ (ಒಬಿಸಿ) ಮತ್ತು ಮೇಲುಜಾತಿಯ (ಸಾಮಾನ್ಯ)ಮಕ್ಕಳ ಪ್ರಮಾಣ ಕೊಡಲಾಗಿದೆ. ಈ ಅಂಖೆಸಂಖ್ಯೆಗಳ ಪ್ರಕಾರ ಮೇಲುಜಾತಿಯ ಸುಮಾರು ಶೇಕಡಾ 5ರಷ್ಟು ಬಿಟ್ಟರೆ ಉಳಿದವರೆಲ್ಲ ಸಾಂಪ್ರದಾಯಿಕವಾಗಿ ಸಸ್ಯಾಹಾರಿಗಳಲ್ಲ.
ಕೋಷ್ಟಕ2 ರಲ್ಲಿ ಮೊಟ್ಟೆ, ಮೀನು, ಕೋಳಿ ಅಥವಾ ಇತರ ಮಾಂಸ, ಕೋಳಿ-ಮೀನು ಅಥವಾ ಇತರ ಮಾಂಸ ಗಳನ್ನು ಅನುಕ್ರಮವಾಗಿ ದಿನಾ, ವಾರಕ್ಕೊಮ್ಮೆ, ಅಪರೂಪಕ್ಕೆ, ಕನಿ಼ಷ್ಠ ಒಂದು ಬಾರಿಯಾದರೂ ಸೇವಿಸಿದ ಕರ್ನಾಟಕದ ಮಹಿಳೆಯರು ಮತ್ತು ಪುರುಷರ ಪ್ರಮಾಣದ ಅಂಕೆಸಂಖ್ಯೆಗಳಿವೆ. ಈ ಕೋಷ್ಟಕದ ಸಂಖ್ಯೆಗಳ ಆಧಾರದ ಮೇಲೆ ಕರ್ನಾಟಕದಲ್ಲಿ ಪ್ರಾಣಿ ಜನ್ಯ ಪ್ರೊಟೀನ್ ಸೇವನೆಯನ್ನು ಪರಿಶೀಲಿಸಿದರೆ, ಸುಮಾರು ಶೇ. 82.2 ಮಹಿಳೆಯರು ಮತ್ತು ಶೇ. 89.6 ಪುರುಷರು ಕನಿಷ್ಟ ಒಂದು ಬಾರಿಯಾದರೂ ಮೊಟ್ಟೆ ಸೇವಿಸುತ್ತಾರೆ; ಅಂತೆಯೇ ಶೇ. 71.6 ಮಹಿಳೆಯರು ಮತ್ತು ಶೇ. 85.4 ಪುರುಷರು ಕನಿಷ್ಟ ಒಮ್ಮೆಯಾದರೂ ಮೀನು, ಕೋಳಿ ಅಥವಾ ಮಾಂಸವನ್ನು ಸೇವಿಸುತ್ತಾರೆ.
ಶಿಕ್ಷಣ ಇಲಾಖೆಯು ನಡೆಸಿರುವ ಅಧ್ಯಯನದ ಪ್ರಕಾರ ಏಳು ಜಿಲ್ಲೆಗಳಲ್ಲಿ ಆರು ಜಿಲ್ಲೆ ಬರುವ ಗುಲ್ಬರ್ಗಾ ವಿಭಾಗದಲ್ಲಿ ಶೇ. 80ಕ್ಕೂ ಅಧಿಕ ಮಕ್ಕಳು ಮೊಟ್ಟೆ ಬೇಕೆಂದು ಹೇಳಿದ್ದವು ಮತ್ತು ಉಳಿದ ಮಕ್ಕಳು ಬಾಳೇಹಣ್ಣು ಬಯಸಿದ್ದವು. ಮೇಲಾಗಿ ಈ ಜಿಲ್ಲೆಗಳ ಪೌಷ್ಟಿಕ ಸೂಚ್ಯಾಂಕಗಳು ಮೊಟ್ಟೆ ನೀಡುವ ನಿರ್ಧಾರ ಎಷ್ಟು ಸೂಕ್ತವಾಗಿದೆ ಎಂಬುದು ಶಿಕ್ಷಣ ಇಲಾಖೆ ನಡೆಸಿರುವ ಸರ್ವೆಯಿಂದ ತಿಳಿಯುತ್ತದೆ. ಈ ವರದಿ ʻʻಶಾಲೆಗೆ ಹೋಗುವ ಮಕ್ಕಳಲ್ಲಿ ಅನೆಮಿಯಾ ಪ್ರಮಾಣ ಶೇ. 68ರಿಂದ (ವಿಜಯಪುರ ಜಿಲ್ಲೆ) ಶೇ. 74 (ಯಾದಗಿರಿ ಜಿಲ್ಲೆ) ರಷ್ಟಿದೆʼʼ ಎಂದು ಹೇಳುತ್ತದೆ. ಮೇಲಾಗಿ, ಕಲ್ಯಾಣ ಕರ್ನಾಟಕ ಪ್ರಾಂತ್ಯವು ಸಮಾಜೋ-ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ನಮ್ಮ ರಾಜ್ಯದ ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ಇಲ್ಲಿನ ಬಹುಸಂಖ್ಯೆಯ ದುಡಿಯುವ ಜನ ಭೂ ರಹಿತ ಕುಟುಂಬಗಳಾಗಿದ್ದು ಕೃಷಿ ಕೂಲಿಕಾರರಾಗಿ ದುಡಿಯುತ್ತಾರೆ. ಇಲ್ಲವೇ ಮಹಾರಾಷ್ಟ್ರ, ತೆಲಂಗಾಣ ಅಥವಾ ಕರ್ನಾಟಕದ ಉಳಿದ ಜಿಲ್ಲೆಗಳಿಗೆ ವಲಸೆ ಹೋಗುತ್ತಾರೆ.
ಮೊಟ್ಟೆ ಸೇವನೆಯ ವಿರುದ್ಧ ಪ್ರತಿಭಟನೆಯಸಮಯದಲ್ಲಿ, ಈ ರೀತಿಯ ಪ್ರಯತ್ನಗಳನ್ನು ಈ ಹಿಂದೆಯೂ ಯಶಸ್ವಿಯಾಗಿ ತಾವು ತಡೆಹಿಡಿದಿದ್ದೇವೆ ಎಂದು ಹೇಳುವ ಮೂಲಕ ಈ ಬಾರಿಯೂ ಹಾಗೇ ಆಗಬೇಕು ಎನ್ನುವ ಸುಳಿವನ್ನು ಧಾರ್ಮಿಕ ಗುರುಗಳು ನೀಡುತ್ತಿದ್ದಾರೆ. ಆದರೆ ಈವರೆಗೂ ಸರ್ಕಾರ ಈ ಸುತ್ತೋಲೆಯನ್ನು ಹಿಂಪಡೆದಿಲ್ಲ. ಇದಕ್ಕೆ ಎರಡು ಕಾರಣಗಳಿವೆ. ಮೊದಲನೆಯದು; ಕೆಲವು ಲಿಂಗಾಯತ ಗುಂಪುಗಳ ಒಳಗೊಂಡಂತೆ ಮೊಟ್ಟೆ ನೀಡುವ ಕುರಿತು ಬಂದಿರುವ ವ್ಯಾಪಕ ಬೆಂಬಲ, ಎರಡನೆಯದು; ಮೊಟ್ಟೆ ನೀಡುತ್ತಿರುವುದರಿಂದ ದಾಖಲಾತಿಯಲ್ಲಾಗುತ್ತಿರುವ ಹೆಚ್ಚಳ. ಮೊಟ್ಟೆ ನೀಡಿದ ನಂತರ ಶಾಲೆಗಳಲ್ಲಿ ಮೂಡಿಬಂದಿರುವ ಸಂಭ್ರಮ ಮತ್ತು ಮಕ್ಕಳೇ ಸ್ವಯಂ ತಾವೇ ಇದಕ್ಕೆ ಪೂರಕವಾಗಿ ದನಿ ಸೇರಿಸಿರುವುದು.
ಬೀದರ್‌ನಲ್ಲಿ ಮೊಟ್ಟೆ ಸೇವನೆ ವಿರುದ್ಧ ಪ್ರತಿಭಟನೆ ನಡೆದ ದಿನದಂದೇ ಹಲವು ಎಡ, ದಲಿತ ಮತ್ತು ಬಹುಜನ ಸಂಘಟನೆಗಳು ಪ್ರತಿಭಟನೆಗಳ ಮೂಲಕ ಸರ್ಕಾರದ ಈ ಘೋಷಣೆಗೆ ಬೆಂಬಲ ಸೂಚಿಸಿದವು ಮತ್ತು ಈ ಕ್ರಮವನ್ನು ಜಾತಿ ಮತ್ತು ಧರ್ಮದ ಸಂಕುಚಿತ ದೃಷ್ಟಿಕೋನದಲ್ಲಿ ನೋಡಬಾರದು ಎಂದು ಆಗ್ರಹಿಸಿದವು. ಬಹುಜನ ಜಾಗೃತಿ ವೇದಿಕೆಯ ಮುಖಂಡರೊಬ್ಬರು ಶಾಲೆಗಳಲ್ಲಿ ಮೊಟ್ಟೆ ವಿರೋಧಿಸುತ್ತಿರುವ ಧರ್ಮ ಗುರುಗಳಿಗೆ ಮೊಟ್ಟೆ ಸೇವಿಸುವ ಅನುಯಾಯಿಗಳಿಂದ ದೇಣಿಗೆ ಸ್ವೀಕರಿಸದಿರುವಂತೆ ಹೇಳಿದರು. ಧರ್ಮಗುರುಗಳು ಮತ್ತು ಅವರ ಅನುಯಾಯಿಗಳ ಆಹಾರ ಪದ್ಧತಿಯ ವಿವಿಧತೆಯನ್ನು ಈ ಹೇಳಿಕೆ ತೋರಿಸುತ್ತಿದೆ. ಸುಮಾರು 15 ಜಿಲ್ಲೆಗಳಲ್ಲಿ ಹಲವು ತಳಮಟ್ಟದ ಸಂಘಟನೆಗಳು ಪ್ರತಿಭಟನೆಗಳನ್ನು ನಡೆಸಿ, ಈ ಯೋಜನೆ ಮುಂದುವರೆಯಬೇಕು ಮತ್ತು ಎಲ್ಲಾ ಜಿಲ್ಲೆಗಳಿಗೆ ವಾರಕ್ಕೆ 5-6 ಮೊಟ್ಟೆಗಳನ್ನು ನೀಡುವ ಹಾಗೆ, ವಿಸ್ತರಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದವು.
ಇದೇ ಸಮಯದಲ್ಲಿ ಹಲವು ಲಿಂಗಾಯತ ವಿದ್ವಾಂಸರು ಮತ್ತು ಸಂಘಟನೆಗಳು, ಎಲ್ಲಾ ಲಿಂಗಾಯತರು ʻʻಸಸ್ಯಾಹಾರಿಗಳುʼʼ ಅಥವಾ ಲಿಂಗಾಯತ ನಂಬಿಕೆಗಳು ಮೊಟ್ಟೆ ಸೇವನೆಯನ್ನು ನಿಷೇಧಿಸುತ್ತವೆ ಎಂಬ ನಿರೂಪಣೆಯನ್ನೂ ಅಲ್ಲಗಳೆಯಲು ಮುಂದಾದರು. ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಚಳುವಳಿ ನಡೆಸುತ್ತಿರುವ ಜಾಗತಿಕ ಲಿಂಗಾಯತ ಮಹಾಸಭಾದ ಮುಖಂಡರು ಮತ್ತು ಮಾಜಿ ಸರ್ಕಾರಿ ಅಧಿಕಾರಿಯಾದ ಎಸ್.ಎಂ. ಜಾಮದಾರ್ ಸಹ ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತಾ, ʻʻಸಸ್ಯಾಹಾರಿ ವಿದ್ಯಾರ್ಥಿಗಳಿಗೆ ಬಾಳೇಹಣ್ಣು ಮತ್ತು ಮಾಂಸಾಹಾರಿ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡುವುದಾಗಿ ಸರ್ಕಾರಿ ಆದೇಶ ಹೇಳುತ್ತಿದೆ. ಇದರಲ್ಲಿ ತಪ್ಪೇನಿಲ್ಲ, ಜೆಎಲ್‌ಎಂ ಈ ನಿರ್ಧಾರದ ವಿರುದ್ಧವಾಗಿಲ್ಲʼʼ ಎಂದು ಹೇಳಿದರು. ಮುಂದುವರೆದೂ ʻʻಲಿಂಗಾಯತರಲ್ಲಿ ಬ್ರಾಹ್ಮಣರ ರೀತಿಯ ಮೇಲ್ಜಾತಿಯವರು ಸಸ್ಯಹಾರಿಗಳು, ಆದರೆ ತಳ ಹಂತದವರಿಗೆ ಹೀಗೆ ಹೇಳಲಾಗದು. ಒಂದೆಡೆ ಕೆಲವು ವಚನಕಾರರು ಸಸ್ಯಹಾರವನ್ನು ಉತ್ತೇಜಿಸಿದರೆ, ಇನ್ನೊಂದೆಡೆ ಬಸವಣ್ಣ ಮತ್ತು ಅಲ್ಲಮರ ಹಲವು ವಚನಗಳು ಮಾಂಸ ಸೇವನೆಯನ್ನು ನಿಷೇಧಿಸಿಲ್ಲʼʼ ಎಂದಿದ್ದಾರೆ.ಪ್ರಾರಂಭದಲ್ಲಿ ಮೊಟ್ಟೆ ನೀಡುವ ವಿಚಾರವನ್ನು ಪ್ರತಿಭಟಿಸಿದ ಕೆಲವು ಮಠಾಧಿಶರು ನಂತರದಲ್ಲಿ ಪರ್ಯಾಯವಾಗಿ ಸಸ್ಯಹಾರ ನೀಡುವುದಾದಲ್ಲಿ ಮೊಟ್ಟೆ ನೀಡುವ ವಿಷಯದಲ್ಲಿ ತನ್ನ ಅಭ್ಯಂತರ ಇಲ್ಲ ಎಂದು ಹೇಳಿದರು.
ಎಲ್ಲಕ್ಕೂ ಮಿಗಿಲಾಗಿ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಮೊಟ್ಟೆಯ ಬಗ್ಗೆ ಬಲವಾದ ಸಕಾರಾತ್ಮಕ ಅಭಿಪ್ರಾಯ ಬಂದಿತು. ಮೊಟ್ಟೆಯ ಬದಲು ಬಾಳೇಹಣ್ಣನ್ನು ಆಯ್ಕೆ ಮಾಡಿದವರು ಉಳಿದವರಿಗೆ ಮೊಟ್ಟೆ ನೀಡುವುದನ್ನು ವಿರೋಧಿಸಲಿಲ್ಲ ಎನ್ನುವುದನ್ನೂ ಹಲವು ವರದಿಗಳು ತಿಳಿಸುತ್ತಿವೆ. ಮೊಟ್ಟೆ ನೀಡಿದ ಮೊದಲ ದಿನ ಶಾಲೆಗಳಲ್ಲಿ ಸಂಭ್ರಮದ ವಾತಾವರಣ ಇತ್ತು. ಮೊಟ್ಟೆ ನೀಡುವ ದಿನದಂದು ಮಕ್ಕಳ ಹಾಜರಾತಿಯಲ್ಲಿ ಹೆಚ್ಚಳವೂ ಆಯಿತು. ಗುಲ್ಬರ್ಗದ ಡಿಡಿಪಿಐ ರವರು, ʻʻಶಾಲೆಗಳಲ್ಲಿ ಬಾಳೇಹಣ್ಣು ಮತ್ತು ಮೊಟ್ಟೆ ನೀಡಿದಾಗಿನಿಂದ ಸರ್ಕಾರಿ ಶಾಲೆಗಳಲ್ಲಿ ಶೇ. 10 ರಿಂದ ಶೇ. 12 ಹಾಜರಾತಿ ಹೆಚ್ಚಳವಾಗಿದೆʼʼ ಎಂದಿದ್ದಾರೆ. ಹಲವು ಶಾಲೆಗಳ ಶಾಲಾಭಿವೃದ್ಧ ಮತ್ತು ಆಡಳಿತ ಸಮಿತಿಗಳು 9ನೇ ಮತ್ತು 10ನೇ ತರಗತಿಗೂ ಈ ಯೋಜನೆ ವಿಸ್ತರಿಸುವಂತೆ ಕೇಳಿದ್ದಾರೆ. ರಾಜ್ಯದ ಹಲವು ಎಸ್‌ಡಿಎಂಸಿಗಳ ಸಮನ್ವಯ ಸಮಿತಿ ಸಹ ಸರ್ಕಾರದ ಈ ಯೋಜನೆಯನ್ನು ಸ್ವಾಗತಿಸಿ ಹೇಳಿಕೆ ನೀಡಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯ ಶಾಲಾ ಬಾಲಕಿಯೊಬ್ಬಳು ಮೊಟ್ಟೆ ನೀಡುವುದನ್ನು ವಿರೋಧಿಸಿದ ಮಠಾಧೀಶರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು ರಾಜ್ಯದ ಗಮನ ಸೆಳೆದಿದೆ.
ಈ ಎಲ್ಲ ಬೃಹತ್ ಬೆಂಬಲದ ಪ್ರತಿಕ್ರಿಯೆಗಳಿಂದಾಗಿ, ರಾಜ್ಯದ ಆಳುವ ಸರ್ಕಾರ ಮತ್ತು ಅದರ ಮುಖಂಡರ ಮೇಲೆ ವ್ಯಾಪಕ ಪ್ರಭಾವ ಹೊಂದಿರುವ ಕೆಲವು ಧಾರ್ಮಿಕ ಸಂಸ್ಥೆಗಳ ಒತ್ತಡದ ನಡುವೆಯೂ ಈ ಯೋಜನೆಗೆ ಬಂದಿರುವ ಕುತ್ತು ಪ್ರಾಯಶಃ ಸದ್ಯಕ್ಕೆ ದೂರವಾದಂತಿದೆ. ವಿಶೇಷವಾಗಿ ಶಿಕ್ಷಣ ಇಲಾಖೆಯು ಮೊಟ್ಟೆ ಮತ್ತು ಬಾಳೇಹಣ್ಣು ನೀಡುವ ಯೋಜನೆಯನ್ನು ಇನ್ನೂ ನಾಲ್ಕು ಜಿಲ್ಲೆಗಳಿಗೆ ವಿಸ್ತರಿಸುವಂತೆ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದೆ. ಹೀಗಿದ್ದರೂ ಈ ಉತ್ತಮ ಸಾಂಸ್ಕೃತಿಕ, ಪ್ರಜಾಸತ್ತಾತ್ಮಕ, ನಿರ್ಧಾರವು ಇಂದಿನ ಸಂದರ್ಭದಲ್ಲಿ ‘ರಾಜಕೀಯಕರಣ’ಕ್ಕೆ ತುತ್ತಾಗತ್ತದೋ ಎಂಬುದನ್ನು ಕಾದು ನೋಡಬೇಕು.
ಈರುಳ್ಳಿ ಮತ್ತು ಬೆಳ್ಳುಳ್ಳಿ ವಿವಾದ
2018ರಲ್ಲಿ ಅಕ್ಷಯ ಪಾತ್ರೆ ಫೌಂಡೇಷನ್‌ನೊಡನೆ ಕರ್ನಾಟಕದಲ್ಲಿಯೂ ಬಿಸಿಯೂಟ ಸರಬರಾಜು ಮಾಡಲು ತಯಾರಾಗಿದ್ದ ಒಪ್ಪಂದ ಪತ್ರವನ್ನು ಅನುಮೋದಿಸಲು ಬೆಂಗಳೂರು ನಗರ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕರು ವಿರೋಧಿಸಿದರು. ಈ ಸಂಸ್ಥೆಯು ಶಾಲೆಗಳಲ್ಲಿ ತಾನು ಕಳುಹಿಸುವ ಊಟದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸಲು ಒಪ್ಪುತ್ತಿಲ್ಲ ಎಂಬ ಆತಂಕದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿತ್ತು.
ಕೆಲವು ಜಾತಿ ಸಮೂಹಗಳನ್ನು ಹೊರತುಪಡಿಸಿದರೆ ಕರ್ನಾಟಕದ ಬಹುತೇಕ ಕುಟುಂಬಗಳು ಅಡುಗೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಸುತ್ತವೆ. ಇವು ಆಹಾರಕ್ಕೆ ಹೆಚ್ಚಿನ ರುಚಿ ನೀಡುತ್ತವೆ. ಜೊತೆಗೆ ತಯಾರಾದ ಆಹಾರದಲ್ಲಿರುವ ಮತ್ತು ಹೆಚ್ಚಿನ ಆರೋಗ್ಯ ಮಹತ್ವ ಹೊಂದಿರುವ ಎರಡುವ ಪೌಷ್ಟಿಕಾಂಶಗಳಾದ ಕಬ್ಬಿಣ ಮತ್ತು ಸತು ವನ್ನು ಈರುಳ್ಳಿ ಮತ್ತು ಬೆಳ್ಳುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಹೀರುತ್ತವೆ ಎಂದು ಮೈಸೂರಿನಲ್ಲಿರುವ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ)ಯು ಸಂಶೋಧಿಸಿದೆ. ಸಸ್ಯ ಆಹಾರಗಳಲ್ಲಿ ಜೈವಿಕವಾಗಿ ಕಬ್ಬಿಣ ಮತ್ತು ಸತು ಸಿಗುವುದು ಸಾಮಾನ್ಯವಾಗಿ ಬಹಳ ಕಡಿಮೆ ಇರುವಾಗ ಈ ಅಂಶ ಬಹಳ ಮಹತ್ವದ್ದಾಗಿದೆ. ಭಾರತ ದೇಶದಲ್ಲಿ ಮಾನವರಲ್ಲಿ ಕುಬ್ಜರಾದ ಕೊರತೆಗೆ ಪೌಷ್ಟಿಕತೆಯೇ ದೊಡ್ಡ ಕಾರಣವಾಗಿದೆ. 2016-18ರ ಪರಿಪೂರ್ಣ ರಾಷ್ಟ್ರೀಯ ಪೌಷ್ಟಿಕತೆಯ ಸರ್ವೆಯ ಅಂದಾಜಿನ ಪ್ರಕಾರ ಶಾಲೆಗೆ ಹೋಗದ ಮಕ್ಕಳಲ್ಲಿ ಶೇ. 20.2, ಶಾಲೆಗೆ ಹೋಗುವ ವಯಸ್ಸಿನ ಮಕ್ಕಳಲ್ಲಿ ಶೇ. 19.8 ಮತ್ತು ಹದಿಹರೆಯದವರಲ್ಲಿ ಶೇ. 46.8 ಪ್ರಮಾಣದವರು ನಮ್ಮ ರಾಜ್ಯದಲ್ಲಿ ಸತುವಿನ ಕೊರತೆ ಹೊಂದಿದ್ದಾರೆ.
ಅಕ್ಷಯ ಪಾತ್ರೆ ಫೌಂಡೇಶನ್ ತನ್ನ ಆಹಾರದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸದಿರುವುದರಿಂದ ಆಹಾರವು ಸಪ್ಪೆಯಾಗಿ, ಏಕರೀತಿಯಲ್ಲಿ ಇದ್ದು, ಮಕ್ಕಳು ಈ ಆಹಾರವನ್ನೂ ಸೇವಿಸಲು ಒಪ್ಪುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಹೇಳಿದೆ. ಈ ನಿಲುವನ್ನು ನೇರ ವರದಿಗಳು ಸ್ಪಷ್ಟೀಕರಿಸಿದವು.
ಶಾಲೆಗಳಿಗೆ ಆಹಾರ ಸರಬರಾಜು ಮಾಡುವ ಎನ್‌ಜಿಓಗಳು ತಮ್ಮದೇ ಆದ ಸ್ಥಳೀಯ ಸೂಕ್ತವಲ್ಲದ ಆಹಾರ ಆಯ್ಕೆಗಳನ್ನೂ ಮಕ್ಕಳ ಮೇಲೆ ಹೇರುವ ಮೂಲಕ ಮಕ್ಕಳು ತಿನ್ನುವ ಆಹಾರದ ಪ್ರಮಾಣ ಕಡಿಮೆಯಾಗಿದೆ ಎಂಬ ಕಾರಣಕ್ಕಾಗಿಯೇ ಕರ್ನಾಟಕದಲ್ಲಿ ಬಿಸಿಯೂಟ ಯೋಜನೆಗೆ ಒಂದು ಸಮಾನ (ಮೆನು) ಆಹಾರ ಪಟ್ಟಿಯನ್ನೂ ನಿಗದಿಗೊಳಿಸಿದ್ದು, ಹೀಗಾಗಿ ಸರ್ಕಾರವು ನಿಗದಿಗೊಳಿಸಿದ ವಾರದ ಆಹಾರ ಪಟ್ಟಿಯಲ್ಲಿ ಬೆಳ್ಳುಳ್ಳಿಯನ್ನು ಮಸಾಲೆಯಾಗಿ ಮತ್ತು ಈರುಳ್ಳಿಯನ್ನು ಆಹಾರದಂಶವಾಗಿ ಸೇರಿಸಲಾಗಿದೆ.
ಮೇಲಾಗಿ ಕರ್ನಾಟಕದ ಸರ್ಕಾರಿ ಶಾಲೆಗಳು ಮತ್ತು ನೆರವು ಪಡೆದ ಶಾಲೆಗಳಲ್ಲಿ ಓದುವ ಮಕ್ಕಳಲ್ಲಿ ಶೇ. 96 ಪ್ರಮಾಣದ ಮಕ್ಕಳು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಮ್ಮ ಆಹಾರದಲ್ಲಿ ಸೇವಿಸುವ ದಲಿತ, ಆದಿವಾಸಿ ಮತ್ತು ಒಬಿಸಿ ಜಾತಿಗಳಿಗೆ ಸೇರಿದವರಾಗಿದ್ದಾರೆ.
ಅಕ್ಷಯ ಪಾತ್ರೆ ಫೌಂಡೇಷನ್ ತನ್ನ ಆಹಾರದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇರಿಸದಂತೆ ವಿನಾಯಿತಿ ನೀಡಬೇಕು ಎಂದು ಕೇಳಿ, ಇನ್ನೊಂದು ವಿಭಿನ್ನ ಆಹಾರ ಪಟ್ಟಿ ನೀಡುವುದಾಗಿ ಹೇಳಿದಾಗ, ರಾಜ್ಯ ಸರ್ಕಾರವು ಪೌಷ್ಟಿಕತೆಯ ರಾಷ್ಟ್ರೀಯ ಸಂಸ್ಥೆ (ಎನ್‌ಐಎನ್), ಹೈದರಾಬಾದ್ ಮತ್ತು ಸಿಎಫ್‌ಟಿಆರ್‌ಐ, ಮೈಸೂರು ಇವುಗಳಿಂದ ಅಭಿಪ್ರಾಯ ಕೇಳಿತು. ಈ ಬದಲಿ ಆಹಾರ ಪಟ್ಟಿಯ ಪೌಷ್ಟಿಕಾಂಶದ ಇರುವಿಕೆಯ ಪ್ರಮಾಣವನ್ನೂ ನೇರವಾಗಿ ಅಧ್ಯಯನ ಮಾಡದೆ ಹೇಳಲಾಗದು ಎಂದು ಸಿಎಫ್‌ಟಿಆರ್‌ಐ ಹೇಳಿತು. ಆದರೆ, ಶಾಲೆಗಳಿಗೆ ಹೋಗುವ ಮಕ್ಕಳೊಂದಿಗೂ ಚರ್ಚಿಸದೆ, ಈ ಆಹಾರ ಪಟ್ಟಿ ಅನುಸಾರ ಆಹಾರ ನೀಡಲಾಗುತ್ತಿದೆಯೇ ಇಲ್ಲವೇ ಎಂಬ ವಾಸ್ತವ ಅಧ್ಯಯನವನ್ನು ಮಾಡದೆ, ಹೈದರಾಬಾದ್‌ನ ಎನ್‌ಐಎನ್ ಅಕ್ಷರ ಪಾತ್ರೆ ಫೌಂಡೇಷನ್‌ನ ಆಹಾರ ಪಟ್ಟಿಯನ್ನು ಅನುಮೋದಿಸಿತು. ಅಂದಿನ ರಾಜ್ಯ ಸರ್ಕಾರವು ಸಿಎಫ್‌ಟಿಆರ್‌ಐ ನೀಡಿದ ಪ್ರಸ್ತಾವನೆಯನ್ನು ಕಡೆಗಣಿಸಿತು ಮತ್ತು ಅಕ್ಷಯ ಪಾತ್ರೆ ಫೌಂಡೇಷನ್‌ಗೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇರಿಸದಿರುವಂತೆ ವಿನಾಯತಿ ನೀಡಿತು. ಈರುಳ್ಳಿ ಮತ್ತು ಬೆಳ್ಳುಳ್ಳಿ ಒಳಗೊಂಡ ಆಹಾರದ ಉಪಯೋಗ ಕುರಿತ ವೈಜ್ಞಾನಿಕ ಪುರಾವೆ ಮತ್ತು ಸಾಂಸ್ಕೃತಿಕ ಆಹಾರ ಆಯ್ಕೆಗಳ ಬಹುಪ್ರಮಾಣದ ಅಭಿಪ್ರಾಯವನ್ನೂ ಕಡೆಗಣಿಸಲಾಯಿತು.