ಮನರೇಗಾ ಕೆಲಸ ಕಡಿತ: ಪರಿಹಾರಕ್ಕೆ ಆಗ್ರಹಿಸಿ ಹಕ್ಕೊತ್ತಾಯ

ಬೆಂಗಳೂರು: ರಾಜ್ಯದಲ್ಲಿ ಲಾಕ್‌ಡೌನ್‌ ಸಂದರ್ಭದಲ್ಲಿ ಸರಕಾರವು ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಯೋಜನೆಯಡಿ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸಿರುವ ಕ್ರಮವನ್ನು ಖಂಡಿಸಿ ಸಂಘಟನೆಗಳು ಬಲವಾಗಿ ಖಂಡಿಸಿವೆ.

ರಾಜ್ಯದಲ್ಲಿ ಮಾರ್ಚ್‌ ಅಂತ್ಯದವರೆಗೆ ಸುಮಾರು 71.67 ಲಕ್ಷ ಕುಟುಂಬಗಳ 1.68 ಕೋಟಿ ಜನರು ಜನರು ಉದ್ಯೋಗಕ್ಕಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಇವರೆಲ್ಲರು ಈಗ ನರೇಗಾ ಉದ್ಯೋಗವಿಲ್ಲದೆ ಜೀವನ ಸಾಗಿಸುವುದು ಕಷ್ಟವಾಗಿದೆ ಎಂದು  ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಸಂಘಟನೆಗಳು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರಿಗೆ ಮನವಿ ಸಲ್ಲಿಸಿದೆ.

ಇದನ್ನು ಓದಿ: ಕಷ್ಟ ಹೇಳೋಕೆ ಫೋನ್ ಮಾಡಿದ್ರೆ, ನಾಲಾಯಕ್ ಫೋನ್ ಕಟ್ ಮಾಡು ಶಾಸಕ ಸಿದ್ದು ಸವದಿ ಉಡಾಫೆ ಉತ್ತರ

ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಜನರು ಕೈಯಲ್ಲಿ ಹಣವಿಲ್ಲದೆ ಇನ್ನಷ್ಟು ಸಂಕಟದಿಂದ ಹಸಿವಿನಿಂದ ನರಳುತ್ತಿದ್ದಾರೆ. ನಗರಗಳಲ್ಲಿ ಜನರು ಆಕ್ಸಿಜನ್‌ಗಾಗಿ ಕ್ಯೂನಲ್ಲಿದ್ದರೆ, ಗ್ರಾಮಗಳಲ್ಲಿ ಜನರು ಹೊಟ್ಟೆಗೆ ಹಿಟ್ಟಿಲ್ಲ ಕೆಲಸ ಕೊಡಿ ಎಂದು ಕ್ಯೂ ನಿಲ್ಲುತ್ತಿದ್ದಾರೆ. ಈಗಾಗಲೇ ನಗರ ಪ್ರದೇಶಗಳಿಂದ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳಿದ್ದಾರೆ. ಅವರಿಗೂ ಕೆಲಸ ಬೇಕಿದೆ. ಗ್ರಾಮೀಣ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ಇಲಾಖೆಗಳು ಕೋವಿಡ್ ನೆಪದಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಈಗಾಗಲೇ ಅನುದಾನ ಮತ್ತು ಕಾರ್ಯಯೋಜನೆಗಳ ಜಾರಿ ತಡೆಹಿಡಿದಿರುವುದು ಖಂಡನೀಯವಾಗಿದೆ.

ಗ್ರಾಮೀಣ ಜನರ ಆರೋಗ್ಯದ ಪ್ರಶ್ನೆಯ ಹಿನ್ನೆಲೆಯಲ್ಲಿ ಸರಕಾರ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಸತ್ಯಾಂಶವೇ ಆಗಿದ್ದರೆ ನಗರಗಳಲ್ಲಿನ – ಯೋಜನೆಗಳು ತಡೆ ಹಿಡಿದಿವೆಯೇ? ರಿಯಲ್ ಎಸ್ಟೇಟ್ ಕಾಮಗಾರಿಗಳು, ಬೆಂಗಳೂರಿನ ಮೆಟ್ರೋ ಯೋಜನೆ ಸೇರಿದಂತೆ ಮುಂದುವರೆಸಲು ಸರಕಾರವು ಅವಕಾಶ ಕೊಟ್ಟಿದೆ.

ಸರಕಾರದ ಈ ದ್ವಂದ್ವ ಮತ್ತು ಪಕ್ಷಪಾತಿ ಧೋರಣೆಯು ಅತ್ಯಂತ ಅಮಾನವೀಯತೆಯಿಂದ ಕೂಡಿದೆ. ಗ್ರಾಮಗಳಲ್ಲಿನ ನಿರುದ್ಯೋಗ ಮತ್ತು ಬಡತನವು ಜನರನ್ನು ಕಂಗೆಡಿಸಿದ ಈ ಹೊತ್ತಿನಲ್ಲಿ ಪರಿಹಾರದ ದಾರಿ ಕಂಡುಕೊಳ್ಳಬೇಕಾದದ್ದು ಸರಕಾರದ ಕರ್ತವ್ಯವಾಗಿತ್ತು. ಆದರೆ ಕೋವಿಡ್ ನೆಪ ಮುಂದೆ ಮಾಡಿ ಜನರನ್ನು ಹಸಿವಿನಿಂದ ನರಳುವಂತೆ ಮಾಡಲಾಗುತ್ತಿದೆ. ಕೃಷಿ ಕೂಲಿಕಾರ್ಮಿಕರಿಗಾಗಿ ಪರಿಹಾರಧನ ಕೊಡಬೇಕಾದದ್ದು ಸರಕಾರದ ಕರ್ತವ್ಯವಾಗಿದೆ ಎಂದು ಸಂಘಟನೆಗಳು ತಿಳಿಸಿವೆ.

ಸರಕಾರದ ಇಂತಹ ಅಮಾನವೀಯ ತೀರ್ಮಾನವನ್ನು ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದು, ಕೂಡಲೇ ಪ್ರಮುಖವಾದ ಆರು ಹಕ್ಕೊತ್ತಾಯಗಳನ್ನು ಈಡೇರಿಸಬೇಕೆಂದು ಮನವಿ ಮೂಲಕ ಆಗ್ರಹಿದೆ.

  1. ಗ್ರಾಮೀಣ ಪ್ರದೇಶದ ಎಲ್ಲ ಕುಟುಂಬಗಳಿಗೆ ಆರು ತಿಂಗಳವರೆಗೆ ರೂ. 10,000 ದಂತೆ ಪರಿಹಾರ ಧನವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು.
  2. ಎಷ್ಟು ದಿನಗಳವರೆಗೆ ಲಾಕ್‌ಡೌನ್ ನೆಪದಲ್ಲಿ ಮನರೇಗಾ ಕೆಲಸ ಸ್ಥಗಿತ ಮಾಡುವರೋ ಅಲ್ಲಿವರೆಗೆ ಪ್ರತಿ ದಿನದ ಕೂಲಿಯನ್ನು ಅವರ ಖಾತೆಗೆ ಜಮಾ ಮಾಡಬೇಕು.
  3. ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ, ಬೇಳೆ, ದ್ವಿದಳ ಧಾನ್ಯ ಮುಂತಾದ ಜೀವನಾವಶ್ಯಕ ವಸ್ತುಗಳನ್ನು ಉಚಿತವಾಗಿ ಗ್ರಾಮೀಣ ಪ್ರದೇಶದ ಎಲ್ಲ ಕುಟುಂಬಗಳಿಗೆ ವಿತರಣೆ ಮಾಡಬೇಕು.
  4. ಮನರೇಗಾ ಕೆಲಸ ಬಯಸಿ ಅರ್ಜಿ ಸಲ್ಲಿಸಿದಲ್ಲಿ ಸಾಮುದಾಯಿಕ ಕಾಮಗಾರಿಯ ಬದಲಿಗೆ ವೈಯಕ್ತಿಕ ಹೊಲಗಳಲ್ಲಿ ಕೆಲಸ ಕೊಡಲು ನಿರ್ದೇಶಿಸಬೇಕು. ವ್ಯಕ್ತಿಗಳ ನಡುವಿಗೆ ಅಂತರ ಕಾಪಾಡಿಕೊಂಡು ಕೋವಿಡ್ ನಿಯಮ ಪಾಲಿಸಿ ಕೆಲಸ ಮಾಡಲು ಅನುವು ಮಾಡಿಕೊಡಬೇಕು. ಇದಾಗದಿದ್ದರೆ ಕಡ್ಡಾಯವಾಗಿ ಪ್ರತಿ ಕುಟುಂಬಕ್ಕೆ ರೂ.10,000 ದಂತೆ ಆರು ತಿಂಗಳವರೆಗೆ ಪರಿಹಾರ ಕೊಡಬೇಕು.
  5. ಮನರೇಗಾ ಕಾರ್ಮಿಕರಿಗಾಗಿ ಪ್ರತಿ ಗ್ರಾಮಗಳಲ್ಲಿ ಕೋವಿಡ್ ಉಚಿತ ಚಿಕಿತ್ಸಾ ಆರೋಗ್ಯ ಕೇಂದ್ರಗಳನ್ನು ಪ್ರಾರಂಭಿಸಬೇಕು. ಇದಕ್ಕಾಗಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು.
  6. ಈಗಾಗಲೇ ಮಾಡಿದ ಕೆಲಸದ ಬಾಕಿ ಕೂಲಿಯನ್ನು ಕೂಡಲೇ ಬಿಡುಗಡೆ ಮಾಡಬೇಕು.

ಮೇಲಿನ ಹಕ್ಕೊತ್ತಾಯಗಳ ಜಾರಿಗಾಗಿ ಮೂರೂ ಸಂಘಟನೆಗಳು ನಾಳೆ (ಮೇ 13, 2021) ಎಲ್ಲ ಗ್ರಾಮಗಳಲ್ಲಿ ತಮ್ಮ ತಮ್ಮ ನಿವಾಸದ ಮುಂದೆ ಪ್ರತಿಭಟನೆ ನಡೆಸುವರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್‌) ಕರ್ನಾಟಕ ರಾಜ್ಯ ಅಧ್ಯಕ್ಷರಾದ ಜಿ.ಸಿ.ಬಯ್ಯಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಯು. ಬಸವರಾಜ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆ(ಎಐಎಡಬ್ಲ್ಯೂಯು) ರಾಜ್ಯ ಅಧ್ಯಕ್ಷರಾ ನಿತ್ಯಾನಂದಸ್ವಾಮಿ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ(ಎಐಡಿಡಬ್ಲ್ಯೂಎ) ಅಧ್ಯಕ್ಷರಾದ ದೇವಿ, ಪ್ರಧಾನ ಕಾರ್ಯದರ್ಶಿ ಗೌರಮ್ಮ ಅವರು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರಿಗೆ ಮನವಿ ಸಲ್ಲಿಸಿದೆ.

Donate Janashakthi Media

Leave a Reply

Your email address will not be published. Required fields are marked *