ಪ್ರೊ. ಪ್ರಭಾತ್ ಪಟ್ನಾಯಕ್
ಲೋಪೆಜ್ ಒಬ್ರಾಡರ್, ಮೆಕ್ಸಿಕೋದಲ್ಲಿ ನವಉದಾರವಾದಕ್ಕೆ ವಿಮುಖತೆಯನ್ನು ತೋರಿಸುವ ಹಲವು ಆರ್ಥಿಕ ಬದಲಾವಣೆಗಳನ್ನು ಜಾರಿಗೊಳಿಸುತ್ತಿದ್ದಾರೆ. ನವಉದಾರವಾದಿ ಕಾರ್ಯಸೂಚಿಯನ್ನು ಬುಡಮೇಲು ಮಾಡುವಲ್ಲಿ ಎಷ್ಟರಮಟ್ಟಿಗೆ ಅವರು ಯಶಸ್ವಿಯಾಗುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಅವರ ಯೋಜನೆಯನ್ನು ಹಳಿ ತಪ್ಪಿಸುವುದು ಸಾಮ್ರಾಜ್ಯಶಾಹಿಗೆ ಅಷ್ಟು ಸುಲಭವಲ್ಲ. ಜನರು ಒಗ್ಗಟ್ಟಾಗಿದ್ದರೆ ಮತ್ತು ಒಗ್ಗಟ್ಟಿನ ಮೂಲಕ ರಾಜಕೀಯ ಐಕ್ಯತೆಯನ್ನು ಸಾಧಿಸಿದರೆ, ಅದರ ಎಲ್ಲಾ ಕುತಂತ್ರಗಳನ್ನು ಸೋಲಿಸಬಹುದು. ನವಉದಾರವಾದವನ್ನು ಜಯಿಸುವುದು ನಮ್ಮಂತಹ ದೇಶಗಳಿಗೆ ತುರ್ತು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮೆಕ್ಸಿಕೋದಲ್ಲಿ ಜರುಗುತ್ತಿರುವ ವಿದ್ಯಮಾನಗಳು ಭಾರತಕ್ಕೆ ಪಾಠಗಳಾಗಲಿವೆ.
ಮೆಕ್ಸಿಕೋದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಲೋಪೆಜ್ ಒಬ್ರಾಡರ್ ತಮ್ಮ ಉದ್ಘಾಟನಾ ಭಾಷಣದಲ್ಲಿಯೇ ನವಉದಾರವಾದವನ್ನು ಒಂದು “ಆಪತ್ತು” ಮತ್ತು “ವಿಪತ್ತು” ಎಂದು ವರ್ಣಿಸಿದ್ದರು. ‘ಮೊರೆನಾ’ ಎಂಬ ಅವರ ಎಡಪಂಥೀಯ ರಾಜಕೀಯ ಪಕ್ಷವು ತನ್ನ ಕಾರ್ಯಕ್ರಮದಲ್ಲಿ “ಜಾಗತಿಕ ಆರ್ಥಿಕ ಬಿಕ್ಕಟ್ಟು ನವಉದಾರವಾದಿ ಮಾದರಿಯ ವೈಫಲ್ಯವನ್ನು ಬಯಲುಮಾಡಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಹೇರಿದ ಆರ್ಥಿಕ ನೀತಿಗಳಿಂದಾಗಿ ನಿಧಾನಗತಿಯ ಬೆಳವಣಿಗೆಯ ದೇಶಗಳ ಪೈಕಿ ಮೆಕ್ಸಿಕೊ ಕೂಡ ಒಂದು” ಎಂದು ಹೇಳಿತ್ತು. ಈ ಕಾರಣದಿಂದಾಗಿಯೇ ಮೋರೆನಾ ಪಕ್ಷದ ಕಾರ್ಯಕ್ರಮವು “ವಿದೇಶಿ ಹಸ್ತಕ್ಷೇಪವಿಲ್ಲದ ಅಭಿವೃದ್ಧಿಯನ್ನು ಸಾಧಿಸುವ ಜವಾಬ್ದಾರಿಯನ್ನು ಪ್ರಭುತ್ವವು ವಹಿಸಿಕೊಳ್ಳಬೇಕು” ಎಂದು ಸೂಚಿಸಿತ್ತು.
ಈ ಕಣ್ಣೋಟದಿಂದ ಒಬ್ರಾಡರ್, ನವಉದಾರವಾದಕ್ಕೆ ವಿಮುಖತೆಯನ್ನು ತೋರಿಸುವ ಹಲವು ಆರ್ಥಿಕ ಬದಲಾವಣೆಗಳನ್ನು ಜಾರಿಗೊಳಿಸುತ್ತಿದ್ದಾರೆ. ಕಳೆದ ಕೆಲವು ದಶಕಗಳಿಂದಲೂ ಆ ದೇಶದ ನಾಯಕತ್ವಕ್ಕೆ ಸಂಪೂರ್ಣವಾಗಿ ಅಪಥ್ಯವಾಗಿದ್ದ ನಿಯಂತ್ರಣ ನೀತಿಗಳ ಆಡಳಿತವನ್ನು ಪುನಃ ತರುತ್ತಿದ್ದಾರೆ. ಅವರು ಈ ಉದ್ಧಟತನವನ್ನು ಪಾಶ್ಚಿಮಾತ್ಯ ಪತ್ರಿಕೆಗಳು ಖಂಡಿಸುತ್ತಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಲಂಡನ್ ಮೂಲದ ‘ದಿ ಎಕನಾಮಿಸ್ಟ್’ ಪಾಕ್ಷಿಕವಂತೂ “ಮೆಕ್ಸಿಕೋದ ಹುಸಿ ವಿಮೋಚಕ” ಎಂಬ ಶೀರ್ಷಿಕೆಯಡಿಯಲ್ಲಿ ತನ್ನ ಮೇ ಅಂತ್ಯದ ಸಂಚಿಕೆಯ ಮುಖಪುಟದಲ್ಲಿ ಒಬ್ರಾಡರ್ ಅವರ ಚಿತ್ರವನ್ನು ಇರಿಸಿ ಅವರ ಈ ಧೈರ್ಯವನ್ನು ಮೂದಲಿಸಿದೆ.
ನವಉದಾರವಾದವು ಜಾಗತಿಕ ಅರ್ಥವ್ಯವಸ್ಥೆಯನ್ನು ಸ್ಥಗಿತತೆಗೆ ತಂದಿರುವ ಬಗ್ಗೆ ಅರಿತಿರುವ ಪಶ್ಚಿಮ ದೇಶಗಳ ಮಾಧ್ಯಮಗಳ ಈ ರೀತಿಯ ದಾಳಿಯ ಬಗ್ಗೆ ಒಂದು ಗಮನ ಸೆಳೆಯುವ ಸಂಗತಿಯನ್ನು ಹೇಳುವುದಾದರೆ, ಪಾಶ್ಚಿಮಾತ್ಯ ನಗರ-ಪ್ರಧಾನ (ಮೆಟ್ರೋಪಾಲಿಟನ್) ಅರ್ಥವ್ಯವಸ್ಥೆಗಳು ನವಉದಾರವಾದಿ ಆಳ್ವಿಕೆಯಿಂದ ದೂರ ಸರಿದಾಗ ಈ ಮಾಧ್ಯಮಗಳು ಸಹಾನುಭೂತಿ ವ್ಯಕ್ತಪಡಿಸುತ್ತವೆ; ಆದರೆ, ಮೂರನೆಯ ಜಗತ್ತಿನ ದೇಶಗಳು ನವಉದಾರವಾದದಿಂದ ದೂರ ಸರಿದರೆ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುವ ರೀತಿಯಲ್ಲಿ ಬೊಬ್ಬಿರಿಯುತ್ತವೆ. ಇದು ಕೇವಲ ಇಬ್ಬಂದಿ ಮನೋಭಾವದ ವಿಷಯವಲ್ಲ. ಇದು, ಮೆಟ್ರೋಪಾಲಿಟನ್ ಅರ್ಥವ್ಯವಸ್ಥೆಗಳ ಹಣದುಬ್ಬರ-ಮುಕ್ತ ಚೇತರಿಕೆಗೆ ಮೂರನೆಯ ಜಗತ್ತಿನ ದೇಶಗಳ ಆದಾಯದ ಕುಗ್ಗುವಿಕೆಯು ಅಗತ್ಯವೆಂದು ಪರಿಗಣಿಸುವ ಸಾಮ್ರಾಜ್ಯಶಾಹಿ ವಿದ್ಯಮಾನಗಳಿಗೆ ಒಂದು ಜ್ವಲಂತ ಉದಾಹರಣೆಯಾಗುತ್ತದೆ, ದಕ್ಷಿಣ ಏಷ್ಯಾ ಅಥವಾ ಸಹರಾ-ಕೆಳಗಿನ ಆಫ್ರಿಕಾದ ದೇಶಗಳಿಗಿಂತ ಹೆಚ್ಚಿನ ತಲಾ ಆದಾಯವನ್ನು ಹೊಂದಿದ್ದರೂ ಸಹ, ಮೆಕ್ಸಿಕೊ ಇನ್ನೂ ಮೂರನೆಯ ಜಗತ್ತಿನ ಒಂದು ಭಾಗವೇ. ತೈಲ ಉತ್ಪಾದಕ ದೇಶವಾಗಿರುವುದರಿಂದ, ನಿಜಕ್ಕೂ ಅದು ಮೂರನೆಯ ಜಗತ್ತಿನ ಒಂದು ಪ್ರಮುಖ ಭಾಗವೇ.
ವಾಸ್ತವವಾಗಿ, ತೈಲ ವಲಯದಲ್ಲಿ ಒಬ್ರಾಡರ್ ಅವರು ಜಾರಿಗೊಳಿಸಿದ ಸುಧಾರಣೆಗಳು ಮಹತ್ವಪೂರ್ಣವಾಗಿವೆ. ತೈಲ ವಲಯವನ್ನು ಮತ್ತಷ್ಟು ಖಾಸಗೀಕರಣಗೊಳಿಸುವುದು ಅಂತಾರಾಷ್ಟ್ರೀಯ ಬಂಡವಾಳದ ಬೇಡಿಕೆಯಾಗಿದ್ದರೂ ಸಹ, ಒಬ್ರಾಡರ್ ಸರ್ಕಾರವು ತದ್ವಿರುದ್ಧ ದಿಕ್ಕಿನಲ್ಲಿ – ಅದನ್ನು ಮರು-ರಾಷ್ಟ್ರೀಕರಣ ಮಾಡುವತ್ತ – ಸಾಗಿದೆ. ಈ ನಿಟ್ಟಿನಲ್ಲಿ, ರಾಷ್ಟ್ರೀಯ ಇಂಧನ-ಸರಬರಾಜು ವ್ಯವಸ್ಥೆಯು ತೈಲವನ್ನು ಖಾಸಗಿ ತೈಲ ಕಂಪನಿಗಳಿಂದ ಖರೀದಿಸುವ ಬದಲು ಸರ್ಕಾರಿ ಸ್ವಾಮ್ಯದ ಪೆಮೆಕ್ಸ್ ಕಂಪನಿಯಿಂದ ಖರೀದಿಸುವುದನ್ನು ಕಡ್ಡಾಯಗೊಳಿಸಿದೆ. ತೈಲ ಅನ್ವೇಷಣೆಯಲ್ಲಿಯೂ ಸಹ ಪ್ರಮುಖವಾಗಿ ವಿದೇಶಿ ಖಾಸಗಿ ಕಂಪನಿಗಳಿಗೆ ತೆರೆದಿಟ್ಟಿದ್ದ ತೈಲ ಅನ್ವೇಷಣಾ ಹಕ್ಕುಗಳ ಹರಾಜುಗಳನ್ನು ನಿಲ್ಲಿಸಿದೆ.
ದೇಶೀಯ ತೈಲ ಸಂಸ್ಕರಣಾ ಸಾಮರ್ಥ್ಯದ ವಿಸ್ತರಣೆಯನ್ನು ಮೆಕ್ಸಿಕೊ ನಾಲ್ಕು ದಶಕಗಳಿಂದಲೂ ನಿಲ್ಲಿಸಿದೆ. ಹಿಂದೆ ಕಚ್ಚಾ ತೈಲವನ್ನು ಸಂಸ್ಕರಿಸಲು ಅದನ್ನು ಅಮೇರಿಕಾಗೆ ಕಳುಹಿಸುತ್ತಿತ್ತು. ಒಬ್ರಾಡರ್ ಸರ್ಕಾರವು ಪೆಮೆಕ್ಸ್ ನೇತೃತ್ವದಲ್ಲಿ ಮೆಕ್ಸಿಕೋದಲ್ಲೇ ಹೊಸ ಸಂಸ್ಕರಣಾ ಸಾಮರ್ಥ್ಯವನ್ನು ಸ್ಥಾಪಿಸಿತು. ಅದಕ್ಕಾಗಿ ಸರ್ಕಾರದಿಂದ ಆರ್ಥಿಕ ನೆರವು ಕೊಡಲಾಗುತ್ತಿದೆ. ಹೀಗಾಗಿ ತೈಲ ವಲಯಕ್ಕೆ ಸಂಬಂಧಿಸಿದ ಪ್ರತಿಯೊಂದು ಚಟುವಟಿಕೆಯಲ್ಲೂ, ತೈಲ ಅನ್ವೇಷಣೆಯಿಂದ ಹಿಡಿದು ಅದನ್ನು ಹೊರತೆಗೆದು ಸಂಸ್ಕರಿಸುವುದರವರೆಗೂ ಎಲ್ಲ ಹಂತಗಳಲ್ಲೂ ವಿದೇಶಿ ಖಾಸಗಿ ಹಿತಾಸಕ್ತಿಗಳನ್ನು ಕೊನೆಗೊಳಿಸಿದ ಒಬ್ರಾಡರ್ ಸರ್ಕಾರವು ಮೆಕ್ಸಿಕನ್ ಪ್ರಭುತ್ವದ ಪಾತ್ರವನ್ನು ವಿಸ್ತರಿಸಿದೆ.
ಈ ಕ್ರಮಗಳು ಆರ್ಥಿಕವಾಗಿಯೂ ಪರಿಣಾಮ ಹೊಂದಿವೆ. ತೈಲ ಮಾರಾಟದ ಮೂಲಕ ಪೆಮೆಕ್ಸ್ ಗಳಿಸಿದ ಲಾಭವು ರಾಜ್ಯದ ಬೊಕ್ಕಸಕ್ಕೆ ಬರುತ್ತದೆ. ಪೆಮೆಕ್ಸ್ ವಹಿವಾಟಿನ ಗಾತ್ರವು ಚಿಕ್ಕದಾಗಿದ್ದರೆ ಮತ್ತು ಅದರ ಕಡೆಯಿಂದ ಬರುವ ಲಾಭವು ಎಷ್ಟು ಕಡಿಮೆ ಇರುತ್ತದೆಯೊ ಅಷ್ಟುಮಟ್ಟಿಗೆ ಸರ್ಕಾರವು ತನ್ನ ಖರ್ಚು ವೆಚ್ಚಗಳಿಗಾಗಿ ಇತರ ಆದಾಯ ಮೂಲಗಳನ್ನು ಅವಲಂಬಿಸಬೇಕಾಗುತ್ತದೆ. ಆದಾಯದ ಇನ್ನೊಂದು ಮೂಲವೆಂದರೆ, ದೇಶೀಯವಾಗಿ ಉತ್ಪಾದಿಸಿದ ತೈಲದ ಮೇಲಿನ ತೆರಿಗೆಯೇ (ಭಾರತದಲ್ಲಿ ಮೋದಿ ಸರ್ಕಾರವು ಇದನ್ನೇ ಮಾಡುತ್ತಿದೆ). ಮೆಕ್ಸಿಕೋದ ತೈಲ ಉದ್ಯಮದ ಖಾಸಗೀಕರಣವು ತೈಲದ ಮೇಲೆ ಹೆಚ್ಚು ತೆರಿಗೆಗಳನ್ನು ಹೇರುವುದು ಎಂದಾಗಿದೆ. ಹಾಗಾಗಿ, ಮೆಕ್ಸಿಕೊ ಪ್ರಮುಖ ತೈಲ ಉತ್ಪಾದಕ ದೇಶವಾಗಿದ್ದರೂ (2019 ರಲ್ಲಿ ವಿಶ್ವ ತೈಲ ಒಟ್ಟು ಉತ್ಪಾದನೆಯ ಶೇ.2 ರಷ್ಟನ್ನು ಉತ್ಪಾದಿಸಿತ್ತು) ಅದರ ದೇಶೀಯ ತೈಲ ಬೆಲೆಯು ಇಡೀ ಉತ್ತರ ಅಮೆರಿಕಾ ಖಂಡದಲ್ಲೇ ಅತಿ ಹೆಚ್ಚಿನದಾಗಿತ್ತು. ದೀರ್ಘಕಾಲದಿಂದಲೂ ಹೆಚ್ಚಿನ ತೈಲ ಬೆಲೆಗಳನ್ನು ಒಬ್ರಾಡರ್ ವಿರೋಧಿಸುತ್ತಿದ್ದರು ಮತ್ತು ತೈಲ ವಲಯದಲ್ಲಿ ಸಾರ್ವಜನಿಕ ಒಡೆತನದ ವಿಸ್ತರಣೆಯು ಅವರ ಆ ವಿರೋಧಕ್ಕೆ ಇಂಬು ನೀಡಿದೆ.
ನವಉದಾರವಾದಿ ನೀತಿಗಳನ್ನು ಒಬ್ರಾಡರ್ ಪೂರ್ಣವಾಗಿ ಬದಲಾಯಿಸಿರುವುದು ತೈಲ ವಲಯದಲ್ಲಿ ಮಾತ್ರವಲ್ಲ. ವಿದೇಶಿ ಕಂಪನಿಗಳಿಗೆ, ಅದರಲ್ಲೂ ವಿಶೇಷವಾಗಿ ಕೆನಡಾದ ಕಂಪೆನಿಗಳಿಗೆ ನೀಡಿದ್ದ ಗಣಿಗಾರಿಕೆ ರಿಯಾಯಿತಿಗಳನ್ನು ನಿಲ್ಲಿಸಲಾಗಿದೆ. ಮತ್ತು, ಮೆಕ್ಸಿಕೋದ ಲಿಥಿಯಂ ನಿಕ್ಷೇಪಗಳನ್ನು ರಾಷ್ಟ್ರೀಕರಣಗೊಳಿಸುವ ಇಂಗಿತವನ್ನು ಒಬ್ರಾಡರ್ ವ್ಯಕ್ತಪಡಿಸಿದ್ದಾರೆ.
ಮೆಕ್ಸಿಕೋದ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ನಿಯಂತ್ರಣವನ್ನು ಮರಳಿ ಪಡೆಯುವ ಪ್ರಯತ್ನಗಳ ಜೊತೆಗೆ, ಒಬ್ರಾಡರ್ ಸರ್ಕಾರವು ಮೆಕ್ಸಿಕೋದ ಕೇಂದ್ರೀಯ ಬ್ಯಾಂಕ್ ಮೇಲಿನ ನಿಯಂತ್ರಣವನ್ನು ಮರಳಿ ಪಡೆಯಲು ಯೋಜಿಸುತ್ತಿದೆ. ಕೇಂದ್ರೀಯ ಬ್ಯಾಂಕ್‌ನ ಗವರ್ನರನ್ನು ಸರ್ಕಾರವು ನಾಮಮಾತ್ರವಾಗಿ ನೇಮಿಸುತ್ತದೆಯಾದರೂ, ಈ ಹುದ್ದೆಗೆ ನೇಮಕಗೊಂಡ ವ್ಯಕ್ತಿಯು ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳಕ್ಕೆ ಒಪ್ಪಿಗೆಯಾಗುವಂತಹ ವ್ಯಕ್ತಿಯೇ ಆಗಿರುತ್ತಾನೆ. ಅಂತಹ ವ್ಯಕ್ತಿಯು ಅನುಸರಿಸುವ ಹಣಕಾಸು ನೀತಿಯು ಆರ್ಥಿಕ ಬೆಳವಣಿಗೆಗಿಂತಲೂ ಹೆಚ್ಚಿನ ಆದ್ಯತೆಯನ್ನು ಹಣದುಬ್ಬರ ನಿಯಂತ್ರಣಕ್ಕೆ ನೀಡುತ್ತದೆ. ಅಂಥಹ ಹಣಕಾಸು ನೀತಿಯನ್ನು ಟೀಕಿಸಿದಾಗ, ಹಣದುಬ್ಬರವನ್ನು ನಿರ್ಲಕ್ಷಿಸಬೇಕು ಎಂಬುದು ಅದರ ಅರ್ಥವಲ್ಲ. ಹಣದುಬ್ಬರವನ್ನು ವಿಭಿನ್ನವಾಗಿ ನಿಭಾಯಿಸಬೇಕು ಎಂಬುದೇ ಈ ಟೀಕೆಯ ಉದ್ದೇಶ. ಬೆಳವಣಿಗೆಯನ್ನು ಕಡಿತಗೊಳಿಸುವ ಬಿಗಿ ಹಣಕಾಸು ನೀತಿಯ ಬದಲಾಗಿ, ಹಣದುಬ್ಬರದ ಬಗ್ಗೆ ಒಂದು ಪರ್ಯಾಯ ದೃಷ್ಟಿಯನ್ನು ಇಟ್ಟುಕೊಳ್ಳಬೇಕಾಗುತ್ತದೆ. ಈ ಅಂಶವು ಈಗ ಲ್ಯಾಟಿನ್ ಅಮೆರಿಕಾದಲ್ಲಿ ಬಿಸಿ ಚರ್ಚೆಯ ವಿಷಯವಾಗಿದೆ. ಹಾಗಾಗಿ, ಅದರ ಬಗ್ಗೆ ಕೆಲವು ಅಂಶಗಳನ್ನು ತಿಳಿದುಕೊಳ್ಳುವುದು ಅವಶ್ಯವಾಗುತ್ತದೆ.
ಮೂರನೆಯ ಜಗತ್ತಿನ ದೇಶಗಳ ಆರ್ಥಿಕ ಬೆಳವಣಿಗೆಯ ವೇಗವು ಹಲವಾರು ನೈಜ ಸಂರಚನಾ ಅಡೆತಡೆಗಳಿಂದ ನಿರ್ಬಂಧಿಸಲ್ಪಟ್ಟಿದೆ, ನಿಜ. ಈ ಅಡೆತಡೆಗಳು ಮೂಲತಃ ಕೃಷಿ ವಲಯದಿಂದ ಉದ್ಭವಿಸುತ್ತವೆ, ಅಲ್ಲಿ ಉತ್ಪಾದನೆಯು ಮಂದಗತಿಯಲ್ಲಿರುತ್ತದೆ. ಅದರ ಹೆಚ್ಚಳಕ್ಕೆ ಭೂ ಸುಧಾರಣೆಗಳು, ಲಾಗುವಾಡುಗಳ ಒದಗಿಸುವಿಕೆ ಮುಂತಾದ ಕ್ರಮಗಳ ಮೂಲಕ ಪ್ರಭುತ್ವದ ಪ್ರಜ್ಞಾಪೂರ್ವಕ ಹಸ್ತಕ್ಷೇಪದ ಅಗತ್ಯವಿರುತ್ತದೆ. ಹಾಗಾಗಿ ಆರ್ಥಿಕ ಬೆಳವಣಿಗೆಯ ದರವನ್ನು ಹೆಚ್ಚಿಸುವ ಪ್ರಯತ್ನಗಳು ಕೃಷಿ ವಲಯದಿಂದ ಉದ್ಭವಿಸುವ ಸಂರಚನಾ ಅಡೆತಡೆಗಳಿಂದಾಗಿ ತಕ್ಷಣವೇ ಹಣದುಬ್ಬರಕ್ಕೆ ಕಾರಣವಾಗುತ್ತವೆ. ಹಣದುಬ್ಬರವು ತಲೆ ಎತ್ತಿದ ಕೂಡಲೇ ಅದರ ನಿಯಂತ್ರಣವೇ ಒಂದು ಮುಖ್ಯ ಉದ್ದೇಶವಾದರೆ, ಅಂತಹ ನಿಯಂತ್ರಣ ಕ್ರಮಗಳು ಆರ್ಥಿಕ ಬೆಳವಣಿಗೆ ದರವನ್ನು ಕಡಿತಗೊಳಿಸುವಲ್ಲಿ ಪರಿಣಮಿಸುತ್ತವೆ. ಅಂದರೆ, ಅರ್ಥವ್ಯವಸ್ಥೆಯು ಶಾಶ್ವತವಾಗಿ ಕಡಿಮೆ ಆದಾಯದ ಬಲೆಯೊಳಗೇ ಉಳಿಯುತ್ತದೆ.
ಕಡಿಮೆ ಆದಾಯದ ಬಲೆಯಿಂದ ಹೊರಬರಬೇಕು ಎಂದಾದರೆ, ಹಣಕಾಸು ನೀತಿ ಮತ್ತು ಒಟ್ಟಾರೆ ಆರ್ಥಿಕ ನೀತಿಯು ಕೆಲವು ಕಟ್ಟುಪಾಡುಗಳಿಗೆ ಬಂಧಿಯಾಗಿರಬಾರದು. ಅದರ ಗುರಿ ಬೆಳವಣಿಗೆಯನ್ನು ಉತ್ತೇಜಿಸುವುದಾಗಿರಬೇಕು. ಹಣದುಬ್ಬರವು ತಲೆ ಎತ್ತಿದ್ದೇ ಆದರೆ, ಅದರಿಂದ ಆರ್ಥಿಕ ಬೆಳವಣಿಗೆಗೆ ಅಪಾಯವಾಗದಂತೆ, ಪಡಿತರ ಮತ್ತು “ಪೂರೈಕೆ ನಿರ್ವಹಣೆ” ಮತ್ತು ಇತರ ನೇರ ಕ್ರಮಗಳ ಮೂಲಕ ಉತ್ಪಾದನೆಯನ್ನು ಹೆಚ್ಚಿಸಿ, ಹಣದುಬ್ಬರವನ್ನು ಪ್ರತ್ಯೇಕವಾಗಿಯೇ ನಿಭಾಯಿಸಬೇಕಾಗುತ್ತದೆ.
ನವಉದಾರವಾದಿ ಅವಧಿಯಲ್ಲಿ, ಇತರ ಎಲ್ಲಾ ಉದ್ದೇಶಗಳಿಗಿಂತ ಹೆಚ್ಚಿನ ಆದ್ಯತೆಯನ್ನು ಹಣದುಬ್ಬರ-ನಿಯಂತ್ರಣಕ್ಕೆ ನೀಡಲಾಗುತ್ತದೆ ಎಂಬುದನ್ನು ಹೇಳಬೇಕಾಗಿಲ್ಲ. ಅಂದರೆ, ಕಡಿಮೆ ಆದಾಯದ ಬಲೆಗೆ ಸಿಕ್ಕಿಕೊಂಡಿರುವ ಅರ್ಥವ್ಯವಸ್ಥೆಗಳು ಅಲ್ಲಿಯೇ ಉಳಿಯುತ್ತವೆ. ಇದಕ್ಕೆ ಕಾರಣ, ಕೆಲವು ತಪ್ಪು ಅಕಡೆಮಿಕ್ ತಿಳುವಳಿಕೆಗಳಲ್ಲ. ಸಾಮ್ರಾಜ್ಯಶಾಹಿಯ ಕಾರ್ಯವಿಧಾನವೇ ಹಾಗಿದೆ. ಈ ಕಾರ್ಯವಿಧಾನದ ಪ್ರಕಾರವಾಗಿ, ನಗರ-ಪ್ರಧಾನ (ಮೆಟ್ರೋಪಾಲಿಟನ್) ಅರ್ಥವ್ಯವಸ್ಥೆಗಳ ಅವಶ್ಯಕತೆಗಳಿಗಾಗಿ, ಹಾಲಿ ಕೃಷಿ ಸರಕುಗಳನ್ನು (ಅಥವಾ ಇತರ ಬೆಳೆಗಳನ್ನು, ಭೂ ಬಳಕೆಯನ್ನು ಈ ಬೆಳೆಗಳನ್ನು ಬೆಳೆಯುವತ್ತ ತಿರುಗಿಸಿ), ಅವುಗಳ ಅನಗತ್ಯ ಬೆಲೆ-ಹೆಚ್ಚಳಗಳಿಲ್ಲದೆ ಪೂರೈಕೆ ಮಾಡುವಂತೆ ಒತ್ತಾಯಿಸಿ, ಮೂರನೆಯ ಜಗತ್ತಿನ ದೇಶಗಳ ಆದಾಯವನ್ನು ಸಂಕುಚಿತಗೊಳಿಸಲಾಗುತ್ತದೆ. ನವಉದಾರವಾದಿ ಯುಗದಲ್ಲಿ ಹಣಕಾಸು ನೀತಿಯ ಬಗ್ಗೆ ನಿರುಪದ್ರವಿಯಂತೆ ತೋರುವ ಈ ಚರ್ಚೆಯು ನಿಜಕ್ಕೂ ಮೂರನೆಯ ಜಗತ್ತಿನ ದೇಶಗಳ ಮೇಲೆ ಸಾಮ್ರಾಜ್ಯಶಾಹಿಯು ಹೇರಿದ ಆಡಳಿತವನ್ನು ಕಿತ್ತೊಗೆಯುವುದರ ಬಗ್ಗೆಯೇ. ಇದುವೇ ಅಧ್ಯಕ್ಷ ಒಬ್ರಾಡರ್ ಕೈಗೊಂಡಿರುವ ಕಾರ್ಯ. ಅದಕ್ಕಾಗಿಯೇ, ಒಬ್ರಾಡರ್ ಅವರನ್ನು “ಪ್ರಭುತ್ವವಾದ, ರಾಷ್ಟ್ರವಾದ ಮತ್ತು 1970ರ ದಶಕದ ಹಳೆನೆನಪುಗಳಿಗೆ” ಅಂಟಿಕೊಂಡಿರುವ ವ್ಯಕ್ತಿ (ದಿ ಎಕನಾಮಿಸ್ಟ್ ಪತ್ರಿಕೆಯ ಮಾತುಗಳಲ್ಲಿ) ಎಂಬುದಾಗಿ ಪಾಶ್ಚ್ಯಾತ್ಯ ಮಾಧ್ಯಮಗಳು ಅಪಹಾಸ್ಯ ಮಾಡುತ್ತಿವೆ.
ನವಉದಾರವಾದಿ ಕಾರ್ಯಸೂಚಿಯನ್ನು ಬುಡಮೇಲು ಮಾಡುವಲ್ಲಿ ಎಷ್ಟರಮಟ್ಟಿಗೆ ಒಬ್ರಾಡರ್ ಯಶಸ್ವಿಯಾಗುತ್ತಾರೆ ಎಂಬುದನ್ನು ನೋಡಬೇಕಾಗಿದೆ. ಆದರೂ, ಅವರ ಈ ಯೋಜನೆಯನ್ನು ಹಳಿ ತಪ್ಪಿಸುವುದು ಸಾಮ್ರಾಜ್ಯಶಾಹಿಗೆ ಅಷ್ಟು ಸುಲಭವಲ್ಲ. ಮೆಕ್ಸಿಕೋದ ಅಧ್ಯಕ್ಷೀಯ ಚುನಾವಣೆಗೆ ಇನ್ನೂ ಸ್ವಲ್ಪ ಸಮಯ ಇದೆಯಾದರೂ, ಶಾಸಕಾಂಗ ಮತ್ತು ಪ್ರಾಂತೀಯ ರಾಜ್ಯಪಾಲ ಹುದ್ದೆಗಳಿಗೆ ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಒಬ್ರಾಡರ್ ಗಣನೀಯ ಜನಬೆಂಬಲವನ್ನು ಹೊಂದಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಅದಕ್ಕಿಂತಲೂ ಮುಖ್ಯವಾಗಿ, ಮೆಕ್ಸಿಕನ್ ಕ್ರಾಂತಿಯಿಂದ ಹೊರಬಂದು ದಶಕಗಳ ಕಾಲ ಮೆಕ್ಸಿಕೊವನ್ನು ಆಳಿದ ಪಿಆರ್‌ಐ ನಂತಹ ಇತರ ರಾಜಕೀಯ ಪಕ್ಷಗಳ ಬೆಂಬಲವನ್ನು ಅವರು ಸಂಪಾದಿಸಿಕೊಂಡಿದ್ದಾರೆ. ಇಂದಿನ ಇಡೀ ಮೆಕ್ಸಿಕನ್ ಎಡಪಂಥೀಯರು ಒಂದು ಕಾಲದಲ್ಲಿ ಪಿಆರ್‌ಐ ನಲ್ಲಿದ್ದವರೇ(ಬೋಲ್ಶೆವಿಕ್ ಕ್ರಾಂತಿಯನ್ನನುಸರಿಸಿ ಎಂ.ಎನ್. ರಾಯ್ ಸ್ಥಾಪಿಸಿದ ಮೆಕ್ಸಿಕೊ ಕಮ್ಯುನಿಸ್ಟ್ ಪಕ್ಷ ಈಗ ಅಸ್ತಿತ್ವದಲ್ಲಿಲ್ಲ). ಆದ್ದರಿಂದ, ಲುಲಾ ವಿರುದ್ಧ ಬ್ರೆಜಿಲ್‌ನಲ್ಲಿ ಸಂಘಟಿಸಿದಂತೆ ಸಂಸದೀಯ ಕ್ಷಿಪ್ರಕ್ರಾಂತಿಯನ್ನು ಸಂಘಟಿಸುವುದು ಸಾಮ್ರಾಜ್ಯಶಾಹಿಗೆ ಕಷ್ಟವೇ ಸರಿ.
ಮೆಕ್ಸಿಕೋದಲ್ಲಿ ಜರುಗುತ್ತಿರುವ ವಿದ್ಯಮಾನಗಳು ಭಾರತಕ್ಕೆ ಪಾಠಗಳಾಗಲಿವೆ. ನಗರ-ಪ್ರಧಾನ ಅರ್ಥವ್ಯವಸ್ಥೆಗಳು ನವಉದಾರವಾದದಿಂದ ಹೊರಬರಲು ಪ್ರಯತ್ನಿಸುತ್ತಿವೆ. ಆದರೆ, ಅದೇ ಪ್ರಯತ್ನವನ್ನು ಮಾಡ ಬಯಸುವ ಮೂರನೆಯ ಜಗತ್ತಿನ ದೇಶಗಳ ಮೇಲೆ ದಾಳಿ ಮಾಡುತ್ತವೆ. ಮತ್ತು ಈ ಉದ್ದೇಶಕ್ಕಾಗಿ ಎಲ್ಲಾ ಅಸ್ತ್ರಗಳನ್ನು ಬಳಸುತ್ತವೆ, ಅಂತಹ ಪ್ರಯತ್ನಗಳ ವಿರುದ್ಧ ತೀವ್ರ-ಬಲಪಂಥೀಯ ರಾಜಕೀಯ ಪಕ್ಷಗಳನ್ನು ಬೆಂಬಲಿಸುವುದರಿಂದ ಹಿಡಿದು, ಜನರ ನಡುವೆ ವಿಭಜನೆಗಳನ್ನು ಸೃಷ್ಟಿಸುವುದರಿಂದ ಹಿಡಿದು ಕ್ಯೂಬಾದ ವಿಷಯದಲ್ಲಿ ಮಾಡುತ್ತಿರುವಂತೆ ಆರ್ಥಿಕ ಸಮರವನ್ನು (ಮತ್ತು ಕೆಲವು ಕಠಿಣ ಪರಿಸ್ಥಿತಿಗಳಲ್ಲಿ ಮಿಲಿಟರಿ ಹಸ್ತಕ್ಷೇಪವನ್ನೂ) ಬಳಸುತ್ತವೆ. ಆದರೆ, ಜನರು ಒಗ್ಗಟ್ಟಾಗಿದ್ದರೆ ಮತ್ತು ಒಗ್ಗಟ್ಟಿನ ಮೂಲಕ ರಾಜಕೀಯ ಐಕ್ಯತೆಯನ್ನು ಸಾಧಿಸಿದರೆ, ಈ ಎಲ್ಲಾ ಕುತಂತ್ರಗಳನ್ನು ಸೋಲಿಸಬಹುದು. ನವಉದಾರವಾದವನ್ನು ಜಯಿಸುವುದು ನಮ್ಮಂತಹ ದೇಶಗಳಿಗೆ ತುರ್ತು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜನರನ್ನು ಸಜ್ಜುಗೊಳಿಸಬೇಕು.
ಅನು: ಕೆ.ಎಂ.ನಾಗರಾಜ್