ಪಂಚಾಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ 2 ಎ ಪ್ರವರ್ಗಕ್ಕೆ ಸೇರ್ಪಡೆ ಮಾಡಿ ಮೀಸಲಾತಿ ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಕೂಡಲ ಸಂಗಮ ಪಂಚಾಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ 64 ದಿನಗಳಿಂದ ನಡೆಯುತ್ತಿದ್ದ ಧರಣಿ ಅಂತ್ಯಗೊಂಡಿದೆ. ಹಿಂದುಳಿದ ವರ್ಗಗಳ ಆಯೋಗ ಹಾಗೂ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ಮುಂದಿನ ಆರೇಳು ತಿಂಗಳಲ್ಲಿ ನೀಡುವ ವರದಿಯ ಆಧಾರದಲ್ಲಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯಲ್ಲಿ ಭರವಸೆ ನೀಡಿದ ಪ್ರಯುಕ್ತ ಹೋರಾಟವನ್ನು ಸ್ಥಗಿತಗೊಳಿಸಲಾಯಿತು.
ಮುಖ್ಯಮಂತ್ರಿಗಳ ಭರವಸೆಯನ್ನು ಆಧರಿಸಿ ಹೋರಾಟವನ್ನು ಕೈಬಿಡಲಾದರೂ ಅದರ ಪರ ಹಾಗೂ ವಿರುದ್ಧದ ಚರ್ಚೆ ಮಾತ್ರ ವ್ಯಾಪಕವಾಗಿ ಮುಂದುವರೆಯುತ್ತಿದೆ.
ವಿವಿಧ ಪ್ರಗತಿಪರ, ದಲಿತ ಹಾಗೂ ಹಿಂದುಳಿದವರ ಸಂಘಟನೆಗಳು ಈಗಾಗಲೇ ಸಭೆ ಸೇರಿ ಬಲಾಢ್ಯ ಸಮುದಾಯಗಳಿಗೆ ಹಿಂದುಳಿದ ವರ್ಗಗಳ ಪ್ರವರ್ಗದ ಪಟ್ಟಿಯಲ್ಲಿ ಮೀಸಲಾತಿ ನೀಡುವುದನ್ನು ಜನ ಹೋರಾಟದ ಮೂಲಕ ವಿರೋಧಿಸಲು ಮತ್ತು ಕಾನೂನು ಹೋರಾಟವನ್ನು ಆರಂಭಿಸಲು ನಿರ್ಧರಿಸಿವೆ. ಇದೊಂದು ಆರೋಗ್ಯಕರ ಬೆಳವಣಿಗೆಯಲ್ಲ. ಜನ ಒಗ್ಗಟ್ಟಾಗಿ ಅನಿಷ್ಟ ಜಾತಿಪದ್ಧತಿಯ ವಿರುದ್ಧ ಹೋರಾಡುವ ಬದಲಾಗಿ ಜಾತಿ ಆಧಾರದಲ್ಲಿ ಛಿಧ್ರರಾಗುತ್ತಿದ್ದಾರೆ. ‘ಜಾತಿ ವ್ಯವಸ್ಥೆ ಶ್ರಮಿಕರನ್ನು ವಿಭಜಿಸುತ್ತದೆ’ ಎಂಬ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮಾತು ಇಲ್ಲಿ ನಿಜವಾಗುತ್ತದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಸಂವಿಧಾನದಲ್ಲೇ ಮೀಸಲಾತಿ ಸವಲತ್ತು ನೀಡಲಾಗಿದೆ. ಅವರು ಶತಮಾನಗಳಿಂದ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಅವಕಾಶ ವಂಚಿತರು. ಅವರು ಅಸ್ಪೃಶ್ಯತೆ ಹಾಗೂ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದರು. ಶಿಕ್ಷಣದ ಹಕ್ಕು ನಿರಾಕರಿಸಲ್ಪಟ್ಟವರು. ಇವರು ಇತರರೊಂದಿಗೆ ಸಮಾನತೆ ಮತ್ತು ಸ್ವಾಭಿಮಾನದಿಂದ ಬಾಳುವಂತಾಗಲು ಅವರಿಗೆ ಮೀಸಲಾತಿ ಸೌಲಭ್ಯವನ್ನು ಸಂವಿಧಾನದಲ್ಲೇ ಘೋಷಣೆ ಮಾಡಲಾಗಿತ್ತು. ಈ ಮೀಸಲಾತಿ ಸೌಲಭ್ಯ ಬಹುಕಾಲ ಮುಂದುವರೆಯುವ ಅಗತ್ಯವಿಲ್ಲ ಎಂದು ಡಾ|| ಬಾಬಾಸಾಹೇಬ್ ಅಭಿಪ್ರಾಯಪಟ್ಟಿದ್ದರು. ಆದರೆ ದಶಕಗಳ ನಂತರವೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಪರಿಸ್ಥಿತಿಯಲ್ಲಿ ನಿರೀಕ್ಷಿತ ಬದಲಾವಣೆ ಸಾಧ್ಯವಾಗಿಲ್ಲ, ಅವರು ಇಂದಿಗೂ ಅವಮಾನದ ಬದುಕನ್ನೇ ಬದುಕುತ್ತಿದ್ದಾರೆ. ಆದ್ದರಿಂದ ಅವರ ಮೀಸಲಾತಿ ಸೌಲಭ್ಯ ಮುಂದುವರೆಯಬೇಕು. ಅದರ ಸಮರ್ಪಕ ಅನುಷ್ಠಾನ ಸಾಧ್ಯವಾಗಬೇಕು. ಅವರಿಗೆ ಮೀಸಲಾತಿ ಸೌಲಭ್ಯ ನೀಡುವಾಗ ಅದು ಭಿಕ್ಷೆಯಂತಿರಬಾರದು. ಅದು ಅವರ ಹಕ್ಕಾಗಿ ದೊರೆಯುವಂತಾಗಬೇಕು. ಯಾವ ಕೆನೆಪದರ ಸಿದ್ಧಾಂತವನ್ನು ಅವರಿಗೆ ಅನ್ವಯಿಸಬಾರದು. ಅವರು ಇತರರೊಂದಿಗೆ ಯಾವುದೇ ಬೇಧವಿಲ್ಲದೆ ಸಮಾನತೆಯಲ್ಲಿ ಬಾಳುವುದು ಸಾಧ್ಯವಾಗುವರೆಗೂ ಅವರಿಗೆ ಮೀಸಲಾತಿ ದೊರೆಯಬೇಕು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಗಳಿಗೆ ಸಿಗುವ ಸಂವಿಧಾನಾತ್ಮಕ ಮೀಸಲಾತಿಯಿಂದ ಬಲಾಢ್ಯ ಸಮುದಾಯಗಳ ಕೆಲವರು ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತಿದ್ದಾರೆ. ದಲಿತರನ್ನು ಮೀಸಲಾತಿ ಹಕ್ಕಿನಿಂದ ಮುಕ್ತಗೊಳಿಸಲು ಹೊಂಚುಹಾಕುತ್ತಿದ್ದಾರೆ. ತಮಗೂ ಮೀಸಲಾತಿ ಬೇಕು ಎಂದು ಸರ್ಕಾರಗಳ ಮೇಲೆ ಒತ್ತಡ ಹೇರುತ್ತಾರೆ. ಸರ್ಕಾರ ಪ್ರಬಲ ಜಾತಿ ಜನಗಳ ಕೈಯಲ್ಲೇ ಇರುವುದರಿಂದ ಅವರು ಸಂವಿಧಾನವನ್ನು ತಿದ್ದುಪಡಿ ಮಾಡಿಯಾದರೂ ಸೌಲಭ್ಯವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಕರ್ನಾಟಕದಲ್ಲಿ ಈಗ ನಡೆದಿರುವುದು ಇದೇ. ಹಿಂದೆ ಉತ್ತರ ಭಾರತದ ಪಾಟಿಗಾರ್, ಔಟ್ ಮೊದಲಾದ ಪ್ರಬಲ ಜಾತಿಗಳಿಗೆ ಸೇರಿದವರು ಇದೇ ರೀತಿ ಪ್ರಬಲ ಹೋರಾಟ ನಡೆಸಿದ್ದರು.
ಪ್ರಬಲ ಜಾತಿಗಳ ಮುಖಂಡರು ಮತ್ತು ಕೆಲವು ಮಠಾಧೀಶರು, “ನಮ್ಮ ಜಾತಿಯಲ್ಲೂ ಬಡವರಿದ್ದಾರೆ; ಅವರಿಗೆ ಮೀಸಲಾತಿಯಿಂದ ಅನುಕೂಲವಾಗುತ್ತದೆ” ಎಂಬ ವಾದವನ್ನು ಮುಂದಿಡುತ್ತಾರೆ. ಮೀಸಲಾತಿ ಬಡತನ ನಿರ್ಮೂಲನಾ ಕಾರ್ಯಕ್ರಮವಲ್ಲ. ಏರುತ್ತಿರುವ ಬೆಲೆಗಳನ್ನು ಇಳಿಸುವಂತೆ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಹೆಚ್ಚು ಹಣವನ್ನು ಸರ್ಕಾರ ಒದಗಿಸುವಂತೆ, ಶಿಕ್ಷಣ, ಆರೋಗ್ಯ, ವಸತಿ ಮೊದಲಾದ ಅಗತ್ಯಗಳಿಗೆ ಹೆಚ್ಚಿನ ಹಣ ಒದಗಿಸುವಂತೆ ಹೋರಾಟ ಮಾಡುವುದು ಬಡತನ ನಿರ್ಮೂಲನೆಗೆ ಸಹಾಯವಾಗುತ್ತದೆ. ಕೇವಲ ಮೀಸಲಾತಿಯಿಂದ ಬಡತನ ನಿರ್ಮೂಲನೆ ಆಗುವುದಿಲ್ಲ. ಎಲ್ಲರಿಗೂ ಶಿಕ್ಷಣ-ಎಲ್ಲರಿಗೂ ಉದ್ಯೋಗ ಸಿಗುವಂತಾಗಲು ಹೋರಾಡಿದರೆ ಮೀಸಲಾತಿಯ ಅಗತ್ಯವೇ ಇರಲಾರದು.
ಎಲ್ಲರಿಗೂ ಶಿಕ್ಷಣ ಸಿಗುವಂತಾಗಬೇಕಾದರೆ ಸರ್ಕಾರಿ ಶಾಲೆಗಳು ಒಳ್ಳೆಯ ಗುಣಮಟ್ಟದ ಶಿಕ್ಷಣವನ್ನು ನೀಡುವಂತಾಗಬೇಕು. ಎಲ್ಲರಿಗೂ ಉದ್ಯೋಗ ಸಿಗುವಂತಾಗಲು ಖಾಸಗೀ ರಂಗದಲ್ಲೂ ಮೀಸಲಾತಿ ಜಾರಿಗೆ ಬರಬೇಕು. ಬಡತನ, ನಿರುದ್ಯೋಗ, ಅನಕ್ಷರತೆ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು. ಶಾಶ್ವತ ಪರಿಹಾರ ನೀಡದ ಮೀಸಲಾತಿಗಾಗಿ ಜಾತಿ ಜಾತಿಗಳ ಜನ ಪರಸ್ಪರ ಕಚ್ಚಾಡುತ್ತಿದ್ದರೆ ಶೋಷಕರಿಗೇ ಲಾಭ. ಮೀಸಲಾತಿಯಲ್ಲಿ ಶಾಶ್ವತ ಪರಿಹಾರ ದೊರೆಯದು. ಮೀಸಲಾತಿಯಿಂದ ಬಡತನ ನಿರ್ಮೂಲನೆ ಅಥವ ಬಡವರ ಏಳಿಗೆಯಾಗಲು ಹೇಗೆ ಸಾಧ್ಯ?.