ನೀವು ಯಾರನ್ನು ಪ್ರತಿನಿಧಿಸುತ್ತಿದ್ದೀರಿ ? ಈ ಪ್ರಶ್ನೆ ಇಂದೇಕೆ ಉದ್ಭವಿಸುತ್ತಿದೆ ?


-ಇದು ಎಲ್ಲರಿಗೂ ಅನ್ವಯಿಸುವ ಬರಹವಲ್ಲ. ಆತ್ಮಸಾಕ್ಷಿ ಇದ್ದವರಿಗೆ ಅರ್ಥವಾದರೆ ಸಾಕು.

ನೀವು ಯಾರನ್ನು ಪ್ರತಿನಿಧಿಸುತ್ತಿದ್ದೀರಿ ? ಈ ಪ್ರಶ್ನೆ ಇಂದೇಕೆ ಉದ್ಭವಿಸುತ್ತಿದೆ ? ಹೌದು ಚುನಾವಣೆಯಲ್ಲಿ ಆಯ್ಕೆಯಾಗಿ, ವಿಧಾನಸಭೆಯಲ್ಲೋ, ವಿಧಾನ ಪರಿಷತ್ತಿನಲ್ಲೋ ಅಥವಾ ಸಂಸತ್ತಿನಲ್ಲೋ ಪ್ರಮಾಣವಚನ ಸ್ವೀಕರಿಸಿ ಅಧಿಕಾರದ ಗದ್ದುಗೆ ಏರುವ ಜನಪ್ರತಿನಿಧಿಗಳನ್ನು ಇಂದು ಕೇಳಲೇಬೇಕಾದ ಪ್ರಶ್ನೆ ಇದು. ಹೌದು, ನೀವು ಯಾರನ್ನು ಪ್ರತಿನಿಧಿಸುತ್ತಿದ್ದೀರಿ ? ನೀವು ಪ್ರಮಾಣ ವಚನ ಸ್ವೀಕರಿಸುವಾಗ ಏನೆಲ್ಲಾ ಬದ್ಧತೆ ತೋರುವಿರಿ ಅಲ್ಲವೇ  ? ದೇಶದ ಸಂವಿಧಾನಕ್ಕೆ ಬದ್ಧತೆಯಿಂದ ನಡೆದುಕೊಳ್ಳುವ ನಿಮ್ಮ ಪ್ರಮಾಣಕ್ಕೆ ಏನೆಲ್ಲಾ ಬಳಸುತ್ತೀರಿ. ಸಂವಿಧಾನ, ನಿಮ್ಮ ಆರಾಧ್ಯ ದೈವ, ಸಂವಿಧಾನ ಕರ್ತೃ ಅಂಬೇಡ್ಕರ್, ನಿಮ್ಮ ಮನಸ್ಸಾಕ್ಷಿ ಅಥವಾ ಪ್ರಜ್ಞೆ. ಅಲ್ಲವೇ ?

ನೀವು ರಾಜ್ಯಪಾಲರ ಮುಂದೆ, ರಾಷ್ಟ್ರಪತಿಗಳ ಮುಂದೆ ಉಚ್ಚರಿಸುವ ಒಂದೊಂದು ಅಕ್ಷರಕ್ಕೂ ಎಷ್ಟು ಮೌಲ್ಯವಿದೆ ಎಂಬ ಪರಿಜ್ಞಾನ ನಿಮಗಿದೆಯೇ ?  ಮೌಲ್ಯ ಎಂದ ಕೂಡಲೇ ನಿಮ್ಮ ಮನಸುಗಳು ಮಾರುಕಟ್ಟೆಯತ್ತ ಚಲಿಸುತ್ತವೆ. ಏಕೆಂದರೆ ನಿಮಗೆ ನೈಜ ಅಥವಾ ವಾಸ್ತವಿಕ ಮೌಲ್ಯದ ಅರ್ಥವೇ ಗೊತ್ತಿಲ್ಲ. ನೀವೇ ಮಾರಾಟವಾಗಲು ಸಿದ್ಧರಾಗಿರುತ್ತೀರಿ. ನೀವು ಕೂಡುವ ಕುರ್ಚಿ, ನೀವು ವಾಸಿಸುವ ಮನೆ ಮತ್ತು ನಿಮ್ಮ ಅಂತರಂಗ ಎಲ್ಲವೂ ಮಾರುಕಟ್ಟೆ ಸರಕುಗಳಾಗಿಬಿಟ್ಟಿವೆ. ಇನ್ನು ನಿಮಗೆ ಯಾವುದೇ ಒಂದು ಭೌತ ವಸ್ತುವಿನ ಅಥವಾ ಬೌದ್ಧಿಕ ವಸ್ತುವಿನ ವಾಸ್ತವಿಕ ಮೌಲ್ಯ ಅರ್ಥವಾಗುವುದಾದರೂ ಹೇಗೆ ?

ನಿಜ, ನಿಮಗೆ ರಾಜಕಾರಣ ಎಂದರೆ ಜೀವನೋಪಾಯದ ವೃತ್ತಿ. ಜೀವನೋಪಾಯ ಎಂದರೆ ಎರಡು ಹೊತ್ತಿನ ಕೂಳು, ತಲೆಯ ಮೇಲೊಂದು ಸೂರು, ಉಡಲು ಬಟ್ಟೆ ಎಂದುಕೊಳ್ಳಬೇಡಿ. ಇವೆಲ್ಲವೂ ಹೇರಳವಾಗಿದ್ದರಷ್ಟೇ ನೀವು ರಾಜಕೀಯ ಪ್ರವೇಶಿಸಲು ಸಾಧ್ಯ. ಇದನ್ನೂ ಮೀರಿದ ಜೀವನೋಪಾಯದ ಮಾರ್ಗವನ್ನು ನಿಮಗೆ ಪ್ರಜಾತಂತ್ರ ರಾಜಕಾರಣ ಒದಗಿಸುತ್ತಿದೆ. ಆಧುನಿಕ ಉದ್ಯೋಗ ಮಾರುಕಟ್ಟೆಯಲ್ಲಿ ಹೆಚ್ಚಿನ ವೇತನ ದೊರೆಯುವಲ್ಲಿಗೆ ಕಪ್ಪೆಗಳಂತೆ ಜಿಗಿಯುವ ವೃತ್ತಿನಿರತರಂತೆಯೇ ನೀವು ಹಿತವಲಯಗಳನ್ನೂ ಶ್ರೇಣೀಕರಣಗೊಳಿಸಿಬಿಟ್ಟಿದ್ದೀರಿ. ಬಿದಿರಿನ ಚಾಪೆಯಿಂದ ಹಿಡಿದು ರತ್ನಗಂಬಳಿಯವರೆಗೆ, ಚಾದರದಿಂದ ಹಿಡಿದು ಮೆತ್ತನೆಯ ಸುಪ್ಪತ್ತಿಗೆಯವರೆಗೆ ನಿಮ್ಮ  ಹಿತವಲಯ ವಿಸ್ತರಿಸುತ್ತದೆ. ನಿಮ್ಮ ಪುಟ್ಟ ಸಾಮ್ರಾಜ್ಯ ವಿಸ್ತರಣೆಗೆ ಈ ಹಿತವಲಯವೇ ಸೋಪಾನ. ನಂತರ ಕಲ್ಲುಬಂಡೆ, ಕೃಷಿ ಭೂಮಿ, ಮರಳು ಗಣಿ, ಕಲ್ಲು ಗಣಿ, ಸೇತುವೆ, ಮೇಲ್ಸೇತುವೆ, ರಸ್ತೆ ಕಾಮಗಾರಿ, ಅರಣ್ಯ ಸಂಪತ್ತು ಹೀಗೆ ನಿಮ್ಮ ಊಟದ ತಟ್ಟೆಯಲ್ಲಿ ಇರುವುದೆಲ್ಲವೂ ಸ್ವಾಹ ಮಾಡಲೆಂದೇ ?

ಅಲ್ಲವೇ ಸ್ವಾಮಿ.  ನೀವು ಆಣೆ ಪ್ರಮಾಣ ಮಾಡಿ ಶಾಸಕರೋ, ಸಚಿವರೋ ಆಗುವ ಮುನ್ನ ಒಮ್ಮೆ ಯೋಚಿಸಿ. 2019ರ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 83 ಕೋಟಿ ಮತದಾರರಿದ್ದರು. ಒಟ್ಟು ಜನಸಂಖ್ಯೆ 130 ಕೋಟಿ. ಈ 83 ಕೋಟಿಯ ಪೈಕಿ 55 ಕೋಟಿ ಮತದಾರರು ಮತ ಚಲಾಯಿಸಿದ್ದಾರೆ. ಇವರಲ್ಲಿ ಅರ್ಧದಷ್ಟು ಅಥವಾ ಶೇ 30ರಷ್ಟು ಜನರು ಒಂದು ಪಕ್ಷಕ್ಕೆ ಬೆಂಬಲ ಸೂಚಿಸಿರುತ್ತಾರೆ. ಸರಾಸರಿ ಶೇ 30 ರಿಂದ 40ರಷ್ಟು ಮತ ಪಡೆದ ಪಕ್ಷಗಳು ಅಧಿಕಾರಕ್ಕೆ ಬರುತ್ತವೆ. ಅಂದರೆ 130 ಕೋಟಿ ಜನಸಂಖ್ಯೆಯಲ್ಲಿ ಅಧಿಕಾರ ಪೀಠದಲ್ಲಿ ಕಾಣುವುದು 25 ಕೋಟಿ ಮಾತ್ರ. ಇನ್ನು ನೂರು ಕೋಟಿ ಜನರ ಅಭಿಪ್ರಾಯ ಏನು ? ನಿಗೂಢ. ಆದರೂ ನಿಮ್ಮನ್ನು ಸಮಸ್ತ ಜನಕೋಟಿಯ ಪ್ರತಿನಿಧಿಗಳೆಂದೇ ಗೌರವಿಸಲಾಗುತ್ತದೆ.

ಈ ಪ್ರಜ್ಞೆ ನಿಮ್ಮೊಳಗಿದೆಯೇ ಎಂದು ಒಮ್ಮೆ ಪ್ರಶ್ನಿಸಿಕೊಳ್ಳಿ. ನೀವು ನಿಮ್ಮ ಸುತ್ತಲಿನ ಸಮಸ್ತ ಜನತೆಯನ್ನು ಪ್ರತಿನಿಧಿಸುತ್ತಿದ್ದೀರಾ ? ನಿಮಗೆ ಆದ್ಯತೆಗಳಿರುತ್ತವೆ. ಮಾರುಕಟ್ಟೆಯಲ್ಲಿ ಸಹಜ  ಅಲ್ಲವೇ ? ಅತಿ ಹೆಚ್ಚು ರಿಯಾಯಿತಿ ಇರುವ ವಸ್ತುವನ್ನು ಖರೀದಿಸುವುದು, ಅತಿ ಹೆಚ್ಚು ಲಾಭ ಬರುವ ವಸ್ತುವನ್ನು ಮಾರುವುದು ಮಾರುಕಟ್ಟೆ ನಿಯಮ. ರಾಜಕೀಯ ಮಾರುಕಟ್ಟೆಯಲ್ಲೂ ಇದೇ ನಿಯಮವನ್ನು ಎಷ್ಟು ಬದ್ಧತೆಯಿಂದ ಅನುಸರಿಸುತ್ತೀರಿ. ಧರ್ಮ, ಜಾತಿ, ಉಪಜಾತಿ, ಪಂಗಡ, ಸ್ವಂತದವರು, ಅಕ್ಕ ಪಕ್ಕದವರು, ನಿಷ್ಠರು, ಅಲ್ಪ ನಿಷ್ಠರು, ವಂದಿಮಾಗಧರು, ಭಟ್ಟಂಗಿಗಳು ಹೀಗೆ ಶ್ರೇಣೀಕರಣಗೊಳಿಸುತ್ತಾ ಹೋಗುವ ನೀವು ಯಾವ ಪ್ರವರ್ಗಕ್ಕೂ ಸೇರದವರನ್ನು ತಲುಪುವ ವೇಳೆಗೆ ನಿಮ್ಮೊಳಗಿನ ಸರಕು ಖಾಲಿಯಾಗಿರುತ್ತದೆ.

ಮತ್ತೊಂದು ರೀತಿಯ ಆದ್ಯತಾ ವಲಯ ಮತ್ತು ಶ್ರೇಣೀಕರಣವೂ ಇದೆ. ನಮ್ಮ ನಿಮ್ಮ ಹಿರೀಕರ ಭಾವಚಿತ್ರವನ್ನಾದರೂ ಒಮ್ಮೆ ನೋಡಿ ನೆನಪಾಗಬಹುದು. ಈ ಶ್ರೇಣಿ ಮೇಲ್ಮುಖವಾಗಿ ಚಲಿಸುತ್ತದೆ. ನಿರ್ಗತಿಕರು, ಕಡು ಬಡವರು, ಅವಕಾಶವಂಚಿತರು, ಅಂಚಿನಲ್ಲಿರುವವರು, ನ್ಯಾಯವಂಚಿತರಾಗಿರುವವರು ಹೀಗೆ ಚಲಿಸುವ ಈ ಏಣಿ ಕೊನೆಯಲ್ಲಿ ಟಾಟಾ, ಅಂಬಾನಿಯವರನ್ನು ತಲುಪುತ್ತದೆ. ಈ ಮೇಲ್ಮುಖ ಚಲನೆಯ  ಆದ್ಯತೆ ನಿಮಗೆ ಕನಸಿನಲ್ಲೂ ಹೊಳೆಯಲಿಕ್ಕಿಲ್ಲ. ಏಕೆಂದರೆ ನೀವು ಗೆಲ್ಲಲು ಹಂಚಿದ ಹಣ ನಿಮಗೆ ವಾಪಸ್ ಬರಬೇಕೆಂದರೆ ಇವರಾರೂ ನೆರವಾಗುವುದಿಲ್ಲ. ಹಾಗಾಗಿ ನಿಮ್ಮ ಮೊದಲ ಹೆಜ್ಜೆ ಅಂಬಾನಿ-ಅದಾನಿಯ ಅಂಗಳದಲ್ಲಿರುತ್ತದೆ ಕೊನೆಯ ಹೆಜ್ಜೆ ಇಡುವ ಪ್ರಮೇಯವೇ ಬರುವುದಿಲ್ಲ. ಅಲ್ಲಿಯೇ ನಿಮ್ಮ ಕಾಲು ಕಟ್ಟಿಹಾಕಿಬಿಡುತ್ತಾರೆ.

ನೀವು ಯಾವ ಪಕ್ಷದಲ್ಲಾದರೂ ಇರಿ. ರಾಜಕಾರಣ ಸೂಪರ್ ಮಾರ್ಕೆಟ್ ಇದ್ದಂತೆ. ನೀವು ಮಾರಾಟಕ್ಕಿದ್ದೀರಿ, ಯಾರು ಹೆಚ್ಚಿನ ಬೆಲೆ ಕೊಡುತ್ತಾರೋ ಅವರಲ್ಲಿಗೆ ಹೋಗುತ್ತೀರಿ. ಈ ಮೌಲ್ಯದ ಬಗ್ಗೆ ನಿಮ್ಮ ಜ್ಞಾನ, ಪರಿಜ್ಞಾನ ಅಪಾರ. ಒಂದು ವರ್ಷದ ಅಧಿಕಾರ ನಿಮ್ಮ ಹಿತವಲಯದ ಸಾಮ್ರಾಜ್ಯವನ್ನು ಎಷ್ಟು ವಿಸ್ತರಿಸಲು ಸಾಧ್ಯ ಎನ್ನುವುದನ್ನು ಕ್ಷಣಮಾತ್ರದಲ್ಲಿ ಲೆಕ್ಕ ಹಾಕಿಬಿಡುತ್ತೀರಿ. ಇನ್ನೂ ಹೆಚ್ಚು ಬೆಲೆ ಸಿಕ್ಕರೆ ಮತ್ತೊಂದು ಹಿತವಲಯಕ್ಕೆ ಎಗರುತ್ತೀರಿ. ಏಕೆಂದರೆ ಇದು ನಿಮ್ಮ ಜೀವನೋಪಾಯದ ವೃತ್ತಿ. ನಮ್ಮ ಅಧಿಕಾರ ರಾಜಕಾರಣವೂ ನಿಮಗಾಗಿಯೇ ಖಾಲಿ ಕುರ್ಚಿಗಳನ್ನು ತಯಾರಿಸುತ್ತಲೇ ಇರುತ್ತದೆ. ನಿಗಮ, ಮಂಡಲಿ, ಪ್ರಾಧಿಕಾರ, ಅಕಾಡೆಮಿ ಹೀಗೆ. ನೀವು ಹಾಕಿದ ಬಂಡವಾಳಕ್ಕೂ ಮೋಸವಿಲ್ಲ.  ನಿಮ್ಮ ಮೇಲೆ ಹೂಡುವ ಬಂಡವಾಳಕ್ಕೂ ನೀವು ಕಪ್ಪ ಕಾಣಿಕೆ ಸಲ್ಲಿಸಿಯೇ ತೀರುತ್ತೀರಿ. ಅಷ್ಟೊಂದು ನಿಷ್ಟೆ, ಬದ್ಧತೆ ಮತ್ತು ಶ್ರದ್ಧೆ.

ಇದೇ ನಿಷ್ಠೆ, ಬದ್ಧತೆ ಮತ್ತು ಶ್ರದ್ಧೆ ಜನಸಾಮಾನ್ಯರ ಬಗ್ಗೆ ಏಕಿಲ್ಲ ? ಏಕೆಂದರೆ ಒಬ್ಬ ಪ್ರಜೆ ನಿಮಗೆ ನೀಡುವ ಒಂದು ಮತದ ಮೌಲ್ಯವೇ ತಿಳಿದಿಲ್ಲ ಇನ್ನು ಮನುಷ್ಯರ ಮೌಲ್ಯ ಹೇಗೆ ತಿಳಿಯಲು ಸಾಧ್ಯ ? ನಿಮ್ಮ ಸಾಮ್ರಾಜ್ಯ ವಿಸ್ತರಣೆಯ ಹಾದಿಯಲ್ಲಿ ತತ್ವ, ಸಿದ್ಧಾಂತ, ಸಾಮಾಜಿಕ ಮೌಲ್ಯ, ನ್ಯಾಯಪರತೆ ಮತ್ತು ಸಾಂವಿಧಾನಿಕ ಮೌಲ್ಯ ಎಲ್ಲವನ್ನೂ ಸಾಲುಸಾಲಾಗಿ ಸಮಾಧಿ ಮಾಡಿಬಿಟ್ಟಿದ್ದೀರಿ. ಇಂದು ನಿಮ್ಮ ಕೈಯ್ಯಲ್ಲಿರುವ ಬಾವುಟ, ಚಿಹ್ನೆ ನಾಳೆ ಬದಲಾಗಿರುತ್ತದೆ. ನಿಮ್ಮ ಮೂಲ ಚಿಹ್ನೆಗೆ ಮತ ನೀಡಿದ ಮತದಾರ ಬೆಪ್ಪಾಗಿ ನೋಡುತ್ತಿರುತ್ತಾನೆ. ಅಲ್ಲಿಯೂ ಬಾಚಿಕೊಂಡಿರುತ್ತೀರಿ, ಸಾಲದು ಎಂಬ ಕಾರಣಕ್ಕೆ ಇಲ್ಲಿಗೆ ಬಾಚಿಕೊಳ್ಳಲು ಬರುತ್ತೀರಿ. ಇಲ್ಲಿಯೂ ಸಾಧ್ಯವಾಗದಿದ್ದರೆ ನಿಮ್ಮ ಜನಪ್ರೀತಿ ಉಕ್ಕಿ ಹರಿದು ಜನತೆಯ ಆಶೋತ್ತರಗಳನ್ನು ಈಡೇರಿಸಲು ನಿಮ್ಮದೇ ಸ್ವಂತ ಚಿಹ್ನೆ, ಬಾವುಟ, ಬ್ಯಾನರ್ ಸಿದ್ಧಪಡಿಸಲು ಸಜ್ಜಾಗಿಬಿಡುತ್ತೀರಿ. ಇದೂ ನಿಮ್ಮ ಹಿತವಲಯ ಸಾಮ್ರಾಜ್ಯದ ವಿಸ್ತರಣೆಯ ಒಂದು ಭಾಗ ಅಲ್ಲವೇ ?

ಇಷ್ಟಾದರೂ ಭಾರತದ ಮತದಾರರು ನಿಮ್ಮನ್ನು ಸಹಿಸಿಕೊಳ್ಳುತ್ತಲೇ ಬಂದಿದ್ದಾರೆ. ಒಮ್ಮೆ ಎಲ್ಲರನ್ನೂ ನಿಲ್ಲಿಸಿ ಯಾರ್ಯಾರು ಎಲ್ಲೆಲ್ಲಿ ಇದ್ದಿರಿ, ಎಲ್ಲಿಂದ ಬಂದು ಎಲ್ಲಿಗೆ ತಲುಪಿದ್ದೀರಿ ಎಂದು ತೋರಿಸಲು ಪ್ರಯತ್ನಿಸಿದರೆ ಜನರು ಹುಚ್ಚರಾಗಿಬಿಡುತ್ತಾರೆ. ಹತ್ತನೆಯವರನ್ನು ಗಮನಿಸುವ ವೇಳೆಗೆ ಮೊದಲನೆಯವ ಮಗ್ಗಲು ಬದಲಿಸುವ ಸಾಧ್ಯತೆಗಳೇ ಹೆಚ್ಚು. ನಿಮ್ಮ ಈ ಮಾರುಕಟ್ಟೆ ಹುಚ್ಚಾಟವನ್ನೇ ದೇಶಭಕ್ತಿ, ದೇಶಪ್ರೇಮಗಳ ಭಾವನೆಗಳಲ್ಲಿ ತೇಲಿಸಿ, ದೇಶ ಕಟ್ಟಿದ ಮಹನೀಯರ ಹೆಸರಿನಲ್ಲಿ ನಿಮ್ಮದೇ ಆದ ವಾದಗಳನ್ನು ಸೃಷ್ಟಿಸಿಕೊಳ್ಳುತ್ತಾ ನಡೆದುಬಿಡುತ್ತೀರಿ. ಬೇಲಿ ಹಾರಿದ ಮೇಲೂ ಸತ್ಯವಂತರಂತೆ ಕಾರಣಗಳನ್ನು ನೀಡುತ್ತಾ ಸಮರ್ಥಿಸಿಕೊಳ್ಳುವ ನಿಮ್ಮನ್ನು ಜನರು ನಂಬುತ್ತಲೂ ಇದ್ದಾರೆ. ಮತದಾರರನ್ನು ನೋಡಿದರೆ ಅಯ್ಯೋ ಎನಿಸುತ್ತದೆ.

ಹಾಗೆಂದ ಮಾತ್ರಕ್ಕೆ ಮತದಾರರನ್ನು ಅಬ್ಬೇಪಾರಿಗಳೆಂದು ಭಾವಿಸಬೇಡಿ. ಯಾವುದೋ ಒಂದು ನಂಬಿಕೆ, ಇಲ್ಲಿನ ವ್ಯವಸ್ಥೆಯ ಮೇಲಿನ ವಿಶ್ವಾಸ ಮತ್ತು ನೀವುಗಳೇ ವ್ಯವಸ್ಥಿತವಾಗಿ ಸೃಷ್ಟಿಸಿರುವ ಭ್ರಮಾಲೋಕ ಮತದಾರರನ್ನು ಕಟ್ಟಿಹಾಕಿರುತ್ತದೆ. ಒಮ್ಮೆ ಈ ಭ್ರಮೆಯ ಪೊರೆ ಕಳಚಿದರೆ ನೀವು ತರಗೆಲೆಗಳಾಗಿಬಿಡುತ್ತೀರಿ. ನಿಮ್ಮಲ್ಲಿಯ ಹಣಬಲ-ತೋಳ್ಬಲ ಮತ್ತು ಜಾತಿ ಧರ್ಮಗಳ ಬಲದಿಂದ ಮತ್ತೊಮ್ಮೆ ನೀವೇ ಗೆದ್ದುಬರುತ್ತೀರಿ. ಬೇಲಿ ಹಾರುತ್ತೀರಿ. ಗೋಡೆಗಳನ್ನೂ ದಾಟುತ್ತೀರಿ. ನಿಮ್ಮ ಅಡಿಪಾಯ ಸದಾ ಸುಭದ್ರ. ಆದರೆ ಇದು ಶಾಶ್ವತ ಅಲ್ಲ ಎನ್ನುವುದನ್ನು ಗಮನದಲ್ಲಿಡಿ. ಇಷ್ಟು ಹೇಳುವ ಕಾರಣ ಎಂದರೆ :-

ನೀವು ಯಾವುದೇ ಪಕ್ಷದಲ್ಲಿರಿ, ಕಳೆದ ಆರು ತಿಂಗಳ ಅವಧಿಯಲ್ಲಿ ಈ ದೇಶದ ದುಡಿಯುವ ಜನರ ಬದುಕುವ ಹಕ್ಕುಗಳನ್ನೇ ಕಸಿದುಕೊಳ್ಳುವಂತಹ ಕಾನೂನುಗಳು ಜಾರಿಯಾಗುತ್ತಿವೆ. ಎರಡು ದಿನಗಳಿಂದ ನಡೆಯುತ್ತಿರುವ ಘಟನೆಗಳನ್ನು ನೋಡುತ್ತಿರುವಿರಲ್ಲವೇ ? ತಮ್ಮ ಹಕ್ಕುಗಳಿಗಾಗಿ, ಕುಸಿದುಹೋಗುತ್ತಿರುವ ತಮ್ಮ ನೆಲೆಯನ್ನು ಉಳಿಸಿಕೊಳ್ಳಲು, ತಮ್ಮ ಭವಿಷ್ಯದ ಬಗ್ಗೆ ಆತಂಕದಿಂದ ನ್ಯಾಯ ಕೇಳಲು ದೇಶದ ಅಧಿಕಾರಪೀಠದತ್ತ ತೆರಳುತ್ತಿರುವ ಸಾವಿರಾರು ಮಂದಿ ಅನ್ನದಾತರನ್ನು, ದುಡಿಯುವ ಕೈಗಳನ್ನು ದಮನಿಸಲು ಅಶ್ರುವಾಯು, ಜಲಫಿರಂಗಿ ಬಳಸಲಾಗುತ್ತಿದೆ. ಅವರನ್ನು ರಸ್ತೆಯಲ್ಲೇ ತಡೆಗಟ್ಟಲಾಗುತ್ತಿದೆ. ತಮ್ಮ ನಾಳಿನ ಅನಿಶ್ಚಿತತೆಯಿಂದ ಕಂಗಾಲಾಗಿರುವ ಈ ದೇಶದ ಶ್ರಮಿಕರ ದನಿಯನ್ನು ಆಲಿಸುವ ವ್ಯವಧಾನವನ್ನೂ ಅಧಿಕಾರ ಕೇಂದ್ರ ಕಳೆದುಕೊಂಡಿದೆ.

ಈ ವಿದ್ಯಮಾನ ಮತ್ತು ಘಟನೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು ? ಕಾರ್ಮಿಕ ಹಕ್ಕುಗಳನ್ನು, ರೈತರ ಭೂಮಿಯನ್ನು, ಕೃಷಿಕರ ಫಸಲನ್ನು, ದೇಶದ ಸಂಪನ್ಮೂಲಗಳನ್ನು ಕಂಪನಿ ಒಡೆಯರಿಗೆ ಮಾರಾಟ ಮಾಡಬೇಡಿ ಎಂದು ಹೇಳುವ ಜನರು ನಿಮಗೆ ಶಿಕ್ಷಾರ್ಹ ಅಪರಾಧಿಗಳಂತೆ ಕಂಡುಬಂದರೆ ನಿಮ್ಮ ದೃಷ್ಟಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮಿಗಳು ಹೇಗೆ ಕಾಣಲು ಸಾಧ್ಯ ? ಅವರ ಹೆಸರಿನಲ್ಲೇ ನಿಮ್ಮ ರಾಜಕಾರಣ ನಡೆಯುತ್ತಿದೆಯಲ್ಲವೇ ? ಈ ಕಾರ್ಮಿಕರು, ರೈತರು, ದುಡಿಯುವ ವರ್ಗಗಳು ಪ್ರತಿನಿಧಿಸುವುದು ಈ ದೇಶದ ಜನತೆಯನ್ನು. ಆ ಜನತೆಯ ಪ್ರತಿನಿಧಿಗಳು ನೀವು. ಸಮಸ್ತ ಜನತೆ ನಿಮಗೆ ಮತ ನೀಡುವುದಿಲ್ಲ. ಸಮಸ್ತ ಜನತೆ ಹೋರಾಟಕ್ಕೂ ಇಳಿಯುವುದಿಲ್ಲ. ನೀವು ಪ್ರತಿನಿಧಿಸುವುದು ಈ ಜನತೆಯನ್ನು. ನಂತರ ದೇಶ ನಂತರ ನಿಮ್ಮ ಪಕ್ಷ.

ಆದರೆ ನಿಮಗೆ ಈ ಜನತೆಯ ಬಗ್ಗೆ ಕಾಳಜಿ ಇರಬೇಕಲ್ಲವೇ ? ಕನಿಷ್ಠ ಪಕ್ಷ ಪ್ರತಿಭಟನಾಕಾರರನ್ನು ಮಾನವೀಯತೆಯಿಂದ ನೋಡಿ ಎಂದು ಹೇಳುವಷ್ಟು ಆತ್ಮಸಾಕ್ಷಿಯೂ ನಿಮ್ಮಲ್ಲಿ ಉಳಿದಿಲ್ಲವೇ ? ಖಂಡಿಸಿದರೆ ಸ್ಥಾನ, ಹುದ್ದೆ, ಪದವಿ ಹೋಗುತ್ತದೆ ಎನ್ನುವ ಭೀತಿಯೇ ? ಈಗ ಹೇಳಿ, ನಿಮಗೆ ರೈತ ಕಾರ್ಮಿಕರ ಮೇಲೆ ದೆಹಲಿಯ ಬಳಿ ನಡೆದ ದೌರ್ಜನ್ಯವನ್ನು ಖಂಡಿಸುವಷ್ಟು ಕ್ಷಮತೆ, ವ್ಯವಧಾನ, ಮಾನವೀಯತೆಯೂ ಇಲ್ಲ ಎಂದರೆ ಗಾಂಧಿ-ಅಂಬೇಡ್ಕರ್-ಲೋಹಿಯಾ ಮುಂತಾದ ಚಿಂತಕರ ಹೆಸರನ್ನು ಹೇಳುವ ಅರ್ಹತೆ ನಿಮ್ಮಲ್ಲಿದೆಯೇ ? ನೀವು ಮಾರುಕಟ್ಟೆಯ ಸರಕುಗಳಂತೆಯೇ ಇದ್ದುಬಿಡಿ ಆದರೆ ಯಾವ ಮಹನೀಯರ ಹೆಸರನ್ನು ಬಳಸಬೇಡಿ. ಇಸಂಗಳನ್ನು ಬಳಸಬೇಡಿ.

ನಮಗೆ ಗೊತ್ತಿದೆ ನೀವು ನಿಮ್ಮ ಪ್ರಜ್ಞೆಯನ್ನೇ ಅಧಿಕಾರ ಪೀಠಗಳ ಬಳಿ ಒತ್ತೆ ಇಟ್ಟಿದ್ದೀರಿ.

Donate Janashakthi Media

Leave a Reply

Your email address will not be published. Required fields are marked *