ಗುರುರಾಜ ದೇಸಾಯಿ
ರಾಜ್ಯ ವಿಧಾನಮಂಡಲದ ಉಭಯ ಸದನಗಳ ಸದಸ್ಯರಿಗೂ ಸಮಾನವಾಗಿ ಶಾಸಕರ ನಿಧಿಯನ್ನು ಹಂಚಿಕೆ ಮಾಡುವ ಪದ್ದತಿ ಜಾರಿಯಲ್ಲಿದೆ. ಪ್ರತಿ ವರ್ಷ ಅವರವರು ಪ್ರತಿನಿಧಿಸುವ ಕ್ಷೇತ್ರಗಳ ಅಭಿವೃದ್ಧಿಗೆ ಈ ಹಣವನ್ನು ವ್ಯಯಿಸಬಹುದಾಗಿದೆ. ವಿಧಾನಸಭೆಯ ಸಂಖ್ಯಾಬಲ 224, ಒಂದು ಆಂಗ್ಲೋ ಇಂಡಿಯನ್ ಸದಸ್ಯರ ನಾಮನಿರ್ದೇಶನ ಸೇರಿದರೆ 225 ಆಗಲಿದೆ. ವಿಧಾನ ಪರಿಷತ್ ಸದಸ್ಯ ಬಲ 75 ಒಟ್ಟು ಉಭಯ ಸದನಗಳ ಸದಸ್ಯರ ಸಂಖ್ಯೆ 300 ಆಗಲಿದೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳು, ಶಿಕ್ಷಕರ ಕ್ಷೇತ್ರ, ಪದವೀಧರ ಕ್ಷೇತ್ರದ ವ್ಯಾಪ್ತಿ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯನ್ನೂ ಇದು ಒಳಗೊಂಡಿದೆ. ಪ್ರತಿವರ್ಷ ಸಿಗಲಿರುವ ಶಾಸಕರ ನಿಧಿಯ ಮೊತ್ತ ಹಾಗು ಯಾವೆಲ್ಲಾ ಕೆಲಸಗಳಿಗೆ ಹಣ ಬಳಕೆ ಮಾಡಬಹುದು ಹಾಗೂ ಎಷ್ಟು ಶಾಸಕರು ಆ ಹಣವನ್ನು ಖರ್ಚು ಮಾಡಿದ್ದಾರೆ ಎಂಬುದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಪ್ರತಿ ಶಾಸಕ ಹಾಗು ವಿಧಾನ ಪರಿಷತ್ ಸದಸ್ಯರಿಗೆ ಪ್ರತಿ ವರ್ಷ 2 ಕೋಟಿ ರೂ.ಗಳ ಹಣವನ್ನು ಶಾಸಕರ ನಿಧಿಯೆಂದು ನೀಡಲಾಗ್ತದೆ. ವಿಧಾನಸಭೆ ಮತ್ತು ವಿಧಾನ ಪರಿಷತ್ನ 300 ಸದಸ್ಯರಿಗೆ ವರ್ಷಕ್ಕೆ 600 ಕೋಟಿ ಹಣ ಶಾಸಕರ ನಿಧಿಗೆ ನೀಡಲಾಗ್ತದೆ. ಈ ಹಣ ನೇರವಾಗಿ ಶಾಸಕರ ಖಾತೆಗಳಿಗೆ ತಲುಪುವುದಿಲ್ಲ. ಆಯಾ ಶಾಸಕರ ಕ್ಷೇತ್ರ ವ್ಯಾಪ್ತಿಯ ಜಿಲ್ಲಾಧಿಕಾರಿಗಳ ಪಿಡಿ ಖಾತೆಗೆ ನಾಲ್ಕು ಕಂತುಗಳಲ್ಲಿ ಹಣಕಾಸು ಇಲಾಖೆಯಿಂದ ಹಣ ಸಂದಾಯವಾಗಲಿದೆ. ಶಾಸಕರು ಅವರ ಸ್ಥಳೀಯ ಕ್ಷೇತ್ರಾಭಿವೃದ್ಧಿ ಯೋಜನೆಯಡಿ ಶಿಫಾರಸು ಮಾಡುವ ಯೋಜನೆಗಳಿಗೆ ಜಿಲ್ಲಾಧಿಕಾರಿಗಳ ಖಾತೆಯಿಂದ ಹಣ ಬಿಡುಗಡೆಯಾಗಲಿದೆ.
ಯಾವ ಯಾವ ಯೋಜನೆಗೆ ನಿಧಿ ಬಳಸಬಹುದು : ಶಾಸಕರ ನಿಧಿಯ ಅನುದಾನ ನೇರವಾಗಿ ಶಾಸಕರ ಖಾತೆಗೆ ಹೋಗುವುದಿಲ್ಲ. ಆ ಹಣ ಜಿಲ್ಲಾಧಿಕಾರಿಗಳ ಪಿ.ಡಿ(ವೈಯಕ್ತಿಕ ಠೇವಣಿ) ಖಾತೆಗೆ ಹೋಗುತ್ತದೆ. ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಸಮುದಾಯ ಭವನ, ಗ್ರಾಮೀಣ ರಸ್ತೆ, ಶಾಲೆ, ಕಾಲೇಜು, ಅಂಗನವಾಡಿ ಕಟ್ಟಡ, ಆಸ್ಪತ್ರೆ ಕಟ್ಟಡ, ಚರಂಡಿ, ತುರ್ತು ಕುಡಿಯುವ ನೀರು, ಬೀದಿ ದೀಪ, ಗ್ರಂಥಾಲಯ, ಬಸ್ ತಂಗುದಾಣ ಸೇರಿದಂತೆ ವಿವಿಧ ಜನೋಪಯೋಗಿ ಕೆಲಸಗಳಿಗೆ ಈ ನಿಧಿಯನ್ನು ಬಳಸಬಹುದಾಗಿದೆ.
ಹೀಗೆ ಕ್ಷೇತ್ರಾಭಿವೃದ್ಧಿ ಯೋಜನೆಯಡಿ ಶಾಸಕರು ಶಿಫಾರಸು ಮಾಡುವ ಯೋಜನೆಗಳಿಗೆ ಜಿಲ್ಲಾಧಿಕಾರಿ ಖಾತೆಯಿಂದ ಹಣ ಬಿಡುಗಡೆ ಆಗುತ್ತದೆ. ಆದರೆ, ಶಾಸಕರು ಈ ಅನುದಾನವನ್ನು ಬಳಸಲು ಹಿಂದೆ ಬಿದ್ದಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತಿವೆ. ಸ್ವತಃ ಸಿಎಂ ಸೆಪ್ಟೆಂಬರ್ ನಲ್ಲಿ ಶಾಸಕರ ನಿಧಿ ಬಳಕೆಯಾಗದೇ ಇರುವ ಬಗ್ಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿ, ಎಲ್ಲಾ ಶಾಸಕರಿಗೆ ಪತ್ರ ಬರೆದಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು.
ಬಿಡುಗಡೆಯಾದ ನಿಧಿ ಎಷ್ಟು? : 2021-22 ಸಾಲಿನಲ್ಲಿ ಎರಡು ಕಂತುಗಳಲ್ಲಿ ತಲಾ 1 ಕೋಟಿ ರೂ.ನಂತೆ ಎರಡು ಕೋಟಿ ರೂ. ಅನುದಾನವನ್ನು ಎಲ್ಲ ಶಾಸಕರ ಖಾತೆಗೆ ಬಿಡುಗಡೆ ಮಾಡಲಾಗಿದೆ. ಆದರೆ ಅನುದಾನದ ಬಳಕೆ ಮಾಡುವಲ್ಲಿ ಶಾಸಕರು ತಮ್ಮ ನಿರಾಸಕ್ತಿ ಮುಂದುವರಿಸಿದ್ದಾರೆ. ಯೋಜನೆ ಇಲಾಖೆ ನೀಡಿದ ಅಂಕಿಅಂಶದಂತೆ ಸೆಪ್ಟೆಂಬರ್ ಅಂತ್ಯದವರೆಗೆ ಶಾಸಕರ ನಿಯಿಂದ ಒಟ್ಟು ಶೇ.27.02ರಷ್ಟಯ ಅನುದಾನ ಮಾತ್ರ ಬಳಕೆಯಾಗಿದೆ. ಉಳಿದ ಹಣವನ್ನು ಬಳಕೆ ಮಾಡದೆ ಹಾಗೆ ಬಿಡಲಾಗಿದೆ. ಪ್ರತಿ ವರ್ಷ ಜೂನ್ ತಿಂಗಳ ಒಳಗೆ ಎಲ್ಲ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿ ತಲಾ 2 ಕೋಟಿವರೆಗಿನ ಪ್ರಸ್ತಾವನೆಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಬೇಕು ಮತ್ತು ಪ್ರಸ್ತಾವಿತ ಕಾಮಗಾರಿಯನ್ನು ಎರಡು ವರ್ಷದ ಒಳಗೆ ಪೂರ್ಣಗೊಳಿಸಬೇಕಾಗಿದೆ. ಆದರೆ ಎರಡರಲ್ಲೂ ಶಾಸಕರು ಹಿಂದೆ ಬಿದ್ದಿದ್ದಾರೆ. ಮಂಜೂರಾದ ಹಣವನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಕೆ ಮಾಡುವಲ್ಲಿ ಹಿಂದೇಟಾಕುತ್ತಿದ್ದಾರೆ.
ಜಿಲ್ಲಾವಾರು ಶಾಸಕರ ನಿ ಬಳಕೆ ಪ್ರಮಾಣ: ಮಂಡ್ಯ ಶೇ.10.71ರಷ್ಟು, ಕೊಪ್ಪಳ ಶೇ.10.88, ಕೋಲಾರ 12.39%, ಯಾದಗಿರಿ 13.87%, ಕಲಬುರ್ಗಿ 13.99%, ಚಿತ್ರದುರ್ಗ 15.87%, ಹಾವೇರಿ 16.81%, ರಾಮನಗರ 16.84%, ಬಳ್ಳಾರಿ 19.63%, ಚಾಮರಾಜನಗರ 20.83%, ಬೆಳಗಾವಿ 22.44%, ರಾಯಚೂರು 24.38%, ಗದಗ 24.98%, ಕೊಡಗು ಶೇ.26.14ರಷ್ಟು ಮಾತ್ರ ಶಾಸಕರ ನಿಧಿ ಅನುದಾನ ಖರ್ಚು ಮಾಡಲಾಗಿದೆ.
ಇನ್ನು ಶಿವಮೊಗ್ಗ 26.42%, ಧಾರವಾಡ 27.14%, ಉ.ಕನ್ನಡ 28.16%, ಚಿಕ್ಕಮಗಳೂರು 29.80%, ಚಿಕ್ಕಬಳ್ಳಾಪುರ 29.81%, ಬೀದರ್ 35.54%, ತುಮಕೂರು 36.17%, ಬೆಂಗಳೂರು ನಗರ 37.16%, ಉಡುಪಿ 38.53%, ಬೆಂಗಳೂರು ಗ್ರಾಮಾಂತರ 40.05%, ಮೈಸೂರು 40.11%, ವಿಜಯಪುರ 43.56%, ಬಾಗಲಕೋಟೆ 44.43%, ದ.ಕನ್ನಡ 44.69%, ಹಾಸನ 45.11%, ದಾವಣಗೆರೆ 45.43% ಪ್ರಮಾಣದಲ್ಲಿ ಶಾಸಕರ ನಿ ಬಳಕೆ ಮಾಡಲಾಗಿದೆ.
2018ರ ವಿಧಾನಸಭೆ ಅಸ್ತಿತ್ವಕ್ಕೆ ಬಂದು ಮೂರು ವರ್ಷಗಳು ಕಳೆದಿವೆ. ಆದರೆ ಶಾಸಕರಿಗೆ ಪ್ರತಿ ವರ್ಷ ನೀಡುವ ವಿವೇಚನಾ ನಿಧಿ ಸರಿಯಾಗಿ ಬಳಕೆಯಾಗಿಲ್ಲ ಎನ್ನುವ ಆರೋಪವಿದೆ. ಹಲವು ಶಾಸಕರಿಗೆ ದೊರೆಯಬೇಕಾದ ನಿಧಿ ಸಹ ದೊರೆಯುತ್ತಿಲ್ಲ ಎನ್ನುವ ಕೊರಗು ಇದೆ. ಒಂದು ವೇಳೆ ಅನುದಾನ ಬಂದ್ರೆ ಅದನ್ನು ಪಡೆಯಲು ಶಾಸಕರು ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಆರೋಪಗಳು ಕೂಡಾ ಕೇಳಿ ಬರುತ್ತಿವೆ.
ಹಳ್ಳಿಗಳಲ್ಲಿ ಮೂಲ ಸೌಲಭ್ಯಗಳಲ್ಲಿ : ಹಳ್ಳಿಗಳು ಮೂಲ ಸೌಲಭ್ಯ ಇಲ್ಲದೆ ನರಳುತ್ತಿವೆ. ಆಸ್ಪತ್ರೆ, ರಸ್ತೆಗಳಲ್ಲಿದೆ ದಿನ ನಿತ್ಯ ಜನ ನೂರಾರು ಸಂಕಟಗಳನ್ನು ಎದುರಿಸುತ್ತಿದ್ದಾರೆ. ಶಾಸಕರ ನಿಧಿಯನ್ನು ಕ್ಷೇತ್ರದ ಹಳಿಗಳ ಮೂಲಸೌಲಭ್ಯಕ್ಕೆ ಬಳಸಲು ಶಾಸಕರು ಹಿಂದೇಟಾಕುತ್ತಿರುವುದು ಅವರ ಹಳ್ಳಿಗಳ ಕಾಳಜಿ ಎಷ್ಟಿದೆ ಎಂಬುದನ್ನು ತೋರಿಸುತ್ತದೆ. ಬಹುಷಃ ಸುಧಾರಣೆ ಮಾಡಿ ಬಿಟ್ಟರೆ ಸಮಸ್ಯೆಗಳ ಹೆಸರಲ್ಲಿ ರಾಜಕೀಯ, ಪರಸ್ಪರ ಕೆಸರೆರಚಾಟ ಮಾಡಲು ಬರುವುದಿಲ್ಲ ಎಂಬ ಕಾರಣದಿಂದಾಗಿ ಅಭಿವೃದ್ಧಿ ಮಾಡಲು ಹಿಂದೇಟಾಕುತ್ತಿದ್ದಾರೆ ಎಂಬ ಪ್ರಶ್ನೆ ಸಹಜವಾಗಿ ಉದ್ಭವವಾಗುತ್ತದೆ. ಈ ಕೋವಿಡ್ ಅವಿಧಿಯಲ್ಲಿ ಸರಿಯಾದ ಆಂಬ್ಯುಲೆನ್ಸ್, ಆಕ್ಸಿಜನ್, ಆಸ್ಪತ್ರೆಗಳಲ್ಲಿ ಸೌಲಭ್ಯ ಇಲ್ಲದೆ ಸಾವಿರಾರು ಜನ ಉಸಿರು ಚಲ್ಲುವಾಗಲು ಈ ನಿಧಿಯನ್ನು ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಬಳಕೆ ಮಾಡದೆ ಇರುವಂತದ್ದು ಅವರ ಹಳ್ಳಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಚುನಾವಣೆ ಸಮೀಪಿಸುತ್ತಿದ್ದಂತೆ ಜನಪ್ರತಿನಿಧಿಗಳ ಪ್ರಣಾಳಿಕೆ ಪಟ್ಟಿಯಲ್ಲಿ ಮೊದಲನೆಯದ್ದೇ ರಸ್ತೆಗಳ ಅಭಿವೃದ್ಧಿ. ಗ್ರಾಮಕ್ಕೊಂದು ಸಮುದಾಯ ಭವನ, ಆಸ್ಪತ್ರೆ, ಅಂಗನವಾಡಿ, ಶಾಲೆಗಳಿಗೆ ಕಟ್ಟಡ ಕಟ್ಟುವುದಾಗಿ ಭಾಷಣ ಬಿಗಿಯುತ್ತಾರೆ. ಚುನಾವಣೆಯಲ್ಲಿ ಗೆದ್ದಾದ ಮೇಲೆ ಅಭಿವೃದ್ಧಿ ವಿಷಯಕ್ಕೆ ಬಂದರೆ ಅದೇ ಕೊನೆಯ ಸ್ಥಾನದಲ್ಲಿರುತ್ತವೆ. ಅಧಿಕಾರಕ್ಕೆ ಬಂದಾಗ ಇರುವ ಹದಗೆಟ್ಟ ರಸ್ತೆಗಳು ಅಧಿಕಾರದಿಂದ ಕೆಳಗಿಳಿಯುವವರೆಗೂ ಹಾಗೆಯೇ ಇರುತ್ತವೆ. ಚೂರು ಬದಲಾಗಿರಲ್ಲ. ಇದು ಜನರೆ ಮಾಡಿಕೊಂಡಿರುವ ತಪ್ಪು ಎಂಬಂತೆ ಶಾಸಕರು ಇತ್ತ ಕಡೆ ತಲೆ ಹಾಕಿ ಮಲಗುವುದು ಇಲ್ಲ.
ಗ್ರಾಮೀಣ ಕ್ಷೇತ್ರಗಳನ್ನು ಬಲ ಪಡಿಸಲು ಶಾಸಕರುಗಳು ಇನ್ನಾದರೂ ಶಾಸಕರ ನಿಧಿಯನ್ನು ಸರಿಯಾಗಿ ಬಳಕೆ ಮಾಡಿಕೊಂಡು ಆ ಪ್ರದೇಶಗಳನ್ನು ಅಭಿವೃದ್ಧಿ ಮಾಡುವತ್ತ ಗಮನ ಹರಿಸಬೇಕಿದೆ. ಮುಂಬರುವ ಚುನಾವಣೆಗಳಲ್ಲಿ ಮತ ಕೇಳಲು ಬರುವ ಶಾಸಕರ ಎದೆಪಟ್ಟಿ ಹಿಡಿದು ಎಲ್ಲಿ ಅಭಿವೃದ್ಧಿ, ಏನು ನಿಮ್ಮ ಕತೆ ಎಂದು ಪ್ರಶ್ನಿಸುವ ದೈರ್ಯವನ್ನು ಮತದಾರ ಬೆಳಸಿಕೊಳ್ಳಬೇಕಿದೆ. ಇಲ್ಲದೆ ಹೋದರೆ ಅವರು ಕೊಡುವ 500 ಆಸೆಗೋ, ಇಲ್ಲವೋ ಸೀರೆ, ಹೆಂಡಕ್ಕೆ ನಮ್ಮನ್ನು ನಾವು ಮಾರಿಕೊಂಡರೆ ಗ್ರಾಮೀಣ ಪ್ರದೇಶಗಳು ಇನ್ನಷ್ಟು ಹಾಳಾಗುವುದರಲ್ಲಿ ಸಂಶಯವಿಲ್ಲ. ಹಾಗಾಗಿ ಜನ ಜಾಗೃತರಾಗಬೇಕಿದೆ.