ಮೇಕೆದಾಟು ಯೋಜನೆ: ತಮಿಳುನಾಡು ನಿಲುವಿನ ವಿರುದ್ಧ ಕರ್ನಾಟಕದಿಂದ ಖಂಡನಾ ನಿರ್ಣಯ

ಬೆಂಗಳೂರು: ಮೇಕೆದಾಟು ಯೋಜನೆ ವಿರುದ್ಧ ನೆನ್ನೆ(ಮಾರ್ಚ್‌ 21) ತಮಿಳುನಾಡು ಸರ್ಕಾರ ನಿರ್ಣಯ ಅಂಗೀಕರಿಸಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕ ಸರ್ಕಾರವು ತಮಿಳುನಾಡಿನ ನಿಲುವನ್ನು ಖಂಡಿಸಿ ನಿರ್ಣಯ ಅಂಗೀಕರಿಸಲು ಮುಂದಾಗಿದೆ.

ಇಂದು ಕರ್ನಾಟಕ ವಿಧಾನಸಭೆಯಲ್ಲಿ ಸದಸ್ಯರು ಪಕ್ಷಾತೀತವಾಗಿ ಇದಕ್ಕೆ ಒಪ್ಪಿಗೆ ಸೂಚಿಸಿದರು. ಕಾನೂನು ತಜ್ಞರೊಂದಿಗೆ ಸಮಾಲೋಚಿಸಿದ ನಂತರ ರಾಜ್ಯ ಸರ್ಕಾರ ನಾಳೆ(ಮಾರ್ಚ್‌ 23 ಬುಧವಾರ) ಖಂಡನಾ ನಿರ್ಣಯವನ್ನು ಅಂಗೀಕರಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಮೇಕೆದಾಟು ಯೋಜನೆ ಪ್ರದೇಶ ಕರ್ನಾಟಕದಲ್ಲೇ ಬರುತ್ತದೆ. ಯೋಜನೆಯಿಂದ ಸ್ವಲ್ಪ ಪ್ರದೇಶ ಮುಳುಗಡೆಯಾಗಬಹುದು. ಮೇಕೆದಾಟಿನಿಂದ ಬೆಂಗಳೂರಿಗೆ ಕುಡಿಯುವ ನೀರು ಸಿಗಲಿದೆ. ಮೇಕೆದಾಟಿನಿಂದ ಟ್ರಿಬ್ಯುನಲ್ ಆದೇಶ ಉಲ್ಲಂಘನೆಯಾಗಲ್ಲ. ಕಳೆದ ಹಲವು ವರ್ಷದಿಂದ ತಮಿಳುನಾಡಿಗೆ ನೀರು ಹಂಚಿಕೆ ಆಗುತ್ತಿದೆ. ಹೆಚ್ಚುವರಿ ನೀರು ತಮಿಳುನಾಡಿಗೆ ಹೋಗ್ತಿದೆ. ತಮಿಳುನಾಡು ಹೆಚ್ಚುವರಿ ನೀರನ್ನೂ ಬಳಸಿಕೊಳ್ಳುತ್ತಿದೆ. ತಮಿಳುನಾಡು ಸರ್ಕಾರದ ವಾದವನ್ನು ವಿರೋಧಿಸಿದ್ದೇವೆ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

“ತಮಿಳುನಾಡು ತನ್ನ ಪಾಲಿನಲ್ಲದ ಹೆಚ್ಚುವರಿ ನೀರನ್ನು ಬಳಸಿಕೊಳ್ಳುತ್ತಿದೆ ಮತ್ತು ಯಾವುದೇ ಅನುಮತಿಯಿಲ್ಲದೆ ತಮಿಳುನಾಡಿನ ದಕ್ಷಿಣಕ್ಕೆ ಜಲಾಶಯದ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿದೆ. ಇದು ಕಾನೂನುಬಾಹಿರವಾಗಿದೆ. ಇದರ ವಿರುದ್ಧವೂ ನಾವು ನಿರ್ಣಯ ಅಂಗೀಕರಿಸುತ್ತೇವೆ. ನಾವು ಕಾನೂನು ತಜ್ಞರೊಂದಿಗೆ ಚರ್ಚಿಸಿ ತಮಿಳುನಾಡು ವಿರುದ್ಧ ನಿರ್ಣಯವನ್ನು ಅಂಗೀಕರಿಸುತ್ತೇವೆ. ಉಭಯ ಸದನಗಳಲ್ಲಿ ಸರ್ಕಾರದ ನಿರ್ಧಾರ ತೆಗೆದುಕೊಳ್ಳಲಿದೆ” ಎಂದರು.

ಸಚಿವ ಗೋವಿಂದ ಕಾರಜೋಳರಿಗೆ ಅನಾರೋಗ್ಯ ಹಿನ್ನೆಲೆ, ಕಾರಜೋಳ ಚೆನ್ನಾಗಿದ್ದಿದ್ದರೆ ದೆಹಲಿಗೆ ಹೋಗುತ್ತಿದ್ದರು. ಅಧಿವೇಶನ ಮುಗಿಯುತ್ತಲೇ ದೆಹಲಿಗೆ ಹೋಗುತ್ತೇನೆ. ಇನ್ನೊಂದು ರಾಜ್ಯದ ಅನುಮತಿ ಕೇಳೋದು ಸರಿಯಲ್ಲ. ತೆಲುಗು ಗಂಗಾ ಯೋಜನೆಗೆ 15 ಟಿಎಂಸಿ ನೀರು ಕೊಟ್ಟೆವು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಕೆಲವು ವರ್ಷಗಳ ಹಿಂದೆ ಕಾವೇರಿ ಅಂತಿಮ ಆದೇಶ ಬಂದಿದ್ದರೂ, ತಮಿಳುನಾಡು ಸರ್ಕಾರವು ಸಮಸ್ಯೆಯನ್ನು ಜೀವಂತವಾಗಿಡಲು ಬಯಸುತ್ತದೆ ಎಂದರು. ತಮಿಳುನಾಡು ಸರ್ಕಾರ ನಮ್ಮ ಮೌನವನ್ನು ದೌರ್ಬಲ್ಯ ಎಂದು ಪರಿಗಣಿಸಬಾರದು, ನಾವು ಅವರಿಗೆ ತಕ್ಕ ಉತ್ತರವನ್ನು ನೀಡಲಿದ್ದೇವೆ ಎಂದರು.

ಇದಕ್ಕೂ ಮುನ್ನ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಎಲ್ಲ ಪಕ್ಷಗಳ ಸದಸ್ಯರು, ಮೇಕೆದಾಟು ಯೋಜನೆಯನ್ನು ನಿಲ್ಲಿಸುವ ತಮಿಳುನಾಡು ಸರ್ಕಾರದ ನಿರ್ಣಯವನ್ನು ಖಂಡಿಸಿದರು. ತಮಿಳುನಾಡು ಅನಗತ್ಯವಾಗಿ ಅಡ್ಡಿ ಉಂಟು ಮಾಡುತ್ತಿರುವುದು ಕೆಟ್ಟ ನಿದರ್ಶನ ಎಂದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಯೋಜನೆಗೆ ಕಾನೂನು ಬಾಹಿರ ನಿರ್ಣಯ ಮಾಡಿದ್ದಾರೆ. ಕಾನೂನು ಬಾಹಿರ ನಿರ್ಣಯಕ್ಕೆ ಕಾನೂನಾತ್ಮಕ ಹಕ್ಕಿಲ್ಲ. ತಮಿಳುನಾಡು ರಾಜಕೀಯ ಕ್ಯಾತೆ ತೆಗೆಯಲು ನಿರ್ಣಯ ಮಾಡುತ್ತಿದೆ. ನ್ಯಾಯಾಧಿಕರಣದ ಆದೇಶದಂತೆ ಕರ್ನಾಟಕವು ಸಾಮಾನ್ಯ ವರ್ಷಗಳಲ್ಲಿ 177.25 ಟಿಎಂಸಿ ಕಾವೇರಿ ನೀರನ್ನು ಬಿಡುತ್ತಿದೆ. ಹೆಚ್ಚುವರಿ ನೀರನ್ನು ಕುಡಿಯಲು ಮತ್ತು ವಿದ್ಯುತ್ ಉತ್ಪಾದನೆಗೆ ಬಳಸುತ್ತಿದ್ದೇವೆ. ನೀರಾವರಿಗೆ ಬಳಸುತ್ತಿಲ್ಲ. ಕಳೆದ ಏಳು ವರ್ಷಗಳಲ್ಲಿ ಕರ್ನಾಟಕವು 582 ಟಿಎಂಸಿ ಹೆಚ್ಚುವರಿ ನೀರನ್ನು ತಮ್ಮ ಹಂಚಿಕೆಯನ್ನು ಹೊರತುಪಡಿಸಿ ತಮಿಳುನಾಡಿಗೆ ಬಿಡುಗಡೆ ಮಾಡಿದೆ. ತಮಿಳುನಾಡು ಸರ್ಕಾರಕ್ಕೆ ಮೇಕೆದಾಟು ಜಲಾಶಯ ಯೋಜನೆ ತಡೆಯುವ ಯಾವುದೇ ಹಕ್ಕು ಇಲ್ಲ. ಜಲ, ನೆಲ, ಸೀಮೆ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ನಮಗೆ ಕರ್ನಾಟಕ ಹಾಗೂ ಕನ್ನಡಿಗರ ಹಿತವೇ ಮುಖ್ಯ. ಕೇಂದ್ರ ಸರ್ಕಾರದ ಬಳಿ ಸರ್ವಪಕ್ಷ‌ ನಿಯೋಗ ಹೋಗೋಣ. ಎರಡೂ ಸದನಗಳಲ್ಲಿ ನಿರ್ಣಯ ಮಾಡೋಣ ಎಂದರು.

ಮೇಕೆದಾಟು ವಿಚಾರವಾಗಿ ಸದನದಲ್ಲಿ ಅನೇಕ ಬಾರಿ ಚರ್ಚೆಯಾಗಿದೆ ಎಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ನಾವು ತಮಿಳುನಾಡಿನ ಮುಲಾಜಿನಲ್ಲಿ ಇಲ್ಲ. ನಾವು ನೆಲ, ಜಲ, ಭಾಷೆ, ಗಡಿ ವಿಚಾರದಲ್ಲಿ ಒಟ್ಟಿಗೆ ಇದ್ದೇವೆ. ಕೇಂದ್ರ ಸರ್ಕಾರಕ್ಕೆ ನಮ್ಮ ನಿಲುವು ಸ್ಪಷ್ಟ ಮಾಡಲಾಗಿದೆ. ಸರ್ವಪಕ್ಷ ಸಭೆಯಲ್ಲೂ ಚರ್ಚೆ ಆಗಿದೆ. ತಮಿಳುನಾಡು ನಿರ್ಣಯದಿಂದ ನಮ್ಮ ಹಕ್ಕು ಚ್ಯುತಿಯಾಗಿದೆ. ತಮಿಳುನಾಡು ಮೇಕೆದಾಟು ಯೋಜನೆಗೆ ಅಡ್ಡಗಾಲು ಹಾಕುತ್ತಿದೆ. ಕೇಂದ್ರ, ಪರಿಸರ ಇಲಾಖೆ ಯೋಜನೆಗೆ ಅನುಮತಿ ಕೊಡಲಿ. ಮುಖ್ಯಮಂತ್ರಿ ಸಾಧ್ಯವಾದರೆ ಪ್ರಧಾನಿಯನ್ನು ಭೇಟಿ ಮಾಡಲಿ. ಮುಖ್ಯಮಂತ್ರಿ ಕೇಂದ್ರದ ಸಚಿವರ ಜತೆಗೂ ಚರ್ಚೆ ನಡೆಸಲಿ. ಆದಷ್ಟು ಬೇಗ ಪರಿಸರ ಇಲಾಖೆ ಅನುಮತಿಗೆ ಒತ್ತಾಯಿಸಲಿ ಎಂದರು.

ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೇಕೆದಾಟು ಯೋಜನೆಗೆ ತಮಿಳುನಾಡು ಒಪ್ಪಿಗೆ ಬೇಕಿಲ್ಲ. ಯೋಜನೆಗೆ ಬೇಕಿರುವುದು ಪರಿಸರ ಇಲಾಖೆಯ ಒಪ್ಪಿಗೆ. ಬಿ.ಎಸ್.ಯಡಿಯೂರಪ್ಪನವರು ಕೊಟ್ಟ ಸಲಹೆ ಸರಿ ಇದೆ. ತಮಿಳುನಾಡಿನ ಸರ್ಕಾರದ ನಿರ್ಣಯ ಹೊಸದೇನಲ್ಲ. 1924ರಿಂದಲೂ ತಮಿಳುನಾಡು ಗದಾಪ್ರಹಾರ ಮಾಡುತ್ತಿದೆ. ರಾಜ್ಯ ಸರ್ಕಾರ ಕಾಲಹರಣ ಮಾಡದೆ ಮನವರಿಕೆ ಮಾಡಬೇಕು. ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡುವ ಕೆಲಸ ಮಾಡಬೇಕು. ಕೇಂದ್ರದ ಮನವೊಲಿಸಿ ಯಶಸ್ವಿಯಾದರೆ ಯೋಜನೆ ಜಾರಿ ಮಾಡಬೇಕು. ತಕ್ಷಣ ಕೇಂದ್ರದ ಮನವೊಲಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *