ಎಸ್.ವೈ. ಗುರುಶಾಂತ್
ಕಾಂಗ್ರೆಸ್ ಪಕ್ಷ ರಾಜಧಾನಿ ಬೆಂಗಳೂರಿನಲ್ಲಿ ಪಾದಯಾತ್ರೆಯನ್ನು ಸಮಾರೋಪಿಸಿದ ಬಳಿಕ ಮೇಕೆದಾಟು ಯೋಜನೆಯ ರಾಜಕೀಯ ಪ್ರಹಸನದ ಎರಡನೆಯ ಕಂತು ಮುಗಿದಿದೆ. ಕಳೆದ ತಿಂಗಳು ಕಾಂಗ್ರೆಸ್ ಆರಂಭಿಸಿದ್ದ ಪಾದಯಾತ್ರೆಯನ್ನು ಮುಂದುವರಿಸುವ ಹಠಮಾರಿತನ ಇದ್ದಾಗ್ಯೂ ಕೊರೊನಾ ಮೂರನೆಯ ಅಲೆಯ ಕಾರಣಕ್ಕೆ ಮೊಟಕುಗೊಳಿಸಬೇಕಾಗಿ ಬಂದಿತ್ತು.
ತೀವ್ರ ರಾಜಕೀಯ ವಾಗ್ವಾದಗಳಿಗೆ ಈಡಾಗಿದ್ದ ಈ ಕಾರ್ಯಕ್ರಮವನ್ನು ನಿಲ್ಲಿಸಲು ಹೈಕೋರ್ಟ್ ಮದ್ಯಪ್ರವೇಶಿಸಿತ್ತು. ಹೀಗಾಗಿ ಯಾತ್ರೆ ಬೆಂಗಳೂರಿಗೆ ಬರದೇ ಹೋಗುವುದು ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಕೊನೆಗೆ ಎರಡನೆಯ ಕಂತಿನ ಈ ಪಾದಯಾತ್ರೆಯಿಂದ ಸಂಕಲ್ಪ ಈಡೇರಿದ ತೃಪ್ತಿಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ.
ವಾಸ್ತವದಲ್ಲಿ ಬೆಂಗಳೂರು ಮತ್ತು ಸುತ್ತಲಿನ ಕೆಲವು ಜಿಲ್ಲೆಗಳ ಜನತೆಗೆ ಈ ಯೋಜನೆಜಾರಿಯಾದಲ್ಲಿಅತ್ಯಂತ ಪ್ರಯೋಜನ ಸಿಗಲಿದೆ ಎನ್ನುವುದು ನಿರ್ವಿವಾದ. ಆದರೆ, ಇದಕ್ಕೆ ಹಲವು ಕಾನೂನಾತ್ಮಕ, ಪಾರಿಸಾರಿಕ ಹಾಗೂ ರಾಜಕೀಯ ತೊಡಕುಗಳನ್ನು ಕಡೆಗಣಿಸುವಂತಿಲ್ಲ. ರಾಜಕೀಯ ಮತ್ತು ಆಡಳಿತಾತ್ಮಕವಾಗಿಯೂ ಭಿನ್ನಾಭಿಪ್ರಾಯಗಳು ವಿವಿಧ ಸ್ವರೂಪದಲ್ಲಿಯೂ ಇವೆ.
ಇದು ಒಕ್ಕೂಟ ವ್ಯವಸ್ಥೆಯೊಳಗಿನ ಅಂತರ್ ರಾಜ್ಯಗಳ ನಡುವಿನ ಪ್ರಶ್ನೆಯಾಗಿ ನೀರಿನ ಹಂಚಿಕೆಯ ವಿಷಯದಲ್ಲಿ ಭಿನ್ನ ಅಭಿಪ್ರಾಯಗಳು ಇರುವುದು ಒಂದೆಡೆ. ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧ ಸೌಹಾರ್ದ ಹಾಗೂ ಸಮನ್ವಯತೆಯಿಂದ ಕೂಡಿರದೆ ಪಕ್ಷಗಳ ರಾಜಕೀಯ ಲಾಭ ನಷ್ಟಗಳ ಹಿನ್ನೆಲೆಯಲ್ಲೇ ನೋಡುವುದರಿಂದಾಗಿ ಸಂಘರ್ಷಾತ್ಮಕವಾಗಿಯೂ ಮಾರ್ಪಟ್ಟಿರುವುದು ಮತ್ತೊಂದು ಕಡೆ.
ಕಾವೇರಿ ನ್ಯಾಯಮಂಡಳಿಯ ತೀರ್ಪಿನಂತೆ ನೀರು ಹಂಚಿಕೊಂಡ ನಂತರವೂ ಉಳಿಯಬಹುದಾದ ಅಧಿಕ ನೀರಿನ ಸದ್ಬಳಕೆಗೆ ಸಂಬಂಧಿಸಿ ಚರ್ಚೆ ನಡೆಯುತ್ತಿದೆಯಾದರೂ ಒಮ್ಮತ ಏರ್ಪಟ್ಟಿಲ್ಲ. ನೀರು ಬಳಸಲು ನ್ಯಾಯ ಮಂಡಳಿಯ ತೀರ್ಪು ಇದೆ. ಇಲ್ಲಿ ಲಭ್ಯವಾಗಬಹುದಾದ ನೀರನ್ನು ನಾಗರೀಕರಿಗೆ ಕುಡಿಯಲು ಮತ್ತು ವಿದ್ಯುತ್ತಿನ ಉತ್ಪಾದನೆಗೂ ಬಳಸುವ ಸ್ಪಷ್ಟ ಯೋಜನೆಯ ರೂಪುರೇಷೆಗಳು ಇವೆ ಮತ್ತು ರಾಜ್ಯ ಸರಕಾರದ ಕೋರಿಕೆಯನ್ನು ಕೇಂದ್ರ ಸರಕಾರ ಆಡಳಿತಾತ್ಮಕವಾಗಿ ಅನುಮೋದಿಸಿದೆ ಕೂಡ. ಅದರಿಂದಲೇ, ಹಿಂದೆ ರಾಜ್ಯ ಸರ್ಕಾರ ಅದರ ಜಾರಿಯ ವಿವಿಧ ಹಂತಗಳಲ್ಲಿ ಡಿಪಿಆರ್ ಮಾಡುವುದನ್ನು ಒಳಗೊಂಡು ಪರಿಸರ ನಿರಪೇಕ್ಷಣಾ ಪತ್ರ ಪಡೆಯಲು ಕೇಂದ್ರ ಸರ್ಕಾರಕ್ಕೆ ಮನವಿಯನ್ನೂ ಮಾಡಿದೆ. ಕೇಂದ್ರದ ಒಪ್ಪಿಗೆ ಸಿಗದೇ ಇರುವಲ್ಲಿ ರಾಜ್ಯದ ಹಾಲಿ ಬಿಜೆಪಿ ಸರ್ಕಾರದ ವಿಳಂಬ ನೀತಿ ಅಥವಾ ನಿರ್ಲಕ್ಷ್ಯತನವೂ ಕಾರಣವಿದೆ. ಅಲ್ಲದೇ, ಕೇಂದ್ರ ಸರ್ಕಾರ ತಮಿಳುನಾಡಿನ ಸರ್ಕಾರದ ಆಕ್ಷೇಪಣೆಯನ್ನು ವಸ್ತುನಿಷ್ಠ ಮಾಹಿತಿಗಳೊಂದಿಗೆ ವಿಮರ್ಶಿಸದೇ ರಾಜಕೀಯ ಲಾಭನಷ್ಟಗಳ ಲೆಕ್ಕಾಚಾರದಲ್ಲಿ ತೊಡಗಿರುವುದನ್ನು ತಳ್ಳಿ ಹಾಕುವಂತಿಲ್ಲ.
ಇದನ್ನೂ ಓದಿ : ಮೇಕೆದಾಟು ಕುರಿತು ಕೇಂದ್ರ ಜಲ ಸಂಪನ್ಮೂಲ ಸಚಿವರ ಹೇಳಿಕೆ ಖಂಡಿಸಿ ಪ್ರಧಾನಿಗೆ ಪತ್ರ ಬರೆದ ಸಿದ್ದರಾಮಯ್ಯ
ಮೇಕೆದಾಟು ಯೋಜನೆ ರಾಮನಗರ ಜಿಲ್ಲೆಯ ಹನೂರು ತಾಲೂಕಿನ ಅರಣ್ಯ ವಲಯದಲ್ಲಿ ಒಂಟಿ ಗುಂಡು ಸ್ಥಳದಲ್ಲಿ ಕಟ್ಟಲಾಗುವ ಕಿರು ಅಣೆಕಟ್ಟು. ಮಳೆಗಾಲದಲ್ಲಿ ಸಮುದ್ರದ ಪಾಲಾಗುವ ಸುಮಾರು ೬೫-೬೬ ಟಿಎಂಸಿ ಹೆಚ್ಚುವರಿ ನೀರನ್ನು ಇಲ್ಲಿ ಸಂಗ್ರಹಿಸಬಹುದು. ಅದನ್ನು ಬೆಂಗಳೂರು ಮತ್ತು ಸುತ್ತಲಿನ ಸುಮಾರು ೨.೫ ಕೋಟಿಗೂ ಅಧಿಕ ಜನರ ಕುಡಿಯುವ ನೀರಾಗಿ ಬಳಸುವುದು ಮತ್ತು ಸುಮಾರು ೪೦೦ ಮೆಗಾವ್ಯಾಟ್ ವಿದ್ಯುತ್ತನ್ನು ಉತ್ಪಾದಿಸಬಹುದು ಎನ್ನುವುದು ಕರ್ನಾಟಕ ರಾಜ್ಯ ಸರ್ಕಾರದ ಉದ್ದೇಶದ ಯೋಜನೆಯಿದು.
ಪ್ರಸಕ್ತವಾಗಿ ಬೆಂಗಳೂರಿನ ಜನರಿಗೆ ಶೇಕಡ ೩೦-೪೦ರಷ್ಟು ಮಾತ್ರ ಕಾವೇರಿ ನೀರು ಲಭ್ಯವಾಗುತ್ತಿದ್ದರೆ ಶೇಕಡ ೬೦-೭೦ ನೀರಿಗೆ ಅತಂತ್ರದ ಬೇರೆ ಮೂಲಗಳನ್ನು ಅವಲಂಬಿಸಲಾಗಿದೆ. ಹೀಗಾಗಿ ಮೇಕೆದಾಟು ಕುಡಿಯುವ ನೀರಿನ ಯೋಜನೆ ಜಾರಿಯ ತುರ್ತು ಅಗತ್ಯತೆ ಇದೆ.
ಕಿರು ಅಣೆಕಟ್ಟು ಕಟ್ಟಿದಲ್ಲಿ ಸುಮಾರು ಪ್ರದೇಶ ಮುಳುಗಡೆಯಾಗುವ ಆತಂಕಗಳಿದ್ದು ಉಭಯ ಸರಕಾರಗಳು ಪರಿಹರಿಸಬೇಕು. ಒಟ್ಟಾರೆ ಯೋಜನೆಯು ೫೨೫೨.೪೦ ಹೆಕ್ಟೇರ್ ಪ್ರದೇಶವನ್ನು ವ್ಯಾಪಿಸುತ್ತದೆ. ಅದರಲ್ಲಿ ೩೧೮೧.೯ ಹೆಕ್ಟೇರ್ ಕಾವೇರಿ ವನ್ಯಜೀವಿ ಅಭಯಾರಣ್ಯ ಪ್ರದೇಶದಿಂದ, ೧೮೬೯.೫ ಹೆಕ್ಟೇರ್ ಅರಣ್ಯ ಭೂಮಿ, ೨೦೧ ಹೆಕ್ಟೇರ್ ಜಮೀನು ಕಂದಾಯ ಹಾಗೂ ಖಾಸಗಿ ಅವರಿಂದ ಪಡೆಯಬೇಕಾಗುತ್ತದೆ. ಅಣೆಕಟ್ಟೆಯ ವ್ಯಾಪ್ತಿಯಲ್ಲಿ ಮುಳುಗಡೆಯಾಗಲಿರುವ ೫ ಹಳ್ಳಿಗಳ ಸ್ಥಳಾಂತರದ ಪ್ರಶ್ನೆಗಳಿವೆ. ಮೇಲಾಗಿ ಈ ಪ್ರದೇಶದಲ್ಲಿರುವ ವನ್ಯಜೀವಿಗಳು ತಮ್ಮ ನೆಲೆಯನ್ನು ಕಳೆದುಕೊಳ್ಳುವ ಅತಂಕವನ್ನು ಪರಿಸರವಾದಿಗಳು ವ್ಯಕ್ತಪಡಿಸಿದ್ದಾರೆ.
ಈ ಎಲ್ಲಾ ಪ್ರಶ್ನೆಗಳಿಗೆ ಸೂಕ್ತವಾದ ಉತ್ತರವನ್ನು ಕಂಡುಕೊಳ್ಳುವ ಹೊಣೆಗಾರಿಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮೇಲಿದೆ. ಇದರಲ್ಲಿ ಅರಣ್ಯವನ್ನೂ ಒಳಗೊಂಡು ಮುಳುಗಡೆಯಾಗುವ ಪ್ರದೇಶಕ್ಕೆ, ಸ್ಥಳಾಂತರಕ್ಕೆ ಪರ್ಯಾಯ ಏನು ಎನ್ನುವುದನ್ನು ಸ್ಪಷ್ಟವಾಗಿ ಕಂಡುಕೊಳ್ಳುವುದು ರಾಜ್ಯ ಸರ್ಕಾರದ ಮುಖ್ಯ ಹೊಣೆಗಾರಿಕೆಯೂ ಹೌದು. ಹೊಸದಾದ ಅಭಿವೃದ್ಧಿಯ ಯೋಜನೆಗಳಲ್ಲಿ ಇಂಥ ಪ್ರಶ್ನೆಗಳು ಅತ್ಯಂತ ಸಹಜವಾಗಿರುತ್ತವೆ, ಅವಕ್ಕೆ ಪರಿಹಾರಗಳ ಸಾದ್ಯತೆಗಳೂ ಇವೆ.
ಕಾವೇರಿ ನ್ಯಾಯ ಮಂಡಳಿಯ ತೀರ್ಪಿನಲ್ಲಿ ಹಂಚಿಕೆಯಾದ ನೀರಿನ ನಂತರದಲ್ಲಿ ಕುಡಿಯುವ ನೀರಿಗೆ ಹೆಚ್ಚುವರಿ ನೀರನ್ನು ಬಳಸಲು ಅವಕಾಶವನ್ನು ಕಲ್ಪಿಸಿದೆ. ಯೋಜಿತ ಅಣೆಕಟ್ಟಿನಲ್ಲಿ ಸಂಗ್ರಹವಾಗುವ ನೀರಿನ ಬಳಕೆ ಬಗೆಗೆ ತಮಿಳುನಾಡು ಸರಕಾರಕ್ಕೆ ಅನುಮಾನವಿದೆ. ಆಳುವ ಪಕ್ಷ ಮಾತ್ರವಲ್ಲ, ವಿರೋಧ ಪಕ್ಷಗಳು ಹಾಗೂ ಜನ ಸಂಘಟನೆಗಳಿಗೂ ಆತಂಕಗಳಿವೆ. ಇದು ಕಾವೇರಿ ನ್ಯಾಯ ಮಂಡಳಿಯ ತೀರ್ಪನ್ನು ಅರ್ಥ ಮಾಡಿಕೊಳ್ಳುವಲ್ಲಿ ಮತ್ತು ಯೋಜನೆಯ ವಾಸ್ತವತೆಯನ್ನು ಸ್ಪಷ್ಟವಾಗಿಸುವಲ್ಲಿ ಕೆಲವು ಕೊರತೆಗಳು ಇರಬಹುದಾದ ಸಂಗತಿಗಳು.
ತಮಿಳುನಾಡು ಪ್ರಶ್ನೆ ಎತ್ತಿರುವುದರಲ್ಲಿ ಪ್ರತಿಫಲಿಸಿರಬಹುದು. ನೀರಿನ ಹಂಚಿಕೆ, ಬಳಕೆಯ ವಿಷಯದಲ್ಲಿ ಇಂತಹ ಪ್ರಶ್ನೆಗಳನ್ಮು ಉಭಯ ರಾಜ್ಯಗಳು ಎತ್ತುವುದು ಯಾವುದೇ ಪಕ್ಷದ ಸರ್ಕಾರವಿದ್ದರೂ ಸಾಮಾನ್ಯ ಹಾಗೂ ಸಂದರ್ಭಗಳಿಗನುಸಾರವಾಗಿ ಅದು ರಾಜಕೀಯವಾದ ಬಹುಮುಖ್ಯ ಪ್ರಶ್ನೆಯಾಗಿ ಪರಿವರ್ತನೆಗೊಳ್ಳುತ್ತವೆ.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷವೇ ಅಧಿಕಾರದಲ್ಲಿದೆ. ಕೈಗಾರಿಕೋದ್ಯಮಿಗಳಿಗೆ ಕೇಳಿದಷ್ಟು ಅರಣ್ಯ ಭೂಮಿಯನ್ನು ಹಂಚುವಾಗ ತೋರುವ ಮುತುವರ್ಜಿ ಕೋಟ್ಯಾಂತರ ಜನರ ಬದುಕಿಗೆ ಮತ್ತು ಆರ್ಥಿಕತೆಗೆ ಸಹಾಯವಾಗುವ ಈ ಪ್ರಶ್ನೆಯಲ್ಲಿ ಇಲ್ಲದಿರುವುದು ಸ್ಪಷ್ಟ. ವಿರೋಧ ಪಕ್ಷಗಳು ಯೋಜನೆಯ ಜಾರಿಯ ಬಗ್ಗೆ ಪ್ರಶ್ನಿಸಿದಾಗ ಬಿಜೆಪಿ ಕೇವಲ ಉಡಾಫೆಯ ಇಲ್ಲವೇ ಬಾಯಿ ಮುಚ್ಚಿಸಲು ಉತ್ತರವನ್ನು ಮುಂದೊಡ್ಡಿ ವಿಷಯವನ್ನು ಮೂಲೆಗೆ ತಳ್ಳಲು ಯತ್ನಿಸುತ್ತಿದೆ.
ಕರ್ನಾಟಕದ ಕೋರಿಕೆಯನ್ನು ಮಾನ್ಯ ಮಾಡುವಲ್ಲಿ ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ. ಬಹುಮುಖ್ಯವಾಗಿ ತಮಿಳುನಾಡಿನಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುವ ಧಾವಂತದಲ್ಲಿರುವ ಬಿಜೆಪಿಗೆ ಈ ಪ್ರಶ್ನೆಯನ್ನು ಬಗೆಹರಿಸಲು ಉಭಯ ರಾಜ್ಯಗಳ ನಡುವೆ ಸಮನ್ವಯತೆಯನ್ನು ತಂದು ಪರಿಹಾರ ರೂಪಿಸುವ ರಾಜಕೀಯ ಇಚ್ಛಾಶಕ್ತಿ ಕೇಂದ್ರಕ್ಕೆ ಇಲ್ಲ. ರಾಜ್ಯದ ಬಿಜೆಪಿಯೂ ಮೇಕೆದಾಟುಗೆ ಪರವಾಗಿರುವುದಾಗಿ ಇಲ್ಲಿ ಹೇಳುತ್ತದೆ. ಆದರೆ ತಮಿಳುನಾಡಿನ ಬಿಜೆಪಿ ಘಟಕ ಈ ಬೇಡಿಕೆಯನ್ನು ವಿರೋಧಿಸುತ್ತದೆ. ರಾಷ್ಟ್ರೀಯ ಹಿತಾಸಕ್ತಿ ಮರೆತಿರುವ ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿಯ ಇಬ್ಬಗೆಯ ನಿಲುವು ಖಂಡನಾರ್ಹ. ಇಂತಹ ರಾಜಕೀಯ ಆಟಗಳು ಸಂಕಷ್ಟಗಳನ್ಮು ಹೆಚ್ಚಿಸಬಹುದೇ ಹೊರತು ಜನತೆಗೆ ಪರಿಹಾರವನ್ನು ಖಂಡಿತಾ ತರಲಾರವು. ಅದ್ದರಿಂದ ಯಾರಲ್ಲಿಯೇ ಆತಂಕ, ಅನುಮಾನಗಳಿದ್ದಲ್ಲಿ ಸ್ಪಷ್ಟನೆ, ಪರಸ್ಪರ ಸಮಾಲೋಚನೆಯಿಂದ ಬಗೆ ಹರಿಸಿಕೊಳ್ಳಬೇಕು.
ಮೇಕೆದಾಟು ಅಣೆಕಟ್ಟು ಯೋಜನೆ ಜಾರಿ ಪ್ರಶ್ನೆಯ ಪಾದಯಾತ್ರೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇರುವಂತೆಯೇ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ರಾಜಕೀಯ ಲಾಭ-ನಷ್ಟಗಳ ಲೆಕ್ಕವಿದೆ. ಈ ಮೂರು ಪಕ್ಷಗಳು ಮುಂಬರುವ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯ ಚುನಾವಣೆ ಮತ್ತು ರಾಜ್ಯದ ವಿಧಾನಸಭಾ ಚುನಾವಣೆಗಳ ಮೇಲೆ ಕಣ್ಣಿರಿಸಿವೆ. ಆ ಕಾರಣದಿಂದಲೇ ನಿಜಕ್ಕೂ ಮನಃಪೂರ್ವಕವಾಗಿ ಈ ಪ್ರಶ್ನೆ ಕುರಿತಂತೆ ಚರ್ಚೆಯಾಗಲಿ ಪ್ರಯತ್ನ ನಡೆಸುವುದಾಗಲೀ ಇಲ್ಲವಾಗಿದೆ.
ಇದೀಗ ಮಂಡಿಸಿರುವ ರಾಜ್ಯದ ಬಜೆಟ್ಟಿನಲ್ಲಿ ಮುಖ್ಯಮಂತ್ರಿಯವರು ಮೇಕೆದಾಟು ಯೋಜನೆಗೆ ಒಂದಿಷ್ಟು ಹಣವನ್ನು ಮೀಸಲಿರಿಸಿದ್ದರೂ ಯೋಜನೆಯ ಜಾರಿಗೆ ಸರ್ಕಾರದ ಬದ್ಧತೆ ಇದೆಯೇ ಎನ್ನುವ ಪ್ರಶ್ನೆ ಹಾಗೆಯೇ ಉಳಿಯುತ್ತದೆ. ಹೊಣೆ ಇರುವ ಸರಕಾರವನ್ನೂ ಒಳಗೊಂಡು ಕೇವಲ ವಾಗ್ವಾದ, ಚರ್ಚೆ ಔಪಚಾರಿಕತೆಯ ಮಟ್ಟಕ್ಕೆ ನಿಂತಿರುವುದು ಕಾಣುತ್ತದೆ.
ಭೌತಿಕವಾಗಿ ನದಿನೀರಿನ ಹಂಚಿಕೆಯು ಅಂತರ್ ರಾಜ್ಯಗಳ ವಿಷಯವಾಗಿರುವುದರಿಂದ ವಿವಾದಗಳು ತಲೆದೋರಿದಾಗ ಕೇಂದ್ರ ಸರಕಾರ ಕ್ರಿಯಾಶೀಲ, ಪ್ರಾಮಾಣಿಕ ಪಾತ್ರವನ್ನು ನಿರ್ವಹಿಸಬೇಕು. ನದಿಗಳ ನೀರು ರಾಜ್ಯದ ಸಂಪನ್ಮೂಲ. ಹಾಗೆಯೇ ಅದು ರಾಷ್ಟ್ರೀಯ ಸಂಪನ್ಮೂಲವು ಆಗಿದೆ ಎನ್ನುವುದನ್ನು ಎಲ್ಲರೂ ಗಮನದಲ್ಲಿ ಇರಿಸಿಕೊಳ್ಳಬೇಕು. ಈ ಸಂಪನ್ಮೂಲದ ಸದ್ಬಳಕೆ ಎಲ್ಲರ ನಡುವೆ ಆಗುವಂತಾಗಬೇಕು. ಕೇಂದ್ರ ಸರಕಾರ ಮದ್ಯಸ್ಥಿಕೆ ವಹಿಸಿ ಮುಖ್ಯಮಂತ್ರಿಗಳ ಸಭೆ ನಡೆಸಿ ಸಹಮತ ರೂಪಿಸಲು ಕ್ರಮ ವಹಿಸಬೇಕು.
ರಾಜ್ಯಗಳ ನಡುವಿನ ಸಮಾನತೆ, ಸೌಹಾರ್ದತೆಯನ್ನು ಕಾಪಾಡಿಕೊಂಡು ಸಮನ್ವಯದ ಮೂಲಕ ಪರಿಹಾರ ಕಂಡುಕೊಳ್ಳಬೇಕಿರುವುದು ಈಗ ಅತ್ಯಂತ ಮಹತ್ವದ್ದಾಗಿದೆ. ಈ ವಿಷಯದಲ್ಲಿ ಕೇಂದ್ರ ಸರಕಾರ ವಿಫಲವಾಗಿದ್ದು ಸಂಕುಚಿತ ರಾಜಕಾರಣವನ್ನು ಬಿಡಬೇಕು. ವಿಸ್ತರಿಸುತ್ತಿರುವ ಬೆಂಗಳೂರು ಮಹಾನಗರ ಹಾಗೂ ನೆರೆಯ ಜಿಲ್ಲೆಗಳಲ್ಲಿ ನೀರಿನ ಅಭಾವದ ತೀವ್ರತೆಯನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯದ ಬಸವರಾಜ ಬೊಮ್ಮಾಯಿ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹಾಕಿ ಶೀಘ್ರದಲ್ಲಿ ಯೋಜನೆ ಜಾರಿಗೆ ಅಗತ್ಯವಾಗಿರುವ ಕ್ರಮಗಳನ್ನು ಕೈಗೊಳ್ಳಬೇಕು. ಜನತೆಗೆ ಬೇಕಿರುವುದು ಕುಡಿಯುವ ನೀರು, ಬದುಕು ಕಟ್ಟಿಕೊಳ್ಳುವ ಬಯಕೆ ಹೊರತು ಸಂಕುಚಿತ ರಾಜಕೀಯದ ಬಾಯಿ ಬಡಾಯಿ ಮಾತುಗಳಲ್ಲ.