ಪ್ರೊ.ಟಿ. ಆರ್. ಚಂದ್ರಶೇಖರ
ಮೀಸಲಾತಿಯನ್ನು ನೇರವಾಗಿ ರದ್ದುಪಡಿಸುವುದು ಸಾಧ್ಯವಿಲ್ಲದಕಾರಣ, ಬಿಜೆಪಿ ಸರ್ಕಾರವು, ಅದನ್ನು ಅಪ್ರಸ್ತುತವನ್ನಾಗಿ ಮಾಡುತ್ತಿದೆ. ಮೀಸಲಾತಿ ಇರುವ ಸರಕಾರೀ-ಸಾರ್ವಜನಿಕ ಉದ್ಯಮಗಳ ಮೂರನೇ ಒಂದರಷ್ಟು (ಸುಮಾರು 60 ಲಕ್ಷ) ಹುದ್ದೆಗಳನ್ನು ತುಂಬದೆ ಗುತ್ತಿಗೆ/ಅರೆ-ಗುತ್ತಿಗೆ ಕಾರ್ಮಿಕರನ್ನು ನೇಮಿಸಿರುವುದು, ಸಾರ್ವಜನಿಕ ಉದ್ದಿಮೆಗಳ-ಆಸ್ತಿಗಳ ಖಾಸಗೀಕರಣ, ಉನ್ನತ ಜಾತಿಗಳಲ್ಲಿರುವ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ(ಈ.ಡಬ್ಲ್ಯೂ.ಎಸ್.) ಶೇ. 10 ರಷ್ಟು ಮೀಸಲಾತಿಯನ್ನುಸಂವಿಧಾನದಲ್ಲಿಇದಕ್ಕೆ ಅವಕಾಶವಿಲ್ಲದಿದ್ದರೂ ತರಾತುರಿಯಲ್ಲಿ ಜಾರಿ ಮಾಡಿರುವುದು, ಮಾನವ ಹಕ್ಕಿನ ಪ್ರಣಾಳಿಕೆಯನ್ನು ಅಲ್ಲಗಳೆಯುತ್ತಿರುವುದು – ಇವು ಇರುವಾಗ ಇನ್ನೇನು ಸಾಕ್ಷಿ ಬೇಕು? ಎನ್ನುತ್ತಾರೆ ಪ್ರೊ.ಟಿ.ಆರ್.ಚಂದ್ರಶೇಖರ್
ಮೀಸಲಾತಿಯ ಬಗ್ಗೆ ಸೈದ್ಧಾಂತಿಕವಾಗಿ ನಂಬಿಕೆಯಿಲ್ಲದ ಚಾತುರ್ವರ್ಣವಾದಿ ಬಿಜೆಪಿ-ಆರ್.ಎಸ್.ಎಸ್. ಸರ್ಕಾರವು, ಮೀಸಲಾತಿಯನ್ನು ನೇರವಾಗಿ ರದ್ದುಪಡಿಸುವುದು ಸಾಧ್ಯವಿಲ್ಲದ ಕಾರಣ,ಅದನ್ನು ಅಪ್ರಸ್ತುತವನ್ನಾಗಿ ಮಾಡುತ್ತಿದೆ. ಇದರ ಬಗ್ಗೆ ನಮಗೆ ಯಾವ ಅನುಮಾನವೂ ಇರಬೇಕಾಗಿಲ್ಲ. ಈ ಮಾತನ್ನು ಆಳವಾಗಿ ವಿಶ್ಲೇಷಣೆ ಮಾಡುವ ಅಗತ್ಯವಿದೆ. ಸಂವಿಧಾನದಲ್ಲಿ ಪರಿಶಿಷ್ಟ ಜಾತಿ(ಪ.ಜಾ.) ಮತ್ತು ಪರಿಶಿಷ್ಟ ಪಂಗಡ (ಪ.ಪಂ.) ಗಳಿಗೆ ಮೀಸಲಾತಿ ನೀಡಲಾಗಿದೆ. ಆದರೆ ಇಂದಿನ ಬಿಜೆಪಿ-ಆರ್‌ಎಸ್‌ಎಸ್ ಸರ್ಕಾರದ ಸೈದ್ಧಾಂತಿಕ ನೆಲೆಯಾದ ಚಾತುರ್ವರ್ಣ ವ್ಯವಸ್ಥೆಯಲ್ಲಿ ದಲಿತರಿಗೆ ಮತ್ತು ಆದಿವಾಸಿಗಳಿಗೆ ಅವಕಾಶ-ಸ್ಥಾನವನ್ನೇ ನೀಡಿರಲಿಲ್ಲ. ಯಾರಿಗೆ ಚಾತುರ್ವರ್ಣ ವ್ಯವಸ್ಥೆಯಲ್ಲಿ ಅವಕಾಶವಿಲ್ಲವೋ ಅವರಿಗೆ ಚಾತುರ್ವರ್ಣದಲ್ಲಿ ವಿಶ್ವಾಸವಿರುವ ಸರ್ಕಾರವು ಹೇಗೆ ತಾನೆ ಮೀಸಲಾತಿ ಸವಲತ್ತನ್ನು ನೀಡುತ್ತದೆ? ಇದೊಂದು ಗಂಭೀರವಾದ ಪ್ರಶ್ನೆ. ಬಿಜೆಪಿ-ಆರ್‌ಎಸ್‌ಎಸ್ ಸರ್ಕಾರಗಳು ತಮಗೆ ಚಾತುರ್ವರ್ಣ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲ-ಅದೊಂದು ಸನಾತನ ಅಸಮಾನತೆ ಪ್ರಣಾಳಿಕೆ ಎಂಬುದನ್ನು ಘೋಷಿಸಲು ಸಿದ್ಧವಿದೆಯೇ? ಇಲ್ಲ.
ಮೀಸಲಾತಿಯನ್ನು ಅಪ್ರಸ್ತುತಗೊಳಿಸುತ್ತಿರುವದಕ್ಕೆ ಮೊಟ್ಟಮೊದಲ ನಿದರ್ಶನವೆಂದರೆ ಉನ್ನತ ಜಾತಿಗಳಲ್ಲಿರುವ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ(ಈ.ಡಬ್ಲ್ಯೂ.ಎಸ್.) ಶೇ. 10 ರಷ್ಟು ಮೀಸಲಾತಿ ನೀಡಿರುವ ಕ್ರಮದಲ್ಲಿ ಕಾಣಬಹುದು. ಸಂವಿಧಾನದಲ್ಲಿ ಮೀಸಲಾತಿಯನ್ನು ಆರ್ಥಿಕ ಮಾನದಂಡದ ಮೇಲೆ ನೀಡುವುದಕ್ಕೆಅವಕಾಶವಿಲ್ಲ. ಮೀಸಲಾತಿಯು ಬಡತನ ನಿವಾರಣಾ ಕಾರ್ಯಕ್ರಮವಲ್ಲ. ಮೇಲಾಗಿ ಉನ್ನತ ಜಾತಿಗಳಲ್ಲಿನ ಆರ್ಥಿಕವಾಗಿ ದುರ್ಬಲವಾಗಿರುವ ವರ್ಗವು ಮೀಸಲಾತಿಯನ್ನು ಕೇಳಲಿಲ್ಲ, ಅದಕ್ಕಾಗಿ ಹೋರಾಟ ಮಾಡಲಿಲ್ಲ. ಆದರೂ ಅದಕ್ಕೆ ಮೀಸಲಾತಿಯನ್ನು ಸ್ವಯಂತಾನೇ ನಿರ್ಧರಿಸಿ ಬಿಜೆಪಿ-ಆರ್‌ಎಸ್‌ಎಸ್ ಸರ್ಕಾರ ಜನವರಿ 14, 2019ರಲ್ಲಿ ನೀಡಿಯೇ ಬಿಟ್ಟಿತು. ಇದಕ್ಕೆ ಸಂಬಂಧಿಸಿದ ಬಹುಮುಖ್ಯ ಪ್ರಶ್ನೆ: ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಶೇ. 10 ರಷ್ಟು ಮೀಸಲಾತಿ ಎಂಬುದನ್ನು ಯಾವ ಆಧಾರದಲ್ಲಿ ನಿರ್ಧರಿಸಲಾಯಿತು. ಈ ಪ್ರಶ್ನೆಯನ್ನು ಸರ್ವೋಚ್ಛ ನ್ಯಾಯಾಲಯವು ಕೇಳಲಿಲ್ಲ. ಮೀಸಲಾತಿಯ ಬಹುಮುಖ್ಯ ಮಾನದಂಡ ಪ್ರಾತಿನಿಧ್ಯ ನೀಡುವುದಾಗಿದೆ. ಈ ಮಾನದಂಡದ ಆಧಾರದಲ್ಲಿಉನ್ನತ ಜಾತಿಗಳಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಮೀಸಲಾತಿ ನೀಡುವುದು ಸಾಧ್ಯವೇಇಲ್ಲ. ಏಕೆಂದರೆ ಅವರು ಸಂಸತ್ತಿನಲ್ಲಿ, ವಿಧಾನ ಸಭೆಗಳಲ್ಲಿ, ಸಂಬಂಧಿಸಿದ ಮಂತ್ರಿಮಂಡಳಗಳಲ್ಲಿ, ಉದ್ಯೋಗಗಳಲ್ಲಿ, ಕೈಗಾರಿಕೋದ್ಯಮಗಳಲ್ಲಿ ಅವುಗಳ ಜನಸಂಖ್ಯೆಯ ಪ್ರಮಾಣಕ್ಕಿಂತ ಅದೆಷ್ಟೋ ಪಟ್ಟು ಹೆಚ್ಚಿನ ಪ್ರಾತಿನಿಧ್ಯ ಪಡೆದಿದ್ದಾವೆ. ಹಾಗಾದರೆ ಈಡಬ್ಲ್ಯೂಎಸ್‌ಗೆ ಆಧಾರವೇನು? ಏನೂ ಇಲ್ಲ. ಇದೊಂದು ಸಂವಿಧಾನ-ವಿರೋಧಿ ನಡೆಯಾಗಿದೆ, ಇದೊಂದು ರಾಜಕೀಯ ಭ್ರಷ್ಠಾಚಾರದ ನಿದರ್ಶನವಾಗಿದೆ ಮತ್ತು ಇದೊಂದು ‘ಓಟ್‌ಬ್ಯಾಂಕಿ’ನ ರಾಜಕಾರಣವಾಗಿದೆ. ಈ ಮೀಸಲಾತಿಗೆ ವರಮಾನದ ಮಿತಿ ವಾರ್ಷಿಕ ರೂ. 8 ಲಕ್ಷ, ಅಂದರೆ ದಿನಕ್ಕೆ ರೂ. 2222.22. ದಿನದ ವರಮಾನರೂ. 2000ಕ್ಕೂ ಮೇಲ್ಪಟ್ಟವರನ್ನು ಬಡವರು ಅಥವಾ ಆರ್ಥಿಕವಾಗಿ ದುರ್ಬಲರು ಎಂದು ಹೇಗೆ ಪರಿಗಣಿಸುತ್ತೀರಿ?
ಮೀಸಲಾತಿ ಎನ್ನುವುದು ಸಂವಿಧಾನದತ್ತ ಹಕ್ಕು. ಇದು ದತ್ತಿ-ದಾನ-ಭಿಕ್ಷೆಯಲ್ಲ. ಆದರೆ ಇಂದು ಬಿಜೆಪಿ-ಆರ್‌ಎಸ್‌ಎಸ್ ಸರ್ಕಾರ ಮಾನವ ಹಕ್ಕಿನ ಪ್ರಣಾಳಿಕೆಯನ್ನು ಅಲ್ಲಗಳೆಯುತ್ತಿದೆ. ಪ್ರಧಾನಮಂತ್ರಿ ಅವರ ಕೆಳಗಿ ಮಾತುಗಳನ್ನು ಇದಕ್ಕೆ ಪುರಾವೆಯಾಗಿ ಪರಿಗಣಿಸಬಹುದು.
“ — there had been an emphasis on people’s rights in the last many years as many felt deprived of equality and justice. The demand now, he said, is that the society should deliberate on its duties and responsibilities as well” (ಸಂವಿಧಾನ ದಿವಸ್: ನವೆಂಬರ್ 26, 2019)
“ ——-At the same time, we also have to admit that in the 75 years after Independence, a malaise has afflicted our society, our nation and all of us. It is that we turned away from our duties and did not give them primacy. In the last 75 years, we only kept talking about rights, fighting for rights and wasting our time. The issue of rights may be right to some extent in certain circumstances, but neglecting one’s duties completely has played a huge role in keeping India vulnerable” ‘ಆಜಾದೀ ಕ ಅಮೃತ ಮಹೋತ್ಸವ’ದಲ್ಲಿ ನೀಡಿದ ಉದ್ಘಾಟನಾ ಭಾಷಣ; ಜನವರಿ 20. 2022).
ಹಕ್ಕಿನ ಪ್ರಣಾಳಿಕೆಯ ಬಗ್ಗೆ ಇದು ಪ್ರಧಾನಿಗಳ ಸೈದ್ಧಾಂತಿಕ ನಿಲುವಾಗಿದೆ. ಹಕ್ಕುಗಳ ಬಗ್ಗೆ ಹೋರಾಟ ಮಾಡುವುದು ಪ್ರಧಾನಿಗಳಿಗೆ ‘ವೇಸ್ಟ್ ಆಫ್ ಟೈಮ್’ ಆಗಿದೆ ಮತ್ತುಇದರಿಂದ ದೇಶ ದುರ್ಬಲವಾಗಿದೆಯಂತೆ. ಯಾರನ್ನುಗುರಿಯಾಗಿಟ್ಟುಕೊಂಡು ಈ ಮಾತನ್ನು ಪ್ರಧಾನಿಗಳು ಹೇಳುತ್ತಿದ್ದಾರೆ? ಈ ದೇಶದ 30 ಕೋಟಿಗೂ ಮೀರಿದ ಪ. ಜಾ. ಮತ್ತು ಪ. ಪಂ. ಸಮುದಾಯಗಳನ್ನು ಮತ್ತು ಸರಿಸುಮಾರು ಅಷ್ಟೇ ಇರುವ ಕಾರ್ಮಿಕ ವರ್ಗವನ್ನು ಗುರಿಯಾಗಿಟ್ಟುಕೊಂಡು ಹೇಳುತ್ತಿದ್ದಾರೆ ಎಂಬುದರ ಬಗ್ಗೆ ಅನುಮಾನಕ್ಕೆ ಆಸ್ಪದವಿಲ್ಲ. ಇದೇ ಸಿದ್ಧಾಂತವನ್ನು ವಿತ್ತ ಮಂತ್ರಿ 2019-20ರ ಬಜೆಟ್ ಭಾಷಣದಲ್ಲಿ ಹೀಗೆ ಹೇಳುತ್ತಾರೆ.
‘In the first 50 years after independence, we emphasized on Rights. Making 75 years of our independence, we should place emphasis on our Duties towards India’ (Budget Speech 2019-20. Para 105).
ಹಕ್ಕಿನ ಸಿದ್ಧಾಂತವನ್ನು, ಅದನ್ನು ಆಧಾರ ಮಾಡಿಕೊಂಡಿರುವ ಮೀಸಲಾತಿ ಪ್ರಣಾಳಿಕೆಯನ್ನು ಬಿಜೆಪಿ-ಆರ್‌ಎಸ್‌ಎಸ್ ಸರ್ಕಾರಗಳು ತಿರಸ್ಕರಿಸುತ್ತಿರುವುದಕ್ಕೆ ಇನ್ನೇನು ಪುರಾವೆ ಬೇಕು? ಮೀಸಲಾತಿಯನ್ನು ನೇರವಾಗಿ ರದ್ದುಪಡಿಸುವುದಕ್ಕೆ ಬದಲಾಗಿ ಅದನ್ನು ಅಪ್ರಸ್ತುತಗೊಳಿಸುತ್ತಿರುವುದಕ್ಕೆ, ಅದರ ಡಾ. ಬಿ. ಆರ್. ಅಂಬೇಡ್ಕರ್ ಪ್ರಣೀತ ಸೈದ್ಧಾಂತಿಕ ನೆಲೆಯನ್ನು ಹುಸಿಗೊಳಿಸುತ್ತಿರುವುದಕ್ಕೆ ಇನ್ನೇನು ಸಾಕ್ಷಿ ಬೇಕು?
ಮೀಸಲಾತಿಯನ್ನು ಇಂದಿನ ಸರ್ಕಾರಗಳು ಅಪ್ರಸ್ತುತಗೊಳಿಸುತ್ತಿರುವುದಕ್ಕೆ ಮತ್ತೊಂದು ನಿದರ್ಶನವೆಂದರೆ ಸಾರ್ವಜನಿಕ ಉದ್ದಿಮೆಗಳನ್ನು-ಸಾರ್ವಜನಿಕ ಆಸ್ತಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿರುವುದರಲ್ಲಿ ಹಾಗೂ ಸರ್ಕಾರಿ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳನ್ನು ತುಂಬದಿರುವುದರಲ್ಲಿ ಕಾಣಬಹುದು. ಮೀಸಲಾತಿಯ ಮೂಲ ಸರ್ಕಾರಿ ನೌಕರಿಗಳು ಮತ್ತು ಸಾರ್ವಜನಿಕ ಉದ್ದಿಮೆಗಳಲ್ಲಿನ ಹುದ್ದೆಗಳು. ಇವುಗಳನ್ನು ನಿಧಾನವಾಗಿ ಇಲ್ಲದಂತೆ ಮಾಡಲಾಗುತ್ತಿದೆ. ಸಾರ್ವಜನಿಕ ಆಸ್ತಿಗಳನ್ನು ಮಾರಾಟ ಮಾಡುವುದಕ್ಕಾಗಿಯೇ ಒಕ್ಕೂಟ ಸರ್ಕಾರವು ‘ಮಾನಿಟೈಸೇಶನ್ ಆಫ್ ಲ್ಯಾಂಡ್ ಕಾರ್ಪೊರೇಶನ್ʼ ಎಂಬುದನ್ನು ಸ್ಥಾಪಿಸಿದೆ. ರೈಲ್ವೆಯಲ್ಲಿನ ಲಕ್ಷಾಂತರ ಎಕರೆ ಜಮೀನು, ರೈಲು ಮಾರ್ಗಗಳು, ತೈಲದ ಕೊಳವೆ ಮಾರ್ಗಗಳು, ದೂರಸಂಪರ್ಕ ಸ್ಥಾವರಗಳು-ಮಾರ್ಗಗಳು, ಕ್ರೀಡಾಂಗಣಗಳು, ವಿಮಾನ ನಿಲ್ದಾಣಗಳು, ಬಂದರುಗಳು, ವಿಮಾ ಸಂಸ್ಥೆಗಳು — ಹೀಗೆ ಕಳೆದ 70 ವರ್ಷಗಳಲ್ಲಿ ನಮ್ಮ ದೇಶದ ನೂರಾರು ಕೋಟಿ ಜನರ ತೆರಿಗೆ ಹಣದಿಂದ ನಿರ್ಮಾಣ ಮಾಡಿರುವ ಅಮೂಲ್ಯ ಆಸ್ತಿ-ಜಮೀನು-ಬಂಡವಾಳವನ್ನು ಖಾಸಗಿ ಬಂಡವಳಿಗರಿಗೆ ಬೆಳ್ಳಿ ತಟ್ಟೆಯ ಮೇಲಿಟ್ಟು ಮಾರಾಟ ಮಾಡುತ್ತಿದೆ. ಇದರಿಂದಾಗಿ ಸಾರ್ವಜನಿಕ ನೌಕರಿಗಳು-ಹುದ್ದೆಗಳು ಇಲ್ಲವಾಗುತ್ತಿವೆ. ಖಾಸಗಿ-ಕಾರ್ಪೊರೇಟುಗಳು ಉದ್ಯೋಗಗಳಲ್ಲಿ ಮೀಸಲಾತಿ ನೀಡುತ್ತಿಲ್ಲ.
ಕರ್ನಾಟಕದಲ್ಲಿ ಖಾಲಿಯಿರುವ ಹುದ್ದೆಗಳ ವರ್ಗವಾರು ವಿವರ
ಮೂಲ: ಕರ್ನಾಟಕ ಬಜೆಟ್ ಸಂಪುಟಗಳು: 2021-22. ಅನುಬಂಧ ಕೋಷ್ಟಕ- ‘ಬಿ’
ಒಟ್ಟು ಮಂಜೂರಾದ 7.69 ಲಕ್ಷ ಹುದ್ದೆಗಳಲ್ಲಿ ಖಾಲಿಯಿರುವ ಹುದ್ದೆಗಳು 2.53 ಲಕ್ಷ. ಅಂದರೆ ಮಂಜೂರಾದ ಹುದ್ದೆಗಳಲ್ಲಿ ಶೇ. 32.89 ರಷ್ಟು ಹುದ್ದೆಗಳು ಖಾಲಿ ಇವೆ. ಇವುಗಳನ್ನು ತುಂಬಿದರೆ ಪ. ಜಾ(ಶೇ. 15) ಮತ್ತು ಪ. ಪಂ(ಶೇ.3)ಗಳ ಯುವಕ-ಯುವತಿಯರಿಗೆ ಕ್ರಮವಾಗಿ 37935 ಮತ್ತು 7527 ಉದ್ಯೋಗಗಳು ದೊರೆಯುತ್ತವೆ. ದಲಿತರಿಗೆ ಮತ್ತು ಆದಿವಾಸಿಗಳಿಗೆ ಉದ್ಯೋಗದ ಅವಕಾಶಗಳನ್ನು ತಪ್ಪಿಸುವುದಕ್ಕಾಗಿಯೇ ಸರ್ಕಾರಗಳು ಇಂದು ಖಾಯಂ ಉದ್ಯೋಗಗಳನ್ನು ನೀಡುವುದಕ್ಕೆ ಬದಲಾಗಿ ಗುತ್ತಿಗೆ ಮತ್ತು ಹೊರಗುತ್ತಿಗೆ ವಿಧಾನದಲ್ಲಿ ಮೀಸಲಾತಿ ನಿಯಮ ಪಾಲಿಸದೆ ನೌಕರರನ್ನು ನೇಮಿಸಿಕೊಳ್ಳುತ್ತಿದೆ. ಇಲ್ಲಿ ಸಾಮಾಜಿಕ ಭದ್ರತೆಯೂ ಇಲ್ಲ-ಉದ್ಯೋಗ ಭದ್ರತೆಯೂ ಇಲ್ಲ, ಪಿಂಚಿಣಿ ಸೌಲಭ್ಯವೂ ಇಲ್ಲ. ಇದನ್ನು ‘ಸರ್ಕಾರ ಪ್ರಣೀತ ಶೋಷಣೆ’ ಎಂದು ಕರೆಯಬಹುದು. ಒಂದು ರಾಜ್ಯದಲ್ಲಿಯೇ ಖಾಲಿಯಿರುವ ಹುದ್ದೆಗಳು 2.52 ಲಕ್ಷವಾದರೆ, ದೇಶದ 28 ರಾಜ್ಯಗಳು ಮತ್ತು 8 ಒಕ್ಕೂಟಾಡಳಿತ ಪ್ರದೇಶಗಳಲ್ಲಿ ಖಾಲಿ ಸರ್ಕಾರಿ ಉದ್ಯೋಗಗಳು ಎಷ್ಟಿರಬೇಕು? ಇದು ಸರಿಸುಮಾರು 60 ಲಕ್ಷ ಎಂದು ಹೇಳಲಾಗಿದೆ.
ನಮ್ಮ ಬೇಡಿಕೆ — (1). ಕರ್ನಾಟಕ ಸರ್ಕಾರವು ಖಾಲಿಯಿರುವ ಹುದ್ದೆಗಳನ್ನು ತುಂಬಬೇಕು (2). ಹುದ್ದೆಗೆ ಗುತ್ತಿಗೆ ಕಾರ್ಮಿಕ ಪದ್ಧತಿ/ಹೊರಗುತ್ತಿಗೆ ವಿಧಾನಗಳನ್ನು ನಿಲ್ಲಿಸಬೇಕು (3). ಖಾಸಗಿ ವಲಯದಲ್ಲಿಯೂ ಮೀಸಲಾತಿ ಜಾರಿಗೊಳಿಸಬೇಕು (4). ಅಸಂಘಟಿತ ವಲಯದಲ್ಲಿನ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ನೀಡಬೇಕು (5). ಉದ್ಯೋಗವನ್ನು ಮಾನವ ಹಕ್ಕು ಎಂದು ಫೋಷಿಸಬೇಕು (6). ದೈನಂದಿನ ಕನಿಷ್ಟ ವೇತನವನ್ನು ರೂ.21,000ಕ್ಕೆ ನಿರ್ಧರಿಸಬೇಕು (7). ಪ. ಜಾ. ಮತ್ತು ಪ. ಪಂ. ಮಿಸಲಾತಿಯನ್ನು ಅವರ ಜನಸಂಖ್ಯೆಗೆ ಅನುಗುಣವಾಗಿ ಏರಿಸಬೇಕು. ಇದಕ್ಕಾಗಿ ಕಾಲವಿಳಂಬ ಮಾಡಕೂಡದು. (8). ಉದ್ಯೋಗ ನೀತಿಯು ಸರ್ಕಾರದ ಆದ್ಯತೆಯಾಗಬೇಕು (9). ಚಾತುರ್ವರ್ಣ ಪ್ರಣೀತ ಸೇವೆ/ಕರ್ತವ್ಯ ಪ್ರಣಾಳಿಕೆಯನ್ನು ಕೈಬಿಟ್ಟು ಹಕ್ಕು ಪ್ರಣೀತ ನೀತಿಯನ್ನು ಸರ್ಕಾರ ಅಳವಡಿಸಿಕೊಳ್ಳಬೇಕು.