ಕರ್ನಾಟಕ ಉಚ್ಚ ನ್ಯಾಯಾಲಯ ನಿವೃತ್ತ ನ್ಯಾ. ಹೆಚ್.ಎನ್.ನಾಗಮೋಹನದಾಸ್ ಅವರು ಬರೆದಿರುವ ಮೀಸಲಾತಿ ಭ್ರಮೆ ಮತ್ತು ವಾಸ್ತವ ಕೃತಿಯಿಂದ ಆಯ್ದಭಾಗ;
ಸಂವಿಧಾನ ಓದು ಕೃತಿಯನ್ನು ಇಟ್ಟುಕೊಂಡು ರಾಜ್ಯಾದ್ಯಂತ ಅಭಿಯಾನವನ್ನು ನಡೆಸಲಾಯಿತು. ಇಡೀ ರಾಜ್ಯ ಸುತ್ತಿ ನೂರಾರು ಕಾರ್ಯಕ್ರಮಗಳನ್ನು ನಡೆಸಿದೆವು. ಬಹುಪಾಲು ಕಾರ್ಯಕ್ರಮಗಳು ಸಂವಾದದಲ್ಲಿ ಕೊನೆಗೊಂಡವು. ಈ ಸಂವಾದದಲ್ಲಿ ಅನೇಕ ವಿಷಯಗಳ ಬಗ್ಗೆ ಹಲವು ಪ್ರಶ್ನೆಗಳು ಬಂದವು. ಸಂವಾದದಲ್ಲಿ ಬಂದ ಪ್ರಶ್ನೆಗಳಿಂದ ತಿಳಿದ ಸತ್ಯ ಸಂಗತಿಯೆಂದರೆ ಬಹುಪಾಲು ವಿದ್ಯಾರ್ಥಿ-ಯುವಜನರಿಗೆ ಮೀಸಲಾತಿಯ ಬಗ್ಗೆ ಸರಿಯಾದ ತಿಳಿವಳಿಕೆಯ ಕೊರತೆ ಎದ್ದು ಕಾಣಿಸುತ್ತಿತ್ತು. ವಿದ್ಯಾರ್ಥಿ-ಯುವಜನರ ಈ ಮನಸ್ಥಿತಿಗೆ ಕಾರಣ ಕೆಲವು ಶಿಕ್ಷಕರು, ಪೋಷಕರು ಮತ್ತು ಸುದ್ದಿ ಮಾಧ್ಯಮಗಳು. ನಾವು ಕೊಟ್ಟಂತಹ ಮಾಹಿತಿ ಮತ್ತು ಉತ್ತರಗಳು ಬಹುಪಾಲು ವಿದ್ಯಾರ್ಥಿ ಯುವಜನರಿಗೆ ಸತ್ಯ ಸಂಗತಿ ಏನು ಎಂಬ ಮನವಿಕೆ ಮಾಡಿಕೊಡಲು ಸಾಧ್ಯವಾಯಿತು. ಈ ದಿಕ್ಕಿನಲ್ಲಿ ಇನ್ನೂ ಹೆಚ್ಚು ಕೆಲಸವಾಗಬೇಕಾಗಿದೆ.
(ಇ) ಮೀಸಲಾತಿಯು ಪ್ರತಿಭೆಯ ವಿರೋಧಿ ಅಲ್ಲವೆ? ಅಭಿವೃದ್ಧಿಗೆ ಹಿನ್ನಡೆ ಅಲ್ಲವೇ?
ಒಂದು ಉದಾಹರಣೆಯೊಂದಿಗೆ ಇದಕ್ಕೆ ಉತ್ತರಿಸಬಹುದು. ನಾನು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಹೆಬ್ಬಣಿ ಎಂಬ ಗಡಿಗ್ರಾಮದ ಮಧ್ಯಮ ವರ್ಗದ ರೈತ ಕುಟುಂಬದಲ್ಲಿ ಜನಿಸಿರುವುದು. ನಾನು ನನ್ನ ಹಳ್ಳಿಯ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದ್ದೇನೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಗ್ರಿ ಮತ್ತು ಎಲ್‌ಎಲ್‌ಬಿ ಪದವಿಯನ್ನು ಮೂರನೇ ದರ್ಜೆಯಲ್ಲಿ ಪಾಸ್ ಮಾಡಿದೆ. ನಂತರ ನಾನು ವಕೀಲಿ ವೃತ್ತಿಯನ್ನು ಪ್ರಾರಂಭಿಸಿದೆ. ನನ್ನ ಜೊತೆ ರ‍್ಯಾಂಕ್ ಪಡೆದವರು, ಚಿನ್ನದ ಪದಕಗಳನ್ನು ಗಳಿಸಿದವರು, ಹೆಚ್ಚು ಅಂಗಳನ್ನು ಗಳಿಸಿದವರು ಸಹ ವಕೀಲಿ ವೃತ್ತಿಗೆ ಬಂದರು. ಆದರೆ 3-4 ವರ್ಷಗಳಲ್ಲಿ ಇವರೆಲ್ಲರೂ ವೃತ್ತಿಯನ್ನು ಬಿಟ್ಟು ಬೇರೆ ಬೇರೆ ಕೆಲಸಗಳನ್ನು ಹುಡುಕಿಕೊಂಡು ಹೋದರು. ಕಡಿಮೆ ಅಂಕಗಳನ್ನು ಗಳಿಸಿದ ನನ್ನಂಥವರು ವಕೀಲಿ ವೃತ್ತಿಯಲ್ಲಿ ಮುಂದುವರಿದೆವು. ಸೀನಿರ್ ಹತ್ತಿರ, ಜಡ್ಜ್ ಹತ್ತಿರ, ಎದುರಾಳಿ ವಕೀಲರ ಹತ್ತಿರ ಮತ್ತು ಕಕ್ಷಿಗಾರರ ಹತ್ತಿರ ಬೈಸಿಕೊಂಡೆವು. ಕಟ್ಟಪಟ್ಟು, ಪ್ರಾಮಾಣಿಕವಾಗಿ ಕೆಲಸ ಮಾಡಿದೆವು. ಒಳ್ಳೆಯ ಕೆಲಸಗಾರನೆಂದು ಹೆಚ್ಚು ಕೇಸುಗಳು ಬಂದವು. ಜೊತೆಯಲ್ಲಿ ಹೆಚ್ಚು ಹಣವೂ ಬಂತು. ನಾನೊಬ್ಬ ಪ್ರಾಮಾಣಿಕ ಕೆಲಸಗಾರನೆಂದು 2004ರಲ್ಲಿ ನನ್ನನ್ನು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಿದರು. 10 ವರ್ಷ ನ್ಯಾಯಮೂರ್ತಿಯಾಗಿ ಕೆಲಸ ಮಾಡಿ ನಿವೃತ್ತಿಯ ನಂತರ ಕೂಡ ಹೀಗೆ ನಿಮ್ಮೊಂದಿಗೆ ನಿಂತು ಸಂವಿಧಾನದ ಕುರಿತು ಸಂವಾದ ಮಾಡುತ್ತಿದ್ದೇನೆ. ಹೀಗೆ ವಿವಿಧ ಕ್ಷೇತ್ರಗಳಲ್ಲಿ ಹಲವರನ್ನು ಗಮನಿಸಬಹುದು.
ಇದನ್ನು ಓದಿ: ಮೀಸಲಾತಿಗೆ ಸಂಬಂಧಿಸಿದ ಪ್ರಶ್ನೆ-1 : ನ್ಯಾ.ಹೆಚ್.ಎನ್.ನಾಗಮೋಹನದಾಸ್ ಅವರ “ಮೀಸಲಾತಿ – ಭ್ರಮೆ ಮತ್ತು ವಾಸ್ತವ” ಆಯ್ದ ಭಾಗ
ಕೇವಲ ಹೆಚ್ಚು ಅಂಕಗಳನ್ನು ಪಡೆದವರೆಲ್ಲ ಪ್ರತಿಭಾವಂತರಲ್ಲ. ಹೆಚ್ಚು ಅಂಕಗಳ ಜೊತೆಗೆ ಬದುಕಿನ ಬಗ್ಗೆ ತಿಳವಳಿಕೆ ಇರಬೇಕು. ಪ್ರಾಮಾಣಿಕತೆ, ನೈತಿಕತೆ ಮತ್ತು ಮಾನವೀಯ ಮೌಲ್ಯಗಳು ಇರಬೇಕು. ಪ್ರತಿಭೆ ಎಂಬುದು ಯಾವುದೇ ಜಾತಿಯ ಅಥವಾ ವರ್ಗದ ಗುತ್ತಿಗೆಯಲ್ಲ. ಬಡವರಲ್ಲೂ, ದುರ್ಬಲ, ಹಿಂದುಳಿದ ಮತ್ತು ಹಳ್ಳಿಗಳಲ್ಲೂ ಪ್ರತಿಭೆಗಳಿವೆ. ಅವರಿಗೆ ಅವಕಾಶ ಸಿಕ್ಕಿದರೆ ತಮ್ಮ ಪ್ರತಿಭೆಯನ್ನು ತೋರಿಸುತ್ತಾರೆ.
ಕಡಿಮೆ ಅಂಕಗಳನ್ನು ಪಡೆದು ಲಕ್ಷಗಟ್ಟಲೇ ರೂಪಾಯಿಗಳನ್ನು ಡೊನೇಷನ್ ನೀಡಿ ವೃತ್ತಿ ಶಿಕ್ಷಣದಲ್ಲಿ ಮತ್ತು ಉನ್ನತ ಶಿಕ್ಷಣದಲ್ಲಿ ಪ್ರವೇಶ ಪಡೆದರೆ ಪ್ರತಿಭೆಗೆ ಮಾರಕವಾಗುವುದಿಲ್ಲವೇ? ಆದರೆ ವಿದ್ಯಾರ್ಥಿ-ಯುವಜನರು ಇದರ ಬಗ್ಗೆ ಪ್ರಶ್ನಿಸುವುದಿಲ್ಲ, ಮೌನವಾಗಿರುತ್ತಾರೆ.
ಇದನ್ನು ಓದಿ: ಮೀಸಲಾತಿಗೆ ಸಂಬಂಧಿಸಿದ ಪ್ರಶ್ನೆ-3 : ಪ್ರವೇಶ ಹಂತದಲ್ಲಿ ಮೀಸಲಾತಿ ಸರಿ, ಆದರೆ ಬಡ್ತಿಯಲ್ಲಿ ಮೀಸಲಾತಿ ಎಷ್ಟು ಸರಿ?
ಮೀಸಲಾತಿಯು ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ. ಎಲ್ಲಿಯವರೆಗೆ ಸರ್ಕಾರ ಹೆಚ್ಚು ಹೆಚ್ಚು ಅವಕಾಶಗಳನ್ನು ಸೃಷ್ಟಿಸುವುದಿಲ್ಲವೋ, ದುಡಿಮೆಗೆ ಸಮನಾದ ಪ್ರತಿಫಲವನ್ನು ಮತ್ತು ಉದ್ಯೋಗದ ಭದ್ರತೆಯನ್ನು ನೀಡುವುದಿಲ್ಲವೋ ಅಲ್ಲಿಯವರೆಗೆ ಮೀಸಲಾತಿ, ಒಳಮೀಸಲಾತಿ, ಬಡ್ತಿಯಲ್ಲಿ ಮೀಸಲಾತಿ, ಬೇರೆ ಬೇರೆ ಜಾತಿಯವರಿಗೆ ಮೀಸಲಾತಿ ಎಂಬ ಬೇಡಿಕೆಗಳು ಮುಂದುವರಿಯುತ್ತವೆ. ಈ ಸಮಸ್ಯೆಗೆ ಶಾಶ್ವತವಾದ ಪರಿಹಾರವೆಂದರೆ ಸರ್ಕಾರ ತನ್ನ ನೀತಿಯಲ್ಲಿ ಸೂಕ್ತ ಬದಲಾವಣೆಗಳನ್ನು ತಂದು ಹೆಚ್ಚು ಹೆಚ್ಚು ಶಿಕ್ಷಣದ ಮತ್ತು ಉದ್ಯೋಗದ ಅವಕಾಶಗಳನ್ನು ಸೃಷ್ಟಿಸಬೇಕಾಗಿದೆ. ಸರ್ಕಾರ ಈ ಕೆಲಸವನ್ನು ಮಾಡಿದಾಗ ಮೀಸಲಾತಿಗೆ ಸಂಬಂಧಿಸಿದ ಹಲವು ಪ್ರಶ್ನೆಗಳು ಹಿಂದಕ್ಕೆ ಸರಿಯುತ್ತವೆ. ಸರ್ಕಾರ ಕಡ್ಡಾಯವಾಗಿ ಈ ಕೆಲಸ ಮಾಡಬೇಕಾದರೆ, ಶಿಕ್ಷಣ ಮತ್ತು ಉದ್ಯೋಗ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕಾಗಬೇಕು.
- ಪುಸ್ತಕ : ಮೀಸಲಾತಿ ಭ್ರಮೆ ಮತ್ತು ವಾಸ್ತಕ
- ಲೇಖಕರು : ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್, ನಿವೃತ್ತ ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ
- ಜನ ಪ್ರಕಾಶನ, ಜಯನಗರ, ಬೆಂಗಳೂರು.