ಮೀಸಲಾತಿಗೆ ಸಂಬಂಧಿಸಿದ ಪ್ರಶ್ನೆ-4 : ಕೆನೆಪದರ ನೀತಿಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಯಾಕೆ ಅನ್ವಯಿಸಬಾರದು?

ಕರ್ನಾಟಕ ಉಚ್ಚ ನ್ಯಾಯಾಲಯ ನಿವೃತ್ತ ನ್ಯಾ. ಹೆಚ್‌.ಎನ್‌.ನಾಗಮೋಹನದಾಸ್ಅವರು ಬರೆದಿರುವ ಮೀಸಲಾತಿ ಭ್ರಮೆ ಮತ್ತು ವಾಸ್ತವ ಕೃತಿಯಿಂದ ಆಯ್ದಭಾಗ;

ಸಂವಿಧಾನ ಓದು ಕೃತಿಯನ್ನು ಇಟ್ಟುಕೊಂಡು ರಾಜ್ಯಾದ್ಯಂತ ಅಭಿಯಾನವನ್ನು ನಡೆಸಲಾಯಿತು. ಇಡೀ ರಾಜ್ಯ ಸುತ್ತಿ ನೂರಾರು ಕಾರ್ಯಕ್ರಮಗಳನ್ನು ನಡೆಸಿದೆವು. ಬಹುಪಾಲು ಕಾರ್ಯಕ್ರಮಗಳು ಸಂವಾದದಲ್ಲಿ ಕೊನೆಗೊಂಡವು. ಈ ಸಂವಾದದಲ್ಲಿ ಅನೇಕ ವಿಷಯಗಳ ಬಗ್ಗೆ ಹಲವು ಪ್ರಶ್ನೆಗಳು ಬಂದವು. ಸಂವಾದದಲ್ಲಿ ಬಂದ ಪ್ರಶ್ನೆಗಳಿಂದ ತಿಳಿದ ಸತ್ಯ ಸಂಗತಿಯೆಂದರೆ ಬಹುಪಾಲು ವಿದ್ಯಾರ್ಥಿ-ಯುವಜನರಿಗೆ ಮೀಸಲಾತಿಯ ಬಗ್ಗೆ ಸರಿಯಾದ ತಿಳಿವಳಿಕೆಯ ಕೊರತೆ ಎದ್ದು ಕಾಣಿಸುತ್ತಿತ್ತು. ವಿದ್ಯಾರ್ಥಿ-ಯುವಜನರ ಈ ಮನಸ್ಥಿತಿಗೆ ಕಾರಣ ಕೆಲವು ಶಿಕ್ಷಕರು, ಪೋಷಕರು ಮತ್ತು ಸುದ್ದಿ ಮಾಧ್ಯಮಗಳು. ನಾವು ಕೊಟ್ಟಂತಹ ಮಾಹಿತಿ ಮತ್ತು ಉತ್ತರಗಳು ಬಹುಪಾಲು ವಿದ್ಯಾರ್ಥಿ ಯುವಜನರಿಗೆ ಸತ್ಯ ಸಂಗತಿ ಏನು ಎಂಬ ಮನವಿಕೆ ಮಾಡಿಕೊಡಲು ಸಾಧ್ಯವಾಯಿತು. ಈ ದಿಕ್ಕಿನಲ್ಲಿ ಇನ್ನೂ ಹೆಚ್ಚು ಕೆಲಸವಾಗಬೇಕಾಗಿದೆ.

(ಡಿ) ಕೆನೆಪದರ ನೀತಿಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಯಾಕೆ ಅನ್ವಯಿಸಬಾರದು?

ಸ್ವಾತಂತ್ರ್ಯ ಬಂದು 75ಕ್ಕೂ ಹೆಚ್ಚು ವರ್ಷಗಳಾದರೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಬಹುಸಂಖ್ಯಾತ ಜನರ ಬದುಕು ಇನ್ನೂ ಹಸನಾಗಿಲ್ಲದಿರುವುದರಿಂದ ಹಾಗೂ ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆಯಲ್ಲಿ ಈ ಜನವರ್ಗವನ್ನು ಇನ್ನೂ ಕೆಳಸ್ತರದ ಜನರನ್ನಾಗಿ ನೋಡುವುದರಿಂದ ಕೆನೆಪದರ ಎನ್ನುವುದನ್ನು ಈ ವರ್ಗಗಳಿಗೆ ಅನ್ವಯಿಸಲು ಇನ್ನೂ ಕಾಲ ಪಕ್ವವಾಗಿಲ್ಲ.

ಇದನ್ನು ಓದಿ: ಮೀಸಲಾತಿಗೆ ಸಂಬಂಧಿಸಿದ ಪ್ರಶ್ನೆ-1 : ನ್ಯಾ.ಹೆಚ್‌.ಎನ್‌.ನಾಗಮೋಹನದಾಸ್‌ ಅವರ “ಮೀಸಲಾತಿ – ಭ್ರಮೆ ಮತ್ತು ವಾಸ್ತವ” ಆಯ್ದ ಭಾಗ

ಈ ವರ್ಗಗಳಿಗೆ ಕೆನೆಪದರ ನೀತಿ ಅನ್ವಯಿಸಬೇಕೆ? ಅಥವಾ ಬೇಡವೇ? ಎನ್ನುವುದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆ, ಪ್ರಯತ್ನ, ನ್ಯಾಯಾಂಗದ ಮಧ್ಯಪ್ರವೇಶ ನಡೆದಿದ್ದು, ಆ ಇತಿಹಾಸ ಕುರಿತ ಮಾಹಿತಿ ಹೀಗಿದೆ:

1971ರಲ್ಲಿ ತಮಿಳುನಾಡು ಸರ್ಕಾರ ʻಶ್ರೀ ಸಟ್ಟನಾಥನ್‌ ಆಯೋಗʼವನ್ನು ರಚಿಸಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಕೊಡುವ ವಿಚಾರದಲ್ಲಿ ವರದಿಯನ್ನು ಪಡೆಯಿತು. ವರದಿಯಲ್ಲಿ ಮೊದಲನೇ ಬಾರಿಗೆ ಕೆನೆಪದರ ಪದ ಬಳಕೆಯಾಗಿ ಹಿಂದುಳಿದ ವರ್ಗದ ಜನರಲ್ಲಿ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರೆದ ಜನರು ಮೀಸಲಾತಿಗೆ ಅರ್ಹರಲ್ಲವೆಂದು ಹೇಳಿತು. ಇದನ್ನು ಅನುಸರಿಸಿ ವಾರ್ಷಿಕ ಆದಾಯ 2 ಲಕ್ಷ 50 ಸಾವಿರ ರೂಪಾಯಿಗಳಿಗಿಂತ ಹೆಚ್ಚು ಇದ್ದವರಿಗೆ ಮೀಸಲಾತಿ ಸೌಲಭ್ಯವನ್ನು ನಿರಾಕರಿಸಲಾಯಿತು. ಕ್ರಮೇಣ ಹಂತಹಂತವಾಗಿ ವಾರ್ಷಿಕ ವರಮಾನ ಹೆಚ್ಚಿಸಿ 2017ರಲ್ಲಿ 8 ಲಕ್ಷ ರೂಪಾಯಿಗಳಿಗೆ ಏರಿಸಲಾಗಿದೆ. ಹೀಗೆ ಕೆನೆಪದರ ನೀತಿಯನ್ನು ಹಿಂದುಳಿದ ವರ್ಗಗಳಿಗೆ ಅನ್ವಯಿಸಲಾಗಿದೆ.

ಇದನ್ನು ಓದಿ: ಮೀಸಲಾತಿಗೆ ಸಂಬಂಧಿಸಿದ ಪ್ರಶ್ನೆ – 2 : ಸಂವಿಧಾನ ಜಾರಿಗೆ ಬಂದ 70 ವರ್ಷಗಳ ನಂತರವೂ ಮೀಸಲಾತಿ ಮುಂದುವರಿಸಿರುವುದು ಎಷ್ಟು ಸಮಂಜಸ?

1977ರಲ್ಲಿ ಕೇಂದ್ರ ಸರ್ಕಾರ ಬಿ.ಪಿ.ಮಂಡಲ್‌ರವರನ್ನು ಎರಡನೇ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿತು. 1990ರಲ್ಲಿ ಮಂಡಲ್‌ರವರು ತಮ್ಮ ವರದಿಯನ್ನು ಸಲ್ಲಿಸಿದರು, ಕೇಂದ್ರ ಸರ್ಕಾರ ಮಂಡಲ್‌ ವರದಿಯ ಆಧಾರದ ಮೇಲೆ ಹಿಂದುಳಿದ ವರ್ಗಗಳಿಗೂ ಸಹ ಶೇ. 27ರಷ್ಟು ಮೀಸಲಾತಿಯನ್ನು ಕಲ್ಪಿಸಿತು. ಕೇಂದ್ರ ಸರ್ಕಾರದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಮುಖಾಂತರ ಇಂದಿರಾ ಸಹಾನಿ ಎಂಬ ಪ್ರಕರಣದ ವಿಚಾರಣೆಯನ್ನು ನಡೆಸಿ 1992ರಲ್ಲಿ ತನ್ನ ತೀರ್ಪಿನಲ್ಲಿ ಕೆನೆಪದರದ ಬಗ್ಗೆ ಈ ರೀತಿ ಹೇಳಿದೆ: ʻʻಕೆನೆಪದರ ಎಂಬ ನೀತಿ ಕೇವಲ ಹಿಂದುಳಿದ ಜಾತಿಗಳಿಗೆ ಅನ್ವಯವಾಗುತ್ತದೆ. ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಅನ್ವಯವಾಗುವುದಿಲ್ಲ.ʼʼ

ಇದನ್ನು ಓದಿ: ಮೀಸಲಾತಿಗೆ ಸಂಬಂಧಿಸಿದ ಪ್ರಶ್ನೆ-3 : ಪ್ರವೇಶ ಹಂತದಲ್ಲಿ ಮೀಸಲಾತಿ ಸರಿ, ಆದರೆ ಬಡ್ತಿಯಲ್ಲಿ ಮೀಸಲಾತಿ ಎಷ್ಟು ಸರಿ?

ನ್ಯಾಯಾಲಯ ಮುಂದುವರೆದು ʻʻವೃತ್ತಿ ಕೆಳಮಟ್ಟದ್ದಾದಂತೆ, ಶ್ರೇಣೀಕೃತ ಸಮಾಜದಲ್ಲಿ ಸಾಮಾಜಿಕ ಸ್ಥಾನಮಾನಗಳೂ ಕೆಳಮಟ್ಟದಲ್ಲಿರುತ್ತವೆ. ಗ್ರಾಮೀಣ ಭಾರತದಲ್ಲಿ, ವೃತ್ತಿ ಮತ್ತು ಜಾತಿಯ ನಂಟು ಇವತ್ತಿಗೂ ವಾಸ್ತವವೇ. ಕೆಲವು ಸದಸ್ಯರು ನಗರಗಳಿಗೆ ಅಥವಾ ವಿದೇಶಗಳಿಗೂ ಹೋಗಿರಬಹುದು ಆದರೆ ಅವರ ಹಿಂದಕ್ಕೆ ಬಂದಾಗ-ಕೆಲವರನ್ನು ಹೊರತುಪಡಿಸಿ-ಮತ್ತದೇ ಹಿಡಿತಕ್ಕೆ ಒಳಗಾಗುತ್ತಾರೆ. ಅವರು ಹಣ ಗಳಿಸಿರುವುದು ಮುಖ್ಯವಾಗುವುದಿಲ್ಲ. ಅವರು ನಿರ್ದಿಷ್ಟ ವೃತ್ತಿಯನ್ನು ಪಾಲಿಸದಿರಬಹುದು. ಅದಾಗ್ಯೂ ಅವರ ಹಣೆಪಟ್ಟಿ ಹಾಗೆಯೇ ಇರುತ್ತದೆ. ಮದುವೆ, ಸಾವು, ಮತ್ತಿತರ ಸಾಮಾಜಿಕ ಸಮಾರಂಭಗಳಲ್ಲಿ ಅವರ ಅಸ್ಮಿತೆ ಬದಲಾಗುವುದಿಲ್ಲ. ಅವರ ಸಾಮಾಜಿಕ ವರ್ಗ, ಜಾತಿ ಪ್ರಸ್ತುತವಾಗುತ್ತದೆ. ಈ ಕಾರಣಗಳಿಗಾಗಿ ಕೆನೆಪದರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಅನ್ವಯವಾಗುವುದಿಲ್ಲವೆಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

ಇಂದಿರಾ ಸಹಾನಿ ತೀರ್ಪು ಬಂದು 30 ವರ್ಷಗಳಾಗುತ್ತಿದೆ. ಇಂದು ಈ ವರ್ಗದ ಜನರ ಪರಿಸ್ಥಿತಿ ಏನಾದರೂ ಬದಲಾಗಿದೆಯೇ ಎಂಬ ವಿಚಾರದಲ್ಲಿ ನಮ್ಮ ಮುಂದೆ ಯಾವುದೇ ಅಧ್ಯಯನದ ವರದಿ ಇಲ್ಲ. ಅಂಕಿ ಅಂಶಗಳು ಕೂಡಾ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ದುಡುಕಿನ ತೀರ್ಮಾನ ಸೂಕ್ತವಲ್ಲ. ಆರೋಗ್ಯಕರ ಚರ್ಚೆಗಳು ನಡೆದು ಸರಿ ದಾರಿಯನ್ನು ಕಂಡುಕೊಳ್ಳಬೇಕಾಗಿದೆ.

  • ಪುಸ್ತಕ : ಮೀಸಲಾತಿ ಭ್ರಮೆ ಮತ್ತು ವಾಸ್ತಕ
  • ಲೇಖಕರು : ನ್ಯಾಯಮೂರ್ತಿ ಹೆಚ್‌.ಎನ್.ನಾಗಮೋಹನದಾಸ್‌, ನಿವೃತ್ತ ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ
  • ಜನ ಪ್ರಕಾಶನ, ಜಯನಗರ, ಬೆಂಗಳೂರು.
Donate Janashakthi Media

Leave a Reply

Your email address will not be published. Required fields are marked *