ಮೀಸಲಾತಿಗೆ ಸಂಬಂಧಿಸಿದ ಪ್ರಶ್ನೆ-3 : ಪ್ರವೇಶ ಹಂತದಲ್ಲಿ ಮೀಸಲಾತಿ ಸರಿ, ಆದರೆ ಬಡ್ತಿಯಲ್ಲಿ ಮೀಸಲಾತಿ ಎಷ್ಟು ಸರಿ?

ಕರ್ನಾಟಕ ಉಚ್ಚ ನ್ಯಾಯಾಲಯ ನಿವೃತ್ತ ನ್ಯಾ. ಹೆಚ್‌.ಎನ್‌.ನಾಗಮೋಹನದಾಸ್ಅವರು ಬರೆದಿರುವ ಮೀಸಲಾತಿ ಭ್ರಮೆ ಮತ್ತು ವಾಸ್ತವ ಕೃತಿಯಿಂದ ಆಯ್ದಭಾಗ;

ಸಂವಿಧಾನ ಓದು ಕೃತಿಯನ್ನು ಇಟ್ಟುಕೊಂಡು ರಾಜ್ಯಾದ್ಯಂತ ಅಭಿಯಾನವನ್ನು ನಡೆಸಲಾಯಿತು. ಇಡೀ ರಾಜ್ಯ ಸುತ್ತಿ ನೂರಾರು ಕಾರ್ಯಕ್ರಮಗಳನ್ನು ನಡೆಸಿದೆವು. ಬಹುಪಾಲು ಕಾರ್ಯಕ್ರಮಗಳು ಸಂವಾದದಲ್ಲಿ ಕೊನೆಗೊಂಡವು. ಈ ಸಂವಾದದಲ್ಲಿ ಅನೇಕ ವಿಷಯಗಳ ಬಗ್ಗೆ ಹಲವು ಪ್ರಶ್ನೆಗಳು ಬಂದವು. ಸಂವಾದದಲ್ಲಿ ಬಂದ ಪ್ರಶ್ನೆಗಳಿಂದ ತಿಳಿದ ಸತ್ಯ ಸಂಗತಿಯೆಂದರೆ ಬಹುಪಾಲು ವಿದ್ಯಾರ್ಥಿ-ಯುವಜನರಿಗೆ ಮೀಸಲಾತಿಯ ಬಗ್ಗೆ ಸರಿಯಾದ ತಿಳಿವಳಿಕೆಯ ಕೊರತೆ ಎದ್ದು ಕಾಣಿಸುತ್ತಿತ್ತು. ವಿದ್ಯಾರ್ಥಿ-ಯುವಜನರ ಈ ಮನಸ್ಥಿತಿಗೆ ಕಾರಣ ಕೆಲವು ಶಿಕ್ಷಕರು, ಪೋಷಕರು ಮತ್ತು ಸುದ್ದಿ ಮಾಧ್ಯಮಗಳು. ನಾವು ಕೊಟ್ಟಂತಹ ಮಾಹಿತಿ ಮತ್ತು ಉತ್ತರಗಳು ಬಹುಪಾಲು ವಿದ್ಯಾರ್ಥಿ ಯುವಜನರಿಗೆ ಸತ್ಯ ಸಂಗತಿ ಏನು ಎಂಬ ಮನವಿಕೆ ಮಾಡಿಕೊಡಲು ಸಾಧ್ಯವಾಯಿತು. ಈ ದಿಕ್ಕಿನಲ್ಲಿ ಇನ್ನೂ ಹೆಚ್ಚು ಕೆಲಸವಾಗಬೇಕಾಗಿದೆ.

(ಸಿ) ಪ್ರವೇಶ ಹಂತದಲ್ಲಿ ಮೀಸಲಾತಿ ಸರಿ, ಆದರೆ ಬಡ್ತಿಯಲ್ಲಿ ಮೀಸಲಾತಿ ಎಷ್ಟು ಸರಿ?

ಪ.ಜಾ. ಮತ್ತು ಪ.ಪಂ.ದವರು 1955 ರಿಂದ ಬಡ್ತಿಯಲ್ಲಿ ಮೀಸಲಾತಿ ಸೌಲಭ್ಯವನ್ನು ಪಡೆಯುತ್ತಾ ಬಂದಿದ್ದಾರೆ. 16-11-1992ರಂದು ಸರ್ವೋಚ್ಚ ನ್ಯಾಯಾಲಯವು ʻಇಂದಿರಾ ಸಹಾನಿʼ ಪ್ರಕರಣದಲ್ಲಿ ತೀರ್ಪನ್ನು ನೀಡಿ ಹಿಂದುಳಿದ ವರ್ಗಗಳಿಗೆ ಕೇಂದ್ರ ಸರ್ಕಾರದ ಸೇವೆಗಳಲ್ಲಿ ಶೇ.27ರಷ್ಟು ನೀಡಿದ್ದ ಮೀಸಲಾತಿಯನ್ನು ಎತ್ತಿ ಹಿಡಿದು ಕೆಲವು ಷರತ್ತುಗಳನ್ನು ವಿಧಿಸಿತು.

ಅವುಗಳೆಂದರೆ:

  1. ಸರ್ಕಾರಿ ಸೇವೆಗೆ ಪ್ರವೇಶಿಸುವ ಪ್ರಾಥಮಿಕ ಹಂತದಲ್ಲಿ ಮಾತ್ರ ಮೀಸಲಾತಿ ಇರಬೇಕು.
  2. ಸೇವೆಗೆ ಸೇರಿದ ನಂತರ ಬಡ್ತಿ ವಿಚಾರದಲ್ಲಿ ಮೀಸಲಾತಿ ಇರಕೂಡದು.
  3. ಒಟ್ಟು ಮೀಸಲಾತಿ ಶೇ.50ನ್ನು ಮೀರಬಾರದು.
  4. ಕೆನೆಪದರದ ನೀತಿ ಹಿಂದುಳಿದ ವರ್ಗಗಳಿಗೆ ಮಾತ್ರ ಅನ್ವಯಿಸಬೇಕು.
  5. ಕೆನೆಪದರದ ನೀತಿ ಪ.ಚಾ. ಮತ್ತು ಪ.ಪಂ.ಕ್ಕೆ ಅನ್ವಯವಾಗುವುದಿಲ್ಲ.

ಸರ್ವೋಚ್ಚ ನ್ಯಾಯಾಲಯದ ಈ ತೀರ್ಪಿನ ಪರಿಣಾಮವಾಗಿ ದೇಶದ ಪ.ಜಾ. ಮತ್ತು ಪ.ಪಂ.ದವರ ಹಿತಕ್ಕೆ ಧಕ್ಕೆ ಆಗಿದೆ ಎಂದು ಈ ತೀರ್ಪನ್ನು ಶೂನ್ಯೀಕರಿಸಲು 1995ರಲ್ಲಿ ಸಂವಿಧಾನಕ್ಕೆ 77ನೇ ತಿದ್ದುಪಡಿ ತಂದು ಅನುಚ್ಛೇದ 16(4ಎ)ನ್ನು ಸೇರಿಸುವುದರ ಮುಖಾಂತರ ಪ.ಜಾ. ಮತ್ತು ಪ.ಪಂ.ಗಳಿಗೆ ಬಡ್ತಿಯಲ್ಲಿ ಮೀಸಲಾತಿಯನ್ನು ಕಲ್ಪಿಸಿತು. 2000ರಲ್ಲಿ ಸಂವಿಧಾನದ 81ನೇ ತಿದ್ದುಪಡಿ ಮೂಲಕ ಅನುಚ್ಛೇದ 16(4ಬಿ)ಯನ್ನು ಸೇರಿ ಮೀಸಲಾತಿ ಮಿತಿ ಬ್ಯಾಕ್‌ ಲಾಗ್‌ ಹುದ್ದೆಗಳಿಗೆ ಅನ್ವಯಿಸುವುದಿಲ್ಲವೆಂದು ಹೇಳಿದೆ. ಮುಂದುವರೆದು 2000ರಲ್ಲಿ ಸಂವಿಧಾನದ 82ನೇ ತಿದ್ದುಪಡಿ ತಂದು ಅನುಚ್ಛೇದ 335ಕ್ಕೆ ಒಂದು Proviso ಸೇರಿಸಿ ಸರ್ಕಾರವು ಪ.ಜಾ. ಮತ್ತು ಪ.ಪಂ.ದವರಿಗೆ ಬಡ್ತಿ ನೀಡುವ ವಿಚಾರದಲ್ಲಿ ರಿಯಾಯಿತಿಗಳನ್ನು ನೀಡಬಹುದೆಂದು ತಿಳಿಸಿತು. ನಂತರ 2011ರಲ್ಲಿ ಸಂವಿಧಾನದ 85ನೇ ತಿದ್ದುಪಡಿ ತಂದು ಮೀಸಲಾತಿಯಿಂದ ಬಡ್ತಿ ಪಡೆದವರು ತತ್ಪರಿಣಾಮ ಸೇವಾ ಜ್ಯೇಷ್ಠತೆಗೂ ಅರ್ಹರೆಂದು ಹೇಳಿತು.

ಸಂವಿಧಾನದ 77, 81, 82 ಹಾಗೂ 85ನೇ ತಿದ್ದುಪಡಿಗಳನ್ನು ಎಂ. ನಾಗರಾಜ್‌ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. 2006ರಲ್ಲಿ ಸರ್ವೋಚ್ಚ ನ್ಯಾಯಾಲಯ ತೀರ್ಪನ್ನು ನೀಡಿ ಸಂವಿಧಾನದ ಈ ನಾಲ್ಕು ತಿದ್ದುಪಡಿಗಳನ್ನು ಊರ್ಜಿತವೆಂದು ಎತ್ತಿ ಹಿಡಿಯಿತು. ಆದರೆ, ಕೆಳಗಿನ ಕೆಲವು ನಿಬಂಧನೆಗಳನ್ನು ಸೂಚಿಸಿತು:

  1. ಸರ್ಕಾರ ಬಡ್ತಿಯಲ್ಲಿ ಮೀಸಲಾತಿ ಕೊಡಬೇಕೆಂಬುದು ಕಡ್ಡಾಯವಿಲ್ಲ.
  2. ಒಂದು ವೇಳೆ ಬಡ್ತಿಯಲ್ಲಿ ಮೀಸಲಾತಿ ಕೊಡಬೇಕೆಂದಾದರೆ ಕೊಡಲೇಬೇಕಾದ ಅನಿವಾರ್ಯತೆಯನ್ನು ಪ್ರತಿಯೊಂದು ಪ್ರಕರಣದಲ್ಲಿ ತೋರಿಸಬೇಕು.
  3. ಫಲಾನುಭವಿಗಳು ನಿಜವಾಗಿಯೂ ಹಿಂದುಳಿದವರೇ ಎಂದು ಖಾತರಿ ಪಡಿಸಿಕೊಳ್ಳಬೇಕು.
  4. ಈ ವರ್ಗಗಳಿಗೆ ಸೂಕ್ತವಾದ ಪ್ರಾತಿನಿಧ್ಯ ಸಿಕ್ಕದಿರುವುದನ್ನು ಖಾತರಿ ಪಡಿಸಿಕೊಳ್ಳಬೇಕು.
  5. ಈ ರೀತಿ ಬಡ್ತಿಯಲ್ಲಿ ಮೀಸಲಾತಿಯನ್ನು ನೀಡುವುದರಿಂದ ಆಡಳಿತದ ಕಾರ್ಯ ದಕ್ಷತೆಗೆ ಧಕ್ಕೆ ಆಗಬಾರದು.
  6. ಸರ್ಕಾರ ಈ ವಿಚಾರಕ್ಕೆ ಸಂಬಂಧಿಸಿದ ಹಾಗೆ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಬೇಕು.

ಕರ್ನಾಟಕ ಸರ್ಕಾರವು 2002ರಲ್ಲಿ ಕಾಯ್ದೆಯೊಂದನ್ನು ತಂದು ಪ.ಜಾ. ಮತ್ತು ಪ.ಪಂ.ಗಳಿಗೆ ಬಡ್ತಿಯಲ್ಲಿ ಮೀಸಲಾತಿಯನ್ನು ಮತ್ತು ತತ್‌ಪರಿಣಾಮವಾಗಿ ಸೇವಾ ಜ್ಯೇಷ್ಠತೆಯನ್ನು ಒದಗಿಸಿತು. ಈ ಕಾಯಿದೆಯ ಸಿಂಧುತ್ವವನ್ನು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಎಂ. ನಾಗರಾಜ್‌ ಪ್ರಕರಣದಲ್ಲಿ ಪ್ರಶ್ನಿಸಲಾಯಿತು. ಕರ್ನಾಟಕ ಉಚ್ಚ ನ್ಯಾಯಾಲಯ 2011ರಲ್ಲಿ ತೀರ್ಪನ್ನು ನೀಡಿ ಕರ್ನಾಟಕ ಸರ್ಕಾರ ತಂದಿರುವ ಕಾಯಿದೆಯು ಸಂವಿಧಾನ ಬದ್ಧವಾಗಿದೆ ಎಂದು ಎತ್ತಿ ಹಿಡಿಯಿತು. ಆದರೆ ಸರ್ವೋಚ್ಚ ನ್ಯಾಯಾಲಯವು 2017ರಲ್ಲಿ ಬಿ.ಕೆ. ಪವಿತ್ರ-I ಪ್ರಕರಣದಲ್ಲಿ ಕರ್ನಾಟಕ ಸರ್ಕಾರ ತಂದ ಕಾಯಿದೆಯನ್ನು ಅಸಿಂಧು ಎಂದು ರದ್ದುಪಡಿಸಿತು.

ನಂತರ ಕರ್ನಾಟಕ ಸರ್ಕಾರವು 2017ರಲ್ಲಿ ಕೆ. ರತ್ನಪ್ರಭ ಸಮಿತಿಯನ್ನು ರಚಿಸಿ ಪ.ಜಾ. ಮತ್ತು ಪ.ಪಂ.ಗಳ ಸ್ಥಿತಿಗತಿಗಳ ಬಗ್ಗೆ ವರದಿಯನ್ನು ಪಡೆದು 2018ರಲ್ಲಿ ಹೊಸದಾದ ಕಾನೂನು ತಂದು ಬಡ್ತಿಯಲ್ಲಿ ಮೀಸಲಾತಿಯನ್ನು ಒದಗಿಸಿತು. 2019ರಲ್ಲಿ ಸರ್ವೋಚ್ಚ ನ್ಯಾಯಾಲಯವು ಬಿ.ಕೆ. ಪವಿತ್ರ-II ಪ್ರಕರಣದಲ್ಲಿ ಕರ್ನಾಟಕ ಸರ್ಕಾರ ತಂದ ಕಾನೂನಿನ ಸಿಂಧುತ್ವವನ್ನು ಎತ್ತಿ ಹಿಡಿಯಿತು.

ಇದನ್ನು ಓದಿ: ಮೀಸಲಾತಿಗೆ ಸಂಬಂಧಿಸಿದ ಪ್ರಶ್ನೆ-1 : ನ್ಯಾ.ಹೆಚ್‌.ಎನ್‌.ನಾಗಮೋಹನದಾಸ್‌ ಅವರ “ಮೀಸಲಾತಿ – ಭ್ರಮೆ ಮತ್ತು ವಾಸ್ತವ” ಆಯ್ದ ಭಾಗ

ಬಡ್ತಿಯಲ್ಲಿ ಮೀಸಲಾತಿ ಸಮಸ್ಯೆ ಇಲ್ಲಿಗೇ ಮುಗಿಯಲಿಲ್ಲ. ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳ ಪರಿಣಾಮವಾಗಿ ಇಂದು ದೇಶದ ಇತರೆ ರಾಜ್ಯಗಳಲ್ಲಿ ಪ.ಜಾ. ಮತ್ತು ಪ.ಪಂ.ಗಳು ಬಡ್ತಿ ಮೀಸಲಾತಿಯ ವಿಚಾರದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ.

ಬಡ್ತಿಯಲ್ಲಿ ಮೀಸಲಾತಿಗೆ ಸಂಬಂಧಿಸಿ ಸರ್ವೋಚ್ಚ ನ್ಯಾಯಾಲಯ ವಿಧಿಸಿರುವ ನಿಬಂಧನೆಗಳನ್ನು ಶೂನ್ಯೀಕರಿಸಲು ಕೇಂದ್ರ ಸರ್ಕಾರ ಸಂವಿಧಾನದ 117ನೇ ತಿದ್ದುಪಡಿಯನ್ನು 2012ರಲ್ಲಿ ರಾಜ್ಯಸಭೆಯಲ್ಲಿ ಮಂಡಿಸಿ ಪಾಸು ಮಾಡಿಸಿತು. ಆದರೆ ಕಾರಣಾಂತರಗಳಿಂದ ಲೋಕಸಭೆಯಲ್ಲಿ ಇನ್ನೂ ಪಾಸ್‌ ಮಾಡಿಲ್ಲ. ಸರ್ಕಾರವು ರಾಜಕೀಯ ಇಚ್ಛಾ ಶಕ್ತಿಯನ್ನು ಪ್ರದರ್ಶಿಸಿ, ಸಂವಿಧಾನದ 117ನೇ ತಿದ್ದುಪಡಿ ತರುವುದರ ಮುಖಾಂತರ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕು.

ಪ.ಜಾ. ಮತ್ತು ಪ.ಪಂ.ದ ಜನರು ಬಡವರಾಗಿ ವರ್ಗ ಅಸಮಾನತೆಯನ್ನು ಮತ್ತು ಜಾತಿ ವ್ಯವಸ್ಥೆಯ ತಳಸಮುದಾಯಗಳಾಗಿ ಸಾಮಾಜಿಕ ಅಸಮಾನತೆಯನ್ನು ಅನುಭವಿಸುತ್ತಿದ್ದಾರೆ. ಸುಮಾರು 2000 ವರ್ಷಗಳ ಕಾಲ ಈ ಸಮುದಾಯಗಳಿಗೆ ಶಿಕ್ಷಣ, ಆಸ್ತಿಯ ಹಕ್ಕು, ಆಡಳಿತದಲ್ಲಿ ಭಾಗವಹಿಸುವಿಕೆ, ಸೈನ್ಯದಲ್ಲಿ ಸ್ಥಾನಮಾನ ಇತ್ಯಾದಿಗಳಿಂದ ವಂಚಿಸಲಾಯಿತು. ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಬಲಹೀನರಾಗಿರುವ ಈ ಸಮುದಾಯಗಳು ಸ್ವಾಭಾವಿಕವಾಗಿ ಗುಲಾಮರಾಗಿ ಬಾಳಬೇಕಾಯಿತು. ಇಂತಹ ಸಮುದಾಯಗಳಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಮೀಸಲಾತಿಯನ್ನು ಜಾರಿಗೆ ತರಲಾಯಿತು. ಮೀಸಲಾತಿ ಕೇವಲ ಸಮಾನತೆಯ ಸಾಧನ ಮಾತ್ರವಲ್ಲ ಅದೊಂದು ಸಮಾನ ಅಧಿಕಾರವನ್ನು ಪಡೆಯುವ ಸಾಧನವೂ ಆಗಿದೆ. ನ್ಯಾಯಮೂರ್ತಿ ಓ. ಚಿನ್ನಪ್ಪ ರೆಡ್ಡಿಯವರು 1985ರಲ್ಲಿ ವಸಂತ ಕುಮಾರ್‌ ಪ್ರಕರಣದಲ್ಲಿ ಬಡ್ತಿಯಲ್ಲಿ ಯಾಕೆ ಮೀಸಲಾತಿ ಬೇಕು ಎಂಬುದನ್ನು ಸ್ಪಷ್ಟೀಕರಿಸಿದ್ದಾರೆ. ಸವೋಚ್ಚ ನ್ಯಾಯಾಲಯದ ಈ ಸ್ಪಷ್ಟೀಕರಣ ಇಂದಿಗೂ ಪ್ರಸ್ತುತ ಮತ್ತು ಅದು ಹೀಗಿದೆ:

ʻʻ36. ಮೀಸಲಾತಿಯ ಮಾತು ಬಂದಾಗಲೆಲ್ಲ, ಸವಲತ್ತು ಪಡೆದವರು, ದಕ್ಷತೆ ಎಂಬ ಮಾತನ್ನು ಪದೇ ಪದೇ ಹೇಳುತ್ತಿರುತ್ತಾರೆ. ಒಟ್ಟು ಮೀಸಲಾತಿಯು ಶೇ.50ರ ಮಿತಿಯನ್ನು ಮೀರಿದರೆ ದಕ್ಷತೆಯು ಏರುಪೇರಾಗಿ ಬಿಡುತ್ತದೆ. ಮುಂದುವರೆಸುವ (ಕ್ಯಾರಿಫಾವರ್ಡ್‌) ನಿಯಮವನ್ನು ಅಳವಡಿಸಿಕೊಂಡರೆ ದಕ್ಷತೆಯು ನಷ್ಟವಾಗಿಬಿಡುತ್ತದೆ. ಬಡ್ತಿಯ ಹುದ್ದೆಗಳಿಗೆ ಮೀಸಲಾತಿಯ ನಿಯಮವನ್ನು ಅನ್ವಯಿಸಿದರೆ ದಕ್ಷತೆಗೆ ಧಕ್ಕೆಯಾಗಿಬಿಡುತ್ತದೆ ಎಂಬುದು ಅವರ ಅಂಬೋಣ. ಹೀಗೆ ಶೇ.50 ಮೀರಿದ ಮೀಸಲಾತಿಗೆ ಸಂಬಂಧಿಸಿದಂತೆ ಅಥವಾ ಮೀಸಲಾತಿಯನ್ನು ಬಡ್ತಿಯ ಹುದ್ದೆಗಳಿಗೂ ನೀಡುವುದಕ್ಕೆ ಸಂಬಂಧಿಸಿದಂತೆ ಅಥವಾ ಮುಂದುವರೆಸುವುದನ್ನು ಅಳವಡಿಸಿಕೊಳ್ಳುವ ನಿಯಮಕ್ಕೆ ಸಂಬಂಧಿಸಿದಂತೆ ವ್ಯಕ್ತವಾದ ವಿರೋಧಗಳನ್ನು ನೋಡಿದಾಗ, ಸಿವಿಲ್‌ ಸರ್ವಿಸ್‌ ಎಂಬುದು ಒಂದು ಸ್ವರ್ಗ ಲೋಕವೇನೋ, ಅಲ್ಲಿಗೆ ದೇವದೂತರು, ಆಯ್ದ ಗಣ್ಯವರ್ಗದವರು, ಅತ್ಯುತ್ತಮರಾದವರಿಗೆ ಮಾತ್ರ ಪ್ರವೇಶ, ಅವರು ಮಾತ್ರ ಏಣಿಯ ಮೇಲೇರಿ ಹೋಗಬಹುದು ಎಂಬ ಭಾವನೆ ಉಂಟು ಮಾಡುವಂತಿರುತ್ತದೆ. ಆದರೆ, ಸತ್ಯ ಸಂಗತಿ ಬೇರೆಯೇ ಆಗಿದೆ. ಇಲ್ಲಿನ ಸತ್ಯ ಸಂಗತಿ ಏನೆಂದರೆ, ಸಿವಿಲ್‌ ಸರ್ವಿಸ್‌ ಎನ್ನುವುದು ಸ್ವರ್ಗ ಲೋಕವೇನಲ್ಲ ಮತ್ತು ಆಯ್ದ ಕೆಲವೇ ವರ್ಗಗಳಿಗೆ ಸೇರಿದ ಮೇಲಂತಸ್ತಿನವರ ದಕ್ಷತೆಯ ಮಾದರಿಯೂ ಅಲ್ಲ. ಇದರಲ್ಲಿರುವ ಪೂರ್ವ ಗ್ರಹಿಕೆ ಏನೆಂದರೆ ಮೀಸಲಾತಿ ರಹಿತ ಹುದ್ದೆಗಳಿಗೆ ಆಯ್ಕೆಯಾದಂಥ ಮೇಲು ಜಾತಿ ಮತ್ತು ಮೇಲು ವರ್ಗಗಳಿಗೆ ಸೇರಿದವರು ತಮಗೆ ಮಾತ್ರವೇ ಇದೆ ಎಂಬ ಅರ್ಹತೆಯ ಸೊಕ್ಕಿನ ಕಾರಣದಿಂದಾಗಿ ಸಹಜವಾಗಿಯೇ ಮೀಸಲಾತಿ ಹುದ್ದೆಗಳಿಗೆ ಆಯ್ಕೆಯಾದವರಿಗಿಂತ ಚೆನ್ನಾಗಿ ಕಾರ್ಯನಿರ್ವಹಿಸುತ್ತಾರೆ ಮತ್ತು ಇಂತಹ ಪವಿತ್ರ ಆವರಣದೊಳಗೆ ಇತರರ ಪ್ರವೇಶದಿಂದ ದಕ್ಷತೆ ಎಂಬ ತಿಳಿನೀರಿನ ಧಾರೆ ಕಲುಷಿತವಾಗಿಬಿಡುತ್ತದೆ ಎಂಬುದು ಒಂದು ಕುತ್ಸಿತ ಗ್ರಹಿಕೆ. ಇದು ಗಣ್ಯ ವರ್ಗಗಳ ತಾವೇ ಶ್ರೇಷ್ಠ ಎಂಬ ಧೋರಣೆಯಲ್ಲಿ ಸಹಜವಾಗಿಯೇ ಇರುವಂಥದ್ದು. ಆದರೆ, ಮೀಸಲಾತಿಯು ಶೇ 50% ನ್ನು ಮೀರಿದರೆ, ಮೀಸಲಾತಿಯನ್ನು ಮುಂದುವರೆಸಿದರೆ ಅಥವಾ ಬಡ್ತಿಯ ಹುದ್ದೆಗಳಿಗೆ ಮೀಸಲಾತಿಯನ್ನು ನೀಡಿದರೆ ದಕ್ಷತೆಯು ಏರುಪೇರಾಗಿ ಬಿಡುತ್ತದೆ ಎಂಬ ಗ್ರಹಿಕೆಯನ್ನು ಬೆಂಬಲಿಸುವಂಥ ಯಾವುದೇ ಅಂಕಿ ಅಂಶಗಳ ಆಧಾರವಾಗಲೀ ತಜ್ಞ ಸಾಕ್ಷ್ಯವಾಗಲೀ ಇಲ್ಲ. ಸಂಪೂರ್ಣವಾಗಿ ಒಂದು ತಾತ್ಕಾಲಿಕ ಪೂರ್ವ ಗ್ರಹಿಕೆಯ ಆಧಾರದ ಮೇಲೆ ವಾದಗಳನ್ನು ಮುಂದಿಡಲಾಗುತ್ತಿದೆ ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾಗುತ್ತಿದೆ. ಬಹಳ ಹಿಂದಿನ ಕಾಲದಿಂದಲೂ ʻʻಉಚ್ಚʼʼ ಅಥವಾ ಮುಂದುವರೆದ ವರ್ಗದವರು ಯಾವಾಸಹನೆಯಿಂದ ʻʻನೀಚʼʼ ಅಥವಾ ʻಹಿಂದುಳಿದʼ ಜಾತಿಗಳವರನ್ನು ನಡೆಸಿಕೊಳ್ಳುತ್ತ ಬಂದಿದ್ದಾರೋ ಅದು ಈಗ ಒಂದು ಕೆಟ್ಟ ಪೂರ್ವಾಗ್ರಹವಾಗಿ ಪರಿವರ್ತನೆಯಾಗುತ್ತಿದೆ ಮತ್ತು ಹರಳುಗಟ್ಟುತ್ತಿದೆ. ಇದು ಪ್ರಜ್ಞಾ ಪೂರ್ವಕ ಮತ್ತು ಸುಪ್ತ ಪ್ರಜ್ಞೆಯಲ್ಲಿ ಇರುವಂಥದಾಗಿದ್ದು, ಯಾವಾಗ ʻʻಕೆಳʼʼ ಜಾತಿಗಳವರು ಮತ್ತು ವರ್ಗಗಳವರು ರೊಟ್ಟಿಯಲ್ಲಿ ತಮ್ಮ ನ್ಯಾಯಯುತವಾದ ಪಾಲನ್ನು ಆಗ್ರಹಿಸಲು ಪ್ರಾರಂಭಿಸಿದರೋ ಆಗ ʻʻಮೇಲುʼʼ ಜಾತಿಗಳವರು ತಮ್ಮದರಲ್ಲಿ ಸ್ವಲ್ಪ ಪಾಲನ್ನು ಬಿಟ್ಟು ಕೊಡಬೇಕಾಗುತ್ತದೆ ಎಂದು ಅರ್ಥ.

ವಾಸ್ತವವಾಗಿ ಗಣ್ಯ ವೃತ್ತಿ ಮತ್ತು ಹುದ್ದೆಗಳ ಮೇಲೆ ಅವರ ಏಕಸ್ವಾಮ್ಯತೆಯ ಯಾವ ಅಂಶವೂ ಕಳೆದು ಹೋಗುವ ಭಯವಿಲ್ಲ. ಆದರೂ ಸಹ ಮುಂದುವರಿದ ಜಾತಿಗಳವರಿಗೆ ಸರ್ಕಾರದ ಸೇವೆ ಮತ್ತು ವೃತ್ತಿಗಳ ಉನ್ನತ ಶ್ರೇಣಿಗಳ ಮೇಲೆ ತಮಗಿರುವ ಏಕಸ್ವಾಮ್ಯ ಕಳೆದು ಹೋಗಿಬಿಡುವುದು ಎಂಬ ಭಯ ದಿನೇ ದಿನೇ ಹೆಚ್ಚಾಗುತ್ತಿದೆ. ಮೇಲು ಜಾತಿಗಳವರಿಗೆ ತಮ್ಮ ಪೂರ್ವಾಗ್ರಹಗಳನ್ನು ಮೀರುವುದಾಗಲೀ, ಅರ್ಥಮಾಡಿಕೊಳ್ಳುವುದಾಗಲೀ ಬಹಳ ಕಷ್ಟವಾಗತೊಡಗಿದೆ. ಅದೇ ರೀತಿ ʻʻಕೆಳʼʼ ಜಾತಿ ಮತ್ತು ವರ್ಗಗಳವರಿಗೆ ಪ್ರತಿಯೊಂದು ಹಂತದಲ್ಲಿಯೂ ತಾವು ಎದುರಿಸಬೇಕಾದ ಈ ಅಪ್ರಿಯ ಪೂರ್ವಾಗ್ರಹವನ್ನು ಹಾಗೂ ವಿರೋಧವನ್ನು ಮೀರುವುದು ಕಷ್ಟಕರವಾಗಿದೆ. ದಕ್ಷತೆ ಎನ್ನುವುದನ್ನು ಅದೇನೋ ಒಂದು ಪರಮ ಪವಿತ್ರವಾದುದು ಮತ್ತು ಈ ಪವಿತ್ರ ಸ್ಥಾನವನ್ನು ಬಹಳ ಜೋಪಾನದಿಂದ ಕಾಪಾಡಿಕೊಳ್ಳಬೇಕು ಎಂಬಂತೆ ಬಳಸುವುದನ್ನು ನೋಡುತ್ತೇವೆ. ದಕ್ಷತೆ ಎಂಬುದು ಗುರುವು ತನ್ನ ಶಿಷ್ಯನ ಕಿವಿಯಲ್ಲಿ ಊದಿದ ಮಂತ್ರವೇನಲ್ಲ. ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ಮಾತ್ರಕ್ಕೆ ವ್ಯಕ್ತಿಯು ಒಳ್ಳೆಯ ಆಡಳಿತಗಾರನಾಗುವುದಿಲ್ಲ. ಯಾರು ಇತರೆ ಗುಣಗಳೊಂದಿಗೆ ಸಹಾನುಭೂತಿಯಿಂದ ಅರ್ಥಮಾಡಿಕೊಳ್ಳುವ ಗುಣವನ್ನು ಹೊಂದಿರುತ್ತಾರೋ ಮತ್ತು ಈ ಗುಣವಿರುವ ಕಾಣದಿಂದಲೇ ಒಂದು ಜನ ಸಮುದಾಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ದುರ್ಬಲ ವರ್ಗಗಳ ಸಮಸ್ಯೆಗಳನ್ನು ದಿಟ್ಟವಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿರುತ್ತಾರೋ ಅಂಥವರು ಮಾತ್ರ ದಕ್ಷ ಆಡಳಿತಗಾರರೆನಿಸುತ್ತಾರೆ. ಹಾಗಿದ್ದ ಮೇಲೆ ಇಂಥ ವರ್ಗಗಳಿಗೇ ಸೇರಿದವರಿಗಿಂತ ಇನ್ನಾರು ಉತ್ತಮವಾಗಿರಲು ಸಾಧ್ಯ? ಸ್ವಾತಂತ್ರ್ಯ ಬಂದು 35 ವರ್ಷಗಳಾದ ನಂತರವೂ ಪ.ಜಾ.ಗಳ ಸ್ಥಿತಿಯಲ್ಲಿ ಬಹಳ ಸುಧಾರಣೆಯೇನೂ ಆಗಿಲ್ಲ ಎಂಬ ಪ್ರಶ್ನೆಯನ್ನು ಯಾಕೆ ನಮಗೆ ನಾವೇ ಕೇಳಿಕೊಳ್ಳಬಾರದು? ಈ ವರ್ಗಗಳಿಂದ ಬಂದವರನ್ನೇ ಹೆಚ್ಚು ಸಂಖ್ಯೆಯಲ್ಲಿ ಜಿಲ್ಲಾ ಆಡಳಿತಗಾರರನ್ನಾಗಿ ಹಾಗೂ ರಾಜ್ಯದ ಮತ್ತು ಕೇಂದ್ರದ ಜಿಲ್ಲಾ ಬ್ಯುರೋಕ್ರಾಟ್‌ಗಳನ್ನಾಗಿ ನೇಮಕ ಮಾಡಿದ್ದರೆ ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು ಎಂಬ ಪ್ರಶ್ನೆ. ನ್ಯಾಯಸಮ್ಮತವಲ್ಲವೇ? ಇಂಥ ಪ್ರಶ್ನೆಗಳಿಗೆ ಉತ್ತರಿಸಲು ನ್ಯಾಯಾಲಯಗಳು ಸಜ್ಜುಗೊಂಡಿಲ್ಲ. ಆದರೆ ಈ ಸಮಸ್ಯೆಗಳಿಗೆ ಉತ್ತರಗಳನ್ನು ಹಾಗೂ ಪರಿಹಾರಗಳನ್ನು ಕಂಡುಕೊಳ್ಳಲು ಸರ್ಕಾರಗಳು ಮಾಡುತ್ತಿರುವ ಪ್ರಾಮಾಣಿಕ ಪ್ರಯತ್ನಗಳಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ಮಾಡದೇ ಇರಬಹುದಲ್ಲವೇ? ಸಿವಿಲ್‌ ಸೇವೆಗಳಲ್ಲಿ ದಕ್ಷತೆ ಅನಗತ್ಯ ಅಥವಾ ಅದೊಂದು ಮಿಥ್ಯೆ ಎಂಬುದು ನಮ್ಮ ಮಾತಿನ ಅರ್ಥವಲ್ಲ. ಆದರೆ, ಇದನ್ನು ಒಂದು ಅತಿ ಸೂಕ್ಷ್ಮವಾದ ಅಂಧ ಶ್ರದ್ಧೆಯನ್ನಾಗಿ ಮಾಡಬಾರದು ಎಂಬುದಷ್ಟೇ ನಮ್ಮ ಮಾತಿನ ಅರ್ಥ. ಕೆಲವೊಂದು ಹುದ್ದೆಗಳಿಗೆ ಅತ್ಯುತ್ತಮರಾದವರನ್ನು ನೇಮಕ ಮಾಡಬೇಕಾಗುತ್ತದೆ. ಕೆಲವೊಂದು ಅಧ್ಯಯನದ ವಿಷಯಗಳಿಗೆ ಅತ್ಯುತ್ತಮರಾದವರಿಗೆ ಮಾತ್ರವೇ ಪ್ರವೇಶ ನೀಡಬೇಕು ಎಂದಿರಬಹುದು. ಹಾಗಿದ್ದಲ್ಲಿ ಅಂತಹ ಹುದ್ದೆಗಳ ನೇಮಕಾತಿಗೆ ಮತ್ತು ಅಂತಹ ಅಧ್ಯಯನ ವಿಷಯಗಳ ಪ್ರವೇಶಕ್ಕೆ ಮೀಸಲಾತಿಗಾಗಿ ನಿಯಮಗಳಲ್ಲಿ ಅವಕಾಶ ಮಾಡಿಕೊಡಬಹುದು. ಆಯ್ಕೆಗೆ ಸರಿಯಾದ ವಿಧಾನಗಳಿಲ್ಲದಿದ್ದರೆ ನಿಯಮಗಳನ್ನು ಮಾಡಬಹುದು. ಕೆಲವೊಂದು ಹುದ್ದೆಗಳಿಗೆ ಅತಿ ಹೆಚ್ಚಿನ ದಕ್ಷತೆ ಅಥವಾ ಕುಶಲತೆ ಅಗತ್ಯವಾಗಬಹುದು ಮತ್ತು ಕೆಲವೊಂದು ಅಧ್ಯಯನ ವಿಷಯಗಳಿಗೆ ಅತಿ ಹೆಚ್ಚಿನ ಪರಿಶ್ರಮ ಮತ್ತು ಬುದ್ಧಿಮತ್ತೆ ಅಗತ್ಯವಾಗಬಹುದು. ಹಾಗಿದ್ದಾಗ ಉನ್ನತವಾದ ಕನಿಷ್ಠ ಅರ್ಹತಾ ಮಾನದಂಡಗಳನ್ನು ಹಾಗೂ ಸೂಕ್ತ ಆಯ್ಕೆ ವಿಧಾನ ನಿಯಮಗಳನ್ನು ನಿಗದಿಪಡಿಸಬಹುದಾಗಿದೆ. ಹುದ್ದೆಗಳ ಹಾಗೂ ಅಧ್ಯಯನದ ವಿಷಯಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿವಿಧ ಹುದ್ದೆಗಳಿಗೆ ಹಾಗೂ ವಿವಿಧ ಅಧ್ಯಯನ ವಿಷಯಗಳ ಪ್ರವೇಶಕ್ಕೆ ಬೇರೆ ಬೇರೆಯ ಕನಿಷ್ಠ ಅರ್ಹತೆಗಳನ್ನು ಹಾಗೂ ಬೇರೆ ಬೇರೆ ರೀತಿಯ ಆಯ್ಕೆಯ ವಿಧಾನಗಳನ್ನು ನಿಗದಿ ಪಡಿಸಬಹುದು. ಒಬ್ಬ ನ್ಯೂರೋ ಸರ್ಜನ್‌ಗಾಗಲೀ, ಕಾರ್ಡಿಯಾಕ್‌ ಸರ್ಜನ್‌ಗಾಗಲೀ ಒಬ್ಬ ಸಾಮಾನ್ಯ ವೈದ್ಯರಿಗೆ ಇರುವಷ್ಟೇ ಮಟ್ಟದ ದಕ್ಷತೆ ಇದ್ದರೆ ಸಾಕು ಎಂದು ಯಾರೂ ಹೇಳಲಾರರು. ಅದೇ ರೀತಿ ಸಂಶೋಧನಾ ಅಧ್ಯಯನಕ್ಕೆ ಪ್ರವೇಶ ಬಯಸುವ ಅಭ್ಯರ್ಥಿಯಲ್ಲಿ ನಿರೀಕ್ಷಿಸಲಾಗುವ ಪರಿಶ್ರಮ ಹಾಗೂ ಬುದ್ಧಿಮತ್ತೆಗಳು ಒಬ್ಬ ಕಲಾ ಪದವಿ ಶಿಕ್ಷಣಕ್ಕೆ ಪ್ರವೇಶ ಬಯಸುವ ಅಭ್ಯರ್ಥಿಗೆ ಇರುವಷ್ಟೇ ಇದ್ದರೆ ಸಾಕು ಎಂದು ಯಾರೂ ಹೇಳಲಾರರು. ಆದ್ದರಿಂದ ದಕ್ಷತೆಯ ವಿಷಯದಲ್ಲಿ ವಿನಾಯಿತಿ ನೀಡಬೇಕು ಎಂಬುದು ನಮ್ಮ ಮಾತಿನ ಅರ್ಥವಲ್ಲ. ಒಟ್ಟಾರೆ ನಾವು ಹೇಳಬಯಸುವುದೇನೆಂದರೆ ದಕ್ಷತೆ ಎಂಬ ಪದದ ಮರೆಯಲ್ಲಿ ಉಚ್ಚವರ್ಗದವರು ಹಿಂದುಳಿದ ವರ್ಗದವರನ್ನು ಪಕ್ಕಕ್ಕೆ ಸರಿಸಿ ತಾವೇ ಎಲ್ಲಾ ನೌಕರಿಗಳಲ್ಲಿ, ಅದರಲ್ಲಿಯೂ ಉನ್ನತ ಹುದ್ದೆಗಳಲ್ಲಿ ಹಾಗೂ ವೃತ್ತಿಪರ ಸಂಸ್ಥೆಗಳಲ್ಲಿ ಏಕಸ್ವಾಮ್ಯ ಸ್ಥಾಪಿಸುವಂತಾಗಬಾರದು ಎಂಬುದು. ನಾವು ಈ ಸಮಸ್ಯೆಯ ಮೂಲಕ್ಕೆ ಇಳಿಯುವ ಮೊದಲು ನಮ್ಮ ತಲೆಯಲ್ಲಿ ತುಂಬಿರುವ ಜೇಡರ ಬಲೆಗಳನ್ನು ಕೊಡವಿಕೊಂಡರೆ ಒಳ್ಳೆಯದು ಎಂಬುದು ನಮ್ಮ ಅನಿಸಿಕೆ. ಸಮಾನತೆಯ ಅನ್ವೇಷಣೆಯು ತಾನಾಗೇ ಕೈಗೆ ಸಿಗುವಂಥದಲ್ಲ. ನಾವು ನಮ್ಮ ವಿಶ್ವಾಸವನ್ನು ಕಳೆದುಕೊಳ್ಳದಿದ್ದರೂ ಸರಿ, ಆದರೆ ಭ್ರಮೆಗಳನ್ನಂತೂ ಕಳಚಿಕೊಳ್ಳಬೇಕು.ʼʼ

ನ್ಯಾಯಮೂರ್ತಿ ಚಿನ್ನಪ್ಪರೆಡ್ಡಿಯವರು ನೀಡಿದ ಈ ಮೇಲಿನ ತೀರ್ಪು ಇಂದಿಗೂ ಪ್ರಸ್ತುತ ಆದ ಕಾರಣ ಪ.ಜಾ. ಮತ್ತು ಪ.ಪಂ. ದವರಿಗೆ ಬಡ್ತಿಯಲ್ಲಿ ಮೀಸಲಾತಿಯೆ ಅಗತ್ಯವಿದೆ. ಇಂತಹದೇ ಸೌಲಭ್ಯವನ್ನು ಹಿಂದುಳಿದ ವರ್ಗಗಳಿಗೂ ವಿಸ್ತರಿಸುವ ಅವಶ್ಯಕತೆ ಇದೆ.

  • ಪುಸ್ತಕ : ಮೀಸಲಾತಿ ಭ್ರಮೆ ಮತ್ತು ವಾಸ್ತಕ
  • ಲೇಖಕರು : ನ್ಯಾಯಮೂರ್ತಿ ಹೆಚ್‌.ಎನ್.ನಾಗಮೋಹನದಾಸ್‌, ನಿವೃತ್ತ ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ
  • ಜನ ಪ್ರಕಾಶನ, ಜಯನಗರ, ಬೆಂಗಳೂರು.
Donate Janashakthi Media

Leave a Reply

Your email address will not be published. Required fields are marked *