ಮೀಸಲಾತಿಗೆ ಸಂಬಂಧಿಸಿದ ಪ್ರಶ್ನೆ – 2 : ಸಂವಿಧಾನ ಜಾರಿಗೆ ಬಂದ 70 ವರ್ಷಗಳ ನಂತರವೂ ಮೀಸಲಾತಿ ಮುಂದುವರಿಸಿರುವುದು ಎಷ್ಟು ಸಮಂಜಸ?

ಕರ್ನಾಟಕ ಉಚ್ಚ ನ್ಯಾಯಾಲಯ ನಿವೃತ್ತ ನ್ಯಾ. ಹೆಚ್‌.ಎನ್‌.ನಾಗಮೋಹನದಾಸ್ಅವರು ಬರೆದಿರುವ ಮೀಸಲಾತಿ ಭ್ರಮೆ ಮತ್ತು ವಾಸ್ತವ ಕೃತಿಯಿಂದ ಆಯ್ದಭಾಗ;

ಸಂವಿಧಾನ ಓದು ಕೃತಿಯನ್ನು ಇಟ್ಟುಕೊಂಡು ರಾಜ್ಯಾದ್ಯಂತ ಅಭಿಯಾನವನ್ನು ನಡೆಸಲಾಯಿತು. ಇಡೀ ರಾಜ್ಯ ಸುತ್ತಿ ನೂರಾರು ಕಾರ್ಯಕ್ರಮಗಳನ್ನು ನಡೆಸಿದೆವು. ಬಹುಪಾಲು ಕಾರ್ಯಕ್ರಮಗಳು ಸಂವಾದದಲ್ಲಿ ಕೊನೆಗೊಂಡವು. ಈ ಸಂವಾದದಲ್ಲಿ ಅನೇಕ ವಿಷಯಗಳ ಬಗ್ಗೆ ಹಲವು ಪ್ರಶ್ನೆಗಳು ಬಂದವು. ಸಂವಾದದಲ್ಲಿ ಬಂದ ಪ್ರಶ್ನೆಗಳಿಂದ ತಿಳಿದ ಸತ್ಯ ಸಂಗತಿಯೆಂದರೆ ಬಹುಪಾಲು ವಿದ್ಯಾರ್ಥಿ-ಯುವಜನರಿಗೆ ಮೀಸಲಾತಿಯ ಬಗ್ಗೆ ಸರಿಯಾದ ತಿಳಿವಳಿಕೆಯ ಕೊರತೆ ಎದ್ದು ಕಾಣಿಸುತ್ತಿತ್ತು. ವಿದ್ಯಾರ್ಥಿ-ಯುವಜನರ ಈ ಮನಸ್ಥಿತಿಗೆ ಕಾರಣ ಕೆಲವು ಶಿಕ್ಷಕರು, ಪೋಷಕರು ಮತ್ತು ಸುದ್ದಿ ಮಾಧ್ಯಮಗಳು. ನಾವು ಕೊಟ್ಟಂತಹ ಮಾಹಿತಿ ಮತ್ತು ಉತ್ತರಗಳು ಬಹುಪಾಲು ವಿದ್ಯಾರ್ಥಿ ಯುವಜನರಿಗೆ ಸತ್ಯ ಸಂಗತಿ ಏನು ಎಂಬ ಮನವಿಕೆ ಮಾಡಿಕೊಡಲು ಸಾಧ್ಯವಾಯಿತು. ಈ ದಿಕ್ಕಿನಲ್ಲಿ ಇನ್ನೂ ಹೆಚ್ಚು ಕೆಲಸವಾಗಬೇಕಾಗಿದೆ.

(ಬಿ) ಸಂವಿಧಾನ ಜಾರಿಗೆ ಬಂದ 70 ವರ್ಷಗಳ ನಂತರವೂ ಮೀಸಲಾತಿ ಮುಂದುವರಿಸಿರುವುದು ಎಷ್ಟು ಸಮಂಜಸ?

ಪ್ರತಿಯೊಂದು ಸಾಮಾಜಿಕ, ಆರ್ಥಿ ಸೂಚ್ಯಂಕಗಳು ಹಿಂದುಳಿದ ಮತ್ತು ಅಸ್ಪೃಶ್ಯರ ಸ್ಥಿತಿಯ ತೀರಾ ಅತೃಪ್ತಿಕರವಾಗಿದೆ ಮತ್ತು ಅನೇಕ ಕ್ಷೇತ್ರಗಳಲ್ಲಿ ಇದು ಶೋಚನೀಯವಾಗಿದೆಯೆಂದು ತೋರಿಸುತ್ತವೆ. ಇವರು ಎರಡು ರೀತಿಯ ಶೋಷಣೆಗೆ ಬಲಿಯಾಗಿದ್ದಾರೆ. ದುಡಿಯುವ ವರ್ಗವಾಗಿ ವರ್ಗ ಶೋಷಣೆಯನ್ನು ಅನುಭವಿಸುತ್ತಿದ್ದಾರೆ. ಅದೇ ಸಮಯದಲ್ಲಿ ಜಾತಿ ವ್ಯವಸ್ಥೆಯ ಕೆಳಸ್ತರದಲ್ಲಿದ್ದು ಜಾತಿ ದಮನವನ್ನು ಅನುಭವಿಸುತ್ತಿದ್ದಾರೆ.

ಇದನ್ನು ಓದಿ: ಮೀಸಲಾತಿಗೆ ಸಂಬಂಧಿಸಿದ ಪ್ರಶ್ನೆ – 1

ಅಸ್ಪೃಶ್ಯರ ಸಬಲೀಕರಣದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವ ಸಾಕ್ಷರತೆ ಮತ್ತು ಶಿಕ್ಷಣದ ಪ್ರಮಾಣವು ಬಹಳ ಕೆಳಮಟ್ಟದಲ್ಲಿದೆ. ಇನ್ನೂ ಶೇ. 30ರಷ್ಟು ಅಸ್ಪೃಶ್ಯರು ಅನಕ್ಷರಸ್ಥರಾಗಿದ್ದಾರೆ. ಪ್ರತಿ 100 ವಿದ್ಯಾರ್ಥಿಗಳ ಪೈಕಿ 8 ವಿದ್ಯಾರ್ಥಿಗಳು 12ನೇ ತರಗತಿಯನ್ನು ಪಾಸು ಮಾಡುತ್ತಿದ್ದಾರೆ. ಕೆಲವು ಶಾಲೆಗಳಲ್ಲಿ ಅಸ್ಪೃಶ್ಯರ ಮಕ್ಕಳನ್ನು ಶಾಲೆಯ ಕಟ್ಟಕಡೆಯ ಬೆಂಚುಗಳಲ್ಲಿ ಕೂರಿಸಲಾಗುತ್ತಿದೆ. ಅನೇಕ ಶಾಲೆಗಳಲ್ಲಿ ಸಹಭೋಜನ ನಿರಾಕರಿಸಲಾಗಿದೆ. ಉನ್ನತ ಶಿಕ್ಷಣದಲ್ಲಿ ಅಸ್ಪೃಶರ ಪ್ರಮಾಣ ಬಹಳ ಕಡಿಮೆ. ಅಸ್ಪೃಶ್ಯ ಮಹಿಳೆಯರ ಸಾಕ್ಷರತೆ ಪುರುಷರಿಗಿಂತ ಹೆಚ್ಚು ಶೋಚನೀಯವಾಗಿದೆ.

2011 ಮಾರ್ಚ್‌ ತಿಂಗಳಲ್ಲಿ ಅಂದಿನ ಕೇಂದ್ರ ಸಚಿವರಾದ ವಿ. ನಾರಾಯಣಸ್ವಾಮಿಯವರು ಸದನದಲ್ಲಿ ತಮ್ಮ ಲಿಖಿತ ಉತ್ತರದ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಮಂಗಡದವರ ಮೀಸಲಾತಿಯ ಸ್ಥಿತಿಯನ್ನು ತಿಳಿಸಿದ್ದಾರೆ. ಅದರ ಮುಖ್ಯಾಂಶಗಳೆಂದರೆ:

  1. ಕೇಂದ್ರ ಸರ್ಕಾರದ ಮೇಲ್‌ಸ್ತರದ 149 ಕಾರ್ಯದರ್ಶಿಗಳ ಪೈಕಿ ಪರಿಶಿಷ್ಟ ಜಾತಿಯವರು ಯಾರೂ ಇಲ್ಲ. ಪರಿಶಿಷ್ಟ ಪಂಗಡಕ್ಕೆ ಸೇರಿದವರು 4 ಮಾತ್ರ.
  2. 108 ಹೆಚ್ಚುವರಿ ಕಾರ್ಯದರ್ಶಿ ಹುದ್ದೆಗಳ ಪೈಕಿ ಪರಿಶಿಷ್ಟ ಜಾತಿಯವರು 1 ಮತ್ತು ಪರಿಶಿಷ್ಟ ಪಂಗಡದವರು 2 ಮಾತ್ರ.
  3. 477 ಜಂಟಿ ಕಾರ್ಯದರ್ಶಿಗಳ ಪೈಕಿ 31 ಪರಿಶಿಷ್ಟ ಜಾತಿಯವರು ಮತ್ತು 15 ಪರಿಶಿಷ್ಟ ಪಂಗಡದವರು.
  4. 590 ನಿರ್ದೇಶಕರ ಪೈಕಿ 17 ಪರಿಶಿಷ್ಟ ಜಾತಿ ಮತ್ತು 7 ಪರಿಶಿಷ್ಟ ಪಂಗಡಕ್ಕೆ ಸೇರಿದವರು.
  5. ಐಎಎಸ್‌, ಐಪಿಎಸ್‌, ಐಎಫ್‌ಎಸ್‌, ಐಆರ್‌ಎಸ್‌ ಇತ್ಯಾದಿಗಳಲ್ಲಿ ಶೇ. 13.5ರಷ್ಟು ಪರಿಶಿಷ್ಟ ಜಾತಿ ಮತ್ತು ಶೇ. 7.3ರಷ್ಟು ಪರಿಶಿಷ್ಟ ಪಂಗಡದವರು.
  6. ಗ್ರೂಪ್‌ ʻಎʼ ಅಧಿಕಾರಿಗಳಲ್ಲಿ ಶೇ. 11.1ರಷ್ಟು ಪರಿಶಿಷ್ಟ ಜಾತಿ ಮತ್ತು ಶೇ. 4.6ರಷ್ಟು ಪರಿಶಿಷ್ಟ ಪಂಗಡದವರು. ಗ್ರೂಪ್‌ ʻಬಿʼ ಅಧಿಕಾರಿಗಳಲ್ಲಿ ಶೇ. 14.3ರಷ್ಟು ಪರಿಶಿಷ್ಟ ಜಾತಿ ಮತ್ತು ಶೇ. 5.5ರಷ್ಟು ಪರಿಶಿಷ್ಟ ಪಂಗಡದವರು. ಗ್ರೂಪ್‌ ʻಸಿʼನಲ್ಲಿ ಶೇ. 16ರಷ್ಟು ಪರಿಶಿಷ್ಟ ಜಾತಿ ಮತ್ತು ಶೇ. 7.8ರಷ್ಟು ಪರಿಶಿಷ್ಟ ಪಂಗಡದವರು. ಗ್ರೂಪ್‌ ʻಡಿʼನಲ್ಲಿ ಶೇ. 19.3ರಷ್ಟು ಪರಿಶಿಷ್ಟ ಜಾತಿ ಮತ್ತು ಶೇ. 7ರಷ್ಟು ಪರಿಶಿಷ್ಟ ಪಂಗಡದವರು. ಗ್ರೂಪ್‌ ʻಡಿʼನಲ್ಲಿ ಈ ವರ್ಗಕ್ಕೆ ಸೇರಿದವರು ಯಾಕೆ ಹೆಚ್ಚಾಗಿದ್ದಾರೆಂದರೆ, ಶೇ. 40ರಷ್ಟು ಉದ್ಯೋಗಿಗಳು ಸಫಾಯಿ ಕರ್ಮಚಾರಿಗಳು.
  7. ಸಮಯಕ್ಕೆ ಸರಿಯಾಗಿ ನೇಮಕಾತಿ ಮಾಡದಿರುವುದರಿಂದ ಮತ್ತು ಮಾಡಿದರೆ ಅರ್ಹ ಅಭ್ಯರ್ಥಿಗಳ ಕೊರತೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಿಟ್ಟಿರುವ ಸಾವಿರಾರು ಉದ್ಯೋಗಗಳು ಬ್ಯಾಕ್‌ಲಾಗ್‌ನಲ್ಲಿ ಇವೆ.

2011ರಲ್ಲಿ ಎಂತಹ ಪರಿಸ್ಥಿತಿ ಇತ್ತೋ ಅದೇ ಪರಿಸ್ಥಿತಿ ಇಂದಿಗೂ ಮುಂದುವರೆದಿದೆ. ಕಳೆದ 72 ವರ್ಷಗಳಲ್ಲಿ ಒಂದಷ್ಟು ಸಾಧನೆಯಾಗಿದೆ. ಮೀಸಲಾತಿಯ ಸವಲತ್ತನ್ನು ಪಡೆದುಕೊಂಡು ಹಿಂದುಳಿದ, ಪರಿಶಿಷ್ಟ ಜಾತಿಯ ಮತ್ತು ಪರಿಶಿಷ್ಟ ಪಂಗಡದ ಕೆಲವರಾದರೂ ತಮ್ಮ ಜೀವನವನ್ನು ಉತ್ತಮಗೊಳಿಸಿಕೊಂಡಿದ್ದಾರೆ. ಆದರೆ ಸಾಧಿಸಬೇಕಾದ್ದು ಬೆಟ್ಟದಷ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಮೀಸಲಾತಿ ಮುಂದುವರೆಯಬೇಕಾಗಿದೆ. ಎಲ್ಲಿಯವರೆಗೆ ಜಾತಿ ಅಸಮಾನತೆ ಇರುತ್ತೋ ಅಲ್ಲಿಯವರೆಗೆ ಮೀಸಲಾತಿ ಮುಂದುವರಿಯಬೇಕು.

 

  • ಪುಸ್ತಕ : ʻಮೀಸಲಾತಿ ಭ್ರಮೆ ಮತ್ತು ವಾಸ್ತಕʼ
  • ಲೇಖಕರು : ನ್ಯಾಯಮೂರ್ತಿ ಹೆಚ್‌.ಎನ್.ನಾಗಮೋಹನದಾಸ್‌, ನಿವೃತ್ತ ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ
  • ಜನ ಪ್ರಕಾಶನ, ಜಯನಗರ, ಬೆಂಗಳೂರು.
Donate Janashakthi Media

Leave a Reply

Your email address will not be published. Required fields are marked *