ಮೀಸಲಾತಿಗೆ ಸಂಬಂಧಿಸಿದ ಪ್ರಶ್ನೆ-1 : ನ್ಯಾ.ಹೆಚ್‌.ಎನ್‌.ನಾಗಮೋಹನದಾಸ್‌ ಅವರ “ಮೀಸಲಾತಿ – ಭ್ರಮೆ ಮತ್ತು ವಾಸ್ತವ” ಆಯ್ದ ಭಾಗ

ಕರ್ನಾಟಕ ಉಚ್ಚ ನ್ಯಾಯಾಲಯ ನಿವೃತ್ತ ನ್ಯಾ. ಹೆಚ್‌.ಎನ್‌.ನಾಗಮೋಹನದಾಸ್‌ ಅವರು ಬರೆದಿರುವ ಮೀಸಲಾತಿ ಭ್ರಮೆ ಮತ್ತು ವಾಸ್ತವ ಕೃತಿಯಿಂದ ಆಯ್ದಭಾಗ;

ಸಂವಿಧಾನದ ಓದು ಕೃತಿಯನ್ನು ಇಟ್ಟುಕೊಂಡು ರಾಜ್ಯಾದ್ಯಂತ ಅಭಿಯಾನವನ್ನು ನಡೆಸಲಾಯಿತು. ಇಡೀ ರಾಜ್ಯ ಸುತ್ತಿ ನೂರಾರು ಕಾರ್ಯಕ್ರಮಗಳನ್ನು ನಡೆಸಿದೆವು. ಬಹುಪಾಲು ಕಾರ್ಯಕ್ರಮಗಳು ಸಂವಾದದಲ್ಲಿ ಕೊನೆಗೊಂಡವು. ಈ ಸಂವಾದದಲ್ಲಿ ಅನೇಕ ವಿಷಯಗಳ ಬಗ್ಗೆ ಹಲವು ಪ್ರಶ್ನೆಗಳು ಬಂದವು. ಸಂವಾದದಲ್ಲಿ ಬಂದ ಪ್ರಶ್ನೆಗಳಿಂದ ತಿಳಿದ ಸತ್ಯ ಸಂಗತಿಯೆಂದರೆ ಬಹುಪಾಲು ವಿದ್ಯಾರ್ಥಿ-ಯುವಜನರಿಗೆ ಮೀಸಲಾತಿಯ ಬಗ್ಗೆ ಸರಿಯಾದ ತಿಳಿವಳಿಕೆಯ ಕೊರತೆ ಎದ್ದು ಕಾಣಿಸುತ್ತಿತ್ತು. ವಿದ್ಯಾರ್ಥಿ-ಯುವಜನರ ಈ ಮನಸ್ಥಿತಿಗೆ ಕಾರಣ ಕೆಲವು ಶಿಕ್ಷಕರು, ಪೋಷಕರು ಮತ್ತು ಸುದ್ದಿ ಮಾಧ್ಯಮಗಳು. ನಾವು ಕೊಟ್ಟಂತಹ ಮಾಹಿತಿ ಮತ್ತು ಉತ್ತರಗಳು ಬಹುಪಾಲು ವಿದ್ಯಾರ್ಥಿ ಯುವಜನರಿಗೆ ಸತ್ಯ ಸಂಗತಿ ಏನು ಎಂಬ ಮನವಿಕೆ ಮಾಡಿಕೊಡಲು ಸಾಧ್ಯವಾಯಿತು. ಈ ದಿಕ್ಕಿನಲ್ಲಿ ಇನ್ನೂ ಹೆಚ್ಚು ಕೆಲಸವಾಗಬೇಕಾಗಿದೆ.

(ಎ) ಎಲ್ಲರೂ ಸಮಾನರು ಎಂದು ನಮ್ಮ ಸಂವಿಧಾನವು ಸಾರುತ್ತದೆ. ಆದರೆ ಜಾತಿ ಆಧಾರಿತ ಮೀಸಲಾತಿ ಸಮಾನತೆಯ ವಿರೋಧಿಯಲ್ಲವೇ?

ಶ್ರಮ ವಿಭಜನೆಯಿಂದ ಪ್ರಾರಂಭದ ಮೊದಲ ಮೂರು ವರ್ಣಗಳು ಆಳುವವರಾಗಿ, ನಾಲ್ಕನೆಯವರು ಆಳಿಸಿಕೊಳ್ಳುವವರಾಗಿ ರೂಪುಗೊಂಡವು. ಈ ಚಾತುರ್ವರ್ಣದ ಹೊರಗೆ ಮತ್ತೊಂದು ಸಾಮಾಜಿ ವರ್ಗವನ್ನು ನಿರ್ಮಿಸಲಾಯಿತು. ಇವುಗಳೆಂದರೆ ಬುಡಕಟ್ಟು, ಆದಿವಾಸಿ ಬುಡಕಟ್ಟು ಹಾಗೂ ಅಸ್ಪೃಶ್ಯರು. ಇವರಿಗೆ ಕೊಳಕು ಕೆಲಸಗಳನ್ನು ಹಚ್ಚಿ ಅವುಗಳನ್ನು ಮಾಡುವ ವ್ಯಕ್ತಿಗೆ ಮೈಲಿಗೆಯನ್ನಂಟಿಸಿ, ಅವರನ್ನು ಮುಟ್ಟುವುದರಿಂದಲೇ ಮೈಲಿಗೆಯಾಗುತ್ತದೆ ಎನ್ನುವ ಪದ್ಧತಿಯನ್ನು ಹುಟ್ಟು ಹಾಕಲಾಯಿತು.

ಈ ಜಾತಿ ಪದ್ಧತಿಯಿಂದ ಲಾಭವನ್ನು ಕಂಡ ಜನರು, ಜಾತಿಗಳ ಮಧ್ಯೆ ಕೋಟೆಗಳನ್ನು ನಿರ್ಮಾಣ ಮಾಡುವ ಕೆಲಸದಲ್ಲಿ ಯಶಸ್ವಿಯಾದರು. ಜಾತಿ ಪದ್ಧತಿಯನ್ನು ಕಡ್ಡಾಯಗೊಳಿಸಲಾಯಿತು. ವಂಶ ಪಾರಂಪರ್ಯ ಮಾಡಲಾಯಿತು. ಶೋಷಣಾ ವ್ಯವಸ್ಥೆಯಾದ ಜಾತಿಪದ್ಧತಿಯನ್ನು ಧರ್ಮದೊಂದಿಗೆ ಬೆಸುಗೆಗೊಳಿಸಿ ಭಾರತದಲ್ಲಿ ಶಾಶ್ವತಗೊಳಿಸಲಾಯಿತು.

ಈ ರೀತಿಯ ಚಾರಿತ್ರಿಕ ಅಸಮಾನತೆಯನ್ನು ನಿವಾರಿಸಿ ಸಮಾನತೆಯನ್ನು ತರುವ ಪ್ರಯತ್ನವನ್ನು ನಮ್ಮ ಸಂವಿಧಾನದಲ್ಲಿ ಮಾಡಲಾಗಿದೆ. ಭಾರತ ಸಂವಿಧಾನದ ಮೂಲತತ್ವಗಳಲ್ಲಿ ಒಂದು ಸಾಮಾಜಿಕ ನ್ಯಾಯ, ಸಮಾಜದ ದುರ್ಬಲ ವರ್ಗಕ್ಕೆ ಆಗಿರುವ ಅನ್ಯಾಯವನ್ನು ಹೋಗಲಾಡಿಸಿ ಅವರು ಸಮಾನವಾಗಿ ಬಾಳುವ ಅವಕಾಶ ಮಾಡಿಕೊಡುವುದೇ ಸಾಮಾಜಿಕ ನ್ಯಾಯ, ಎಲ್ಲಾ ರೀತಿಯ ಅಸಮಾನತೆಯನ್ನು ನಿವಾರಿಸಿ ಸಮಸಮಾಜದ ನಿರ್ಮಾಣವೇ ಸಾಮಾಜಿಕ ನ್ಯಾಯದ ಅಂತಿಮ ಗುರಿ.

ನೂರಾರು ವರ್ಷಗಳಿಗೂ ಹೆಚ್ಚಿನ ಕಾಲ ಭಾರತ ದೇಶದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಕ್ಕೆ ಸೇರಿದ ಜನರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದರು. ಈ ರೀತಿಯ ಅಸಮಾನತೆಯನ್ನು ಹೋಗಲಾಡಿಸಲು ಮೀಸಲಾತಿಯನ್ನು ಜಾರಿಗೆ ತರಲಾಯಿತು. ಮೀಸಲಾತಿ ಸಾಮಾಜಿಕ ನ್ಯಾಯದ ಒಂದು ಭಾಗವಷ್ಟೆ. ಮೀಸಲಾತಿ ಬಡತನವನ್ನು ನಿರ್ಮೂಲನೆ ಮಾಡುವ ಸರ್ಕಾರದ ಕಾರ್ಯಕ್ರಮವೂ ಅಲ್ಲ ಅಥವಾ ಅದೊಂದು ದಾನವೂ ಅಲ್ಲ. ಬದಲಾಗಿ ಮೀಸಲಾತಿ ಒಂದು ಮಾನವ ಹಕ್ಕು. ಸಮಾನತೆಯ ಸಾಧನೆ, ಸರ್ಕಾರದ ಆಡಳಿತದಲ್ಲಿ ಒಂದು ಪ್ರಾತಿನಿಧ್ಯ ಮತ್ತು ಎಲ್ಲಾ ರೀತಿಯ ಪಕ್ಷಪಾತ ಮತ್ತು ಬಹಿಷ್ಕರಣೆಯ ವಿರುದ್ಧ ಒಂದು ಸಾಧನ.

“Differential treatment among equals amounts to discrimination.
But differential treatment among unequal’s will not amount to discrimination’’

ʻʻಸಮಾನರ ನಡುವೆ ಬೇಧ ಎಣಿಸುವುದು ಪಕ್ಷಪಾತ.
ಆದರೆ ಅಸಮಾನರ ನಡುವೆ ಬೇಧ ಎಣಿಸುವುದು ಪಕ್ಷಪಾತವಲ್ಲ.ʼʼ

  • ಪುಸ್ತಕ : ಮೀಸಲಾತಿ ಭ್ರಮೆ ಮತ್ತು ವಾಸ್ತಕ
  • ಲೇಖಕರು : ನ್ಯಾಯಮೂರ್ತಿ ಹೆಚ್‌.ಎನ್.ನಾಗಮೋಹನದಾಸ್‌, ನಿವೃತ್ತ ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ
  • ಜನ ಪ್ರಕಾಶನ, ಜಯನಗರ, ಬೆಂಗಳೂರು.
Donate Janashakthi Media

Leave a Reply

Your email address will not be published. Required fields are marked *