ಮೀಸಲಾತಿ ಸೌಲಭ್ಯ ವಂಚಿತ ಸಮುದಾಯಗಳಲ್ಲಿ ಆದಿವಾಸಿಗಳೇ ಹೆಚ್ಚು

ಬೆಂಗಳೂರು : ಮೀಸಲಾತಿ ಕಾರಣಕ್ಕೆ ಹಲವಾರು ಸಮುದಾಯಗಳು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಭಲರಾಗಲು ಸಾಧ್ಯವಾಗಿದೆ. ಮೀಸಲಾತಿಯ ಮೂಲಕ ದೇಶದಲ್ಲಿ 10 ವರ್ಷ ಅವಧಿ ಒಳಗಡೆ ಸಾಮಾಜಿಕ ಹಿಂದುಳುವಿಕೆ ಹೊಗಲಾಡಿಸಬೇಕು ಎಂದುಕೊಂಡರು ಸಾಧ್ಯವಾಗಿಲ್ಲ. ಮೀಸಲಾತಿಯನ್ನು ಕೆಲವೊಮ್ಮೆ ವಿವಿಧ ರಾಜಕೀಯ ಪಕ್ಷಗಳು ತಮ್ಮ ಅಧಿಕಾರವನ್ನು ಬಲಪಡಿಸಿಕೊಳ್ಳಲು ಸಾಧನವಾಗಿ ಮಾರ್ಪಡಿಸಿ ದುರ್ಬಳಕೆ ಮಾಡಿಕೊಂಡಿವೆ ಎಂಬ‌ ಅಂಶ ಬಹಿರಂಗವಾಗಿದೆ.

ಇಂದಿಗೂ ಸಹ ಮೀಸಲಾತಿಯ ಒಂದು ಅಂಶದ ಪ್ರಯೋಜನ ಪಡೆಯಲಾರದ ಸ್ಥಿತಿ ಇಂದಿಗೂ ಇದೆ ಎನ್ನುವುದು ವಾಸ್ತವ ಎಂದು ಹೇಳಿರುವ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಹ ಸಂಚಾಲಕ ಶ್ರೀಧರ್ ನಾಡ ಭಾರತದ ಸಾಮಾಜಿಕ ಮತ್ತು ಆರ್ಥಿಕ ಸಂದರ್ಭದಲ್ಲಿ ಮೂಲ ಸಂಭ್ರಚನೆಯಲ್ಲಿ ಬದಲಾವಣೆ ಆಗದೆ ಹೊಗಿರುವುದರಿಂದ ಇವತ್ತಿಗೂ ಕೂಡ ಅರಣ್ಯದ ಮೂಲದಲ್ಲಿ ಇರುವ ಆದಿವಾಸಿಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವಕಾಶ ವಂಚಿತರಾಗಿ,  ಭೂಹೀನರಾಗಿ, ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಎಂದಿದ್ದಾರೆ.

ಇದನ್ನು ಓದಿ: ಪರಿಶಿಷ್ಟ ಜಾತಿಗಳು, ಆದಿವಾಸಿ ಸಮುದಾಯಗಳನ್ನು ಈ ಸಮಾಜ ಒಳಗೊಂಡಿದೆಯೇ ಎನ್ನುವ ಚರ್ಚೆ ಬಹುಮುಖ್ಯ: ನ್ಯಾ. ಕೆ ಚಂದ್ರು

ಇಂತಹ ಸಂದರ್ಭದಲ್ಲಿ ಆದಿವಾಸಿಗಳ ಬದುಕು ಊಳಿಯುದೇ ಕಷ್ಟ ಎನ್ನುವ ಸ್ಥಿತಿಗೆ ತಲುಪಿದ್ದಾರೆ. ಸಂಘಟನೆಯ ಮೂಲಕ ನಾವು ಆದಿವಾಸಿಗಳ ಕುರಿತು ಹಲವಾರು ಪ್ರಶ್ನೆಗಳನ್ನು ಪರಿಶೀಲನೆ ಮಾಡಬೇಕು. ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಮಾಡಬೇಕು ಎನ್ನುವ ಬೇಡಿಕೆ ಅತ್ಯಂತ ಸಮಂಜಸವಾದದು ಎಂದಿದ್ದಾರೆ.

ಮೀಸಲಾತಿ ಹೆಚ್ಚಳದ ಬೇಡಿಕೆ ಇದ್ದು, ಈಗಾಗಲೇ ರಾಜಕಾರಣಿಗಳು ಭರವಸೆ ನೀಡಿದ್ದರೂ ಜಾರಿಗೆ ಬರಲಿಲ್ಲ. ವಾಲ್ಮೀಕಿ ಪೀಠದ ಗುರುಗಳು ಬೆಂಗಳೂರಿನಲ್ಲಿ ಮೀಸಲಾತಿ ಹೆಚ್ಚಳ ಮಾಡಲು ಒತ್ತಾಯಿಸಿ ಧರಣಿ ಸತ್ಯಾಗ್ರಹ ನಡೆಸಬೇಕಾದ ಸ್ಥಿತಿಗೆ ಸರಕಾರ ತಂದಿದೆ. ಚುನಾವಣೆ ಮೊದಲು ಅಧಿಕಾರಕ್ಕೆ ಬಂದು 24 ಗಂಟೆಯಲ್ಲಿ ಮೀಸಲಾತಿ ಹೆಚ್ಚಳ ಮಾಡಲಾಗುವುದು ಎಂದು ನೀಡಿದ ಭರವಸೆಯನ್ನು ಸರಕಾರ ಮರೆತಿದ್ದೆ. ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಮಾಡಬೇಕು ಎನ್ನುವ ಹೋರಾಟಕ್ಕೆ ರಾಜ್ಯದ ಎಲ್ಲಾ ಆದಿವಾಸಿಗಳು ಒಂದಾಗಿ ಬೆಂಬಲಿಸುವ ಅಗತ್ಯವಿದೆ ಎಂದರು.

ಪ್ರಮುಖವಾಗಿ ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಪ್ರಮಾಣವನ್ನು 7.5 ಹೆಚ್ಚಳ ಮಾಡಲು ಬೇಡಿಕೆ ಇಡುವ ಸಂದರ್ಭದಲ್ಲಿಯೇ ಪಿವಿಟಿಜಿ ಮತ್ತು ಅರಣ್ಯ ಆಧಾರಿತ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಬುಡಕಟ್ಟು ಸಮುದಾಯಗಳಿಗೆ ಒಳ ಮೀಸಲಾತಿ ನೀಡಬೇಕು ಎನ್ನುವ ದ್ವನಿ ಎತ್ತಬೇಕಾಗಿದೆ. ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳ ಬೇಡಿಕೆಗಳನ್ನು ಒಳಗೊಂಡು ಹೋರಾಟ ರೂಪಿಸುವ ಅವಶ್ಯಕತೆ ಇದೆ ಎಂದು ಕರೆ ನೀಡಿದರು.

ಇದನ್ನು ಓದಿ: ಭೂರಹಿತ ಕೊರಗ ಸಮುದಾಯಕ್ಕೆ ಭೂಮಿ ನೀಡಬೇಕೆಂದು ಧರಣಿ ಸತ್ಯಾಗ್ರಹ

ಆದಿವಾಸಿಗಳ ಚಳುವಳಿ ಅಂದರೆ ಬಲ ಉಳ್ಳವರ ಹಿತಾಸಕ್ತಿಗಾಗಿ ನಡೆಸುವ ಹೋರಾಟವಾಗದೆ. ಶಕ್ತ ಸಮುದಾಯಗಳು ತಮ್ಮ ಜೊತೆಯಲ್ಲಿ ಬಲಹೀನರನ್ನು ಕೈ ಎತ್ತಿ ಕೊಂಡೊಯ್ಯುವ ಜವಾಬ್ದಾರಿ ಮರೆಯಬಾರದು. ಮೊದಲು ಮೀಸಲಾತಿ ಹೆಚ್ಚಳ ನಂತರ ಉಳಿದ ಬೇಡಿಕೆಗಳು ಎಂದು ಈ ವಿಷಯಗಳನ್ನು ಹಿನ್ನೆಲೆಗೆ ಸರಿಸುವುದು ಕೂಡ ತಪ್ಪು. ಎಲ್ಲವೂ ಜೊತೆಗೆ ಸಾಗಿದ್ದಲ್ಲಿ ಮಾತ್ರ ಪರಿಪೂರ್ಣ ಎಂದಿದ್ದಾರೆ.

ಕರ್ನಾಟಕದಲ್ಲಿ 50 ಪರಿಶಿಷ್ಟ ಪಂಗಡಗಳಲ್ಲಿ ಕೆಲವು ಆದಿವಾಸಿ ಸಮುದಾಯಗಳು ತಮ್ಮ ಜನಸಂಖ್ಯೆ ಕಾರಣಕ್ಕೆ ರಾಜ್ಯದ ರಾಜಕೀಯವನ್ನು ನಿರ್ಣಯ ಮಾಡುವ ಶಕ್ತಿಯನ್ನು ಹೊಂದಿವೆ. ಅದೇ ಸಂದರ್ಭದಲ್ಲಿ ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಕಡಿಮೆ ಆಗುತ್ತಿರುವ ಕೊರಗರಂತಹ ಅಳಿವಿನಂಚಿಗೆ ತಲುಪಿರುವ ಸಮುದಾಯಳಿವೆ. ಸೋಲಿಗ ಸಮುದಾಯಕ್ಕೆ ವಂಶವಾಹಿನಿಯಾಗಿ ಬಂದಿರುವ ಸಿಕಿಲ್ ಎನಿಮಿಯಾ ರೋಗವು ಇಂದು ಜೆನುಕುರುಬ, ಬೆಟ್ಟಕುರುಬ, ಎರವರಲ್ಲಿ ಕಾಣಸಿಗುತ್ತಿದ್ದೆ. ಇಡೀ ಆದಿವಾಸಿ ಸಮುದಾಯವೇ ವಿನಾಶದಂಚಿಗೆ ಸಾಗುತ್ತಿದೆ. ಅವರ ಬದುಕಿನ ಬಗ್ಗೆ ಮಾತನಾಡುವವರು ಯಾರು?

ಕೇಂದ್ರ ಸರ್ಕಾರದ ಮುಂದೆ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಬೇಕಾದ ಕುಣಬಿ, ಹಾಲಕ್ಕಿ, ಕಚ್ಚೆಗೌಳಿಗರು, ಇರುಳಾರ್, ಕರೆಒಕ್ಕಲಿಗ ಇತರೆ ಸಮುದಾಯಗಳಿವೆ. ಈ ಸಮುದಾಯಗಳು ರಾಜಕೀಯ ತಲ್ಲಣ ನಡೆಸಲು ಅಶಕ್ತವಾದ ಸಮುದಾಯಗಳು. ದಕ್ಷಿಣ ಕರಾವಳಿ ಜಿಲ್ಲೆಗಳ ಕೊರಗ ಸಮುದಾಯ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಇದ್ದರೆ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯಲ್ಲಿ ಗುರುತಿಸಲಾಗಿದೆ. ಅರಣ್ಯ ಬುಡಕಟ್ಟು ಸಮುದಾಯವಾದ ಹಸಲರು ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಇದ್ದಾರೆ. ಇನ್ನೂ ಹಲವಾರು ಸಮುದಾಯಗಳು ಇಂತಹ ಸಮಸ್ಯೆಯನ್ನು ಎದುರಿಸುತ್ತಿವೆ. ಈ ಸಮುದಾಯಗಳ ಸಮಸ್ಯೆಯನ್ನು ಮುಂದಿಟ್ಟು ಹೋರಾಟ ಮಾಡುವವರು ಯಾರು?

1958 ರಿಂದ ಇಲ್ಲಿಯವರೆಗೆ ಸುಮಾರು 64 ವರ್ಷ ಕಳೆದರು ಪರಿಶಿಷ್ಟ ಪಂಗಡದವರಿಗೆ ನೀಡಬೇಕಾದ ಮೀಸಲಾತಿ ಪರಿಷ್ಕರಿಸಿ ಹೆಚ್ಚಳ ಮಾಡಿಲ್ಲ. ಇತ್ತೀಚೆಗೆ ಹೆಚ್ ಎನ್ ನಾಗಮೋಹನ್ ದಾಸ್ ಆಯೋಗ ಸರಕಾರಕೆ ವರದಿ ನೀಡಿದೆ. ಇದೊಂದು ಆಶಾದಾಯಕ ಬೆಳವಣಿಗೆ. ಆದರೆ ಇದುವರೆಗೆ ಸರಕಾರ ಸಾರ್ವಜನಿಕವಾಗಿ ಈ ವರದಿಯಲ್ಲಿ ಏನಿದೆ ಎಂದು ಚರ್ಚೆಗೆ ಅನುಕೂಲವಾಗುವ ರೀತಿಯಲ್ಲಿ ಬಹಿರಂಗ ಪಡಿಸಿಲ್ಲ. ಹೆಚ್. ಎನ್. ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಜಾರಿಗೆ ತನ್ನಿ ಎನ್ನುದಕ್ಕಿಂತ, ಮೊದಲು ಸಾರ್ವಜನಿಕವಾಗಿ ಚರ್ಚೆ ನಡೆಸಲು ಸರಕಾರ ವರದಿಯನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *