ಎಸ್.ವೈ. ಗುರುಶಾಂತ್
ಪರಿಶಿಷ್ಟ ಜಾತಿ (ಎಸ್.ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್.ಟಿ) ಸಮುದಾಯಗಳಿಗೆ ಶಿಕ್ಷಣ ಹಾಗೂ ಉದ್ಯೋಗದ ಅವಕಾಶಗಳಲ್ಲಿನ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು ಎನ್ನುವ ಪ್ರಮುಖ ಬೇಡಿಕೆಯನ್ನು ಮುಖ್ಯವಾಗಿ ಈ ಕುರಿತ ನ್ಯಾ.ಹೆಚ್.ಎಸ್.ನಾಗಮೋಹನದಾಸ್ ಆಯೋಗದ ವರದಿಯನ್ನು ಪೂರ್ಣವಾಗಿ ಅಂಗೀಕರಿಸಲು ಶನಿವಾರದಂದಿನ ಕರ್ನಾಟಕ ಸರಕಾರದ ಸಚಿವ ಸಂಪುಟ ತೀರ್ಮಾನಿಸಿರುವುದು ಸ್ವಾಗತಾರ್ಹವಾಗಿದೆ.
ಈ ಸಮುದಾಯಗಳ ಜನಸಂಖ್ಯೆಯ ಪ್ರಮಾಣಕ್ಕನುಗುಣವಾಗಿ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಬೇಕೆಂಬ ನಿರ್ದೇಶನವನ್ನು ಕೇಂದ್ರ ಸರಕಾರದ ಹಂತದಲ್ಲಿ ಅಳವಡಿಸಿಕೊಂಡಿದ್ದರೂ ರಾಜ್ಯ ಸರಕಾರ ಕೈಗೊಂಡಿರಲಿಲ್ಲ. ಹೀಗಾಗಿ ಆದಿವಾಸಿ-ದಲಿತ ಸಂಘಟನೆಗಳು, ಈ ಸಮುದಾಯಗಳ ಧಾರ್ಮಿಕ ಪ್ರಮುಖರು ಮೀಸಲಾತಿಯ ಹೆಚ್ಚಳಕ್ಕೆ ನಿರಂತರವಾಗಿ ಆಗ್ರಹಿಸುತ್ತಲೇ ಬಂದಿದ್ದರು. ಈ ಬೇಡಿಕೆಯ ಬಗ್ಗೆ ವಚನ ನೀಡಿದ್ದ ಬಿಜೆಪಿ ಮರೆತು ಅಥವಾ ಅದನ್ನು ಗೋಜಲುಗೊಳಿಸುವ ವಿಳಂಬ ಅನುಸರಿಸುತ್ತಿದ್ದಾಗ ವಿಶೇಷವಾಗಿ ವಾಲ್ಮೀಕಿ ಪೀಠದ ಶ್ರೀಗಳ ನೇತೃತ್ವದಲ್ಲಿ ಸುಮಾರು 240 ದಿನಗಳಿಂದಲೂ ಬೆಂಗಳೂರಿನ ಸ್ವಾತಂತ್ರ‍್ಯ ಉದ್ಯಾನವನದಲ್ಲಿ ನಿರಂತರ ಧರಣಿ ಸತ್ಯಾಗ್ರಹವನ್ನು ನಡೆಸಿದ್ದರು. ಸಮುದಾಯಗಳ ಆಗ್ರಹವನ್ನು, ಸ್ವಾಮೀಜಿಗಳ ಮನವಿಯನ್ನೂ ಲಕ್ಷಿಸಿ ಸರಕಾರ ಅಂದೇ ನಿರ್ಧಾರ ಕೈಗೊಳ್ಳಬಹುದಿತ್ತು. ತೀರಾ ವಿಳಂಬದ ಬಳಿಕವಾದರೂ ನಿರ್ಧಾರ ಕೈಗೊಂಡಿತಲ್ಲಾ ಎಂದು ನಿಟ್ಟುಸಿರು ಬಿಡುವಾಗಲೂ ಅರಯಬೇಕಾದ ಹಲವು ಅಂಶಗಳನ್ನು ಮರೆಯುವಂತಿಲ್ಲ.
ಇದು ವಿವಿಧ ಸಮುದಾಯಗಳು, ಎಡ ಪಕ್ಷಗಳನ್ನು ಒಳಗೊಂಡು ವಿವಿಧ ವಿರೋಧ ಪಕ್ಷಗಳು ಹಾಕಿದ ಒತ್ತಡ, ಸಹಮತವೂ ಕಾರಣವೂ ಇದೆ. ಅದರಲ್ಲೂ ತೀವ್ರ ಒತ್ತಡಗಳು, ಬೆದರಿಕೆಗಳು, ಹುಸಿ ಭರವಸೆಗಳು ಬಂದರೂ, ಬೇಡಿಕೆ ಈಡೇರುವವರೆಗೂ ಕದಲುವುದಿಲ್ಲ ಎಂದು ಸತ್ಯಾಗ್ರಹದಲ್ಲಿ ಕುಳಿತ ವಾಲ್ಮೀಕಿ ಪೀಠದ ಸ್ವಾಮೀಜಿಗಳು, ಬೆನ್ನುಲುಬಾಗಿ ಬೆಂಬಲಿಸಿದ ಎಲ್ಲರೂ ಅಭಿನಂದನಾರ್ಹರು. ಸರಕಾರವನ್ನು ಮಣಿಸಿ ಪಡೆದ ಜಯ.
ಎಸ್.ಸಿ. ಮತ್ತು ಎಸ್.ಟಿ. ಸಮುದಾಯಗಳಿಗೆ ಶೇ.15 ಮತ್ತು ಶೇ.3 ನಿಗದಿ ಮಾಡಿ ನಾಲ್ಕು ದಶಕಗಳೇ ಕಳೆದಿವೆ. ಕಾಲಾನುಕ್ರಮದಲ್ಲಿ ಈ ಪಟ್ಟಿಯಲ್ಲಿ ಹೊಸದಾಗಿ ಹಲವು ಸಮುದಾಯಗಳೂ ಸೇರಿವೆ. 2011 ರ ಜನಗಣತಿಯನ್ನು ಆಧರಿಸಿದರೂ ಎಸ್.ಸಿ ಜನಸಂಖ್ಯೆ ಶೇ. 17 ಮತ್ತು ಎಸ್.ಟಿ. ಪ್ರಮಾಣ ಶೇ. 6.9 ಅಥವಾ 7 ಕ್ಕೆ ಬೆಳೆದಿದೆ. ಇನ್ನು ಹಲವು ಸಮುದಾಯಗಳು ಈ ಪಟ್ಟಿಗೆ ಸೇರಲು ಕಾದು ಕುಳಿತಿವೆ. ಈ ಸಮುದಾಯಗಳ ಸಂವಿಧಾನದತ್ತ ಹಕ್ಕುಗಳೂ, ಸಾಮಾಜಿಕ ನ್ಯಾಯ ದೊರಕಿಸುವ ಬದ್ಧತೆ ಕಾಯ್ದುಕೊಳ್ಳುವುದು ನಾಗರೀಕ ಸರಕಾರದ ಜವಾಬ್ದಾರಿ.
ನ್ಯಾ.ದಾಸ್ ಅವರ ಆಯೋಗದ ವರದಿಯನ್ನು ಪೂರ್ಣವಾಗಿ ಜಾರಿಗೊಳಿಸುವುದಾಗಿ ಸರಕಾರ ಹೇಳಿದೆ. ಮೊದಲನೆಯದಾಗಿ, ಈ ವರದಿಯನ್ನು ಸಾರ್ವಜನಿಕರಿಗೆ ಪೂರ್ಣವಾಗಿ ಲಭ್ಯವಾಗುವಂತೆ ಮಾಡಬೇಕು. ಮೀಸಲಾತಿಯ ಪ್ರಮಾಣ ಹೆಚ್ಚಳದ ವಿಷಯ ಸೂಚಿ ಪ್ರಧಾನವಾದ ಪರಿಶೀಲನಾ ಕಾರ್ಯಭಾರವನ್ನು ಕುಮಾರಸ್ವಾಮಿ ನೇತೃತ್ವದ ಸಮಿಶ್ರ ಸರಕಾರ ವಹಿಸಿತ್ತು. ಇದನ್ನು ಪರಿಶೀಲಿಸುವ ಜೊತೆಗೆ ಸಮುದಾಯಗಳ ಪ್ರಗತಿಗೆ, ಮೀಸಲಾತಿ ಪರಿಣಾಮಕಾರಿಯಾಗಲು ಅವಶ್ಯಕವಾದ ಹಲವು ಅಂಶಗಳನ್ನು ಆಯೋಗ ಪರಿಶೀಲಿಸಿರುವದು ಅತ್ಯಂತ ಅಭಿನಂದನಾರ್ಹ. ಆಯೋಗದ ಕಾಳಜಿಯನ್ನು ಶ್ಲಾಘಿಸಲೇಬೇಕು.
ಮೀಸಲಾತಿ ಪ್ರಮಾಣದ ಹೆಚ್ಚಳದ ಜೊತೆಗೆ ಅದರ ಅನುಷ್ಠಾನದ ವಿಧಾನ ಹಾಗೂ ಅದರ ಕ್ಷೇತ್ರಗಳ ಪುನರ್ ಗುರುತಿಸುವಿಕೆಯೂ ಮುಖ್ಯ. ಶೈಕ್ಷಣಿಕ ಮತ್ತು ಔದ್ಯೋಗಿಕ ರಂಗಗಳು ವ್ಯಾಪಕವಾದ ಖಾಸಗೀಕರಣಕ್ಕೆ ಈಡಾಗಿರುವಾಗ, ಸರಕಾರದ, ಸಾರ್ವಜನಿಕ ವಲಯದ ಉದ್ಯೋಗಾವಕಾಶಗಳು ಶೇ.2 ರಷ್ಟಕ್ಕೆ ಕುಗ್ಗಿರುವಾಗ ಮೀಸಲಾತಿ ನೀಡಿಕೆಯನ್ನು ಖಾಸಗಿ ವಲಯಕ್ಕೂ ಅನ್ವಯಿಸುವುದು ಅತ್ಯಗತ್ಯ. ಇಲ್ಲವಾದಲ್ಲಿ ಸಾಮಾಜಿಕ ನ್ಯಾಯ ನೀಡಿಕೆ ಎನ್ನುವುದು ಅರ್ಥಹೀನವಾಗಿ ಕೇವಲ ಮತ ರಾಜಕಾರಣದ ವಸ್ತುವಾಗಿ ಉಳಿಯುತ್ತದೆ. ಆಯೋಗ ಇದನ್ನು ಗುರುತಿಸಿದೆ. ಹಾಗೇ ಸ್ಪರ್ದಾವಕಾಶದಲ್ಲೂ ಅಸಮಾನತೆ ಇರುವುದರಿಂದಯಾವ ಸಮುದಾಯಗಳೂ ವಂಚಿತವಾಗದಂತೆ ಅವರ ಪಾಲು ಸಮನಾಗಿ ಸಿಗುವಂತಾಗಲು ಒಳ ಮೀಸಲಾತಿಯ ಅಗತ್ಯವನ್ನೂ ಪ್ರತಿಪಾದಿಸಿದೆ. ಇದನ್ನು ಸಹ ಪರಿಗಣಿಸಲಾಗುವುದು ಎನ್ನುವ ಮಾತನ್ನು ಸಚಿವರು ಹೇಳಿದ್ದಾರೆ. ಆದರೆ ಒಳ ಮೀಸಲಾತಿಯ ಜಾರಿಗೆ ಅಗತ್ಯವಿರುವ ಜಾತಿ ಜನಗಣತಿಯ ವರದಿ, ನ್ಯಾ.ಸದಾಶಿವ ಆಯೋಗದ ವರದಿಯ ಜಾರಿಯತ್ತ ಗಮನ ಹರಿಸದೇ ಮತಬೇಟೆ ರಾಜಕಾರಣದ ಲೆಕ್ಕಾಚಾರದಲ್ಲಿ ಮುಳುಗಿರುವ ಸರ್ಕಾರಗಳು ಪ್ರಜ್ಞಾಪೂರ್ವಕವಾಗಿಯೇ ವಿಳಂಬಿಸಿವೆ.
ಇವೆಲ್ಲವುಗಳತ್ತ ಸರಕಾರ ಗಮನಹರಿಸಬೇಕಿದೆ. ವಿಳಂಬದ ಯಾವ ನೆಪವೂ ವಂಚನೆಯ ಹಂಚಿಕೆಯಾಗುತ್ತದೆ.
ಜನ ಚಳುವಳಿಗಳ ಮೇಲಿನ ಜವಾಬ್ದಾರಿಯೂ ಹೆಚ್ಚಿದೆ.