ಸಿದ್ದಯ್ಯ ಸಿ.
ರಾಜ್ಯ ಬಿಜೆಪಿ ಸರಕಾರ ಮಂಡಿಸಿದ 2023-24ರ ಬಜೆಟ್ಟಿನಲ್ಲಿ ಮುಕ್ತ ಆರ್ಥಿಕ ನೀತಿಗಳ ಜಾರಿಯ ಮುಂದುವರಿದ ಅಂಶಗಳೂ ಬಹಳಷ್ಟಿವೆ ಎಂಬುದನ್ನು ಗಮನಿಸಬೇಕು.
ಮುಕ್ತ ಆರ್ಥಿಕ ನೀತಿಗಳ ಅನುಸಾರವಾಗಿ ಪಡಿತರ ವ್ಯವಸ್ಥೆ ಮೂಲಕ ರಿಯಾಯಿತಿ ದರದಲ್ಲಿ ನೀಡುತ್ತಿರುವ ಜನಸಾಮಾನ್ಯರ ಬಳಕೆಯ ಅಗತ್ಯ ವಸ್ತುಗಳ ವಿತರಣೆಯನ್ನು ಸಂಪೂರ್ಣವಾಗಿ ನಿಲ್ಲಿಸಿ, ಎಲ್ಲವನ್ನೂ ಮುಕ್ತ ಮಾರುಕಟ್ಟೆಗೆ ತೆರೆದಿಡಬೇಕು.
ರೇಷನ್ ಕಾರ್ಡು ಮೂಲಕ ರಿಯಾಯಿತಿ ದರದಲ್ಲಿ ಸೀಮೆಎಣ್ಣೆ ಕೊಡುವುದನ್ನು ನಿಲ್ಲಿಸಿ ಎಷ್ಟೋ ವರ್ಷಗಳಾದವು. ‘ಉಜ್ವಲ ಯೋಜನೆ’ ಮೂಲಕ ಉಚಿತ ಅಡುಗೆ ಅನಿಲ ಸಂಪರ್ಕ (ಸಂಪರ್ಕ ಉಚಿತವಷ್ಟೆ, ಅನಿಲ ಉಚಿತವಲ್ಲ) ಎಂಬ ಘೋಷಣೆ ಮಾಡಿ, ಬಿಪಿಎಲ್ ಕುಟುಂಬಗಳಿಗೆ 1,600 ರೂ ಮೌಲ್ಯದ ಉಚಿತ ಸಿಲಿಂಡರ್ ಮತ್ತು ರೆಗ್ಯುಲೇಟರ್ ಕೊಟ್ಟು (ರಾಜ್ಯ ಸರ್ಕಾರ ಉಚಿತ ಸ್ಟೌವ್ ಕೊಟ್ಟಿತ್ತು), ಅಡುಗೆ ಮಾಡಲು ಬಡವರೂ ಅನಿಲ ಬಳಕೆ ಮಾಡುವಂತೆ ಮಾಡಿದ್ದು, ಅಡುಗೆ ಅನಿಲ ಬಳಕೆ ಮಾಡುವ ಕುಟುಂಬಗಳಿಗೆ ಸೀಮೆಎಣ್ಣೆ ವಿತರಣೆ ಇಲ್ಲದಂತೆ ಮಾಡಿದ್ದು, ಕ್ರಮೇಣ ಪಡಿತರ ಸೀಮೆಎಣ್ಣೆ ವಿತರಣೆಯನ್ನೇ ಸ್ಥಗಿತ ಮಾಡಿದ್ದು, ನಂತರ ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದು, ಆ ನಂತರ ಎರಡೂವರೆ ಪಟ್ಟು ದರ ಏರಿಸಿ, ಲಕ್ಷಾಂತರ ಬಡ ಕುಟುಂಬಗಳು ಅಡುಗೆ ಮಾಡಲು ಮತ್ತೆ ಸೌದೆ ಮೊರೆ ಹೋಗಿರುವುದು, ಇವೆಲ್ಲಾ ಎಲ್ಲರಿಗೂ ಗೊತ್ತಿರುವ ವಿಷಯವೇ.
ಇದನ್ನು ಓದಿ: ಅದಾನಿ ಬಂದರು ವಿವಾದ: ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ-ಪ್ರಕರಣ ದಾಖಲು
ಮೀನುಗಾರಿಕೆ ದೋಣಿಗಳಿಗೆ ಬಳಕೆ ಮಾಡುವ ಸೀಮೆಎಣ್ಣೆಗೆ ಇನ್ನೂ ಸಬ್ಸಿಡಿ ನೀಡಲಾಗುತ್ತಿದೆ. (ಇದೂ ಸಹ ಮೀನುಗಾರರು ಹಲವು ಹೋರಾಟಗಳ ಮೂಲಕ ಉಳಿಸಿಕೊಂಡಿದ್ದು.) ಮುಕ್ತ ಆರ್ಥಿಕ ನೀತಿಗಳನ್ನು ಸಂಪೂರ್ಣವಾಗಿ ಜಾರಿ ಮಾಡಲು ಈ ಸಬ್ಸಿಡಿ ಸೀಮೆಎಣ್ಣೆ ವಿತರಣೆ ನಿಲ್ಲಿಸಲೇಬೇಕು. ಮೀನುಗಾರಿಕೆ ದೋಣಿಗಳಿಗೆ ಬಳಕೆ ಮಾಡುತ್ತಿರುವ ಸೀಮೆಎಣ್ಣೆಗೆ ಕೊಡುತ್ತಿರುವ ಸಬ್ಸಿಡಿ ಇಲ್ಲದಂತೆ ಮಾಡುವುದು ಹೇಗೆ? ಇದಕ್ಕೆ ರಾಜ್ಯ ಸರ್ಕಾರದ ಬಜೆಟ್ಟಿನಲ್ಲಿ ಒಂದು ತಂತ್ರ ಹೆಣೆಯಲಾಗಿದೆ.
ಸೀಮೆಎಣ್ಣೆ ಬಳಕೆ ಮಾಡುತ್ತಿರುವ ದೋಣಿಗಳಿಂದ ಪರಿಸರ ಮಾಲಿನ್ಯವಾಗುತ್ತಿದೆ, ಈ ದೋಣಿಗಳು ಪೆಟ್ರೋಲ್ ಅಥವಾ ಡೀಸೆಲ್ ಮೋಟಾರ್ ಎಂಜಿನ್ ಅಳವಡಿಸಿಕೊಳ್ಳಬೇಕು. ಇದಕ್ಕೆ 2 ವರ್ಷಗಳ ಗಡುವು ನೀಡಲಾಗುವುದು. ಎಂಜಿನ್ ಬದಲಾವಣೆಗೆ ತಲಾ 50 ಸಾವಿರ ರೂಪಾಯಿ ಸಹಾಯ ಧನ ನೀಡಲಾಗುವುದು. ಇದಕ್ಕಾಗಿ ಈ ವರ್ಷ 40 ಕೋಟಿ ಮೀಸಲಿಡಲಾಗಿದೆ. 2 ವರ್ಷಗಳವರೆಗೆ ಸೀಮೆಎಣ್ಣೆ ಸಬ್ಸಿಡಿ ಮುಂದುವರಿಯುತ್ತದೆ. ಈ ರೀತಿ ನೀಡುವಾಗಲೂ ಪ್ರಸಕ್ತ ಸಾಲಿನಿಂದ ‘ನೇರ ನಗದು ಯೋಜನೆ'(ಡಿಬಿಟಿ) ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸೀಮೆಎಣ್ಣೆ ಸಬ್ಸಿಡಿ ಹಣವನ್ನು ಜಮಾ ಮಾಡಲಾಗುವುದು.
ಇವಿಷ್ಟು ರಾಜ್ಯ ಬಜೆಟ್ ನಲ್ಲಿರುವ ಅಂಶಗಳು.
ಇದನ್ನು ಓದಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮೀನು ಕಾರ್ಮಿಕರ ಬೃಹತ್ ಪ್ರತಿಭಟನೆ
ಇದರ ಅರ್ಥ ಇಷ್ಟೆ. ಮೀನುಗಾರರು ಇನ್ನು ಮುಂದೆ ಮಾರುಕಟ್ಟೆ ದರದಲ್ಲಿ ಸೀಮೆಎಣ್ಣೆ ಖರೀದಿ ಮಾಡಬೇಕು. ಇದಕ್ಕಾಗಿ ಬಡ್ಡಿಗೆ ಸಾಲ ಮಾಡಬೇಕು. ತಾನು ಖರೀದಿ ಮಾಡಿದ ಡೀಸೆಲ್ ಎಷ್ಟು ಎಂಬುದನ್ನು ರಸೀದಿ ಸಮೇತ ಲೆಕ್ಕ ಬರೆದು ಇಡಬೇಕು. ಇದನ್ನು ಸರ್ಕಾರಕ್ಕೆ ಸಲ್ಲಿಸಿ ಸಬ್ಸಿಡಿ ಹಣ ಬ್ಯಾಂಕ್ ಖಾತೆಗೆ ಬರುವವರೆಗೂ ಕಾಯಬೇಕು. ಅಲ್ಲಿಯವರೆಗೂ ತಾನು ಡೀಸಲ್ ಖರೀದಿಸಲು ಮಾಡಿದ ಸಾಲಕ್ಕೆ ಬಡ್ಡಿ ಕಟ್ಟಬೇಕು. ಒಂದು ವೇಳೆ ಸಬ್ಸಿಡಿ ಹಣವೂ ಎಲ್ ಪಿಜಿ ಸಿಲಿಂಡರ್ ಸಬ್ಸಿಡಿಯಂತೆ ಬಾರದೇ ಇದ್ದರೆ ಸಾಲದ ಬಲೆಯಿಂದ ಹೊರಬರಲಾರದೆ ನರಳಬೇಕು.
ಇದು ಮುಂದಿನ ಎರಡು ವರ್ಷಗಳ ವರೆಗಿನ ಮಾತು. ಎರಡು ವರ್ಷಗಳ ನಂತರ ಸೀಮೆಎಣ್ಣೆ ಸಬ್ಸಿಡಿ ಇರುವುದಿಲ್ಲ ಎಂದು ಸರ್ಕಾರವೇ ಹೇಳಿದೆ.
ಇನ್ನು ಈ ಮೀನುಗಾರರನ್ನು ಮೀನುಗಾರಿಕೆಯಿಂದ ಹೊರಗಟ್ಟಿ ಕಾರ್ಪೋರೇಟ್ ಕಂಪನಿಗಳ ಹಿಡಿತಕ್ಕೆ ಒಪ್ಪಿಸುವ ಯೋಜನೆಗಳುಳ್ಳ ಹಲವು ಅಂಶಗಳೂ ಈ ಬಜೆಟ್ಟಿನಲ್ಲಿವೆ.
ಹೇಗಿದೆ ನೋಡಿ ಸರ್ಕಾರದ ತಂತ್ರಗಳು. ಮುಕ್ತ ಆರ್ಥಿಕ ನೀತಿಗಳನ್ನು ಎಷ್ಟು ನಾಜೂಕಾಗಿ ಜಾರಿಗೆ ತರುತ್ತಾರೆ ನೋಡಿ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ