ಗುರುರಾಜ ದೇಸಾಯಿ
ನವೀನ್ ಸಾವು ದೇಶದ ಮೆಡಿಕಲ್ ಶಿಕ್ಷಣ ನೀತಿಯ ಭಯಾನಕವನ್ನು ಬಿಚ್ಚಿಟ್ಟಿದೆ. ಭಾರತೀಯರು ಅಥವಾ ಕನ್ನಡಿಗರು ವಿದೇಶಕ್ಕೆ ಮೆಡಿಕಲ್ ಶಿಕ್ಷಣ ಕಲಿಯಲು ಯಾಕೆ ಹೋಗುತ್ತಾರೆ ಎಂಬ ಚರ್ಚೆಗಳು ಎದ್ದಿವೆ. ಹುಟ್ಟಿದೂರಲ್ಲಿ ಎಲ್ಲವೂ ಸಿಕ್ಕಿದ್ದರೆ ವಿದೇಶಕ್ಕೆ ಹೋಗುವ ಸ್ಥಿತಿ ನಮ್ಮ ವಿದ್ಯಾರ್ಥಿಗಳಿಗೆ ಬರುತ್ತಿರಲಿಲ್ಲ.
ವೈದ್ಯನಾಗಬೇಕೆಂಬ ಕನಸು ಕಟ್ಟಿಕೊಂಡು ಅದನ್ನು ನನಸು ಮಾಡಿಕೊಳ್ಳಲು ಹುಟ್ಟಿದೂರನ್ನು ತೊರೆದು ದೂರದ ಯೂಕ್ರೇನ್ಗೆ ತರಳಿದ್ದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ ಗ್ಯಾನಗೌಡರ, ರಷ್ಯಾ-ಯೂಕ್ರೇನ್ ನಡುವಿನ ಯುದ್ಧದಲ್ಲಿ ಶೆಲ್ ದಾಳಿಗೆ ಬಲಿಯಾಗಿದ್ದಾರೆ.
ನವೀನ್ ಪ್ರತಿಭಾವಂತ ವಿದ್ಯಾರ್ಥಿ, SSLCಯಲ್ಲಿ ನವೀನ್ ಶಾಲೆಗೆ ಟಾಪರ್ ಆಗಿದ್ದ – 625ಕ್ಕೆ 606 ಅಂಕಗಳನ್ನು ಪಡೆದಿದ್ದ. ಪಿಯುಸಿಯಲ್ಲಿ ಶೇಖಡಾ 97 ರಷ್ಟು ಅಂಕ ಗಳಿಸಿದ್ದ ಆದರೂ ಸರ್ಕಾರಿ ಮೆಡಿಕಲ್ ಸೀಟ್ ಸಿಗಲಿಲ್ಲ. ಖಾಸಗಿ ಕಾಲೇಜಿನಲ್ಲಿ ಡೊನೇಷನ್ ಕೊಟ್ಟು ಓದಿಸಲು ಸಾಧ್ಯವಿಲ್ಲ ಎಂದು ಕುಟುಂಬ ತಲೆಯ ಮೇಲೆ ಕೈ ಹೊತ್ತು ಕುಳಿತಾಗ ಸ್ನೇಹಿತರ ಸಹಾಯದಿಂದ ಉಕ್ರೇನ್‌ನಲ್ಲಿ ಮೆಡಿಕಲ್ ಓದಲು ನವೀನ್ ನಿರ್ಧರಿಸಿದ್ದ. ಡಾಕ್ಟರ್ ಆಗುವ ಆತನ ಕನಸಿಗೆ ಜೀವ ತುಂಬಿದ ಕುಟುಂಬ ದೂರದೂರಿಗೆ ಕಳುಹಿಸಿ ಕೊಟ್ಟಿತ್ತು. ಆದರೆ ಯುದ್ಧ ಆತನ ಕನಸನ್ನು ನನಸಾಗಿಸಲು ಬಿಡಲಿಲ್ಲ. ವೈದ್ಯನಾಗಿ ಬರುವೆ ಎಂದಿದ್ದ ನವೀನ್ ಈಗ ನೆನಪು ಮಾತ್ರ.
ನವೀನ್ ಸಾವಿಗೆ ನಮ್ಮ ಶಿಕ್ಷಣ ವ್ಯವಸ್ಥೆ ಕಾರಣ : ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾದ ಶೆಲ್ ದಾಳಿಗೆ ನವೀನ್ ಮೃತ ಪಟ್ಟಿರುವುದು ನಿಜ. ಆದರೆ ಆತನ ಸಾವಿಗೆ ನಿಜವಾದ ಕಾರಣ ನಮ್ಮ ದೇಶದ ಶಿಕ್ಷಣ ವ್ಯವಸ್ಥೆ. ಪ್ರತಿಭಾವಂತ ವಿದ್ಯಾರ್ಥಿಯಾಗಿಯೂ ನವೀನ್‌ಗೆ ಸೀಟು ಪಡೆಯಲಾಗಲಿಲ್ಲ ಎಂದರೆ ಅದಕ್ಕೆ ಸರಕಾರ ಆಯ್ಕೆ ಮಾಡಿಕೊಂಡಿರುವ ‘ನೀಟ್’ ಪರೀಕ್ಷೆ. ನೀಟ್ ಇಂತಹ ವಿದ್ಯಾರ್ಥಿಗಳ ಬದುಕನ್ನು ಹಿಂಡಿ ಹಿಪ್ಪೆ ಮಾಡಿದೆ. ಅಲ್ಲಿನ ಕಠಿಣ ಪ್ರಶ್ನೆಗಳು, ಪರೀಕ್ಷೆಯ ಮಾದರಿ ಹೀಗೆ ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶದ ವಿದ್ಯಾರ್ಥಿಗಳ ವೈದ್ಯರಾಗುವ ಕನಸಿಗೆ ಬೆಂಕಿ ಹಚ್ಚುತ್ತಾ ಬಂದಿದೆ.
ಇದನ್ನೂ ಓದಿ : ಉಕ್ರೇನ್-ರಷ್ಯಾ ಯುದ್ಧ: ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ ಸಾವು
ದೇಶದಲ್ಲಿ 85% ವೈದ್ಯಕೀಯ ಶಿಕ್ಷಣ ವ್ಯವಸ್ಥೆ ಖಾಸಗಿ ಹಿಡಿತದಲ್ಲಿದೆ. ಇದಕ್ಕೆ ಸರಕಾರದ ವೃತ್ತಿ ಶಿಕ್ಷಣ ಕಾಯ್ದೆ 2006 ಪ್ರಮುಖವಾದ ಕಾರಣವಾಗಿದೆ. ಶುಲ್ಕ ಹಾಗೂ ಪ್ರವೇಶಾತಿ ವಿಚಾರದಲ್ಲಿ ಸರಕಾರ ವಿದ್ಯಾರ್ಥಿಗಳ ಪರ ನೀತಿಯನ್ನು ಇಲ್ಲಿಯವರೆಗೆ ಜಾರಿ ಮಾಡಲೇ ಇಲ್ಲ. ಇದನ್ನೆ ಬಂಡವಾಳವಾಗಿಸಿಕೊಂಡ ಖಾಸಗಿ ಮೆಡಿಕಲ್ ಕಾಲೇಜುಗಳು ವೈದ್ಯಕೀಯ ಶಿಕ್ಷಣವನ್ನು ಮಾರಾಟಕ್ಕಿಟ್ಟವು. ಕೋಟಿ ಕೋಟಿ ಹಣ ಪೀಕಲು ಮುಂದಾದವು. ಇದರ ಪರಿಣಾಮವೇ ವಿದೇಶದಲ್ಲಿ ಮೆಡಿಕಲ್ ಕಲಿಯುವತ್ತ ವಿದ್ಯಾರ್ಥಿಗಳು ವಾಲುವಂತಾಯಿತು.
ಸಿಇಟಿ, ನೀಟ್ ಹೆಸರಲ್ಲಿ ಹುಟ್ಟಿಕೊಂಡ ಕೋಚಿಂಗ್ ಸೆಂಟರ್‌ಗಳು ಮೆಡಿಕಲ್ ಮಾಫೀಯಾಗೆ ಇಳಿದವು. ಸೀಟುಗಳನ್ನು ಮಾರುವ, ಇಲ್ಲವೇ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವ ದಂಧೆಗೆ ಇಳಿದರು. ಆಗ ಹುಟ್ಟಿಕೊಂಡಿದ್ದೆ ಅಕ್ರಮ ಸೀಟು ಮಾರಾಟ. ಹೀಗೆ ದೇಶದ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕಿದ್ದ ಮೆಡಿಕಲ್ ಶಿಕ್ಷಣ, ಆಳುವ ಸರಕಾರಗಳ ನೀತಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಹಣದಾಹಕ್ಕೆ ಬಲಿಯಾಗತೊಡಗಿದೆ.
ಉಕ್ರೇನ್ ಆಯ್ಕೆ ಯಾಕೆ : ನವೀನ್ ಸಾವು ದೇಶದ ಮೆಡಿಕಲ್ ಶಿಕ್ಷಣ ನೀತಿಯ ಭಯಾನಕವನ್ನು ಬಿಚ್ಚಿಟ್ಟಿದೆ. ಭಾರತೀಯರು ಅಥವಾ ಕನ್ನಡಿಗರು ವಿದೇಶಕ್ಕೆ ಮೆಡಿಕಲ್ ಶಿಕ್ಷಣ ಕಲಿಯಲು ಯಾಕೆ ಹೋಗುತ್ತಾರೆ ಎಂಬ ಚರ್ಚೆಗಳು ಎದ್ದಿವೆ. ಹುಟ್ಟಿದೂರಲ್ಲಿ ಎಲ್ಲವೂ ಸಿಕ್ಕಿದ್ದರೆ ವಿದೇಶಕ್ಕೆ ಹೋಗುವ ಸ್ಥಿತಿ ನಮ್ಮ ವಿದ್ಯಾರ್ಥಿಗಳಿಗೆ ಬರುತ್ತಿರಲಿಲ್ಲ.
ಉಕ್ರೇನ್ ದೇಶದ ಒಂದು ಅಂದಾಜಿನ ಪ್ರಕಾರ ಸುಮಾರು 80,000 ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಅಧ್ಯಯನ ಮಾಡುತ್ತಿದ್ದಾರೆ ಎಂದು ಉಕ್ರೇನ್‌ನ ಶಿಕ್ಷಣ ಮತ್ತು ವಿಜ್ಞಾನ ಸಚಿವಾಲಯದ ಮಾಹಿತಿಯನ್ನು ಹೊರಹಾಕಿದೆ. ಅದರಲ್ಲಿ ಕಾಲು ಭಾಗದಷ್ಟು ಭಾರತೀಯರು ಇದ್ದಾರೆ. ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣವನ್ನು ಕಲಿಯುತ್ತಿದ್ದಾರೆ. ಇದಕ್ಕೆ ಕಾರಣವೆಂದರೆ ಉಕ್ರೇನ್‌ನಲ್ಲಿ ಕಡಿಮೆ ದರದಲ್ಲಿ ಮೆಡಿಕಲ್ ಕಲಿಯಬಹುದಾಗಿದೆ. ವೈದ್ಯಕೀಯದಲ್ಲಿ ಹೆಚ್ಚಿನ ಸಂಖ್ಯೆಯ ಪದವಿ ಮತ್ತು ಸ್ನಾತಕೋತ್ತರ ವಿಶೇಷತೆಗಳನ್ನು ಹೊಂದಿರುವ ಉಕ್ರೇನ್ ತನ್ನ ಖಂಡದಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಎಂದು ಅಧ್ಯಯನ ವರದಿಗಳು ಹೇಳುತ್ತವೆ.
ಉಕ್ರೇನ್‌ನಲ್ಲಿರುವ ಖಾಸಗಿ ವೈದ್ಯಕೀಯ ಕಾಲೇಜುಗಳ ಬೋಧನಾ ಶುಲ್ಕವು ಭಾರತದ ಕಾಲೇಜುಗಳಿಗೆ ಹೋಲಿಸಿದರೆ ಬಹಳ ಕಡಿಮೆ ಇದೆ. ಈ ಕಾರಣಕ್ಕೆ ಉಕ್ರೇನ್ಗೆ ತೆರಳಿ ವೈದ್ಯಕೀಯ ಶಿಕ್ಷಣ ಪಡೆಯುವ ಭಾರತೀಯರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬುದು ವಾಸ್ತವ ಅಂಶ. ಭಾರತದಲ್ಲಿ ಸರ್ಕಾರಿ ಕೋಟಾದಡಿ ನಾಲ್ಕೂವರೆ ವರ್ಷದ ಎಂಬಿಬಿಎಸ್ ಕೋರ್ಸ್ ಮಾಡಲು ಒಬ್ಬ ವಿದ್ಯಾರ್ಥಿ ವಾರ್ಷಿಕವಾಗಿ 20 ರಿಂದ 30 ಲಕ್ಷ ರೂ. ಶುಲ್ಕ ಖರ್ಚು ಮಾಡಬೇಕಾಗುತ್ತದೆ. ಖಾಸಗಿ ಕೋಟಾದಡಿ ಮೆಡಿಕಲ್ ವಿದ್ಯಾಭ್ಯಾಸ ಮಾಡಲು ವಾರ್ಷಿಕವಾಗಿ ಕೋಟ್ಯಾಂತರ ಹಣ ಮೀಸಲಿಡಬೇಕು. ಆದರೆ, ಉಕ್ರೇನ್‌ನಲ್ಲಿ ಎಂಬಿಬಿಎಸ್ ಕೋರ್ಸ್‌ಗೆ ವರ್ಷಕ್ಕೆ ಕೇವಲ 4ರಿಂದ 5 ಲಕ್ಷ ರೂ. ಶುಲ್ಕವಿದೆ. ಹೀಗಾಗಿ, ಉಕ್ರೇನ್‌ನ ವಿದೇಶಿ ವಿದ್ಯಾರ್ಥಿಗಳ ಪೈಕಿ ಶೇ.23.64ರಷ್ಟು ವಿದ್ಯಾರ್ಥಿಗಳು ಭಾರತೀಯರೇ ಆಗಿದ್ದಾರೆ.
ಭಾರತದ ಮೆಡಿಕಲ್ ಶಿಕ್ಷಣ ನೀತಿ ಹೇಗಿರಬೇಕು : ವೃತ್ತಿ ಶಿಕ್ಷಣ ಕಾಯ್ದೆಗೆ 2006 ರಲ್ಲಿ ತಿದ್ದುಪಡಿ ತಂದಾಗಿನಿಂದ ಮೆಡಿಕಲ್ ಶಿಕ್ಷಣ ಸಂಪೂರ್ಣವಾಗಿ ಖಾಸಗೀಕರಣಗೊಳ್ಳುವಂತಾಯಿತು. ಪ್ರವೇಶ ನಿಯಂತ್ರಣ ಹಾಗೂ ಶುಲ್ಕ ನಿಗದಿ ವಿಚಾರಕ್ಕೆ ತಿದ್ದುಪಡಿ ತರಲಾಯಿತು. ಖಾಸಗಿ ಶಿಕ್ಷಣ ಸಂಸ್ಥೆಗಳ ತಾಳಕ್ಕೆ ತಕ್ಕಂತೆ ಕುಣಿದ ಆಳುವ ಸರಕಾರಗಳು ದುಬಾರಿ ಶುಲ್ಕವನ್ನು ನಿಗದಿ ಮಾಡಿದವು. ಮನಸೋ ಇಚ್ಚೆ ಖಾಸಗಿ ಶಾಲೆಗಳನ್ನು ತೆರೆಯಲು ಅವಕಾಶ ನೀಡಲಾಯಿತು. ಇದು ಮೆಡಿಕಲ್ ಶಿಕ್ಷಣದ ಮಾರಾಟಕ್ಕೆ ಕಾರಣವಾಯಿತು.
ಎಸ್‌ಎಫ್‌ಐ ಹಾಗೂ ಎಡ ವಿದ್ಯಾರ್ಥಿ ಸಂಘಟನೆಗಳು ಈ ಕಾಯ್ದೆನ್ನು ತಿರಸ್ಕರಿಸಬೇಕು ಎಂದು ಪ್ರಭಲವಾಗಿ ಹೋರಾಟವನ್ನು ರೂಪಿಸಿದವು. ಶುಲ್ಕಗಳ ಏರಿಕೆ ಬಡ ಹಾಗೂ ಮಧ್ಯಮ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಮತ್ತು ಭಾರತದ ಪ್ರತಿಭೆಗಳು ವಿದೇಶಕ್ಕೆ ಹೋಗುವ ಸಾಧ್ಯತೆ ಹೆಚ್ಚಾಗುತ್ತದೆ. ಹಾಗಾಗಿ ಭಾರತದಲ್ಲೆ ಮೆಡಿಕಲ್ ಶಿಕ್ಷಣವನ್ನು ಬಲಗೊಳಿಸಿದರೆ ದೇಶದ ಆರೋಗ್ಯ ಸಧೃಢವಾಗಲು ಸಾಧ್ಯವಾಗುತ್ತದೆ ಎಂದು ಆಗ್ರಹಿಸಿದವು. ಆದರೆ ಸರಕಾರ ಸಂಘಟನೆಗಳ ಮಾತುಗಳನ್ನು ಕೇಳಿಸಿಕೊಳ್ಳದ ಕಾರಣ ಇಂದು ಇಂತಹ ದೊಡ್ಡ ಅಪಾಯವನ್ನು ಎದರಿಸುವಂತಾಗಿದೆ.
ಭಾರದಲ್ಲಿ ಹೆಚ್ಚಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳೇ ಇರುವುದರಿಂದ ಅವುಗಳನ್ನು ನಿಯಂತ್ರಿಸುವುದಕ್ಕಾಗಿ ರಾಜ್ಯ ಸರಕಾರಗಳಿಗೆ ಅಧಿಕಾರ ನೀಡುವುದಕ್ಕಾಗಿ ಕೇಂದ್ರೀಯ ಶಾಸನವನ್ನು ಜಾರಿಮಾಡಬೇಕಿದೆ. ದೇಶವ್ಯಾಪಿ ಸರಕಾರಿ ಕಾಲೇಜುಗಳನ್ನು ಹೆಚ್ಚಿಸಲು ಮುಂದಾಗಬೇಕಿದೆ. ಕನಿಷ್ಟ ರಾಜ್ಯದಲ್ಲಿ 200 ಕ್ಕೂ ಹೆಚ್ಚು ಸರಕಾರಿ ಕಾಲೇಜುಗಳನ್ನು ಆರಂಭಿಸಬೇಕು. ಆ ಕಾಲೇಜುಗಳಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ನೀಡಬೇಕು. ಹೊಸ ಸರಕಾರಿ ಕಾಲೇಜು ನಿರ್ಮಾಣ ಆಗುವವರೆಗೆ ಖಾಸಗಿ ಕಾಲೇಜಿನಲ್ಲಿ 75 :25 ರ ಅನುಪಾತ (75 ಸರಕಾರಿ ಸೀಟು, 25 ಖಾಸಗಿ ಸೀಟು) ಸಿಇಟಿ/ ನೀಟ್ ನಲ್ಲಿ ನಡೆಯುವ ಅಕ್ರಮ ದಂಧೆಗಳನ್ನು ತಡೆಯಲು ಬಲವಾದ ಸಮಿತಿಯನ್ನು ರಚಿಸಬೇಕು. ಈ ಆಯ್ಕೆಗಳ ಮೂಲಕ ಭಾರತದಲ್ಲೂ ವಿದ್ಯಾರ್ಥಿಗಳ ಕೈಗೆಟಕುವ ದರದಲ್ಲಿ ಮೆಡಿಕಲ್ ಶಿಕ್ಷಣವನ್ನು ನೀಡಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಸರಕಾರಗಳು ದೃಢವಾದ ಹೆಜ್ಜೆಯತ್ತ ಸಾಗಬೇಕಿದೆ.