ಚೆನ್ನೈ: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ತಮಿಳುನಾಡು ಸರ್ಕಾರ ನೀಡಿದ್ದ ಶೇ.7.5 ಮೀಸಲಾತಿಯನ್ನು ಮದ್ರಾಸ್ ಹೈಕೋರ್ಟ್ ಎತ್ತಿ ಹಿಡಿದಿದೆ.
ಮೀಸಲಾತಿಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ರಿಟ್ ಅರ್ಜಿಗಳ ಕುರಿತು ಆದೇಶಿಸಿದ ಮುಖ್ಯ ನ್ಯಾಯಮೂರ್ತಿ ಮುನೀಶ್ವರ್ ನಾಥ್ ಭಂಡಾರಿ ಮತ್ತು ನ್ಯಾಯಮೂರ್ತಿ ಡಿ ಭರತ್ ಚಕ್ರವರ್ತಿ ಅವರ ಪೀಠವು 7.5 ರಷ್ಟು ಕೋಟಾವನ್ನು ಮುಂದುವರಿಸಲು ಅನುಮತಿ ನೀಡಿತು. ಅಲ್ಲದೆ, ಈ ಬಗ್ಗೆ ಮುಂದಿನ 5 ವರ್ಷಗಳಲ್ಲಿ ಪರಿಶೀಲನೆ ಮಾಡುವಂತಲೂ ರಾಜ್ಯಕ್ಕೆ ನಿರ್ದೇಶನ ನೀಡಿತು.
ಮುಂದಿನ ಐದು ವರ್ಷಗಳ ಕಾಲ ರಾಜ್ಯವು ಮೀಸಲಾತಿಯನ್ನು ಮುಂದುವರಿಸಲಿದೆ ಎಂದು ಪೀಠ ಹೇಳಿದೆ. ಐದು ವರ್ಷದೊಳಗೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸರ್ಕಾರ ಕ್ರಮಕೈಗೊಳ್ಳಬೇಕು. ಮೀಸಲಾತಿಯನ್ನು ಐದು ವರ್ಷಗಳ ನಂತರ ವಿಸ್ತರಿಸಲಾಗುವುದಿಲ್ಲ ಎಂದು ಹೇಳಿದೆ.
ನ್ಯಾಯಮೂರ್ತಿ (ನಿವೃತ್ತ) ಪಿ ಕಲೈಯರಸನ್ ನೇತೃತ್ವದ ಸಮಿತಿ, ಐದು ವರ್ಷಗಳಲ್ಲಿ ಮೀಸಲಾತಿಯನ್ನು ಪರಿಶೀಲಿಸುವಂತೆ ಸೂಚಿಸಿತ್ತು.
ಅರ್ಜಿದಾರರ ಪ್ರಕಾರ, ರಾಜ್ಯದಲ್ಲಿ ಶೇ. 69 ಮೀಸಲಾತಿ ನೀತಿಯಿಂದಾಗಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಶೇ.31ರಷ್ಟು ಸೀಟುಗಳು ಮಾತ್ರ ಲಭ್ಯವಾಗಿವೆ. ಈಗ ಅದನ್ನು ಶೇ. 7.5ರಷ್ಟು ಕೋಟಾ ಮೀರಿ ವಿಸ್ತರಿಸಲಾಗಿದೆ ಎಂದು ತಿಳಿಸಿತು.
ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ವಕೀಲ ಪಿ ವಿಲ್ಸನ್, ಗ್ರಾಮೀಣ-ನಗರ ಮತ್ತು ಶ್ರೀಮಂತ-ಬಡವರ ನಡುವಿನ ಅಂತರವನ್ನು ಕಡಿಮೆ ಮಾಡಲು ವಿಶೇಷ ಮೀಸಲಾತಿ ಬಹಳ ಮುಖ್ಯ ಎಂದು ನ್ಯಾಯಾಲಯದಲ್ಲಿ ಹೇಳಿದರು.
ಇದೇ ವೇಳೆ ಹಿರಿಯ ವಕೀಲ ಕಪಿಲ್ ಸಿಬಲ್ ಮಾತನಾಡಿ, ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಆಧಾರದ ಮೇಲೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಶೇ.7.5ರಷ್ಟು ಮೀಸಲಾತಿ ನೀಡಲಾಗಿದೆ ಎಂದು ತಿಳಿಸಿದರು.