ಬರ್ಮಿಂಗ್ ಹ್ಯಾಮ್ : ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಸಿಕ್ಕಿದೆ. ಮಹಿಳೆಯರ 55 ಕೆಜಿ ವೇಟ್ ಲಿಫ್ಟಿಂಗ್ ನಲ್ಲಿ ಭಾರತದ ಬಿಂದ್ಯಾರಾಣಿ ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತದ ಪದಕಗಳ ಸಂಖ್ಯೆ 4 ಕ್ಕೆ ಏರಿಕೆಯಾಗಿದೆ.
ಭಾರತದ ಬಿಂದ್ಯಾರಾಣಿ ದೇವಿ 2022 ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಮಹಿಳೆಯರ 55 ಕೆಜಿ ವೇಟ್ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದು ಭಾರತದ ಸಂಖ್ಯೆಯನ್ನು ನಾಲ್ಕಕ್ಕೆ ಏರಿಸಿದ್ದಾರೆ. ನೈಜೀರಿಯಾದ ಚಿನ್ನದ ಪದಕ ವಿಜೇತ ಆದಿಜತ್ ಒಲಾರಿನೋಯೆ ಅವರಿಗಿಂತ ಕೇವಲ 1 ಕೆಜಿ ಕಡಿಮೆ ತೂಕವನ್ನ ಎತ್ತುವ ಮೂಲಕ 2 ನೇ ಸ್ಥಾನ ಪಡೆದರು. 23 ವರ್ಷದ ಅವರು ಒಟ್ಟು 202 ಕೆ.ಜಿ ಭಾರ ಎತ್ತಿದ್ದಾರೆ. ಅವರು ಸ್ನ್ಯಾಚ್ ಸುತ್ತಿನಲ್ಲಿ 86 ಕೆಜಿ ಎತ್ತಿದರು ಮತ್ತು ಕ್ಲೀನ್ ಮತ್ತು ಜರ್ಕ್ ಸುತ್ತಿನಲ್ಲಿ ಕಾಮನ್ವೆಲ್ತ್ ಗೇಮ್ಸ್ ದಾಖಲೆಯ 116 ಕೆಜಿ ಎತ್ತಿದರು.
ನೈಜೀರಿಯಾದ ಆದಿಜಾತ್ ಅಡೆನಿಕ್ ಒಲಾರಿನೊಯೆ ಸ್ನ್ಯಾಚ್ ಮತ್ತು ಒಟ್ಟು ಪ್ರಯತ್ನದಲ್ಲಿ ಒಟ್ಟು 203 ಕೆಜಿ (92 ಕೆಜಿ 111 ಕೆಜಿ) ಭಾರ ಎತ್ತುವ ಮೂಲಕ ಕ್ರೀಡಾಕೂಟದ ದಾಖಲೆಯನ್ನು ಅಳಿಸಿಹಾಕಿ ಚಿನ್ನದ ಪದಕ ಗೆದ್ದರು.
ಬಿಂದ್ಯಾರಾಣಿ ಅವರ ಸಾಧನೆಯ ನೆರವಿನೊಂದಿಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ನಾಲ್ಕನೇ ಪದಕ ಸಿಕ್ಕಂತಾಗಿದೆ. ಇದಕ್ಕೂ ಮುನ್ನ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಅವರು ಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನ ಒದಗಿಸಿದರು. ಸಂಕೇತ್ ಸರ್ಗರ್ ಮತ್ತು ಗುರುರಾಜ ಪೂಜಾರಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದರು.