- ಅಮಿತ್ ಶಾ ಮೆಚ್ಚುಗೆ ಮಾತಿಗೆ ಮಾಯಾವತಿಯಿಂದ ಮುತ್ಸದ್ದಿ ಉಡುಗೊರೆ
- ಹೊಸ ಬೆಳವಣಿಗೆಯ ಮುನ್ಸೂಚನೆ ನೀಡಿದ ನಾಯಕರ ಮಾತುಗಳು
ಲಖನೌ: ಉತ್ತರ ಪ್ರದೇಶದಲ್ಲಿ ಬಿಜೆಪಿ – ಬಿಎಸ್‌ಪಿ ನಡುವೆ ಪರಸ್ಪರ ಮೆಚ್ಚುಗೆಯ ಸಖ್ಯದ ರಾಜಕಾರಣ ಶುರುವಾಗಿದೆ. ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಕೆಲವೇ ವಾರ ಬಾಕಿ ಉಳಿದಿರುವಾಗ ಉಭಯ ಪಕ್ಷಗಳ ಮುಖಂಡರು ಪರಸ್ಪರ ಹೊಗಳಿಕೆಯ ಮಾತುಗಳು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
‘ರಾಜ್ಯ ರಾಜಕಾರಣದಲ್ಲಿ ಬಿಎಸ್ಪಿ ಅಪ್ರಸ್ತುತ ಎಂದು ಭಾವಿಸುವುದು ತಪ್ಪು. ಅದು ಇವತ್ತಿಗೂ ಅತಿ ಪ್ರಸ್ತುತವಾಗಿ ಉಳಿದಿರುವ ಪಕ್ಷ. ಈ ಚುನಾವಣೆಯಲ್ಲಿ ಬಿಎಸ್‌ಪಿ ಅತ್ಯುತ್ತಮ ಮತಗಳನ್ನು ಪಡೆಯಲಿದೆ. ಆದರೆ, ಅದು ಪಡೆಯುವ ಮತಗಳು ಸೀಟ್ ಆಗಿ ಪರಿವರ್ತನೆಗೊಳ್ಳುವುದು ಎಷ್ಟು ಎನ್ನುವುದು ತಿಳಿದಿಲ್ಲ’ ಎಂದು ಅಮಿತ್ ಶಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಿಳಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಎಸ್‌ಪಿ ನಾಯಕಿ ಮಾಯಾವತಿ, ‘ಅಮಿತ್ ಶಾ ಅವರು ಮುತ್ಸದ್ದಿತನದ ಮಾತಾಡಿದ್ದಾರೆ. ವಾಸ್ತವ ಸತ್ಯವನ್ನು ಅವರು ಒಪ್ಪಿಕೊಂಡಿದ್ದಾರೆ. ಅವರ ಮಾತನ್ನು ನಾನು ಗೌರವಿಸುತ್ತೇನೆ’ ಎಂದಿದ್ದಾರೆ.
ಇದುವರೆಗೆ ಪರಸ್ಪರ ಕೆಸರೆರಚಾಟ ಮಾಡುತ್ತ ಬಂದಿದ್ದ ಬಿಜೆಪಿ – ಬಿಎಸ್‌ಪಿ ಈಗ ನಿಲುವು ಬದಲಿಸಿ, ಕೈ ಕುಲುಕುವ ಕೆಲಸಕ್ಕೆ ಇಳಿದಿವೆ. ಇದು ಮುಂದೆ ಎದುರಾಗುವ ಸನ್ನಿವೇಶ ಎದುರಿಸುವ ತಯಾರಿ ಇರಬಹುದು ಎಂದು ರಾಜಕೀಯ ವಿಶ್ಲೇಷಕರು ವ್ಯಾಖ್ಯಾನಿಸುತ್ತಿದ್ದಾರೆ. ‘ಬಿಜೆಪಿಯ ಸರಳ ಬಹುಮತಕ್ಕೆ ಕೊರತೆಯಾದಲ್ಲಿ, ಬಿಎಸ್‌ಪಿಯಿಂದ ಆ ಸ್ಥಾನಗಳನ್ನು ತುಂಬಿಕೊಳ್ಳಬಹುದು ಎಂಬ ಲೆಕ್ಕಾಚಾರದಿಂದ ಶಾ ಅವರು ಹೀಗೆ ಮಾತನಾಡಿರುವ ಸಾಧ್ಯತೆಯಿದೆ. ಸ್ವಂತ ಬಲದಲ್ಲಿ ಸರ್ಕಾರ ರಚಿಸುವಷ್ಟು ಸ್ಥಾನಗಳನ್ನು ಬಿಜೆಪಿ ಪಡೆಯುವುದು ಕಷ್ಟ ಎಂಬುದು ಅವರಿಗೆ ಮನವರಿಕೆಯಾದಂತಿದೆ’ ಎಂಬುದು ರಾಜಕೀಯ ಲೆಕ್ಕಾಚಾರವಾಗಿದೆ.
ಈ ಹಿಂದೆ ಬಿಎಸ್‌ಪಿ ಹಾಗೂ ಬಿಜೆಪಿ ಸೇರಿಕೊಂಡು ಮೂರು ಬಾರಿ ಸರ್ಕಾರ ರಚಿಸಿವೆ. ಹೀಗಾಗಿ ಮಾಯಾವತಿ ಹಾಗೂ ಶಾ ಅವರು ಪರಸ್ಪರ ಹೊಗಳಿಕೊಂಡಿರುವುದು ಹಾಗೂ ಚುನಾವಣೋತ್ತರ ಮೈತ್ರಿ ಮಾಡುಕೊಳ್ಳುವುದು ಅಚ್ಚರಿಯ ವಿದ್ಯಮಾನವೇನಲ್ಲ ಎಂದು ಅಲ್ಲಿನ ಮಾಧ್ಯಮಗಳು ವಿವರಿಸಿವೆ. ಉತ್ತರ ಪ್ರದೇಶದಲ್ಲಿ ಮಾರ್ಚ್ 7 ರಂದು ಚುನಾವಣೆ ಮುಕ್ತಾಯವಾಗಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.