ಮೇ ತಿಂಗಳಲ್ಲಿ ಸಗಟು ಹಣದುಬ್ಬರ 15.88% -ದಾಖಲೆ ಏರಿಕೆ

ಹೊಸದಿಲ್ಲಿ: 14 ಜೂನ್ 2022: ಆಹಾರ ಪದಾರ್ಥಗಳು ಮತ್ತು ಕಚ್ಚಾ ತೈಲದ ಬೆಲೆ ಏರಿಕೆಯಿಂದಾಗಿ ಸಗಟು ಬೆಲೆ ಆಧಾರಿತ ಹಣದುಬ್ಬರವು ಮೇ ತಿಂಗಳಲ್ಲಿ ದಾಖಲೆಯ ಗರಿಷ್ಠ 15.88% ಕ್ಕೆ ಏರಿದೆ. ಏಪ್ರಿಲ್‌ನಲ್ಲಿ ಇದು 15.08% ಮತ್ತು ಕಳೆದ ವರ್ಷ ಮೇನಲ್ಲಿ 13.11% ಆಗಿತ್ತು. 2011-12ರ ಬೆಲೆಗಳ ಸರಣಿಯಲ್ಲಿ ಇದು ಅತೀ ಹೆಚ್ಚು ಏರಿಕೆ ಎನ್ನಲಾಗಿದೆ.

“ಮೇ, 2022 ರಲ್ಲಿ ಹೆಚ್ಚಿನ ಹಣದುಬ್ಬರ ದರವು ಪ್ರಾಥಮಿಕವಾಗಿ ಖನಿಜ ತೈಲಗಳು, ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಆಹಾರ ಪದಾರ್ಥಗಳು, ಮೂಲ ಲೋಹಗಳು, ಆಹಾರೇತರ ವಸ್ತುಗಳು, ರಾಸಾಯನಿಕಗಳು ಮತ್ತು ರಾಸಾಯನಿಕ ಉತ್ಪನ್ನಗಳು ಮತ್ತು ಆಹಾರ ಉತ್ಪನ್ನಗಳು ಇತ್ಯಾದಿಗಳ ಬೆಲೆಗಳಲ್ಲಿ ಏರಿಕೆಯಾಗಿದೆ. ಹಿಂದಿನ ವರ್ಷದ ಅನುಗುಣವಾದ ತಿಂಗಳು” ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಕಳೆದ ವರ್ಷ ಏಪ್ರಿಲ್‌ನಿಂದ ಸತತ 14ನೇ ತಿಂಗಳಿಗೆ ಸಗಟು  ಹಣದುಬ್ಬರ ಎರಡಂಕಿಯಲ್ಲಿಯೇ ಮುಂದುವರೆದಿದೆ. ಮತ್ತು ಸತತ ಮೂರು ತಿಂಗಳುಗಳಿಂದ ಏರುತ್ತಲೇ ಇದೆ.

ಮೇ ತಿಂಗಳಲ್ಲಿ ಆಹಾರ ವಸ್ತುಗಳ ಹಣದುಬ್ಬರವು 12.34% ರಷ್ಟಿತ್ತು, ಏಕೆಂದರೆ ತರಕಾರಿಗಳು, ಗೋಧಿ, ಹಣ್ಣುಗಳು ಮತ್ತು ಆಲೂಗೆಡ್ಡೆಗಳ ಬೆಲೆಗಳು ಹಿಂದಿನ ವರ್ಷದ ಅವಧಿಯಲ್ಲಿ ತೀವ್ರ ಏರಿಕೆ ಕಂಡವು.

ತರಕಾರಿಗಳ ಬೆಲೆ ಏರಿಕೆ ದರವು 56.36% ಆಗಿದ್ದರೆ, ಗೋಧಿಯಲ್ಲಿ ಇದು 10.55% ಮತ್ತು ಮೊಟ್ಟೆ, ಮಾಂಸ ಮತ್ತು ಮೀನುಗಳಲ್ಲಿ ಹಣದುಬ್ಬರವು 7.78% ಆಗಿದೆ.

ಇಂಧನ ಮತ್ತು ವಿದ್ಯುತ್ ವಲಯದಲ್ಲಿ ಹಣದುಬ್ಬರವು 40.62% ರಷ್ಟಿದ್ದರೆ, ತಯಾರಿಸಿದ ಉತ್ಪನ್ನಗಳು ಮತ್ತು ಎಣ್ಣೆ ಬೀಜಗಳಲ್ಲಿ ಇದು ಕ್ರಮವಾಗಿ 10.11% ಮತ್ತು 7.08% ರಷ್ಟಿದೆ.

ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ಹಣದುಬ್ಬರವು ಮೇ ತಿಂಗಳಲ್ಲಿ 79.50% ಆಗಿತ್ತು.

ಮೇ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರವು 7.04 ಪ್ರತಿಶತದಷ್ಟಿತ್ತು, ಸತತ ಐದು ತಿಂಗಳಿಂದ ಹಣದುಬ್ಬರ ದರ ರಿಸರ್ವ್ ಬ್ಯಾಂಕ್ ಹಣದುಬ್ಬರದ ಗುರಿಗಿಂತ ಮೇಲಿದೆ.

ತ್ರೈಮಾಸಿಕ ಹಣದುಬ್ಬರ ಜೂನ್‌ನಲ್ಲಿ 7.5%, ಸಪ್ಟಂಬರ್‌ನಲ್ಲಿ 7.4% -ಆರ್.ಬಿ.ಐ.

. ಹಣದುಬ್ಬರ ಏರುವ ಅಪಾಯ ಇನ್ನೂ ಇದೆ ಎಂದು ಭಾರತೀಯ ರಿಜರ್ವ್ ಬ್ಯಾಂಕ್(ಆರ್.ಬಿ.ಐ.) ಅಂದಾಜು ಪ್ರಕಟಿಸಿತ್ತು. ಆಹಾರ ಸರಕುಗಳ ಬೆಲೆಗಳಲ್ಲಿ ಹೆಚ್ಚಳ ಮತ್ತು ಜಾಗತಿಕ ಕಚ್ಚಾ ತೈಲ ಬೆಲೆಗಳ ಹೆಚ್ಚಳದಿಂದಾಗಿ ಈ ಅಪಾಯ ಮುಂದುವರೆಯುತ್ತದೆ ಎಂದು ಜೂನ್ 8ರಂದು ರಿಜರ್ವ್ ಬ್ಯಾಂಕ್ ಗವರ್ನರ್ ಹೇಳಿದ್ದರು

ಇದರಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿಲ್ಲರೆ ಬೆಲೆ ಸೂಚ್ಯಂಕ ಆಧಾರಿತ ಒಟ್ಟು  ಹಣದುಬ್ಬರ ದರ 5.7% ಇರುತ್ತದೆ ಎಂದು ಕಳೆದ ಎಪ್ರಿಲ್‌ನಲ್ಲಿ ಮಾಡಿದ ಅಂದಾಜನ್ನು ಈಗ 6.7%ಕ್ಕೆ ಏರಿಸಲಾಗಿದೆ. ಈ ಜೂನ್ ತಿಂಗಳಲ್ಲಿ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ಇದು 7.5% ಇರಬಹುದು, ಸಪ್ಟಂಬರಿನಲ್ಲಿ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ಇದು 7.4% ಇರಬಹುದು ಎಂದು ಸದ್ಯಕ್ಕೆ ಆರ್.ಬಿ.ಐ. ಅಂದಾಜು ಮಾಡಿದೆ. ಮೂರನೇ ತ್ರೈಮಾಸಿಕದ ಅಂತ್ಯದಲ್ಲಿ, ಡಿಸೆಂಬರಿನಲ್ಲಿ ಇದು 6.2%ಕ್ಕೆ ಇಳಿಯಬಹುದು, ನಂತರ ಈ ಹಣಕಾಸು ವರ್ಷದ ಕೊನೆಯಲ್ಲಿ ಇದು 5.8%ಕ್ಕೆ ಇಳಿಯಬಹುದು. ಒಟ್ಟಾರೆಯಾಗಿ, ಇಡೀ 2022-23ರಲ್ಲಿ ಇದು 6.7% ಆಗುತ್ತದೆ ಎಂದು ಅಂದಾಜು ಮಾಡಲಾಗಿದೆಯಂತೆ.

ಈ ಮೊದಲು ಎಪ್ರಿಲ್ ತಿಂಗಳಲ್ಲಿ ಅದು, ಮೊದಲ ತ್ರೈಮಾಸಿಕದಲ್ಲಿ 6.3%, 2ನೇ ತ್ರೈಮಾಸಿಕದಲ್ಲಿ 5.8%, 3ನೇ ತ್ರೈಮಾಸಿಕದಲ್ಲಿ 5.4% ಮತ್ತು ಕೊನೆಯ ತ್ರೈಮಾಸಿಕದಲ್ಲಿ 5.1% ಇರಬಹುದು, ಒಟ್ಟಾರೆಯಾಗಿ 5.7% ಎಂದು ಅಂದಾಜು ಮಾಡಿತ್ತು.

ಹಣದುಬ್ಬರ ದರ 4%ದ ಒಳಗೆ ಇರಬೇಕು, ಹೆಚ್ಚೆಂದರೆ 6%, ಅದನ್ನು ದಾಟುವುದು ಅಸಮಾಧಾನದ ಸಂಗತಿ ಎಂಬ ಆಧಾರದ ಮೇಲೆ ಆರ್.ಬಿ.ಐ. ತನ್ನ ದ್ವೈಮಾಸಿಕ ಹಣಕಾಸು ಕ್ರಮಗಳನ್ನು ನಿರ್ಧರಿಸುತ್ತದೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಈ ಹಿನ್ನೆಲೆಯಲ್ಲಿ, ಹಣದುಬ್ಬರಕ್ಕೆ ಕಡಿವಾಣ ಹಾಕಲಿಕ್ಕೆಂದು  ಪ್ರಮುಖ ಸಾಲ ನೀಡಿಕೆ ದರವನ್ನು 50 ಆಧಾರ ಪಾಯಿಂಟುಗಳಷ್ಟು(ಅಂದರೆ 0.5% ದಷ್ಟು) ಅದು ಏರಿಸಿದೆ. ಇದು ಕಳೆದ ಐದು ವಾರಗಳಲ್ಲಿ ಎರಡನೇ ಏರಿಕೆಯಾಗಿದೆ. ಇದರ ತಕ್ಷಣದ ಪರಿಣಾಮ ಎಂದರೆ ಬೆಲೆಯೇರಿಕೆಗಳಿಂದ ನರಳುತ್ತಿರುವ ಜನಗಳ ಮೇಲೆ, ಅದರಲ್ಲೂ ಮನೆಸಾಲ, ವಾಹನ ಸಾಲ ಇತ್ಯಾದಿಗಳನ್ನು ಪಡೆದವರಿಗೆ ಮರುಪಾವತಿ ಕಂತುಗಳ ಏರಿಕೆಯ ಹೊರೆಯೂ ಬೀಳುತ್ತದೆ. ಆದರೆ ಇದರಿಂದ ಹಣದುಬ್ಬರ ಏರಿಕೆಗೆ ಕಡಿವಾಣ ಬೀಳುತ್ತದೆ ಎಂಬುದು ಆರ್.ಬಿ.ಐ. ನಿರೀಕ್ಷೆ.

ಈ ನಡುವೆ ವಿಶ್ವ ಬ್ಯಾಂಕ್ ಆರ್ಥಿಕ ಬೆಳವಣಿಗೆ ದರ  2022-23ರ ಹಣಕಾಸು ವರ್ಷದಲ್ಲಿ 7.5%ಕ್ಕೆ ಇಳಿಯುತ್ತದೆ ಎಂದು ಹೇಳಿದೆ. ಈ ಮೊದಲು ಅದು 8.7% ಇರುತ್ತದೆ ಎಂದು ಕಳೆದ ಜನವರಿಯಲ್ಲಿ ಹೇಳಿತ್ತು, ಎಪ್ರಿಲ್ ನಲ್ಲಿ ಅದನ್ನು 8%ಕ್ಕೆ ಇಳಿಸಿತು, ಈಗ ಅದನ್ನು ಮತ್ತಷ್ಟು ಇಳಿಸಿದೆ.

ರಿಜರ್ವ್ ಬ್ಯಾಂಕ್ ಎಪ್ರಿಲಿನಲ್ಲಿ ಜಿಡಿಪಿ ವೃದ್ಧಿದರ 7.2% ಇರುತ್ತದೆ ಎಂದಿತ್ತು. ಜೂನ್ 8ರ ಪ್ರಕಟಣೆಯಲ್ಲಿ ಅದನ್ನೇ ಪುನರುಚ್ಚರಿಸಿದೆ, ಇಳಿಸಿಲ್ಲ ಎಂಬುದು ಗಮನಾರ್ಹ.

Donate Janashakthi Media

Leave a Reply

Your email address will not be published. Required fields are marked *