ಇಂದಿನಿಂದ ಎರಡು ದಿನ ಮೇ ಸಾಹಿತ್ಯ ಮೇಳ

ವಿಜಯಪುರ : ಮೇ 27, 28ರಂದು ವಿಜಯಪುರದ ಕಂದಗಲ ಹನಮಂತರಾಯ ರಂಗಮಂದಿರದಲ್ಲಿ ಮೇ ಸಾಹಿತ್ಯ ಮೇಳ ನಡೆಯುತ್ತಿದೆ.

‘ಭಾರತೀಯ ಪ್ರಜಾತಂತ್ರ – ಸವಾಲು ಮೀರುವ ದಾರಿಗಳು’ ವಿಷಯದ ಕುರಿತು ಚರ್ಚೆಗಳು ನಡೆಯಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.

ಡಾ. ಬಿ. ಆರ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್, ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಹರ್ಷ ಮಂದರ್, ಮುಝಫ್ಫರ್ ಅಸ್ಸಾದಿ, ಹೋರಾಟಗಾರರಾದ ಭೀಮಶಿ ಕಲಾದಗಿ,
ಪ್ರಕಾಶ ಹಿಟ್ನಳ್ಳಿ, ನಜ್ಮಾ ಬಾಂಗಿ, ಉಮಾ ಕಲಬುರ್ಗಿ, ತುಕಾರಾಂ ಚಂಚಲಕರ, ವಿಹಾನ್ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಾಹಿತ್ಯ ಮೇಳದಲ್ಲಿ ಏನಿರಲಿದೆ? ಮೇ 27ರಂದು ಬೆಳಗ್ಗೆ 10ಗಂಟೆಗೆ ಹೋರಾಟದ ಹಾಡುಗಳ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಪ್ರೊ. ರಾಜೇಂದ್ರ ಚೆನ್ನಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಮಧ್ಯಾಹ್ನ 1.30ಕ್ಕೆ ‘ಭಾರತೀಯ ಪ್ರಜಾತಂತ್ರ-ಚಾರಿತ್ರಿಕ ನೋಟ’ ವಿಷಯದ ಕುರಿತು ಗೋಷ್ಠಿ ನಡೆಯಲಿದ್ದು, ಹಿರಿಯ ಸಾಹಿತಿ ಪುರಷೋತ್ತಮ ಬಿಳಿಮಲೆ ಆಶಯ ನುಡಿಗಳನ್ನಾಡಲಿದ್ದಾರೆ. ಎಚ್.ಜಿ. ಜಯಲಕ್ಷ್ಮಿ, ಎ. ನಾರಾಯಣ ವಿಚಾರ ಮಂಡಿಸಲಿದ್ದಾರೆ.

ಮಧ್ಯಾಹ್ನ 3.30 ಕ್ಕೆ ‘ಪ್ರಜಾತಂತ್ರ ಸಾಗಿದ ದಾರಿ-ಅಸ್ಮಿತೆ ರಾಜಕಾರಣ’ ವಿಷಯದ ಕುರಿತು ಗೋಷ್ಠಿ ನಡೆಯಲಿದೆ, ಬಾಲ ಗುರುಮೂರ್ತಿ, ಕೃಷ್ಣಮೂರ್ತಿ ಚಮರಂ, ರಂಗನಾಥ ಕಂಟನಕುಂಟೆ, ಬಿ.ಎಂ. ಹನೀಫ್, ಶೈಲಜಾ ಹಿರೇಮಠ ವಿಚಾರ ವ್ಯಕ್ತಪಡಿಸಲಿದ್ದಾರೆ.

ಸಂಜೆ 6ಕ್ಕೆ ‘ಬೌದ್ಧ, ಸೂಫಿ, ಶರಣ ಪರಂಪರೆಯಲ್ಲಿ ಪ್ರಜಾತಂತ್ರದ ಆಶಯಗಳು’ ಕುರಿತು ಗೋಷ್ಠಿ ನಡೆಯಲಿದೆ. ಮೂಡ್ನಾಕೂಡು ಚಿನ್ನಸ್ವಾಮಿ, ನಟರಾಜ ಬೂದಾಳು ವಿಚಾರ ಮಂಡಿಸಲಿದ್ದಾರೆ.

ಮೇ 28 ರಂದು ಬೆಳಗ್ಗೆ 9 ಗಂಟೆಗೆ ‘ಪ್ರಜಾಪ್ರಭುತ್ವ-ಯುವಸ್ಪಂದನ’ ಗೋಷ್ಠಿ ನಡೆಯಲಿದ್ದು, ಯುವ ಚಿಂತಕರಾದ ಸುಭಾಷ ರಾಜಮಾನೆ, ನಿಕೇತ್ ರಾಜ್ ಮೌರ್ಯ, ಕಲ್ಯಾಣಿ ಎಂ. ಎಸ್, ನದೀಂ ಸನದಿ, ಶಿವು ನಾಗರಹೊಳೆ, ಟಿ. ಎಸ್. ಗೊರವರ ಭಾಗಿಯಾಗಲಿದ್ದಾರೆ.

ಬೆಳಗ್ಗೆ 10 ಗಂಟೆಗೆ ಕವಿಗೋಷ್ಠಿ ನಡೆಯಲಿದೆ. ಕವಿಗೋಷ್ಠಿಯಲ್ಲಿ ತಮಿಳುನಾಡಿನ ಕವಯಿತ್ರಿ ಸುಕೀರ್ತರಾಣಿ ಆಶಯ ಭಾಷಣ ಮಾಡಲಿದ್ದಾರೆ. ಸಬಿತಾ ಬನ್ನಾಡಿ ಅಧ್ಯಕ್ಷತೆ ವಹಿಸಲಿರುವ ಕವಿಗೋಷ್ಠಿಯಲ್ಲಿ 18 ಕವಿಗಳು ಕವನ ವಾಚನ ಮಾಡಲಿದ್ದಾರೆ.

ಮಧ್ಯಾಹ್ನ 12:30 ಕ್ಕೆ “ಪ್ರಜಾಪ್ರಭುತ್ವದ ಬಿಕ್ಕಟ್ಟುಗಳು-ಎದುರಿಸುವ ಬಗೆ” ಎಂಬ ಗೋಷ್ಠಿಯಲ್ಲಿ ಮಾವಳ್ಳಿ ಶಂಕರ್‌, ಸಿದ್ಧನಗೌಡ ಪಾಟೀಲ, ನೂರ್ ಶ್ರೀಧರ್, ಕೆ. ನೀಲಾ, ಬಡಗಲಪುರ ನಾಗೇಂದ್ರ, ಸಸಿಕಾಂತ್ ಸೆಂಥಿಲ್, ನಂದಕುಮಾರ ಅವರು ಮಾತನಾಡಲಿದ್ದಾರೆ.

ಸಂಜೆ 4 ಗಂಟೆಗೆ ಸಮಾರೋಪ ಭಾಷಣವನ್ನು ಪುಣೆಯ ನೀರಜ್ ಜೈನ್ ಮಾಡಲಿದ್ದಾರೆ. ಅಧ್ಯಕ್ಷತೆ ಕಾಳೇಗೌಡ ನಾಗವಾರ ವಹಿಸಲಿದ್ದಾರೆ.

ಪ್ರಶಸ್ತಿ ಪ್ರದಾನ : ಸಮಾರೋಪ ಸಮಾರಂಭದಲ್ಲಿ ಭಾಗ್ಯಜ್ಯೋತಿ ಹಿರೇಮಠ ಅವರಿಗೆ `ವಿಭಾ ಸಾಹಿತ್ಯ’ ಪ್ರಶಸ್ತಿ, ಎನ್ ವೆಂಕಟೇಶ ಅವರಿಗೆ ‘ಬಂಡ್ರಿ ನರಸಪ್ಪ ಸಮಾಜವಾದಿ ಶ್ರಮಜೀವಿ’ ಪ್ರಶಸ್ತಿ, ಮಾಲತಿ ಪಟ್ಟಣಶೆಟ್ಟಿ ಅವರಿಗೆ ‘ನವಲಕಲ್ ಶಾಂತವೀರಮ್ಮ ಮಹಾತಾಯಿ’ ಪ್ರಶಸ್ತಿ, ಜೆ. ಎಂ. ವೀರಸಂಗಯ್ಯ ಅವರಿಗೆ ‘ಸಂಶಿ ನಿಂಗಪ್ಪ ರೈತ ಚೇತನ’ ಪ್ರಶಸ್ತಿ, ಸಿ. ಬಸಲಿಂಗಯ್ಯ ಅವರಿಗೆ ‘ಪಂಚಪ್ಪ ಸಮುದಾಯ ಮಾರ್ಗಿ’ ಪ್ರಶಸ್ತಿಯನ್ನು ಪ್ರದಾನ ನಡೆಯಲಿದೆ.

ಪುಸ್ತಕ ಮಳಿಗೆ : ಮೇ ಸಾಹಿತ್ಯ ಮೇಳದಲ್ಲಿ ನವ ಕರ್ನಾಟಕ, ಕ್ರಿಯಾ, ಅಮೂಲ್ಯ, ಲಡಾಯಿ ಪ್ರಕಾಶನದ ಪುಸ್ತಕ ಮಳಿಗೆಗಳು ಇರಲಿವೆ. ಸಾಹಿತ್ಯಾಸಕ್ತರು ಇದರ ಪ್ರಯೋಜನ ಪಡೆಯಬೇಕು ಎಂದು ಸಂಘಟಕರು ತಿಳಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *