ಮೇ ಸಾಹಿತ್ಯ ಮೇಳ : ಪಠ್ಯ ಪುಸ್ತಕ ಪರಿಷ್ಕರಣೆ ವಿರೋಧಿಸಿ‌ ನಿರ್ಣಯ

ಮೇ ಸಾಹಿತ್ಯ ಮೇಳದಲ್ಲಿ ಮೊದಲ ದಿನ ಈ ಮೂರು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

1) ಪಠ್ಯ ಪುಸ್ತಕ ಕೇಸರಿಕರಣಕ್ಕೆ ವಿರೋಧ : ಸಂವಿಧಾನದ ಪೀಠಿಕೆ ಮತ್ತು ನಿರ್ದೇಶಕ ತತ್ವಗಳನ್ನು ಶಿಕ್ಷಣದ ಮೂಲಕ ನಿಜಗೊಳಿಸುವುದು ಒಂದು ಸಾಂವಿಧಾನಿಕ ಕರ್ತವ್ಯ. ಆದ್ದರಿಂದಲೇ ನಮ್ಮ ಪಠ್ಯಗಳಲ್ಲಿ ಪ್ರಗತಿಪರ, ಜೀವಪರ ಮೌಲ್ಯಗಳನ್ನು ಎತ್ತಿ ಹಿಡಿಯಲಾಗುತ್ತಿದೆ. ಇಂಥಾ ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಅಜೆಂಡಾಗಳನ್ನು ತರಬಾರದೆನ್ನುವ ನೈತಿಕ ಪ್ರಜ್ಞೆ ಇಷ್ಟು ದಿನ ಪ್ರಭಾವಿಯಾಗಿ ಕೆಲಸ ಮಾಡಿತ್ತು. ಆದರೆ ಭಾಜಪ ಸರಕಾರವು ತನ್ನ ಕೇಸರೀಕರಣದ ಅಜೆಂಡಾದ ಭಾಗವಾಗಿ ಈ ಕ್ಷೇತ್ರವನ್ನೂ ಕೆಡಿಸಲು ಶುರುಮಾಡಿದೆ. ಸದ್ಯದ ಪಠ್ಯ ಪುಸ್ತಕ ಪುನರ್ರಚನೆ ಇಂಥಾ ಒಂದು ಧೂರ್ತ, ಅನೈತಿಕ ಹೆಜ್ಜೆ. ನಾವು ಇದನ್ನು ಖಂಡಿಸುತ್ತೇವೆ. ಶಿಕ್ಷಣದ ಹೃದಯವಾಗಿರುವ ಪಠ್ಯಕ್ರಮ ರಚನೆಯನ್ನು ನಾಡಿನ‌ಮಾನ್ಯತೆ ಪಡೆದ, ಅನುಭವಿತಜ್ಞರು ನಿರ್ವಹಿಸಬೇಕು ಮತ್ತು ಭವಿಷ್ಯದ ದೃಷ್ಟಿಯಿಂದ ಈ ಪ್ರಕ್ರಿಯೆಗೆ ಸ್ವಾಯತ್ತ ಸಾಂಸ್ಥಿಕ ಸ್ವರೂಪವನ್ನು ನೀಡಬೇಕೆಂದು ಒತ್ತಾಯಿಸುತ್ತೇವೆ.

2) ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದಿಗೆ ಆಗ್ರಹ :
ಸಂವಿಧಾನದ ಒಕ್ಕೂಟ ತತ್ವದ ಆಶಯಗಳಿಗೆ ವಿರುದ್ಧವಾಗಿ ಮತ್ತು ರೈತ ಹಿತಾಸಕ್ತಿಗೆ ವಿರುದ್ಧವಾಗಿ ತಂದಿದ್ದ ಕೃಷಿ ಸಂಬಧಿತ ಕಾನೂನುಗಳನ್ನು ರೈತ ಸತ್ಯಾಗ್ರಹಕ್ಕೆ ಮಣಿದು ಕೇಂದ್ರ ಸರ್ಕಾರವು ಹಿಂಪಡೆದಿದೆ.

ಆದರೆ ಕರ್ನಾಟಕದ ಭಾಜಪ ಸರಕಾರವು ಕೃಷಿ ಮತ್ತು ಗ್ರಾಮೀಣ ಕ್ಷೇತ್ರಕ್ಕೆ ಮಾರಕವಾಗುವ ಕೃಷಿ ಮಾರುಕಟ್ಟೆ ತಿದ್ದುಪಡಿ ಮತ್ತು ಭೂಸುಧಾರಣಾ ಕಾಯಿದೆಯನ್ನು ನಿರರ್ಥಕಗೊಳಿಸುವ ತಿದ್ದುಪಡಿಗಳನ್ನು ಇನ್ನು ಜಾರಿಯಲ್ಲಿಟ್ಟಿದೆ. ಕಾರ್ಪೊರೇಟ್ ಮತ್ರು ರಿಯಲ್ ಎಸ್ಟೇಟ್ ಶಕ್ತಿಗಳ ಹಿತ ಕಾಯುವ ಈ ಎರಡೂ ಕಾನೂನುಗಳನ್ನು ಕರ್ನಾಟಕ ಸರಕಾರವು ಹಿಂಪಡೆಯಬೇಕು.

ಹಾಗೆಯೇ ಇಡೀ ಕೃಷಿ ಮತ್ತು ಗ್ರಾಮೀಣ ಜಗತ್ತು ಹವಾಮಾನ ಬದಲಾವಣೆ ಮತ್ತು ಸರಕಾರದ ನೀತಿಗಳ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿದ್ದು, ಗ್ರಾಮಭಾರತದ ರೈತರು, ದಲಿತರು, ಕೂಲಿಕಾರರು ಮತ್ತು ಮಹಿಳೆಯರ ಬದುಕನ್ನು ಸುಸ್ಥಿರ ಗೊಳಿಸುವ ಸಮಗ್ರ ನೀತಿಯೊಂದನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸುತ್ತೇವೆ.

3) ವಿದುರಾಶ್ವತ್ಥ ಸ್ಮಾರಕಕ್ಕೆ ಬೇದರಿಕೆ ಖಂಡಿಸಿ : ಹಿಂದುತ್ವದ ಸಂಘಟನೆಗಳು ಗೌರಿಬಿದನೂರಿನ ವಿದುರಾಶ್ವತ್ಥ ಹುತಾತ್ಮರ ಸ್ಮಾರಕಕ್ಕೆ ಬೆದರಿಕೆ ಒಡ್ಡಿರುವುದನ್ನು ನಾವೆಲ್ಲರೂ ಖಂಡಿಸುತ್ತಿದ್ದೇವೆ.

ನಾವೆಲ್ಲರೂ ಕೃತಜ್ಞತಾ ಪೂರ್ವಕವಾಗಿ ಗೌರವಿಸುವ ಸ್ವಾತಂತ್ರ್ಯ ಹೋರಾಟದ ಸ್ಮಾರಕಗಳೇ ನಿಜಕ್ಕೂ ಪವಿತ್ರ ಸ್ಥಾನಗಳು. ಹಿಂದುತ್ವ ಶಕ್ತಿಗಳು ಈ ಸ್ಮಾರಕಗಳ ಪಾವಿತ್ರ್ಯತೆಯನ್ನೂ ಕೆಡಿಸುವ ಹುನ್ನಾರ ಹೊಂದಿವೆ.

ಸ್ವಾತಂತ್ರ್ಯ ಹೋರಾಟದಲ್ಲಿ ಎಂದೂ ಭಾಗವಹಿಸದ ಈ ಸಂಘಟನೆ ಇದೀಗ ಈ ದಾಖಲೆಯನ್ನೂ ತಿದ್ದಹೊರಟಿದೆ. ಇಂದು ವಿದುರಾಶ್ವತ್ಥ, ನಾಳೆ ಶಿವಪುರ, ಈಸೂರು..
ನಾವು ಈ ವಿಕೃತ ಅಜೆಂಡಾವನ್ನು ಖಂಡಿಸುತ್ತೇವಲ್ಲದೇ, ದೇಶದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಎಲ್ಲರ ತ್ಯಾಗ ಬಲಿದಾನಗಳನ್ನು ಇಂದಿನ ತಲೆಮಾರಿಗೆ ತಿಳಿಸುವ ಮೂಲ ಹಿಂದುತ್ವದ ಧೂರ್ತ ಅಜೆಂಡಾವನ್ನು ಸೋಲಿಸಬೇಕಿದೆ.

Donate Janashakthi Media

Leave a Reply

Your email address will not be published. Required fields are marked *